
ಒಂದು ವಿವಾದದ ಆರಂಭಕ್ಕೂ ಇಂದಿನ ಶ್ರೀರಾಮನವಮಿಯ ದಿನ ಸಾಕ್ಷಿಯಾಯಿತು. ಅದು ರಾಮಭಂಟ ಹನುಮಂತನ ಜನ್ಮಸ್ಥಳದ ಕುರಿತು ಗೊಂದಲ. ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಇದಕ್ಕೆ ನಾಂದಿ ಹಾಡಿದೆ. ಶ್ರೀರಾಮ ನವಮಿಯ ದಿವಸ ನಡೆಸಿದ ಕಾರ್ಯಕ್ರಮವೊಂದರಲ್ಲಿ ತಿರುಪತಿಯ ಏಳು ಬೆಟ್ಟಗಳಲ್ಲಿ ಒಂದಾಗಿರುವ ಅಂಜನಾದ್ರಿ ಬೆಟ್ಟವೇ ಹನುಮಂತನ ಜನ್ಮಸ್ಥಳ ಎಂದು ಘೋಷಿಸಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ವಿ ಮುರಳಿಧರ ಶರ್ಮಾ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿ ಈ ವಿಷಯದ ಕುರಿತು ನಿರ್ಣಯಕ್ಕೆ ಬರಲಾಗಿದೆ ಎಂದು ಟಿಟಿಡಿ ಹೇಳಿದೆ. ಈ ಕುರಿತು ಅನೇಕ ಪುರಾಣ ಇನ್ನೂ ಕೆಲವು ಲಿಖಿತ, ಶಾಸನ ದಾಖಲೆಗಳನ್ನು ಪರಿಗಣಿಸಿದ್ದೇವೆ ಎಂದು ಸ್ಪಷ್ಟಡಿಸಿ ಆ ಕುರಿತು 20 ಪುಟಗಳ ಪುಟ್ಟ ಪುಸ್ತಕವೊಂದನ್ನೂ ಮುದ್ರಿಸಿದ್ದಾರೆ.
ನಮ್ಮ ಪುರಾಣ, ಧರ್ಮಗ್ರಂಥಗಳ ಆಧಾರದಲ್ಲಿ ಅನೇಕ ಮಹತ್ವದ ಸಂಗತಿಗಳ ಸ್ಥಳ, ಸಮಯಗಳ ಕುರಿತು ಈಗಿನ ಜನಾಂಗವು ಹೆಚ್ಚಿನ ಗಮನ ಹರಿಸುತ್ತಿರುವುದು ಸಂತಸದ ಸಂಗತಿಯಾದರೂ ಆತುರದ ತೀರ್ಮಾನಗಳಿಗೆ ಬರುವುದು ಒಳಿತಲ್ಲ. ರಾಮಾಯಣ, ಮಹಾಭಾರತಗಳು ನಮ್ಮ ಸಂಸ್ಕೃತಿಯ ಜೀವಂತ ವಾಹಕಗಳು. ಬರವಣಿಗೆ, ಪುಸ್ತಕ, ಭಾಷೆಗಳ ಹೊರತಾಗಿಯೂ ದೇಶದ ಮೂಲೆಮೂಲೆಗಳನ್ನೂ ತಲುಪಿರುವ ಮಹತ್ಕೃತಿಗಳಿವು. ಸಾವಿರಾರು (ಲಕ್ಷಾಂತರ) ವರ್ಷಗಳಾದರೂ ವಾಲ್ಮೀಕಿ ರಾಮಾಯಣ, ವ್ಯಾಸ ಮಹಾಭಾರತ ಹಾಗೆಯೇ ಉಳಿದು ಬಂದಿವೆ. ಇನ್ನು ಭಕ್ತ, ಮಹಂತ, ಋಷಿಮುನಿ, ವಿದ್ವಾಂಸ, ಕವಿ, ಹರಿಕಥೆದಾಸರು, ವಾಗ್ಗೇಯಕಾರರ ವ್ಯಾಖ್ಯಾನಗಳ ಹಿನ್ನೆಯಲ್ಲಿ ಸಂಸ್ಕೃತವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಇವು ಪುನಃಪುನಃ ಬರೆಯಲ್ಪಟ್ಟಿವೆ, ಹೇಳಲ್ಪಟ್ಟಿವೆ. ಆದರೂ ಬಹುತೇಕ ಪಾಠಗಳು ಮೂಲಕ್ಕೆ ಚ್ಯುತಿಯಾಗದಂತೆ ಇವೆ.
ಇನ್ನೊಂದೆಡೆ ಪುರಾತನ ಕಾಲದಲ್ಲಿಯೇ ಸ್ಕಂದ, ವರಾಹ, ಶಿವ, ದೇವಿ ಇತ್ಯಾದಿ ಅನೇಕಾನೇಕ ಪುರಾಣಗಳಲ್ಲಿ ಇವೇ ಪ್ರಸಂಗಗಳು ಪುನರಾವರ್ತನೆ ಕಂಡುಬರುತ್ತದೆ. ಅವುಗಳಲ್ಲಿಯೂ ಅಲ್ಪಸ್ವಲ್ಪ ವೆತ್ಯಾಸಗಳಿರುವುದು ಕಾಣಬಹುದು. ಹೀಗಾಗಿ ರಾಮ ಮತ್ತು ಕೃಷ್ಣರ ಕಥೆಗಳು ಇತಿಹಾಸವೇ ಆದರೂ ಅವುಗಳ ನಿರ್ದಿಷ್ಟ ದಿನಾಂಕಗಳ ಕುರಿತು ಖಚಿತ ನಿಷ್ಕರ್ಷೆ ಸಾಧ್ಯವಾಗುತ್ತಿಲ್ಲ. ಇನ್ನು ಹಿಂದು ಕಾಲಗಣನೆಯ ವಿಷಯಕ್ಕೆ ಬಂದರೆ ಈಗಾಗಲೇ ಅನೇಕ ಕಲ್ಪಗಳು, ಅವುಗಳಲ್ಲಿ ಅನೇಕ ಮನ್ವಂತರಗಳೂ, ಪ್ರತಿ ಮನ್ವಂತರದಲ್ಲೂ ಅನೇಕ ಮಹಾಯುಗಗಳು, ಪ್ರತಿಮಹಾಯುಗದಲ್ಲಿಯೂ ಕೃತ, ತ್ರೇತಾ,ದ್ವಾಪರ ಮತ್ತು ಕಲಿಯುಗಗಳು ಆಗಿ ಹೋಗಿವೆ. ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಅನೇಕ ಮಹಾಭಾರತಗಳು, ರಾಮಾಯಣಗಳು ಆಯಾ ಯುಗಗಳಲ್ಲಿ ಈ ಪೃಥ್ವಿಯಲ್ಲಿ ನಡೆದಿವೆ. ಹೀಗಾಗಿ ಎಲ್ಲೆಲ್ಲಿನ ಸ್ಥಳಪುರಾಣಗಳು, ಯಾವ ಯುಗದ ಪ್ರಸಂಗಗಳನ್ನು ಆಧರಿಸಿ ಬರೆಯಲ್ಪಟ್ಟಿವೆ? ಎಂಬುದೂ ಬಿಡಿಸಲಾಗದ ಪ್ರಶ್ನೆ.
ಇದೇ ಕಾರಣದಿಂದ ನಮ್ಮಲ್ಲಿ ಪುರಾಣದ ಒಂದೇ ಪ್ರಸಂಗಕ್ಕೆ ಸಂಬಂಧಿಸಿದಂತೆ ದೇಶದ ವಿವಿದೆಡೆ ಸ್ಥಳಗಳನ್ನು ಗುರುತಿಸಲಾಗಿದೆ. ಆ ಸ್ಥಳದ ಐತಿಹ್ಯದ ಕುರಿತು ಸಾವಿರಾರು ವರ್ಷಗಳಿಂದ ಕೋಟ್ಯಾಂತರ ಭಕ್ತರು ನಂಬಿಕೆ ಬೆಳೆಸಿಕೊಂಡಿರುತ್ತಾರೆ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ. ನೇಪಾಳ, ಶ್ರಿಲಂಕಾಗಳಲ್ಲಿಯೂ ರಾಮಾಯಣದ ಸ್ಥಳಗಳಿವೆ. ರಾಮಾಯಣದ ಶಬರಿಗೆ ಸಂಭಂದಿಸಿದಂತೆಯೂ ಆಕೆ ರಾಮನಿಗಾಗಿ ಕಾಯುತ್ತಿದ್ದ ಸ್ಥಳವೆಂದು ದೇಶದ ವಿವಿಧೆಡೆಗಳಲ್ಲಿ ಶಬರಿವನ, ಶಬರಿ ಬೆಟ್ಟಗಳು, ಶಬರಿಕಾಶ್ರಮಗಳು ಇವೆ. ಹಾಗೆಯೇ ಹನುಮಂತ ಜನಿಸಿದ ಸ್ಥಳದ ಕುರಿತು ಹೇಳಲಾಗುತ್ತದೆ.
ಟಿಟಿಡಿಯವರು ಈಗ ಸಪ್ತಗಿರಿಗಳಲ್ಲೊಂದಾದ ಅಂಜಾನಾದ್ರಿ ಹನುಮ ಜನ್ಮಸ್ಥಳವೆಂದರೆ, ಜಾರ್ಖಂಡ್ ರಾಜ್ಯದವರು ಅಲ್ಲಿನ ಜುಮ್ಲಾ ಜಿಲ್ಲೆಯ ಗುಹೆಯೊಂದರಲ್ಲಿ ಹನುಮನ ಜನನವಾಯಿತು ಎಂದು ಹೇಳುತ್ತಾರೆ.
ಆದರೆ ಕರ್ನಾಟಕದವರಿಗಂತೂ ಹನುಮಂತ ಮನೆಮಗ ಎಂದೇ ಪ್ರತೀತಿ. ʼಕನ್ನಡಕುಲ ಪುಂಗವ ಹನುಮʼ ಎಂದೇ ಪ್ರಸಿದ್ಧ. ಕೊಪ್ಪಳದ ಆನೆಗೊಂದಿಯ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳವೆಂದು ನಂಬಿ ಬಂದವರು ನಮ್ಮ ರಾಜ್ಯದವರು. ಅದಕ್ಕೆ ಪುಷ್ಠಿಕೊಡುವಂತೆ ಒಂದೆರಡಲ್ಲ ಅನೇಕ ಐತಿಹ್ಯಗಳೂ ಆ ಬೆಟ್ಟದಲ್ಲಿ ಸಾಕ್ಷಿಗಳಾಗಿ ದೊರಕುತ್ತವೆ. ಭೌಗೋಳಿಕ ಹಿನ್ನಲೆಯೂ ಹಾಗೆಯೇ ಇದೆ. ಹಂಪಿಯ ಸುತ್ತ ಮುತ್ತಲಿನ ಬೆಟ್ಟಗಲೇ ಕಿಷ್ಕಿಂಧಾ ನಗರಿ. ಅಲ್ಲಿಯೇ ಮಾತಂಗ ಮುನಿಗಳ ಆಶ್ರಮವೂ ಇದ್ದದ್ದು ಎಂಬುದು ಮತ್ತು ಈಗಲೂ ಅದಕ್ಕೆ ಪೂರಕವಾಗಿ ನಡೆದು ಬಂದಿರುವ ಧಾರ್ಮಿಕ ನಡವಳಿಕೆಗಳು ಇದನ್ನು ಸ್ಪಷ್ಟಪಡಿಸುತ್ತವೆ. ರಾಮಾಯಣದ ಪ್ರಕಾರ ಗೋಕರ್ಣವೇ ಹನುಮನ ಜನ್ಮಸ್ಥಳ, ಅಂಜನಾದ್ರಿ ಆತನ ಕರ್ಮಭೂಮಿ ಎಂದು ರಾಮಚಂದ್ರಾಪುರದ ರಾಘವೇಶ್ವರ ಯತಿಗಳು ಹೇಳುತ್ತಿರುವುದು ಕರ್ನಾಟಕದಲ್ಲಿಯೇ ಇರುವ ಗೊಂದಲವನ್ನೂ ಎತ್ತಿ ಹೇಳುತ್ತಿದೆ.
ಆದರೂ ಈ ಎಲ್ಲಾ ಚರ್ಚೆಗಳ ಮಧ್ಯೆಯೂ ಅಲ್ಲಲ್ಲಿನ ಜನಸಾಮಾನ್ಯರು ಶ್ರದ್ಧೆಯಿಂದ ಆಯಾ ಸ್ಥಳಗಳಿಗೆ ತೀರ್ಥಯಾತ್ರೆ ನಡೆಸಿ, ದೇವದರ್ಶನ ಮಾಡಿ ಪುನೀತರಾಗುತ್ತಿದ್ದಾರೆ. ಈ ಶ್ರದ್ಧೆಯನ್ನು ಸಡಿಲಗೊಳಿಸುವ ಕೆಲಸ ಆಗಬಾರದು. ಟಿಟಿಡಿ ಆತುರ ಬಿದ್ದು ಘೋಷಿಸುವ ಮೊದಲು ಈ ಎಲ್ಲಾ ಸಂಗತಿಗಳ ಕುರಿತು ಚಿಂತಿಸಬೇಕಿತ್ತು ಎನಿಸುತ್ತದೆ. ಮನೆಮನೆಯಲ್ಲೂ ರಾಮ, ಗ್ರಾಮಗ್ರಾಮವೂ ತಪೋಭೂಮಿಯಾಗಿರುವ ಈ ದೇಶದಲ್ಲಿ ಅನೇಕ ಸ್ಥಳಗಳು ಒಂದೇ ಐತಿಹ್ಯವನ್ನು ಹೊಂದಿರುವುದರಲ್ಲಿ ಅಚ್ಚರಿಯಿಲ್ಲ. ಆದರೆ ಪ್ರಾಜ್ಞರು ಗೊಂದಲ ಮೂಡಿಸುವ ವಿಷಯಗಳಲ್ಲಿ ಹೇಳಿಕೆ ನೀಡುವ ಮೊದಲು ಸಂಯಮ ವಹಿಸಬೇಕಷ್ಟೇ.