ಮಂಗಳಮಯವಾಗಲಿ ಚಂದ್ರಯಾನ

ಚಂದ್ರಯಾನ -೧ ಎಂಬ ಉಪಗ್ರಹ ಚಂದ್ರನನ್ನು ಸುತ್ತಿ ಚಂದ್ರನ ಬಗೆಗಿನ ಮಾಹಿತಿಯನ್ನು ನಮಗೆ ಕಳುಹಿಸಲು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ನೆಗೆದಿದೆ. ಜೊತೆಗೆ ಭಾರತದ ಮತ್ತು ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಬಗೆಗಿನ ಗೌರವವನ್ನು ಅಷ್ಟೇ ಎತ್ತರಕ್ಕೆ ಕೊಂಡೊಯ್ದಿದೆ. ವಿಶ್ವದ ಬಾಹ್ಯಾಕಾಶ ಚರಿತ್ರೆಯಲ್ಲೇ ಇದೊಂದು ಮೈಲಿಗಲ್ಲಾಗಲಿದೆ.

ಒಂದೆಡೆ ಸಾಧನೆಯ ಸಂಭ್ರಮ ಕಂಡರೆ ಇನ್ನು ಕೆಲವರಿಗೆ ಆರೋಪ ಮಾಡುವ ಖಯಾಲಿ. ಸುಖಾಸುಮ್ಮನೆ ಸಾರ್ವಜನಿಕ ಹಣದ ೩೮೦ ಕೋಟಿ ರೂ.ಗಳನ್ನು ಈ ಯೋಜನೆಗಾಗಿ ಖರ್ಚು ಮಾಡಿ ಚಂದ್ರನನ್ನು ಸುತ್ತಲು ಉಪಗ್ರಹ ಉಡಾಯಿಸಲಾಯಿತು. ಉಪಗ್ರಹಕ್ಕೆ ವಿಮೆ ಮಾಡಿಸಿರಲಿಲ್ಲ, ಅಲ್ಲಿ ಹೀಲಿಯಂ ಇಂಧನ ಸಿಗುವುದಾದರೂ ಅದನ್ನು ಭೂಮಿಗೆ ತರುವುದು ಸಾಧ್ಯವಿಲ್ಲ ಎಂಬಂತಹ ಅಪಸ್ವರಗಳೂ ಕೆಲವೆಡೆ ಕೇಳಿಬಂತು. ಚಂದ್ರಯಾನ ಕೇವಲ ಷೋಕಿಗಾಗಿ ಅಂದುಕೊಂಡವರೂ ಇದ್ದಾರೆ.

ಆದರೆ ಚಂದ್ರಯಾನದ ಮೂಲಕ ಪಡೆಯುವ ಮಾಹಿತಿ ಅಗಾಧವಾದುದು ಎಂಬುದನ್ನು ಅಂತಹವರು ಅರ್ಥ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಚಂದ್ರನ ಕುರಿತಾದ ಸಂಶೋಧನೆಯ ದಿಕ್ಕನ್ನೇ ಈ ಯಾನ ಬದಲಿಸಲಿದೆ. ಅಲ್ಲಿಂದ ಇಂಧನ ತರುವುದು ಈಗ ಸಾಧ್ಯವಾಗದಿರಬಹುದು. ಈಗ ದೂರದರ್ಶನ, ಮೊಬೈಲುಗಳಲ್ಲಾದ ಕ್ರಾಂತಿಗಳಿಗೆ ಅಂದು ಕಳುಹಿಸಿದ ಉಪಗ್ರಹಗಳು ಕಾರಣವಾಗಲಿವೆ ಎಂದು ಆ ಕಾಲದಲ್ಲಿ ಉಪಗ್ರಹಗಳ ಅಗತ್ಯವಿಲ್ಲವೆಂದು ಜರಿಯುತ್ತಿದ್ದವರಿಗೆ ತಿಳಿದಿರಲಿಲ್ಲ. ಹಾಗೆ ನೋಡಿದರೆ ನಮ್ಮ ದೇಶ ವಿವಿಧ ಕ್ಷೇತ್ರಗಳಲ್ಲಿ ಮಾಡುವ ವೆಚ್ಚಕ್ಕೆ ಹೋಲಿಸಿದರೆ ೩೮೦ ಕೋಟಿ ಏನೇನೂ ಅಲ್ಲ. ಅಷ್ಟು ಕಡಿಮೆ ಖರ್ಚಿನಲ್ಲಿ ಚಂದ್ರನನ್ನು ತಲಪಿದ ಮೊದಲ ದೇಶವೇ ಭಾರತ. ಅದಕ್ಕಿಂತಲೂ ಹೆಚ್ಚು ಹಣವನ್ನು ಭ್ರಷ್ಟಾಚಾರದ ಮೂಲಕವೇ ನುಂಗಿ ಹಾಕುವ ರಾಜಕಾರಿಣಿಗಳೂ ನಮ್ಮಲ್ಲಿದ್ದಾರೆ.

ಈ ಉಡಾವಣೆಗೆ ವಿಮೆ ಏಕೆ ಮಾಡಲಿಲ್ಲವೆಂಬುದನ್ನು ಇಸ್ರೋದ ವಕ್ತಾರರೇ ಹೇಳಿದ್ದಾರೆ. ವಿಮೆ ಮಾಡಿಸಿದ್ದರೆ ಭಾರತ ಸರ್ಕಾರದ ಅಂಗ ಸಂಸ್ಥೆಗಳೇ ಅದರ ಹೊಣೆಯನ್ನು ವಹಿಸಿಕೊಳ್ಳಬೇಕಿತ್ತು ಮತ್ತು ಈ ಯೋಜನೆ ವಿಫಲವಾದಲ್ಲಿ, ವಿಮೆಯ ಹಣವನ್ನು ಭಾರತ ಸರ್ಕಾರವೇ ಕೊಡಬೇಕಾಗುತ್ತಿತ್ತು, ಹೀಗಾಗಿ ವಿಮೆ ಮಾಡಿಸುವುದರಿಂದ ಏನೂ ಪ್ರಯೋಜನವಿರುತ್ತಿರಲಿಲ್ಲ ಎಂದು.

ಭೂಮಿಯಿಂದ ಸುಮಾರು ೩೮೪,೪೦೩ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಅದರ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನ ಬಗ್ಗೆ ಮನುಷ್ಯನಿಗೆ ಬಹಳ ಕಾಲದಿಂದಲೂ ಇರುವ ಕುತೂಹಲ, ಆಕರ್ಷಣೆ ಸಹಜವಾದದ್ದೆ. ಇದನ್ನು

ನಾವು ಸಾಹಿತ್ಯದಲ್ಲೂ ವೈಜ್ಞಾನಿಕ ಚಿಂತನೆಗಳಲ್ಲೂ ವಿಪುಲವಾಗಿ ಕಾಣುತ್ತೇವೆ. ಆಧುನಿಕ ಖಗೋಳ ವಿಜ್ಞಾನದಲ್ಲಿ ವಿವಿಧ ದೇಶಗಳು ನಡೆಸಿದ ಸಂಶೋಧನೆಗಳ ಫಲವಾಗಿ ಇಂದು ಅನೇಕ ಗ್ರಹಗಳ ತನಕ ನಮ್ಮ ಅರಿವು ವಿಸ್ತರಿಸಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಯಾವುದೇ ದೇಶ ಮುಂದುವರಿದಿರುವುದರ ದ್ಯೋತಕ ಇಂತಹ ಸಾಧನೆಗಳೇ. ಬಾಹ್ಯಾಕಾಶದ ಸಾಧಗಳು ಪರಿಣಾಮ ಬೀರುವ ಕ್ಷೇತ್ರಗಳ ವ್ಯಾಪ್ತಿ ಬಹಳ ದೊಡ್ಡದಿದೆ. ಸ್ರೋದ ಟಲಿ ಮೆಡಿಸಿನ್‌ ವ್ಯವಸ್ಥೆಯು ದೂರದೂರದ ಕುಗ್ರಾಮಗಳನ್ನು ಉತ್ತಮ ಆಸ್ಪತ್ರೆಗಳಿಗೆ ನೇರ ಸಂಪರ್ಕಿಸುವಲ್ಲಿ ಸಹಕರಿಸುತ್ತಿದೆ. ಬೆಂಗಳೂರಿನ ನಾರಾಯಣ ಹೃದಯಾಲಯ ಹಾಗೂ ಮಣಿಪಾಲ ಆಸ್ಪತ್ರೆ,ಮತ್ತು ಕೊಚ್ಚಿಯ ಅಮೃತ ವೈದ್ಯಕೀಯ ಸಂಸ್ಥೆ ಈ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿವೆ. ಗುಜರಾತದ ಭುಜ್ ಭೂಕಂಪದ, ಇತ್ತೀಚಿನ ಕುಂಭಮೇಳದ ಸಂದರ್ಭಗಳಲ್ಲಿ ಇದರ ಪ್ರಯೋಜನ ಪಡೆಯಲಾಗಿದೆ. ಇದಕ್ಕಾಗಿ ಇಸ್ರೋ ತನ್ನ ವಾರ್ಷಿಕ ಬಜೆಟ್ಟಿನ ಹೊರತಾಗಿ ಹಣ ಹೂಡಿದೆ. ಇದು ಸಾಧ್ಯವಾದದ್ದು ಹೇಗೆ? ಇಂದು ನಮ್ಮದೇ ಕೃತಕ ಉಪಗ್ರಹಗಳು ಭೂಮಿಯ ಸುತ್ತ ತಿರುಗುತ್ತಿರುವುದರಿಂದಲೇ ಅಲ್ಲವೆ?

ಮುಂಚಿನ ದಿನಗಳಲ್ಲಿ ಯಾವುದಾದರೂ ದೇಶ ತನ್ನದೊಂದು ಉಪಗ್ರಹವನ್ನು ಅಂತರಿಕ್ಷಕ್ಕೆ ಹಾರಿಬಿಡಲು ಯೋಚಿಸಿದರೆ, ಅದಕ್ಕಿದ್ದ ಆಯ್ಕೆ ಕೇವಲ ಅಮೆರಿಕ, ಐರೋಪ್ಯ ಅಂತರಿಕ್ಷ ಸಂಸ್ಥೆ, ರಷ್ಯಾ, ಅಥವಾ ಜಪಾನ್. ಈ ದೇಶಗಳ

ಸಾಲಿಗೆ ಭಾರತವೂ ಸೇರಿ, ಅತ್ಯಂತ ಕಡಿಮೆ ವೆಚ್ಚದಲ್ಲಿ ಸಮರ್ಥವಾಗಿ ಈ ಕೆಲಸವನ್ನು ಮಾಡಿಕೊಡುವುದು ಸಾಧ್ಯವಾಗಿದ್ದರೆ ಅದು ಇಲ್ಲಿಯವೆರಗಿನ ಇಸ್ರೋದ ಪರಿಶ್ರಮದ ಫಲ.

ಚಂದ್ರಯಾನದಲ್ಲಿ ಈ ಉಪಗ್ರಹ ಭೂಮಿಯನ್ನು ಕ್ರಮೇಣ ಉದ್ದವಾಗುವ ಎರಡು ಕಕ್ಷೆಗಳಲ್ಲಿ ಪ್ರದಕ್ಷಿಣೆ ಮಾಡಿ ನಂತರ ಚಂದ್ರನಿಗೆ ಹತ್ತಿರವಾಗುತ್ತದೆ. ಈ ಯಾನದಲ್ಲಿ ಉಪಗ್ರಹವನ್ನು ನಿಖರವಾದ ಪಥದಲ್ಲಿ ಹೋಗುವಂತೆ ನಿರ್ದೇಶಿಸುವುದು ಕಠಿಣ. ಇಂತಹ ಹತೋಟಿಯನ್ನು ರಿಮೋಟ್ ಆಗಿದ್ದು ಮಾಡುವುದೂ ಒಂದು ಸಾಧನೆಯೇ. ಅದಕ್ಕಾಗಿಯೇ ಇಸ್ರೋ ಅಧ್ಯಕ್ಷ ಮಾಧವನ್ ನಾಯರ್ ಹೇಳುತ್ತಾರೆ ನಮಗರಿವಿಲ್ಲದ ಸಮುದ್ರಕ್ಕೆ ನಾವು ಜಿಗಿದಿದ್ದೇವೆ. ಅಲ್ಲಿನ ಒಂದೊಂದು ಸಂಗತಿಯೂ ಹೊಸದು. ಆ ಮೂಲಕ ನಾವು ಹೊಸ ಪಾಠವನ್ನು ಕಲಿಯುವರಿದ್ದೇವೆ.ಈ ಮಟ್ಟಿನ ಸಾಧನೆಗೈದಿರುವುದಕ್ಕೆ ಸಮಾಧಾನವಿರಲಿ.

Arun

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

BMS Leader Allampalli Venkatram'ji no more

Sun Jan 18 , 2009
Bharateeya Mazdoor Sangh, Karnataka Pradesh regrets to announce sad demise of Sri Allampalli Venkatram, Its leader, who breathed his last on 18.01.2009 at 6.00am. ALLAMPALLI R.VENKATRAM, S/o Late Allampalli Ramswamaiah, aged about 78 years (18.06.1931) completed his B.Com in the year 1955 and spent his whole life to the cause […]