ಅಯೋಧ್ಯೆ – ವಿಶ್ವ ದೃಷ್ಟಿಯ ಕೇಂದ್ರ

ಮೇಲ್ಕಂಡ ಮಾತು ಅಕ್ಷರಶಃ ಸತ್ಯ. ಏಕೆ? ಅಯೋಧ್ಯೆಯಲ್ಲಿ 1992ರ ಡಿಸೆಂಬರ್ 6 ರಂದು 464 ವರ್ಷಗಳಷ್ಟು ಹಳೆಯದಾದ, ಶ್ರೀರಾಮಜನ್ಮ ಸ್ಥಾನದಲ್ಲಿ ರಾಷ್ಟ್ರೀಯ ಕಳಂಕ ಎನಿಸಿದ್ದ, ವಿದೇಶಿ ಆಕ್ರಮಕ ಬಾಬರ್‌ನ ವಿಜಯದ ಸಂಕೇತವಾಗಿದ್ದ, ಮೂರು ಬಾಬರಿ ಗುಂಬಸ್‌ಗಳು ನೆಲಸಮವಾಗಿ ಉರುಳಿ ಬಿದ್ದವು. ಅದೊಂದು ವಿವಾದಿತ ಸ್ಥಳವೆಂದು ಹೆಸರು ಹೊತ್ತಿದ್ದುದು ಡಿಸೆಂಬರ್ ೬ರಂದು ಅಳಿಸಿ ಹೋಯಿತು. ಅದೇ ಸ್ಥಳದಲ್ಲಿ 23-12-1949ರಿಂದಲೂ ನಿರಂತರವಾಗಿ ಪೂಜೆ ಸ್ವೀಕರಿಸುತ್ತಿದ್ದ ಶ್ರೀರಾಮಲಲಾನ ವಿಗ್ರಹಗಳು 9-12-1992ರಂದೇ ಹೊಸದಾಗಿ ನಿರ್ಮಿತಗೊಂಡ ತಾತ್ಕಾಲಿಕ ದೇಶಮಂದಿರದ್ಲಿ ಈಗ ಪುನಃ ವಿರಾಜಮಾನವಾಗಿ, ಪೂಜೆ ಸ್ವೀಕರಿಸುತ್ತಿವೆ.
ಅನಿರೀಕ್ಷಿತವಾದ ಆದರೆ ಸರ್ವದೂರಕ್ಕೂ ಬಿಸಿ ಮುಟ್ಟಿಸಿರುವ ಈ ಘಟನೆಯ ನೈಜ ಸಂಕೇತವನ್ನು ಅರಿಯಲು ನಮ್ಮ ದೃಷ್ಟಿಯನ್ನು ಸ್ವಲ್ಪ ಹಿಂದಕ್ಕೆ ಹಾಯಿಸೋಣ.

ಹಿನ್ನೋಟ

ಮೊದಲನೆಯದಾಗಿ 9.10.1989 ರಂದು ನಡೆದ ಮಂದಿರದ ಶಿಲಾನ್ಯಾಸ ಸಮಾರಂಭ. ಅಂದಿನ ಕೇಂದ್ರ ಹಾಗೂ ಉತ್ತರ ಪ್ರದೇಶಗಳ ಕಾಂಗ್ರೆಸ್ ಸರಕಾರಗಳು ಹಾಗೂ ಕೆಲವು ವಿರೋಧ ಪಕ್ಷಗಳು ಅತಿ ಅನಪೇಕ್ಷಣೀಯ ನಿಲುವನ್ನು ಸ್ವೀಕರಿಸಿ ಸಮಾರಂಭಕ್ಕೆ ಅಸಂಖ್ಯ ವಿಘ್ನಗಳನ್ನು ತಂದೊಡ್ಡಿದರೂ, ಆ ಮಂಗಳ ಮೂಹೂರ್ತಕ್ಕೆ ಕೆಲವೇ ಗಂಟೆಗಳ ಹಿಂದೆ ಅವೆಲ್ಲವೂ ಮಂಜಿನಂತೆ ಕರಗಿ ಹೋದದ್ದು; ಉತ್ಸವ ಅದ್ದೂರಿಯಿಂದ ನಡೆದದ್ದು. ಮುಂದೆ 30.10.1990 ರಂದು ನಡೆದ ಇನ್ನೊಂದು ಪ್ರಸಂಗವೂಜಗತ್ತಿನ ಅತಿ ಹೆಚ್ಚಿನ ಗಮನ ಸೆಳೆಯಿತಷ್ಟೇ ? ಭಾಜಪದ ನೆರವಿನಿಂದಲೇ ಕೇಂದ್ರ ಹಾಗೂ ರಾಜ್ಯದಲ್ಲಿ ಆಗ ಅಧಿಕಾರ ನಡೆಸುತ್ತಿದ್ದ ಜನತಾದಳ ಸರಕಾರಗಳ ಹಿಂದು ವಿರೋಧಿ, ಆಡಳಿತಶಾಹಿ ನೀತಿಗಳ ವಿರುದ್ಧವೂ ರಾಮಭಕ್ತರು ಸೆಟೆದು ನಿಂತಿದ್ದು, ಅಸೀಮ ತ್ಯಾಗ – ಬಲಿದಾನ ನೀಡಿದ್ದು, – ಈ ಘಟನೆಯೂ ಸಹ ೬-೧೨-೯೨ರ ಕಾರಸೇವೆಗೆ ಅತಿ ಪ್ರಾಮುಖ್ಯವಾದ ಹಿನ್ನೆಲೆ, ಮಹತ್ವಗಳನ್ನು ಒದಗಿಸಿಕೊಟ್ಟಿವೆ ಎಂಬ ಮಾತು ನಿರ್ವಿವಾದ.
ಐತಿಹಾಸಿಕ ನಿರ್ಣಯ

ಇತ್ತೀಚೆಗೆ, ೩೦-೧೦-೯೨ ರಂದು ದೆಹಲಿಯಲ್ಲಿ ನಡೆದ ಪೂಜ್ಯ ಧರ್ಮಾಚಾರ‍್ಯರ ಸಭೆಯು ಅದುವರೆಗಿನ ಎಲ್ಲ ವಿದ್ಯಮಾನಗಳನ್ನು ಕೂಲಂಕಷವಾಗಿ ಪರಿಶೀಲಿಸಿಯೇ ದಿ. 6-12-92 ರಂದು ಮಂದಿರ ನಿರ್ಮಾಣದ ದ್ವಿತೀಯ ಚರಣ ಆರಂಭಿಸಲು ನಿರ್ಧರಿಸಿದ್ದನ್ನೂ ಈಗ ಸ್ಮರಿಸಬಹುದು.
ಅಯೋಧ್ಯೆಯತ್ತ ಕೂಚು
ಕಾರಸೇವೆಗಾಗಿ ಅಯೋಧ್ಯೆಯತ್ತ ಹೊರಟ ರಾಮಭಕ್ತ ಕಾರಸೇವಕರು ತಂತಮ್ಮ ಊರುಗಳಲ್ಲಿ, ದಾರಿಯ ರೈಲು ನಿಲ್ದಾಣಗಳಲ್ಲಿ ಕಂಡ, ಪಾಲ್ಗೊಂಡ, ಮೇರೆ ಮೀರಿದ ರಾಮಭಕ್ತಿಯ ಆವೇಶ, ಉತ್ಸಾಹಗಳು; ಬಾಲಕ ಬಾಲಕಿಯರು, ತರುಣರು, ತರುಣಿಯರು, ಮಧ್ಯವಯಸ್ಕ ಸ್ತ್ರೀ ಪುರುಷರು, ವೃದ್ಧ ಮಾತೆಯರು ಸೇರಿದಂತೆ ಎಲ್ಲರ ಕಾತುರಪೂರ್ಣ ನಿರೀಕ್ಷೆಗಳು, ಗೀತ-ಘೋಷಣೆಗಳು, ವಿಜಯ ಸಾಧಿಸುವ ಕೆಚ್ಚು-ನಿರ್ಧಾರಗಳು ವರ್ಣನಾತೀತ. ಹಾಗೂ ಮನೆಗಳ ಮೇಲೆ ಕಾವಿಯ ಧ್ವಜದ ಕಟ್ಟುವೆವು, ಕಟ್ಟುವೆವು ಮಂದಿರವಲ್ಲೇ ಕಟ್ಟುವೆವು – ಇದು ಅವರೆಲ್ಲರ ಧ್ಯೇಯೋಧ್ಘೋಷ. ವಿವಿಧ ಭಾಷೆ, ರಾಗಗಳಲ್ಲಿ, ಹಾಡುಗಳು, ಚೈತನ್ಯ ಸ್ಫುರಿಸುವ ಘೋಷಣೆಗಳು; ಹೋರಾಟದಲ್ಲಿ ಪಾಲ್ಗೊಳ್ಳಲು ಹಿಂದು ಜನತೆಗೆ ಆಹ್ವಾನ, ಬೆಚ್ಚೆವು, ಬೆದರೆವು; ಲಾಠಿ-ಗುಂಡುಗಳಿಗೆ ಬಗ್ಗೆವು; ಎಚ್ಚರ, ಎಚ್ಚರ ಹಿಂದು ವಿರೋಧಿಗಳೇ ಎಚ್ಚರ; ದಾರಿ ಬಿಡಿ, ದಾರಿ ಬಿಡಿ, ಬರುತ್ತಿದೆ ರಾಮಸೇನೆ; ನ್ಯಾಯಪೀಠಗಳೇ, ತೀರ್ಪು ವಿಳಂಬಿಸಬೇಡಿ. ಕೋಟಿ ಕೋಟಿ ಹಿಂದುಗಳ ಪವಿತ್ರ ಭಾವನೆ ಕಾಲಕಸವಾಗದಿರಲಿ – ಎಂಬರ್ಥದ ಘೋಷಣೆ – ಭಾಷಣಗಳು ವಾತಾವರಣಕ್ಕೆ ಕ್ಷಾತ್ರ ತೇಜಸ್ಸು, ಪೌರುಷ ನೀಡಿದ್ದವು. ಸ್ವಂತದ ಜೇಬಿನಿಂದ ಖರ್ಚು ಮಾಡಿಕೊಂಡಾದರೂ ಕಾರ ಸೇವಕರಾಗಲು ಊರೂರುಗಳಲ್ಲಿ ಸ್ಪರ್ಧೆ, ಉತ್ಸಾಹ. ಚೂಡಿದಾರ್ ಧರಿಸಿದ ೧೬-೧೭ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯರಿಂದ ೯ ಗಜದ ಸೀರೆ ಉಡುವ ಸಂಪ್ರದಾಯಸ್ಥ ಮಹಿಳೆಯರೂ ಸೇರಿದಂತೆ ರೈತರು, ಕಾರ್ಮಿಕರು, ಕೂಲಿಕಾರರು, ವಿದ್ವಾಂಸರು, ವಿದ್ಯಾರ್ಥಿಗಳು, ಅಕ್ಷರಸ್ಥ-ಅನರಕ್ಷರಸ್ಥ, ಜಾತಿ ಭಾಷೆ, ವರ್ಗಗಳ ಭೇದಗಳನ್ನು ಪಕ್ಕಕ್ಕೆ ಸರಿಸಿ ನಾವೆಲ್ಲರೂ ಕೇವಲ ರಾಮ ಕಾರಸೇವಕರೆಂಬ ಹುರುಪು ಹೊತ್ತ ಲಕ್ಷಾವಧಿ ಸಂಖ್ಯೆಯ ನರ-ನಾರಿಯರ, ಅದಮ್ಯ ಚೇತನ ಹೊರ ಹೊಮ್ಮುತ್ತಿರುವ ತೇಜಸ್ವೀ ವಾತಾವರಣ ಎಲ್ಲೆಡೆ. ದುರ್ಗಾವಾಹಿನಿ, ಶಿವಸೇನಾ, ರಾ.ಸ್ವ.ಸಂಘ, ಭಾ.ಜ.ಪ. ಇತ್ಯಾದಿ ದೇಶಭಕ್ತ ಧ್ಯೇಯವಾದಿ ಸಂಘಟನೆಗಳಿಂದ ಕಾರಸೇವಕರ ನೊಂದಣಿಗೆ. ದಕ್ಷಿಣ ಪ್ರಾಂತಗಳ ಬಗೆಗಂತೂ ಗಮನಿಸಬೇಕಾದ ಇನ್ನೊಂದು ಮಾತುಂಟು. ಅಯೋಧ್ಯೆ ತಲುಪಬೇಕೆಂಬ ದಿಢೀರ್ ಸೂಚನೆ ಕಾರಸೇವಕರಿಗೆ ಅತಿಶೀಘ್ರವಾಗಿ ದೊರೆತರೂ, ಹಎಚ್ಚಿನ ಸಿದ್ಧತೆಗಳಿಗಾಗಿ ಕಾಯದೆ, ಏಕಾಏಕಿ ಅಯೋಧ್ಯೆಯತ್ತ ಹೆಜ್ಜೆ ಹಾಕಿದ ಜನರೂ ಅಪಾರ. ಆರಕ್ಷಣೆ ಇಲ್ಲದ ಪ್ರಯಾಣ. ಆದರೆ ಕೆಲವು ಪ್ರಯಾಣಿಕರು ಅವರಿಗೆ ಅನುಕೂಲ ಮಾಡಿಕೊಟ್ಟು ತಮ್ಮ ಪಾಲಿನ ಕಾರಸೇವೆ ಸಲ್ಲಿಸಿದರು. ನೀವು ಮಲಗಿ, ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಎಂದೂ ಹೇಳಿದವರುಂಟು. ಅವರೆಲ್ಲರ ಮನಸ್ಸಲ್ಲಿ ಒಂದೇ ಭಾವ ಒಂದೇ ನೆಟ್ಟ ನೋಟ, ನೇರ ದೃಷ್ಟಿಃ ಮಂದಿರ ನಿರ್ಮಾಣದ ಕಾರಸೇವಕನಾಗಬೇಕು; ಲಾಠಿ – ಗುಂಡೇಟುಗಳನ್ನು ಎದುರಿಸಿಯಾದರೂ ಸರಿ, ಕಾರ್ಯ ಪೂರ್ಣಗೊಳಿಸಬೇಕು; ಶಪಥ ಸಾರ್ಥಕವಾದಾಗಲೇ ಜೀವನಕ್ಕೊಂದು ಧನ್ಯತೆ ದೊರಕೀತು; – ಹೀಗಾಗಿ ಅವರ ಮುಂದಿಟ್ಟ ಹೆಜ್ಜೆ ಹೇಗೆ ತಾನೆ ಹಿಂದೆ ಸರಿದೀತು?
ಭಾವಪೂರ್ಣ ಬೀಳ್ಕೊಡುಗೆ
ಬೀಳ್ಕೊಡಲು ಬಂದವರೂ ಅಷ್ಟೆ ಭಾವಪೂರ್ಣರು. ರಾಮಸೇವೆಗಾಗಿ ಹೊರಟ ಕಾರಸೇವಕರ ಬಗೆಗೆ ಗೌರವ – ಅಭಿಮಾನ – ಆದರಗಳ ಸುರಿಮಳೆ, ಹಿರಿಯರಿಗೆ ನಮಸ್ಕಾರ, ಕಿರಿಯರಿಗೆ ಆಲಿಂಗನ. ಇಗೋ ಕೊಳ್ಳಿ, ದಾರಿಯು ಬುತ್ತಿ; ಯಶಸ್ಸು ಸಾಧಿಸಿಯೇ ಬನ್ನಿ ಎಂಬ ಬೀಳ್ಕೊಡುಗೆ.
ಊರಿನಿಂದ ಊರಿಗೆ, ನಿಲ್ದಾಣದಿಂದ ನಿಲ್ದಾಣಕ್ಕೆ ಪಯಣ ಮುಂದುವರಿದಾಗ – ಬೇರೆ ಬೇರೆ ಊರು – ಜಿಲ್ಲೆ – ಪ್ರಾಂತಗಳ ತಂಡಗಳು ತಮ್ಮನ್ನು ಕೂಡಿಕೊಂಡಾಗ, ಭಾಷೆ, ವೇಷ, ಅಂತಸ್ತುಗಳ ಪರಿವೆಯೇ ಇಲ್ಲದೆ ಪರಸ್ಪರರು ಕೂಡಿ ಹಾಡುವರು; ಹಳೆಯ ಸ್ನೇಹಿತರು, ಹಿತ ಚಿಂತಕರೇ ಎದುರು ಬದುರಾದಾಗ ಪ್ರೇಮದ ಆಲಿಂಗನ, ಹಸ್ತಲಾಘವ. ಬನ್ನಿ ಬನ್ನಿ, ಎಂಬ ಸ್ವಾಗತದ ಮರುಮಾತುಗಳು.
ಮನಮುಟ್ಟುವ ಸ್ವಾಗತ
ಅಯೋಧ್ಯೆ ನಗರಿ ಇನ್ನೂ ೨೦೦-೩೦೦ ಕಿ.ಮೀ. ಇರುವಾಗಲೇ ತಾವು ರಾಮನಗರಿಯ ಪರಿಧಿಯೊಳಗೆ ಪ್ರವೇಶಿಸಿದ್ದೇವೆಂಬ ಕೌತುಕ. ಅವರು ಕಣ್ಣುಹಾಯಿಸಿದಲ್ಲಿ ಕಾರಸೇವಕರ ತಂಡ. ರೈಲ್ವೆ, ಬಸ್‌ನಿಲ್ದಾಣ, ಬೀದಿ, ಅಂಗಡಿ ಎಲ್ಲೆಲ್ಲೂ ಅವರದ್ದೇ ಗೌಜುಕಂಡು ಕಣ್ಮನಗಳಿಗೆ ತಂಪು. ಹೌದು, ಅವರೂ ಸಹ ನಮ್ಮ ಧ್ಯೇಯ ಬಂಧುಗಳೇ; ನಮ್ಮಂತೆ ರಾಮಕಾರ್ಯಕ್ಕೆ ಮುನ್ನುಗ್ಗಿರುವವರೇ, ಜೈ ಶ್ರೀರಾಂ, ಜೈ ಜೈ ಸಿಯಾರಾಂ ಇದೇ ಪರಸ್ಪರರ ಸ್ನೇಹಕ್ಕೆ ನಾಂದಿಯ ಮಾತು. ಆನಂತರವೇ ಯಾವ ಊರು, ಯಾವ ಜಿಲ್ಲೆ, ಯಾವ ಪ್ರಾಂತ, ಎಂಬ ಪ್ರಶ್ನೋತ್ತರಗಳು. ಇನ್ನು ಪರಸ್ಪರರಲ್ಲಿ ಸುದ್ಧಿಗಳ ವಿತರಣೆ. ಯಾವ ಪ್ರಾಂತದಿಂದ ಎಷ್ಟು ಜನ ಕಾರಸೇವಕರು? ವಯಸ್ಸು ಅಂತಸ್ತುಗಳೇನು ? ಪರ – ವಿರೋಧ ವಾತಾವರಣ ಏನು? ಜನತೆಯ ಸಹಕಾರದ ಅಳತೆಯ ಹೋಲಿಕೆ ವ್ಯತ್ಯಾಸಗಳು. ಇದೇ ಮೊದಲ ಭೇಟಿ ಆದರೂ ಪರಸ್ಪರರು ಹಳೇ ಮಿತ್ರರಂತೆ ಮಾತು – ಕಥೆ – ಚಹಾಪಾನ ಊಟ. ಪ್ರಯಾಣದಲ್ಲಿ ಹೊಂದಾಣಿಕೆ ಬೇಕು – ಬೇಡಗಳ ವಿಚಾರಣೆ ಒಂದೇ ಮನೆ – ಒಂದೇ ಸಂಘ ಸಂಸ್ಥೆಯವರಂತೆ ಪರಸ್ಪರ ಸಾಮರಸ್ಯ.
ಈ ಭಾವೈಕ್ಯ ಹೇಗೆ ತಾನೆ ಕೂಡಿ ಬಂತು? ಈ ಪ್ರಶ್ನೆಗೆ ಎಲ್ಲರದೂ ಸಮಾನ ಸ್ಪಂದನ ಹೌದು. ನಾವು ಧ್ಯೇಯ – ಭಾವ ಬಂಧುಗಳು. ನಮ್ಮೆಲ್ಲರ ದೃಷ್ಟಿ, ಹೆಜ್ಜೆಗಳು ಅಯೋಧ್ಯೆಯತ್ತ. ಅಯೋಧ್ಯೆಯಲ್ಲೂ ರಾಮಜನ್ಮ ಸ್ಥಾನದತ್ತ. ಆ ಪಾವನ ಭೂಮಿಯತ್ತ ನಮ್ಮೆಲ್ಲರ ಪಯಣ. ಅದೇ ಸ್ಥಳದಲ್ಲಿ ನಾವೆಲ್ಲರೂ ಒಟ್ಟಾರೆ ಮುಗಿದು ನಿಂತು, ಕೈ ಕೈ ಕೂಡಿಸಿ ಆ ರಾಷ್ಟ್ರ ಪುರುಷನಿಗೆ ಭವ್ಯ ಆಲಯ ನಿರ್ಮಿಸುವ ಉಜ್ವಲವಾದ ಸಮಾನ ಹೊತ್ತವರು; ಧ್ಯೇಯೈಕ ದೃಷ್ಟಿ ಹೊತ್ತ ಸಮಾನ ಪಥಿಕರು.
ಪಾವನ ನಗರಿ ಅಯೋಧ್ಯ
ಅಯೋಧ್ಯಾ ೬೦೦೦ ದೇವ ಮಂದಿರಗಳ ತಾಣ. ಅಲ್ಲಿ ಒಂದೊಂದು ಮನೆಯ ದೇವ ಮಂದಿರ. ಪ್ರತಿ ಮನೆಯೂ ಶ್ರದ್ಧೆ ಭಕ್ತಿಗಳಿಂದ ಭಗವಾನನಿಗೆ ನಿತ್ಯಪೂಜೆ ಸಲ್ಲುವ ತಾಣ. ಅಲ್ಲಿನ ಮನೆ, ಗಲ್ಲಿ, ಬೀದಿ, ಅಂಗಡಿ ಮುಂಗಟ್ಟುಗಳೆಲ್ಲವೂ ಶ್ರೀರಾಮನ ಸೇವೆಗೇ ಬದ್ಧಕಂಕಣವಾದುವು. ಅಲ್ಲಿನ ಹಾಡು – ಭಜನೆಗಳೆಲ್ಲವೂ ರಘುಪತಿಗೇ ಅರ್ಪಿತವಾದುದು. ಅಲ್ಲಿ ಶ್ರೀರಾಮಲಲಾನ ದರ್ಶನ ಪಡೆದ ನಂತರವೇ ಊಟಕ್ಕೆ ಕೂರುವ ವ್ರತಧಾರಿಗಳೂ ಉಂಟು.
ಹನುಮ, ಲಕ್ಷ್ಮಣ, ಸೀತೆ, ಕೌಸಲ್ಯೆ, ಕೈಕೇಯಿ ಹೀಗೆ ಶ್ರೀರಾಮನ ಬಳಗದವರಿಗೆಲ್ಲಾ ನಿತ್ಯ ಪೂಜೆ ಉಂಟು. ದಿನವಿಡೀ ಅಖಂಡ ಭಜನೆ ನಡೆಯುವ ಮಂದಿರಗಳುಂಟು. ಅಂತಹ ಅಯೋಧ್ಯೆಗೆ ಭಾರತಾದ್ಯಂತದ ರಾಮಭಕ್ತರು ಒಮ್ಮೆಗೇ ತಲುಪುವ ಮತ್ತೊಂದು ಸುಸಂಧಿಯೇ ೬-೧೨-೯೨ ರ ಐತಿಹಾಸಿಕ ಕಾರಸೇವಾದಿನ.
ಪವಿತ್ರ ಮಿಲಯ – ಆಲಿಂಗನ
ವಿ.ಹಿಂ.ಪ. ಕೇಂದ್ರವು ಕರೆ ನೀಡಿದಂತೆ ಕರ್ನಾಟಕದ, ಆಂಧ್ರಗಳ ಹಲವು ಕಾರಸೇವಕರು ನವಂಬರ್ ೨೭-೨೮ ರ ವೇಳೆಗೇ ಅಲ್ಲಿಗೆ ತಲುಪಿದ್ದರು. ಆಗಲೇ ಅಲ್ಲಿ ನಿವಾಸ, ಭೋಜನ ಶಾಲೆಗಳ ವ್ಯವಸ್ಥೆ ಆರಂಭವಾಗಿತ್ತು. ದಿನ ಕಳೆದಂತೆ ಉತ್ತರದ ಪ್ರಾಂತಗಳಿಂದ ಸಾವಿರ ಸಾವಿರಗಳಷ್ಟು ಸಂಖ್ಯೆಯಲ್ಲಿ ಜನರು ಅಯೋಧ್ಯೆ ತಲುಪಿದಂತೆ ಬೀದಿ-ಗಲ್ಲಿಗಳಲ್ಲಿ ರಾಮನಾಮದ ಘೋಷಣೆಯು ಮೊರೆತ. ಹಿಂದೆ, ಮುಂದೆ, ಹೆಜ್ಜೆ ಹೆಜ್ಜೆಗೂ, ರಾಮಭಜನೆಯ ನಾದ; ತಿಲಕ, ಗಂಧ ಧರಿಸಿದ ಸಾಧು ಸಂನ್ಯಾಸಿಗಳ ಭಕ್ತ ಭಾವದ ರಂಗು. ನೆರೆದವರೆಲ್ಲರೂ ಪರಸ್ಪರ ಒಂದಾಗಿ ರಾಮ ಜಯಘೋಷ ಹಾಕತೊಡಗಿದಾಗ ಎಲ್ಲೆಲ್ಲೂ ಅದರ ಪ್ರತಿಧ್ವನಿ.
ರಾಮಜನ್ಮ ಸ್ಥಾನದ ಆಸುಪಾಸಿನ ವಿಶಾಲ ರಾಮಕಥಾ ಕುಂಜ ಆವರಣ, ಜಾನಕಿ ಘಾಟ್ ಸಮೀಪದ ಕಾರಸೇವಕಪುರಂ; ಸರಯೂತೀರ – ಹೀಗೆ ವಿವಿಧ ಪ್ರಾಂತಗಳ ಕಾರಸೇವಕರಿಗೆ ವಸತಿ-ಭೋಜನ ಪ್ರಬಂಧ. ವಿಶಾಲ ಬಿಡಾರಗಳೂ ಸಹ ಘಳಿಗೆಯೊಳಗೆ ಭರ್ತಿ, ಊರಿನ ಮಠ ಮಂದಿರ, ಘತ್ರಗಳಲ್ಲೆಲ್ಲಾ ಕಾರಸೇವಕರು. ಸಾಧುಗಳು, ಮಠಾಧೀಶರು, ವಿಹಿಂಪ, ಭಾಜಪ, ಆರ್.ಎಸ್.ಎಸ್., ಶಿವಸೇನಾ, ಬಜರಂಗದಳ, ದುರ್ಗಾವಾಹಿನಿಗಳ ಕಾರ್ಯಕರ್ತರು, ಸ್ವಯಂಸೇವಕರು. ಅಯೋಧ್ಯೆಯ ದಾರಿಯಲ್ಲಿನ ಊರುಗಳ ಜನರು ಸ್ವಪ್ರೇರಣೆಯಿಂದ, ಅತಿಥಿಗಳಿಗೆ ಗೌರವಪೂರ್ಣವಾಗಿ ಸ್ವಾಗತಕೋರಿ, ಅವರ ಅವಶ್ಯಕತೆ ಪೂರೈಸುತ್ತಿದ್ದ ದೃಶ್ಯ ಅತಿ ರಮ್ಯ.
ಆತ್ಮೀಯತೆಯ ಆತಿಥ್ಯ
ಉತ್ತರ ಪ್ರದೇಶದ ರಾ.ಸ್ವ. ಸಂಘ ಘಟಕದ್ದೇ ಇಡೀ ವ್ಯವಸ್ಥೆಯ ಹೊಣೆಗಾರಿಕೆ. ಸಾಧು-ಸಂನ್ಯಾಸಿ-ಮಠಾಧೀಶರ ಅಂತಸ್ತು ಆವಶ್ಯಕತೆಗಳ ಬಗ್ಗೆ ಅವರ ತೀವ್ರ ಗಮನ. ಒಟ್ಟಾರೆ ೨೦೦೦೦ ಜನರಿಗೆ ಒಂದರಂತೆ ೨೦ ವ್ಯವಸ್ಥಿತ ಶಿಬಿರಗಳು. ಒಂದೊಂದರಲ್ಲೂ ಪ್ರತ್ಯೇಕವಾದ ಕಾರ‍್ಯಾಲಯ, ವಸತಿ, ಭೋಜನ, ಔಷಧೋಪಚಾರ, ನೀರು ನೈರ್ಮಲ್ಯಗಳ ಏರ್ಪಾಡು. ಮಹಿಳೆಯರಿಗಾಗಿಯೇ ಪ್ರತ್ಯೇಕ ವಸತಿ ವ್ಯವಸ್ಥೆ. ಈ ಎಲ್ಲ ನಗರಗಳಿಗೂ ಕೇಂದ್ರ ಕಾರ್ಯಾಲಯ ರಾಮಕಥಾ ಕುಂಜದಲ್ಲಿ. ಅಲ್ಲಿಂದ ಹೊರಬರುವ ಸೂಚನೆಗಳು ಏಕಕಾಲದಲ್ಲಿ ಬಹುತೇಕ ಎಲ್ಲ ಶಿಬಿರಗಳಲ್ಲೂ ಕೇಳುವಂತೆ ಧ್ವನಿವರ್ಧಕ. ಒಮ್ಮೆಗೇ ಎರಡು ಲಕ್ಷ ಅತಿಥಿಗಳು ಆಗಮಿಸಿದಾಗಲೂ ಅಲ್ಲಿ ಯಾವ ಗೊಂದಲ-ಗೋಜುಗಳಿಲ್ಲ. ಸತತವಾಗಿ ಆಗಮಿಸುತ್ತಿರುವ ಕಾರಸೇವಕರಿಗಾಗಿ ಪಾಕಶಾಲೆಗಳು ರಾತ್ರಿ ೧೧ರವರೆಗೆ ಕಾರ್ಯಮಗ್ನ, ಹೊರ ಊರುಗಳಿಂದಲೂ ಲಕ್ಷಾವಧಿ ಪೂರಿಗಳ ಸರಬರಾಜು, ಮರೆತು ಬಿಟ್ಟಿರುವ ಸಾಮಾನು – ಚೀಲಗಳು ಕಾರ‍್ಯಾಲಯದಲ್ಲುಂಟು ಎಂಬ ಸೂಚನೆ ಆಗಾಗ್ಗೆ ಕೇಳಿ ಬರುತ್ತಿತ್ತು.
ಕಾರಸೇವೆ ಆರಂಭವಾಗುವ ದಿನಕ್ಕಿಂತ ೫-೬ ದಿನ ಮುಂಚೆಯೇ ಕರ್ನಾಟಕ – ಆಂಧ್ರದವರ ಶಿಬಿರ ಆರಂಭ. ಆಯಾ ಪ್ರಾಂತದ ಪ್ರಮುಖರು ಮುನ್ನವೇ ಆಗಮಿಸಿ, ನಂತರ ಬಡವರಿಗಾಗಿ ವ್ಯವಸ್ಥೆಮಾಡುವರು. ಹೀಗಾಗಿ ರಾತ್ರಿಯಲ್ಲಿ ಅಯೋಧ್ಯೆ ತಲಪಿದರೂ ಸಹ ನೇರವಾಗಿ ಅವರು ತಮ್ಮ ನಿಯೋಜಿತ ಸ್ಥಾನ ತಲಪಬಹುದಿತ್ತು.
ಕರ್ನಾಟಕ ತಂಡದವರಿಗಂತೂ ಭಾಷಣಗಳ ರಸದೌತಣ. ಪೂಜ್ಯ ಮಠಾಧೀಶರಿಂದ, ವಿಹಿಂಪ ನಾಯಕರಿಂದ, ಬೆಳಿಗೆ ಮಧ್ಯಾಹ್ನಗಳಲ್ಲಿ ಕಾರಸೇವೆಯ ಪವಿತ್ರ ಉದ್ದೇಶದ ಪುನಸ್ಮರಣೆ. ೧-೧೨-೯೨ ರಿಂದಲೇ ಆರಂಭವಾಗಿ ಪ್ರಾಂತ ೬-೧೨ರ ಸುಪ್ರಭಾತದವರೆಗೆ ನಡೆದ ಆ ಜ್ಞಾನಸತ್ರದಲ್ಲಿ ಮೀಯದವರೇ ವಿರಳ. ಭಾರತದ ಪ್ರಾಂತ-ಪ್ರಾಂತದವರಷ್ಟೆ ಅಲ್ಲ, ವಿದೇಶಗಳಿಂದಲೂ ಆಗಮಿಸಿದ ಕಾರಸೇವಕರಿಗೆ ಅದೊಂದು ಮಹಾಮಿಲನ.
ಸುದ್ಧಿ ಮಾಧ್ಯಮಗಳು
ಅಯೋಧ್ಯೆ ತಲಪಿದ್ದ ಹಿಂಡು ಹಿಂಡು ಪತ್ರಕರ್ತರಲ್ಲಿ ಅಗ್ರಸ್ಥಾನ ಉತ್ತರ ಭಾರತದ ಹಿಂದಿ ಭಾಷೆಯ ಪತ್ರಕರ್ತರದು. ಇತರರು ಕ್ರಮವಾಗಿ ಇಂಗ್ಲಿಷ್ ದಿನಪತ್ರಿಕೆ, ನಿಯತಕಾಲಿಕಗಳು, ವಿವಿಧ ಸುದ್ಧಿ ಸಂಸ್ಥೆಗಳು, ದಕ್ಷಿಣಭಾರತದ ಪತ್ರಿಕೆಗಳವರು, ಜೊತೆಗೆ ಇಂಗ್ಲೆಂಡ್, ಅಮೆರಿಕ, ಜರ್ಮನಿ ದೇಶಗಳ ಪ್ರತಿನಿಧಿಗಳು. ದಿ. ೧ ರಿಂದ ರವರೆಗೆ ಪ್ರತಿದಿನವೂ ಅಲ್ಲಿ ವ್ಯವಸ್ಥಿತ ಪತ್ರಿಕಾಗೋಷ್ಠಿ. ಪೂಜ್ಯ ಶ್ರೀ ಶ್ರೀ ವಾಸುದೇವಾನಂದಜಿ, ಮಹಂತ ಅವೈದ್ಯನಾಥ್, ರಾಮಚಂದ್ರ ಪರಮಹಂಸ್, ವಿಹಿಂಪ ಅಧ್ಯಕ್ಷ ವಿಷ್ಣು ಹರಿದಾಲ್ಮಿಯಾ, ಅಶೋಕ್ ಸಿಂಘಾಲ್, ಗಿರಿರಾಜ ಕಿಶೋರ್, ವಿನ ಕಟಿಯಾರ್ ಅವರಿಂದ ವಿಷಯ ನಿರೂಪಣೆ, ಪ್ರಶ್ನೆಗಳಿಗೆ ಉತ್ತರ.
ಅವಿಸ್ಮರಣೀಯ ಪತ್ರಿಕಾಗೋಷ್ಠಿಗಳು
ದಿ. ೩೧.೧೨.೯೨ : ಶ್ರೀ ಅಶೋಕ್ ಸಿಂಘಾಲ್‌ರ ಮೊಟ್ಟಮೊದಲ ಪತ್ರಿಕಾಗೋಷ್ಠಿ. ಅವರದ್ದು ನೇರ ವಿವರಣೆ :
*    ೨.೭೭ ಎಕರೆ ಪ್ರದೇಶದಲ್ಲಿ – ರಾಮ ಚಬೂತರ – ಸಿಂಹಾದ್ವಾರ ಪ್ರವೇಶದಲ್ಲೇ ಮಂದಿರ ನಿರ್ಮಾಣದ ಪ್ರಕ್ರಿಯೆ ಸೇರಿದಂತೆ, ಎಲ್ಲ ಕಾರಸೇವಕರೂ ಪಾಲ್ಗೊಂಡು ಧನ್ಯತೆಯ ಅನುಭವ ಪಡೆಯುವ ಮುಹೂರ್ತ ೬.೧೨.೯೨ರಂದು ೧೨.೧೫ಕ್ಕೆ ಆರಂಭ.
*    ೨.೭೭ ಎಕರೆ ಪ್ರದೇಶವನ್ನು ಉತ್ತರ ಪ್ರದೇಶದ ಸರಕಾರ ವಶಪಡಿಸಿಕೊಂಡದ್ದು ಸಕ್ರಮವೋ ಹೇಗೆ ಎಂಬ ಬಗೆಗೆ ತೀರ್ಪು ತಡವಾಗುತ್ತಿರುವುದು ಅಕ್ಷಮ್ಯ. (ಈಗಾಗಲೇ ವಾದ ವಿವಾದಗಳು ಮುಗಿದು, ತೀರ್ಪು ಕಾದಿಟ್ಟು ೭೨೦ ಘಂಟೆ ಕಳೆದಿದೆ) ತೀರ್ಪು ಹೊರ ಬರುವಂತೆ ಇನ್ನಾದರೂ ಕೂಡಲೇ ಶ್ರಮಿಸುವುದು ಕೇಂದ್ರ ಸರಕಾರದ ನೈತಿಕ ಹೊಣೆ; ಕಾರಸೇವೆ ಶಾಂತಯುತವಾಗಿ ಮುನ್ನಡೆಯಲು ನ್ಯಾಯಾಲಯ ಸಹಕಾರ ನೀಡಲೆಂಬ ಮನವಿ; ಎಂಥದೇ ಬಲಪ್ರಯೋಗಕ್ಕೂ ಕಾರಸೇವಕರು ಜಗ್ಗರು, ಬಗ್ಗರು ಎಂಬ ಸ್ಪಷ್ಟೋಕ್ತಿ; ಪೂಜ್ಯ ಸಂತ ಮಹಂತರ ಹೆಗ್ಗಳಿಕೆಯ ಪಾಲು. ದೇಶದ ಏಳಿಗೆ ಸಾಧಿಸುವ ಅವರ ಮಹತ್ವಪೂರ್ಣ ಪಾತ್ರದ ಶ್ಲಾಘನೆ.
*    ೫-೧೨-೯೨ರ ಪತ್ರಿಕಾಗೋಷ್ಠಿಯಲ್ಲಿ ಪೂಜ್ಯ ವಾಸುದೇವಾನಂದಜಿ (ಬದರೀಪೀಠದ ಪೂಜ್ಯ ಶಂಕರಾಚಾರ್ಯರು) ಯವರ ಅಸಂಧಿಗ್ಧ ವಾಗ್ಧಾರೆ. ಪ್ರಧಾನಮಂತ್ರಿಗಳು ವಚನ ಭ್ರಷ್ಠರು ಎಂಬ ಬಿಚ್ಚು ನುಡಿ.
ಸ್ಥಾನ ಮಹಾತ್ಮೆ
ರಾಮಜನ್ಮ ಸ್ಥಾನದಲ್ಲಿ ಎರಡು ಬೇರೆ ಬೇರೆ ಸ್ಥಳಗಳನ್ನು ಅಂದು ಗುರ್ತಿಸಬಹುದಿತ್ತು. ಕಬ್ಬಿಣದ ಬೇಲಿಗಳು, ಮರದ ಅಡ್ಡಕಟ್ಟೆಗಳ ಮಧ್ಯೆ ಲೋಹ ಪರೀಕ್ಷೆಯ (metal detector) ಸಾಧನಗಳಿಂದ ಸಜ್ಜಾದ, ನೂರಾರು ಸಂಖ್ಯೆಯ ಪೋಲಿಸ್, ರಿಸರ‍್ವ್ ಪಡೆಗಳ (ದೇವಸ್ಥಾನದೊಳಗೆ ಕೇಂದ್ರ ಪೋಲಿಸ್ ಪಡೆ; ಹೊರಗೆ ಪಿ.ಎ.ಸಿ. – ಪ್ರಾಂತೀಯ ಪೋಲಿಸ್ ಪಡೆ) ಹತೋಟಿಯಲ್ಲಿದ್ದ ಗುಂಬಸ್ ಪರಿಸರ, ಆ ಸ್ಥಳದಲ್ಲೇ ನಿರಂತರವಾಗಿ ಪೂಜೆ ಸ್ವೀಕರಿಸುತ್ತಿರುವ ಶ್ರೀ ರಾಮಲಲಾ, ಒಂದಾದರೆ ಇನ್ನೊಂದು ಪೋಲಿಸರ ಕಾವಲಿನಿಂದ ಮುಕ್ತವಾದ ೨.೭೭ ಎಕರೆ ಆವರಣದ ರಾಮ ಚಬೂತರಾ ಹಾಗೂ ಸಿಂಹದ್ವಾರ ಪ್ರದೇಶ (೧೯೯೨ರ ಜಯಲೈಯಲ್ಲಿ ಮಂದಿರ ನಿರ್ಮಾಣ ಆರಂಭವಾದದ್ದು, ಕಾರಸೇವೆ ನಡೆದದ್ದು, ಸಂತರ ಆದೇಶದಿಂದ ಕಾರಸೇವೆ ಸ್ಥಗಿತಗೊಂಡದ್ದು – ಇಲ್ಲಿಯೇ)
ಎಲ್ಲವೂ ರಾಮನದೇ ಇಚ್ಛೆ
ನವೆಂಬರ್ ತಿಂಗಳ ಕಟ್ಟ ಕಡೆಯ ಹಾಗೂ ಡಿಸೆಂಬರ್‌ನ ಮೊಟ್ಟ ಮೊದಲ ಸಪ್ತಾಹಗಳು ಅಯೋಧ್ಯೆ ನಗರಿಗೆ ಹಒಸ ಜೀವ, ಹೊಸ ಕಳೆ ತಂದು ಕೊಟ್ಟಿತ್ತು ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ರಾಮಭಕ್ತಿಯು ರಾಷ್ಟ್ರಶಕ್ತಿಯಾಗಿ, ದೇಶವನ್ನು ಒಗ್ಗೂಡಿಸಿದ ಐಕ್ಯಶಕ್ತಿಯಾಗಿ ಮೆರೆದ ಅವಧಿ ಅದು.
ಭಾರತದ ಪ್ರತಿ ಪ್ರಾಂತದ, ಪ್ರತಿ ಭಾಷೆ – ಜಾತಿ, ಪಂಥ, ಸಂಪ್ರದಾಯಗಳ ಜನರೆಲ್ಲರೂ ರಾಮ – ಕಾರಸೇವಕರೆಂಬ ಏಕಮೇವ ಅಭಿದಾನ ಹೊತ್ತು, ತಥಾಕಥಿತ ಭೇದಗಳನ್ನೆಲ್ಲಾ ಮರೆತು, ಭಾವೈಕ್ಯದ ಹರಿಕಾರರಾಗಿ ವ್ಯವಹರಿಸಿದ್ದನ್ನು ಪೂಜ್ಯ ಸಂತರೊಬ್ಬರು ವಿವರಿಸಿದ ರೀತಿಯೆಂದರೆ; ನೆನಪಿಡಿ, ಇದು ಯಾವುದೇ ವ್ಯಕ್ತಿ-ವ್ಯಕ್ತಿಗಳು, ಸಂಸ್ಥೆ – ಸಂಘಟನೆಗಳು ಸಾಧಿಸಿದ ಪವಾಡವಲ್ಲ; ಇದು ಶ್ರೀರಾಮಪ್ರಭುವಿನ ಚಮತ್ಕಾರ! ಅಕ್ಷರಶಃ ಆ ಮಾತು ಸತ್ಯ ಎಂಬುದನ್ನು ಅಲ್ಲಿ ನೆರೆದಿದ್ದ ಎರಡು ಲಕ್ಷ ಕಾರಸೇವಕರು ಭಾವಿಸಿ ಅನುಭವಿಸಿದರು; ವಿಶ್ವದ್ಯಂತದಿಂದಲೂ ಆಗಮಿಸಿದ್ದ ಹಿಂಡು ಹಿಂಡು ಪತ್ರಕರ್ತರು ಈ ದೃಶ್ಯ ಕಂಡು ಚಕಿತರಾಗಿದ್ದಾರೆ. ಈ ಚಮಾತ್ಕಾರ ಹೇಗೆ? ಎಂಬ ಅವರ ಪ್ರಶ್ನೆಗೂ ಇದೆಲ್ಲಾ ಕೇವಲ ಶ್ರೀರಾಮನ ಲೀಲೆ, ಇಚ್ಛೆ. ಯಾವುದೇ ಸರಕಾರ, ಸಂಘ ಸಂಸ್ಥೆ ಸಾಧಿಸಲಾಗದ್ದನ್ನು ಅವನೇ ಮಾಡಿತೋರಿಸಿದ್ದಾನೆ – ಎಂಬ ಉತ್ತರವೇ ಸಿಕ್ಕಿರುತ್ತದೆ.
ದಿನವಿಡೀ ಅಲ್ಲಿನ ಕಾರ್ಯಕ್ರಮವೆಂದರೆ; ಸರಯೂ ಸ್ನಾನ, ರಾಮಲಲಾ ದರ್ಶನ, ಬೆಳಗ್ಗೆ ಮಧ್ಯಾಹ್ನಗಳಲ್ಲಿ ಸಂತರ ಅಮೃತವಾಣಿ,  ಮಾರ್ಗದರ್ಶನ; ಪವಿತ್ರಧ್ಯೇಯದ ಸ್ಮರಣೆ – ಉಪದೇಶ. ವಿಹಿಂಪ ನಾಯಕರಿಂದ ಶಿಸ್ತುಬದ್ಧ ಕಾರಸೇವೆಗಾಗಿ ಕಳಕಳಿಯ ಮನವಿ; ಅನುಶಾಸನವೇ ಕಾರ್ಯ ಯಶಸ್ಸಿನ ಜೀವಾಳವೆಂಬ ಉದ್ಬೋಧನೆ.
ಇಷ್ಟೆಲ್ಲಾ ಹಸಿರು-ಹಸಿರಿನ, ಸಿರಿಸಿರಿಯ ವಾತಾವರಣದ ಮಧ್ಯೆ ಕೇಂದ್ರ ಗೂಢಚಾರ ಪಡೆಗಳು ವಿಹಿಂಪ ಚಲನವಲನವನ್ನೂ, ರಾಜ್ಯಸರ್ಕಾರದ ಗೂಢಚಾರರು ಕೇಂದ್ರ ಗುಪ್ತಚರರ ಮೇಲೂ ಕಣ್ಣಿಟ್ಟಿದ್ದಾರೆ ಎಂಬ ಸುದ್ಧಿಯೂ ಹರಡಿತ್ತು.
ಕಾರಸೇವೆ ಹೇಗೆ? ಎಲ್ಲಿ? ಎಂದು?
೬.೧೨.೯೨ರ ಮಧ್ಯಾಹ್ನ ೧೨-೧೫ರ ಶುಭ ಮುಹೂರ್ತದಲ್ಲೇ ಕಾರಸೇವೆಯ ಉದ್ಘಾಟನೆ, ಎಂಬ ವಿಷಯ ಬಹು ಹಿಂದೆಯೇ ನಿರ್ಧಾರವಾಗಿತ್ತು. ಸಂತಮಹಂತರು, ವಿಹಿಂಪ, ರಾ.ಸ್ವ.ಸಂಘ, ಭಾಜಪ, ಭಜರಂಗದಳ ನಾಯಕರುಗಳ ಒಟ್ಟಾರೆ ಸಹಮತದಂತೆ ಕಾರಸೇವೆ ಜರಗುವ ಸ್ಥಾನದ್ದೂ ಘೋಷಣೆ ಆಗಿತ್ತು. ೧೯೯೨ರ ಜುಲೈ ೨೪ರಂದು ಕಾರಸೇವೆ ಸ್ಥಗಿತಗೊಂಡ ರಾಮಚಬೂತರ-ಸಿಂಹದ್ವಾರ ಪರಿಸರದಲ್ಲಿಯೇ ೬.೧೨.೯೨ರಂದು ಕಾರಸೇವೆ ಆರಂಭಗೊಳ್ಳುವುದೆಂಬ ವಿವರಗಳನ್ನು ಮತ್ತೆ ಮತ್ತೆ ಸಾರ್ವಜನಿಕ ಸಭೆ, ಪತ್ರಿಕಾಗೋಷ್ಠಿಗಳಲ್ಲೂ ನೀಡಲಾಗಿತ್ತು. ಹೀಗೆ ಸಮಯ, ಸ್ಥಳಗಳು ಒಮ್ಮೆ ನಿರ್ಧಾರವಾದುದು, ಬದಲಾಗುವ ಪ್ರಮೇಯವೇ ಇರಲಿಲ್ಲ. ಇನ್ನು ಕಾರಸೇವೆ ಹೇಗೆ?
ಕಾರಸೇವೆ ಸ್ಥಗಿತಗೊಂಡಿದ್ದ ಸ್ಥಾನದ ಶುದ್ಧೀಕರಣ, ಪೂಜೆ, ಅರ್ಚನೆ, ಪವಿತ್ರ ಸರಯೂ ತೀರದ ಮರಳಿನ ಅರ್ಪಣೆ; ಅಭಿಯಂತರು ಶಿಲ್ಪಿಗಳ ನಿರ್ದೇಶದಂತೆ ಮಂದಿರ ನಿರ್ಮಾಣವಾಗಲಿರುವ ಚಬೂತರದ ಪೂರ್ವಭಾವಿ ಕೆತ್ತನೆಯಿಂದ (ಅhisಟಟiಟಿg) ಕಾರ್ಯದ ಪುನರಾರಂಭ. ಪೂಜೆ, ಭಜನೆ, ಅರ್ಚನೆಗಳಿಂದ ಮೊದಲಾಗುವ ನಿಗದಿತ ರೀತಿಯ ಮೇಲ್ಕಂಡ ಕಾರಸೇವೆಯ ಉದ್ಘಾಟನೆ ಪರಮಪೂಜ್ಯ ಮಠಾಧೀಶರು, ಸಾಧು ಸಂತರಿಂದ; ಆ ನಂತರದ ಸರದಿ ವಿಹಿಂಪ, ಭಾಜಪ, ಶಿವಸೇನಾ, ಭಜರಂಗದಳಗಳ ನಾಯಕರದು; ಆಂಧ್ರ, ಮಹಾರಾಷ್ಟ್ರ, ಕರ್ನಾಟಕ ಹೀಗೆ ಆಯಾ ಪ್ರಾಂತಗಳ ಸರದಿಯಂತೆ ಇತರ ಕಾರಸೇವಕರು – ಪ್ರತಿಯೋರ್ವನೂ ತನ್ನ ಸರದಿಯಂತೆ ಭಾಗವಹಿಸುತ್ತಾನೆ: ಮೇಲ್ಕಂಡ ನಿರ್ಣಯಕ್ಕೆ ಪೂಜ್ಯ ಮಠಾಧೀಶರಿಂದ ಹಿಡಿದು ಸರ್ವಸಾಮಾನ್ಯ ಕಾರಸೇವಕನದೂ ಒಪ್ಪಿಗೆ ನೀಡಿದ್ದು ದಿ. ೫.೧೨.೯೨ರ ಸಂಜೆಯ ವೇಳೆಗೆ; ಕಾರಸೇವಕರಿಗೆ ಈ ನಿರ್ಣಯ ಸ್ಪಷ್ಟವಾದದ್ದು ಅನಂತರ. ಈ ಕಾರಸೇವೆ ಸಾಂಕೇತಿಕವಾದರೂ ಇದು ಮಂದಿರ ನಿರ್ಮಾಣದ ನಿಶ್ಚಿತ ಹೆಜ್ಜೆಯೇ; ಎಂಬ ಭಾವ ಪ್ರತಿ ಕಾರಸೇವಕನಲ್ಲೂ ಮೂಡಿಬರುವಂತೆ ಪ್ರಯತ್ನ ಸಾಗಿತ್ತು.
ತರುಣವೃಂದದಲ್ಲಿ ಗೌಪ್ಯ ಅಸಮಾಧಾನದ ಹೊಗೆ ?
ಪ್ರಾಯಶಃ ತರುಣ ವೃಂದದ ಹಲವರಲ್ಲಿ ಈ ನಿರ್ಣಯದ ಬಗೆಗೆ ಗೌಪ್ಯ ಅಸಮಾಧಾನ ಇದ್ದಿರಬಹುದು ಎಂಬ ಸುಳಿವು ಸಿಕ್ಕಿದ್ದು ದಿ. ೬.೧೨.೯೨ರ ಮಧ್ಯಾಹ್ನದ ವೇಳೆಗೇ ಎನ್ನಬಹುದು. ಭಾರತದ ಉದ್ದಗಲಗಳಿಂದ ಬಂದವರು ತಾವು; ಮಂದಿರ ನಿರ್ಮಾಣಕ್ಕೆ ಮಾತ್ರ ನಾವು ಬದ್ದರು ಕೇವಲ ಪೂಜೆ, ಸಾಂಕೇತಿಕ ಕಾರಸೇವೆಯಷ್ಟೇ ತಮಗೆ ಶೋಭಿಸದು. ನಮ್ಮ ರಕ್ತಧಮನಿಗಳಲ್ಲಿ ಕಾವುಂಟು; ಭುಜಗಳಲ್ಲಿ ಬಲವುಂಟು; ಅವಶ್ಯ ಬಿದ್ದಲ್ಲಿ ಬಲಿದಾನವಾಗಲೂ ಸಿದ್ಧರಾಗಿ ಬಂದ ತಾವು ಏನೂ ಮಾಡದೆ ಹಿಂತಿರುಗುವುದೇ? ಅನುಶಾಸನ ಎಂಬ ಮಾತೇನೋ ಮುಖ್ಯ. ಆದರೆ ? …….. ಅಷ್ಟೆ ಸಾಕೇನು ? ರಾಮಜನ್ಮಸ್ಥಾನದ ಪವಿತ್ರ ಪರಿಸರದಲ್ಲಿ ದೇವತಾಮೂರ್ತಿ ರಾಮಲಲಾನನ್ನು ಆವರಿಸಿ ನಿಂತ, ಬಾಬರನ ವಿಜಯಸ್ತಂಭವೆನಿಸಿದ, ರಾಷ್ಟ್ರಕ್ಕೇ ಕಳಂಕ ಪ್ರಾಯವಾದ, ೪೫೦ ವರ್ಷಕ್ಕಿಂತಲೂ ಹೆಚ್ಚು ಹಳೆಯದಾದ ಮೂರು ಬಾಬರಿ ಗುಂಬಸ್‌ಗಳು ತಮಗೆ ಪಂಥಾಹ್ವಾನ ನೀಡುತ್ತಿಲ್ಲವೇನು ? ನಮಗೆ ಅದನ್ನು ಸ್ವೀಕರಿಸುವ ಭುನಬಲವಿದ್ದೂ ತೆಪ್ಪನಿರುವುದೇ ? ರಾಮಜನ್ಮಸ್ಥಾನ ಪ್ರವೇಶಿಸುವ ಮುನ್ನ ಎದುರಾಗುವ ಕಬ್ಬಿಣದ ಕಟಕಟಿಗಳು, ಬಂದೂಕು ಹಿಡಿದ ಪೋಲಿಸರು, ಲೋಹ ಪರೀಕ್ಷೆ ಸಾಧನಗಳು ಒಡ್ಡುವ ಅಡ್ಡಿಗಳು ದಾಸ್ಯದ ಪ್ರತೀಕ ಅಲ್ಲವೇನು ? ಇಂತಹ ಕ್ರೋಧಾಗ್ನಿ ತರುಣವೃಂದದ ಹಲವು ಹೃದಯಗಳನ್ನು ತೀವ್ರವಾಗಿ ಕಲಕಿರಲೇ ಬೇಕು;
ಇನ್ನು ೨.೭೭ ಎಕರೆ ಪ್ರದೇಶವನ್ನೊಳಗೊಂಡ ಬಾಬರಿ ಗುಂಬಸ್ ಪರಿಸರದಿಂದ ಹರತುಗೊಂಡ ರಾಮಚಬೂತರ – ಸಿಂಹದ್ವಾರ ಪ್ರದೇಶ. ಉತ್ತರ ಪ್ರದೇಶ ಸರಕಾರ ಅದನ್ನು ವಶಪಡಿಸಿಕೊಂಡದ್ದು ಸಕ್ರಮವೋ, ಅಕ್ರಮವೋ ಎಂಬ ಬಗೆಗೆ ನ್ಯಾಯಾಲಯದ ತೀರ್ಪು ವಿಳಂಬವಾಗಿರುವುದೇಕೆ ? ರಾಮಜನ್ಮಭೂಮಿ ಸಮಸ್ಯೆಯು ಅಂತರ ರಾಷ್ಟ್ರೀಯ – ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಶ್ನೆ ಎಂಬ ಮಾತನ್ನು ಕೇಂದ್ರ ಸರಕಾರ, ನ್ಯಾಯಾಲಯಗಳು, ಪ್ರತಿಕಾರಂಗ ಹಾಗೂ ಬುದ್ಧಿವಾದಿಗಳು ಅಗಾಗೆ ಉಚ್ಚರಿಸಿದರೂ ತೀರ್ಪು ಕ್ಷಿಪ್ರವಾಗಿ ಹೊರಬರುವ ನಿಟ್ಟಿನಲ್ಲಿ ಸಹಕಾರ ನೀಡುತ್ತಿಲ್ಲವೇಕೆ? ಹೀಗಾಗಿ ಈ ಸಂಚಿನಲ್ಲಿ ಕೇಂದ್ರ ಸರಕಾರದ್ದೂ ಕೈವಾಡವುಂಟು ಎಂಬ ಸಂಶಯ.
ಈ ಗೌಪ್ಯ – ಅಸಮಾಧಾನಗಳು ಅನುಶಾಸನ ಭಂಗ – ಬಂಡಾಯದ ರೂಪು – ರೇಷೆ ತಳೆಯುವಲ್ಲಿ ಹಲವು ಪತ್ರಿಕಾಕರ್ತರದ್ದೂ ಪ್ರತ್ಯಕ್ಷ – ಪರೋಕ್ಷ ಪ್ರಚೋದನೆ ಸೇರಿತ್ತೆಂಬುದೂ ಸ್ಪಷ್ಟ, ನಿರ್ವಿವಾದ.
ಯಾವುದೇ ಪ್ರಸಂಗದಲ್ಲಿ ಒಳ – ಹೊರಗಿನ ಸನ್ನಿವೇಶ, ಕಾರ್ಯಗೌಪ್ಯಗಳನ್ನು ಹುಡುಕಿ ಹೊರತೆಗೆಯುವ ಜಾಣ್ಮೆ ಪತ್ರಕರ್ತನಿಗೆ ಬೇಕೆಂಬುದು ಬೇಕೆಂಬುದು ನಿರ್ವಿವಾದ. ಆದರೆ ಬಲು ಸೂಕ್ಷ್ಮವಾದ ಅಂದಿನ ಸನ್ನಿವೇಶದಲ್ಲಿ ಕಾರಸೇವಕರು ಬಂಡಾಯದ ಹಾದಿ ತುಳಿಯುವಂತೆ ಹಲವು ಪತ್ರಕರ್ತರು ಪ್ರಚೋದಿಸುದ್ದುಂಟು. ಭಾವಚಿತ್ರದ ಅಮಿಷವೊಡ್ಡಿ ಹಲವು ಕಾರಸೇವಕರನ್ನು ಮಾತಿಗೆಳೆದದ್ದು; ಹಿಂದು ಮುಂದು ಪ್ರಶ್ನೆ ಹಾಕಿ ಪೇಚಿಗೆ ಸಿಕ್ಕಿಸಿದ್ದು; ಗೌಣಸಂಗತಿಗಳನ್ನೇ ಎತ್ತೆತ್ತಿ ಹೇಳಿ ನಿಗದಿತ ಕಾರಸೇವೆಯ ವಿಧಿ ವಿಧಾನ ವಿರೋಧವಾದ ವಾತಾವರಣ ಸೃಷ್ಟಿಸಿದ್ಧು. ಉದಾಹರಣೆಗೆ : ಮಹತ್ತಾದ ಕಾರ್ಯಸಾಧನೆಗೆಂದು ದೂರ ದೂರದ ಊರುಗಳಿಂದ ನೀವೇನೋ ಬಂದಿರಿ. ಆದರೆ ಆ ನಿಮ್ಮ ನಾಯಕರೇ ನಿಮ್ಮನ್ನು ಕೈಬಿಟ್ಟು, ನಿಮ್ಮ ಭಾವನೆಗಳ ವಿರುದ್ಧ ನಿರ್ಣಯ ಕೈಗೊಂಡು ನಿಮ್ಮನ್ನು ಮೋಸಗೊಳಿಸಿದ್ದಾರೆ. ಪೂಜೆ, ಭಜನೆ, ಮಣ್ಣು ಪೇರಿಸುವುದೇ ಮಂದಿರ ನಿರ್ಮಾಣವೆಂಬ ಭ್ರಮೆಗೆ ನಿಮ್ಮನ್ನು ಕೈಬಿಟ್ಟು, ನಿಮ್ಮ ಭಾವನೆಗಳ ವಿರುದ್ಧ ನಿರ್ಣಯವೆಂಬ ಭ್ರಮೆಗೆ ನಿಮ್ಮನ್ನು ತಳ್ಳಿದ್ದಾರೆ. ಅದೇ ಮಹಾಕಾರಸೇವೆ ಆದಲ್ಲಿ ನಿಮ್ಮೆಲ್ಲ ಶ್ರಮ ವ್ಯರ್ಥವೇ. ನಿಮ್ಮ ಭುಜಬಲಗಳಿಗಾದರೂ ಕೆಲಸ ಉಂಟೇನು? ’ಮಂದಿರವಲ್ಲೇ ಕಟ್ಟುವೆವು, ರಾಮನಾಣೆ’ ಎಂಬ ವೀರಘೋಷಣೆ ಹುಸಿ ಆಯಿತಲ್ಲವೇ? ಎಂಬು ಛೇಡಿಸಿದ್ದು ಯುವಕರಲ್ಲಿ ಅಸಂತೋಷ ವೃದ್ಧಿಗೊಂಡು ಪೂರ್ವನಿರ್ಧಾರಿತವಲ್ಲದ ದಾರಿಯತ್ತ ಹೆಜ್ಜೆ ಇಡುವ ಪ್ರಕ್ರಿಯೆಗೆ ಹಲವು ಪತ್ರಕರ್ತರಿಂದಲೂ ಇಂಬು ದೊರೆತಂತಾಯಿತು.
ಹಲವು ಪತ್ರಕರ್ತರ ಬಗೆಗೂ ಒಂದು ವಿವರ : ಬಾಬರ್ ಒಬ್ಬ ಆಕ್ರಮಕ. ಅವನ ವಿಜಯದ ಪ್ರತೀಕ ಹಿಂದುಗಳಿಗೆ ಲಾಂಛನಾಸ್ಪದ; ಅದನ್ನು ತೆಗೆಯಲು ಈ ಹೋರಾಟ ಎಂಬ ಕಾರಸೇವಕರ ಮನಸ್ಸಿನ ಭಾವನೆಗಳಿಗೂ ಕೇವಲ ಅವನೊಬ್ಬ ರಾಜ, ಒಂದು ದೇವಸ್ಥಾನಕ್ಕಾಗಿ ಏಕೆಲ್ಲ ಇಂತಹ ಗಡಿಬಿಡಿ ಎಂಬ ಮಾನಸಿಕತೆಯ ಪತ್ರಕರ್ತರಿಗೂ ವಿಚಾರದ ತಾಕಲಾಟ ಆದದ್ದೂ ಅನಿರೀಕ್ಷಿತವಲ್ಲ. ಆದರೆ ಹಿಂದಿ ಭಾಷಾ ದಿನಪತ್ರಿಕೆಗಳ ನಿಲುವು ಪಾತ್ರವೇ ಬೇರೆ. ದೈನಿಕ ಜಾಗರಣ್, ಆಜ್, ನವಭಾರತ ಟೈಮ್ಸ್, ಪಯೋನೀರ್‌ಗಳು ವಿ.ಹಿಂ.ಪ ನಿಲುವನ್ನು ಸಮರ್ಥಿಸಿದ್ದವು. ಆದರೆ ಇಂಗ್ಲೀಷ್ ಪತ್ರಿಕೆಗಳು ಎಂದಿನಂತೆ ಹಿಂದಿನ ದಿನದವರೆಗೂ ವಿ.ಹಿಂ.ಪ. ನಿಲುವನ್ನು ತಪ್ಪುತಪ್ಪಾಗಿ ಉಲ್ಲೇಖೀಸುತ್ತಿದ್ದುದು ಮುಂದುವರಿದೇ ಇತ್ತು.
ಒಟ್ಟಾರೆ ನಿರ್ಧಾರಿತ ಕಾರಸೇವೆಯ ರೀತಿ-ನೀತಿಗಳು ಹಲವು ತರುಣರ ಉತ್ತೇಜಿತ ಭಾವನೆಗಳೊಂದಿಗೆ ಸ್ಪಂದಿಸದೆ ಹೋಗಿರಬೇಕು; ಮಹತ್ಕಾರ್ಯ ಸಾಧಿಸಿಯೇ ಊರಿಗೆ ಮರಳುವುದೆಂಬ ಮಾತುಕೊಟ್ಟು ಬಂದ ತಾವು ಮಂದಿರ ನಿರ್ಮಾಣ ಆರಂಭಿಸದೆ ವಾಪಸಾದಲ್ಲಿ ಬರಿಗೈಯಲ್ಲಿ ಮರಳಿದಂತೆಯೇ ಆದೀತೆಂಬ ಭಾವ; ತ್ಯಾಗ-ಬಲಿದಾನಕ್ಕೂ ಸಿದ್ಧರಾಗಿ ಬಂದ ತಾವು ಮಂತ್ರ ಜಪಿಸಿ ಹೋಗುವುದು ಶೋಭಿಸೀತೇ ? ಹೌದು. ನಾವು ಬಂದದ್ದು ಸಾಂಕೇತಿಕ ಕಾರಸೇವೆಗಾಗಿಯಲ್ಲ, ಗಟ್ಟಿ ಕೆಲಸಮಾಡಲೆಂದೇ ಬಂದವರು. ಇಂತಹ ಪ್ರಕ್ರಿಯೆ – ಪ್ರತಿಕ್ರಿಯೆಗಳೇ ಅಂದು ಅನಿರೀಕ್ಷಿತವಾಗಿ ಜರುಗಿ ಹೋದ, ವಿಶ್ವವನ್ನೇ ತಲ್ಲಣಗೊಳಿಸಿದ ಘಟನಾವಳಿಗೆ ಮೂಲ ಎಂಬ ತೀರ್ಮಾನಕ್ಕೆ ಬಾರದೆ ಬೇರೆ ವಿಧಿಯೇ ಇರಲಿಲ್ಲ. ಎಂದೇ ಆವೇಶಭರಿತ ಕಾರಸೇವಕರು ಅಂದು ಸಂತರ ನಿರ್ಧಾರಕ್ಕೆ ಹೊರತಾದ ಸ್ಥಳ ಹೊಕ್ಕು ಹೊರತಾದ ರೀತಿಯ ಕಾರ್ಯಚಟುವಟಿಕೆಯಲ್ಲಿ ಮುನ್ನುಗಿದ್ದು; ಇಂತಹ ರಾಷ್ಟ್ರೀಯ ಅಪಮಾನವನ್ನು ತಾವು ಬದುಕಿ ಇರುತ್ತ ಉಳಿಯಗೊಡಲಾರೆವು. ಅದೊಂದೇ ಗರಿ, ಸದಾಕಾಲಕ್ಕೂ ಅವನ್ನು ಇಲ್ಲವಾಗಿಸುವುದೇ ಈವರೆಗಿನ ಎಲ್ಲ ವಿವಾದಗಳಿಗೂ ಏಕಮೇವ ಪರಿಹಾರ, ಎಂಬ ಉನ್ಮತ್ತ ಭಾವನೆಗಳು ಮಹಾಪೂರದಂತೆ ಹಲವು ತರುಣರ ದೇಹಬುದ್ಧಿಗಳನ್ನು ಆವರಿಸಿದ್ದೇ ದೈತ್ಯಾಕಾರದಲ್ಲಿ ನಿಂತಿದ್ದ ಆ ಮೂರು ಗುಂಬಸ್‌ಗಳು, ಗೋಡೆಗಳು ಕೇವಲ ೪-೫ ಗಂಟೆಗಳಲ್ಲೇ ನೆಲಸಮವಾದದ್ದು. ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ರೂಢಿಮಾತಿಗೆ ಈ ಘಟನೆ ಜ್ವಲಂತ ಉದಾಹರಣೆ ಎಂದು ಮಾತ್ರ ಹೇಳಬೇಕಾದೀತು!
ಐತಿಹಾಸಿಕ ಮುಹೂರ್ತ
೬.೧೨.೯೨ರ ಬೆಳಿಗ್ಗೆ ೧೦ ಗಂಟೆ. ಪೂಜ್ಯ ಜಗದ್ಗುರುಗಳು, ಸಧು ಸಂತರು ರಾಜಕೀಯ-ಸಾಮಾಜಿಕ ನಾಯಕರುಗಳು ಸಮ್ಮುಖದಲ್ಲಿ ರಾಮಚಬೂತದ ಮೇಲೆ ಪೂಜೆ-ಭಜನೆ ಹೋಮ ಹವನಗಳ ಶುಭಾರಂಭ. ಪೂಜ್ಯ ಶ್ರೀ ವಾಸುದೇವಾನಂದಜಿಯವರೂ ಸೇರಿದಂತೆ ಹಿಂದಿನ ದಿನದ ಸಂತ ಸಮ್ಮೇಳನದಲ್ಲಿ ಪಾಲ್ಗೊಂಡ ಸಾಧು ಸಂತ ಪ್ರಮುಖರೆಲ್ಲರದೂ (ಕರ್ನಾಟಕದ ಪೂಜ್ಯ ಶ್ರೀ ಬೇಲಿ ಮಠಾಧೀಶರು, ಉಡುಪಿಯ ಅಷ್ಟಮಠದ ಯತಿವರೇಣ್ಯರು, ಕೇರಳ ಮದ್ರಾಸ್‌ಗಳ ಮಠಾಧಿಪತಿಗಳು, ಕಾಶಿ ಹರಿದ್ವಾರ ಪ್ರಯಾಗ ಚಿತ್ರಕೂಟಗಳಂತಹ ಕ್ಷೇತ್ರಗಳ ಸಾಧು, ಸಂತ, ಮಹಂತರು) ಅಲ್ಲಿ ವಿದ್ಯಮಾನ. ಅಶೋಕ್ ಸಿಂಘಾಲ್, ವಿಷ್ಟುಹರಿದಾಲ್ಮಿಯಾ, ಗಿರಿರಾಜ್ ಕಿಶೋರ್, ಶ್ರೀಶ ಚಂದ್ರ ದೀಕ್ಷಿತ್, ವಿನಯ ಕಟಿಯಾರ್, (ವಿ.ಹಿಂ.ಪ. (ನಾಯಕರು), ಅದ್ವಾನಿ, ಜೋಷಿ, ಪ್ರೇಮ್‌ಜಿ, ರಾಜಮಾತಾ, ಹೊ.ವೆ. ಶೇಷಾದ್ರಿ (ರಾಜಕೀಯ-ರಾಷ್ಟ್ರೀಯ ನಾಯಕರು), ಜನಮನದಲ್ಲಿ ಸ್ಫೂರ್ತಿಯನ್ನು ಉಕ್ಕೇರಿಸುತ್ತಿದ್ದ ಸಾಧ್ವಿರಿತಂಬರಾ, ಉಮಾ ಶ್ರೀ ಭಾರತಿ ಹೀಗೆ ಎಲ್ಲರೂ ರಾಮ ಚಬೂತರದಲ್ಲಿ ಆ ಕ್ಷಣದಲ್ಲಿ ಹಾಜರು. ಎರಡು ಲಕ್ಷ ಸಂಖ್ಯೆಯ ಕಾರಸೇವಕರು ರಾಮಚಬೂತರದಿಂದ ಹೊರಗೆ ಪವಿತ್ರ ಕಾರಸೇವೆಯಲ್ಲಿ ಭಾಗಿಗಳಾಗಲು ಕಾದು ನಿಂತ ಸಮಯ. ಆಗ ಬಾಬರಿ ಗುಂಬಸ್ ಪ್ರದೇಶದ ಸುತ್ತಲೂ, ಕಬ್ಬಿಣದ ಕಟಕಟೆಯ ಒಳಹೊರಗೆ ಬಂದೂಕು ಹಿಡಿದು ನಿಂತ ಪಿ.ಎ.ಸಿ. ದಳ; (ರಾಜ್ಯ ಸರ್ಕಾರದ್ದು) ದೇವಸ್ಥಾನದೊಳಗೆ ಕೇಂದ್ರದ ಪೋಲಿಸ್ ಪಡೆ (ಸಿ.ಆರ್.ಪಿ.). ಭಾರತದ ಉದ್ದಗಲಗಳಿಂದ, ವಿದೇಶಗಳಿಂದ ಆಗಮಿಸಿದ್ದ ಪತ್ರಕರ್ತರು, ಛಾಯಾ ಚಿತ್ರಗ್ರಾಹಕರಿಗೆ ರಾಮಚಬೂತರ ಪ್ರದೇಶಕ್ಕೆ ವಿಶೇಷ ಆಹ್ವಾನ. ಆವರಣದ ಒಳ ಸೇರಿದ್ದ ಪ್ರಮುಖರ ಸಂಖ್ಯೆಯನ್ನು ಮೀರಿಸಿದ ಆ ತಂಡಕ್ಕೆ ಅಲ್ಲಿನ ವಾತಾವರಣ ಸನ್ನಿವೇಶಗಳನ್ನೆಲ್ಲಾ ಕ್ಷಣಕ್ಷಣಗಳವರೆಗೆ ಸೆರೆಹಿಡಿಯಲು ಮುಕ್ತ ಅವಕಾಶ.
ಪೂಜೆ ಭಜನೆ ಇತ್ತ ಸಾಗಿದ್ದರೆ, ಅತ್ತ ರಾಮಕಥಾಕುಂಜ ಆವರಣದಲ್ಲಿದ್ದ ವೇದಿಕೆಯಿಂದ ನಾಯಕರ ಭಾಷಣಗಳು; ನಿಗದಿತ ಕಾರಸೇವೆಯ ರೀತಿ ನೀತಿಗಳ ವಿವರಣೆ; ತಮ್ಮ ತಮ್ಮ ಸರದಿಗಾಗಿ ಸಾಲುಗಟ್ಟಿ ನಿಲ್ಲಬೇಕೆಂಬ ವಿನಂತಿ. ಈಗ, ಆಡ್ವಾನಿ, ಈಗ ಜೋಷಿ, ಈಗ ಅಶೋಕ್ ಸಿಂಘಾಲ್ ಅವರ ಉದ್ಭೋಧನೆ ಆಲಿಸಿ. ಕಾರಸೇವೆ ಶಿಸ್ತುಬದ್ಧವಾಗಿ ನಡೆಯಲು ಸಹಕರಿಸಿ; ಕಿಂಚಿತ್ತೂ ಅನುಶಾಸನ ಭಂಗ ಬೇಡ. ಇಗೋ ಕಾರಸೇವೆಯ ಪವಿತ್ರ ಮುಹೂರ್ತ ಸಮೀಪಿಸುತ್ತಿದೆ. ಪ್ರತಿ ಕಾರಸೇವಕನಿಗೂ ಅವಕಾಶ ಖಚಿತ. ಪ್ರತಿಯೋರ್ವನೂ ಕಾರಸೇವೆ ಮಾಡಿಯೇ ಹಿಂತಿರುಗುವನು-ಮುಂತಾದ ಸೂಚನೆ- ವಿನಂತಿಗಳ ಪೂರ.
ಸಮಯ ೧೧.೧೫ : ರಾಮಚಬೂತರಕ್ಕೆ ೪೫-೫೦ ಕಾರಸೇವಕರ ಅಕ್ರಮ ಪ್ರವೇಶ. ಮಿಟ್ಟೀ ನಹೀ ಕಿಸಕಾಯೇಂಗೇ, ಬಾಬರಿ ಗುಂಬಸ್ ತೋಡೇಂಗೇ, ತೋಡೇಂಗೇ- ಎಂಬರ್ಥದ ಹಿಂದೀ-ಮರಾಠಿ, ಬಿಹಾರಿ ಭಾಷೆಯ ಘೋಷಣೆಗಳು. ತತ್‌ಕ್ಷಣದಲ್ಲಿ ಅವರನ್ನು ಕ್ಯಾಮರಾಗಳೊಳಗೆ ಸೆರೆಹಿಡಿಯಲು, ಕಾರ‍್ಯಮಗ್ನರಾದವರು ಹಲವು ಪತ್ರಿಕಾ ಕ್ಯಾಮರಾವನ್‌ಗಳು. ವ್ಯವಸ್ಥಾಪಕ ರಕ್ಷಕ ವೃಂದದಿಂದ ಕಾರಸೇವಕರನ್ನು ಶಾಂತರಾಗಿಸಲು ಪ್ರಯತ್ನ. ಅಂತಹರನ್ನು ಈ ಪವಿತ್ರ ಕ್ಷಣದಲ್ಲಿ ವಿರುದ್ದ ದಿಕ್ಕಿನೆಡೆಗೆ ಪ್ರಚೋದಿಸಬೇಡಿ ಎಂದು ಚಿತ್ರಕಾರರಿಗೆ ಧ್ವನಿವರ್ಧಕದಿಂದಲೂ ಸಹ ವಿನಂತಿ. ಆದರೆ ನಿಷ್ಪಲ. ಕಡೆಗೆ ವೇದಿಕೆಯಿಂದಲೇ ಸೂಚನೆ : ಅನುಶಾಸನ ಮುರಿಯುವ ಕಾರಸೇವಕರನ್ನು ಅನಾಮತ್ ಎತ್ತಿ ಹೊರಹಾಕಿ.
ಆಗ ಛಾಯಾ ಚಿತ್ರಕಾರರು ಆಗ್ನೇಯ ದಿಕ್ಕಿನ ಸಾಕ್ಷಿ ಗೋಪಾಲ ಮಂದಿರದೆಡೆಗೆ ದೌಡಾಯಿಸಿದರು. ಅಲ್ಲಿ, ರಾಮಚಬೂತರದ ಹೊರಗಿನಿಂದ ಒಳಬರಲು ನೂಕು ನುಗ್ಗುತ್ತಿರುವ ಜನಜಂಗುಳಿ. ಅವರಿಂದಲೂ ಅಂತಹುದೇ ಘೋಷಣೆ; ಬಾಬರೀ ಗುಂಬಸ್ ಉರುಳುವುದು, ಉರುಳುವುದು; ಅವರ ಕಡೆಗೂ ಪತ್ರಿಕಾ ಕ್ಯಾಮರಾಗಳು ಕಣ್ಣು ಕೇಂದ್ರೀಕೃತ; ಆಗ ಮತ್ತೆ ವೇದಿಕೆಯಿಂದ ಅವರಿಗೆ ವಿನಂತಿ. ವಿರುದ್ಧ ರೀತಿನೀತಿಯ ಘೋಷಣೆಗಳನ್ನು ದಯಮಾಡಿ ಪ್ರಚೋದಿಸಬೇಡಿ; ನಿಗದಿತ ರೀತಿಯ ಕಾರಸೇವೆಗೆ ಸಹಕಾರ ನೀಡಿ. ಆದರೆ ಆ ವಿನಂತಿ ಮನ್ನಿಸಿದವರು ಮಾತ್ರ ಅತ್ಯಲ್ಪ ಮಂದಿ.
ಸಮಯ ೧೧.೪೫ : ರಾಮಚಬೂತರದ ಒಳಗಿದ್ದ ಎಲ್ಲರೂ ಪೂಜೆ ಭಜನೆಗಳಲ್ಲಿ ಮಗ್ನರು. ರಾಮಕಥಾಕುಂಜ ಹಾಗೂ ನವನಿರ್ಮಿತ ಗೋಡೆಗಳ ಹೊರ ಬದಿಯಲ್ಲಿ ಸಾಲುಗಟ್ಟಿ ಕುಳಿತಿದ್ದವರ ಗಮನ ನಾಯಕರ ಭಾಷಣಗಳತ್ತ. ಅವರಿಗೆ ತಮ್ಮ ಸರದಿ ಯಾವಾ, ಎಂಬ ಲೆಕ್ಕಾಚಾರ. ವೇದಿಕೆಯಿಂದ ಕಾರಸೇವಕರಿಗೆ ವಿನಂತಿ; ಕಾರಸೇವೆಯ, ೧೨.೧೫ರ ಮುಹೂರ್ತ ಸಮೀಪಿಸುತ್ತಿದೆ; ಪ್ರತೀಕ್ಷಿಸಿ; ಕಾರಸೇವೆಯ ನಮ್ಮ ನಿರ್ಧಾರ ಅಚಲ; ಸ್ಥಳ, ಸಮಯ, ರೀತಿ ನೀತಿಗಳ ಕಿಂಚಿತ್ತೂ ಉಲ್ಲಂಘನೆ ಬೇಡ. ಅಲ್ಲಿ ನೆರೆದ ಲಕ್ಷ ಸಂಖ್ಯೆಯ ಕಾರಸೇವಕರ ಮೈಮನಗಳಲ್ಲಿ ಆಗ ಸ್ಫೂರ್ತಿಯ ಸಂಚಾರ ಆದದ್ದು ನಿಶ್ಚಿತ.
ಸುಮಾರು ಸಮಯ ೧೧.೫೦ರ ಹೊತ್ತಿಗೆ ಆಗ್ನೇಯ ದಿಕ್ಕಿನ ಸಾಕ್ಷಿಗೋಪಾಲ ಮಂದಿರದ ದಿಕ್ಕಿನಲ್ಲಿ ಪೋಲಿಸ್ ಅಡೆತಡೆ, ನಿಯಂತ್ರಕ ಪ್ರಬಂಧಕರ ಕೋಟೆಯನ್ನು ಮುರಿದು ೪೦೦-೫೦೦ ಕಾರಸೇವಕರು ರಾಮಚಬೂತದೊಳಗೆ ನುಗ್ಗಿದರು; ಆವೇಶ ಪೂರ್ಣರಾದ, ಹತ್ತೆಂಟು ಗುಂಪುಗಳಲ್ಲಿ ಒಳನುಗ್ಗಿದ ಅವರನ್ನು ತಡೆಯಲು ಎಲ್ಲರೂ ಅಸಮರ್ಥರೇ. ತೋಡೇಂಗೆ, ತೋಡೇಂಗೆ, ಬಾಬರಿ ಢಾಂಚಾ ತೋಡೇಂಗೇ, ಮಟ್ಟಿ ನಹೀ ಕಿಸಕಾಯೇಂಗೇ, ಅಪನಾ ಪೌರುಷ್ ದಿ ಖಾಯೇಂಗೇ ಎಂಬ ಅವರ ಏರು ಧ್ವನಿಯ ಘೋಷಣೆಗಳು ಚಬೂತರದೊಳಗೆಲ್ಲಾ ಪ್ರತಿಧ್ವನಿಸಿದವು; ಅವರ ಕೈಯಲ್ಲಿ ಕಬ್ಬಿಣದ ತುಂಡುಗಳು; ಕೈಕೊಡಲಿಗಳು. ರಣಚಂಡಿ ಅವರೊಳಗೆ ಪ್ರವೇಶಿಸಿದಂತೆ ಅವರ ಉನ್ನಾದ. ಸಾಧುಗಳು, ಸಂತರು ನಾಯಕರು ಅವರನ್ನು ಶಾಂತರಾಗಿಸಲು ಮಾಡಿ ವಿನಂತಿಯೆಲ್ಲಾ ಅರಣ್ಯರೋದನವೇ ಆಯಿತು. ಗುಂಬಸ್‌ಗಳ ಮುಂಭಾಗದ ಅಡ್ಡಗಟ್ಟೆಗಳ ಕಡೆಗೆ ಅವರಲ್ಲಿ ಹಲವರು ದೌಡಾಯಿಸಿದರು; ಕಟಕಟೆಯ ಒಳನುಗ್ಗಿದರು; ನಂತರ ದೇವಸ್ಥಾನದೊಳಕ್ಕೆ. ಕೂಡಲೇ ಹತ್ತಾರು ಜನ ಮೂರೂ ಗುಂಬಸ್‌ಗಳ ಮೇಲೇರಿ ಕಾವಿ ಧ್ವಜ ಏರಿಸಿ ಜಯಘೋಷ ಹಾಕಿದಾಗ ಅದಕ್ಕೆ ಕಾರಸೇವಕರ ಪೂರ್ಣಕಂಠದ ಮಾರ್ದನಿ. ಅಂದಿನ ಘಟನೆಗಳಿಗೆ ನಿರ್ಣಾಯಕ ತಿರುವು ನೀಡಿದ್ದು ಅದೇಕ್ಷಣವೇ. ನಂತರದ ಒಂದೆರಡು ನಿಮಿಷ, ಅಷ್ಟೆ; ರಾಮಚಬೂತರ ಪ್ರದೇಶಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಕಾರಸೇವಕರು ನುಗ್ಗಿದರು. ಕತ್ತೆತ್ತಿ ಮೇಲೆ ನೋಡಿದಾಗ ಮೂರು ಗುಂಬಸ್‌ಗಳ ಮೇಲೆ ನೂರಾರು ಜನರು; ಕೈ – ಆಯುಧಗಳಿಂದಲೇ ಗುಂಬಸ್‌ನ್ನು ಕೊಚ್ಚಿಹಾಕುತ್ತ, ಬಾಯಿಂದ ಜೈಸಿಯಾರಾಂ, ಜೈಸಿಯಾರಾಂ ಹಾಡುತ್ತಾ ನರ್ತಿಸುತ್ತಿದ್ದಾರೆ. ಏನಿದು? ಎಂತಹ ಸ್ಥಿತಿ? ಎಂದು ಸುತ್ತ ಮುತ್ತಲವರು ಗಾಬರಿಗೊಂಡರೆ ಮತ್ತೆ ಸಾವಿರಾರು ಜನರು ದೇವಸ್ಥಾನದೊಳಕ್ಕೆ ನುಗ್ಗುತ್ತಿದ್ದಾರೆ; ಹೊರಗಿನ ಆವರಣ ತುಂಬುತ್ತಿದ್ದಾರೆ. ಘೋಷಣೆಗಳಿಗೆ ಮಾರ್ದನಿಸುತ್ತಿದ್ದಾರೆ.
ಅರೇಭಾಯಿ, ಪ್ಯಾರೇ ಕಾರಸೇವಕ್; ತುಮನೇ ಕ್ಯಾಕಿಯಾ? ಪೌರುಷ್ ತೋ ಠೀಕ್ ಹೈ – ಪರ್ ರುಮ್ ಜೋಕರ್ ರಹೇ ಹೈ ವಹ್ ಹಮಾರೇ ಯೋಜನಾಮೆ ನಹೀ ಹೈ; ಹಮೆ ತೋ ಕಾರಸೇವಾಕರನಾ ಹೈ ಚಬುತರಾ ಮೇ; ಅಚ್ಛಾ, ಆಪ್‌ನೇ ಧ್ವಜ್ ಲಗಾಯಾ ಹೈ; ಬಸ್. ನೀಚೇ ಉತರ್ ಆಯಿಯೇ, ವಹ್ ಸಂತೋಕಾ ಆದೇಶ್ ಹೈ, ವಿ.ಹಿಂ.ಪ ಕಾ ಆದೇಶ್ ಹೈ, ಭಾಜಪ ಔರ್ ಸಂಘಕಾ ಆದೇಶ್ ಹೈ. ಆದೇಶ್ ಮತ್ ತೋಡೀಯೇ – (ಅರೇ, ಕಾರಸೇವಕ ಬಂಧುಗಳೇ, ನೀವೇನು ಮಾಡಿಬಿಟ್ಟಿರಿ, ನಿಮ್ಮ ಪೌರುಷಕ್ಕೆ ಶಹಭಾಸ್; ಆದರೆ ನಿಮ್ಮ ಈ ಕೆಲಸ ನಮ್ಮ ಯೋಜನೆಗೆ ಅನುಗುಣವಾಗಿಲ್ಲ; ಕಾರಸೇವೆ ಮಾಡಬೇಕಾದುದು ನೀವಿರುವ ಕಡೆ ಅಲ್ಲ, ಚನೂತರ ಸ್ಥಾನದಲ್ಲಿ ಎಂಬುದು ಮರೆತು ಹೋಯಿತೇನು? ನೀವು ಗುಂಬಸ್ ಮೇಲೆ ಧ್ವಜ ಹಾರಿಸಿದಿರಿ, ಅಷ್ಟು ಸಾಕು. ಈಗ ಕೆಳಗಿಳಿದು ಬನ್ನಿ, ಈ ಮಾತು ಸಂತರ ಆದೇಶ, ವಿಹಿಂಪ ಆದೇಶ, ಭಾಜಪ ಸಂಘದ ಆದೇಶ. ಆ ಆದೇಶದ ಮುರಿಯಬೇಡಿ.) ಎಂಬ ವಿನಂತಿಗಳು; ಅವು ಅಕ್ಷರಶಃ ಹತ್ತು-ಹನ್ನೆರಡು ಬಾರಿ ಧ್ವನಿವರ್ಧಕದಿಂದ ಹೊರಬಂದರೂ ಗುಂಬಸ್‌ನ ಮೇಲಿದ್ದ ಯಾಗೂ ಆ ವಿನಂತಿಗೆ ಗಮನ ನೀಡಲಿಲ್ಲ. ಗೋಡೆಗಳು, ಮುಖ್ಯದ್ವಾರಗಳ ಮೇಲೆ ಆಘಾರ, ಹಗ್ಗಗಳನ್ನು ಕಟ್ಟಿಕೊಂಡು ಮೇಲೇರುವುದು, ಸಣ್ಣ ಪುಟ್ಟ ಕೊಡಲಿ ಮೇಲೆ ಸಾಗಿಸುವುದು ಕ್ಷಿಪ್ರಗತಿಯಲ್ಲಿ ಮುಂದುವರಿಯುತ್ತಲೇ ಇತ್ತು. ಗುಂಬಸ್ ಧ್ವಂಸವೇ ಇಂದಿನ ನಿಜವಾದ ಕಾರಸೇವೆ ಎಂಬ ಭಾವ ಗುಂಬಸ್‌ಗಳ ಮೇಲೇರಿದ್ದ, ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದ ಕಾರಸೇವಕರಿಗೆ ಒಪ್ಪಿಗೆಯಾಗಿತ್ತು ಎನ್ನಬಹುದು.
ಪರಿಸ್ಥಿತಿ ಒಮ್ಮೆಗೇ ವಿಕೋಪಕ್ಕೆ ಹೋಗಿದ್ದು ಹೀಗೆ. ಇದರಿಂದಾಗಿ ಪೂರ್ವ ನಿರ್ಧಾರಿತ ಕಾರಸೇವೆಯ ಸಮಯ ಮೀತಿದ್ದರೂ, ಸ್ಥಿತಿ ಮಾಮೂಲಿಗೆ ಬಾರದ್ದನ್ನು ಕಂಡ ಸಂಘ ಪರಿವಾರದ ಪ್ರಮುಖರೇ ಆಗ ಧ್ವನಿವರ್ಧಕ ಹಿಡಿದರು. ಅವರಲ್ಲಿ, ಮೊಟ್ಟ ಮೊದಲಿಗರು ಶ್ರೀ ಅದ್ವಾನಿ; ನಂತರ ಸರ್ವ ಶ್ರೀ ಸಿಂಘಾಲ್, ರಾಜಮಾತಾ, ಜೋಷಿ, ಹೊ.ವೆ. ಶೇಷಾದ್ರಿ; ಹಿಂದಿ, ಕನ್ನಡ, ತಮಿಳು, ತೆಲುಗು, ಮರಾಠಿ ಹೀಗೆ ಹಲವು ಭಾಷೆಗಳಲ್ಲೂ ಗುಂಬಸಿನ ಮೇಲಿದ್ದ ಕಾರಸೇವಕರನ್ನು ಕೆಳಗಿಳಿಯುವಂತೆ ಮಾಡಲು ವಿನಂತಿಗಳು, ಮನವಿಗಳು ಬಾರಿ ಬಾರಿಗೆ ಮೊಳಗಿದರೂ ಅವೆಲ್ಲಾ ನಿಷ್ಟ್ರಯೋಜಕವೇ; ಇನ್ನು ಈ ಉತ್ತೇಜಿತ ಕೃತ್ಯ ನಿಲ್ಲಲಾರದು, ಎಂಬ ಭಾವನೆ ಕ್ರಮೇಣ ಮೂಡತೊಡಗಿತಾದರೂ, ಆ ದೈತ್ಯ ಗುಂಬಸ್‌ಗಳನ್ನು, ಆ ಗೋಡೆಗಳನ್ನು ಒಡೆಯಲಾದೀತೇ? ಜೀವದ  ಹಂಗು ತೊರೆದು ಪಾಲ್ಗಪಂಡವರ ಸಾಹಸವೆಲ್ಲವೂ ಅದರ ವಿರುದ್ಧದ ಕ್ರೋಧಾಗ್ನಿಯ ಸಾಂಕೇತಿಕ ಆಘಾತ ಮಾತ್ರ ಆದೀತೇ? ಗಾಳಿಗುದ್ದಿದಂತೆ ನಿಷ್ಪಲವಾದೀತೇ? ಏಕಾಏಕಿ ಭುಗಿಲೆದ್ದ ಈ ಪ್ರಯತ್ನಗಳೆಲ್ಲವೂ ವಿಫಲವಾದ ಅಪಾರ ಪ್ರಾಣಹಾನಿಯಲ್ಲೇ ಪರ್ಯವಸಾನವಾದೀತೇ – ಮುಂತಾದ ಶಂಕೆಗಳು. ಆದರೆ, ಆದರೆ-ಆಗ ಮಧ್ಯಾಹ್ನ ೧.೫೦; ಎಡ ಭಾಗದ ಗುಂಬಸ್ ಮಹಿಷಾಸುರನಂತೆ ಕೆಳಗುರುಳಿಬಿತ್ತು. ಅದೆಷ್ಟು ಜನ ಅವುಗಳ ಜೊತೆಗೇ ಹುಡಿಯಾದರೋ, ಹುತಾತ್ಮರಾದರೋ ಎಂಬ ಆತಂಕ. ಬಲಭಾಗದ ಗುಂಬಸ್ ಕೆಳಬಿದ್ದಾಗ ಮಧ್ಯಾಹ್ನ ೨.೪೦; ಪ್ರವೇಶದ್ವಾರದ ಮುಖ್ಯಗೋಡೆ ಉದುರಿಬಿದ್ದದ್ದು ೩.೩೦ಕ್ಕೆ.
ಇನ್ನು ಉಳಿದದ್ದು ಮಧ್ಯಭಾಗದ ಗಟ್ಟಿಗಡಿತ ಗುಂಬಸ್. ಅದರ ಧ್ವಂಸಕ್ಕೆ ಪ್ರಯತ್ನಗಳು ಹೆಚ್ಚುತ್ತಲಿದ್ದರೂ ಅದು ಮಾತ್ರ ಗಟ್ಟಿ ನೆಲವನ್ನು ಕಚ್ಚಿ ಹಿಡಿದಿದೆಯೋ ಎನ್ನಿಸುತ್ತಲಿತ್ತು. ಆದರೆ ಸಂಜೆ ೪.೪೭ಕ್ಕೆ ಅದೂ ಕೆಳಗುರುಳಿತು. ಆಗ ಕೇಳಬೇಕು, ಜನಸಾಗರದ ಉತ್ಸಾಹ. ಪರಿಸರದ ಎದುರು, ಬಲಭಾಗ ಹಿಂಭಾಗಗಳಲ್ಲಿ ಕುಳಿತು, ನಿಂತು ನೆಟ್ಟದೃಷ್ಟಿಯಿಂದ ವೀಕ್ಷಿಸಿದವರು, ಕಡೇಪಕ್ಷ ೩ಲಕ್ಷ ಜನರು; ಅಯೋಧ್ಯೆ ವಾಸಿಗಳೆಲ್ಲರ ಸಾಕ್ಷಿಯಾಗಿ – ಕೋಲಾಹಲ, ಉತ್ಮತ್ತತೆ, ರಾಮನಾಮ ಘೋಷಣೆ, ಪರಸ್ಪರ ಆಲಿಂಗನಗಳ ಮಹಾಪೂರವನ್ನು; ಧನ್ಯ ಧನ್ಯ ಕಾರಸೇವಕ್, ಧನ್ಯ ಧನ್ಯ ಸಾಧುವೃಂದ, ಎಂಬ ನಭ ನಿನಾದಿಸುವ ಪ್ರತಿಧ್ವನಿಯನ್ನು.
ಈ ಮಧ್ಯೆ ಗುಂಬಸ್‌ನಿಂದ ಕಲ್ಲು-ಮಣ್ಣು ಕೆಳಬಿದ್ದೊಡನೆಯೇ ಪೂಜಾರಿಗಳು ರಾಮಲಲಾ ವಿಗ್ರಹ, ಪೀಠಗಳನ್ನೂ ಹೊತ್ತು ಹೊರಬಂದದ್ದನ್ನು ಜನ ಕಂಡಿದ್ದರು. ಮೂರೂ ಗುಂಬಸ್‌ಗಳು ಕೆಳಬಿದ್ದಕೂಡಲೇ ರಾಮಲಲಾ ವಿಗ್ರಹವನ್ನು ಮತ್ತೆ ಅದೇ ಸ್ಥಳಕ್ಕೆ ತಂದದ್ದನ್ನೂ ಕಂಡ ಜನರು ಜಯಘೋಷಗಳಿಂದ ಸ್ವಾಗತಿಸಿದರು. ಗಾಯಗೊಂಡವರ ಸಂಖ್ಯೆ ೪೫೭; ಸಾವು ಅಪ್ಪಿದವರು ನಾಲ್ವರು, ಎಂದು ನಂತರದ ವಿಹಿಂಪ ಪತ್ರಿಕಾ ಪ್ರಕಟಣೆ ತಿಳಿಸಿತು.
ಸುಮಾರು ೩.೩೦ರ ಸಮಯಕ್ಕೆ ಐದು ಮೈಲಿಯಲ್ಲಿ ಬಿಡಾರ ಹೂಡಿದ್ದ ಕೇಂದ್ರ ಪೋಲಿಸ್ ಪಡೆಗಳು ಜಿಲ್ಲಾ ಮ್ಯಾಜಿಸ್ಟೇಟರ ಆಜ್ಞೆಯಂತ ಅಯೋಧ್ಯೆಯತ್ತ ಹೊರಟಿತ್ತೆಂದೂ ಆದರೆ ಅವರು ಎರಡು ಮೈಲು ದೂರದಲ್ಲಿ ನಿಲ್ಲುವಂತೆ ಪುನಃ ಅವರಿಗೆ ಆಜ್ಞೆ ಇತ್ತರೆಂಬ ಸುದ್ದಿ ಕೇಳಿಬಂದಾಗ, ಅವರ ಬಗೆಗೆ ಅಭಿಮಾನ ಮೂಡಿಬಂತು. ಅಂದು ರಾತ್ರಿಯೇ ರಾಷ್ಟ್ರಪತಿ ಆಡಳಿತದ ಸೂತ್ರಧಾರಿಗಲು ಅವರನ್ನು ಅಮಾನತ್ತಿನಲ್ಲಿಟ್ಟರು. ಆಗ ಅವರ ಪ್ರತಿಕ್ರಿಯೆಯೂ ಉಲ್ಲೇಖನೀಯ: ರಾಮ ಭಕ್ರರ ಮೇಲೆ ಗುಂಡು ಹಾರಿಸುವ ಆಜ್ಞೆ ನೀಡಬೇಕೆಂದು ನನ್ನ ಮೇಲೆ ಒತ್ತಾಯ ಬಂದ ಕ್ಷಣವೇ ನನ್ನ ರಾಜೀನಾಮೆ ಸಿದ್ಧವಾಗುತ್ತಿತ್ತು. ಈಗಂತೂ ನಾನು ಧನ್ಯ.
ಇಡೀ ಅಯೋಧ್ಯೆಯಲ್ಲಂದು ಹೋಳಿ-ದಸರಾ ದೀಪಾವಳಿಗಳ ಸಂಭ್ರಮ. ದೀಪೋತ್ಸವ. ತಾವೆಂದೂ ಆರದ ಸಾಸಸಮಯ ಘಟನೆಯನ್ನು ಕಣ್ಣಾರೆ ಕಂಡ ಭಾಗ್ಯ ತಮ್ಮದೆಂಬ ಭಾವ ಅಯೋಧ್ಯಾ ನಿವಾಸಿಗಳದು. ಈಗ ವಿವಾದವೆಲ್ಲಾ ಮಂಗಮಾಯ. ರಾಮಲಲಾನಿಗೆ ಅದೇ ಸ್ಥಳದಲ್ಲಿ ದೇವಸ್ಥಾನ ಕಟ್ಟುವ ಶತಶತಮಾನಗಳ ಆಶಯ ಸಾಕಾರವಾಗುವ ಕ್ಷಣ ಒದಗಿಬಂತು. ಕಾರಸೇವಕರಿಗೆ, ಮಹಂತರಿಗೆ, ವಿಹಿಂಪ, ಭಾಜಪ ಅಧ್ವರ್ಯುಗಳಿಗೆ ಧನ್ಯವಾದ ಹೇಗೆ ಹೇಳೋಣ?
ತಂತಮ್ಮ ನಿವಾಸಗಳಿಗೆ ಮರಳುತ್ತಿದ್ದ ಕಾರಸೇವಕರು ಬಾಬರಿ ಇಟ್ಟಿಗೆಗಳು, ಮರ, ಕಬ್ಬಿಣದ ತುಂಡುಗಳನ್ನೂ ಕೊಂಡೊಯ್ದುರು. ರಾಮ ದೇವಸ್ಥಾನ ನಿರ್ಮಿತಿಗೆ ಅಡ್ಡವಾಗಿದ್ದ ಅಡೆತಡೆಗಳು ಇವು; ನಮ್ಮ ವಿಜಯ ಪತಾಕೆ ಹಾರಿದುದನ್ನು ನಮ್ಮ ಬಂಧೂಗಳಿಗೆ ಮನದಟ್ಟುಮಾಡುವ ಪಳೆಯುಳಿಕೆಗಳು ಇವು! ಎಂದು ಘೋಷಿಸುತ್ತಾ, ಜಯಘೋಷ ಮುಗಿಲು ಮುಟ್ಟಿಸುತ್ತಾ ಹೆಜ್ಜೆ ಇಡುತ್ತಿದ್ದ ದೃಶ್ಯ ಕಾಣಬಂತು. ಕೂಡಲೇ ದೂರವಾಣಿ, ಟೆಲೆಕ್ಸ್, ಫ್ಯಾಕ್ಸ ಮೂಲಕ ತಂತಮ್ಮ ಬಂಧುಗಳಿಗೆ ಆ ಸುದ್ಧಿಯನ್ನು ಕ್ಷಿಪ್ರವಾಗಿ ಮುಟ್ಟಿಸಿದವರೂ ಹಲವರು.
ಬಾಬರಿ ಗುಂಬಸ್ ಗೋಡೆಗಳ ಇಟ್ಟಿಗೆಗಳು ಮುಸಲ್ಮಾನರ ಶ್ರದ್ಧಾ ಬಿಂದುಗಳಾದ ಕಾರಣ ಎಂದಾದರೂ ಸರಿ ಅವನ್ನು ಸಂಮಾನ ಪೂರ್ವಕವಾಗಿ ಹೊರ ಸಾಗಿಸಬೇಕಿತ್ತು. ಆದರೆ ಅದು ಧ್ವಂಸವಾದುದು ಮಾತ್ರ ದುರದೃಷ್ಟಕರ. ಇದಕ್ಕೆ ಮೂಲಕಾರಣ, ಮುಸ್ಲಿಮರು ಯಾರನ್ನು ತಮ್ಮ ನಾಯಕರೆಂದು ನಂಬಿದ್ದರೋ ಅವರ ಮೊಂಡುತನ, ಹಠಮಾರಿತನವೇ ಎಂಬ ಮಾತೂ ಕೇಳ ಬರುತ್ತಿತ್ತು.
ಅನಿರೀಕ್ಷಿತವಾಗಿ ಜರುಗಿದ ಈ ಘಟನೆಯಿಂದಾಗಿ ಇಡೀ ವಿಶ್ವದಲ್ಲೇ ಕಂಪನದ ಸುದ್ದಿಯೂ ಹರಡಿತು. ಇಡೀ ಭಾರತದಲ್ಲಿ ಅಲ್ಲೋಲಕಲ್ಲೋಲ, ಕರ್ಪ್ಯೂ, ಗೋಲಿಬಾರ್, ಸಾವಿನ ಸುದ್ದಿಗಳು. ಆದರೆ ಅಯೋಧ್ಯೆ ಮಾತ್ರ, ದಿನಾಂಕ ೭,೮,೯ ಗಳಂದು ನಿರ್ಭೀತ ಶಾಂತ. ಸರ್ವ ಶ್ರೀ ವಿಯಜ ಕುಮಾರ ಪಾಂಡೆ, ಮಣಿ ತ್ರಿಪಾಠಿ, ಕೃಷ್ಟಾನಂದ ತ್ರಿಪಾಠಿ ಮುಂತಾದ ಸ್ಥಳೀಯ ವಿದ್ವಾಂಸರ, ಸಾಮಾಜಿಕ ಕಾರ್ಯಕರ್ತರ ಒಟ್ಟಾರೆ ಅಭಿಪ್ರಾಯವೆಂದರೆ : ಅ) ಇದುವರೆಗೆ ಇದ್ದ ವಿವಾದಿತವೆನಿಸಿದ ಕಟ್ಟಡ ಸದಾಕಾಲಕ್ಕೂ ಈಗ ಇಲ್ಲವಾಯಿತು. ಇನ್ನು ಅಲ್ಲಿ ಮಂದಿರ ಎದ್ದೇಖಲು ವಿಳಂಬ ಆಗದಿರಲಿ. ಆ) ಇನ್ನು ಅದೇ ಸ್ಥಳದಲ್ಲಿ ಹೊಸ ಮಸೀದಿ ಕಟ್ಟುವ ಮಾತಂತೂ ಮೂರ್ಖತನದ ಪರಮಾವಧಿಯೇ. ಆ ಪ್ರಯತ್ನ ನಡೆದಲ್ಲಿ ಜೀವದ ಪಣತೊಟ್ಟು ಅಯೋಧ್ಯಾವಾಸಿಗಳು ಹೋರಾಡಿಯಾರು. ಇ) ದೇಶದಲ್ಲಿ ಶಾಂತಿ ಸ್ಥಾಪನೆ ಆಗುವುದು ರಾಮ ಮಂದಿರ ನಿರ್ಮಾಣದ ನಿರ್ಧಾರದ ನಂತರವೇ. ಅನ್ಯಾಥಾ ಮತ್ತೂ ಎಳೆದಾಡಿದಲ್ಲಿ ಅಶಾಂತಿ, ಮನಸ್ತಾಪ ಜಾತೀಯ ವೈಮನಸ್ಸುಗಳ ಕರಾಳ ಭೂತ ಮತ್ತೆ ಎಲ್ಲೆಡೆ ತಲೆ ಎತ್ತೀತು.
ದಿ. ೬.೧೨.೯೨ರ ರಾತ್ರಿಯಿಂದ ೭.೧೨.೯೨ರ ಮಧ್ಯರಾತ್ರಿಯವರೆಗೆ ಹಸಿವು, ನಿದ್ರೆ, ಆಯಾಸ ಲೆಕ್ಕಿಸದೆ ಕಾರಸೇವಕರು ನಡೆಸಿದ ಕಾರಸೇವೆಯಿಂದಾಗಿ ಪೂಜಿತ ರಾಮಶಿಲೆ, ಸಿಮೆಂಟ್‌ಗಳನ್ನೂ ಬಳಸಿ ಕಟ್ಟಿದ ೪೦’*೪೦’ ಚೌಕದ, ೧೫ ಅಡಿ ಎತ್ತರದ, ೧೨ ಮೆಟ್ಟಲಿನ ತಾತ್ಕಾಲಿಕ ಹೊಸ ರಾಮಮಂದಿರವೊಂದು ಮೇಲೆದ್ದು ನಿಂತಿತು.
ದಿ. ೭.೧೨.೯೨ರಂದು ಬಾಬರಿ ಗೋಡೆಗಳ ಬೆಟ್ಟದೋಪಾದಿಯ ಅವಶೇಷಗಳ ರಾಶಿಯಿಂದ ದೊರೆತ ಪುರಾತತ್ವ ಸಾಮಗ್ರಿಗಳನ್ನೂ – ೫ ಅಡಿ ಎತ್ತರದ ಬೆಳ್ಳಿಯ ಸಿಂಹಾಸನ, ಎರಡು ಕ್ವಿಂಟಾಲ್ ತೂಕದ ಬೃಹತ್ ಗಂಟೆ, ರಾಮ, ಭೈರವಿ, ವರುಣನ (ಕಂಚು) ವಿಗ್ರಹಗಳು, ನಾಗರಿ ಲಿಪಿಯ ಕಲ್ಲಿನ ಶಾಸನಗಳು – ಕಂಡ ಜನರ ಸಂತೋಷಕ್ಕೆ ಪಾರವೇ ಇಲ್ಲ. ರಾಮ ದೇವಸ್ಥಾನವನ್ನು ಧ್ವಂಸಗೊಳಿಸಿದೆಯೇ ಬಾಬರನು ಮಸೀದಿ ಕಟ್ಟಿದ್ದಕ್ಕೆ ಇವೇ ಜೀವಂತ ಸಾಕ್ಷಿಗಳೆಂಬ ಹರ್ಷೋದ್ಗಾರಗಳು.
ದಿ. ೬.೧೨.೯೨ರಂದು ಸಂಜೆ ೫ ಗಂಟೆಗೇ ರಾಮಲಲಾ ತನ್ನ ಮುಂಚಿನ ಜಾಗದಲ್ಲಿ ಪ್ರತಿಷ್ಠಾಪಿತನಾಗಿದ್ದರೂ ಸಾರ್ವಜನಿಕ ಸಂದರ್ಶನಕ್ಕೆ ಅನುಮತಿ ದೊರೆಯದಿದ್ದ ಕಾರಣ ಸಂತ ಮಹಂತರಲ್ಲಿ ಕೋಪ-ಅಸಂತೋಷ. ಶೀಘ್ರದಲ್ಲಿಯೇ ರಾಮಲಲಾನ ಸಾರ್ವಜನಿಕ ದರ್ಶನಕ್ಕೆ ಅನುಮತಿ ನೀಡುವ ಭರವಸೆಯನ್ನು ಸಂತ ಶ್ರೀ ಶ್ರೀ ರಾಮಚಂದ್ರದಾಸರಿಗೆ ನೀಡಲು ಜಿಲ್ಲಾ ಮ್ಯಾಜಿಸ್ಟ್ರೇಟರು ೯.೧೨.೯೨ರ ಮಧ್ಯಾಹ್ನ ದಿಗಂಬರ ಆಖರಾಕ್ಕೆ ಬಂದಿದ್ದರು. ದಿ. ೮.೧೨.೯೨ರ ಮಧ್ಯಾಹ್ನ ಹಲವು ಪತ್ರಕರ್ತರಿಗೆ ಮಾತ್ರ ದರ್ಶನದ ಅನುಮತಿ ದೊರೆತಿತ್ತು.
ಅಯೋಧ್ಯೆಯಿಂದ ವಾಪಸಾಗುತ್ತಿದ್ದ ಕಾರಸೇವಕರು ಪಯಣಿಸುತ್ತಿದ್ದ ರೈಲುಗಳಿಗೆ ಜನ ಕೈ ಮುಗಿಯುತ್ತಿದ್ದರು; ಕಾರಸೇವಕರಿಗೆ ಉಪಹಾರ, ಚಹಾಕೊಟ್ಟವರು ಉಂಟು. ಅಂತೂ ನೀವು ೪೫೦ ವರ್ಷಗಳಿಗಿಂತ ಹಳೆಯದಾದ ಕಳಂಕವೊಂದನ್ನು ಅಳಿಸಿ ಬಿಟ್ಟಿರಿ ಎಂದು ಶ್ಲಾಘಿಸಿದವರೂ ಹಲವರು.
ಮಿಂಚಿನ ಪ್ರತಿಕ್ರಿಯೆಗಳು
ಬಾಬರಿ ಗುಂಬಸ್‌ಗಳು ಉರುಳಿಬಿದ್ದ ನಂತರದ ಕ್ಷಿಪ್ರಘನೆಗಳು ಈಗಾಗಲೇ ಸರ್ವವಿದಿತ. ಕಲ್ಯಾಣಸಿಂಗರ ರಾಜೀನಾಮೆ, ಆಡ್ವಾನಿಯವರ ರಾಜೀನಾಮೆ, ರಾಷ್ಟ್ರಪತಿ ಆಡಳಿತ, ಉ.ಪ್ರ. ವಿಧಾನಸಭಾ ವಿಸರ್ಜನೆ, ಮುಸಲ್ಮಾನರ ಒತ್ತಾಯಕ್ಕೆ ಬಗ್ಗಿ ಸಂಘ ಸಂಸ್ಥೆಗಳ ಮೇಲೆ ಪ್ರತಿಬಂಧ, ಬಾಜಪ ನಾಯಕರ ಸೆರೆ, ಗುಂಬಸ್ ಉರುಳಿದ ಬಗೆಗೆ ಸಿ.ಬಿ.ಐ. ತನಿಖೆ, ಜನತಾದಳ, ವಾಮಪಕ್ಷಗಳಿಂದ ಕಾಗ್ರೆಸಿಗೆ ಬೆಂಬಲ ನೀಡು ಹೇಳಿಕೆಗಳು – ತಿದ್ದುಪಡಿಗಳು. ಭಾಜಪ ನಾಯಕರ ಬಂಧನಕ್ಕೆ ಪರ-ವಿರೋಧ ಪ್ರಕ್ರಿಯೆಗಳು. ವಿಶ್ವಾದ್ಯಂತ ದೇವ ಮಂದಿರಗಳ ಧ್ವಂದ, ಕರ್ಪ್ಯೂ, ಪೋಲಿಸರ ಗುಂಡು, ೧೧೦೦ ಜನರ ಸಾವು, ಹಿಂದುತ್ವವನ್ನು ಪ್ರತಿಷ್ಠಾಪಿಸಿಯೇ ತೀರುವೆಂಬ ಹಿಂದು ಸಂಘ ಸಂಸ್ಥೆಗಳ ಪಣ. ಕಾಂಗ್ರೆಸಿನೊಳಗೆ ಅಧಿಕಾರಕ್ಕಾಗಿ ತೀವ್ರ ಪೈಪೋಟಿ, ಇತ್ಯಾದಿ ಮೈನವಿರೇಳಿಸುವ ‘ನ ಭೂತೋ ನ ಭವಿಷ್ಯತಿ’ ಪ್ರಕ್ರಿಯೆಗಳು.
ಆಪಾದನೆಯಲ್ಲ, ಕಲಿತ ಪಾಠ
ಈ ಎಲ್ಲಾ ಸುದ್ದಿಗಳ ಮಧ್ಯೆ ಪ್ರಮುಖವಾದ ಸುದ್ದಿ-ಪ್ರಕ್ರಿಯೆಯನ್ನು ಉಲ್ಲೇಖಿಸುವುದೇ ಮೇಲ್ಕಂಡ ಪ್ರಸ್ತಾಪ. ಬಾಬರಿ ಮಸೀದಿ ಉರುಳಿದ್ದು ೬.೧೨.೯೨ರ ಸಂಜೆ ೪.೪೭ಕ್ಕೆ, ರಾಷ್ಟ್ರಪರಿ ಆಡಳಿತ ಘೋಷಣೆ ಆದದ್ದು ರಾತ್ರಿ ೮.೩೦ಕ್ಕೆ. ಆದರೆ ದಿ. ೭.೧೨.೯೨ರಂದು ಗೃಹಮಂತ್ರಿ ಚವಾಣರು ಕೇಂದ್ರ ಪಡೆಗಳು ೭ ನಿಮಿಷಗಳೊಳಗೆ ಅಯೋಧ್ಯೆ ಪ್ರವೇಶಿಸುವುದೆಂದು ಪಾರ್ಲಿಮೆಂಟಿನಲ್ಲಿ ಘೋಷಿಸಿದರೂ ಸಹ ಕೇಂದ್ರ ಪಡೆಗಳು ರಾಮಜನ್ಮಭೂಮಿಯ ಪರಿಸರಕ್ಕೆ ಏಕಾಎಕಿ ಪ್ರವೇಶಿಸಿದ್ದು, ೮.೧೨.೯೨ ರ ಮುಂಜಾನೆ ೪ ಘಂಟೆಗೆ; ಬಾಬರಿ ಗುಂಬಸ್‌ಗಳು ಕೆಳಗುರುಳಿದ ೩೬ ಗಂಟೆಗಳ ನಂತರ – ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ೩೨ ಗಂಟೆಗಳ ನಂತರವೇ. ಹೊರ ಸರಕಾರದ ಕ್ರಮ ಇಷ್ಟು ತಡವೇಕಾಯಿತು ಎಂಬ ಪ್ರಶ್ನೆಗೆ ಉತ್ತರ ದೊರೆತದ್ದು ೮.೧೨.೯೨ರ ರಾತ್ರಿಯ ದೂರದರ್ಶನ ಸಮಾಚಾರ ಪ್ರಸಾರದಲ್ಲೇ. ರಕ್ತಪಾತವಿಲ್ಲದೆ ಪರಿಸರವನ್ನು ವಶಪಡಿಸಿಕೊಳ್ಳುವಲ್ಲಿ ನಮ್ಮ ಪಡೆ ಯಶಸ್ವಿಯಾದವು ಎಂಬ ಹೊಸ ಪೋಲಿಸ್ ಅಧಿಕಾರಿಗಳ ವಿವರಣೆಯಿಂದಲೇ.
ತಮ್ಮ ಅಧಿಕಾರದ ಅಂಕಿತದಲ್ಲೇ ಕೇಂದ್ರ ಪೋಲಿಸ್ ಪಡೆಗಳು ಇದ್ದರೂ ಅದನ್ನು ಬಳಸದಿದ್ದ ಕಲ್ಯಾಣಸಿಂಗರೇ ಬಾಬರಿ ಗುಂಬಸ್‌ಗಳ ಹೊಣೆ ಎಂದು ಕೇಂದ್ರ ಸಾರಿತ್ತು. ಆದರೆ ರಾಮಭಕ್ತರ ವಿರುದ್ಧ ದಮನಚಕ್ರ ಹರಿಸಲಾರೆನೆಂಬ ಕಲ್ಯಾಣಸಿಂಗರ ಘೋಷಿತ ರೀತಿಯನ್ನೇ ಕಡೆಗೆ ಕೇಂದ್ರ ಸರಕಾರವೂ ಅನುಸರಿಸಿತು. ರಾ.ಜ.ಭೂ ಪರಿಸರದಲ್ಲಿದ್ದ ಜನಜಂಗುಳಿಯನ್ನು ಮಿಲಿಟರಿ ಹೆಲಿಕಾಪಟ್ಟರ್ ಮೂಲಕ ವೀಕ್ಷಿಸಿದ ನಂತರವೇ, ಕಾರಸೇವಕರು ಅರೆ ನಿದ್ರೆಯಲ್ಲಿದ್ದ ಸಮಯ ಸಾಧಿಸಿ ಹಠಾತ್ ಧಾಳಿ ನಡೆಸುವುದೆಂದು ಅವರು ತೀರ್ಮಾನಿಸಿದರು.
ಗುಂಡು ಹಾರಿಸಿ ಸ್ಥಿತಿ ತಹಬಂದಿಗೆ ತಾರದಿದ್ದುದು ಕಲ್ಯಾಣಸಿಂಗರ ತಪ್ಪೆಂದು ಕೇಂದ್ರವು ಆಪಾದನೆ ಹೊರಿಸಿತಾದರೂ, ಪರಿಸರ ವಶಪಡಿಸಿಕೊಳ್ಳುವಾಗ ಕೇಂದ್ರವೂ ಗುಂಡು ಹಾರಿಸಲಿಲ್ಲ. ಗುಂಡಿನ ಮಳೆಗರೆದಲ್ಲಿ ಮುಖ್ಯಮಂತ್ರಿ ಮುಲಾಯಮ ಸಿಂಗರು ಗತಿಯೇ ತಮಗೂ ಆದೀತೆಂಬ ಭಯ ನರಸಿಂಹರಾಯರಿಗೆ ಕರಾರುವಾಕ್ಕು ಪಾಠ ಕಲಿಸಿತ್ತು ಎಂದರೆ ತಪ್ಪಾಗಲಾರದು.
ಇನ್ನೊಂದು ಸೋಜಿಗವನ್ನೂ ಗಮನಿಸಿ. ಗುಂಬಸ್‌ಗಳ ಮೇಲೆ ಧಾಳಿ ನಡೆದ ಐದು ಗಂಟೆಗಳ ಅವಧಿಯಲ್ಲೂ ಸಹ ಕೇಂದ್ರ ಸರಕಾರ ತೆಪ್ಪಗಿತ್ತೇ ವಿನಃ ತನ್ನ ಕಿರುಬೆರಳೂ ಎತ್ತಲಿಲ್ಲ. ಒಮ್ಮೆ ಬಾಬರಿ ಗುಂಬಸ್‌ಗಳು ಕೆಳಬಿದ್ದರೆ ಎಲ್ಲಾ ವಿವಾದಗಳೂ ಒಮ್ಮಗೇ ಬರೆಹರಿದಾವು ಎಂಬ ಯೋಚನೆ ಪಿ.ವಿ. ಎನ್‌ರಿಗೆ ಇತ್ತೋ ಹೇಗೋ ತಿಳಿಯದು. ಅಥವಾ ಅಗಲೂ ರಕ್ತಪಾತ ನಂತರದ ಭೀಷಣ ಪರಿಣಾಮಗಳು ಇದರತ್ತ ಅವರ ಚಿಂತನೆ ಹರಿದಿತ್ತೋ? ಯಾವುದೂ ತಿಳಿಯದು!
‘ಬಾಬರಿ ಮಸೀದಿ’ ಎನ್ನುವುದು ಮುಸಲ್ಮಾನರ ಶ್ರದ್ಧೆಯ ಸಂಕೇತ ಎಂದು ಬಾಬರಿ ಕಮಿಟಿ ಸದಸ್ಯರು ಹೇಳಿದ್ದಾರೆ. ಆದರೆ ಅದರ ರಕ್ಷಣೆಗೆಂದು ಬಾಬರಿ ಕಮಿಟಿ ರಚಿಸಿಕೊಂಡದ್ದು ೩.೨.೧೯೮೬ ರಂದು, ೧.೨.೧೯೮೬ ರಂದು ದೇವಸ್ಥಾನದ ಬೀಗ ತೆಗೆಯಬೇಕೆಂದು ನ್ಯಾಯಾಲಯವು ಸರಕಾರಕ್ಕೆ ನಿರ್ದೇಶನ ನೀಡಿದ ಮೇಲೆಯೇ ಮುಂಚಿನಿಂದಲೂ ಸರಕಾರದ ಎಲ್ಲ ದಾಖಲೆಗಳಲ್ಲೂ ’ಮಸೀದಿ ಜನ್ಮಸ್ಥಾನ’ ಎಂಬ ಉಲ್ಲೇಖವೇ ಇದೆ.
ಡಿಸೆಂಬರ್ ೬ರ ಸಂಜೆ ೪.೪೫ರ ವೇಳೆಗೆ ವಿವಾದಿತ ಬಾಬರಿ ಕಟ್ಟಡವು ಪೂರಾ ನೆಲಸಮವಾದ ಮರುಕ್ಷಣದಲ್ಲೇ ಹೊಸ ಮಂದಿರದ ನಿರ್ಮಾಣ ಕಾರ್ಯವೂ ಆರಂಭಗೊಂಡಿತು. ಒಂದೊಂದು ಕ್ಷಣವೂ ಆಗ ಮಹತ್ವಪೂರ್ಣ. ಸಿ.ಆರ್.ಪಿ.ಯ ಆಗಮನದ ನಿರೀಕ್ಷೆ ಇದ್ದುದ್ದರಿಂದ ಎಲ್ಲವೂ ಅವಸರವಸರವಾಗಿ ಆಗಬೇಕಿತ್ತು. ಕಲ್ಲು, ಇಟ್ಟಿಗೆ, ಸಿಮೆಂಟು ಇತ್ಯಾದಿ ಎಲ್ಲಿಂದಲೋ ಸಾಮಗ್ರಿಗಳು ಬರತೊಡಗಿದವು. ಬಹಿ ಬೇಗನೇ ರಾಮಲಾಲನಿಗೆ ಪೀಠವೊಂದು (ಚಬೂತರಾ) ರಚಿತವಾಗಿ ಆತನ ಮರು ಪ್ರತಿಷ್ಠಾಪನೆಯೂ ಆಯಿತು. ಅಂದು ಮುಕ್ಕೋಟಿ ದ್ವಾದಶಿ, ಸಂಜೆಯ ಗೋಧೂಳಿ ಮುಹೂರ್ತ. ಏಕಕಾಲದಲ್ಲಿ ’ಪಶ್ಚಿಮ’ದಲ್ಲಿ ಸೂರ್ಯಾಸ್ತ ಹಾಗೂ ’ಪೂರ್ವ’ದಲ್ಲಿ ಪೂರ್ಣಾಕಾರ ತಾಳಲು ಸ್ವಲ್ಪ ಮಾತ್ರ ಬಾಕಿ ಉಳಿದಿರುವ ಚಂದ್ರನ ಉದಯವಾಗುತ್ತಿದ್ದ ಶುಭಗಳಿಗೆ. ಮುಂದೆ ಬರಲಿರುವ ದಿನಗಳಿಗೆ ಇದು ಪೂರ್ವ ಸಂಕೇತ ಎನ್ನೋಣವೇ?

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಕಲ್ಲೇಟಿನ ಜಿಹಾದ್? -ಕಾಶ್ಮೀರದಲ್ಲಿ ಹೊಸ ತಲೆ ನೋವು

Sun Sep 26 , 2010
ಈ ವರ್ಷದ ಜೂನ್‌ನಿಂದ ಕಾಶ್ಮೀರದಲ್ಲಿ ಹೊಸ ರೀತಿಯ ಪ್ರತಿಭಟನೆಗಳು ಪ್ರಾರಂಭವಾಗಿವೆ. ಭಯೋತ್ಪಾದಕ ಸಂಘಟನೆಗಳ ಕುಯುಕ್ತಿಯಿಂದ ಸಾಮಾನ್ಯ ಜನರು (ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ) ಮಿಲಿಟರಿ ಮತ್ತು ಪೊಲೀಸರ ಮೇಲೆ ಕಲ್ಲೆಸೆದು ಗಲಭೆ ನಡೆಸುತ್ತಿದ್ದಾರೆ. ಸೈನ್ಯವು ಕಾಶ್ಮೀರದಿಂದ ಹೊರಗೆ ಹೋಗುವಂತೆ ಒತ್ತಡ ತರಲು ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಎರಡು ತಿಂಗಳ ಕಾಲ ಸತತವಾಗಿ ಕರ್ಫ಼್ಯೂ ಮುಂದುವರೆಯುವಂತಾಗಿದೆ. ಹೀಗಿದ್ದೂ ಜನರು ಮನೆಗಳಿಂದ ಹೊರಬಂದು ಕರ್ಫ಼್ಯೂ ಉಲ್ಲಂಘಿಸಿ ಕಲ್ಲೆಸೆತ ನಡೆಸಿದ ಘಟನೆಗಳೂ ವರದಿಯಾಗಿದೆ. ಜೂನ್‌ನಿಂದ […]