
ಎಲ್ಟಿಟಿಇ ನಾಯಕರ ಬೆಂಕಿ ಕಾರುವ ಭಾಷಣಗಳು ಇಂಟರ್‌ನೆಟ್ಟಿನಲ್ಲಿ ಈಗಲೂ ಸಿಗುತ್ತವೆ. ಕೋಪೋದ್ರೇಕದ ಅವೆಲ್ಲವೂ ಒಂದೇ ದಾಟಿಯವು. ನೋವಿಗೆ ಪ್ರತಿಕಾರ, ಕ್ರಾಂತಿ, ರಕ್ತಪಾತದ ಮಾತುಗಳಿಂದ ತುಂಬಿರುವ ಅವುಗಳಲ್ಲಿ ತಪ್ಪದೆ ಉಲ್ಲೇಖವಾಗುವ ಮತ್ತೊಂದು ವಾಕ್ಯವಿದ್ದೇ ಇರುತ್ತವೆ. “ನಮ್ಮೆಲ್ಲರಲ್ಲೂ ಒಬ್ಬೊಬ್ಬ ಕುಯಿಲಿಯಿದ್ದಾಳೆ, ನಾವೆಲ್ಲರೂ ಕುಯಿಲಿಗಳಾಗೋಣ”.
ಎಲ್ಟಿಟಿಇ ಮಾತ್ರ ಅಲ್ಲ. ಪೆರಿಯಾರ್ ಮತ್ತು ಆತನ ಶನಿ ಸಂತಾನದವರ ಹುಚ್ಚಾಟಗಳಲ್ಲೂ ಈ ಪದಪುಂಜ ಬಿತ್ತರವಾಗುತ್ತದೆ. ದ್ರಾವಿಡ ಪಕ್ಷಗಳ ಉದ್ರೇಕಕಾರಿ ಭಾಷಣಗಳಲ್ಲಿ, ನಕ್ಸಲ್‌ವಾದಿಗಳ ಕರಪತ್ರಗಳಲ್ಲಿ, ತೂತ್ತುಕುಡಿಯ ಗೋಡೆಬರಹಗಳಲ್ಲಿ, ಟಪಾಂಗುಚ್ಚಿ ತಮಿಳು ಸಿನೆಮಾಗಳ ಡೈಲಾಗುಗಳಲ್ಲಿ, ದಲಿತ ಹೋರಾಟದ ಮೆರವಣಿಗೆಗಳಲ್ಲೆಲ್ಲಾ ಕುಯಿಲಿಯಾಗಬೇಕೆಂಬ ಕರೆ ತಪ್ಪದೆ ಇರುತ್ತವೆ. ತಮಿಳುನಾಡಿನ ಕಮ್ಯುನಿಸ್ಟ್ ಆಫಿಸುಗಳಲ್ಲಿ, ಜಾತಿ ಸಮಾವೇಶಗಳಲ್ಲಿ ಕುಯಿಲಿ ಎಂಬಾಕೆಯ ಫೊಟೋ ಇರುತ್ತವೆ. ಅಂದರೆ ತಮಿಳುನಾಡಿನಲ್ಲಿ ಕುಯಿಲಿ ಎಂದರೆ ಮೇಲ್ವರ್ಗದ ದಬ್ಭಾಳಿಕೆ ವಿರುದ್ಧ ಸಿಡಿದೆದ್ದ, ಆತ್ಮಾಹುತಿಯನ್ನು ಉತ್ತೇಜಿಸುವ, ನಾಸ್ತಿಕ್ಯದ ಸಂಕೇತದ, ವರ್ಗಸಂಘರ್ಷದ ಪ್ರತಿಮೆಯಾದ, ನಕ್ಸಲ್ ವಾದಕ್ಕೆ ಪ್ರೇರಣೆಯಾದ ಒರ್ವ ನಾರಿ!
ಹಾಗಾದರೆ ಯಾರು ಈ ಕುಯಿಲಿ?
ಬಾಹುಬಲಿ ಸಿನೆಮಾದ ಕಥೆ ನೆನಪಿರಬಹುದು. ರಾಣಿಯನ್ನು ಸೆರೆಯಲ್ಲಿಟ್ಟ ದುಷ್ಟ ಅರಸನಿಂದ ನೊಂದ ದೊಡ್ಡ ವರ್ಗವೊಂದು ಭೂಗತ ಹೋರಾಟಕ್ಕಿಳಿಯುತ್ತದೆ. ಗಿರಿ-ಗುಹ್ವರಗಳಲ್ಲಿ ತಲೆಮರೆಸಿಕೊಂಡ ಹೋರಾಟಗಾರರಲ್ಲಿ ಬೃಹತ್ ಸಂಖ್ಯೆಯ ಮಹಿಳೆಯರಿರುತ್ತಾರೆ. ಸಿನೆಮಾದಲ್ಲಿ ಮಹಿಳಾ ಹೋರಾಟಗಾರ್ತಿಯ ಕತ್ತಿವರಸೆಗೆ ಪ್ರೇಕ್ಷಕ ಪುಳಕಗೊಳ್ಳುತ್ತಾನೆ. ನಿರ್ದೇಶಕನ ಸೃಜನಶೀಲತೆಗೆ, ನಕಲಿ ಸಾಹಸಗಳಿಗೆ ಶಿಳ್ಳೆ ಹಾಕುತ್ತಾನೆ. ಇನ್ನೂರೈವತ್ತು ವರ್ಷಗಳ ಹಿಂದೆ ಅಂಥಾ ಸಾಹಸವನ್ನು ನಿಜವಾಗಿ ನಡೆಸಿದಾಕೆ ಈ ಕುಯಿಲಿ.
೧೭೫೧ರಲ್ಲಿ ಆರ್ಕಾಟನ್ನು ವಶಪಡಿಸಿಕೊಂಡ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ದಕ್ಷಿಣದಲ್ಲಿ ಹೇಳಿಕೊಳ್ಳುವಂಥ ಪ್ರಬಲ ಪ್ರತಿಸ್ಪರ್ಧಿಗಳಿರಲಿಲ್ಲ. ಶ್ರೀರಂಗಪಟ್ಟಣದ ಪುಂಡರು ಫ್ರೆಂಚರ ಬಲದಿಂದ ಎಗರಾಡುತ್ತಿದ್ದರೆ ಅತ್ತ ಅರ್ಕಾಟಿನ ನವಾಬ ಬ್ರಿಟಿಷರ ಪಾದ ನೆಕ್ಕುತ್ತಿದ್ದ. ಆದರೆ ರಾಬರ್ಟ್ ಕ್ಲೈವ್‌ನಿಗೆ ಯುದ್ಧಕ್ಕಿಂತ ತಲೆನೋವಾಗಿದ್ದು ತಮಿಳು ನೆಲದ ಸ್ವಾಭಿಮಾನದ ಹೋರಾಟ ಮತ್ತು ಅವರ ರಾಜನಿಷ್ಠೆ. ತಮಿಳರಲ್ಲಿ ಶ್ರೀಮಂತ ಪರಂಪರೆಯಿತ್ತು. ಅದು ರೂಪಿಸಿದ ಮೌಲ್ಯಗಳಿದ್ದವು. ಅದರಿಂದ ಹುಟ್ಟಿದ ಸ್ವಾಭಿಮಾನವಿತ್ತು. ಅವುಗಳ ಆಧಾರದಲ್ಲಿ ಆಳುತ್ತಿದ್ದ ಸಣ್ಣಪುಟ್ಟ ಸಂಸ್ಥಾನಗಳು ಆರ್ಕಾಟ್ ಮತ್ತು ಮಧುರೈ ಸುತ್ತಮುತ್ತ ಅಸ್ತಿತ್ವದಲ್ಲಿದ್ದವು. ಅದರಲ್ಲೂ ಮಧುರೈ ಸುತ್ತಲಿನ ಸಂಸ್ಥಾನಗಳಲ್ಲಿ ಸಾಂಸ್ಕೃಕ ಶ್ರೀಮಂತಿಕೆಯಿತ್ತು. ಏಕೆಂದರೆ ಮಧುರೈ ಅನೇಕ ಐತಿಹಾಸಿಕ ಘಟನಾವಳಿಗಳಿಗೆ ಸಾಕ್ಷಿಯಾಗಿತ್ತು. ಶಂಕರರ ಪದಚಿಹ್ನೆಗಳು ಅದಕ್ಕೆ ಪರಿಚಯವಿತ್ತು. ಮಲ್ಲಿಕಾರನ ಹಿಂಸೆ, ಕನ್ನಡ ಸೈನ್ಯದ ಪರಾಕ್ರಮ, ಹೊಯ್ಸಳರಸನ ಬಲಿದಾನವನ್ನೂ ಅದು ಕಂಡಿತ್ತು. ಶತಮಾನಗಳ ನಂತರ ಕೂಡಾ ಮಧುರೈ ಅದನ್ನು ನೆನಪು ಮಾಡಿಕೊಳ್ಳುತ್ತಿತ್ತು. ಜಾಗೃತಿಗೆ ಏನೇನು ಬೇಕಿತ್ತೋ ಅವೆಲ್ಲವನ್ನೂ ಮಧುರೈಯ ಆನೆಮಲೈ ಒಡಲಲ್ಲಿ ಹೊತ್ತು ನಿಂತಿತ್ತು.
ಅಂಥಾ ಮಧುರೈ ಸಮೀಪದ ಒಂದು ಸಂಸ್ಥಾನ ಶಿವಗಂಗೈ. ಅಲ್ಲಿನ ಮನ್ನಾರ್ ಮುತ್ತುವದುಗಂತಾರ್ ಎಂಬ ರಾಜನಿಗೆ ರಾಮನಾಥಪುರದ ರಾಜವಂಶದ ಕನ್ಯೆಯೊಬ್ಬಳನ್ನು ವಿವಾಹ ಮಾಡಿಕೊಡಲಾಗಿತ್ತು. ೧೬ ವರ್ಷದ ಆ ಕನ್ಯೆಯಾದರೋ ತಮಿಳಿನೊಂದಿಗೆ ಸಂಸ್ಕೃತ, ಫ್ರೆಂಚ್, ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಪ್ರವೀಣಳೂ, ಕುದುರೆ ಸವಾರಿ, ಕತ್ತಿ ವರಸೆಗಳಲ್ಲಿ ಪರಿಣತಳಾಗಿದ್ದ ವೀರಮಣಿಯಾಗಿದ್ದಳು. ಕಾಲಾನಂತರ ನಾಚಿಯಾರ್ ರಾಣಿಗೆ ಹೆಣ್ಣುಮಗುವೂ ಆಯಿತು. ಕಾಲ ಹೀಗೆ ಸಾಗುತ್ತಿರಲು ೧೭೭೨ರಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಗುಲಾಮ ಆರ್ಕಾಟ್ ನವಾಬ ಮಹಮದ್ ಆಲಿ ಖಾನ್-ವಾಲಾಜನನ್ನು ಮುಂದಿಟ್ಟು ಶಿವಗಂಗೈ ಮೇಲೆ ದಾಳಿ ನಡೆಸಿತು. ಯುದ್ಧದಲ್ಲಿ ರಾಜ ಮತ್ತು ನಾಚಿಯಾರಳ ಪುಟ್ಟ ಮಗು ಸಾವನ್ನಪ್ಪಿತು. ಶಿವಗಂಗೈ ಬ್ರಿಟಿಷ್ ವಶವಾಯಿತು. ಜನ ನಾಚಿಯಾರಳನ್ನು ರಕ್ಷಿಸಿ ವಿರೂಪಾಕ್ಷಿ ಬೆಟ್ಟದ ನಿಗೂಢ ಸ್ಥಳದಲ್ಲಿಟ್ಟು ಹೋರಾಟವನ್ನು ಮುಂದುವರಿಸಿದರು. ವಿಶೇಷವೆಂದರೆ ಅಂದು ರಾಣಿ ನಾಚಿಯಾರ್ ಬೆನ್ನಿಗೆ ನಿಂತಿದ್ದವರು ಇಂದು ಸಮಾಜದ ದೀನ, ದಮನಿತ, ಕೆಳವರ್ಗ ಎಂದು ಕರೆಯಲ್ಪಡುತ್ತಿರುವ ಜನರು. ಅವರಲ್ಲಿ ಮುಖ್ಯರಾಗಿದ್ದವರು ಮೂವರು. ಪೆರಿಯ ಮರುದು ಮತ್ತು ಚಿನ್ನ ಮರುದು ಸೋದರರು. ಮತ್ತೊಬ್ಬಳು ವೀರ ನಾರಿ ಕುಯಿಲಿ.
ಪೆರಿಯಮುತ್ತನ್ ಎಂಬಾತನ ಪತ್ನಿ ರಾಕು ಜಲ್ಲಿಕಟ್ಟು ಪ್ರಿಯೆ. ಕೊನೆಗೆ ಕಾಡುಕೋಣದೊಂದಿಗೆ ಹೋರಾಡುತ್ತಲೇ ಆಕೆ ಪ್ರಾಣ ಕಳೆದುಕೊಳ್ಳುತ್ತಾಳೆ. ಆಕೆಯ ಮಗಳು ಈ ಕುಯಿಲಿ. ಶಿವಗಂಗೈಗೆ ತೆರಳಿದ ಪೆರಿಯಮುತ್ತನ್ ವೇಲುನಾಚಿಯಾರ್ ಬಳಿ ಗೂಢಾಚಾರನಾಗಿ ಸೇರಿಕೊಂಡ. ನಾಚಿಯಾರಳ ಯುದ್ಧ ಕಲೆಗಳನ್ನು ಬೆರಗಿನಿಂದ ನೋಡುತ್ತಾ ಬೆಳೆಯುತ್ತಿದ್ದ ಕುಯಿಲಿಗೆ ತಾನೂ ಅವಳಂತಾಗಬೇಕೆಂಬ ಆಸೆ ಮೊಳೆಯುತ್ತಿತ್ತು. ಯೌವನಕ್ಕೆ ಕಾಲಿಡುವ ಹೊತ್ತಿಗೆ ಕುಯಿಲಿ ಸಾಹಸಿ ಹೆಣ್ಣಾಗಿ ಬೆಳೆದು ರಾಣಿಯ ನಿಕಟವರ್ತಿಯೂ ಆದಳು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕುಯಿಲಿ, ದಲಿತ ಅರುಂಧತಿಯಾರ್ ಜನಾಂಗಕ್ಕೆ ಸೇರಿದವಳಾದರೂ ರಾಣಿಗೆ ಆಕೆಯ ಜಾತಿ ಮುಖ್ಯವಾಗಲಿಲ್ಲ. ಅಂದರೆ ಅಂದಿನ ಸಮಾಜದಲ್ಲಿ ಪ್ರತಿಭೆ ಮತ್ತು ಅರ್ಹತೆಗೆ ಮಾತ್ರ ಬೆಲೆ ಕೊಡುತ್ತಿದ್ದ ಸಮರಸ ಭಾವದ್ದಾಗಿತ್ತು ಎಂಬುದು. ರಾಣಿಯ ಬಲಗೈಯಂತಿದ್ದ ಕುಯಿಲಿಯ ಶೌರ್ಯ ಮತ್ತು ಬದ್ಧತೆಯನ್ನು ಗುರುತ್ತಿಸಿದ ನಾಚಿಯಾರ್ ಆಕೆಯನ್ನು ತನ್ನ ಮಹಿಳಾ ಸೈನ್ಯದ ಮುಖ್ಯಸ್ಥಳನ್ನಾಗಿ ನೇಮಿಸಿದಳು. ಕುಯಿಲಿ ೫೦೦೦ ಮಹಿಳೆಯರ ಸೈನ್ಯವೊಂದಕ್ಕೆ ನಾಯಕಿಯಾದಳು. ಸುಸಜ್ಜಿತ ಗೆರಿಲ್ಲಾ ಪಡೆಯೊಂದು ನಿರ್ಮಾಣವಾಯಿತು. ಒಂದು ದಿನ ಗೂಢಾಚಾರಿ ಪೆರಿಯಮುತ್ತನ್ ಸುದ್ದಿಯೊಂದನ್ನು ತಂದ. ಬ್ರಿಟಿಷರು ವಿಜಯದಶಮಿಯ ದಿನ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ಒದಗಿಸಿದ್ದಾರೆಂದೂ, ಆ ದೇವಸ್ಥಾನವನ್ನೇ ಬ್ರಿಟಿಷರು ಶಸ್ತ್ರಾಸ್ತ್ರ ಸಂಗ್ರಹಾಲಯ ಮಾಡಿಕೊಂಡಿದ್ದಾರೆಂದೂ, ನಿರ್ಣಾಯಕ ಕ್ರಾಂತಿಗೆ ಇದಕ್ಕಿಂತ ಉತ್ತಮ ದಿನ ಸಿಗಲಾರದೆಂದು ತಿಳಿಸಿದ. ಚಿಂತಿಸಿದ ರಾಣಿ ನಾಚಿಯಾರ್ ಮತ್ತು ಕುಯಿಲಿ ಅದಕ್ಕೆ ಭಯಂಕರವೆನಿಸುವ ಯೋಜನೆಯೊಂದನ್ನು ರೂಪಿಸಿದರು.
೧೭೮೦ರ ವಿಜಯದಶಮಿಯ ದಿನ ಕುಯಿಲಿ ಮತ್ತು ಆಕೆಯ ಸೈನ್ಯ ಗಡಿಗೆಗಳಲ್ಲಿ ತುಪ್ಪವನ್ನು ಹೊತ್ತು ಭಕ್ತರ ವೇಷದಲ್ಲಿ ರಾಜರಾಜೇಶ್ವರಿಯ ಅಭಿಷೇಕಕ್ಕೆ ತೆರಳಿದರು. ಶತ್ರು ಸೈನ್ಯದ ಕಣ್ಣಮುಂದೆಯೇ ತೆರಳಿದ ಕುಯಿಲಿ ದೇವಸ್ಥಾನ ಪ್ರವೇಶಿಸಿ ತಾಯಿ ರಾಜರಾಜೇಶ್ವರಿಗೆ ಕೈಮುಗಿದಳು. ಕೈಯಲ್ಲಿದ್ದ ತುಪ್ಪದ ಗಡಿಗೆಯನ್ನು ತಾನೇ ಸುರಿದುಕೊಂಡಳು, ಜೊತೆಗಿದ್ದವರೂ ಕುಯಿಲಿಯ ಮೈಗೆ ತುಪ್ಪ ಸುರಿದರು. ನಂತರ ಕುಯಿಲಿ ತನ್ನ ಮೈಗೆ ತಾನೇ ಬೆಂಕಿ ಕೊಟ್ಟುಕೊಂಡು ಶಸ್ತ್ರ ಸಂಗ್ರಹಾಗಾರಕ್ಕೆ ಹಾರಿದಳು. ವಿಜಯದಶಮಿಯ ಶತ್ರು ದಹನಕ್ಕೆ ತನ್ನನ್ನೇ ಅರ್ಪಿಸಿಕೊಂಡಳು. ಶಸ್ತ್ರಾಗಾರ ಸ್ಪೋಟಿಸಿತು. ಶತ್ರುಗಳು ಅವಕ್ಕಾದರು. ಶಸ್ತ್ರಗಳಿಲ್ಲದೆ ಬರಿಗೈಯಲ್ಲಿ ನಿಂತರು. ಕಾಯುತ್ತಿದ್ದ ನಾಚಿಯಾರಳ ಸೇನೆ ಶತ್ರುಗಳ ಮೇಲೆ ಆಕ್ರಮಣ ನಡೆಸಿತು. ಶಿವಗಂಗೈ ಮರುವಶವಾಯಿತು. ಸ್ವಾರ್ಥವಿಲ್ಲದ, ಲಾಪೇಕ್ಷೆಯಿಲ್ಲದ ಕುಯಿಲಿಯ ಬಲಿದಾನ ಶಿವಗಂಗೈಯನ್ನು ದಾಟಿ ಖ್ಯಾತವಾಯಿತು. ಸಮಾಜ ಆಕೆಯನ್ನು ದೇವತೆಯ ಸ್ಥಾನಕ್ಕೇರಿಸಿತು.
ಆಸಕ್ತರು ಇಲ್ಲಿ ಖರೀದಿಸಬಹುದು:
ಕುಯಿಲಿಯ ಬಲಿದಾನದಿಂದ ಬ್ರಿಟಿಷರು ಪಾಠವೊಂದನ್ನು ಕಲಿತರು. ಇಂಥದ್ದೊಂದು ಯುದ್ಧತಂತ್ರವನ್ನು ಅಂದಾಜಿಸದ ಬ್ರಿಟಿಷರು, ಈ ಆತ್ಮಾಹುತಿ ಸಮರ್ಪಣೆಯದ್ದು ಎಂದರಿತಾಗ ಚಕಿತರಾದರು. ಅದಕ್ಕೆ ಮದ್ದೆರೆಯಬೇಕೆಂದು ಅಂದೇ ತೀರ್ಮಾನಿಸಿದ ಬ್ರಿಟಿಷರು ಕಾಲ್ಡ್ ವೆಲ್ ಎಂಬ ವಿದೇಶಿ ಬ್ರಾಹ್ಮಣನನ್ನು ತಮಿಳುನಾಡಿಗೆ ಕರೆತಂದರು! ಮುಂದೆ ಆತನ ಕುಟಿಲ ತಂತ್ರಗಳು ಹೇಗೆ ಸಮಾಜವನ್ನು ಕಲಕಿದವು ಎಂಬುದಕ್ಕೆ ಪೆರಿಯಾರ್ ವಾದ, ತಮಿಳು ಪ್ರತ್ಯೇಕತೆ, ದ್ರಾವಿಡ ಪಕ್ಷ ಮತ್ತು ಆರ್ಯ ಆಕ್ರಮಣವಾದ ಎಂಬ ಮಿಥ್ಯೆಗಳು ಮಾಡಿದ ದುಷ್ಫಲಗಳೇ ಸಾಕ್ಷಿ. ಜೊತೆಗೆ ವೀರ ನಾರಿ ಕುಯಿಲಿಯ ಅರುಂಧತಿಯಾರ್ ಜನಾಂಗವನ್ನು ದಮನಿತ ಜನಾಂಗ ಎಂದು ಬಿಂಬಿಸುವಲ್ಲಿ ಕೂಡಾ ಇಂಗ್ಲಿಷ್ ಶಿಕ್ಷಣ ಯಶಸ್ವಿಯಾಯಿತು. ದುರದೃಷ್ಟವೆಂದರೆ ಇಂದಿಗೂ ದೇಶ ತ್ಯಾಗಮಯಿ, ವೀರಾಗ್ರಣಿ, ಮುಗ್ಧ ಅರುಂಧತಿಯಾರ್ ಜನಾಂಗವನ್ನು ಗುರುತ್ತಿಸುವುದು ದಲಿತರೆಂದೆ! ಏಕೆಂದರೆ ಶತಮಾನಗಳ ಹಿಂದೆಯೇ ಆ ಜನಾಂಗದ ಸ್ಮೃತಿಯನ್ನು ಕಾಲ್ಡ್ ವೆಲ್ ಮತ್ತು ಪೆರಿಯಾರ್ ಸಂತತಿ ಮರೆಸಿದೆ.
ಕುಯಿಲಿಯ ಬಗ್ಗೆ ತಮಿಳಿನಲ್ಲಿ ಕಥೆ-ಕಾದಂಬರಿಗಳು ಬಂದಿವೆ. ಸಿನೆಮಾ ಬಂದಿದೆ. ಆದರೆ ಅಲ್ಲೆಲ್ಲೂ ಕುಯಿಲಿಯ ರಾಜನಿಷ್ಠೆ-ಧರ್ಮನಿಷ್ಠೆಗಳು ಪ್ರಕಟವಾಗಿಲ್ಲ. ಪೆರಿಯಾರ್ ಗುಂಗಿನಿಂದ ಆಕೆಯ ಅಸಲಿ ಗುಣವನ್ನು ಮುಚ್ಚಿಹಾಕಲಾಗಿದೆ. ಆ ಮೂಲಕ ದಲಿತ ಧರ್ಮಾಭಿಮಾನವನ್ನು ಮರೆಮಾಚಲಾಗಿದೆ. ಆಕೆಯನ್ನು ಇನ್ನಿಲ್ಲದಂತೆ ನಕ್ಸಲ್ ನಾಯಕಿಯಂತೆ ತೋರಿಸಲು ಆಕೆಯ ಕಾಳಿ ಭಕ್ತಿಯನ್ನು ಮುಚ್ಚಿಡಲಾಗಿದೆ. ಸೆಕ್ಯುಲರ್ ಕುಯಿಲಿಯನ್ನೇ ಇಂದಿಗೂ ಕೊಂಡಾಡಲಾಗುತ್ತಿದೆ.
ಆದರೆ ಕುಯಿಲಿಯನ್ನು ಅರ್ಥವತ್ತಾಗಿ ಚಿತ್ರಿಸಿದ ಪುಸ್ತಕವೊಂದು ಕನ್ನಡದಲ್ಲಿ ಬಿಡುಗಡೆಯಾಗಿದೆ. ಮೈಸೂರಿನ ಹಿರಿಯ ವಕೀಲರು, ಧರ್ಮಭೀರುಗಳಾದ ಒ.ಶಾಮ ಭಟ್ ಅವರ “ಬೆಂಕಿಯ ಚೆಂಡು ಕುಯಿಲಿ” ಪುಸ್ತಕ ಅರುಂಧತಿಯಾರ್ ಜನಾಂಗದ ಧರ್ಮಭೀರುತನವನ್ನು ಹೇಳುತ್ತಾ ಕುಯಿಲಿಯ ಕಥೆಯನ್ನು ಹೇಳುತ್ತದೆ. ಅಗಸ್ತ್ಯ-ಲೋಪಮುದ್ರಾ ದೇವಿಯರ ಸಂಸ್ಕೃತಿಯನ್ನು ಮರೆಮಾಚುವ ಪೆರಿಯಾರ್ ಷಡ್ಯಂತ್ರವನ್ನು ಪುಸ್ತಕ ಉದ್ದಕ್ಕೂ ಖಂಡಿಸುತ್ತದೆ.
ಈ ಪುಸ್ತಕದ ಮೂಲಕ ಶಾಮಭಟ್ಟರು ಮತ್ತೊಂದು ಆದರ್ಶವನ್ನೂ ಮೆರೆದಿದ್ದಾರೆ. ಪುಸ್ತಕದಿಂದ ಬಂದ ಹಣವನ್ನು ಮಾದಿಗ ಜನಾಂಗದ ಅಭಿವೃದ್ಧಿಗಾಗಿ ಸ್ಥಾಪಿಸಿದ ಪ್ರತಿಷ್ಠಾನಕ್ಕೆ ಮೀಸಲಿಟ್ಟಿದ್ದಾರೆ. ಕೇವಲ ೬೦ ರೂ.ನ ಪುಸ್ತಕ ಕೂಡಾ ಸಾಮಾಜಿಕ ಕಾರ್ಯವನ್ನು ಮಾಡಬಹುದು ಎಂಬುದನ್ನು ಲೇಖಕರು ತೋರಿಸಿಕೊಟ್ಟಿದ್ದಾರೆ. ವೈದಿಕ ಶಾಮಭಟ್ಟರು ದಲಿತ ಕುಯಿಲಿ ಬಗ್ಗೆ ಪುಸ್ತಕ ಬರೆಯುವುದು, ಆಕೆಯನ್ನು ಆರಾಧನಾ ಭಾವದಿಂದ ಕಾಣುವುದು, ಹಣವನ್ನು ಮಾದಿಗ ಸಮಾಜಕ್ಕೆ ಅರ್ಪಿಸುವುದು, ಸ್ವಾತಂತ್ರ್ಯೋತ್ಸವದ ೭೫ರ ಹೊತ್ತಲ್ಲಿ ಕುಯಿಲಿ ಕನ್ನಡಕ್ಕೆ ಪರಿಚಯವಾಗಿದ್ದೆಲ್ಲವೂ ನಾನಾ ಅರ್ಥಗಳನ್ನು ನೀಡುತ್ತಾ ಹೊಸ ಚರ್ಚೆಯೊಂದಕ್ಕೆ ಅನುವು ಮಾಡುತ್ತಿರುವಂತೆ ಕಾಣಿಸುತ್ತದೆ. ಏಕೆಂದರೆ ಜಗತ್ತಿನ ಸಕಲ ಸಂಗತಿಗಳನ್ನೂ ಹೆಕ್ಕಿ ತಂದು ಭಾರತೀಯ ದಲಿತರಿಗೆ ಜೋಡಿಸಿ ಬರೆಯುವ ಬುದ್ಧಿಜೀವಿ ಸಾಹಿತಿಗಳಾರೂ ನೆರೆಯ ರಾಜ್ಯದ ಕುಯಿಲಿ ಬಗ್ಗೆ ಬರೆಯಲಿಲ್ಲ! ಕನ್ನಡದ ದಲಿತ ಸಾಹಿತಿಗಳಾರಿಗೂ ಶಾಮಭಟ್ಟರಂತೆ ಪುಸ್ತಕದ ಹಣವನ್ನು ದಲಿತ ಕಲ್ಯಾಣಕ್ಕೆ ನೀಡಬೇಕೆಂದು ಇದುವರೆಗೆ ಅನಿಸಿಲ್ಲ. ಏಕೆ ಅನಿಸಲಿಲ್ಲ ಎಂಬುದಕ್ಕೆ ಒಂದೇ ಉತ್ತರ. ಶಾಮ ಭಟ್ಟರು ಕುಯಿಲಿಯನ್ನು ಹ್ರದಯದಿಂದ ನೋಡಿದ್ದಾರೆ. ಹಾಗಾಗಿ ಅವರಿಗೆ ಕುಯಿಲಿ ಕಂಡಿದ್ದಾಳೆ. ಉಳಿದವರಿಗೆ ಎಲ್‌ಟಿಟಿಇ ಕಂಡಿದೆ.