ಆರೆಸ್ಸೆಸ್ ಮತ್ತಿತರ ಹಿಂದುಸಂಘಟನೆಗಳನ್ನು ಹಣಿಯಲು ಕಾಂಗ್ರೆಸ್ ಹೊರಟಿರುವುದು ಮತ್ತೆ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್‌ನ ಈ ವರಸೆ ಇದೇ ಮೊದಲಲ್ಲ. ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲಿ ಕಾಂಗ್ರೆಸ್ಸು ಗಾಂಧಿಹತ್ಯೆಯ ನೆಪಹಿಡಿದು, ಆರೆಸ್ಸೆಸ್ ಮೇಲೆ ಯುದ್ಧ ಸಾರಿತ್ತು. ಸ್ವತಃ ಅಂದಿನ ಪ್ರಧಾನಿ ನೆಹರೂ, ಬೆಂಗಳೂರಿನ ರೇಸ್‌ಕೋರ್ಸ್ ಮೈದಾನದ ಸಭೆಯಲ್ಲಿ I will Crush RSS, ಭಗವಾಧ್ವಜ ಹಾರಿಸಲು ಒಂದಿಂಚೂ ಜಾಗಕೊಡಲ್ಲ’ ಎಂದು ಗುಡುಗಿದ್ದರು. ’ಇದಕ್ಕಾಗಿ ನನ್ನೆಲ್ಲ ಶಕ್ತಿ ಸುರಿಯುವೆ, ಹೊರಗಿನ ಶಕ್ತಿಯನ್ನೂ ಒಟ್ಟುಗೂಡಿಸುವೆ…. ಎಂದೆಲ್ಲ ನೆಹರೂ ಅಬ್ಬರಿಸುವಾಗ ರಾಮಾಜೋಯಿಸ್, ಕೆ.ಸೂರ್ಯನಾರಾಯಣ ರಾಯರಂತಹವರು ಆಗ 108-20 ವರ್ಷದ ಹುಡುಗರು. ಅದೇ ರೇಸ್‌ಕೋರ್ಸ್ ರಸ್ತೆಯ ಆಚೆಬದಿಯಲ್ಲಿದ್ದ ಜೈಲಿನಲ್ಲಿದ್ದವರು. ಭಾಷಣವೇನಾದರೂ ಕೇಳುತ್ತಾ, ಕಾಣುತ್ತಾ ಅಂತ ಜೈಲು ಕಟ್ಟಡದ ತಾರಸಿ ಏರಿ ನಿಂತವರು. . . .

1975-77ರಲ್ಲಿ ತುರ್ತುಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ ನೈಜ ವಿರೋಧಪಕ್ಷ ಅಂದರೆ ಆರೆಸ್ಸೆಸ್ ಎಂದೇ ಪರಿಗಣಿಸಿರಬೇಕು. ಇಲ್ಲ ಅಂದರೆ ಒಂದು ಮುಕ್ಕಾಲು ಲಕ್ಷ ಆರೆಸ್ಸೆಸಿಗರನ್ನು ಬಂಧಿಸಲು ಹೊರಡುತ್ತಿರಲಿಲ್ಲ.

ರಾಮಜನ್ಮಭೂಮಿಯ ಹಳೇ ಕಟ್ಟಡದ ಪತನ, ಗೋಧ್ರಾ ಮಾರುತ್ತರದ ವಿದ್ಯಮಾನಗಳಲ್ಲಿ ಆ ಕಾಲದ ಕಾಂಗ್ರೆಸ್ ನಾಯಕರು ಆರೆಸ್ಸೆಸ್ಸನ್ನು ಕಟಕಟೆಗೆ ಹತ್ತಿಸಲು, ಇಮೇಜ್ ಖರಾಬ್ ಮಾಡಲು ಏನೆಲ್ಲ ಮಾಡಬಹುದೋ ಎಲ್ಲ ಮಾಡಿದ್ದಾರೆ.

ಇದರಿಂದ ಆರೆಸ್ಸೆಸ್‌ಗೆ ನಷ್ಟವಿರಲಿ, ಸಂಘಟನೆಯನ್ನು ವಿಸ್ತರಿಸಿಕೊಳ್ಳಲು ಲಾಭವೇ ಆಗಿದೆ.

ಅಜ್ಮೀರ್ ಬಾಂಬ್ ಸ್ಫೋಟದ ತನಿಖೆಯ ನೆಪದಲ್ಲಿ ಈಗ ಮತ್ತೆ ಅಂತಹದೊಂದು ಸರದಿ. ಅವತ್ತು ಅಜ್ಮೀರದಲ್ಲಿ ನಡೆದ್ದಾದರೂ ಏನು? ಯಾರೋ ಕಿಡಿಗೇಡಿಗಳು ಅಜ್ಮೀರ್ ದರ್ಗಾದ ಆವರಣದಲ್ಲಿನ ಉದ್ಯಾನವನದ ಕಲ್ಲುಬೆಂಚಿನ ಕೆಳಗೊಂದು ಟೈಮರ್‌ಬಾಂಬ್‌ನ್ನು ಇಟ್ಟು ಓಡಿಹೋಗಿದ್ದರು. ಆ ಸ್ಫೋಟದಲ್ಲಿ ಮೂವರು ಅಮಾಯಕರು ಪ್ರಾಣ ಕಳೆದುಕೊಂಡರು.  ಬಾಂಬ್ ಸ್ಫೋಟ ಅನ್ನೋದು ಹಿಂದು ಜನಸಂದಣಿಯ ಸುತ್ತಲೇ ಆಗುತ್ತಿತ್ತು ಎಂಬುದು ರೂಢಿ. ಆದರೆ ಈ ಸ್ಫೋಟ ದರ್ಗಾದ ಫಾಸಲೆಯಲ್ಲಿ ಆಗಿರುವುದು ತನಿಖೆಗೆ ಹೊರಟ ರಾಜಸ್ಥಾನದ ಏಟಿಎಸ್‌ಗೆ ಹಿಂದು ಸಂಘಟನೆಗಳ ಬಗ್ಗೆ ಸಹಜ ಸಂಶಯ. ಆದರೆ ಕೇಂದ್ರ ಸರಕಾರ ಮೂಗುತೂರಿಸಿ ಆರೆಸ್ಸೆಸ್‌ನ ಕೇಂದ್ರ ನಾಯಕರನ್ನು ಸಿಕ್ಕಿಸಲು ಷಡ್ಯಂತ್ರ ಹೆಣೆದು, ಆರೆಸ್ಸೆಸ್ಸನ್ನು ಸಿಮಿ, ಅಲ್‌ಖೈದಾದಂತಹ ಭಯೋತ್ಪಾದಕ ಸಂಘಟನೆಗಳ ಸಾಲಿಗೆ ಸೇರಿಸಲು ಹೊರಟಿರುವುದು ಈಗ ಚರ್ಚೆಯ ವಿಷಯ.

ಈಗ ಆರೆಸ್ಸೆಸ್ ಬಗ್ಗೆ ’ಶಸ್ತ್ರ’ ಎತ್ತಿರುವ ಕಾಂಗ್ರೆಸ್‌ನ ಇತಿಹಾಸವನ್ನು ಸ್ವಲ್ಪ ಹೊರಳಿ ನೋಡಿದರೆ ಭಯೋತ್ಪಾದಕರ ಜೊತೆ ನೇರ ಷಾಮೀಲಾದ ಅನೇಕ ಸಂಗತಿಗಳು ಹೊರಬೀಳುತ್ತದೆ.

೧೯೯೩ರಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಮೀನುಗಾರಿಕೆ ಸಚಿವರಾಗಿದ್ದ ಮಹಮದ್ ಸುರ್ತಿಗೆ ಸೂರತ್ ಗಲಭೆಯ ವಿಚಾರಣೆಯಲ್ಲಿ ೨೦ ವರ್ಷದ ಸೆರೆಮನೆವಾಸದ ಸಜೆ ವಿಧಿಸಲಾಗಿದೆ.

ದಿಲ್ಲಿಯ ಬಾಂಬ್‌ಸ್ಫೋಟದ ಬಂಧಿತರ ಮನೆಗಳವರು ’ತಮ್ಮವರೆಲ್ಲ ನಿರಪರಾಧಿಗಳು’ ಅಂತ ಬೊಬ್ಬೆ ಹಾಕಿದಾಗ ಕಾಂಗ್ರೆಸ್ ಪಕ್ಷದ ಪ್ರಧಾನಕಾರ್ಯದರ್ಶಿ ದಿಗ್ವಿಜಯಸಿಂಗ್ ಉತ್ತರಪ್ರದೇಶದ ಅಜಂಗಢ್‌ಗೆ ತೆರಳಿ, ಮನೆಗಳಲ್ಲಿ ಕೂತು ಸಾಂತ್ವನ ಹೇಳಿ ಚಹಾ ಕುಡಿದು ಬಂದಿದ್ದಿದೆ.

ಹೈದರಾಬಾದಿನ ಬಾಂಬ್‌ಸ್ಫೋಟ ಪ್ರಕರಣದ ಅನೇಕ ಬಂಧಿತರಿಗೆ ಜಾಮೀನು ಕೊಡಿಸಲು ಕಾಂಗ್ರೆಸ್ಸ್‌ನ ಮುಖಂಡರು, ಮಂತ್ರಿಗಳು ಹಣ, ಕಾನೂನು ನೆರವು, ಜೈಲಿನೊಳಗಿರುವವರಿಗೆ ಬಿರಿಯಾನಿ ಒದಗಿಸಿರುವುದು ಬಹಿರಂಗ ಸತ್ಯ.

ಕೊಯಮತ್ತೂರು ಸರಣಿ ಸ್ಫೋಟದಲ್ಲಿ ಸಿಕ್ಕಿಬಿದ್ದಿದ್ದ ಅನೇಕರು ತಮಿಳು ಮುಸ್ಲಿಂ ಮುನ್ನೇತ್ರ ಕಾಳಗಂ (ಟಿ.ಎಂ.ಎಂ.P.) ನವರಾಗಿದ್ದರು. ಈಗ ಅದೇ ಟಿಎಂಎಂಕೆ ಕಾಂಗ್ರೆಸ್ಸ್‌ನ ಅಂಗಪಕ್ಷಗಳಲ್ಲಿ ಒಂದು.

ಭಯೋತ್ಪಾದನೆ, ಪಾಕಿಸ್ತಾನ ಪರ ಚಟುವಟಿಕೆಗಳಲ್ಲಿ ನೇರಾನೇರ ಪಾಲ್ಗೊಂಡಿರುವ ಮುಸ್ಲಿಂಲೀಗ್‌ನ ಜೊತೆ ಕಾಂಗ್ರೆಸ್‌ನ ಸರಸ ಸಂಬಂಧ ಬಗ್ಗೆ ಹೇಳಬೇಕಾಗಿಲ್ಲ.

ಗೋಧ್ರಾ ಹತ್ಯಾಕಾಂಡದ ಬಂಧಿತರಲ್ಲಿ ಐವರು ನೇರ ಕಾಂಗ್ರೆಸ್ಸ್‌ನ ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳಾಗಿದ್ದರು.

ಇಂದಿರಾ ಹತ್ಯೆಯ ತರುವಾಯ ಸಿಖ್‌ನರಮೇಧ ಪರಾಕ್ರಮದ ನೇತೃತ್ವ ವಹಿಸಿದ್ದ ಸಜ್ಜನಕುಮಾರ್, ಜಗದೀಶ್ ಟೈಟ್ಲರ್ ಇತ್ಯಾದಿ ನಾಯಕರ ಬಗ್ಗೆ ಆರೋಪ ಸಿದ್ಧಪಟ್ಟ ನಂತರವೂ ಕಾಂಗ್ರೆಸ್ಸು ಅವರುಗಳಿಗೆ ಮಂತ್ರಿಸ್ಥಾನ ಕೊಟ್ಟಿದ್ದಿದೆ. ಹೀಗೆ ತಾನೇ ಭಯೋತ್ಪಾದನೆಯ ಸಂರಕ್ಷಣೆಯ ಸುಳಿಯಲ್ಲಿ ಕಾಂಗ್ರೆಸ್ಸು ಸಿಲುಕಿದೆ.

ಜಮ್ಮು ಕಾಶ್ಮೀರದ ಇಸ್ಲಾಮಿಕ್ ಉಗ್ರವಾದಿಗಳು, ಆಂಧ್ರ, ಛತ್ತೀಸಗಢದ ಮಾವೋವಾದಿ, ಈಶಾನ್ಯ ರಾಜ್ಯಗಳ ಮಿಷನರಿ ಪ್ರೇರಿತ ಭಯೋತ್ಪಾದನೆಯಲ್ಲಿ, ಕೇರಳದಲ್ಲಿ ಕಮ್ಯುನಿಷ್ಟರ ಸಂಘರ್ಷದಲ್ಲಿ ತನ್ನ ಅನೇಕ ಪ್ರಮುಖ ಕಾರ್ಯಕರ್ತರನ್ನೂ ಕಳೆದುಕೊಂಡಿರುವ ಆರೆಸ್ಸೆಸ್ಸನ್ನು ಈಗ ’ಬಲಿಪಶು’ ಮಾಡಲು ಕಾಂಗ್ರೆಸ್ ಹೊರಟಿರುವುದರ ಹಿಂದಿನ ಉದ್ದೇಶವೇನು?

ಉತ್ತರ ನೇರ, ಸರಳ. ಮುಸ್ಲಿಂ ಓಟು!

ಸದಾ ಸಗಟು ಮತದಾನದ ಕಾರಣಕ್ಕೆ ಇಡಿಯಾಗಿ ಕಾಣುವ ಮುಸ್ಲಿಂ ಸಮಾಜವನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್, ಹೀಗೆಲ್ಲ ಆರೆಸ್ಸೆಸ್‌ನ ಬಗ್ಗೆ ಮುಗಿಬೀಳುತ್ತದೆ. ವಾಸ್ತವದಲ್ಲಿ ಕಾಂಗ್ರೆಸ್‌ನ ಮುಸ್ಲಿಂ ಓಟಿಗೆ ಆರೆಸ್ಸೆಸ್, ಬಿಜೆಪಿ ಅಡ್ಡಬರುವುದಿಲ್ಲ. ಕಾಂಗ್ರೆಸ್‌ನ ಈ ಬುಟ್ಟಿಗೆ ಸದಾ ಕಣ್ಣು, ಕೈ ಹಾಕುವವರು ತೃತೀಯರಂಗದವರು.

ಇದನ್ನು ಅರ್ಥಮಾಡಿಕೊಳ್ಳಲು ಭಾರತವನ್ನು ಪೂರ್ವ, ಪಶ್ಚಿಮವನ್ನಾಗಿ ನೋಡಬೇಕು. ಹಿಮಾಚಲದಿಂದ-ಕರ್ನಾಟಕದವರೆಗಿನ ಪಶ್ಚಿಮದ ಭಾರತದಲ್ಲಿ ತೃತೀಯರಂಗವಿಲ್ಲ (ಅಪವಾದಕ್ಕೆ ಕರ್ನಾಟಕದಲ್ಲಿ ಜೆಡಿಸ್ ಉಸಿರಾಡುತ್ತಿದೆ.) ಹೀಗಾಗಿ ಈ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಮುಸ್ಲಿಂ ಓಟು ಸಾರಾಸಗಟು ಬರುತ್ತದೆ. ಅದೇ ಕೇರಳದಿಂದ ಉತ್ತರಪ್ರದೇಶ, ಪಶ್ಚಿಮಬಂಗಾಳದವರೆಗಿನ ಪೂರ್ವಭಾರತದಲ್ಲಿ ಬಿಜೆಪಿಯ ಸ್ಥಿತಿ ಅಷ್ಟಕಷ್ಟೆ.  ಇಲ್ಲೆಲ್ಲ ತೃತೀಯರಂಗದ ಅನ್ಯಾನ್ಯ ಪಕ್ಷಗಳದ್ದೇ ಪ್ರಾಬಲ್ಯ. ಈ ಪಕ್ಷಗಳೇ ’ಕಾಂಗ್ರೆಸ್ಸ್‌ಗೆ ಭದ್ರ’ ಎನ್ನಲಾಗಿದ್ದ ಮುಸ್ಲಿಂ ಓಟಿಗೆ ದಾವೇದಾರರಾಗಿರುವುದು. ಈ ಪಕ್ಷಗಳೆಲ್ಲ ಮೂಲದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳೇ ಆಗಿದ್ದೂ ಬಿಜೆಪಿಯೊಂದಿಗೆ ಹೆಜ್ಜೆ ಹಾಕಲು ಮುಸ್ಲಿಂ ಸಗಟು ಮತದ ಭೂತವೇ ಅಡ್ಡಿಯಾಗಿರುವುದು.

ಇಂತಹ ಯಾವುದೋ ರಾಜಕೀಯ ಗಣಿತಗಳ ತಾಕಲಾಟದಲ್ಲಿ ಬಸವಳಿಯುವ ಸ್ಥಿತಿಗೆ ಬಂದಾಗಲೆಲ್ಲ ಕಾಂಗ್ರೆಸ್ಸ್‌ಗೆ ಆರೆಸ್ಸೆಸ್ ವಿರುದ್ಧ ಝಳಪಿಸಬೇಕಾದ ಕತ್ತಿಯ ನೆನಪಾಗುತ್ತದೆ. ಆರೆಸ್ಸೆಸ್ ಕುರಿತಾದ ಕಾರ್ಯಾಚರಣೆ, ತನಿಖೆ, ಹೇಳಿಕೆಗಳ ಸಮರ ಎಲ್ಲವೂ ಮುಸ್ಲಿಮರಿಗೆ ಹೇಗಾದರೂ ಪ್ರಿಯವಾಗಬೇಕೆಂಬ ಕಾಂಗ್ರೆಸ್‌ನ ತಹತಹದ ರಾಜಕೀಯ ನಡೆಯಷ್ಟೆ.

ಕಾಂಗ್ರೆಸ್ ಮುಸ್ಲಿಂ ಓಟಿನ ವಿಷಯದಲ್ಲಿ ಆತಂಕಪಡುವ ಬದಲು ಆರೆಸ್ಸೆಸ್‌ನ ಇನ್ನೊಂದು ಮಗ್ಗಲಿನ ಬಗ್ಗೆ ಗಂಭೀರವಾಗಿ ಮರುಯೋಚನೆ ಮಾಡಬೇಕಿದೆ.

ಆರೆಸ್ಸೆಸ್ ಪ್ರೇರಿತ ಸಂಘಟನೆಗಳು ದಲಿತ, ಆದಿವಾಸಿ ಪ್ರದೇಶಗಳನ್ನು ಆವರಿಸುತ್ತಿರುವುದು! (ಒಂದಿಂಚೂ ಜಾಗ ಕೊಡಲ್ಲ ಅಂದಿದ್ದರು, ಪಾಪ ನೆಹರೂ!

ಏಕಲ್ ವಿದ್ಯಾಲಯ, ವನವಾಸಿ ಕಲ್ಯಾಣ, ಕಾಡುಜನರಿಗಾಗಿ ಆರೋಗ್ಯ ಮಿತ್ರ, ದಲಿತ, ವನವಾಸಿ ಹಟ್ಟಿ-ಹಾಡಿಗಳಲ್ಲಿನ ಸಂತರ ಯಾತ್ರೆ ಇತ್ಯಾದಿ ಕಾರ್ಯಚಟುವಟಿಕೆಗಳ ಮೂಲಕ ಆರೆಸ್ಸೆಸ್, ಕಾಂಗ್ರೆಸ್‌ನ ಪಾರಂಪರಿಕ ಮತದಾರರ ಮನಸ್ಸನ್ನು ಸೆಳೆಯುತ್ತಿರುವುದು. ಇದರ ತೀವ್ರತೆ ಬುಡಕ್ಕೇ ಬಂದು, ನಿಂತ ನೆಲವೇ ಅದುರುತ್ತಿರುವುದು ಅನುಭವಕ್ಕೆ ಬಂದರೂ ಕಾಂಗ್ರೆಸ್ ಈ ಕುರಿತು ಚಕಾರ ಎತ್ತುವುದಿಲ್ಲ. ತನ್ನ ನೆಲೆ ಕರಗುತ್ತಿರುವುದರ ಬಗ್ಗೆ ಕಾಂಗ್ರೆಸ್ಸು ಚರ್ಚಿಸಲೂ ಬಯಸುವುದಿಲ್ಲ. ಆ ಚರ್ಚೆ ಆರೆಸ್ಸ್‌ಸ್ ಬಗೆಗಿನ ’ಶಹಭಾಸ್‌ಗಿರಿ’ ಯಾಗಿ ಹೊರಳಿಬಿಡಬಹುದೆಂಬ ಎಚ್ಚರವೂ ಕಾಂಗ್ರೆಸ್ಸ್‌ಗೆ ಇದ್ದಿರಬೇಕು.

– ವಾದಿರಾಜ್, ಬೆಂಗಳೂರು an article appeared in Vijaya Karnataka dated 10.11.2010)

**************