ಪುತ್ತೂರು : ಹಿಂದುಗಳಲ್ಲಿ ಒಗ್ಗಟ್ಟಿನ ಕೊರತೆಯೇ ನಮ್ಮ ಇಂದಿನ ದುಸ್ಥಿತಿಗೆ ಕಾರಣ. ಹಿಂದುಗಳೆಲ್ಲ ಒಂದೇ ಎಂಬ ಭಾವ ಬೆಳೆಸಿಕೊಳ್ಳದಿದ್ದರೆ ಮುಂದೆ ಗಂಡಾಂತರ ಎದುರಿಸ ಬೇಕಾಗುವುದು ಎಂದು ಹನೂಮತ್ ಶಕ್ತಿ ಜಾಗರಣ ಸಮಿತಿ ಕರ್ನಾಟಕ ದಕ್ಷಿಣ ಪ್ರಾಂತ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ಹೇಳಿದರು.

ಅವರು ಸೋಮವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಶ್ರೀ ಹನೂಮತ್ ಶಕ್ತಿ ಜಾಗರಣಾ ಸಮಿತಿ ವತಿಯಿಂದ ನಡೆದ ಹನುಮತ್ ಶಕ್ತಿ ಜಾಗರಣ ಯಜ್ಞ ಹಾಗೂ ಹಿಂದು ಸಮಾಜೋತ್ಸವದಲ್ಲಿ ಮಾತನಾಡಿದರು.

ನಮ್ಮ ಇಂದಿನ ದುಸ್ಥಿತಿಗೆ ಕಾರಣ ಮುಸ್ಲಿಮರಲ್ಲ. ಕ್ರಿಶ್ಚಿಯನ್ನರಲ್ಲ. ನಾವು ಹಿಂದುಳಿದಿದ್ದರೆ ಅದಕ್ಕೆ ಕಾರಣ ನಾವೇ. ನಮ್ಮ ದೇಶದ ಶ್ರದಾಟಛಿಕೇಂದ್ರ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ನಾವು ಜಾಗ ಇತರರಿಂದ ಕೇಳುವಂತಾಗಿದೆ. ಹಿಂದುಗಳು ಅತಿಥಿ ದೇವೋಭವ ಎಂದು ಬಂದವರಿಗೆಲ್ಲ ಜಾಗ ಕೊಟ್ಟು ಈಗ ಭಿಕ್ಷೆ ಬೇಡುವಂತಾಗಿದೆ ಎಂದರು.

ನಾನು ಮಾತ್ರ ಬದುಕಬೇಕೆಂಬ ಹಿಂದುಗಳ ಭಾವದಿಂದಾಗಿ ದೇಶದಲ್ಲಿ ಧರ್ಮ ಹಿನ್ನಡೆ ಕಂಡಿದೆ. ಒಗ್ಗಟ್ಟಿನ ಕೊರತೆ ಕಂಡುಬಂದಿದೆ. ಮುಸ್ಲಿಮರು ನಾನೂ ಬದುಕಬೇಕು, ಧರ್ಮವೂ ಬದುಕಬೇಕು ಎಂಬ ಭಾವನೆ ಹೊಂದಿದ್ದಾರೆ. ಅವರಂತೆ ನಮ್ಮಲ್ಲೂ ಮನೋಭಾವ ಬೆಳೆಯಬೇಕು. ಸೋದರತ್ವ, ಸಾಮರಸ್ಯ ಮೂಡಬೇಕು ಎಂದು ಹೇಳಿದರು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಅಯೋಧ್ಯೆ ಹೆಸರಲ್ಲಿ ಹಿಂದು-ಮುಸ್ಲಿಮರು ಸದಾ ಕಚ್ಚಾಡುತ್ತಿರಲಿ ಎಂಬ ಮನೋಭಾವದವರು ನಮ್ಮ ರಾಜಕಾರಣಿಗಳು. ಆ ವಿವಾದವನ್ನು ಮುಗಿಸಲು ಬಯಸುತ್ತಿಲ್ಲ. ಅದು ಇನ್ನೂ ನೂರಾರು ವರ್ಷ ಜೀವಂತವಿರಲೆಂದೇ ಕೋರ್ಟ್ ಕೂಡ ರಾಮ ಜನ್ಮಭೂಮಿಯನ್ನು ಇಬ್ಭಾಗಿಸಿದೆ. ಆದರೆ ಬಹುಸಂಖ್ಯಾತರು ಒಟ್ಟಾದರೆ ಯಾವುದಕ್ಕೂ ಮಣೆ ಹಾಕಬೇಕಿಲ್ಲ. ಹಿಂದುಗಳು ಹೇಡಿ-ಗಳಲ್ಲ. ಕ್ಷಾತ್ರ ತೇಜಸ್ಸುಳ್ಳವರು ಎಂದು ತೋರಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಡೀಕಯ್ಯ ಪೆರ್ವೋಡಿ, ಜಿಲ್ಲಾ ಖಜಾಂಚಿ ದಿನೇಶ ಕುಮಾರ್ ಜೈನ್, ಕರುಣಾಕರ ಶೆಟ್ಟಿ ಕೊಮ್ಮಂಡ, ಶಿವಾನಂದ ಪುಣ್ಚತ್ತಾರು, ಅಶೋಕ್ ರಾಗಿದಕುಮೇರು, ನಾರಾಯಣ ಬಲ್ಯ, ಸುರೇಶ್ ಕುಮಾರ್ ಕೋಡಿಬೈಲು ಉಪಸ್ಥಿತರಿದ್ದರು.

ಪುತ್ತೂರು ಹನೂಮತ್ ಶಕ್ತಿ ಜಾಗರಣಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಟಿ.ರಾಧಾಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.