ಇತ್ತೀಚೆಗೆ ನಡೆದ ಹೈದರಾಬಾದ್ ಮಹಾನಗರ ಪಾಲಿಕೆ ದೇಶದಾದ್ಯಂತ ಹಲವು ವಿಷಯಗಳಿಗಾಗಿ ಚರ್ಚೆಯಾಯಿತು. ಇದರಲ್ಲಿ ಬಹುಮಖ್ಯ ವಿಷಯಗಳಲ್ಲೊಂದು ಭಾಗ್ಯನಗರ ಎಂದು ಮರುನಾಮಕರಣದ ವಿಷಯ. ಯುವಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯರ ಟ್ವೀಟ್ ನಿಂದ ಪ್ರಾರಂಭವಾದ ಚರ್ಚೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೈದರಾಬಾದ್‌ನ್ನು ಭಾಗ್ಯನಗರ ಹೆಸರು ಬದಲಾಯಿಸುವುದಾಗಿ ಬಹಿರಂಗವಾಗಿ ಹೇಳುವ ಮೂಲಕ ಚರ್ಚೆ ಮುನ್ನೆಲೆಗೆ ಕಾರಣವಾಯಿತು.
ನಮ್ಮ ಜಾತ್ಯತೀತವಾದಿ-ಇಸ್ಲಾಮಿಸ್ಟ್ ಇತಿಹಾಸಕಾರರು, ಮಾಧ್ಯಮಗಳು ಹೈದರಾಬಾದಿನ ಹಿಂದೂ ಇತಿಹಾಸ ಮತ್ತು ಪರಂಪರೆಯನ್ನು ಮುಚ್ಚಿಹಾಕಲು ಮತ್ತು ವಿರೂಪಗೊಳಿಸಲು ನಿರಂತರ ದಣಿವರಿಯದ ಆಂದೋಲನವನ್ನೇ ನಡೆಸುತ್ತಿವೆ. ಹೈದರಾಬಾದ್ ಎಂದೂ ‘ಭಾಗ್ಯನಗರ’ವಾಗಿರಲಿಲ್ಲ; ’ಭಾಗ್ಮತಿ’ ಎನ್ನುವಾಕೆ ಇರಲೇ ಇಲ್ಲ ಎಂದು ಅವರು ಹೇಳುತ್ತಾ ಬಂದಿದ್ದಾರೆ. ಸ್ಪಷ್ಟವಾದ ಐತಿಹಾಸಿಕ ದಾಖಲೆ ಸಾಕ್ಷ್ಯಗಳು ಇದ್ದರೂ ಕೂಡಾ ಅಂತಹ ಸುಳ್ಳಿನ ಅಭಿಯಾನವು ನಡೆಯುತ್ತಿರುವುದು ಆಘಾತಕಾರಿ.

ಕುತುಬ್ ಶಾ ಮತ್ತು ಆತನ ಹಿಂದೂ ಪತ್ನಿ ಭಾಗ್ಮತಿಯ ದಿಬ್ಬಣವನ್ನು ಚಿತ್ರಿಸುವ ಒಂದು ಸಮಕಾಲೀನ ಕುತುಬ್ ಶಾಹಿ ಪೈಂಟಿಂಗ್ ಇಲ್ಲಿದೆ. ಹೈದರಾಬಾದಿಗೆ ಆಕೆಯ ಹೆಸರನ್ನು ಇಡಲಾಗಿತ್ತು. ಸುಮಂಗಲಿಯರು ಆರತಿಗಳನ್ನು ಹಿಡಿದಿರುವ ಈ ಹಿಂದೂ ಶೈಲಿಯ ಮದುವೆಯನ್ನು ಗಮನಿಸಿ. ಇದರ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಗಮನಿಸೋಣ.
ಕುತುಬ್‌ಶಾಹಿ ವಂಶವನ್ನು ಸುಲ್ತಾನ್ ಕೂಲಿ ಕುತುಬ್ ಮುಲ್ಕ್ (ಕ್ರಿ.ಶ. ೧೪೭೦ ರಿಂದ ೧೫೪೩) ಸ್ಥಾಪಿಸಿದನು. ಆತ ಇರಾನ್‌ನಿಂದ ಭಾರತಕ್ಕೆ ಬಂದನು. ಭಾರತವು ಆಗ ಸಂಪತ್ತು ಮತ್ತು ಅಪರಿಮಿತ ಅವಕಾಶಗಳ ನಾಡಾಗಿತ್ತು. ಮೊದಲಿಗೆ ಭಾರತದ ಪಶ್ಚಿಮ ಕರಾವಳಿಯ ಬಂದರು ನಗರ ಚೌಲ್‌ನಲ್ಲಿ ಹೆಜ್ಜೆಯಿರಿಸಿದ ಆತ ಒಂದು ಹಿಡಿ ಜೇಡಿಮಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಭಾರತದಾದ್ಯಂತ ಶಿಯಾ ಮತವನ್ನು ಹಬ್ಬಿಸುವುದಾಗಿ ಪ್ರತಿಜ್ಞೆ ಮಾಡಿದ.
ಬಹಮನಿ ದೊರೆ ಶಿಹಾಬುದ್ದೀನ್ ಮಹಮದ್‌ನ ಸೇವೆಯಲ್ಲಿ ಸುಲ್ತಾನ್ ಕೂಲಿ ತನ್ನ ಜೀವನವನ್ನು ಆರಂಭಿಸಿದನು. ಬಹುಬೇಗ ಆತ ತನ್ನ ಹುದ್ದೆಗಳಲ್ಲಿ ಮೇಲಕ್ಕೇರಿದಾಗ ತೆಲಿಂಗ ನಾಡಿನ ರಾಜ್ಯಪಾಲ ಹುದ್ದೆಯನ್ನು ಆತನಿಗೆ ನೀಡಲಾಯಿತು. ೧೫೧೮ರಲ್ಲಿ ಬಹಮನಿ ಸುಲ್ತಾನನು ಮರಣ ಹೊಂದಿದಾಗ ಸುಲ್ತಾನ್ ಕೂಲಿ ತಾನೇ ಗೋಲ್ಕೊಂಡದ ಸ್ವತಂತ್ರ ದೊರೆ ಎಂದು ಘೋಷಿಸಿಕೊಂಡನು.
ಆದರೆ ಸೆಕ್ಯುಲರ್‌ವಾದಿ ಇತಿಹಾಸಕಾರರು ಗೋಲ್ಕೊಂಡ ಕೋಟೆಯನ್ನು ಸುಲ್ತಾನ್ ಕೂಲಿ ೧೬ನೇ ಶತಮಾನದಲ್ಲಿ ಕಟ್ಟಿಸಿದನೆಂದು ನಮಗೆ ಒಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಅವರು ಗೋಲ್ಕೊಂಡದ ಪಂಚಶತಮಾನೋತ್ಸವವನ್ನು ಆಚರಿಸಿದರು. ನಿಜವೆಂದರೆ ಗೋಲ್ಕೊಂಡ ಕೋಟೆಯನ್ನು ಸುಲ್ತಾನ್ ಕೂಲಿ ಕಟ್ಟಿಸಿದ್ದೇ ಅಲ್ಲ. ಸುಲ್ತಾನ್ ಕೂಲಿ ಹುಟ್ಟುವುದಕ್ಕೆ ಸಾಕಷ್ಟು ಮೊದಲೇ ಅದು ಇತ್ತು. ಅದನ್ನು ಕಾಕತೀಯರು ನಿರ್ಮಿಸಿದರು. ನಿಜವೆಂದರೆ, ಮುಸ್ಲಿಮರಿಗೆ ಹಸ್ತಾಂತರಿಸುವ ಮುನ್ನ ಅದು ಹಿಂದೂ ರಾಜರ ಅಧೀನದಲ್ಲಿತ್ತು ಎಂದು ಮಾಸಿರ್-ಐ-ಆಲಂಗಿರಿ ಮತ್ತು ಮುಂತಖಾಬ್ ಅಲ್ ಎಬಾಬ್‌ನಂತಹ ಮೊಘಲ್ ಪತ್ರಿಕೆಗಳು ದಾಖಲಿಸಿವೆ. –
ಗೋಲ್ಕೊಂಡ ಕೋಟೆ ಕನಿಷ್ಠ ಪಕ್ಷ 13ನೇ ಶತಮಾನದಷ್ಟು ಹಿಂದಿನದೆಂದು ಪ್ರಾಚ್ಯವಸ್ತು ಸಂಶೋಧನ ಸಂಸ್ಥೆಯು ಒದಗಿಸಿದ ನೇರ ಸಾಕ್ಷ್ಯದಿಂದ ತಿಳಿದುಬರುತ್ತದೆ. ಗೋಲ್ಕೊಂಡ ಕೋಟೆಯ ಒಳಗಿನ ಗೋಡೆಗಳು 13ನೇ ಶತಮಾನದಷ್ಟು ಪ್ರಾಚೀನವೆಂದು ಪ್ರಾಚ್ಯವಸ್ತು ಸಂಶೋಧಕ ಮಾಣಿಕ ಸರ್ದಾರ್ ನಿಸ್ಸಂದೇಹವಾಗಿ ಸಾಬೀತುಪಡಿಸಿದ್ದಾರೆ. ಬಲ ಹಿಸ್ಸಾರ್ (ಎತ್ತರದ ಕೋಟೆ)ಯ ಬೃಹತ್ ಬ್ಲಾಕ್‌ಗಳು ಆ ಕಾಲಕ್ಕೆ ಸೇರಿದಂಥವು.

ಸುಲ್ತಾನ್ ಕೂಲಿ ಗೋಲ್ಕೊಂಡವನ್ನು ತನ್ನ ವಶಕ್ಕೆ ತೆಗೆದುಕೊಂಡ ಬಳಿಕ ಸ್ಥಳದಲ್ಲಿ ಹಲವು ಬದಲಾವಣೆಗಳನ್ನು ಮಾಡಿದನು; ಕೋಟೆಗೆ ಇನ್ನಷ್ಟು ನಿರ್ಮಾಣಗಳನ್ನು ಸೇರಿಸಿದ. ಅದಲ್ಲದೆ ಆತ ಗೋಲ್ಕೊಂಡ ಕೋಟೆಯ ಮಧ್ಯದ ದೇವಾಲಯವನ್ನು ಜಾಮಿ ಮಸೀದಿಯಾಗಿ ಪರಿವರ್ತಿಸಿದನು. ಈಗ ಅದನ್ನು ’ಹೈದರಾಬಾದಿನ ಅತಿ ಪ್ರಾಚೀನ ಮಸೀದಿ’ ಎಂದು ಗುರುತಿಸುತ್ತಾರೆ.
ಗೋಲ್ಕೊಂಡ ಜಾಮಿ ಮಸೀದಿಯಲ್ಲಿ ಹಿಂದೂ ದೇವಾಲಯಗಳ ಗುರುತುಗಳನ್ನು ನಾವು ಈಗಲೂ ಕಾಣಬಹುದು. ಸ್ತಂಭಗಳು, ರತ್ನಗಳು, ವಲ್ಲಿಗಳು ಮತ್ತು ಶಾಖಾಗಳಂತಹ ಕಾಕತೀಯ ದೇವಾಲಯಗಳ ಅಲಂಕಾರಗಳನ್ನು ದ್ವಾರಗಳಲ್ಲಿ ಈಗಲೂ ಕಾಣಬಹುದು.
ಗೋಲ್ಕೊಂಡದ ಹಿಂದೂ ಸ್ವರೂಪವನ್ನು ನಿಧಾನವಾಗಿ ಅಳಿಸಿಹಾಕಲಾಯಿತು. ಮುಂದೆ ಬೆಟ್ಟದ ಮೇಲಿನ ಈ ದೇವಾಲಯವನ್ನು ತಾರಾಮತಿ ಮಸೀದಿಯಾಗಿ ಪರಿವರ್ತಿಸಲಾಯಿತು. ಮತ್ತಷ್ಟು ಕಾಲದ ನಂತರ ಅಕ್ಕಣ್ಣ ಮಾದಣ್ಣ ದೇವಾಲಯವನ್ನು ಔರಂಗಜೇಬನು ನಾಶಗೊಳಿಸಿದನು. ಆದರೆ ಗುಹಾದೇವಾಲಯಗಳು ಉಳಿದುಕೊಂಡವು. ಜಗದಂಬಾ ಗುಹಾ ದೇವಾಲಯವು ಗೋಲ್ಕೊಂಡ ಕೋಟೆಯೊಳಗೆ ಇಂದಿಗೂ ಇದೆ.
ಹಿಂದೂ ದೇವಾಲಯದ ಮೇಲೆ ಆತ ನಿರ್ಮಿಸಿದ ಮಸೀದಿಯಲ್ಲೇ ನಮಾಜ್ ಮಾಡುತ್ತಿದ್ದಾಗ ಸುಲ್ತಾನ್ ಕೂಲಿಯ ಕೊಲೆ ನಡೆಯಿತು. ವಿಧಿಲಿಖಿತವೋ ಎಂಬಂತೆ ಕೊಲೆಗೈದದ್ದು ಸ್ವತಃ ಆತನ ಪುತ್ರ ಜಂಷೆಡ್ ಕೂಲಿ; ತಂದೆಯನ್ನು ಕೊಂದು ಆತ ರಾಜನಾದನು.
ಜಂಷೆಡ್ ಕೂಲಿ ಅನಂತರ ತನ್ನ ಸಹೋದರ ಇಬ್ರಾಹಿಂ ಕೂಲಿಯ ಹುಡುಕಾಟದಲ್ಲಿ ತೊಡಗಿದನು. ಇಬ್ರಾಹಿಂ ಗೋಲ್ಕೊಂಡದಿಂದ ಪಾರಾಗಿ ಹಿಂದೂ ಸಾಮ್ರಾಜ್ಯ ವಿಜಯನಗರದಲ್ಲಿ ಆಶ್ರಯವನ್ನು ಬೇಡಿದನು. ವಿಜಯನಗರದ ರಾಜ ರಾಮರಾಯ ಅವನನ್ನು ಹಾರ್ದಿಕವಾಗಿ ಸ್ವಾಗತಿಸಿದನು. ಏಳು ವರ್ಷಗಳ ಕಾಲ ವಿಜಯನಗರದಲ್ಲಿ ಸಂತೋಷವಾಗಿ ಕಾಲಕಳೆದ ಇಬ್ರಾಹಿಂ ಕೂಲಿಗೆ ಜಹಗೀರನ್ನು ಕೂಡ ನೀಡಲಾಗಿತ್ತು.
ವಿಜಯನಗರದ ಚಕ್ರವರ್ತಿ ರಾಮರಾಯನ ಬಗ್ಗೆ ಇಲ್ಲಿ ಒಂದೆರಡು ಮಾತುಗಳನ್ನು ಹೇಳಬಹುದು. ರಾಮರಾಯ ತುಂಬ ’ಜಾತ್ಯಾತೀತ’ನಾಗಿದ್ದ. ಮುಸ್ಲಿಂ ಸೈನಿಕರನ್ನು ಪ್ರೋತ್ಸಾಹಿಸುತ್ತಿದ್ದ ಆತ, ಕುರಾನನ್ನು ಸಿಂಹಾಸನದ ಮೇಲಿಟ್ಟು ಅದನ್ನು ಗೌರವಿಸಬೇಕೆಂದು ಆಸ್ಥಾನಿಕರಿಗೆ ಆದೇಶಿಸಿದ್ದ. ಮಸೀದಿಗಳನ್ನು ಕಟ್ಟಲು ಅನುಮತಿ ನೀಡಿದ್ದನು; ಮತ್ತು ಪ್ರಾಣಿ (ಗೋವು) ವಧೆಗೆ ಅವಕಾಶ ನೀಡಿದ್ದನು. ಆದರೆ ಅದಕ್ಕೆ ಆತನ ಸಹೋದರನ ವಿರೋಧವಿತ್ತು.

ಇಬ್ರಾಹಿಂ ಕೂಲಿ ರಾಮರಾಯನ ಅರಸೊತ್ತಿಗೆಯಲ್ಲಿ ಆರಾಮವಾಗಿದ್ದನು. ಭಾಗೀರಥ ಎನ್ನುವ ವಿಜಯನಗರ ರಾಜ ಪರಿವಾರದ ಓರ್ವ ಮಹಿಳೆಯೊಂದಿಗೆ ಆತನ ವಿವಾಹವಾಗಿತ್ತು. ರಾಮರಾಯ ಆತನನ್ನು ಫರ್ಝಂದ್ (ಮಗ) ಎಂದು ಕರೆಯುತ್ತಿದ್ದನು. ಏಳು ವರ್ಷಗಳಾಗುವಾಗ ಜಂಷೆದ್ ಕೂಲಿ ಮರಣ ಹೊಂದಿದನು; ಇಬ್ರಾಹಿಂ ಕೂಲಿ ಗೋಲ್ಕೊಂಡಕ್ಕೆ ವಾಪಸಾಗಿ, ಉತ್ತರಾಧಿಕಾರಕ್ಕಾಗಿ ನಡೆದ ಯುದ್ಧದಲ್ಲಿ ಗೆದ್ದು ಸಿಂಹಾಸವನ್ನೇರಿದನು.
ಉತ್ತರಾಧಿಕಾರಕ್ಕಾಗಿ ನಡೆದ ಆ ಯುದ್ಧದಲ್ಲಿ ರಾಮರಾಯನ ಅಡಿಯಲ್ಲಿ ಇಬ್ರಾಹಿಂಗೆ ಹಿಂದುಗಳ ಬಹಳಷ್ಟು ಬೆಂಬಲ ದೊರೆಯಿತು ಎಂಬುದು ಗಮನಾರ್ಹ. ಆತ ಗೋಲ್ಕೊಂಡಕ್ಕೆ ಹೋಗುವಾಗ ಮಧ್ಯದ ಕೋಯಿಲ್ಕೊಂಡ ಕೋಟೆಯಲ್ಲಿ ಹಿಂದುಗಳು ತಮ್ಮ ವಿಧೇಯತೆ ಮತ್ತು ಬೆಂಬಲಗಳನ್ನು ಪ್ರಕಟಿಸಿದರೆಂದು ಕೋಯಿಲ್ಕೊಂಡದ ಶಾಸನ ಹೇಳುತ್ತದೆ.
ಹಿಂದುಗಳು ಕೋಯಿಲ್ಕೊಂಡ ಶಾಸನದಲ್ಲಿ ಇಬ್ರಾಹಿಂ ಕೂಲಿಯನ್ನು ಬೆಂಬಲಿಸುವುದಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ. ನಮ್ಮಲ್ಲಿ ಯಾರೇ ಆಗಲಿ ಈ ಪ್ರತಿಜ್ಞೆಯನ್ನು ಭಂಗ ಮಾಡಿದಲ್ಲಿ ಅವರಿಗೆ ವಾರಣಾಸಿಯಲ್ಲಿ ಗೋವು ಮತ್ತು ಬ್ರಾಹ್ಮಣರನ್ನು ಕೊಂದ ಪಾಪವು ಬರಲಿ ಎಂದು ಪ್ರತಿಜ್ಞೆ ಮಾಡಿದ್ದಾರೆ. ಮುಂದೆ ಆತನನ್ನು ’ಮಾಲ್ಕಿಂಬ’ ಎಂದು ಕರೆಯಲಾಗಿದೆ. (ಮಾಲಿಕ್) ನನ್ನು ಮಾಲ್ಕಿಂಬ ಎನ್ನುವ ಮೂಲಕ ಆತನನ್ನು ರಾಮನೊಂದಿಗೆ ಸಮೀಕರಿಸಲಾಯಿತು.
ಅಂತಹ ಬೆಂಬಲವಿದ್ದ ಕಾರಣ ಇಬ್ರಾಹಿಂ ಸಹಜವಾಗಿ ಜಯಶೀಲನಾಗಿ ಸಿಂಹಾಸನವನ್ನು ಗಳಿಸಿ ರಾಜನಾದ. ಆದರೆ ಅದೇ ಇಬ್ರಾಹಿಂ ಮುಂದೆ ದಕ್ಷಿಣದ ಇತರ ಮುಸ್ಲಿಂ ಸುಲ್ತಾನರೊಂದಿಗೆ ಕೈಜೋಡಿಸಿ, 1565ರಲ್ಲಿ ನಡೆದ ತಾಳೀಕೋಟೆ ಯುದ್ಧದಲ್ಲಿ ವಿಜಯನಗರದ ವಿರುದ್ಧ ಕಾದಾಡಿದನು. ಇದೂ ಒಂದು ಬಗೆಯ ಕೃತಜ್ಞತೆ!
ತಾಳೀಕೋಟೆ ಯುದ್ಧದಲ್ಲಿ ಗಿಲಾನಿ ಸಹೋದರರ ಕೆಳಗಿದ್ದ ಮುಸ್ಲಿಂ ಸೇನಾ ತುಕಡಿಯವರು ದೇಶದ್ರೋಹಿಗಳಾಗಿ ದಾಳಿಕೋರ ಸುಲ್ತಾನರೊಂದಿಗೆ ಕೈಜೋಡಿಸಿದರು. ಯುದ್ಧದಲ್ಲಿ ವಿಜಯನಗರವು ಸೋತು ರಣರಂಗದಲ್ಲಿ ರಾಮರಾಯನ ಶಿರಚ್ಛೇದನವನ್ನು ಮಾಡಲಾಯಿತು; ಪ್ರಬಲವಾಗಿದ್ದ ವಿಜಯನಗರ ಸಾಮ್ರಾಜ್ಯ ಅಲ್ಲಿಗೆ ಕುಸಿಯಿತು.
ಯುದ್ಧದ ನಂತರ ದಕ್ಖಣದ ಸುಲ್ತಾನರು ಆರು ತಿಂಗಳು ಕಾಲ ವಿಜಯನಗರವನ್ನು ಅರಾಜಕತೆಗೆ ಒಳಪಡಿಸಿ, ಕಣ್ಣಿಗೆ ಕಂಡದ್ದನ್ನೆಲ್ಲ ಲೂಟಿ ಮಾಡಿದರು ಮತ್ತು ಸುಟ್ಟುಹಾಕಿದರು. ರಾಮರಾಯನ ’ಮಗ’ (ಫರ್ಝಂದ್) ಇಬ್ರಾಹಿಂ ತನ್ನ ಭಾವ (ಸೋದರಿಯ ಪತಿ) ಮತ್ತು ಒಬ್ಬ ಮಂತ್ರಿಯನ್ನು ನಾಶಪಡಿಸುವುದಕ್ಕೆ ಮತ್ತು ಲೂಟಿಗಾಗಿ ನೇಮಿಸಿದನು. ವಿಜಯನಗರದಲ್ಲಿ ಕುತುಬ್ ಶಾಹಿಗಳು ಮಾಡಿದ ಲೂಟಿ ಎಷ್ಟಿತ್ತೆಂದರೆ, ಸುಮಾರು 30 ವರ್ಷಗಳ ಅನಂತರ ಹೈದರಾಬಾದನ್ನು ನಿರ್ಮಿಸುವುದಕ್ಕೆ ಆ ಲೂಟಿಯ ಒಂದು ಭಾಗ ಸಾಕಾಗಿತ್ತು; ತನ್ನ ತಂದೆ ಕೂಡಿಟ್ಟ ವಿಜಯನಗರದ ಲೂಟಿಯ ಒಂದು ಭಾಗದಿಂದ ಮಹಮ್ಮದ್ ಕೂಲಿ ಹೈದರಾಬಾದನ್ನು ಕಟ್ಟಿದನು.

ಇಬ್ರಾಹಿಂ ಕೂಲಿ ಮರಣ ಹೊಂದಿದಾಗ ಆತನ ಮಗ ಮಹಮದ್ ಕೂಲಿ ಉತ್ತರಾಧಿಕಾರಿಯಾಗಿ ಪಟ್ಟವೇರಿದನು; ಆತನೇ ಭಾಗ್ಮತಿಯ ಪತಿ. ಹೈದರಾಬಾದಿಗೆ ಆಕೆಯ ಹೆಸರನ್ನು ಇಡಲಾಯಿತು. ಹೈದರಾಬಾದನ್ನು ನಿರ್ಮಿಸಿ ಚಾರ್ಮಿನಾರ್ ಕಟ್ಟಿಸಿದವರು ಇದೇ ಮಹಮದ್ ಕೂಲಿ.
ಮಹಮದ್ ಕೂಲಿಯನ್ನು ಆತನ ಹಿಂದೂ ತಾಯಿ ಬೆಳೆಸಿದ್ದಳು. ಆತ ಸಣ್ಣ ಪ್ರಾಯದಲ್ಲೇ (ಸುಮಾರು ಕ್ರಿ.ಶ. 1589) ಭಾಗ್ಮತಿಯನ್ನು ಪ್ರೀತಿಸಿ ಮದುವೆಯಾದನು. ‘ಕುಲ್ಲಿಯಾರ್’ ಎನ್ನುವ ಉರ್ದು ಪದ್ಯಗಳಲ್ಲಿ ಆತ ತನ್ನ ಬಗೆಗೆ ಕೆಲವು ಆಘಾತಕಾರಿ ಸತ್ಯಗಳನ್ನು ಹೇಳಿದ್ದಾನೆ. ಬಾಲ್ಯದಲ್ಲಿ ತಾನೊಬ್ಬ ಹಿಂದುವಾಗಿದ್ದೆ ಎಂದು ಮಹಮ್ಮದ್ ಕೂಲಿ ಹೇಳುತ್ತಾನೆ. ಆತನ ಹಿಂದೂ ತಾಯಿಯ ಮತಶ್ರದ್ಧೆಗೆ ಅನುಗುಣವಾಗಿ ಆತನನ್ನು ಬೆಳೆಸಲಾಗಿತ್ತು. ಮುಂದೆ ತನ್ನ ಜೀವನದಲ್ಲಿ ಆತ ಹಿಂದೂ ಧರ್ಮವನ್ನು ತೊರೆದು, ತನ್ನ ತಂದೆಯ ಪೂರ್ವಿಕರ ಮುಸ್ಲಿಂ ಶಿಯಾ ಪಂಥಕ್ಕೆ ಮತಾಂತರಗೊಂಡನು. ತನ್ನ ಕುಲ್ಲಿಯತ್‌ನಲ್ಲಿ ಆತ ಇದನ್ನು ಹೇಳಿದ್ದಾನೆ.
ಕೂಲಿ ಹೇಳಿಕೊಂಡಂತೆ ಭಾಗ್ಮತಿಯನ್ನು ವಿವಾಹವಾಗುವಾಗ ಆತ ಹಿಂದುವಾಗಿದ್ದ. ಭಾಗ್ಮತಿ ಎಂದಾದರೂ ಮತಾಂತರಗೊಂಡಿದ್ದಳು ಎಂಬುದಕ್ಕೆ ಪುರಾವೆಯಿಲ್ಲ. ಆಕೆಯ ಗೋರಿ ಇಲ್ಲದಿರುವುದೇ ಅದಕ್ಕೊಂದು ಪುರಾವೆ. ಆತನ ವಿವಾಹವು ಹಿಂದೂ ಆಚರಣೆಗಳಿಗೆ ಅನುಗುಣವಾಗಿ ನಡೆದುದಕ್ಕೆ ಕೂಡ ಇದೇ ವಿವರಣೆಯಾಗಿದೆ.
ಭಾಗ್ಮತಿಗೆ (ಹೈದರಾಬಾದಿನ ಸಾಲಾರ್‌ಜಂಗ್ ಮ್ಯೂಸಿಯಂನಲ್ಲಿ ಆಕೆಯ ಒಂದು ಹಳೆಯ ಪೈಂಟಿಂಗ್ ಲಭ್ಯವಿದೆ.ದೆ) ತುಂಬ ಪ್ರಭಾವ ಇದ್ದಿರಬೇಕು. 1,000ಸೈನಿಕರಿದ್ದ ಒಂದು ಸೇನಾತುಕಡಿ ಅವಳೊಂದಿಗೆ ಸದಾ ಇರುತ್ತಿತ್ತು. ಕೂಲಿ ಆಕೆಯನ್ನು ‘ಹೈದರ್‌ಮಹಲ್’ (ಪ್ರೀತಿಯ ಧೈರ್ಯವಂತೆ) ಎಂದು ಕರೆಯುತ್ತಿದ್ದ. ಹೈದರಾಬಾದ್ ಮತ್ತು ಭಾಗ್ಯನಗರ ಎರಡೂ ಹೆಸರುಗಳು ಆಕೆಯ ಮೇಲೆಯೇ ಇವೆ.
ಹೈದರ್ ಮಹಲ್/ ಭಾಗ್ಮತಿ ಕಿರೀಟವನ್ನು ಧರಿಸುತ್ತಿದ್ದಳು; ಮತ್ತು ಕುತುಬ್ ಶಾಹಿ ಸಂಸ್ಥಾನದಲ್ಲಿ ಆಕೆಯ ಮಾತಿಗೆ ತಪ್ಪುವಂತಿರಲಿಲ್ಲ. ಮಹಮದ್ ಕೂಲಿಯ ಕುಲ್ಲಿಯತ್‌ನಲ್ಲಿರುವ ಈ ಪದ್ಯ ಆಕೆ ಕಿರೀಟ ಧರಿಸಿದ್ದನ್ನು ಸಮರ್ಥಿಸುತ್ತದೆ;

ಶೇರ್ವಾನಿ ಮತ್ತು ಫರೂಕಿಯಂತಹ ಕೆಲವು ಇತಿಹಾಸಕಾರರು ಭಾಗ್ಮತಿಗೆ ಐತಿಹಾಸಿಕತೆಯನ್ನು ನಿರಾಕರಿಸಿ (ಫ್ರೆಂಚ್ ಪ್ರವಾಸಿಗರ ವರದಿಗಳನ್ನು ಉಲ್ಲೇಖಿಸಿ) ಭಾಗ್‌ನಗರ್ ಭಾಗ್‌ನಿಂದ ಬಂತು ಎನ್ನುತ್ತಾರೆ. ಭಾಗ್ ಎಂದರೆ ಹೂದೋಟ. ಫ್ರೆಂಚ್ ಪ್ರವಾಸಿಗ ನಿಜವಾಗಿಯೂ ಹಾಗೆ ಹೇಳಿದ್ದಾನೆಯೇ?
ಪ್ರೊ|| ಫಾರೂಕಿ ಅವರು ಈ ಕುರಿತು ಹೇಳುತ್ತಾ, ಫ್ರೆಂಚ್ ಪ್ರವಾಸಿಗರ ಪ್ರಕಾರ ’ಭಾಗ್’ ಎಂದರೆ ಉದ್ಯಾನ. ಗೋಲ್ಕೊಂಡ ಕೋಟೆಯ ಸುತ್ತ ಇರುವ ಉದ್ಯಾನದಿಂದಾಗಿ ಉರ್ದು ಶಬ್ದ ’ಭಾಗ್’ ಅನ್ನು ಇಲ್ಲಿ ಹೈದರಾಬಾದನ್ನು ವರ್ಣಿಸುವಾಗ ಹಲವು ಸಲ ಬಳಸಲಾಗಿದೆ. ಆದ್ದರಿಂದಲೇ ಅದನ್ನು ’ಭಾಗ್‌ನಗರ್’ ಎಂದು ಕೂಡ ಕರೆಯುತ್ತಿದ್ದರು ಎನ್ನುತ್ತಾರೆ. ಭಾಗ್ ಶಬ್ದವನ್ನು ಹಿಡಿದುಕೊಂಡು ಕುತುಬ್ ಶಾ ವಂಶದ ಬಗ್ಗೆ ಹತ್ತಾರು ಕಥೆಗಳನ್ನು ಕಟ್ಟಲಾಗಿದೆ. ಆದರೆ ಭಾಗ್ಯನಗರ ಎಂಬುದರ ಬಗ್ಗೆ ಯಾವುದೇ ವಾಸ್ತವಿಕ (ಭೌತಿಕ) ಸಾಕ್ಷ್ಯ ಸಿಗುವುದಿಲ್ಲ.
ನಿಜವೆಂದರೆ, ಮಹಮದ್ ಕೂಲಿ ಪತ್ನಿಯ ಕೋರಿಕೆಯ ಮೇರೆಗೆ ಭಾಗ್‌ನಗರ್ ಎನ್ನುವ ಹೆಸರನ್ನು ಇಟ್ಟನೆಂದು ಫ್ರೆಂಚ್ ಪ್ರವಾಸಿಗ ಹೇಳುತ್ತಾನೆ. ಶೇರ್ವಾನಿ ಇದನ್ನು ಪೂರ್ತಿಯಾಗಿ ಅಲಕ್ಷಿಸಿ, ಯಾವುದೇ ಹಿನ್ನೆಲೆ- ವಿವರಣೆಗಳಿಲ್ಲದೆ ಭಾಗ್ ಶಬ್ದಕ್ಕೆ ಉದ್ಯಾನವನ್ನು ತರುತ್ತಾನೆ.

ಭಾಗ್ಯನಗರ ಎನ್ನುವ ಹೆಸರು ಗಾರ್ಡನ್‌ನಿಂದಾಗಿ ಬಂತು ಎಂದು ಹೇಳುವುದು ಅತ್ಯಂತ ಮೂರ್ಖತನವೇ ಸರಿ. ಅವರು ನಿಜವಾಗಿ ಯಾವ ಗಾರ್ಡನ್ ಬಗ್ಗೆ ಮಾತನಾಡುತ್ತಿದ್ದಾರೆ? ಹೈದರಾಬಾದ್‌ನಲ್ಲಿ ಹಿಂದೆ ನೀರಿನ ತೀವ್ರ ಅಭಾವವಿತ್ತು. ಆ ದಿನಗಳಲ್ಲಿ ಹೂದೋಟವನ್ನು ಬೆಳೆಸಿ ಉಳಿಸಿಕೊಳ್ಳುವುದು ಬಹುತೇಕ ಅಸಾಧ್ಯವಾಗಿತ್ತು; ಮತ್ತು ಇಬ್ರಾಹಿಂ ಕೂಲಿಯ ಆ ಬಗೆಗಿನ ಪ್ರಯತ್ನ ವಿಫಲವಾಗಿತ್ತು.
ಮೊದಲಿಗೆ ಕೇವಲ ಗೋಲ್ಕೊಂಡ ಕೋಟೆಯ ಒಳಗಡೆ ಸಣ್ಣ ಉದ್ಯಾನವಿತ್ತು. ಅದನ್ನು ಭಾಗ್‌ನಗರ್ ಎಂದು ಕರೆಯುವಾಗ ಚಿಚ್ಲಮ್ ಪ್ರದೇಶದಲ್ಲಿ ಹೂದೋಟ ಇರಲೇ ಇಲ್ಲ. ಕೇವಲ 17ನೇ ಶತಮಾನದಲ್ಲಿ ಅಲ್ಲೊಂದು ಹೂದೋಟವನ್ನು ಬೆಳೆಸಲಾಯಿತು. ಮುಂದೆ ಸಾಕಷ್ಟು ಸಮಯದ ನಂತರ, ಬಶೀರ್‌ಬಾಗ್ ಬಳಿ ಮತ್ತು ಹುಸೇನ್‌ಸಾಗರ್‌ನಲ್ಲಿ ಗಾರ್ಡನ್‌ಗಳನ್ನು ಮಾಡಲಾಯಿತು.
ಭಾಗ್ಯಮತಿ ಎನ್ನುವ ಹೆಸರಿನಿಂದ ಭಾಗ್ಯನಗರ ಎಂಬುದು ಬಂತು; ಇದಕ್ಕೂ ಹೂದೋಟಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಾಣ್ಯಗಳ ದಾಖಲೆಯೂ ಸಮರ್ಥಿಸುತ್ತದೆ. ಹಳೆಯ ಕಾಲದ ನಾಣ್ಯಗಳಲ್ಲಿ ಹೈದರಾಬಾದನ್ನು ’ಫರ್ಖುಂದಾಬುನ್ಯಾದ್’ ಎಂದು ಕರೆಯಲಾಗಿದೆ. ಪರ್ಷಿಯನ್ ಭಾಷೆಯಲ್ಲಿ ಫರ್ಖುಂದಾ ಎಂದರೆ ಅದೃಷ್ಟ (ಸಂಸ್ಕೃತದ ಭಾಗ್ಯ); ಬದಲಾಗಿ ಪರ್ಷಿಯನ್ ಭಾಷೆಯ ಬಾಗ್ (ಉದ್ಯಾನ) ಅಲ್ಲ.
ಭಾಗ್ಮತಿ ಎನ್ನುವಾಕೆ ಇದ್ದಳೆನ್ನುವುದಕ್ಕೆ ಸಮಕಾಲೀನ ಮೊಘಲ್ ಸಾಕ್ಷ್ಯ ಸಿಗುತ್ತದೆ. ಆಕೆ ಜೀವಿಸಿದ್ದಾಗ 1591ರಲ್ಲಿ ಅಬುಲ್ ಫಝಲ್‌ನ ಸಹೋದರ ಹೈದರಾಬಾದಿಗೆ ಬಂದಿದ್ದ. ಆತ ನೀಡಿದ ವಿವರವು ಭಾಗ್ಮತಿ ಇದ್ದಳೆನ್ನುವುದನ್ನು ಸಾಬೀತುಪಡಿಸುತ್ತದೆ. ಇದು ಆಕೆಯ ಐತಿಹಾಸಿಕತೆಯನ್ನು ಅಲ್ಲಗಳೆಯುವವರಿಗೆ ಬಿಗಿದ ಏಟಿನಂತಿದೆ. ಆಕೆಯ ಬಗೆಗೆ ಆತ ಬಳಸಿದ ಭಾಷೆಯನ್ನು ಗಮನಿಸಿ:

ನಿಜಾಮುದ್ದೀನ್ ಎನ್ನುವ ಇನ್ನೊಂದು ಸಮಕಾಲೀನ ಮುಸ್ಲಿಂ ದಾಖಲೆ ಕೂಡ 1594ರಲ್ಲಿ ಭಾಗ್ಮತಿ ಬದುಕಿದ್ದಾಗಿನ ವಿವರವನ್ನು ನೀಡುತ್ತದೆ. ಹೈದರಾಬಾದ್/ಭಾಗ್‌ನಗರ್ ಆಕೆಯ ಹೆಸರನ್ನೇ ಹೊಂದಿದೆ ಎಂದಾತ ದೃಢಪಡಿಸುತ್ತಾನೆ. ಆಕೆಯ ಬಗೆಗೆ ಬಳಸಿದ ಭಾಷೆಯನ್ನು ಇನ್ನೊಮ್ಮೆ ಗಮನಿಸಿ. ಆಕೆಯ ವಿರುದ್ಧ ಅಂತಹ ಪದಗಳನ್ನು ಏಕೆ ಬಳಸಿದರೆನ್ನುವುದಕ್ಕೆ ಸರಿಯಾದ ಕಾರಣವಿದೆ.
ಕ್ರಿ.ಶ. ೧೫೯೪ರಲ್ಲಿ ತನ್ನ ತಬ್ಕತ್-ಇ-ಅಕ್ಬರ್‌ಶಾಹಿಯನ್ನು ಬರೆದ ನಿಜಾಮುದ್ದೀನ್ ಈ ರೀತಿಯಲ್ಲಿ ಅದನ್ನು ದೃಢಪಡಿಸುತ್ತಾನೆ : ಇಬ್ರಾಹಿಂನ ಮಗ ಮಹಮದ್ ಅಲ್ ಕುತುಬುಲ್ ಮುಲ್ಕ್ ತನ್ನ ತಂದೆಯ ನಂತರ ಅಧಿಕಾರಕ್ಕೆ ಬಂದನು. ಭಾಗ್ಮತಿ ಎನ್ನುವ ಓರ್ವ ಹಿಂದೂ ವೇಶ್ಯೆ (ಪಾತರದವಳು)ಯ ಮೇಲೆ ಆತ ಎಷ್ಟೊಂದು ಮೋಹಗೊಂಡನೆಂದರೆ ಅವಳ ಹೆಸರಿನಲ್ಲಿ ಒಂದು ನಗರವನ್ನು ನಿರ್ಮಿಸಿ ಅದನ್ನು ‘ಭಾಗ್‌ನಗರ್;’ ಎಂದು ಕರೆದನು; ಮತ್ತು ಆ ವೇಶ್ಯೆಯೊಂದಿಗೆ (ಫಹಿಷ) ಯಾವಾಗಲೂ ೧೦೦೦ ಕುದುರೆ ಸವಾರ ಭಟರು ಕಾವಲಿರಬೇಕೆಂದು ಆಜ್ಞೆ ಹೊರಡಿಸಿದನು.
ಇನ್ನೊಬ್ಬ ಸಮಕಾಲೀನ ಮಸ್ಲಿಂ ಇತಿಹಾಸಕಾರ ಫರಿಶ್ತಾ ಕೂಡ ಭಾಗ್ಯನಗರ್/ ಹೈದರಾಬಾದ್ ಎಂಬ ಹೆಸರು ಭಾಗ್ಮತಿಯಿಂದ ಬಂದುದೆಂದು ಹೇಳಿದ್ದಾನೆ. ಅವರಿಗೆ ಉಂಟಾದ ಇರಿಸುಮುರಿಸು ಮತ್ತು ನಿಂದನಾತ್ಮಕ ಭಾಷೆ ಬಳಕೆಗೆ ಕಾರಣವೇನು- ಹೈದರಾಬಾದ್ ಎನ್ನುವ ಹೆಸರು ಓರ್ವ ಹಿಂದೂ ರಾಣಿಯಿಂದ ಬಂದದ್ದು ಮತ್ತು ಆಕೆ ಎಂದೂ ಮತಾಂತರಗೊಳ್ಳಲಿಲ್ಲ ಎಂಬುದು ಆ ಮುಸ್ಲಿಂ ಇತಿಹಾಸಕಾರರಿಗೆ ಇಷ್ಟದ ವಿಷಯವಾಗಿರಲಿಲ್ಲ.
‘ಭಾಗ್ಯನಗರ’ ಎನ್ನುವ ಹೆಸರು ಬಳಕೆಯಿಂದ ಆಚೆಗೆ ಹೋಗಲೇಇಲ್ಲ; ಮತ್ತು 19ನೇ ಶತಮಾನದಲ್ಲಿ ಕೂಡ ಅದನ್ನು ಬಳಸುತ್ತಿದ್ದರು. 1816ರ ಒಂದು ನಕಾಶೆಯಲ್ಲಿ ಭಾಗ್‌ನಗರ್ ಎನ್ನುವ ಹೆಸರಿದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಭೂಪಟಕಾರ ಆರನ್ ಆರೋಸ್ಮಿತ್ ಅದನ್ನು ತಯಾರಿಸಿದ್ದಾನೆ.

ಹೈದರಾಬಾದಿನ ಹೆಸರು ಭಾಗ್ಮತಿಯಿಂದ ಬಂತು ಎಂಬುದನ್ನು ಈ ಸಾಕ್ಷ್ಯಗಳು ಸ್ಪಷ್ಟವಾಗಿ ಸಾರುತ್ತವೆ. ಆದರೆ ಭಾಗ್ಯಲಕ್ಷ್ಮಿ ದೇವಾಲಯದ ಮೇಲೆ ದಾಳಿ ನಡೆಯುತ್ತಿದೆ. ’ಸೆಕ್ಯುಲರ್’ ಭಾರತ ಪ್ರಾಚ್ಯ ಮತ್ತು ಸಂಶೋಧನ ಸಂಸ್ಥೆ (ಎಎಸ್‌ಐ) ಭಾಗಲಕ್ಷ್ಮಿ ದೇವಾಲಯವನ್ನು ’ಅನಧಿಕೃತ ನಿರ್ಮಾಣ’ ಎಂದು ಹೇಳಿ ಅದನ್ನು ಕೆಡವಲು ಸೂಚಿಸಿತು. ಆದರೆ ಇತ್ತ ಎಎಸ್‌ಐ ಈ ದೇವಾಲಯವನ್ನು ’ಅನಧಿಕೃತ ನಿರ್ಮಾಣ’ ಎಂದು ಹೇಳಿದರೆ ಅತ್ತ ಸರ್ಕಾರದ ಮುಜರಾಯಿ ಇಲಾಖೆ ಚಾರ್ಮಿನಾರ್‌ನಲ್ಲಿರುವ ಭಾಗ್ಯಲಕ್ಷ್ಮಿ ದೇವಾಲಯವನ್ನು ’ನೋಂದಾಯಿತ ದೇವಾಲಯಗಳ ಪಟ್ಟಿಗೆ ಸೇರಿಸಿದೆ. ದೇವಾಲಯದ ಆದಾಯವನ್ನು ರಾಜ್ಯ ಸರ್ಕಾರ ’ಜಾತ್ಯತೀತ’ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ!
೨೦೧೨ರಲ್ಲಿ ದೇವಾಲಯದ ಸಂಘಟಕರು ದೀಪಾವಳಿಯ ಸಂದರ್ಭದಲ್ಲಿ ತಾತ್ಕಾಲಿಕ ರಚನೆ (ಚಪ್ಪರ..) ಮಾಡಲು ಹೊರಟಾಗ ಪೊಲೀಸರು ಬಲಾತ್ಕಾರವಾಗಿ ಅವರನ್ನು ತಡೆದರು. ಅಂದರೆ ೧) ಅವರಿಗೆ ದೇವಾಲಯದ ಹಣ ಬೇಕು. ೨) ಅದೇ ಉಸಿರಿನಲ್ಲಿ ಅವರು ದೇವಾಲಯವನ್ನು ’ಅನಧಿಕೃತ’ ಎಂದು ಹೇಳಿ ಯಾವುದೋ ತಾತ್ಕಾಲಿಕ ನಿರ್ಮಾಣಕ್ಕೂ ಅವಕಾಶ ನೀಡುವುದಿಲ್ಲ.
ಇಂಗ್ಲಿಷ್ ಮೂಲ: ಭಾರಧ್ವಾಜ್
ಕನ್ನಡ ಅನುವಾದ : ಮಂಜುನಾಥ್ ಭಟ್ಟ್ ಎಚ್.