ಮತ್ತಷ್ಟು ನೆಲಬಾಂಬು ಹುಗಿಯದಿರಿ !

ಸೆಪ್ಟೆಂಬರ್ ೩೦ ಕೂಡ ಕಲಿಯುಗದ ಅಯೋಧ್ಯಾ ಪರ್ವದಲ್ಲಿ  ಸುವರ್ಣಪುಟವೆಂದು ಹೇಳಲೇಬೇಕು. ೧೯೪೯ರಲ್ಲಿ  ಶ್ರೀರಾಮ ಲಲ್ಲಾ ಮೂರ್ತಿಯು ಅಲ್ಲಿ ಪ್ರತ್ಯಕ್ಷವಾದ ದಿನದಂತೆಯೆ, ೧೯೮೬ರಲ್ಲಿ  ಕಟ್ಟಡದ ಬೀಗಮುದ್ರೆ ತೆರವುಗೊಳಿಸಿ ಶ್ರೀರಾಮಲಲ್ಲಾ ದಶನಕ್ಕೆ ಅವಕಾಶ ನೀಡಿದ ದಿನದಂತೆಯೆ,  ೧೯೯೨ರಲ್ಲಿ ವಿವಾದಿತ ಕಟ್ಟಡವು ನೆಲಕ್ಕುರುಳಿದ ದಿನದಂತೆಯೆ , ಅಲಹಾಬಾದ್ ಹೈಕೋರ್ಟು ತೀರ್ಪು ನೀಡಿದ ಆ ದಿನ, ಆ ಕ್ಷಣ ಕೂಡ ಮಹತ್ವದ್ದೇ ಆಗಿದೆ.

ಅದೊಂದು ಕ್ಷಣಕ್ಕಾಗಿ ಕೋಟ್ಯಂತರ ಜನರು ಕಾದಿದ್ದರು. ಕಾತರಿಸಿದ್ದರು. ಪ್ರಾರ್ಥಿಸಿದ್ದರು.

ಕೊನೆಗೂ ಆ ಕ್ಷಣವು ಆವಿರ್ಭವಿಸಿತು. ಅಯೋಧ್ಯೆಯಲ್ಲಿರುವ ಶ್ರೀರಾಮ ಲಲ್ಲಾನ ಮೂರ್ತಿಯಿರುವ ಜಾಗವು ‘ಶ್ರೀರಾಮನ ಜನ್ಮ ಭೂಮಿಯೇ ಹೌದು’ ಎಂದು ಸಾಬೀತಾಯಿತು.

ನ್ಯಾಯಾಲಯವೇ ಆ ರೀತಿ ತೀರ್ಪಿತ್ತಿತು.

ಅಲ್ಲಿಗೆ ವಿವಾದವು ಮುಕ್ತಾಯವಾಯಿತು. ಕೋಟಿ ಜನರ ಭಾವನೆಗಳಿಗೆ ಮನ್ನಣೆ ಬಂತು.

ಹಾಗೆಂದು ಶ್ರೀರಾಮನ ಜನ್ಮಸ್ಥಾನವನ್ನು ಖಾತ್ರಿಪಡಿಸಲು ಕೋರ್ಟಿನ ಮೊಹರೆಯೊಂದು ಅನಿವಾರ್ಯವಾಗಿತ್ತೆ ? ಖಂಡಿತಾ ಇಲ್ಲ.  ಅಭೌತಿಕ ದೇವರಿಗೆ ಭೌತಿಕ ನ್ಯಾಯಾಲಯವೊಂದರ ಪ್ರಮಾಣಪತ್ರದ ಅಗತ್ಯವಿತ್ತೆ? ಅದೂ ಇಲ್ಲ. ಭಾರತೀಯರಿಗೆ ಹಾಗೂ ಕೋಟ್ಯಂತರ ಭಕ್ತರಿಗೆ ಶ್ರೀರಾಮ ‘ಜನ್ಮಭೂಮಿ’ಯ ಕುರಿತಂತೆ  ಅನುಮಾನವೇ ಇರಲಿಲ್ಲ. ಶ್ರೀರಾಮ ಅಯೋಧ್ಯೆಯಲ್ಲೆ  ಜನಿಸಿದವನು ಎಂದು ನಂಬಿಕೊಂಡು ಬಂದವರು ಅವರು. ಈ ನಂಬಿಕೆಗೆ ಯಾವುದೇ ಕೋರ್ಟಿನ ಅಂಗೀಕಾರದ ಅಗತ್ಯವಿರಲಿಲ್ಲ. ಪುರಾವೆಗಳ ಬೆಂಬಲ ಬೇಕಿರಲಿಲ್ಲ.

ಆದರೆ ಎಲ್ಲದರಲ್ಲೂ ಹುಳುಕು ಹುಡುಕುವ ಮಂದಿಗಳು ಎಲ್ಲೆಡೆಯೂ ಇದ್ದೇ ಇರುತ್ತಾರಲ್ಲ, ಅವರಿಗೆ ಮಾತ್ರ ನ್ಯಾಯಾಲಯವೊಂದರ ‘ಸಾಕ್ಷಿಸಹಿತ ’ ಹೇಳಿಕೆ ಬೇಕೇ ಬೇಕಿತ್ತು. ವಿಚಾರವಾದಿಗಳೆಂಬವರಿಗೆ, ಬುದ್ದಿಜೀವಿಗಳೆಂಬವರಿಗೆ, ಶ್ರೀರಾಮನನ್ನು ಕಲ್ಪನಾ ವ್ಯಕ್ತಿ ಎಂದು ಸಾಸುವ ಕೆಟ್ಟ ಛಲ ಹೊತ್ತವರಿಗೆ ಬಾಯಿ ಮುಚ್ಚಿಸಲಾದರೂ ಇಂತಹುದೊಂದು ತೀರ್ಪು ಬರಬೇಕಿತ್ತು.

ಇದೀಗ ಒಂದೇ ಏಟಿಗೆ ಅವರೆಲ್ಲರ ಬಾಯಿಗೆ ಬೀಗ ಬಿದ್ದಿದೆ. ಇನ್ನವರು ‘ಶ್ರೀರಾಮ ಅಯೋಧ್ಯೆಯಲ್ಲ್ಲೆ ಜನಿಸಿದವನು ಎಂದೆನ್ನಲು ಸಾಕ್ಷಿಗಳೇನಿವೆ’ ಎಂದು ಪ್ರಶ್ನಿಸುವಂತಿಲ್ಲ.  ಏಕೆಂದರೆ ಅವರೇ ‘ನ್ಯಾಯಾಂಗದ ತೀರ್ಪನ್ನು ಗೌರವಿಸಬೇಕು, ಕಾನೂನು ತನ್ನ ದಾರಿ ಹಿಡಿಯಲು ಅಡ್ಡಿ ಬರಬಾರದು’ ಎಂದು ಹೇಳಿದವರು. ಈಗ ನ್ಯಾಯಾಂಗವೆ ಹಾಗೆ ಹೇಳಿಯಾಗಿದೆ. ಮೂರೂ ಜನ ನ್ಯಾಯಮೂರ್ತಿಗಳೂ ಶ್ರೀರಾಮ ಜನಿಸಿದ್ದು ಅಯೋಧ್ಯೆಯಲ್ಲಿಯೆ ಎಂದು ನಿರ್ವಿವಾದವಾಗಿ ಘೋಷಿಸಿದ್ದಾರೆ.

ಹಾಗೆಂದು ಈಗಿನ ತೀರ್ಪನ್ನು  ಪ್ರಶ್ನಾತೀತ ಎಂದು ಪರಿಗಣಿಸುವಂತಿಲ್ಲ ಎಂಬುದೂ ನಿಜವೆ. ನ್ಯಾಯಾಲಯ ಕೂಡ ಸ್ವಲ್ಪ ಮಟ್ಟಿನ ರಾಜಿ ಸೂತ್ರವನ್ನು ಅಳವಡಿಸಿಕೊಂಡಿದೆಯೆ ಎಂಬ ಅನುಮಾನ ಕಾಡದಿರದು. ಪೂರ್ಣವಾಗಿ ಕಾನೂನಿನ ಚೌಕಟ್ಟಿನಲ್ಲಿಯೆ ವ್ಯವಹರಿಸುವ ಬದಲು ಸ್ವಲ್ಪ ಮಟ್ಟಿಗೆ ಸಾಮಾಜಿಕ ಹೊಣೆಗಾರಿಯನ್ನು ಹೊತ್ತುಕೊಂಡು ತೀರ್ಪು ಬರೆಯಿತೆ ಎಂದು ಹೇಳದಿರಲಾಗದು.ಇಲ್ಲದಿದ್ದರೆ,  ಸುನ್ನಿ ವಕ್ ಮಂಡಳಿಯ ಮೂಲ ಅರ್ಜಿಯನ್ನೆ ವಜಾಗೊಳಿಸಿದ ಮೇಲೆ ಅವರಿಗೆ ಕೂಡ ಒಂದು ತುಂಡು ಜಾಗವನ್ನು ಕೊಡುವ ಪ್ರಸಂಗವೆಲ್ಲಿಂದ ಬಂತು. ಬಹುಶಃ ಈ ನಿಟ್ಟಿನಲ್ಲಿ ಅವರು ಶಾಂತಿ ಪಾಲನೆಯ ಹೊಣೆಯನ್ನೂ ತಮ್ಮ ಹೆಗಲಿಗೇರಿಸಿಕೊಂಡಿರಬೇಕು.

ಅದೂ ನಿಜವೆ. ಒಂದರ್ಥದಲ್ಲಿ ಇಡೀ ದೇಶದಲ್ಲಿ ಹಿಂಸೆಯ ಉತ್ಪಾತಗಳಾಗದಂತೆ ನ್ಯಾಯಾಶರುಗಳ ಈ ರಾಜಿಸೂತ್ರ ತಡೆಯಿತು ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಎಲ್ಲರೂ ನಿರೀಕ್ಷಿಸುತ್ತಿದ್ದ ಗಲಭೆಯ ಟೈಬಾಂಬ್ ಸೋಟಿಸದಂತೆ ಈ ತೀರ್ಪು ನೋಡಿಕೊಂಡಿತು ಎಂಬುದನ್ನೂ ಅಂಗೀಕರಿಸಲೇಬೇಕು.

ಒಂದುರೀತಿಯಲ್ಲಿ ಇದು ರಾಮಜನ್ಮಭೂಮಿಯ ಮೇಲಿನ ತಮ್ಮ ಅಹವಾಲನ್ನು ತ್ಯಜಿಸುವಲ್ಲಿ ಮುಸ್ಲಿಮರ ಮನಸ್ಸನ್ನು ಸಿದ್ಧಗೊಳಿಸುವಂತಹ ಪ್ರಥಮ ವೇದಿಕೆಯಾಗಿ ಕೆಲಸ ಮಾಡಿದೆ ಎಂದೆನ್ನಬಹುದು.  ಮೂರನೇ ಎರಡು ಜಾಗವನ್ನು ಕಳಕೊಂಡ, ವಿವಾದಿತ ಜಾಗವು ರಾಮಜನ್ಮಭೂಮಿಯೇ ಹೌದು ಹಾಗೂ ಅಲ್ಲಿ ಮುಸ್ಲಿಂ ತತ್ವಸಿದ್ಧಾಂತಗಳಿಗೆ ವಿರುದ್ಧವಾಗಿ ಮಸೀದಿ ನಿರ್ಮಿಸಲಾಗಿದೆ ಎಂದು ಒಪ್ಪಿಕೊಂಡ ಮುಸ್ಲಿಂ ಮನಸ್ಸು  ಇನ್ನು ಸುಪ್ರೀಂಕೋರ್ಟಿನಲ್ಲಿ ಪೂರ್ಣ ಜಾಗ ತನ್ನ ಕೈಬಿಟ್ಟು ಹೋದರೂ ಹೆಚ್ಚು ಚಿಂತಿಸಲಾರದು…

ಆದರೆ…

ಇಷ್ಟಕ್ಕೂ ಆ ಇನ್ನೊಂದು ತುಂಡು ಜಾಗದ ವಿವಾದ ಕೂಡ ಸುಪ್ರೀಂ ಕೋರ್ಟಿನಲ್ಲೆ ಇತ್ಯರ್ಥವಾಗಬೇಕೆಂದು ಕಾಯಬೇಕೆ? ದೇಶದಲ್ಲಿ

ಭಾವೈಕ್ಯತೆಯ ಅಭೂತಪೂರ್ವ  ಅಧ್ಯಾಯವೊಂದನ್ನು ತೆರೆಯಲು ತಮಗೆ ಸುವರ್ಣಾವಕಾಶವೊಂದು ಒದಗಿಬಂದಿದೆ ಎಂಬುದನ್ನು ಮುಸ್ಲಿಮರೇಕೆ ಕಂಡುಕೊಳ್ಳುತ್ತಿಲ್ಲ . ಅವರೇನೋ ಈಗ ಹೈಕೋರ್ಟು ತೀರ್ಪಿನ ವಿರುದ್ಧವಾಗಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಮಾತನಾಡುತ್ತಿದ್ದಾರೆ. ಆದರೆ ಅದರ ಬದಲಾಗಿ ಅವರು ತಮಗೆ ಕೋರ್ಟು ಕೊಡಮಾಡಿರುವ ಒಂದು ತುಂಡು ಜಾಗವನ್ನು ಕೂಡ ಶ್ರೀರಾಮ ಮಂದಿರ ನಿರ್ಮಾಣಕ್ಕೆಂದು ಸ್ವಯಂಪ್ರೇರಣೆಯಿಂದ ನೀಡಿದರೆ….

ಹೌದು, ಅದೊಂದು ನಡೆಯು ನಿಜಕ್ಕೂ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸುಗಮ ಹಾದಿ ತೆರೆಯುವುದಷ್ಟೇ ಅಲ್ಲದೆ, ದೇಶದಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆಗೂ ಹೊಸ ಭಾಷ್ಯ ಬರೆಯಬಹುದು.

ನಿಜಕ್ಕಾದರೆ ಶ್ರೀಸಾಮಾನ್ಯ ಮುಸ್ಲಿಂ ಜನ್ಮಭೂಮಿಯನ್ನು ಹಿಂದೂಗಳಿಗೇ ಬಿಟ್ಟುಬಿಡಬೇಕೆಂಬ ಮನಸ್ಥಿತಿ ಹೊಂದಿದ್ದಾನೆ. ತೀರ್ಪು  ಪ್ರಕಟವಾಗುವ ಮುನ್ನ ಶ್ರೀಸಾಮಾನ್ಯ ಮುಸ್ಲಿಮನು ಹಿಂದುಗಳ ಪರವಾಗಿಯೆ ತೀರ್ಪು ಬಂದರೆ ತಮಗೇ ನೆಮ್ಮದಿ ಎಂಬಂತಹ ಮಾತನಾಡುತ್ತಿರುವುದನ್ನು ಈ ಲೇಖಕನೇ ಕೇಳಿಸಿಕೊಂಡಿದ್ದಾನೆ. ಆದರೆ ಆ ಸಮಾಜದ ಮುಖಂಡರೆನಿಸಿಕೊಂಡ ಕೆಲವರಿಗೆ  ಪೊಳ್ಳು ಪ್ರತಿಷ್ಠೆಯೆ ಮೇಲಾಗಿದೆ.

ಇರಲಿ,  ಈವರೆಗೆ ಹಿಂದುಗಳಿಗಷ್ಟೆ ಬುದ್ಧಿವಾದ ಹೇಳುತ್ತಿದ್ದ ಎಡಪಂಥೀಯರು, ಬುದ್ದಿಜೀವಿಗಳು, ವಿಚಾರವಾದಿಗಳಾದರೂ ಮುಸ್ಲಿಂ ಮುಖಂಡರಿಗೆ ಹಿತವಚನ ಹೇಳಬಹುದಲ್ಲವೆ. ಭಾವೈಕ್ಯ ಸಾಸಲು ಒಂದು ಹೆಜ್ಜೆ ಮುಂದಿಡಬೇಕೆಂದು ಸಲಹೆ ಕೊಡಬಹುದಲ್ಲವೆ. ಹಿಂದುಗಳೇ ತ್ಯಾಗ ಮಾಡಬೇಕೆಂದು ಪ್ರತಿಬಾರಿಯೂ ಕಿವಿಮಾತು ಹೇಳುವ ಮಂದಿ ಈ ಬಾರಿ ಮುಸ್ಲಿಮರು ಸ್ವಲ್ಪ ಮಟ್ಟಿಗೆ ತ್ಯಾಗಕ್ಕೆ ಮುಂದಾಗುವುದು ಒಳಿತೆಂದು ಹೇಳಬಹುದಲ್ಲವೆ.

ಇಲ್ಲ, ಅವರಿಂದ ಇಂತಹ ಮಾತುಗಳು ಬರಲಾರವು. ಅವರ ಪ್ರಕಾರ ಭಾವೈಕ್ಯತೆಯೆಂದರೆ  ಮುಸ್ಲಿಮರಿಗೆ ದೊರಕಿರುವ ತುಂಡು ಜಾಗದಲ್ಲಿ ಮಸೀದಿ ನಿರ್ಮಿಸಬೇಕೆಂಬುದೇ ಆಗಿರುತ್ತದೆ. ಬೇಕಿದ್ದರೆ ಕಾದು ನೋಡಿ. ಇಂತಹುದೇ ಸಲಹೆಗಳು ಈ ಮುಖಂಡರಿಂದ ಬಂದೇ ಬರುತ್ತದೆ. ಮಸೀದಿ ನಿರ್ಮಿಸಲು ಹಿಂದೂಗಳೇ ನೆರವು ನೀಡಬೇಕೆಂದು ಸಲಹೆ ನೀಡಿದರೂ ನೀಡಿಯಾರು ಇವರು. ಈಗಾಗಲೆ ಎಡಪಂಥೀಯ ಇತಿಹಾಸಕಾರರಿಂದ ತೀರ್ಪಿನ ಕುರಿತಂತೆ ಅಸಮಾಧಾನದ ಹೇಳಿಕೆಗಳು ಬರತೊಡಗಿವೆ.

ಒಂದಂತೂ ನಿಜ. ಅಲಹಾಬಾದ್ ಹೈಕೋರ್ಟಿನ ತೀರ್ಪು ಹಲವಾರು ಸಮಯಗಳಿಂದ ಕಾಡುತ್ತಿದ್ದ ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಈವರೆಗೆ ವಿವಾದಿತವಾಗಿದ್ದ ಜಾಗವನ್ನು ಅದು ಈಗ ವಿವಾದಾತೀತಗೊಳಿಸಿದೆ. ಶ್ರೀರಾಮ ಅಯೋಧ್ಯೆಯಲ್ಲೆ ಜನಿಸಿದ್ದೆಂಬುದನ್ನು ಖಚಿತಪಡಿಸಿದೆ. ಏನಿಲ್ಲವೆಂದರೂ ಅಂತಹ ನಂಬಿಕೆಯೊಂದನ್ನು  ಗೌರವಿಸಬೇಕೆಂಬ ಸಂದೇಶವನ್ನು ರವಾನಿಸಿದೆ.

ಹಿಂದುಗಳು ಈವರೆಗೆ ಪ್ರತಿಪಾದಿಸಿಕೊಂಡು ಬರುತ್ತಿರುವುದೂ ಅದನ್ನೆ. ಅಯೋಧ್ಯೆಯಲ್ಲೊಂದು ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂಬ ಮಹದಾಸೆ ಬಿಟ್ಟರೆ ಉಳಿದಂತೆ ಈ ವಿಚಾರವನ್ನು ಪ್ರತಿಷ್ಠೆಯ ವಿಷಯವನ್ನಾಗಿಸಿದವರೂ ಅವರಲ್ಲ. ಈಗ ಬಂದಿರುವ ತೀರ್ಪನ್ನು ಗೆಲುವೆಂದು ಭಾವಿಸಿದವರೂ ಅಲ್ಲ. ಮಂದಿರ ನಿರ್ಮಾಣಕ್ಕಿದ್ದ ತಡೆಯೊಂದು ತೊಲಗಿದೆ ಎಂಬ ನಿರಾಳತೆಯಷ್ಟೆ ಮೂಡಿರುವುದು. ಆದರೆ ಮುಸ್ಲಿಂ ಮುಖಂಡರೇ ಇದನ್ನೊಂದು ಪ್ರತಿಷ್ಠೆಯ ಪ್ರಶ್ನೆಯಾಗಿಸಿರುವುದು. ಅವರಿಗೆ ಇದೊಂದು ಬಗೆಯಲ್ಲಿ ಹಿಂದೂಗಳ ಮೇಲೆ ವಿಜಯ ಸಾಸಿದ ಭಾವ ಮೂಡಿಸಲು ಸಾಧನವಾಗಿತ್ತು.

ಎಲ್ಲಕ್ಕಿಂತ ಅಪಾಯಕಾರಿಗಳಾಗಿ ಕಂಡುಬರುತ್ತಿರುವವರು ಎಡಪಂಥೀಯ ಬುದ್ದಿಜೀವಿಗಳು. ಈಗಾಗಲೆ ತೀರ್ಪಿನ ವಿರುದ್ಧವಾಗಿ ತಮ್ಮದೇ ರೀತಿಯ ಕುತರ್ಕವನ್ನು ಅವರು ಮಂಡಿಸತೊಡಗಿದ್ದಾರೆ.

ಅಯೋಧ್ಯಾ ತೀರ್ಪು ನೀಡಿದ ಎಸ್.ಯು. ಖಾನ್‌ರವರು ತಮ್ಮ ತೀರ್ಪು ಓದುವ ಮುನ್ನ ಪೀಠಿಕೆಯಲ್ಲಿ ಬರೆದಿದ್ದರು “ ಇಲ್ಲೊಂದು ಪುಟ್ಟ ಜಾಗವಿದೆ. ದೇವದೂತರೂ ಅಲ್ಲಿ ಸಂಚರಿಸಲು ಹೆದರುತ್ತಾರೆ. ಅದು ಸಂಪೂರ್ಣವಾಗಿ ಸಜೀವ ನೆಲಬಾಂಬುಗಳಿಂದ ತುಂಬಿದೆ. ನಾವೀಗ ಈ ಜಾಗವನ್ನು ನೆಲಬಾಂಬು ಮುಕ್ತಗೊಳಿಸಬೇಕಾಗಿದೆ. ಅಂತಹ ಪ್ರಯತ್ನಕ್ಕೆಳಸದಂತೆ ಕೆಲವು ವಿವೇಕಿಗಳು ನಮಗೆ ಹಿತವಚನ ನೀಡಿದರು. ಆದರೆ ನಾವು ನೆಲಬಾಂಬಿನಿಂದ ಸೋಟಗೊಳ್ಳಲು ಮೂರ್ಖರಂತೆ ಧಾವಿಸುತ್ತಿಲ್ಲ. ವಿವೇಕದಿಂದ ಮುನ್ನುಗ್ಗುತ್ತಿದ್ದೇವೆ. ಆದರೆ ರಿಸ್ಕ್ ತೆಗೆದುಕೊಳ್ಳಬೇಕಾದ ಸಂದರ್ಭ ಬಂದಾಗ ಅಂತಹ ರಿಸ್ಕ್ ತೆಗೆದುಕೊಳ್ಳುವಂತಹ ಧೈರ್ಯ ತೋರದಿರುವುದೇ ಜೀವನದ ಅತಿದೊಡ್ಡ ರಿಸ್ಕ್ ಎಂದು ಹೇಳಲಾಗುತ್ತದೆ. ನಾವೀಗ ಅಂತಹ ರಿಸ್ಕ್ ತೆಗೆದುಕೊಳ್ಳಲು ಹೊರಟಿದ್ದೇವೆ ….”

ನಿಜ. ಹೈಕೋರ್ಟು ನ್ಯಾಯಾಶರು ಬಹುತೇಕ ನೆಲಬಾಂಬುಗಳನ್ನು ತೆಗೆದುಹಾಕಲು ಸಫಲರಾಗಿದ್ದಾರೆ. ಒಂದು ತುಂಡು ಜಾಗದಲ್ಲಿ ಮಾತ್ರ ನೆಲಬಾಂಬು ಇನ್ನೂ ಹಾಗೆ ಉಳಿದಿದೆ. ಆದರೆ ಸುನ್ನಿ ವಕ್ ಮಂಡಳಿಯು ಮತ್ತೆ ಇಡೀ ಜಾಗವನ್ನು ನೆಲಬಾಂಬಿನಿಂದ ತುಂಬಿಸಿಡಲು ಪ್ರಯತ್ನ ನಡೆಸುತ್ತಿದೆ. ಸುಪ್ರೀಂ ಕೋರ್ಟಿಗೆ ವಿವಾದವನ್ನು ಕೊಂಡೊಯ್ದು ವಿವಾದವನ್ನು ಮತ್ತಷ್ಟು ದೀರ್ಘವೆಳೆಯಲು ಪ್ರಯತ್ನಿಸುತ್ತಿದೆ.

ಇರುವ ನೆಲಬಾಂಬನ್ನೂ ಕಿತ್ತು ಹಾಕಿ , ಆ ಭೂಮಿಯನ್ನು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸುಸಜ್ಜಿತಗೊಳಿಸುವುದು ಯುಕ್ತವೆಂದು ಅದಕ್ಕೆ ಹಿತವಚನ ಹೇಳುವವರಾರು? ಶ್ರೀಸಾಮಾನ್ಯ ಹಾಗೂ ಪ್ರಜ್ಞಾವಂತ ಮುಸ್ಲಿಮರು ಈ ನಿಟ್ಟಿನಲ್ಲಿ ಮುಂದೆ ಬರಬೇಕಾಗಿದೆ.

ಚೆಂಡು ಈಗ ಅವರದೇ ಕೋರ್ಟಿನಲ್ಲಿದೆ. ಸೌಹಾರ್ದತೆಯ ಹೊಸ ಅಧ್ಯಾಯವನ್ನು ಆರಂಭಿಸಲು ಅವರಿಂದಲೆ ಮೊದಲ ಸರ್ವ್ ಆಗಬೇಕಾಗಿದೆ.

-ದಿನಕರ ಇಂದಾಜೆ, hosadiganta, mangalore