
ಕಳೆದ ವರ್ಷದಿಂದ ಏರುತ್ತಿದ್ದ ಪೂರ್ವ ಲಢಾಕಿನ ನಿಯಂತ್ರಣ ರೇಖೆಯ ಆಸುಪಾಸಿನ ಕಾವು ಸ್ವಲ್ಪ ತಗ್ಗುವ ಲಕ್ಷಣ ಕಾಣುತ್ತಿದೆ. ಇತ್ತೀಚಿನ ಮಹತ್ವದ ಘಟನೆಯಲ್ಲಿ ಪ್ಯಾಂಗಾಂಗ್ ತ್ಸೊ ಸರೋವರದ ಇಕ್ಕೆಲಗಳಲ್ಲಿ ವಾಸ್ತವ ನಿಯಂತ್ರಣ ರೇಖೆಗುಂಟ ಚೀನಾ ಜಮಾವಣೆ ಮಾಡಿದ್ದ ಸುಮಾರು ೧೦ ಸಾವಿರ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದೆ. ಕಳೆದ ವರ್ಷ ಮೇ ತಿಂಗಳ ೫ರಂದು ಪ್ಯಾಂಗಾಂಗ್ ಬಳಿ ಚೀನಾ ಸೈನಿಕರು ಆರಂಭಿಸಿದ ಗಡಿ ತಂಟೆ ಸಂಘರ್ಷಕ್ಕೆ ಮೊದಲು ಮಾಡಿತು. ಜೂನ್ ತಿಂಗಳಿನಲ್ಲಿ ಗ್ಯಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ನಂತರ ಪ್ಯಾಂಗಾಂಗ್ ಸರೋವರದ ಬಳಿ ಚೀನಿಯರು ಅತಿಕ್ರಮಣಕ್ಕೆ ಮುಂದಾಗಿದ್ದರು. ಆಗಸ್ಟ್ ತಿಂಗಳ ಕೊನೆಯಲ್ಲಿ ಚೀನಾ ಪ್ಯಾಂಗಾಂಗ್ ಬಳಿ ಯಥಾಸ್ಥಿತಿಯನ್ನು ಉಲ್ಲಂಘಿಸಿದಾಗ ಭಾರತೀಯ ಸೇನೆ ಚೀನಿಯರ ಅತಿಕ್ರಮಣ ಯತ್ನವನ್ನು ವಿಫಲಗೊಳಿಸಿತ್ತು. ನಂತರ ಎರಡೂ ಕಡೆ ಬೃಹತ್ ಪ್ರಮಾಣದ ಜಮಾವಣೆಗೊಂಡ ಪರಿಣಾಮ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಇದೀಗ ಅನೇಕ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆಗಳ ನಂತರ ಪ್ಯಾಂಗಾಂಗ್ ಸರೋರವರದ ಫಿಂಗರ್ ೪ ಮತ್ತು ೮ರ ನಡುವಿನ ಪ್ರದೇಶದಲ್ಲಿ ಎರಡೂ ಕಡೆಯಿಂದ ಗಸ್ತು ನಿಲ್ಲಿಸಿ ಯಥಾಸ್ಥಿತಿ ಕಾಯ್ದುಕೊಳ್ಳಲು ಒಪ್ಪಲಾಗಿದೆ. ಚೀನಿ ಪಡೆಗಳು ಫಿಂಗರ್ ೮ರ ಹಿಂದಿನ ಪ್ರದೇಶಕ್ಕೆ ಮರಳಿವೆ. ಇದು ಭಾರತಕ್ಕೆ ದೊರಕಿದ ಗೆಲುವು ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ಯಾಂಗಾಂಗ್‌ಗೆ ಸೀಮಿತವಲ್ಲ
ಉತ್ತರದ ಸಿಯಾಚಿನ್ ಹಿಮಾಚ್ಛಾದಿತ ಪ್ರದೇಶದಿಂದ ಆರಂಭವಾಗುವ ವಾಸ್ತವ ನಿಯಂತ್ರಣ ರೇಖೆ ಬರೋಬ್ಬರಿ ೩,೪೮೮ ಕಿಮೀನಷ್ಟು ಉದ್ದ ಹರಡಿದೆ. ಚೀನಾದ ಗಡಿತಂಟೆ ಪ್ಯಾಂಗಾಂಗ್‌ಗೆ ಸೀಮಿತವಲ್ಲ. ಉತ್ತರದ ಡೆಪ್ಸಾಂಗ್ ಸಮತಟ್ಟು ಪ್ರದೇಶದಿಂದ ದಕ್ಷಿಣದ ಡೆಮ್ಚಾಕ್ ಹುಲ್ಲುಗಾವಲು ಪ್ರದೇಶದವರೆಗೂ ಅಲ್ಲಲ್ಲಿ ಆಗಾಗ ಅತಿಕ್ರಮಣ ಯತ್ನಗಳು ನಡೆಯುತ್ತವೆ. ಜೊತೆಗೆ ಪೂರ್ವದಲ್ಲಿ ಸಿಕ್ಕಿಂ ಗಡಿಯ ಬಳಿ ರಸ್ತೆ, ಹೆಲಿಪ್ಯಾಡ್ ನಿರ್ಮಾಣ, ಅರುಣಾಚಲದ ಗಡಿಯಲ್ಲಿ ಇಡೀ ಹಳ್ಳಿಯನ್ನೇ ನಿರ್ಮಿಸುವುದು ಇಂತಹ ಚೇಷ್ಟೆಗಳನ್ನು ಚೀನಾ ನಿರಂತರ ಮಾಡುತ್ತಲೇ ಬಂದಿದೆ.
ಕೊವಿಡ್ ಸಮರದಲ್ಲೂ ಅಸಹಕಾರ
೨೦೧೯ರ ಕೊನೆಯಲ್ಲಿ ಚೀನಾದ ವುಹಾನ್‌ನಿಂದ ಎದ್ದ ಕೊರೊನಾ ವೈರಸ್ ವಿಶ್ವದೆಲ್ಲೆಡೆ ಹರಡಿ ಸಮಸ್ತ ಮನುಕುಲಕ್ಕೆ ಕಂಟಕವಾದ ವಿಷಯ ಎಲ್ಲಿರಿಗೂ ತಿಳಿದಿರುವುದು. ಪ್ರಾರಂಭದ ಹಂತದಲ್ಲಿ ಉಳಿದ ದೇಶಗಳಿಗೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡದೇ ವಂಚಿಸಿತು ಚೀನಾ. ಆರಂಭದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು ತನ್ನ ಅಂಕೆಯಲ್ಲಿ ಕುಣಿಸಿದ ಚೀನಾ ಕೊನೆಗೂ ಒಂದು ವರ್ಷದ ಮೇಲೆ ಅನೇಕ ಪ್ರಯತ್ನಗಳ ನಂತರ ಸಂಸ್ಥೆಯ ತಜ್ಞರು ಚೀನಾಕ್ಕೆ ಬಂದು ಮಾಹಿತಿ ಸಂಗ್ರಹಕ್ಕೆ ಅವಕಾಶ ನೀಡಿತಾದರೂ ಅವರಿಗೆ ಏನೂ ಸಿಗದಂತೆ ಮುಚ್ಚಿಡುವಲ್ಲಿಯೂ ಯಸ್ವಿಯಾಯಿತು. ದೇಶಕ್ಕೆ ಒಳಬರಲು ಬಿಟ್ಟ ತಜ್ಞರನ್ನು ಪ್ರಾರಂಭದಲ್ಲಿ ಕ್ವಾರಂಟೈನ್ ಹೆಸರಿನಲ್ಲಿ ಗೃಹಬಂಧನದಲ್ಲಿರಿಸಿ, ನಂತರ ಹೋಟೆಲಿನಿಂದಲೇ ಅವರು ಕೆಲಸ ಮಾಡುವಂತೆ ಮಾಡಿತು. ತಾನು ತಯಾರಿಸಿದ ವರದಿ, ತನಗೆ ಬೇಕಾದ ರೀತಿಯ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ತಂಡ ಒಪ್ಪಿಕೊಳ್ಳುವಂತೆ ಒತ್ತಡ ಹಾಕಿತು. ಕೊರೊನಾ ವೈರಸ್ ವಿದೇಶದಿಂದ ಇಲ್ಲಿಗೆ ಬಂದಿದ್ದು ಎಂದು ಆಸ್ಟ್ರೇಲಿಯಾದ ಕಡೆ ಬೊಟ್ಟು ಮಾಡಿತು, ಅಮೇರಿಕದ ಷಡ್ಯಂತ್ರ ಅಲ್ಲಿಯೂ ವಿಚಾರಣೆ ನಡೆಸಿ ಎಂದಿತು. ವಾಸ್ತವದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಚೀನಾದಿಂದ ಬರಗೈಲೇ ಮರಳಬೇಕಾಯಿತು. ಒಂದೆಡೆ ವಿಶ್ವಕ್ಕೇ ಕೊರೊನಾವನ್ನು ರಫ್ತು ಮಾಡಿ ಮಾನವತೆಯ ಸಂಕಷ್ಟಕ್ಕೆ ಚೀನಾ ಕಮ್ಯುನಿಸ್ಟ್ ಚೀನಾ ಕಾರಣವಾದರೆ ಇನ್ನೊಂದೆಡೆ ಔಶಧಿ, ವೈದ್ಯಕಿಯ ಸಲಕರಣೆ ಮತ್ತು ಇದೀಗ ವ್ಯಾಕ್ಸೀನ್ ನೀಡುವ ಮೂಲಕ ಭಾರತ ವಿಶ್ವವನ್ನು ತನ್ನ ಕುಟುಂಬವೆಂಬಂತೇ ಕಾಣುತ್ತಿದೆ. ಇದು ಎರಡು ಸಿದ್ಧಾಂತಗಳ ನಡುವಿನ ವ್ಯತ್ಯಾಸ
ಅಂತೂ ಸೈನಿಕರ ಸಾವನ್ನು ಒಪ್ಪಿತು ಚೀನಾ
ಎಂಟು ತಿಂಗಳ ಕೆಳಗೆ ಜೂನ್ ೧೫ರಂದು ಲಢಾಕಿನ ಅಕ್ಸಾಯ್‌ಚಿನ್ ಪ್ರದೇಶದ ಗ್ಯಾಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರ ಅತಿಕ್ರಮಣವನ್ನು ಎದುರಿಸಿದ ಭಾರತೀಯ ಸೈನಿಕರು ಮುಖಾಮುಖಿಯಲ್ಲಿ ಕರ್ನಲ್ ಸಂತೋಷ್ ಬಾಬು ಸೇರಿದಂತೆ ೨೦ ವೀರ ಸೈನಿಕರು ಚೀನಿಯರಿಗೆ ಪಾಠ ಕಲಿಸುತ್ತ, ಅವರನ್ನು ಹಿಮ್ಮೆಟ್ಟಿಸುತ್ತ ಹುತಾತ್ಮರಾದರು. ಚೀನಾದ ಪಡೆಯಲ್ಲೂ ಸಾಕಷ್ಟು ಸಾವುನೋವು ಸಂಭವಿಸಿತ್ತು. ಸುಮಾರು ೪೫ಕ್ಕೂ ಹೆಚ್ಚು ಸೈನಿಕರನ್ನು ಸ್ಟ್ರೆಚ್ಚರಿನ ಮೇಲೆ ಹೊತ್ತೊಯ್ದಿದ್ದನ್ನು ಭಾರತದ ಪಡೆಗಳು ಗುರುತಿಸಿದ್ದವು. ಅಮೆರಿಕ ಮತ್ತು ರಷ್ಯಾ ದೇಶದ ಗುಪ್ತಚರ ಅಂದಾಜಿನ ಪ್ರಕಾರ ಚೀನಾದ ೩೫-೪೫ ಸೈನಿಕರು ಈ ಘರ್ಷನೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ತನ್ನ ಸೈನಿಕರ ಸಾವನ್ನು ಚೀನಾ ಬಹಿರಂಗಪಡಿಸಲೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ. ಆದರೆ ಈಗ ಘಟನೆ ನಡೆದು ಎಂಟು ತಿಂಗಳ ನಂತರ ಮೊದಲ ಬಾರಿಗೆ ತನ್ನ ಪೀಪಲ್ಸ್ ಲಿಬರೇಶನ್ ಆರ್ಮಿಯ ೪ ಜನ ಸೈನಿಕರು ಮರಣ ಹೊಂದಿದ್ದಾರೆ ಎಂದು ಒಪ್ಪಿಕೊಂಡಿರುವ ಚೀನಾ ಅವರ ಹೆಸರನ್ನು ಬಹಿರಂಗ ಪಡಿಸಿದೆ, ಘರ್ಷಣೆಯ ವೀಡಿಯೋವನ್ನೂ ಬಿಡುಗಡೆ ಮಾಡಿದೆ. ಇಲ್ಲಿ ಅನೇಕ ಪ್ರಶ್ನೆಗಳು ಏಳುತ್ತವೆ. ಇದೀಗ ಪ್ಯಾಂಗಾಂಗ್‌ನಿಂದ ಹಿಂತೆಗೆದ ಮೇಲೆ ಕಾರ್ಪ್ಸ ಕಮಾಂಡರ್ ಹಂತದ ೧೦ನೇ ಸುತ್ತಿನ ಮಾತುಕತೆ ನಡೆಯುವ ಸಂದರ್ಭದಲ್ಲಿ ’ತಾನು ಭಾರತದ ಆಕ್ರಮಣದ ಬಲಿಪಶು’ ಎಂದು ಬಿಂಬಿಸಿಕೊಳ್ಳಲು ಚೀನಾ ಹೀಗೆ ಮಾಡಿತೇ? ಹುತಾತ್ಮ ಸೈನಿಕರು ಯಾವುದೇ ಪಕ್ಷಕ್ಕೆ ಸೇರಿರಲಿ ಅವರಿಗೆ ಕನಿಷ್ಟ ಗೌರವ ಸೂಚಿಸುವುದೂ ಕಮ್ಯುನಿಸ್ಟ್ ಚೀನಾದ ಅಹಂಕಾರಕ್ಕೆ ಕಡಿಮೆಯೇ? ಹಾಗೆಯೇ ಅಲ್ಲಿಂದಿಲ್ಲಿಗೂ ’ಸಾಕ್ಷ್ಯ ಕೊಡಿ’ ಎಂದು ಬೊಬ್ಬಿರಿಯುತ್ತ ನಮ್ಮ ಸೈನಿಕರ ಶೌರ್ಯ, ಭಾರತದ ಆತ್ಮಗೌರವಕ್ಕೆ ನಿರಂತರ ಚ್ಯುತಿ ತರುತ್ತಿರುವ ರಾಹುಲ್ ಗಾಂಧಿಯ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಇನ್ನಾದರೂ ಒಪ್ಪಬಹುದೇ?
ಸುತ್ತಲೂ ಶತ್ರುಗಳು
ವಿಶ್ವದ ಹಿರಿಯಣ್ಣನಾಗಿ ಮೆರೆಯಬೇಕೆಂಬ ಮಹದಾಕಾಂಕ್ಷೆಯನ್ನು ಪೋಷಿಸಿಕೊಂಡು ಬಂದಿರುವ ವಿಸ್ತರಣವಾದಿ ಕಮ್ಯುನಿಸ್ಟ್ ಚೀನಾ ಮತ್ತು ಅದರ ನಾಯಕರಿಗೆ ಸುತ್ತಲೂ ತಾನೇ ಮಾಡಿಕೊಂಡ ಶತ್ರುಗಳು. ಆಕ್ರಮಿಸಿಕೊಂಡಿರುವ ಟಿಬೆಟ್, ದಮಕ್ಕೊಳಗಾದ ಉಯ್‌ಗುರ್ ಮುಸ್ಲಿಂ ಬಾಹುಳ್ಯದ ಕ್ಸಿಂಜಿಯಾಂಗ್ ಪ್ರದೇಶ, ಪ್ರಜಾಪ್ರಭುತ್ವದ ಧ್ವನಿ ದಿನೇದಿನೇ ಏರುತ್ತಿರುವ ಹಾಂಗ್‌ಕಾಂಗ್, ತನ್ನದೇ ಭಾಗ ಎಂದು ಹಿಡಿತ ಬಿಗಿಮಾಡಲು ಯತ್ನಿಸಿದರೂ ಮತ್ತೆ ವಿರೋಧದ ಧ್ವನಿ ಏಳಿಸುತ್ತಿರುವ ತೈವಾನ್ ಇವೆಲ್ಲವನ್ನೂ ಹಿಡಿತದಲ್ಲಿಡಬೇಕಾದ ಅನಿವಾರ್ಯತೆ ಚೀನಾದ ನಾಯಕತ್ವಕ್ಕಿದೆ. ಜೊತೆಗೆ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಪ್ರಭುತ್ವವನ್ನು ಸಾಧಿಸುವ ಸಲುವಾಗಿ ವಿಯೆಟ್ನಾಂ ಮೊದಲಾದ ಆಸಿಯಾನ್ ದೇಶಗಳ ಜೊತೆಗೆ ತಗಾದೆ, ಜಪಾನಿನ ಜಲ ಪ್ರದೇಶಗಳು, ದ್ವೀಪಗಳನ್ನು ಆಕ್ರಮಿಸಿಕೊಳ್ಳುವ ಸಲುವಾಗಿ ನೌಕೆಗಳನ್ನು ಕಳುಹಿಸಿ ಅಲ್ಲಿಯೂ ಕಾಲ್ಕೆರೆದು ಜಗಳ ನಡೆಸುತ್ತಿದೆ. ಅಮೆರಿಕದ ಜೊತೆಗೆ ವ್ಯಾಪಾರಿ ಸಂಘರ್ಷ, ಆಸ್ಟ್ರೇಲಿಯಾದ ಜೊತೆಗೆ ರಾಜತಾಂತ್ರಿಕ ಬಿಕ್ಕಟ್ಟು, ಒಂದೆರಡಲ್ಲ ಕಮ್ಯುನಿಸ್ಟ್ ಚೀನಾದ ತಗಾದೆಗಳು.
ಚೀನಾ ಸವಾಲಿಗೆ ಕ್ವಾಡ್ ಉತ್ತರ
ಕ್ವಾಡ್ರಿಲಾಟರಲ್ ಸೆಕ್ಯುರಿಟಿ ಡೈಲಾಗ್ ಅಥವಾ ಚಿಕ್ಕದಾಗಿ ’ಕ್ವಾಡ್’ ಎನ್ನುವುದು ಭಾರತ, ಅಮೆರಿಕ, ಆಸ್ಟ್ರೇಲಿಯ ಮತ್ತು ಜಪಾನ್ ದೇಶಗಳ ನಡುವಿನ ಒಂದು ಅನೌಪಚಾರಿಕ ಕಾರ್ಯತಂತ್ರ ವೇದಿಕೆ. ’ಇಂಡೋ ಪೆಸಿಫಿಕ್’ ಎಂದು ಕರೆಯಲಾಗುವ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರದ ನಡುವಿನ ಪ್ರದೇಶದಲ್ಲಿನ ಕಾರ್ಯತಂತ್ರವೇ ಇದರ ಮೂಲ ಉದ್ಧೇಶ. ವಿಶೇಷವಾಗಿ ಈ ಪ್ರದೇಶದಲ್ಲಿ ಚೀನಾದ ಅತಿಕ್ರಮಣ ಹಾಗೂ ಪ್ರಭಾವವನ್ನು ತಗ್ಗಿಸುವುದು ಪ್ರಮುಖ ವಿಷಯ. ಕ್ವಾಡ್ ೨೦೦೮-೦೯ರಲ್ಲೇ ಆರಂಭವಾದರೂ ೨೦೧೭ರಲ್ಲಿ ಈ ವ್ಯವಸ್ಥೆ ಕಾರ್ಯಾರಂಭ ಮಾಡಿತು. ಈ ನಾಲ್ಕು ದೇಶಗಳ ಪೈಕಿ ಚೀನಾದೊಂದಿಗೆ ಭೌಗೋಳಿಕ ಗಡಿ ಹಂಚಿಕೊಂಡಿರುವುದು ಭಾರತ ಮಾತ್ರ. ಮತ್ತು ಹಾಗೆ ನೋಡಿದರೆ ಅಮೆರಿಕಕ್ಕೆ ಚೀನಾವನ್ನು ನಿಯಂತ್ರಿಸಲು ಭಾರತದ ನೆರವು ಪಡೆಯುವುದು ಅನಿವಾರ್ಯವೂ ಹೌದು. ಚೀನಾ ವಿಶ್ವದ ಎದುರು ಒಡ್ಡುತ್ತಿರುವ ಸವಾಲಿಗೆ ಕ್ವಾಡ್ ಸಮರ್ಥವಾಗಿ ಉತ್ತರ ನೀಡಬಲ್ಲದು ಎಂದೇ ವಿಶ್ಲೇಶಿಸಲಾಗುತ್ತಿದೆ.
ನೆರೆಯ ರಾಷ್ಟ್ರವಾದ ವಿಸ್ತರಣಾವಾದಿ ಕಮ್ಯುನಿಸ್ಟ್ ಚೀನಾದ ಸವಾಲನ್ನು ಭಾರತ ದೀರ್ಘಕಾಲದವರೆಗೆ ಎದುರಿಸಲೇಬೇಕಾದ ಅನಿವಾರ್ಯವಿದೆ. ಹಾಗಾಗಿ ಗಡಿಯ ತಿಕ್ಕಾಟದ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತವೆ ಎನ್ನವುದರಲ್ಲಿ ಅನುಮಾನವಿಲ್ಲ. ಕೆಂಪು ಚೀನಿ ಸೈನಿಕರನ್ನು ಎದುರಿಸಲು ಭಾರತದ ಸೇನೆ ಸಮರ್ಥವಾಗಿದೆ ಮತ್ತು ವೀರಯೋಧರೇನೋ ಸದಾ ಸಿದ್ಧ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯ ಬೇಡ. ಆದರೆ ಈಗಿರುವ ಕೇಂದ್ರ ಸರ್ಕಾರ ರಾಜತಾಂತ್ರಿಕ ತಂತ್ರಗಾರಿಕೆ ಮತ್ತು ಚೀನಾ ನೀತಿ ನಿರೂಪಣೆಯಲ್ಲಿ ದೃಢತೆಯನ್ನು ಪ್ರದರ್ಶಿಸಿದಂತೆ ಮುಂದಿನ ದಿನಗಳಲ್ಲಿಯೂ ಭಾರತದ ನೇತೃತ್ವ ಸ್ಥಿರತೆ ಕಾಯ್ದುಕೊಳ್ಳಬಲ್ಲದೇ? ಭಾರತೀಯರು ಎಲ್ಲ ರಂಗಗಳಲ್ಲಿ ಚೀನಾವನ್ನು ಬಹಿಷ್ಕರಿಸಿ ದೇಶದ ಪರ ದೀರ್ಘ ಕಾಲ ನಿಲ್ಲಬಲ್ಲರೇ? ಎನ್ನುವ ಸವಾಲು ಕೂಡ ನಮ್ಮ ಮುಂದಿದೆ.