ಸ್ವಾತಂತ್ರ್ಯ ಸ್ವಾಮಿತ್ವ ಸ್ವಬಲ ಸ್ವಾಧೀನತೆಯ..
ಲೇಖಕರು : ಶ್ರೀ ನಾರಾಯಣ ಶೇವಿರೆ
ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವರ್ಷಗಳು ಆದುವೆನ್ನುವುದು ಒಂದು ಮೈಲಿಗಲ್ಲಾಗಬಹುದಾದ ಸಂದರ್ಭ. ವರ್ಷಗಳು ತುಂಬಿದ ಮಾತ್ರಕ್ಕೆ ಮೈಲಿಗಲ್ಲಾಗದು. ಅದಾಗಬೇಕಾದುದು ಸಾಧನೆಯಿಂದ. ಸಂಕಲ್ಪದಿಂದ. ಅಂಥ ಸಂಕಲ್ಪಶಕ್ತಿಯನ್ನು ಹೊಂದಬಲ್ಲ ಮಾನಸಿಕತೆಯಿಂದ. ಸಾಧನೆಯನ್ನು ಸಾಧಿಸಿತೋರಬಲ್ಲ ಸಾಮಾಜಿಕ ವ್ಯಕ್ತಿತ್ವದಿಂದ. ಮತ್ತು ಅಂಥ ಸಾಮಾಜಿಕ ವ್ಯಕ್ತಿತ್ವದ ಅಭಿವ್ಯಕ್ತಿಯಿಂದಾಗಿಯೇ ಸ್ವಾತಂತ್ರ್ಯ ಸಿದ್ಧಿಸಿದ್ದಲ್ಲವೇ! ಅಂಥ ಸಂಕಲ್ಪಶಕ್ತಿಯನ್ನು ಉಳ್ಳ ಉಕ್ಕಿನ ಮನಸ್ಸುಗಳಿಂದಾಗಿಯೇ ಸ್ವಾತಂತ್ರ್ಯದ ಸಾಧನೆ ಸಾಧಿತವಾದದ್ದಲ್ಲವೇ!
ಮೈಕೊಡವಿ ಎದ್ದುನಿಂತ ದೇಶಗಳು
ಅನೇಕ ಸಂದರ್ಭಗಳಲ್ಲಿ ನಾವು ಈ ಅವಧಿಯಲ್ಲಿ ಸಾಧಿಸಬಹುದಾದುದನ್ನು, ಆದರೆ ಅಷ್ಟಾಗಿ ಸಾಧಿಸಲಾಗಲಿಲ್ಲವೆನ್ನುವುದನ್ನು ವಿವರಿಸಿ ಎರಡು ದೇಶಗಳೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವುದಿದೆ. ಒಂದು, ಜಪಾನ್. ಎರಡನೆಯ ಮಹಾಯುದ್ಧದಲ್ಲಿ ಆ ದೇಶದ ಎರಡು ಮುಖ್ಯ ನಗರಗಳ ಮೇಲೆ ಅಮೆರಿಕ ಸುರಿಸಿದ ಅಣುಬಾಂಬುಗಳಿಂದಾಗಿ ಮೇಲೇಳಲಾಗದಂತೆ ಅದು ಪೂರ್ತಿ ಜರ್ಜರಿತವಾಗಿತ್ತು. ಸ್ವಂತದ ಯೋಚನೆ ಮಾಡದೆ ದೇಶಕ್ಕಾಗಿ ಯೋಚಿಸಿದ ಅಲ್ಲಿಯ ಜನ ಕೆಲವೇ ವರ್ಷಗಳಲ್ಲಿ ಜಪಾನನ್ನು ಸೈನ್ಯವೊಂದನ್ನು ಹೊರತುಪಡಿಸಿ ಉಳಿದೆಲ್ಲ ರಂಗಗಳಲ್ಲಿ ಬಲಾಢ್ಯ ದೇಶವನ್ನಾಗಿ ಕಟ್ಟಿಬಿಟ್ಟರು. ಎರಡನೆಯದು ಇಸ್ರೇಲ್. ಅದಂತೂ ಒಂದೂವರೆ ಸಾವಿರ ವರ್ಷಗಳಿಂದ ಸ್ವಂತ ನೆಲದಿಂದ ಓಡಿಸಲ್ಪಟ್ಟ ಜನಾಂಗವಾಗಿ ಪ್ರಪಂಚದ ಮೂಲೆಮೂಲೆಗಳಲ್ಲಿ ಹರಡಿಕೊಂಡು ಒಂದು ದೇಶವಾಗಿ ಆಲೋಚಿಸುವ ಅವಕಾಶದಿಂದಲೇ ವಂಚಿತವಾಗಿತ್ತು. ಆದರೆ ದೇಶದ ಕುರಿತಾದ ಆಲೋಚನಾಸಂಪನ್ನತೆ ಇದ್ದುದರಿಂದ ಯಹೂದಿಗಳು ಒಂದೂವರೆ ಸಾವಿರ ವರ್ಷಗಳ ಸತತ ಹೋರಾಟದಿಂದಾಗಿ ಎರಡನೆಯ ಮಹಾಯುದ್ಧದ ಬಳಿಕ ತಮ್ಮ ದೇಶದ ಭೂಮಿಯನ್ನು ಮರಳಿ ಪಡೆದವರು. ಎಲ್ಲೆಡೆಯ ಯಹೂದಿಗಳನ್ನು ಮಾತೃಭೂಮಿಗೆ ಬರಹೇಳಿದರು. ಸುತ್ತಲೂ ಆವರಿಸಿರುವ ತಮ್ಮ ಹತ್ತು ಪಟ್ಟು ಪ್ರಮಾಣದ ವೈರಿಗಳ ನುಂಗಿನೊಣೆಯುವ ಬಗೆಯ ಬಾರಿಬಾರಿಯ ದುರಾಕ್ರಮಣವನ್ನು ಇನ್ನಿಲ್ಲದಂತೆ ಎದುರಿಸುತ್ತ, ಅದಕ್ಕಾಗಿ ಎಲ್ಲರೂ ಒಂದು ದೇಶವಾಗಿ ಸದಾ ನಿರಂತರ ಮೈಯನ್ನು ಕಣ್ಣಾಗಿಸುತ್ತ ಜಗತ್ತೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ತಮ್ಮ ದೇಶವನ್ನು ಎಲ್ಲ ಬಗೆಯಲ್ಲಿಯೂ ಒಂದು ಬಲಿಷ್ಠ ದೇಶವಾಗಿ ಕಟ್ಟಿದ್ದು ಇತಿಹಾಸವೂ ಹೌದು, ವರ್ತಮಾನವೂ ಹೌದು.
ಸ್ವಾತಂತ್ರ್ಯವನ್ನನುಭವಿಸುವುದೆಂದರೆ..
ನಮಗೂ ಹೆಚ್ಚುಕಡಮೆ ಅದೇ ಸಮಯದಲ್ಲಿ ಸ್ವಾತಂತ್ರ್ಯ ಬಂತು. ಸ್ವಾತಂತ್ರ್ಯ ಕೊಟ್ಟುಹೋದ ಆಂಗ್ಲರು ನಮ್ಮನ್ನು ಸಾಕಷ್ಟು ದೋಚಿಯೂ ಹೋಗಿದ್ದರು. ಅವರಿಗಿಂತ ಮುಂಚೆ ಬಂದಿದ್ದ ಮೊಗಲ್ ಮತ್ತದೇ ಬಗೆಯ ಸಂತತಿಯವರೂ ನಾನಾ ಬಗೆಗಳಲ್ಲಿ ದೋಚಿಬಿಟ್ಟಿದ್ದರು. ಇಬ್ಬರೂ ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನು ದೋಚಿದ್ದರು. ಸಾಂಸ್ಕೃತಿಕ ಪರಂಪರೆಯನ್ನು ದೋಚಿದ್ದರು. ಮತಾಂತರದ ಮೂಲಕ ನಮ್ಮ ಸಮಾಜವನ್ನೂ ಯಥೇಚ್ಛವಾಗಿ ದೋಚಿದ್ದರು. ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ನಮ್ಮ ಭೂಮಿಯೂ ದೋಚಲ್ಪಟ್ಟಿತು. ಶಿಕ್ಷಣ ಮತ್ತಿತರ ವ್ಯವಸ್ಥೆಗಳನ್ನೂ ಹಾಳುಗೆಡವಿದ್ದರು. ಹಾಗಾಗಿ ಸ್ವಾತಂತ್ರ್ಯ ಸಿಕ್ಕಿದ ಕ್ಷಣದಲ್ಲಿ ನಾವು ಮಾಡಿಕೊಳ್ಳಬೇಕಾದ ಸಿದ್ಧತೆ, ಮರಳಿ ಪಡೆಯಬೇಕಾದ ಸಂಗತಿಗಳು, ಸರಿಪಡಿಸಿಕೊಳ್ಳಬೇಕಾದ ವ್ಯವಸ್ಥೆಗಳು, ಸಾಧಿಸಬೇಕಾದ ಸಾಧನೆಗಳು ಇತ್ಯಾದಿ ಇನ್ನೂ ಹತ್ತುಹಲವು ಬೆಟ್ಟದಷ್ಟಿದ್ದವು. ಇವು ಯಾವುವೂ ಇಲ್ಲವೆಂಬಂತೆ ಸ್ವಾತಂತ್ರ್ಯವನ್ನು ಅನುಭವಿಸುವುದರಲ್ಲಿಯೇ ತಲ್ಲೀನವಾಗಿಬಿಟ್ಟೆವೋ ಎಂಬ ಸಂದೇಹ ಈಗ ಕಾಡುತ್ತಿದೆ. ಸರ್ವನಾಶವಾಯಿತೆನ್ನುವಂಥ ಬಾಂಬುದಾಳಿ ತನ್ನ ಮೇಲಾದ ಬಳಿಕವೂ ಏನೂ ಆಗಿಲ್ಲವೆಂಬಂತೆ ಅನೂಹ್ಯ ರೀತಿಯಲ್ಲಿ ಜಪಾನ್ ಪ್ರಪಂಚಮುಖದಲ್ಲಿ ಗುರುತಿಸಲ್ಪಡುವ ಬೆರಳೆಣಿಕೆಯ ದೇಶಗಳಲ್ಲಿ ಒಂದಾಗಿ ಹೋದುದು ತಮ್ಮದೇ ಇಚ್ಛಾಶಕ್ತಿ ಹಾಗೂ ಕರ್ತೃತ್ವಶಕ್ತಿಗಳಿಂದ. ಮರಳಿ ಹುಟ್ಟುಪಡೆದಾಕ್ಷಣವೇ ಸತ್ತುಹೋಯಿತು ಎಂಬಂತೆ ವೈರಿದಾಳಿಗಳಾದಾಗಲೂ ಇಸ್ರೇಲನ್ನು ಕೈಹಿಡಿದದ್ದು ಅದೇ ಶಕ್ತಿದ್ವಯಗಳು. ಆದರೆ ಎರಡೂ ದೇಶಗಳ ಪ್ರಜೆಗಳಲ್ಲಿರುವ ದೇಶಕ್ಕಾಗಿ ಬದುಕುವ ಧ್ಯೇಯವಿಲ್ಲದಿರುತ್ತಿದ್ದರೆ ಯಾವುದೇ ಶಕ್ತಿ-ಪ್ರತಿಭೆಗಳಿದ್ದರೂ ಏನನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ವಿದೇಶಕ್ಕಾಗಿ ಸಮರ್ಪಿತ ಬದುಕು
ನಮ್ಮ ದೇಶದಲ್ಲಿ ಶಕ್ತಿ-ಪ್ರತಿಭೆಗಳಿಗೇನು ಕೊರತೆಯಿದೆಯೇ? ಖಚಿತವಾಗಿ ಇಲ್ಲ. ಅಷ್ಟೇ ಅಲ್ಲ, ಬೇರಡೆಗೆ ಹೋಲಿಸಿದರೆ ಅವು ಅಧಿಕವಾಗಿಯೇ ಇವೆ ಇಲ್ಲಿ. ಆದರೆ ಅವುಗಳೆಲ್ಲ ಬಳಕೆಯಾಗುತ್ತಿರುವುದು ಒಂದೋ ಸ್ವಾರ್ಥಪರವಾಗಿ, ಇಲ್ಲವೇ ಅಪಮಾರ್ಗದಲ್ಲಿ ಮತ್ತು ಪರಕೀಯ ಸೇವೆಯಲ್ಲಿ. ಹಿಂದೊಮ್ಮೆ ವರದಿಯಾಗಿದ್ದ ಅಂಕಿಅಂಶಗಳ ಪ್ರಕಾರ ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಲ್ಲಿ ಮೂರನೆಯ ಒಂದರಷ್ಟು ಭಾರತೀಯರು. ಇನ್ನು ಸಾಫ್ಟ್ವೇರ್ ಇಂಜಿನಿಯರುಗಳ ಬಗೆಗೆ ಹೇಳಬೇಕಾಗಿಲ್ಲ. ಇಲ್ಲಿಯ ಸಾಫ್ಟ್ವೇರ್ ಪ್ರತಿಭೆಗಳಲ್ಲಿ ಹೆಚ್ಚಿನವು ದುಡಿಯುತ್ತಿರುವುದು ಅಮೆರಿಕಕ್ಕಾಗಿ, ಇನ್ನಿತರ ಐರೋಪ್ಯ ದೇಶಗಳಿಗಾಗಿ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿಯೂ ಈ ಕಥೆ ಭಿನ್ನವಿಲ್ಲ. ನಾವು ಮಾನವಸಂಪನ್ಮೂಲವನ್ನು ತಯಾರುಮಾಡುವುದೇ ವಿದೇಶಗಳಿಗಾಗಿ ಎಂಬಂತಾಗಿಬಿಟ್ಟಿದೆ. ಅದು ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ. ಪ್ರತಿಯೊಂದರಲ್ಲೂ ಈ ದುರ್ದೃಷ್ಟಿಯು ಬಲಿತಿದೆ. ಹೇಳಿಕೇಳಿ ನಾವು ಟಂಕಿಸಿರುವ ‘ರಫ್ತು ಗುಣಮಟ್ಟ’ ಎಂಬ ಪದವನ್ನು ನೋಡಿರಂತೆ. ನಾವು ತಯಾರಿಸುವ ಯಾವುದೇ ವಸ್ತುವನ್ನು ಹಲವು ಗುಣಮಟ್ಟಗಳಲ್ಲಿ ಹೊರತಂದು ಅವುಗಳಲ್ಲಿ ಉತ್ಕೃಷ್ಟವಾದುದನ್ನು ವಿದೇಶಕ್ಕೆ ರವಾನಿಸುತ್ತೇವೆ. ಮತ್ತಿದನ್ನು ನಾವು ಮಾಡುತ್ತಿರುವುದು ಆತಿಥ್ಯದ ಸಾಂಸ್ಕೃತಿಕ ದೃಷ್ಟಿಕೋನದಿಂದಲ್ಲ, ಲಾಭಪಡೆಯುವ ಆರ್ಥಿಕ ದೃಷ್ಟಿಕೋನದಿಂದ. ಗುಲಾಮೀಭಾವವೂ ಇಲ್ಲಿ ಜತೆಗೆ ಕೆಲಸಮಾಡುತ್ತಿರುವುದನ್ನು ಅಲ್ಲಗಳೆಯಲಾಗದು. ಉತ್ಕೃಷ್ಟ ಗುಣಮಟ್ಟದ್ದೆಲ್ಲವೂ ವಿದೇಶೀಯರಿಗಾಗಿ ಎಂಬ ಭಾವ ನಮ್ಮ ನರನಾಡಿಗಳಲ್ಲಿ ಆವರಿಸಿಕೊಂಡುಬಿಟ್ಟಂತಿದೆ. ಉತ್ಕೃಷ್ಟವಾದುದನ್ನು ತಯಾರಿಸಲು ನಮಗೆ ಗೊತ್ತು ಎನ್ನುವುದು ಹೆಮ್ಮೆಯ ಸಂಗತಿಯಾದರೆ ಅದನ್ನು ಗುಲಾಮೀಭಾವದಲ್ಲಿ ಇಲ್ಲವೇ ಲಾಭೈಕದೃಷ್ಟಿಯಿಂದ ವಿದೇಶೀಯರಿಗಷ್ಟೆ ರವಾನಿಸುವ ಮಾನಸಿಕತೆಯು ಹೇವರಿಕೆ ಹುಟ್ಟಿಸುವ ಸಂಗತಿ. ಒಂದು ವಸ್ತುವನ್ನು ಭಿನ್ನ ಭಿನ್ನ ಗುಣಮಟ್ಟಗಳಲ್ಲಿ ತಯಾರುಮಾಡುವ ಕ್ರಿಯೆಯಲ್ಲಿಯೇ ಅನಾರೋಗ್ಯಕರ ದೃಷ್ಟಿಯಿರುವುದನ್ನು ಗಮನಿಸಬೇಕು. ನಾವು ದೇಶಕ್ಕಾಗಿ ಬದುಕಬೇಕಾದವರಲ್ಲ, ವಿದೇಶಕ್ಕಾಗಿ ಬದುಕಬೇಕಾದವರು ಎಂಬ ಸಂದೇಶ ಇದರಲ್ಲಿ ಅಡಗಿರುವುದನ್ನು ಗಮನಿಸದಿರಲಾದೀತೇ?
ಮೇಲ್ಪಂಕ್ತಿಯಲ್ಲದ ಮೇಲ್ಪಂಕ್ತಿ
ಗುಲಾಮತನವನ್ನು ಹೇರಿದವರು ಹೋದರೂ ಗುಲಾಮತನ ಹೋಗಲಿಲ್ಲ ಎಂಬಂತಾಗಿದೆ ನಮ್ಮ ಸ್ಥಿತಿ. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ. ಅದು ಹೆಚ್ಚೇ ಆಯಿತು ಎಂಬಂತೆ. ಆಂಗ್ಲರ ಶಾಸನವಿದ್ದಾಗ ಅವರನ್ನು ಹೆಮ್ಮೆಯಿಂದ ಅನುಕರಿಸುತ್ತಿದ್ದವರು, ಅವರ ಸೇವೆಯಲ್ಲಿ ಪ್ರತಿಷ್ಠೆ ಮೆರೆಯುತ್ತಿದ್ದವರು ಇದ್ದರೂ ಇದಕ್ಕೆ ವ್ಯತಿರಿಕ್ತವಾಗಿ ಸ್ವಾಭಿಮಾನ ಮೆರೆದವರೂ ಅಧಿಕ ಸಂಖ್ಯೆಯಲ್ಲೇ ಇದ್ದರು. ಹಾಗೆ ಸ್ವಾಭಿಮಾನ ಮೆರೆಯುವವರ ಬಗೆಗೆ ಸಮಾಜದಲ್ಲಿ ಗೌರವ ಶ್ರದ್ಧೆ ಇತ್ಯಾದಿ ಇದ್ದುವು. ಗುಲಾಮತನವನ್ನು ಮೆರೆಯುವವರ ಬಗೆಗೆ ಹೇಸಿಗೆಪಡುವ ವಾತಾವರಣವೂ ಇತ್ತು. ಸಮಾಜದಲ್ಲಿಯ ಈಯೆಲ್ಲ ಭಾವಗಳು ಒಮ್ಮೆಲೇ ಸೃಷ್ಟಿಯಾದುದಲ್ಲ ಎನ್ನುವುದು ನಿಜವೇ. ಸ್ವಾತಂತ್ರ್ಯ ಹೋರಾಟದಲ್ಲಿ ಬಗೆಬಗೆಯಲ್ಲಿ ಪಾಲ್ಗೊಂಡ ಅನೇಕರ ವಿಧವಿಧ ಪರಿಶ್ರಮದಿಂದಾಗಿ ಸಮಾಜದಲ್ಲಿ ಈ ಬಗೆಯ ಆರೋಗ್ಯಕರಭಾವವು ಬಲಿಯಿತು. ನಿಜಕ್ಕಾದರೆ, ಯಾವುದೇ ಒಂದು ಸ್ವಾಭಿಮಾನೀ ಜನಾಂಗದಲ್ಲಿ ಅತ್ಯಂತ ಸಹಜವಾಗಿ ಇರಬೇಕಾಗಿದ್ದ ಭಾವವಿದು. ಇದಕ್ಕಾಗಿ ಪರಿಶ್ರಮಪಡಬೇಕಾಗಿಬಂದುದು ಸಮಾಜದೃಷ್ಟಿಯಿಂದ ಉತ್ತಮ ಮೇಲ್ಪಂಕ್ತಿ ಅಲ್ಲ. ಆದರೆ, ಹಾಗೆ ಪರಿಶ್ರಮಿಸುವವರು ಇದ್ದರು ಎನ್ನುವುದು ಒಂದು ಅದೃಷ್ಟ. ದುರದೃಷ್ಟಕರವೆಂಬಂತೆ ಈಗ ಸ್ಥಿತಿ ವಿಲೋಮವಿದೆಯಲ್ಲ!
ಆತ್ಮಘಾತುಕ ಸುಳ್ಳು ಸಲ್ಲ
ಸ್ವಾತಂತ್ರ್ಯ ಬಂದಾಕ್ಷಣ ನಾವು ಮನಸ್ಸುಗಳನ್ನು ಕಟ್ಟುವ ಕೆಲಸಕ್ಕೆ ಒತ್ತು ನೀಡಬೇಕಿತ್ತು. ಭಾರತೀಯ ಮನಸ್ಸು ಎಂಟುನೂರು ವರ್ಷಗಳ ಗುಲಾಮೀ ಆಡಳಿತದಲ್ಲಿ ಅತೀವವಾದ ಗಾಸಿಗೊಳಗಾಗಿತ್ತು. ಅದನ್ನು ಸರಿಪಡಿಸಿಕೊಳ್ಳದೇ ಯಾವುದೇ ರೀತಿಯ ಯೋಜನೆಗಳನ್ನು ಹಮ್ಮಿಕೊಂಡರೂ ಅದು ದೇಶಕಟ್ಟಿದಂತಾಗುವುದಿಲ್ಲ, ವ್ಯವಸ್ಥೆ ಮಜಬೂತುಗೊಳಿಸಿದಂತಾಗುತ್ತದಷ್ಟೆ. ಮತ್ತು ಗಾಸಿಗೊಂಡ ಮನಸ್ಸು ಎಷ್ಟೇ ಮಜಬೂತಾದ ವ್ಯವಸ್ಥೆಯನ್ನೂ ಕೂಡ ಹೈರಾಣುಮಾಡುವುದೇ ಸೈ. ಮನಸ್ಸುಗಳು ತಯಾರಾಗುವುದು ಮುಖ್ಯವಾಗಿ ಮನೆಗಳಲ್ಲಿ ಮತ್ತು ಶಿಕ್ಷಣವ್ಯವಸ್ಥೆಯಲ್ಲಿ. ಈ ದೃಷ್ಟಿಯಿಂದ ಧಾರ್ಮಿಕ ಕೇಂದ್ರಗಳು, ಸಾಂಸ್ಕೃತಿಕ ಕ್ಷೇತ್ರಗಳು ಮುಂತಾದುವುಗಳ ಪಾತ್ರವೂ ಇದ್ದೇ ಇದೆ. ಘಾತಕ್ಕೊಳಗಾಗಿದ್ದ ಈಯೆಲ್ಲ ಕ್ಷೇತ್ರಗಳನ್ನು ಸರಿಪಡಿಸಿಕೊಳ್ಳಬೇಕಾಗಿತ್ತು. ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಕಾಯಕಲ್ಪವನ್ನು ಮಾಡಿಕೊಳ್ಳಬೇಕಿತ್ತು. ಆಂಗ್ಲರು ಅದನ್ನು ಯೋಜಿತವಾಗಿ ಪೂರ್ತಿ ನಾಶಪಡಿಸಿದ್ದರಷ್ಟೆ. ಅದನ್ನು ಪುನಃಸ್ಥಾಪಿಸುವುದರ ಜತೆಗೆ ನವೀಕರಣಗೊಳಿಸಲೂ ಬೇಕಿತ್ತು. ಅಂದರೆ ಸಮಯಾನುಕೂಲಗೊಳಿಸಬೇಕಿತ್ತು. ಪರಕೀಯರು ಬಂದ ಕಾರಣ, ಮಾಡಿದ ಶಾಸನ, ಗೈದ ಹಾನಿ ಇವುಗಳ ಕುರಿತು ಪಠ್ಯಗಳು ಖಚಿತವಾಗಿ ಹೇಳಿ ಮನಸ್ಸುಗಳನ್ನು ಭಾರತೀಯವಾಗಿ ರೂಪುಗೊಳಿಸುವಲ್ಲಿ ತೊಡಗಬೇಕಿತ್ತು. ಆಧುನಿಕ ಯಂತ್ರನಾಗರಿಕತೆ ಪ್ರಪಂಚಮುಖದಲ್ಲಿ ತನ್ನ ಪ್ರಭಾವವನ್ನು ಬೀರತೊಡಗಿತ್ತು. ಅದಕ್ಕೆ ಮೂಲವಾದ ವಿಜ್ಞಾನವು ಮನುಷ್ಯಮಸ್ತಿಷ್ಕವು ಹೊಂದಬೇಕಾದ ಗಮ್ಯಸ್ಥಾನವೆಂಬ ಪ್ರತಿಷ್ಠೆಯನ್ನು ಪಡೆದಿತ್ತು. ನಿಜಕ್ಕಾದರೆ, ಮನುಷ್ಯನೇರಬೇಕಾದ ಆತ್ಮನಿಷ್ಠಜ್ಞಾನದ ಮಹತ್ತ್ವವನ್ನು ಮನಗಾಣಿಸಿ ವಿಜ್ಞಾನದ ಮಿತಿಯನ್ನು ತಿಳಿಹೇಳುವ ಜ್ಞಾನಾವಲೋಕನವು ಶಿಕ್ಷಣದ ಮೂಲಕ ನಡೆಯಬೇಕಿತ್ತು. ಪ್ರಾಚೀನ ಮತ್ತು ಆಧುನಿಕ ಭಾರತೀಯ ವಿಜ್ಞಾನಿಗಳು ಗೈದ ಸಾಧನೆಯನ್ನು ಮಾಹಿತಿಯಾಗಿ ನೀಡಿ ಸ್ವಾಭಿಮಾನದ ಭಾವವನ್ನು ವಿಜ್ಞಾನ ಗಣಿತಾದಿ ಕ್ಷೇತ್ರಗಳಲ್ಲಿಯೂ ಮಾಡಬೇಕಿತ್ತು. ಆದರಿಂದು ಪಾಠ್ಯಪುಸ್ತಕಗಳನ್ನು ತೆರೆದಾಕ್ಷಣ ವಿಜ್ಞಾನ ತಂತ್ರಜ್ಞಾನಗಳು ವಿದೇಶಿಯರದೇ ಕೊಡುಗೆ ಎಂಬ ರೀತಿಯ ಚಿತ್ರಣ ಸಿಗುತ್ತಿದೆ. ವಿದೇಶೀಯರು ಬರದೇ ಇರುತ್ತಿದ್ದರೆ ನಾವಿನ್ನೂ ಅಂಧಕಾರದಲ್ಲೇ ಕಾಲಕಳೆಯಬೇಕಾಗಿ ಬರುತ್ತಿತ್ತು ಎಂಬ ಧ್ವನಿಯಲ್ಲಿ ಪಾಠಗಳು ತೊಡಗುತ್ತವೆ. ಭಾರತೀಯ ಇತಿಹಾಸವೆಂಬುದನ್ನು ವಿದೇಶೀ ಆಕ್ರಮಕರ ಗೆಲುವಿನ ವೈಭವದ ಕಥಾನಕವಾಗಿ ಕಟ್ಟಿಕೊಡುತ್ತಿವೆ. ಎಲ್ಲವೂ ನಮ್ಮವರಿಂದಲೇ ಎಂದು ವೈಭವೀಕರಿಸಬೇಕಿಲ್ಲ. ಆದರೆ ಯಾವುದೂ ನಮ್ಮವರಿಂದಲ್ಲ ಎಂಬ ಆತ್ಮಘಾತುಕ ಸುಳ್ಳು ಶಿಕ್ಷಣದಂಥ ವ್ಯವಸ್ಥೆಯಲ್ಲಿ ನುಸುಳಬಾರದಿತ್ತು. ಇಂಥ ಶಿಕ್ಷಣವನ್ನು ಪಡೆದವ ಗುಲಾಮೀಭಾವದಿಂದ ಹೊರಬರಲು ಹೇಗೆ ಸಾಧ್ಯ! ಆಂಗ್ಲರಾಗಲೀ ಮೊಗಲರಾಗಲೀ ಸಾಧಿಸಲಾಗದುದನ್ನು ಅವರೇ ಬೀಜಾರೋಪಮಾಡಿಕೊಟ್ಟುಹೋದ ಮತ್ತು ನಾವು ಸ್ವತಂತ್ರರಾಗಿಯೂ ಅದನ್ನೇ ಮುಂದರಿಸಿಕೊಂಡುಹೋದ ಇಂದಿನ ಶಿಕ್ಷಣವು ಸಾಧಿಸುತ್ತಿದೆ. ಆಂಗ್ಲಶಾಸನದಡಿ ನಮ್ಮ ಗುಲಾಮೀಭಾವಕ್ಕೆ ಆಂಗ್ಲಮೋಹಕ್ಕೆ ಪರಕೀಯ ಆಂಗ್ಲರು ಮಣೆಹಾಕಿದ್ದಕ್ಕಿಂತ ಹೆಚ್ಚು ಚೆನ್ನಾಗಿ ಇದೀಗ ಭಾರತೀಯ ಸಮಾಜವೇ ಸಂಭ್ರಮಪಡುತ್ತಿದೆ. ಪತನಗೊಂಡಿರುವ ನಮ್ಮೀ ಮನೋಭಾವವು ಪರಿಷ್ಕಾರಗೊಳ್ಳುವವರೆಗೆ ಸ್ವಾತಂತ್ರ್ಯವು ಸಾರ್ಥಕಗೊಳ್ಳಲಾರದು.
ನಿವಾರಿಸಿಕೊಳ್ಳದ ಎಡರುತೊಡರು
ಇಸ್ರೇಲ್ ಜಪಾನುಗಳಂತೆ ನಮಗೂ ದೇಶಕಟ್ಟುವ ದಾರಿಯಲ್ಲಿ ಸವಾಲುಗಳು ಬೆಟ್ಟದಷ್ಟಿದ್ದವು. ನಮ್ಮ ಸವಾಲುಗಳ ರೀತಿ ಸ್ವಲ್ಪ ಭಿನ್ನ. ವೈರಿಗಳು ತಮ್ಮ ರಿಲಿಜನ್ನಿಗೆ ನಮ್ಮ ಸಮಾಜಬಂಧುಗಳನ್ನು ಮತಾಂತರಿಸಿ ನಮ್ಮೀ ನೆಲದಿಂದ ಅವರಿಗಾಗಿಯೇ ಒಂದು ಪ್ರತ್ಯೇಕ ಭೂಮಿಯನ್ನು ದಾಳಿಯ ಮತ್ತೊಂದು ರೂಪದಲ್ಲಿ ದುರಾಗ್ರಹದಿಂದ ಪಡೆದು ಒಂದು ಶತ್ರುದೇಶವನ್ನು ನಿರ್ಮಿಸಿಬಿಟ್ಟಿದ್ದರು. ದೇಶದೊಳಗೂ ಅದೇ ರೀತಿ ಶತ್ರುಸಂಖ್ಯೆಯನ್ನು ಬೆಳೆಸುವ ವ್ಯವಸ್ಥೆಯನ್ನು ಮಾಡಿಬಿಟ್ಟಿದ್ದರು. ನಮ್ಮ ನೆಲದಿಂದಲೇ ಒಂದು ಶತ್ರುದೇಶ ಹುಟ್ಟಿದ ಬಗೆಯನ್ನು ಮತ್ತು ನಮ್ಮ ನೆಲದೊಳಗೇ ಒಂದು ಶತ್ರುಸಮಾಜ ಬೆಳೆಯುವ ಪ್ರಕ್ರಿಯೆಯನ್ನು ನಾವೊಂದು ದೇಶವಾಗಿ ಆದ್ಯತೆಯಿಂದ ನಿವಾರಿಸಿಕೊಳ್ಳಬೇಕಿತ್ತು. ಹಾಗೆ ನಿವಾರಿಸುವ ಕ್ರಿಯೆಯು ಪ್ರಬಲ ಸಂಕಲ್ಪಶಕ್ತಿಯನ್ನೂ ಜಗದ್ವಿರೋಧವನ್ನು ಎದುರಿಸುವ ದುರ್ಬರ ಸನ್ನಿವೇಶವನ್ನೂ ಬೇಡುತ್ತದೆ. ಅತೀವ ಕಷ್ಟಸಾಧ್ಯವಾದ ಸಾಹಸವಿದಾದರೂ ಸಾಧ್ಯವಲ್ಲದ ಕಾರ್ಯವಿದಲ್ಲ. ಮತ್ತಿದನ್ನು ತನ್ನ ನೆಲದಲ್ಲಿ ಆಗುಮಾಡಿದ್ದ ಸ್ಪೇನಿನ ಮೇಲ್ಪಂಕ್ತಿ ಇದ್ದೇ ಇದೆ. ಅತ್ಯಂತ ಅವಶ್ಯವಾಗಿ ಆಗಬೇಕಾಗಿದ್ದ ಈ ಕಾರ್ಯವನ್ನು ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಆಗುಮಾಡುವ ಒಂದು ಅವಕಾಶವನ್ನು ಯಾವುದೇ ಯೋಚನೆ ಇಲ್ಲದೆ ಕೈಚೆಲ್ಲಿಬಿಟ್ಟೆವು. ಇಂಥ ಒಂದು ಅವಕಾಶ ಗಾಂಧಾರತನಕ ಜಯಭೇರಿ ಮೊಳಗಿಸಿದ್ದ ಶಿವಾಜಿಯ ಉತ್ತರಾಧಿಕಾರಿಗಳಿಗೂ ಒಮ್ಮೆ ಲಭಿಸಿತ್ತು. ಆಗ ಅವರೂ ಅದನ್ನು ಕೈಚೆಲ್ಲಿಬಿಟ್ಟಿದ್ದರು. ದೇಶಕಟ್ಟುವಾಗ ಮಾಡಿಕೊಳ್ಳಬೇಕಾದ ಅತ್ಯಂತ ಮುಖ್ಯ ತಯಾರಿಯೇ ಇರುವ ಎಡರುತೊಡರುಗಳನ್ನು ಮೊದಲು ನಿವಾರಿಸಿಕೊಳ್ಳುವುದು. ಇದಕ್ಕೆ ವ್ಯತಿರಿಕ್ತವಾಗಿ ನಾವು, ಅನ್ಯಾಯವಾಗಿ ಸೃಷ್ಟಿಯಾಗಿದ್ದ ಎಡರುತೊಡರನ್ನು ಇನ್ನಷ್ಟು ಮತ್ತಷ್ಟು ಪೋಷಿಸಿ ಬೆಳೆಸಲು ಉತ್ಸಾಹ ತೋರಿದೆವು. ಅದರಲ್ಲೇ ಸಂಭ್ರಮಪಟ್ಟೆವು. ಮತ್ತದರ ದುಷ್ಟಫಲವನ್ನು ನಿತ್ಯನಿರಂತರವಾಗಿ ಉಣ್ಣುತ್ತಲೇ ಇದ್ದೇವೆ.
ಭಯೋತ್ಪಾದನೆಯ ಮೂಲದ ನಿವಾರಣೆ
ಸ್ವಾತಂತ್ರ್ಯ ಸಿಕ್ಕಿದಾಕ್ಷಣವೇ ನಮ್ಮಿಂದಲೇ ನಮ್ಮಿಂದಾಗಿಯೇ ಹುಟ್ಟಿಕೊಂಡ ವೈರಿದೇಶ ನಮ್ಮ ಮೇಲೆ ದಾಳಿಯೆಸಗಿತು. ಅದು ನಮ್ಮ ಆಯಕಟ್ಟಿನ ಪ್ರದೇಶಗಳನ್ನು ಆಕ್ರಮಿಸಿ ತನ್ನ ವಶದಲ್ಲಿಟ್ಟುಕೊಂಡಿದ್ದರೂ ಆ ದೇಶವನ್ನು ಸೋಲಿಸಿದ ಭಂಗಿಯಲ್ಲಿ ಬೀಗಿದೆವು. ಅದು ಮತ್ತೆ ಮತ್ತೆ ದಾಳಿಮಾಡುವ ಧಿಮಾಕು ತೋರಿಸಿದರೂ ಅದರ ಕುರಿತು ಉದಾರವಾಗಿ ಯೋಚಿಸಿ ನಮ್ಮ ಭವಿಷ್ಯವನ್ನು ಆತಂಕಕ್ಕೀಡುಮಾಡುತ್ತಲೇ ಹೋಗುತ್ತಿದ್ದೇವೆ. ಅದೀಗ ಪ್ರತ್ಯಕ್ಷ ದಾಳಿಯ ಬದಲಾಗಿ ಭಯೋತ್ಪಾದನೆಯ ಮೂಲಕ ನಮ್ಮ ದೇಶಕ್ಕೆ ದೊಡ್ಡ ಕಂಟಕವಾಗಿ ಸವಾಲನ್ನು ಒಡ್ಡಿದೆ. ಇದೀಗಲೂ ನಮ್ಮ ಮೃದುತ್ವ ಪೂರ್ತಿಯಾಗಿ ಬದಲಾಗಿಲ್ಲ. ನಮ್ಮ ನೆಲದೊಳಗೇ ಅದನ್ನು ಸಮರ್ಥಿಸುವ ಶತ್ರುಗಳ ಸಂಖ್ಯೆ ಅಗಾಧವಾಗಿ ಏರುತ್ತಲೇ ಇದೆ. ನಾವು ನಿಶ್ಚಿಂತೆಯಿದ್ದೇವೆ. ನಿರ್ದಿಷ್ಟ ಜನಾಂಗದ ಮಂದಿಯಿಂದ ಉಂಟಾಗಿರುವ ಭಯೋತ್ಪಾದನೆಗೆ ರಿಲಿಜನ್ ಆದೇಶದ ಮತ್ತು ಆವೇಶದ ಹಿನ್ನೆಲೆ ಇದೆ. ಈ ಸಮಸ್ಯೆ ಇದೀಗ ಜಗದ್ವ್ಯಾಪಿಯಾಗಿ ಬೆಳೆದಿದೆ. ರಿಲಿಜನ್ ಶ್ರದ್ಧೆಗೆ ಭಂಗಬಾರದಂತೆ ಅದನ್ನು ನಿವಾರಿಸಿಕೊಳ್ಳುವುದು ಹೇಗೆಂಬುದು ಇದೀಗ ಇಡಿಯ ಜಗತ್ತಿನ ಮುಂದಿರುವ ಸವಾಲು. ಆ ರಿಲಿಜನ್ನಿನ ದೇಶಗಳೇ ಇದರಿಂದ ತತ್ತರಿಸುತ್ತಿವೆ. ಹಾಗಾಗಿ ಆ ರಿಲಿಜನ್ನಿಗೆ ಸೇರಿದ ಮಂದಿಯೂ ಸೇರಿದಂತೆ ಇಡಿಯ ಜಗತ್ತು ಇದಕ್ಕೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಅದಾಗದಿದ್ದಲ್ಲಿ ನಾಳೆಯ ಪೀಳಿಗೆ ನಮ್ಮನ್ನು ಕ್ಷಮಿಸುವುದು ಬಿಡಿ, ನೆಮ್ಮದಿಯಿಂದ ಬದುಕುಳಿಯುವುದೇ ದುಸ್ತರವಿದೆ.
ಎದ್ದುನಿಲ್ಲು ಭಾರತ
ಸ್ವಾತಂತ್ರ್ಯದ ಮೌಲ್ಯ ಗೊತ್ತಾಗುವುದು ಅದು ಹೋದಾಗ ಎಂಬ ಮಾತಿದೆ. ಪರಕೀಯತೆಯನ್ನಪ್ಪಿಕೊಳ್ಳುತ್ತ ಗುಲಾಮೀಭಾವದಿಂದ ‘ನೆಮ್ಮದಿ’ಯ ಬದುಕನ್ನು ಮಾಡಲು ತೊಡಗಿದಾಗ ಅದನ್ನು ಸ್ವಾತಂತ್ರ್ಯದ ಸ್ಥಿತಿ ಎನ್ನಲಾದೀತೇ? ರಾಷ್ಟ್ರಕ್ಕೆ ಸಂಬಂಧಿಸಿದ ಮೂಲ ಸಮಾಜವೇ ಮತಾಂತರದ ಮೂಲಕ ಕರಗಿಹೋಗುತ್ತಿರುವಾಗ, ಸ್ವಾತಂತ್ರ್ಯವನ್ನನುಭವಿಸಬೇಕಾದ ಸಮಾಜವು ಭಯೋತ್ಪಾದನೆಯ ಮೂಲಕ ಆತಂಕಿತಸ್ಥಿತಿಯಲ್ಲಿರುವಾಗ ನಮ್ಮ ಸ್ವಾತಂತ್ರ್ಯವು ಸುರಕ್ಷಿತವಾಗಿದೆ ಎಂದುಕೊಳ್ಳಬಹುದೇ? ಆಧುನಿಕ ವಿಜ್ಞಾನ ತಂತ್ರಜ್ಞಾನಗಳಲ್ಲಿ ಮೇರು ಸಾಧನೆಗೈಯಬಹುದು. ಇಡಿಯ ಸಮಾಜವೇ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವಂತೆ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬಹುದು. ಎಲ್ಲ ಕ್ಷೇತ್ರಗಳಲ್ಲಿಯೂ ಅದ್ವಿತೀಯ ಸಾಧನೆಗೈದು ಜಗತ್ತಿನಲ್ಲಿಯೇ ಮೊದಲನೆಯ ಸ್ಥಾನದ ಪ್ರತಿಷ್ಠೆಯನ್ನು ಹೊಂದಬಹುದು. ಆದರೆ ಇವಾವುವೂ ಒಂದು ದೇಶದ ಸ್ವಾತಂತ್ರ್ಯಕ್ಕೆ ಅರ್ಥವನ್ನು ತಂದುಕೊಡಲಾರವು; ಸಮಾಜವು ಗುಲಾಮೀಭಾವದಲ್ಲಿದ್ದಾಗ, ತನ್ನ ಅಸ್ತಿತ್ವವನ್ನು ಆತ್ಮನಿರ್ಭರಗೊಳಿಸದೇ ಇದ್ದಾಗ ಮತ್ತು ತನ್ನ ಭವಿಷ್ಯವನ್ನು ನಿರಾತಂಕಗೊಳಿಸದೇ ಇದ್ದಾಗ. ನಾಶವಾಗುವ ಹಂತದಲ್ಲಿ ಒಮ್ಮೆ ಬಗ್ಗನೆ ಪ್ರಜ್ವಲಿಸಿಬಿಡುವ ಬಗೆಯೊಂದಿದೆ. ಇನ್ನೇನು ನಾಶವಾಗಿಯೇ ಹೋಯಿತು ಎಂಬ ಹಂತದಲ್ಲಿ ಉಳಿದೆಲ್ಲವಕ್ಕಿಂತ ದೃಢಿಷ್ಠವಾಗಿ ಭವಿಷ್ಯ ಕಟ್ಟಿಕೊಳ್ಳುವುದಕ್ಕಾಗಿ ಚಮತ್ಕಾರಿಕವಾಗಿ ಎದ್ದುನಿಲ್ಲುವ ಬಗೆಯಿನ್ನೊಂದಿದೆ. ಈಗ ಅಸ್ತಿತ್ವದಲ್ಲಿರದ ಸೆಮೆಟಿಕ್-ಪೂರ್ವದ ಹಲವು ಜನಾಂಗಗಳು ಮೊದಲ ಸ್ಥಿತಿಗೆ ಉದಾಹರಣೆಯಾಗಿ ನಿಲ್ಲಬಲ್ಲವು. ಇಸ್ರೇಲ್ ಜಪಾನುಗಳಂಥ ದೇಶಗಳು ಎರಡನೆಯ ಸ್ಥಿತಿಗೆ ಮಾದರಿಯಾಗಿ ದೊರಕುತ್ತವೆ. ಭಾರತದ್ದು ಇದರ ಮಧ್ಯದ ಸ್ಥಿತಿಯೇ? ಸ್ವಾತಂತ್ರ್ಯ ಲಭಿಸಿದ ಎಪ್ಪತ್ತೈದು ವರ್ಷಗಳ ಸುದೀರ್ಘ ಅವಧಿಯಲ್ಲಿ ಮೈಮರೆತದ್ದು ಸಾಕೆನಿಸುತ್ತದೆ. ಆತ್ಮಾಭಿಮಾನದ ಜಾಗೃತಿಯೊಂದಿಗೆ, ಕ್ಷಾತ್ರಸಂಪನ್ನ ಸಾಮರ್ಥ್ಯದೊಂದಿಗೆ ಮತ್ತೆ ಮೈಕೊಡವಿ ಎದ್ದುನಿಲ್ಲಬೇಕಾಗಿದೆ ಭಾರತ.