ಪೇಟೆ ಸಾಕು, ನಡೆಯೋಣ ಹಳ್ಳಿಗೆ!

ಹಳ್ಳಿ ಮೇಲೋ ಪಟ್ಟಣ ಮೇಲೋ? ಶಾಲೆಗಳ ಚರ್ಚಾಕೂಟಗಳಲ್ಲಿ ಇಂಥಾದ್ದೊಂದು ಚರ್ಚೆ ಸಾಮಾನ್ಯವಾಗಿ ಇರುತ್ತಿತ್ತು. ಈ ಪ್ರಶ್ನೆಗೆ ಆಗ ಪರಿಹಾರ ಸಿಕ್ಕಿತ್ತೇ? ಗೊತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಂತೂ ಉತ್ತರವಿಲ್ಲದಂತಾಗಿದೆ. ನಿಖರವಾದ ಉತ್ತರವೊಂದನ್ನು ನಿರೀಕ್ಷಿಸುವುದು ಸಾಧುವೂ ಅಲ್ಲ. ಯಾಕೆಂದರೆ ಈ ಪ್ರಶ್ನೆಗೆ ಉತ್ತರ ಬಹುತೇಕವಾಗಿ ವೈಯಕ್ತಿಕ ಆಸಕ್ತಿ, ಕುಟುಂಬದ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಹಳ್ಳೀಲಿ ಯಾರನ್ನಾದರೂ ಈ ಪ್ರಶ್ನೆ ಕೇಳಿದರೆ ನೂರಕ್ಕೆ ತೊಂಭತ್ತರಷ್ಟು ಜನ ಪೇಟೇನೇ ಒಳ್ಳೆದು ಎನ್ನಬಹುದು. ಅದಕ್ಕೆ ಕಾರಣಗಳೂ ಸಾಕಷ್ಟು ಇರಬಹುದು. ಅದೇ ಪಟ್ಟಣಗಳಲ್ಲಿ ವಾಸಿಸುತ್ತಿರುವವರು ಅಲ್ಲಿನ ಜಂಜಾಟದಿಂದ ಬೇಸತ್ತಿರುತ್ತಾರೆ ಮತ್ತು ಹಳ್ಳಿ ಜೀವನದ ಬಗ್ಗೆ ಒಂದು ರೀತಿಯ ಕೃತ್ರಿಮವಾದ ಸುಂದರ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಲೇಖನದ ಉದ್ದೇಶ ಹಳ್ಳಿ ಮತ್ತು ಪಟ್ಟಣದ ಮಧ್ಯದ ಆಯ್ಕೆಯ ಬಗ್ಗೆ ಅಲ್ಲ, ಬದಲಾಗಿ ಇತ್ತೀಚೆಗೆ ಭಾರತೀಯ ಸಾಮಾಜದಲ್ಲಿ ಮತ್ತು ಪರಿಸರದಲ್ಲಾದ ಬದಲಾವಣೆಗಳ ಕುರಿತು ಒಂದು ಜಿಜ್ಞಾಸೆ – ಸಮಸ್ಯೆಗಳು, ಪರಿಹಾರಗಳು ಹಾಗೂ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವವರ ಬಗ್ಗೆ ಒಂದಿಷ್ಟು ವಿವರಗಳು.

ಮೊದಲಿಗೆ ಕೆಲವೊಂದು ಸರಳ ಮಾಹಿತಿಗಳು. ೨೦೦೮  ಅಂಕಿ-ಅಂಶಗಳ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯ ಶೇ ೩೦ ರಷ್ಟು ಜನ ಪಟ್ಟಣಗಳಲ್ಲಿ (ಮಹಾನಗರಗಳು, ನಗರಗಳು) ವಾಸಿಸುತ್ತಿದ್ದಾರೆ. ಈ ಸಂಖ್ಯೆ ೨೦೩೦ ರ ಹೊತ್ತಿಗೆ ಶೇ ೪೦ ಏರುತ್ತದೆ. ಈಗಿನ ಗತಿಯಲ್ಲೇ ಜನಸಂಖ್ಯೆ ಏರುತ್ತಿದ್ದರೆ ೨೦೩೦ ಕ್ಕೆ ಒಟ್ಟು ಜನಸಂಖ್ಯೆ ೧೪೭ ಕೋಟಿಗಳಷ್ಟಾಗುತ್ತದೆ ಮತ್ತು ಆ ಹೊತ್ತಿಗೆ ಶೇ ೪೦, ಅಂದರೆ ಸುಮಾರು ೬೦ ಕೋಟಿ ಜನ ಪಟ್ಟಣಗಳಲ್ಲಿ ವಾಸಿಸುತ್ತಾರೆ! ಇದು ಈಗಿನ ಪಟ್ಟಣಿಗರ ಸಂಖ್ಯೆ (ಸುಮಾರು ೩೫ ಕೋಟಿ) ಗಿಂತ ೨೫ ಕೊಟಿ ಹೆಚ್ಚು. ಈಗ ಈ ಅಂಕೆ ಸಂಖ್ಯೆಗಳಿಂದ ತಿಳಿದು ಬರುವುದಾದರೂ ಏನು? ಈಗಾಗಲೇ ಭಾರತದ ನಗರಗಳು ಕೊಳಚೆ ಪ್ರದೇಶಗಳಿಂದ ತುಂಬಿ ಹೋಗಿವೆ. ಕುಡಿಯುವ ನೀರಿನ ಸಮಸ್ಯೆ, ನೆರೆ ಸಮಸ್ಯೆ ಇತ್ಯಾದಿ ಗಂಭೀರ ಸ್ಥಿತಿ ತಲುಪಿವೆ. ಮುಂಬೈಯಲ್ಲಿ ಈ ಬಾರಿ ಮುಂಗಾರು ಕೆಲವೇ ದಿನ ತಡವಾಗಿದ್ದರೆ ಇಡೀ ಮಹಾನಗರ ಕುಡಿಯುವ ನೀರಿನ ಬರ ಎದುರಿಸಬೇಕಾಗುತ್ತಿತ್ತು! ಇನ್ನು ಸಣ್ಣ ಪುಟ್ಟ ನಗರಗಳಲ್ಲೂ ಇದೇ ಪರಿಸ್ಥಿತಿ. ಇಂತಿರುವಾಗ ನಗರಗಳ ಜನಸಂಖ್ಯೆ ಈಗಿರುವುದಕ್ಕಿಂತ ಹೆಚ್ಚು ಕಮ್ಮಿ ಎರಡರಷ್ಟಾದರೆ ಹೇಗಾಗಬೇಡ! ಯೋಚಿಸಿದರೆ ಭಯವಾಗುತ್ತದೆ. ಇಂಥ ನಗರಗಳಲ್ಲೇ ನಮ್ಮ ಭವಿಷ್ಯದ ಬದುಕು ಕಟ್ಟಿಕೊಳ್ಳಬೇಕೇ? ಯೋಚಿಸಬೇಕಾದ್ದೇ.

ನಗರಗಳ ಬಗ್ಗೆ ನೋಡಿದ್ದಾಯಿತು, ಈಗ ಹಳ್ಳಿಯತ್ತ ಹೋಗೋಣ. ಹಳ್ಳಿಯಿಂದ ಜನರೆಲ್ಲಾ ಗುಳೆ ಹೋಗುತ್ತಿದ್ದಾರೆ. ಹಾಗಾಗಿ ಅಲ್ಲಿ ಸಂಪನ್ಮೂಲಗಳು ಉಳಿದಿರುತ್ತವೆ, ಹಾಗಾಗಿ ಹಳ್ಳಿಗಳೇ ವಾಸಿ ಎಂದು ಹೇಳುವ ಸ್ಥಿತಿ ಇಲ್ಲ ಈಗಿನ ಗ್ರಾಮೀಣ ಭಾರತದಲ್ಲಿ. ಯಾವ ರೀತಿಯಲ್ಲಿ ನೋಡಿದರೂ ಹಳ್ಳಿಗಳು ಪಟ್ಟಣಗಳಿಂತ ಹೀನಾಯ ಸ್ಥಿತಿಯಲ್ಲಿವೆ. ಇಲ್ಲಿ ನೀರು ಇಲ್ಲ, ವಿದ್ಯುತ್ ಇಲ್ಲ, ರಸ್ತೆ ಇಲ್ಲ ಆಸ್ಪತ್ರೆ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕುಪೋಷಣೆ, ಅನಕ್ಷರತೆ, ವ್ಯಸನಗಳು, ಕುಟುಂಬ ಕಲಹಗಳು ಗ್ರಾಮೀಣ ಸಮುದಾಯಗಳನ್ನು ಕಿತ್ತು ತಿನ್ನುತ್ತಿವೆ. ಸಾಲದ ಸುಳಿಯಲ್ಲಿ ಸಿಕ್ಕಿ ಜೀವ ತೆರುತ್ತಿದ್ದಾರೆ. ಇದೂ ಸಾಲದೆಂಬಂತೆ ನೆರೆ, ಬರ ಮುಂತಾದ ಪ್ರಾಕೃತಿಕ ವಿಕೋಪಗಳು. ಇವೆಲ್ಲವನ್ನೂ ನೋಡಿದರೆ ಜನ ಹಳ್ಳಿಗಳಿಂದ ವಲಸೆ ಹೋಗದೆ ಇನ್ನೇನು ಮಾಡಬೇಕು ಎಂಬ ಪ್ರಶ್ನೆ ಬರುವುದು ಸಹಜ. ಅದೇನೇ ಸಮಸ್ಯೆಗಳಿದ್ದರೂ ಒಂದು ಮಾತಂತೂ ನಿಜ. ಮನಸ್ಸು ಮಾಡಿದರೆ ಹಳ್ಳಿಗಳ ಸಮಸ್ಯೆ ಪರಿಹರಿಸಬಹುದು. ಆದರೆ ಜಾಗತಿಕ ತಾಪಮಾನದ ಈ ಯುಗದಲ್ಲಿ ಕೇಂದ್ರೀಕೃತ ವ್ಯವಸ್ಥೆಗಳಾದ ಮಹಾನಗರಗಳು, ಅವುಗಳಿಗೆ ಮೂಲಭೂತ ಅವಶ್ಯಕತೆಗಳಾದ ನೀರು ಆಹಾರ ಪೂರೈಸುವುದೇ ದುಸ್ತರವಾಗಬಹುದು. ಇನ್ನು  ಅವುಗಳಲ್ಲಿ ಜೀವಿಸುವ ಭೋಗಜೀವಿಗಳಿಗೆ ಬೇಕಾದ ಭೋಗವಸ್ತುಗಳನ್ನು ಎಲ್ಲಿಂದ ತರಬೇಕು? ಹಠಕ್ಕೆ ಬಿದ್ದವರಂತೆ ಪ್ರಾಕೃತಿಕ ಸಂಪನ್ಮೂಲಗಳನ್ನೂ ಕೊಳ್ಳೆ  ಹೊಡೆಯುತ್ತಿರುವುದೂ ಇದೇ ಪಟ್ಟಣಗಳ ಅಭಿವೃಧ್ಧಿಗಾಗಿಯೇ. ಹಾಗಾಗಿ ಭೂಮಿ ಮೇಲೆ ಬದುಕು ಅಸಹನೀಯವಾಗುವುದಕ್ಕಿಂತ ಮೊದಲು ನಗರಗಳ ಬೆಳವಣಿಗೆಗೆ ಬ್ರೇಕ್ ಹಾಕುವುದರಲ್ಲೇ ನಮ್ಮ ಭವಿಷ್ಯ ಅಡಗಿದೆ.

ಹಾಗೆ ನೋಡಿದರೆ ಇದು ಹಳ್ಳಿ ಮತ್ತು ಪಟ್ಟಣಗಳ ಪ್ರಶ್ನೆ ಅಲ್ಲ. ಜನಸಾಮಾನ್ಯರಿಗೆ ಇದು ಸಾವು ಬದುಕಿನ ಪ್ರಶ್ನೆ. ಬಹುತೇಕ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಹಳ್ಳಿಯಲ್ಲಿ ಬದುಕುವುದಕ್ಕಿಂತ ಪಟ್ಟಣ ವಾಸಿ ಅಂತ ಹೋಗುತ್ತಿದ್ದಾರೆಯೇ ಹೊರತು ಪಟ್ಟಣದ ಮೇಲಿನ ಆಸೆಗಲ್ಲ. ಇನ್ನೂ ಖಚಿತವಾಗಿ ಹೇಳುವುದಾದರೆ, ಗ್ಯಾಟ್ ಒಪ್ಪಂದದ ಮೂಲಕ ಪ್ರಾರಂಭವಾದ ತಥಾಕಥಿತ ಆರ್ಥಿಕ ಸುಧಾರಣಾ ಕ್ರಮಗಳ ಮೂಲಕ ಸರಕಾರಗಳು ರೈತರನ್ನು ಅವರಿಗರಿವಿಲ್ಲದಂತೆಯೇ ಬಲವಂತವಾಗಿ ಒಕ್ಕಲೆಬ್ಬಿಸುವುದರಲ್ಲಿ ನಿರತವಾಗಿವೆ. ಕೆಲವು ಕಡೆ ಕೈಗಾರಿಕೆಗಳಿಗಾಗಿ ಪ್ರತ್ಯಕ್ಷ ಒಕ್ಕಲೆಬ್ಬಿಸುವಿಕೆ ನಡೆಯುತ್ತಿದ್ದರೆ, ಉಳಿದೆಡೆ ಬೆಳೆ ಸಾಲ, ಬಿತ್ತನೆ ಬೀಜ, ಕೀಟನಾಶಕಗಳು, ಲಾಭಕೋರ ಕಂಪೆನಿಗಳು, ದುಶ್ಚಟಗಳು ಇತ್ಯಾದಿಗಳ ಮೂಲಕ ಜನರ ಪ್ರಮುಖ ಆದಾಯಮೂಲವಾದ ಕೃಷಿಯನ್ನು ಅನುತ್ಪಾದಕಗೊಳಿಸಿ, ಆ ಮೂಲಕ ಜನರನ್ನು ಒಕ್ಕಲೆಬ್ಬಿಸುವ ಅತ್ಯಂತ ಹೇಯವಾದ ಪರೋಕ್ಷ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಜನ ಹಳ್ಳಿಯಿಂದ ಗುಳೆ ಹೋಗುತ್ತಿಲ್ಲ, ಅಲ್ಲಿಂದ ಅವರನ್ನು ಉಪಾಯವಾಗಿ ಒಕ್ಕಲೆಬ್ಬಿಸಲಾಗುತ್ತಿದೆ. ವಿಚಿತ್ರವೆಂದರೆ ಈ ಎಲ್ಲಾ ನಾಟಕಗಳು ನಡೆಯುತ್ತಿರುವುದು ಅಭಿವೃಧ್ಧಿ ಹೆಸರಿನಲ್ಲಿ. ಎಂಥಾ ವಿಪರ್ಯಾಸ! ದೇಶದ ದುರಂತವೆಂದರೆ ಸಮಾಜದ ಅತ್ಯಂತ ಕೆಳಮಟ್ಟದಲ್ಲಿ ನಡೆಯುತ್ತಿರುವ ಈ ಅತ್ಯಾಚಾರ, ಅನಾಚಾರ ಅನ್ಯಾಯಗಳನ್ನು ಅರ್ಥಮಾಡಿಕೊಂಡವರು ಕೆಲವೇ ಜನ. ಅದರಲ್ಲೂ ಆಡಳಿತ ಚುಕ್ಕಾಣಿ ಹಿಡಿದಿರುವವರಂತೂ ಈ ಬಗ್ಗೆ ಯೋಚಿಸಿಯೇ ಇಲ್ಲ. ಅಥವಾ ಅವರೇ ಈ ಅನ್ಯಾಯಗಳಲ್ಲಿ ಪಾಲುದಾರರು ಎಂದ ಮೇಲೆ ಅವರಿಂದ ಕಳಕಳಿ ನಿರೀಕ್ಷಿಸುವುದೆಂತು? ಶಾಸಕಾಂಗ ಕರ್ಯಾಂಗಗಳು ಈ ಪಾಪಕಾರ್ಯದಲ್ಲಿ ಭಾಗಿ ಎಂದಾದ ಮೇಲೆ ನ್ಯಾಯಾಂಗ ಈ ಬಗ್ಗೆ ಏನು ಮಾಡಲಾದೀತು? ಪ್ರಜಾಪ್ರಭುತ್ವದ ಮೂರು ಆಧಾರ ಸ್ತಂಭಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜನರನ್ನು ಹಣಿಯಲು ನಿಂತಿರುವಾಗ, ಬೆರಳೆಣಿಕೆಯಷ್ಟು ಮಾಧ್ಯಮ ಮಿತ್ರರನ್ನು ಬಿಟ್ಟರೆ ಉಳಿದಂತೆ ಮಾಧ್ಯಮಗಳೂ ಉದ್ಯಮಿ, ರಾಜಕಾರಣಿಗಳ ಪರವಾಗಿ ನಿಂತಿರುವಾಗ ಜನಸಾಮಾನ್ಯರ ಮಾತಿಗೆ ಬೆಲೆಯೆಲ್ಲಿರುತ್ತದೆ. ಇದು ಇಂದಿನ ಭಾರತದ ಚಿತ್ರಣ.

ಇಷ್ಟೆಲ್ಲಾ ಇದ್ದರೂ ಅಲ್ಲೊಂದು ಇಲ್ಲೊಂದು ಅಪವಾದ ಎಂಬಂತೆ ಕೆಲವು ವ್ಯಕ್ತಿಗಳಿರುತ್ತಾರೆ. ಅಂತಹವರು “ಏನು ಮಾಡುವುದು, ಎಲ್ಲಾ ಹಾಳಾಗಿ ಹೋಗಿದೆ” ಎಂದು ಯೋಚಿಸುವ ಬದಲಾಗಿ ತಾವೇ ಮುಂದೆ ನಿಂತು ಏನಾದರು ಪರಿಹಾರ ಹುಡುಕುವಂಥವರು. ಪ್ರವಾಹದ ವಿರುಧ್ಧ ಈಜುವುದೇ ಅವರ ಜೀವನೋದ್ದೇಶವೋ ಎಂಬಂತಿರುತ್ತಾರೆ. ಕೆಟ್ಟು ಕೆರ ಹಿಡಿದಿರುವ ಸಮಾಜಕ್ಕೆ ಏನಾದರೊಂದು ಮದ್ದು ಕೊಡಬೇಕು, ಬಾಯಾರಿ ಸಾಯುತ್ತಿರುವ ವ್ಯಕ್ತಿಗೆ ತಂಪು ಮಜ್ಜಿಗೆ ಕೊಟ್ಟಂತೆ ಅರಾಜಕತೆಯ ಕಡೆಗೆ ಜಾರುತ್ತಿರುವ ಸಮಾಜಕ್ಕೆ ಹುಲ್ಲುಕಡ್ಡಿಯಂತಾದರೂ ಆಗಬೇಕು ಎಂಬುದೊಂದು ಆಸೆ ಅವರಿಗೆ. ಇಂತಹವರಲ್ಲಿ ಕೆಲವರು ನಮ್ಮ ನಿಮ್ಮ ಮಧ್ಯದಲ್ಲೇ ಇರಬಹುದು ಅಥವಾ ಪತ್ರಿಕೆಗಳಲ್ಲಿ ಈ ಬಗ್ಗೆ ಓದಿರಬಹುದು. ಮೈಸೂರಿನವರಾದ ಪವಿತ್ರಾ ಗುರುಪ್ರಸಾದ್ ಅಂತಹವರಲ್ಲಿ ಒಬ್ಬರು. ಪ್ರತಿಷ್ಠಿತ ಇನ್ಫೋಸಿಸ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಪವಿತ್ರಾ ಇದ್ದಕ್ಕಿದ್ದಂತೆ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಗ್ರಾಮ ಪಂಚಾಯ್ತಿಯೊಂದರಲ್ಲಿ ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ (ಪಿ.ಡಿ.ಒ) ಆಗಿ ಸೇರಿಕೊಳ್ಳುತ್ತಾರೆ. ಮೈಸೂರು ತಾಲೂಕಿನ ಮೋಸಂಬಾಯನ ಹಳ್ಳಿ ಎಂಬ ಹಳ್ಳಿಯಲ್ಲಿ ಗುರುತರ ಬದಲಾವಣೆಗಳಿಗೆ ಕಾರಣವಾಗಿದ್ದಾರೆ. ಪ್ರತಿದಿನ ಬೆಳಗ್ಗೆ ಐದೂವರೆಗೆಲ್ಲ ಮನೆ ಬಿಡುವ ಪವಿತ್ರಾ ಬೆಳಗ್ಗೆ ಆರರಿಂದ ಸಂಜೆ ಆರರ ತನಕ ಆಫೀಸಲ್ಲೇ ಇರುತ್ತಾರೆ. ಮೊದಮೊದಲು ಬೆಳ್ಳಂಬೆಳಗ್ಗೆ ಆಫೀಸಿಗೆ ಬರುತ್ತಿದ್ದ ಅವರನ್ನು ನೋಡಿ ಗ್ರಾಮಸ್ಥರು ಆಕೆ ಯಾರೋ ಕಸ ವಿಲೇವಾರಿ ಮಾಡುವವರಿರಬೇಕು ಅಂದುಕೊಂಡಿದ್ದರಂತೆ! ತಾವು ಅಧಿಕಾರ ವಹಿಸಿಕೊಂಡ ಬಳಿಕ ಪವಿತ್ರಾ ಅವರು ಗ್ರಾಮ ಸಭೆಗಳನ್ನು ನಿಗದಿತವಾಗಿ ನಡೆಸುತ್ತಿದ್ದು, ತಮ್ಮ ಪಂಚಾಯತ್ ಸುಪರ್ದಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೂ ಸ್ವತಹ ಭೇಟಿ ನಿಡುತ್ತಾರೆ. ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಸೂಕ್ತ ಲಸಿಕೆ ಹಾಕಿಸುವುದು, ಸ್ವಚ್ಚತಾ ಕಾರ್ಯಕ್ರಮಗಳು, ವಿದ್ಯುತ್, ನೀರು ಸರಬರಾಜು ಮತ್ತಿತರ ಮೂಲಭೂತ ಸೌಕರ್ಯಗಳನ್ನು ಸ್ವತಹ ತಾವೇ ಮುಂದೆ ನಿಂತು ಕೊಡಿಸಿದ್ದಾರೆ. ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳ ಸಹಯೋಗದೊಂದಿಗೆ ಗ್ರಾಮೀಣ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಸುಧಾರಣೆಗಳನ್ನು ತಂದಿದ್ದಾರೆ. ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಆಗಿರುವ ಪತಿ ಶ್ರೀ ಗುರುಪ್ರಸಾದ್ ಅವರ ಬೆಂಬಲ ತಮಗಿರುವುದೆಂದು ಹೇಳಲು ಮರೆಯದ ಪವಿತ್ರಾ ಅವರು ಮುಂದಿನ ದಿನಗಳಲ್ಲಿ ಸರಕಾರದ ಸೌಲಭ್ಯಗಳನ್ನು ಸೂಕ್ತ ಫಲಾನುಭವಿಗಳಿಗೆ ತಲುಪಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

ಇಲ್ಲೊಬ್ಬ ಯುವ ಮೆಕ್ಯಾನಿಕಲ್ ಇಂಜಿನಿಯರ್. ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಕೆಲವು ದಿನ ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಸಂಸ್ಥೆಯಲ್ಲಿ ಕೆಲಸ ಮಾಡಿ, ನಂತರ ಸಾಫ್ಟ್ವೇರ್ ಇಂಜಿನಿಯರ್ ಆದರು. ಮೊದಲಿನದಕ್ಕಿಂತ ವಿಪರೀತ ಕೆಲಸ ಎನ್ನಿಸತೊಡಗಿತು. ಆಗ ಅವರಿಗೆ ’ಮೆದುಳಿಗೆ ಕೈ ಹಾಕುವುದು’ ಎನ್ನುವ ಶಬ್ದದ ಅರ್ಥ ಆಗತೊಡಗಿತು. ಆ ಸುಸ್ತನ್ನು ಪರಿಹರಿಸಿಕೊಳ್ಳಲು ವಿವಿಧ ಪ್ರಯತ್ನಗಳನ್ನು ಮಾಡಿದರು. ಕೊನೆಗೆ ಶ್ರೀ ಶ್ರೀ ಅವರ ಆರ್ಟ್ ಆಫ್ ಲಿವಿಂಗ್ ನ ಸುದರ್ಶನ ಕ್ರಿಯಾ ಯೋಗದ ಮೂಲಕ ಸ್ವಲ್ಪ ಸಮಾಧಾನ ದೊರೆಯಿತು. ಒಂದು ದಿನ ಆ ಅಭ್ಯಾಸ ನಿಲ್ಲಿಸಿದರೂ ಸುಸ್ತಾಗುತ್ತಿತ್ತು. ಬಾಲ್ಯದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದ ದೃಢವಾದ ಶರೀರಕ್ಕೂ ಕಷ್ಟ ಎನಿಸತೊಡಗಿತ್ತು ಈ ಹೊಸ ಕೆಲಸ. ಹಾಗೂ ಹೀಗೂ ಮಾಡಿ ಸಾಫ್ಟವೇರ್ ಕೂಲಿ ಕೆಲಸ ಮಾಡುವಾಗ ಇದರಲ್ಲಿ ಏನೂ ಸಾರ್ಥಕತೆ ಇಲ್ಲ ಎಂಬುದು ದೃಢವಾದ ನಂತರ ಹಳ್ಳಿಯ ಕಡೆ ಯೋಚನೆ ಹರಿಯಿತು. ಈಗ ಇವರು ಹಳ್ಳಿಯ ಹತ್ತಿರವೇ ಇರುವ ಇನ್ನೊಂದು ಪಟ್ಟಣದಲ್ಲಿ ಸಂಬಳದ ದೃಷ್ಟಿಯಿಂದ ಸಾಮಾನ್ಯ ಎನಿಸಬಹುದಾದ ಅಧ್ಯಾಪಕ ವೃತ್ತಿಯಲ್ಲಿದ್ದಾರೆ. ಹಿಂದೆಂದೂ ಸಿಗದ ಆನಂದ ಸಮಾಧಾನಗಳು ಹಳ್ಳಿಯ ಪರಿಸರದಲ್ಲಿ ಮತ್ತು ಪಾಠ ಹೇಳುವ ಈ ಕೆಲಸದಿಂದ ಸಿಗುತ್ತಿವೆ ಎನ್ನುವುದು ಅವರ ಮುಕ್ತ ಅನಿಸಿಕೆ. ಇನ್ನೊಂದು ಕಡೆ ಪ್ರಿನ್ಸಿಪಾಲರಾಗಿದ್ದವರ ಮಗನೊಬ್ಬ ಇಂಜಿನಿಯರ್ ಆಗಿ ಬೆಂಗಳೂರಿಗೆ ಬಂದು ಒಳ್ಳೆಯ ಕೆಲಸವೊಂದನ್ನು ಗಿಟ್ಟಿಸಿಕೊಂಡರು. ಅಪ್ಪನಿಗೆ ಹೋಲಿಸಿದಾಗ ಕೈತುಂಬ ಎನಿಸುವ ಸಂಬಳ. ಅದರ ಉತ್ಸಾಹದಲ್ಲಿ ತಾನು ದಿನಕ್ಕೆ ೧೨-೧೪ ಗಂಟೆ ದುಡಿಯುತ್ತಿದ್ದೇನೆ ಎಂಬ ಪರಿವೆಯೂ ಇಲ್ಲದೆ ಕೆಲಸ ಮಾಡುತ್ತಿದ್ದರು. ಸಂಬಳ ಚೆನ್ನಾಗಿದ್ದದ್ದರಿಂದ ಹೆಂಡತಿ ಅಮ್ಮ ಯಾರೂ ಕೂಡಾ ತಡವಾಗಿ ಮನೆಗೆ ಬಂದರೆ ಬೇಸರಿಸಿಕೊಳ್ಳುತ್ತಿರಲಿಲ್ಲ. ಆದರೆ ಒಮ್ಮೆ ಕೆಲಸದ ಕಾರಣಕ್ಕಾಗಿ ಅವರು ಅಮೇರಿಕಕ್ಕೆ ಹೋಗಬೇಕಾಯಿತು. ಅವರ ನಿರೀಕ್ಷೆಯಲ್ಲಿ ಕಂಪನಿಯ ಅಲ್ಲಿನ ಅಧಿಕಾರಿಗಳು, ಪ್ರಮುಖರು ತನಗಿಂತ ಹೆಚ್ಚು ಕೆಲಸ ಮಾಡುತ್ತಾರೆ ಎಂದಿತ್ತು. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಅವರಿಗೆ ಆಶ್ಚರ್ಯ ಆಘಾತಗಳು ಎರಡೂ ಉಂಟಾದವು. ಅಲ್ಲಿನವರು ದಿನಕ್ಕೆ ಕೇವಲ ೪-೬ ಗಂಟೆ ಮಾತ್ರ ಕೆಲಸ ಮಾಡುತ್ತಿದ್ದರು. ಇವರು ಹೆಂಡತಿ ಮಕ್ಕಳು ಅಮ್ಮ-ಅಪ್ಪ, ಆರೋಗ್ಯ, ಕುಟುಂಬದ ಹೊಣೆಗಾರಿಕೆ ಎಲ್ಲವನ್ನು ಬಿಟ್ಟು ಕತ್ತೆಯಂತೆ ದುಡಿಯುತ್ತಿದ್ದರೆ ಅಮೇರಿಕದಲ್ಲಿರುವ ಪ್ರಮುಖರು ಲೋಕಾಭಿರಾಮವಾಗಿ ಹರಟುತ್ತಾ ಕಾಲ ಕಳೆಯುತ್ತಿದ್ದಾರೆ! ಭಾರತಕ್ಕೆ ವಾಪಸಾದವರೇ ಕಂಪನಿಗೆ ರಾಜೀನಾಮೆ ನೀಡಿದರು. ಆ ಪರದೇಸೀ ಅಮೇರಿಕದವರಿಗಾಗಿ ಕೆಲಸ ಮಾಡುವ ಬದಲು ನನ್ನ ಊರಿನ ಹುಡುಗರಿಗೆ ಪಾಠ ಹೇಳಿಕೊಡುವ ಕೆಲಸ ಮಾಡುತ್ತೇನೆ ಎಂದು ನಿಶ್ಚಯಿಸಿ, ಊರಿನ ಕಾಲೇಜೊಂದರಲ್ಲಿ ಅಧ್ಯಾಪಕನಾಗಿ ಸೇರಿಕೊಂಡರು. ಮೊದಲಿನ ಸಂಬಳದ ಕಾಲುಭಾಗದಷ್ಟು ಹಣ ದೊರೆಯುತ್ತಿದ್ದರೂ ಮಾನಸಿಕ ನೆಮ್ಮದಿ ಮಾತ್ರ ತುಂಬಾ ಹೆಚ್ಚಾಗಿದೆ ಎನ್ನುತ್ತಾರೆ ಆ ಅಧ್ಯಾಪಕರು. ತಮ್ಮ ತಂದೆಯವರು ಮಾಡುತ್ತಿದ್ದ ಕೆಲಸ ಸಾರ್ಥಕವಾದದ್ದು ಎಂದು ಅವರಿಗೆ ಈಗ ಎನಿಸತೊಡಗಿದೆಯಂತೆ!. ಇನ್ನೊಂದು ಘಟನೆ ಕೇಳಿ. ಬೆಂಗಳೂರಿನಲ್ಲಿ ಮನೆ ಕಟ್ಟಿಸಿಕೊಂಡು ಕೊನೆಯವರೆಗೆ ಇಲ್ಲೇ ಇದ್ದುಬಿಡುವ ಯೋಚನೆ ಮಾಡಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರು ಈ ಮಹಾನಗರದ ಮಾಲಿನ್ಯ, ಗದ್ದಲ, ಗಡಿಬಿಡಿ, ಗೊಂದಲ, ಸ್ಪರ್ಧೆಗಳಿಂದ ಬೇಸತ್ತು ತಮ್ಮ ಉಳಿದ ಜೀವನವನ್ನಾದರೂ ಶಾಂತವಾಗಿ ಹಳ್ಳಿಯಲ್ಲಿ ಮತ್ತು ಕೃಷಿ ಕಾರ್ಯದಲ್ಲಿ ತೊಡಗಿಸಬೇಕೆಂದು ಜಮೀನು ಖರೀದಿಸಿ, ಹಳ್ಳಿಗೆ ಹೋಗಿ ಅಲ್ಲಿ ವಾಸವಾಗಿದ್ದಾರೆ. ಈಗ ಅವರ ಮುಖದಲ್ಲಿ ಸಮಾಧಾನ ಸಂತೃಪ್ತಿಗಳು ಎದ್ದು ಕಾಣುತ್ತಿವೆ!

ಇನ್ನು ಬೆಂಗಳೂರಿನಲ್ಲಿ “ಯುಥ್ ಫಾರ್ ಸೇವಾ” ಎಂಬ ಸೇವಾ ಸಂಸ್ಥೆಯೊಂದಿದೆ. ಸಾವಿರಕ್ಕೂ ಮಿಕ್ಕಿ ಸೇವಾರತರು, ಅದರಲ್ಲೂ ಬಹುತೇಕರು ವಿವಿಧ ಸಾಫ್ಟ್ ವೇರ್ ಕಂಪೆನಿಗಳಲ್ಲಿ ಉದ್ಯೋಗಗಳಲ್ಲಿರುವಂಥವರು. ಈ ಸಂಸ್ಥೆಯು ವೆಂಕಟೇಶ್ ಮೂರ್ತಿ ಎಂಬವರ ಕನಸಿನ ಕೂಸು. ೧೯೯೦ ರಲ್ಲಿ ಸುರತ್ಕಲ್ ಎನ್ ಐ ಟಿ ನಲ್ಲಿ ಇಂಜಿನಿಯರಿಂಗ್ ಮುಗಿಸಿದ ಮೂರ್ತಿ ನಂತರ ಎರಡು ವರ್ಷಗಳ ಕಾಲ ಪೂನಾದಲ್ಲಿ ಉದ್ಯೋಗದಲ್ಲಿದ್ದರು.  ೧೯೯೨ ರಲ್ಲಿ ಅಮೇರಿಕಾಕ್ಕೆ ಹೋಗಿ ಅಲ್ಲಿ ಹದಿನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದರು. ಆ ಸಮಯದಲ್ಲಿ ಬಾಲಗೋಕುಲಮ್, ಸೇವಾ ಇಂಟರ್ನ್ಯಾಶನಲ್ ಇತ್ಯಾದಿ ಸಂಘ ಸಂಸ್ಥೆಗಳ ಒಡನಾಟ ಬೆಳೆಸುವ ಯೋಗ ಬಂದಿತು. ಆ ನಿಟ್ಟಿನಲ್ಲಿ ಎರಡು ವರ್ಷಗಳ ಕಾಲ (೧೯೯೭-೧೯೯೯) ವೆಸ್ಟ್ ಇಂಡೀಸ್‌ನಲ್ಲಿ ಹಿಂದು ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಪೂರ್ಣಾವಧಿ ಸಮಾಜಸೇವೆಯಲ್ಲಿ ನಿರತರಾಗಿದ್ದರು. ೨೦೦೭ ರಲ್ಲಿ ಭಾರತಕ್ಕೆ ಮರಳಿದ ಮೂರ್ತಿ ೨೦೦೮ ಮೇ ತಿಂಗಳಿನಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಪೂರ್ತಿ ಸಮಯವನ್ನು ಯುಥ್ ಫಾರ್ ಸೇವಾ ಸಂಸ್ಥೆಗೆ ಮೀಸಲಿಲಿಟ್ಟಿದ್ದಾರೆ.

ಮೇಲಿನ ಉದಾಹರಣೆಗಳು ಏನು ಹೇಳುತ್ತವೆ? ಮೊದಲನೆಯದಾಗಿ ಹಳ್ಳಿಗೆ ಮರಳುವುದೆಂದರೆ ಹಾರೆ ಗುದ್ದಲಿ ಹಿಡಿದು ಮೈಮುರಿದು ಕೆಲಸ ಮಾಡುವುದೊಂದೇ ಅಲ್ಲ. ಹಳ್ಳಿ ಎಂದರೆ ಅದೂ ಒಂದು ಸಮಾಜ. ಅಲ್ಲಿ ಬೆಳೆ ಬೆಳೆಯುವವನು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸಮಾಜದ ಇತರ ಅಂಗಗಳು. ಅಲ್ಲಿ ಶಾಲೆ ಬೇಕು ಆಸ್ಪತ್ರೆ ಬೇಕು ಅಂಗಡಿ ಮುಂಗಟ್ಟುಗಳು ಬೇಕು ಮತ್ತು ಅವು ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಾಗಬೇಕು. ಮಾರುಕಟ್ಟೆ ವಿಕೇಂದ್ರೀಕೃತಗೊಂಡಾಗ ಭ್ರಷ್ಟಾಚಾರ ಕಡಿಮೆಯಾಗುತ್ತದೆ, ರೈತರಿಗೆ ಬೆಳೆ ಲಾಭದಾಯಕವಾಗುತ್ತದೆ. ಇವೆಲ್ಲ ಸಾಧ್ಯವಾಗಬೇಕಾದರೆ ಯುವ ಮನಸುಗಳು ಅತ್ತ ಹೊರಳಬೇಕು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕೆಲವು ಯುವಕರು ಪಟ್ಟಣಗಳಲ್ಲಿ ಅನ್ಯಮನಸ್ಕರಾಗಿ ಜೀವಿಸುತ್ತಿದ್ದಾರೆ. ತಾವು ಹುಟ್ಟಿ ಬೆಳೆದ ಹಳ್ಳಿಗೆ ಏನಾದರೂ ಒಳ್ಳೆಯದು ಮಾಡಬೇಕೆಂಬ ತುಡಿತ ಅವರಲ್ಲಿ ಇದ್ದೇ ಇರುತ್ತದೆ. ಆದರೆ ಯಾವ ರೀತಿ ಒಳ್ಳೆಯದು ಮಾಡಬೇಕೆಂದು ಗೊತ್ತಿರುವುದಿಲ್ಲ ಹಾಗೂ ಹಳ್ಳಿಗೆ ಮರಳಲು, ಈಗಿರುವ ಕೆಲಸ ಬಿಡಲು ಏನೋ ಒಂದು ಅಂಜಿಕೆ ಇದ್ದೇ ಇರುತ್ತದೆ. ಅಂತಹವರಿಗೆ ಮೇಲಿನ ಉದಾಹರಣೆಗಳು ಸ್ಪೂರ್ತಿಯಾಗಲಿ ಅಲ್ಲವೇ?

(an aticle by Sri Mahesh Prasad Neerkaje appeared in Pungava-Nov-15-2010)

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS to hold a nationwide protest on November 10: ಹಿಂದು ವಿರೋಧಿ ಕೇಂದ್ರ ಸರಕಾರದ ವಿರುದ್ಧ ಆರೆಸ್ಸೆಸ್ ಪ್ರತಿಭಟನಾ ಧರಣಿ

Fri Nov 5 , 2010
RASHTRIYA SWAYAMSEVAK SANGH – press release New Delhi: The 3-day meeting of the Akhil Bharatiya Karyakari Mandal of the Rashtriya Swayamsevak Sangh (RSS) concluded on 31st Oct at Jalgaon (Maharashtra), has decided to hold nationwide MASS DHARNA on the 10th of November at all state and district head quarters to […]