ಬದಲಾಗುತ್ತಿರುವ ಜೀವನ ಶೈಲಿ, ಆಧುನಿಕತೆಯ ಅನಿವಾರ್ಯತೆ ಮತ್ತು ಪರಂಪರೆಯನ್ನು ಉಳಿಸಿಕೊಳ್ಳುವ ಹಂಬಲಗಳ ಮಧ್ಯೆ ಪಾಲಕರಿರುವ ಈ ಕಾಲಘಟ್ಟದಲ್ಲಿನ ಮಕ್ಕಳನ್ನು ಹೊಸ ವಿಧವಾದ ಸಮಸ್ಯೆಗಳು ಕಾಡುತ್ತಿರುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ತೀವ್ರವಾದ ಮಾನಸಿಕ ಒತ್ತಡದಿಂದಾಗಿ ಅಮೆರಿಕಾದಂತಹ ರಾಷ್ಟ್ರಗಳಲ್ಲಿನ ಮಕ್ಕಳಲ್ಲಿ ಕಂಡುಬರುತ್ತಿದ್ದ ಸಮಸ್ಯೆಗಳು ಇದೀಗ ಭಾರತದಲ್ಲೂ ಕಾಣಿಸಲಾರಂಭಿಸಿದೆ. ಸಮಸ್ಯೆ ಇದು ಮಾತ್ರ – ಕುಸಿಯುತ್ತಿರುವ ಕುಟುಂಬ ವ್ಯವಸ್ಥೆ!


ತಾಯಿ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿ. ಮಗುವಿನೊಂದಿಗೆ ಅಜ್ಜಿ. ಶನಿ-ಭಾನುವಾರಗಳೇ ತಾಯಿ ಮಗು ಜೊತೆಯಲ್ಲಿರಲು ಸಮಯ. ಉಳಿದ ದಿನಗಳಲ್ಲಿ ಸಮಯವೇ ಇಲ್ಲ. ವಾರಾಂತ್ಯ ಪೂರ್ತಿ ಅವಳು ಮಗುವಿನೊಡನೆಯೇ ಇರುತ್ತಿದ್ದಳು. ಒಂದು ದಿನ ಸಿಟ್ಟು ಬಂದಾಗ ಮಗು ಹೇಳಿತಂತೆ, ‘ನಿನಗೆ ನನಗಿಂತ ಕಂಪ್ಯೂಟರ್ ಮೇಲೆಯೇ ಹೆಚ್ಚು ಪ್ರೀತಿ’. ತಾನು ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ ಎಂದುಕೊಂಡಿದ್ದ ಆಕೆ ಇದನ್ನು ಕೇಳಿ ಮೂರ್ಛೆ ಹೋಗುವುದೊಂದೇ ಬಾಕಿ! ಆಕೆಯ ಗಂಡನೂ ಸಾಫ್ಟ್‌ವೇರ್ ಉದ್ಯೋಗಿ. ಚೆನ್ನಾಗಿ ಸಂಬಳವಿದೆ. ಈಕೆ ಕೆಲಸ ಮಾಡುವ ಅಗತ್ಯವೇನೂ ಇಲ್ಲ. ಆದರೂ ಕೆಲಸ ಮಾಡಬೇಕೆನ್ನುವ ಹಂಬಲ ಈಕೆಗೆ. ಮಗುವಿನ ಮನಸ್ಸಿನ ಭಾವನೆಗಳಿಗಿಂತ ತನಗೆ ಸಿಗುವ ಹಣವೇ ಮೇಲೆ. ‘ಆರ್ಥಿಕ ಸ್ವಾತಂತ್ರ್ಯ’ ಬೇಕು ಎನ್ನುವ ಹುಚ್ಚು ಆಸೆ. ಒಂದು ಕುಟುಂಬವೆಂದ ಮೇಲೆ, ಒಬ್ಬರಿಗೊಬ್ಬರ ಸಹಕಾರ ಅವಲಂಬನೆ ಇದ್ದದ್ದೇ. ಹಾಗೆ ನೋಡಿದರೆ, ಒಂದು ಕುಟುಂಬದಲ್ಲಿ ಯಾರೂ ಸಂಪೂರ್ಣ ಸ್ವತಂತ್ರರಲ್ಲ. ಇತರರಿಗೆ ಇಷ್ಟವಾಗದ ಕೆಲಸವನ್ನು ನಮಗೆ ಇಷ್ಟವಾಗಿದ್ದರೂ ನಾವು ಮಾಡುವುದಿಲ್ಲ. ಯಾರಿಗೂ ಬೇಡವಾದದ್ದನ್ನು ನಮಗೆ ಬೇಕಾಗಿದ್ದರೂ ನಾವು ತರುವುದಿಲ್ಲ. ಹೀಗೆ ಎಲ್ಲರ ಒಮ್ಮತ ಕುಟುಂಬದಲ್ಲಿ ಬಹಳ ಮುಖ್ಯ. ಈ ವ್ಯಕ್ತಿ ಸ್ವಾತಂತ್ರ್ಯದ ಕಲ್ಪನೆಯೇ ಎಷ್ಟೋ ಬಾರಿ ನಮ್ಮ ಕುಟುಂಬಗಳನ್ನು ಹಾಳುಗೆಡವುತ್ತಿದೆಯೇನೋ ಎನಿಸುತ್ತಿದೆ! ಕೇವಲ ಹಣದ ವಿಚಾರದಲ್ಲಿ ಮಾತ್ರವಲ್ಲ ತನಗೆ ಇಷ್ಟವಾದದ್ದನ್ನು ತಾನಯ ಮಾಡುತ್ತೇನೆ ಎನ್ನುವ ಪ್ರವೃತ್ತಿಯೂ ಇಂದು ಹೆಚ್ಚುತ್ತಿರುವುದನ್ನು ನಾವು ಅಲ್ಲಲ್ಲಿ ಕಾಣುತ್ತೇವೆ. ಆದರೆ ಇಂದು ಹಾಗೆ ಮಾಡುತ್ತಿರುವವರು, ನಾವು ಸಣ್ಣವರಿದ್ದಾಗ, ನಮ್ಮಅಪ್ಪ ಅಮ್ಮಂದಿರು ತಮಗೆ ಇಷ್ಟ ಬಂದ ಹಾಗೆ ಖರ್ಚು ಮಾಡಿ ನಮ್ಮನ್ನು ಚೆನ್ನಾಗಿ ಓದಿಸದಿದ್ದರೆ, ನಮಗೆ ಸರಿಯಾಗಿ ಊಟ ಹಾಕದಿದ್ದರೆ ಏನಾಗುತ್ತಿತ್ತು ಎಂದು ಮಾತ್ರ ಯೋಚಿಸಿದಂತೆ ಕಾಣುವುದಿಲ್ಲ!
ಹಳ್ಳಿಗಳನ್ನು ಉಳಿಸಿಕೊಳ್ಳುವ ಹಾಗೂ ನಗರೀಕರಣವನ್ನು ಬೆಂಬಲಿಸುವ ಸಂದಿಗ್ಧ ಇಂದಿನ ಯುವ ಮನಸ್ಸುಗಳದ್ದು.
ಹಿಂದೆ ಹಳ್ಳಿಗಳಲ್ಲಿದ್ದ ಜನಸಾಂದ್ರತೆ ಇಂದು ಪಟ್ಟಣಗಳಲ್ಲಿ ಹೆಚ್ಚಾಗುತ್ತಿದೆ. ಹೊಸ ತಲೆಮಾರಿನ ಜನರೆಲ್ಲ ಉದ್ಯೋಗವನ್ನರಸಿ ಪೇಟೆಗಳನ್ನಾಶ್ರಯಿಸುತ್ತಿದ್ದಾರೆ. ಹಾಗಾಗಿ ಕುಟುಂಬದ ಕೆಲವು ಸದಸ್ಯರು ಒಂದೂರಿನಲ್ಲಿ ಮತ್ತೆ ಕೆಲವರು ಬೇರೆ ಊರಿನಲ್ಲಿ ಇರುವುದು ಸಾಮಾನ್ಯವಾಗಿದೆ. ಹಿಂದಿನ ಅವಿಭಕ್ತ ಕುಟುಂಬ ಇಂದು ಕಾಣೆಯಾಗುತ್ತಿದೆ. ಹಾಗಾಗಿ ಒಂದು ದೊಡ್ಡ ಕುಟುಂಬದಲ್ಲಿದ್ದಾಗ ಮಕ್ಕಳು ಕಲಿಯುತ್ತಿದ್ದ ಜೀವನ ಮೌಲ್ಯಗಳು ಇಂದಿನ ಮಕ್ಕಳಿಗೆ ಸಿಗುತ್ತಿಲ್ಲವೆಂದೇ ಹೇಳಬಹುದು.

  • ಒಂದೇ ಊರಿನಲ್ಲಿದ್ದರೂ, ಯುವಕರು ಮದುವೆಯಾದ ಕೂಡಲೇ ಬೇರೆ ಮನೆ ಮಾಡುವುದು ಇದಕ್ಕೆ ಇನ್ನೊಂದು ಕಾರಣ. ಇದರಿಂದ ಕೇವಲ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಹಿಂದೆ ಸಿಗುತ್ತಿದ್ದ ಕುಟುಂಬದ ಸಹಕಾರ ಸಹಾಯಗಳು ಇಂದು ಇಲ್ಲವಾಗುತ್ತಿವೆ. ಎಲ್ಲರೂ ಅವರವರ ಮನೆಯ ವಹಿವಾಟಿನಲ್ಲಿ ಮುಳುಗಿ ರುತ್ತಾರೆಯೇ ಹೊರತು, ಇತರರಿಗೆ ಅಗತ್ಯವಿದ್ದಾಗ ನೆರವಾಗಲು ಯಾರಿಗೂ ಪುರುಸೊತ್ತೇ ಇಲ್ಲವಾಗುತ್ತಿದೆ.
  • ಮನೆಯಲ್ಲಿ ಮನಸ್ತಾಪಗಳು ಬಂದರೂ ಹೇಳಿಕೊಳ್ಳಲು ಯಾರೂ ಇರುವುದಿಲ್ಲ. ಗಂಡ-ಹೆಂಡತಿ, ಮಕ್ಕಳು ಮಾತ್ರ! ಹಾಗಾಗಿ ಒಂದು ರೀತಿಯ ಒಂಟಿತನ ಇಂದಿನವರನ್ನು ಕಾಡುತ್ತಿರುವುದು ಸುಳ್ಳಲ್ಲ. ಇದರಿಂದ ಮನೆಯಲ್ಲಿ ನೆಮ್ಮದಿ ಎಂತು?
  • ಇನ್ನು ಪೇಟೆಗಳಲ್ಲಾದರಂತೂ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವ ರಾದರೆ, ಬಂದು ಮನೆಯ ಕೆಲಸ ಮಾಡುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಮಕ್ಕಳನ್ನು ವಿಚಾರಿಸಲು ಸಮಯವೆಲ್ಲಿ? ಆದರೂ, ಮಕ್ಕಳು ಚೆನ್ನಾಗಿ ಓದಲೆಂಬ ಕಾರಣದಿಂದ ಟ್ಯೂಷನ್‌ಗೆ ಕಳುಹಿಸುವವರೇ ಹೆಚ್ಚು. ಸಂಗೀತ, ಭರತನಾಟ್ಯ, ಈಜು, ಅಬಾಕಸ್, ಯೋಗ ಎಲ್ಲವೂ ಒಳ್ಳೆಯದೇ. ಒಬ್ಬೊಬ್ಬರು ಒಂದೊಂದನ್ನು ಕಲಿಯಲಿ ಎನ್ನಲು ಇರುವುದು ಒಂದೋ ಎರಡೋ ಮಕ್ಕಳು ತಾನೇ? ಹಾಗಾಗಿ, ಅವರೇ ಎಲ್ಲವನ್ನೂ ಕಲಿಯಬೇಕು. ಅದಕ್ಕೇ ಇದ್ದಬದ್ದ ಎಲ್ಲಾ ಕ್ಲಾಸಿಗಳಿಗೂ ಸೇರಿಸುತ್ತಾರೆ ತಮ್ಮ ಮಕ್ಕಳನ್ನು. ಬೇರೆ ಎಲ್ಲವನ್ನೂ ಕಲಿಯುತ್ತಿದ್ದಾರೆಂಬ ಮಾತ್ರಕ್ಕೆ ಓದಿನಲ್ಲಿ ಹಿಂದೆ ಬೀಳುವಂತಿಲ್ಲ. ಅದರಲ್ಲೂ ಚೆನ್ನಾಗೇ ಅಂಕ ತೆಗೆಯಬೇಕು. ಇಂದಿನ ಮಕ್ಕಳ ಮೇಲೆ ಇರುವ ಒತ್ತಡ ಎಂತಹುದು ಎನ್ನುವುದನ್ನು ಒಮ್ಮೆ ನೀವೇ ಯೋಚಿಸಿ.
  • ಇಷ್ಟೆಲ್ಲದರ ನಡುವೆ ಮಕ್ಕಳಿಗೆ ಬದುಕುವ ಕಲೆಯನ್ನು ಕಲಿಸಿಕೊಡು ವವರಾರು? ಕಲಿಸಿಕೊಡಲು ಪುರುಸೊತ್ತೂ ಇಲ್ಲ ಅಪ್ಪಮ್ಮಂದಿರಿಗೆ. ಕಲಿಯಲು ಪುರುಸೊತ್ತೂ ಇಲ್ಲ ಅವಕ್ಕೆ. ಹೀಗಾಗಿ ಮಕ್ಕಳು ಎಂದು ರೀತಿಯ ಭವಿಷ್ಯದ ಹಣ ಮಾಡುವ ಯಂತ್ರಗಳಾಗುತ್ತಿವೆಯೇ ಹೊರತು ಮನುಷ್ಯರಾಗುತ್ತಿಲ್ಲ. ಇಂತಹ ಭವಿಷ್ಯದ ಭಾರತದ ನಿರ್ಮಾಣದಲ್ಲಿ ನಾವೆಲ್ಲಾ ಬ್ಯುಸಿ!
  • ಮೊದಲೆಲ್ಲಾ ಮಕ್ಕಳು ಇಷ್ಟೊಂದು ಬ್ಯುಸಿ ಇರುತ್ತಿರಲಿಲ್ಲವಾದ್ದರಿಂದ ನೆಂಟರಿಷ್ಟರ ಮನೆಗೆ ಹೋಗುವುದು, ನಾಲ್ಕು ಜನರೊಡನೆ ಬೆರೆಯುವುದು, ಎಲ್ಲರೂ ಒಟ್ಟು ಸೇರಿ ಆಟವಾಡುವುದು – ಎಲ್ಲಾ ಇರುತ್ತಿತ್ತು. ಹೀಗಾಗಿ ಯಾರೊಂದಿಗೆ ಹೇಗೆ ನಡೆದುಕೊಳ್ಳಬೇಕೆನ್ನುವುದೂ, ಕಷ್ಟದಲ್ಲಿ ಒಬ್ಬರಿಗೊಬ್ಬರಿಗೆ ಸಹಾಯ ಮಾಡುವುದೂ ಇವೆಲ್ಲವೂ ರೂಢಿಯಾಗುತ್ತಿತ್ತು. ಬಹಳಷ್ಟನ್ನು ನೋಡಿಯೇ ಕಲಿಯುತ್ತಿದ್ದರು ಹಿಂದಿನ ಮಕ್ಕಳು. ಆದರೆ, ಇಂದು ನೋಡಿ. ಮಕ್ಕಳು ಮನೆ ಬಿಟ್ಟು ಬೇರೆಲ್ಲಿಗೂ ಹೋಗುವುದಿಲ್ಲ. ರಜೆಯಲ್ಲೂ ಟ್ಯೂಷನ್! ಹಾಗಾಗಿ ಹೊರ ಪ್ರಪಂಚ ತಿಳಿಯುವುದೇ ಇಲ್ಲ. ಮನೆಗೆ ಬಂದವರನ್ನು ಹೇಗೆ ಮಾತನಾಡಿಸಬೇಕೆನ್ನು ವುದನ್ನೂ ಇನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸ ಬೇಕೇನೋ ಎನ್ನುವ ಸ್ಥಿತಿ ಬರುತ್ತಿದೆ ಎಂದು ಕೆಲವೊಮ್ಮೆ ಎನಿಸುತ್ತಿದೆ!
  • ಇನ್ನು, ಅಂತರ್ಜಾತೀಯ ವಿವಾಹ ಗಳು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಜಾತೀಯತೆಯನ್ನು ಹೋಗಲಾಡಿಸುವಲ್ಲಿ ಹಾಗೂ ಸಾಮಾಜಿಕ ಸಮರಸತೆ ಹೆಚ್ಚಿಸುವಲ್ಲಿ ಇವು ಬಹುಮಟ್ಟಿಗೆ ಸಹಕಾರಿಯಾಗುತ್ತಿವೆ ಯೆಂಬುದು ಸಂತಸದ ವಿಚಾರ. ಆದರೆ, ಜಾತಿಯೊಟ್ಟಿಗೇ ಅಂಟಿಕೊಂಡಿದ್ದ ಸಂಪ್ರದಾಯಗಳೂ, ಆಚಾರಗಳೂ ಇಂತಹ ಹೊಸ ಕುಟುಂಬಗಳಲ್ಲಿ ಮರೆಯಾಗುವ ಆತಂಕವಿದೆ. ಆ ಜಾತಿಯದ್ದೂ ಇಲ್ಲದೇ, ಈ ಜಾತಿಯದ್ದೂ ಇಲ್ಲದೇ ಕೊನೆಗೆ ಯಾವುದೇ ಸತ್ಸಂಪ್ರದಾಯಗಳಿಲ್ಲದಂತಾಗುವ ಬಗ್ಗೆ ಇಂದಿನ ಯುವಜನತೆ ಎಚ್ಚರ ವಹಿಸುವುದು ಬಹಳ ಮುಖ್ಯ. ರೂಢಿ-ಸಂಪ್ರದಾಯಗಳೇ ಬದುಕಲ್ಲ. ಅವು ಮುಖ್ಯವಲ್ಲದಿದ್ದರೂ ಅವುಗಳ ಹಿಂದಿರುವ ಜೀವನ ಮೌಲ್ಯಗಳು, ಸದುದ್ದೇಶಗಳು ಮುಖ್ಯ. ಇಂತಹ ಮೌಲ್ಯಗಳಿಂದ ಮುಂದಿನ ಪೀಳಿಗೆ ವಂಚಿತವಾಗಬಾರದು. ಆರ್ಥಿಕ ಶ್ರೀಮಂತಿಕೆ ಬಂದರೆ ಸಾಂಸ್ಕೃತಿಕವಾಗಿ ಅಧಃಪತನದ ಸವಾಲು ಇದ್ದೇ ಇದೆ. ಆದ್ದರಿಂದ ಇಂತಹ ಕುಟುಂಬಗಳು ಇಬ್ಬರಿಗೂ ಸಮ್ಮತವಾಗುವ ಅಥವಾ ಎಲ್ಲರಿಗೂ ಸಮ್ಮತವಾಗುವ ‘ಹಿಂದೂ ಜೀವನ ಕ್ರಮ’ವನ್ನು ವಿಶೇಷ ಗಮನ ಕೊಟ್ಟು ಆಚರಣೆಗೆ ತರಬೇದ್ದು ಅಗತ್ಯ. ಆಗ ನಿಜವಾಗಿಯೂ ಮುಂದಿನ ಪೀಳಿಗೆಗಳು ಯಾವುದೇ ಜಾತಿಯ ಕಟ್ಟುಗಳಿಲ್ಲದ ನಿಜವಾದ ಹಿಂದು ಗಳಾಗುತ್ತಾರೆ. ಇಲ್ಲವಾದಲ್ಲಿ ಭಾರತದ ಪ್ರಜೆಗಳಾಗುತ್ತಾರೆಯೇ ಹೊರತು, ಭಾರತೀಯರಾಗುವುದಿಲ್ಲ!

ಹೀಗೊಂದು ನಾಯಿಪಾಡು!
ಒಂದು ಮನೆಯಲ್ಲಿ ಗಂಡ ಹೆಂಡಿರಿಬ್ಬರೂ ಕೆಲಸಕ್ಕೆ ಹೋಗುವವರು. ಮಗುವನ್ನು ನೋಡಿಕೊಳ್ಳಲು ಕೆಲಸದಾಕೆ. ಮನೆಯೊಡತಿ ಮನೆಗೆ ಬರುವಾಗ ದಿನವೂ ರಾತ್ರಿ ತಡವಾಗುತ್ತಿತ್ತು. ಪಾಪ, ಕೆಲಸದ ಒತ್ತಡ ಜಾಸ್ತಿ. ಅವಳು ಬರುವಾಗ ಮಗು ಮಲಗಿರುತ್ತಿತ್ತು. ಆದರೆ, ನಾಯಿ ಎಚ್ಚರವಿರುತ್ತಿತ್ತು. ಆಕೆ ನಾಯಿಯೊಂದಿಗೇ ಸ್ವಲ್ಪ ಸಮಯ ಕಳೆದು ಅದನ್ನು ಮುದ್ದಿಸಿ, ಆಟವಾಡಿ ಮಲಗುತ್ತಿದ್ದಳು. ಅದಕ್ಕೆ ಬೇಕುಬೇಕಾದ ತಿಂಡಿ ತೀರ್ಥ ಕೊಟ್ಟು ಉಪಚರಿಸುತ್ತಿದ್ದಳು. ಆದರೆ, ಹಗಲು ಮನೆಕೆಲಸದಾಕೆ ಮಗುವನ್ನು ನೋಡಿಕೊಳ್ಳುತ್ತಿದ್ದಳು. ಅದು ಅವಳಿಗೆ ಸಂಬಳದ ಕೆಲಸ ಅಷ್ಟೇ, ಮಗುವೆನ್ನುವ ಮಮಕಾರ ಹೇಗೆ ಬಂದೀತು ಹೇಳಿ! ಏನೋ ಅದರ ಪಾಡಿಗೆ ಅದನ್ನು ಬಿಟ್ಟಿರುತ್ತಿದ್ದಳು. ಅತ್ತರೆ ಏನೋ ಒಂದು ಆಟದ ಸಾಮಾನನ್ನು ಅದರೆಡೆಗೆ ಬಿಸಾಕಿ ತನ್ನ ಪಾಡಿಗೆ ತಾನು ಟಿ.ವಿ. ನೋಡುತ್ತಿದ್ದಳು! ಒಟ್ಟಿನಲ್ಲಿ ಮಗು ಗಲಾಟೆ ಮಾಡದಿದ್ದರಾಯಿತು, ಅಷ್ಟೇ. ಇಂತಹ ಸ್ಥಿತಿಯನ್ನು ನೋಡಿದ ಒಬ್ಬರು ಅದನ್ನು ವಿವರಿಸಿದ್ದು ಹೀಗೆ – ‘ಮನೆಯೊಡತಿಯು ನಾಯಿಯನ್ನು ಮಗುವಿನಂತೆಯೂ, ಕೆಲಸದಾಕೆಯು ಮಗುವನ್ನು ನಾಯಿಯಂತೆಯೂ ನೋಡಿಕೊಳ್ಳುತ್ತಿದ್ದರು!’. ಎಷ್ಟು ನಿಜ ಅಲ್ಲವೇ? ಇಂತಹುದೇ ಸ್ಥಿತಿ ಇಂದಿನ ಎಷ್ಟೋ ಕುಟುಂಬಗಳಲ್ಲಿ ಇರಬಹುದೇನೋ. ಆದರೆ, ಹಾಗಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.
ಹೀಗೆ ಧಾವಂತದ ಬದುಕಿನಲ್ಲಿ ನಾವು ಸಿಲುಕಿಕೊಂಡಷ್ಟೂ ಅದರ ನೇರ ಪರಿಣಾಮ ಮುಂದಿನ ತಲೆಮಾರಿನಲ್ಲಿ ದಿಟ್ಟವಾಗಿ ಕಾಣಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಅನೇಕ ನಗರ ಪ್ರದೇಶಗಳಲ್ಲಿ ಈ ಕುರಿತ ಚರ್ಚೆಗಳು ಬಹುಮಟ್ಟಿಗೆ ಆಗುತ್ತಿದ್ದರೂ ಪರಿಹಾರ ವೇನು? ಎಂಬುದು ಕೊನೆಗುಳಿಯುವ ಪ್ರಶ್ನೆ. ಕೌಟುಂಬಿಕ ವ್ಯವಸ್ಥೆ ಬಲಗೊಂಡಷ್ಟೂ ಮೌಲ್ಯಗಳು ಸ್ಥಾಯಿ. ಮುಂದಿನ ದಿನಗಳಲ್ಲಿ ಮೌಲ್ಯಗಳಿಲ್ಲದ ಕೇವಲ ವಿದ್ಯಾವಂತ ಸಮಾಜ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತ ನಮ್ಮ ಹೊಣೆ ಬೆಟ್ಟದಷ್ಟಿದೆ.