ಎರ್ನಾಕುಲಮ್ ನಲ್ಲಿರುವ ಕೇರಳ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ಟಾಕ್ ಅವರ ಪೀಠವು ಮಂಗಳವಾರ, 4ನೇ ಡಿಸೆಂಬರ್ 2018 ರಂದು ಅದೇ ದಿನ ಸಲ್ಲಿಕೆಯಾದ ಸಿವಿಲ್ ರಿಟ್ ದಾವೆಯ ಸಂಬಂಧ ನೀಡಿದ ತೀರ್ಪು ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಹಿಜಾಬ್ ವಿವಾದಕ್ಕೆ ಪರಿಹಾರ ನೀಡುವ ದಿಕ್ಕಿನಲ್ಲಿದ್ದು ಅದರ ವಿವರಗಳು ಇಲ್ಲಿವೆ.
ಈ ರಿಟ್ ದಾವೆಯು ಖಾಸಗೀ ಶಿಕ್ಷಣ ಸಂಸ್ಥೆಯಲ್ಲಿ ಮತೀಯ ವಸ್ತ್ರದ ಉಪಯೋಗದ ಕುರಿತಾಗಿದೆ. ಫಿರ್ಯಾದಿದಾರರು ಸಿ.ಎಂ.ಐ ಶಿಕ್ಷಣ ಸಂಸ್ಥೆಯಾದ ಕ್ರೈಸ್ತ್ ನಗರ ಹಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದು ಅವರು ತಮ್ಮ ಪಾಲಕರ ಮೂಲಕ ಈ ದಾವೆಯನ್ನು ಸಲ್ಲಿಸಿದ್ದಾರೆ.
ಶಾಲೆಯು ಸಮವಸ್ತ್ರವನ್ನು ಅಳವಡಿಸಿಕೊಂಡಿದ್ದು, ಮಹಮದೀಯ ಮತಕ್ಕೆ ಸೇರಿದ ಬಾಲಕಿಯರು ಪೂರ್ಣ ತೋಳು ಮುಚ್ಚುವ ಮೇಲ್ವಸ್ತ್ರ ಮತ್ತು ತಲೆ-ಕತ್ತು-ಮತ್ತು ಸ್ವಲ್ಪ ಮುಖ ಮುಚ್ಚುವ ವಸ್ತ್ರಗಳನ್ನು ಧರಿಸಲು ಬಯಸಿದ್ದರು. ಆದರೆ, ಶಾಲಾ ಅಧಿಕಾರಿಗಳು ಸಮವಸ್ತ್ರಕ್ಕೆ ಅನುಗುಣವಾಗಿಲ್ಲದ ಕಾರಣ ಆ ವಿದ್ಯಾರ್ಥಿಗಳಿಗೆ ಸಮವಸ್ತ್ರಕ್ಕನುಗುಣವಾದ ಸೂಕ್ತ ವಸ್ತ್ರಗಳನ್ನು ಧರಿಸಲು ನಿರ್ದೇಶಿಸಿದ್ದರು. ಆದರೆ, ವಿದ್ಯಾರ್ಥಿನಿಯರು ಈ ನಿರ್ದೇಶನವನ್ನು ಪಾಲಿಸಲು ಒಪ್ಪದೇ ನ್ಯಾಯಾಲಯದ ಮೊರೆ ಹೊಕ್ಕಿದ್ದರು.
ವಸ್ತ್ರಸಂಹಿತೆಯ ವಿಚಾರದಲ್ಲಿ ತಮ್ಮದೇ ಆದ ಕಲ್ಪನೆ, ನಂಬಿಕೆಗಳ ಪ್ರಕಾರ ನಿರ್ಧಾರವನ್ನು ವ್ಯಕ್ತಿಯು ತೆಗೆದುಕೊಳ್ಳಬಹುದಾದರೂ, ಆ ನಿರ್ಧಾರವು ಅದೇ ರೀತಿಯ ಹಕ್ಕುಗಳನ್ನು ಹೊಂದಿರುವ ಖಾಸಗೀ ವ್ಯಕ್ತಿ/ಸಂಸ್ಥೆಯ ವಿರುದ್ಧ ತೆಗೆದುಕೊಳ್ಳುವ ಸಂದರ್ಭದಲ್ಲಿ ನ್ಯಾಯಾಲಯವು ಮೂಲಭೂತ ಹಕ್ಕುಗಳ ತಾಕಲಾಟವನ್ನು ಪರಿಹರಿಸಬೇಕಾಗುತ್ತದೆ.
ಅಮ್ನಾ ಬಿಂಟ್ ಬಶೀರ್ ಮತ್ತು ಸಿ.ಬಿ.ಎಸ್.ಇ ಮಧ್ಯೆ ಇದ್ದ ವ್ಯಾಜ್ಯವನ್ನು ತೀರ್ಮಾನಿಸಿದ ನ್ಯಾಯಾಲಯದ ತೀರ್ಪು ಸಂವಿಧಾನದ ಪರಿಚ್ಛೇದ 25(1) ಪ್ರಕಾರ ಮತೀಯ ನಿಯಮಾವಳಿಗಳ ಪ್ರಕಾರ ಸ್ತ್ರೀಯ ವಸ್ತ್ರಧಾರಣೆಯ ಸ್ವಾತಂತ್ರ್ಯ ಮೂಲಭೂತ ಹಕ್ಕು ಎಂದು ಪರಿಗಣಿಸಿದೆ. ಅದೇ ರೀತಿ, ಸಂಸ್ಥೆಯೊಂದನ್ನು ಸ್ಥಾಪಿಸುವ, ನಿರ್ವಹಿಸುವ ಮತ್ತು ಆಡಳಿತ ನಡೆಸುವ ಹಕ್ಕೂ ಸಹ ಪರಿಚ್ಛೇದ 19ದ ಪ್ರಕಾರ ಮೂಲಭೂತವಾದದ್ದೇ ಎಂಬ ತೀರ್ಪು ಟಿ.ಎಂ.ಎ ಪೈ ಮತ್ತು ಕರ್ನಾಟಕ ಸರ್ಕಾರ, ಪಿ.ಎ.ಇನಾಂದಾರ್ ಮತ್ತು ಮಹಾರಾಷ್ಟ್ರ ಸರ್ಕಾರ ಮಧ್ಯೆ ಇದ್ದ ವ್ಯಾಜ್ಯಗಳಲ್ಲಿ ದಾಖಲಾಗಿದೆ. ಈ ಹಕ್ಕುಗಳ ತಾಕಲಾಟವನ್ನು ಪ್ರಸ್ತುತ ತೀರ್ಮಾನ ಬಗೆಹರಿಸಿದೆ.
ಶಿಕ್ಷಣ ನೀಡುವುದು ರಾಜ್ಯ ಸರ್ಕಾರದ ಕಾರ್ಯವಾಗಿದ್ದು, ಖಾಸಗೀ ಶಿಕ್ಷಣ ಸಂಸ್ಥೆಗಳು ಸಾರ್ವಜನಿಕ ಕಾರ್ಯದಲ್ಲಿ ತೊಡಗಿವೆ. ವಸ್ತ್ರ ಸಂಹಿತೆಯ ನಿರೂಪಣೆ ಸಾರ್ವಜನಿಕ ಜವಾಬ್ದಾರಿ ಎಂದು ಪರಿಗಣಿಸದಿದ್ದರೆ, ಮೂಲಭೂತ ಹಕ್ಕುಗಳನ್ನು ಸಮಾನಾಂತರ ಮಾರ್ಗವಾಗಿ ಸ್ಥಾಪಿಸಬಹುದಾಗಿದೆ. ಆದರೆ ಈ ಮಾರ್ಗವಾಗಿ ಪರಿಚ್ಛೇದ 25(1) ದ ಹಕ್ಕುಗಳನ್ನು ಸ್ಥಾಪಿಸಿದ ಉದಾಹರಣೆಗಳಿಲ್ಲ.
ಮೂಲಭೂತ ಹಕ್ಕುಗಳು ನಿರಪೇಕ್ಷ ಅಥವಾ ಸಾಪೇಕ್ಷ ಎಂಬ ಗುಣವಿಶೇಷಗಳನ್ನು ಪಡೆದಿವೆ. ನಿರಪೇಕ್ಷ ಹಕ್ಕುಗಳು ಯಾವುದೇ ಸನ್ನಿವೇಶದಲ್ಲಿ ಸ್ಥಾಪಿಸಬಹುದಾಗಿದ್ದರೆ, ಸಾಪೇಕ್ಷ ಹಕ್ಕುಗಳಿಗೆ ಕೆಲವು ಮಿತಿಗಳುಂಟು. ಪರಿಚ್ಛೇದ 25(1)ರ ಮತೀಯ ಹಕ್ಕುಗಳು ಸಾಪೇಕ್ಷಹಕ್ಕುಗಳು.
ಹಕ್ಕುಗಳ ತಾಕಲಾಟವಿದ್ದಾಗ, ಶಾಸಕಾಂಗವು ಪರಿಹರಿಸದಿದ್ದಲ್ಲಿ, ನ್ಯಾಯಾಲಯವು ಅದನ್ನು ಸಮತೋಲನಗೊಳಿಸಿ ತೀರ್ಮಾನಿಸಬೇಕಾಗುತ್ತದೆ. ಪ್ರಮುಖ ಹಿತಾಸಕ್ತಿಯನ್ನು ನ್ಯಾಯಾಲಯ ಎತ್ತಿಹಿಡಿಯಬೇಕಾಗಿದ್ದು ಇತರ ಅಪ್ರಮುಖ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವುದು ಸೂಕ್ತವಾಗಿರುತ್ತದೆ. ಅಪ್ರಮುಖ ಹಿತಾಸಕ್ತಿಗಳನ್ನು ರಕ್ಷಿಸಿದರೆ, ಅದು ಪ್ರಮುಖ ಹಿತಾಸಕ್ತಿಗಳನ್ನು ತುಳಿದು ಅರಾಜಕತೆ ಉಂಟಾಗುವುದು. ಈ ವಿವಾದದಲ್ಲಿ ಸಮಷ್ಟಿಯ ಹಿತವು ಪ್ರಮುಖ ಹಿತಾಸಕ್ತಿಯಾಗಿದ್ದು ವ್ಯಕ್ತಿಗತ ಹಿತವು ಅಪ್ರಮುಖವಾಗಿದೆ . ನ್ಯಾಯಾಲಯವು ಒಂದು ಹಕ್ಕನ್ನು ತುಳಿದು ಇನ್ನೊಂದು ಹಕ್ಕನ್ನು ರಕ್ಷಿಸುವುದಿಲ್ಲ. ಬದಲಾಗಿ, ಹಕ್ಕುಗಳನ್ನು ಸಮನ್ವಯಗೊಳಿಸುವ ಆಶಯ ಹೊಂದಿದೆ. ಆದರೂ, ಶಿಕ್ಷಣ ಸಂಸ್ಥೆಯ ಹಕ್ಕುಗಳು ಪ್ರಮುಖ ಹಿತಾಸಕ್ತಿಯಾಗಿದ್ದು ವ್ಯಕ್ತಿಗತ ಹಕ್ಕುಗಳು ಅದಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಇದೇ ಸ್ವಾತಂತ್ರ್ಯದ ತಿರುಳಾಗಿದೆ.
ಆಶಾ ರಂಜನ್ ಮತ್ತು ಬಿಹಾರ ರಾಜ್ಯದ ಮಧ್ಯದ ವ್ಯಾಜ್ಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಕ್ಕುಗಳ ಸಮತೋಲನಗೊಳಿಸುವ ಪ್ರಕ್ರಿಯೆಯನ್ನು ಒಪ್ಪಿದೆ. ಹಾಗಾಗಿ, ಇಲ್ಲಿಯೂ ಸಹ ವೈಯುಕ್ತಿಕ ಹಕ್ಕುಗಳನ್ನು ತಿರಸ್ಕರಿಸದೇ, ಪ್ರಮುಖ ಸಾರ್ವಜನಿಕ ಹಿತಾಸಕ್ತಿಯನ್ನು ಗಮನಿಸಿ, ಶಿಕ್ಷಣ ಸಂಸ್ಥೆಯ ಹಕ್ಕುಗಳನ್ನು ಎತ್ತಿಹಿಡಿದಾಗ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಸಂಬಂಧಗಳೂ ಸಹ ಉಳಿಸಿದಂತಾಗುತ್ತದೆ.
ಆದ್ದರಿಂದ, ಮತೀಯ ವಸ್ತ್ರದ ಹಕ್ಕುಗಳನ್ನು ವಿದ್ಯಾರ್ಥಿನಿಯರು ಅಪೇಕ್ಷಿಸುವಂತಿಲ್ಲ ಎಂಬುದು ನನ್ನ ಪ್ರಜ್ಞಾಪೂರ್ವಕ ನಿರ್ಧಾರ. ಮತೀಯ ವಸ್ತ್ರಸಂಹಿತೆಗೆ ಸಮವಸ್ತ್ರದ ಬದಲು/ಜೊತೆಗೆ ಅನುಮತಿ ನೀಡಬೇಕೇ ಎಂಬುದು ಸಂಸ್ಥೆಯೇ ನಿರ್ಧರಿಸಬೇಕಾದ ಸಂಗತಿ. ಅದನ್ನು ನ್ಯಾಯಾಲಯವು ಸೂಚಿಸುವಂತೆಯೂ ಇಲ್ಲ. ಆದ್ದರಿಂದ ಈ ರಿಟ್ ಮನವಿಯನ್ನು ವಜಾ ಮಾಡಲಾಗಿದೆ. ಫಿರ್ಯಾದುದಾರರು ಟಿ.ಸಿ ಬಯಸಿದರೆ, ಶಿಕ್ಷಣ ಸಂಸ್ಥೆಯು ಯಾವುದೇ ಟಿಪ್ಪಣಿ ಇಲ್ಲದಂತೆ ನೀಡುವುದು. ಫಿರ್ಯಾದುದಾರರು ಸಮವಸ್ತ್ರವನ್ನು ಧರಿಸಿ ಶಿಕ್ಷಣವನ್ನು ಅದೇ ಸಂಸ್ಥೆಯಲ್ಲೇ ಮುಂದುವರೆಸಲು ಬಯಸಿದರೆ, ಅದಕ್ಕೆ ಅವರಿಗೆ ಅವಕಾಶವಿದ್ದೇ ಇದೆ.
ಸಂಗ್ರಹಾನುವಾದ – ಶ್ರೀಧರನ್