ಕೊಡಗು ಜಿಲ್ಲೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿಭಟನಾ ಧರಣಿಯು ಮಡಿಕೇರಿಯಲ್ಲಿ ನಡೆಯಿತು.

ದೇಶದ ಇಂದಿನ ಬಹುತೇಕ ಸಮಸ್ಯೆಗಳಿಗೆ ಕಾಂಗ್ರೆಸ್ ಮತ್ತು ಇಂದಿನ ಕೇಂದ್ರ ಸರ್ಕಾರದ ನೀತಿಯೇ ಕಾರಣ ಎಂದು ಆರೆಸ್ಸೆಸ್ ವಿಭಾಗ ಸಹ ಕಾರ್ಯವಾಹ ಪ್ರಾಂತ ಸಂಚಾಲಕ ನ.ಸೀತಾರಾಮ್ ಹೇಳಿದರು. ಬುಧವಾರ ಇಲ್ಲಿನ ಕೋಟೆ ಆವರಣದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಸ್ಥಾಪನೆಗೊಂಡ ಕಾಂಗ್ರೆಸ್ಸನ್ನು ಆ ಬಳಿಕ ವಿಸರ್ಜಿಸುವಂತೆ ಗಾಂಧೀಜಿ ಸಲಹೆ ನೀಡಿದ್ದರೂ, ಸ್ವಾರ್ಥ ರಾಜಕಾರಣಕ್ಕಾಗಿ ಅದನ್ನು ಇನ್ನೂ ಉಳಿಸಿಕೊಳ್ಳಲಾಗಿದೆ. ಈ ದೇಶವನ್ನು ತುಂಡು ಮಾಡುವ ಮೂಲಕ ಅಂದಿನ ಪ್ರಧಾನಿ ನೆಹರೂರವರು ಹಾಕಿಕೊಟ್ಟ ಒಡೆದು ಆಳುವ ನೀತಿ ಯನ್ನು ಕಾಂಗ್ರೆಸ್ ಇಂದಿಗೂ ಪಾಲಿಸುತ್ತಿದ್ದು , ದೇಶದ ಗಡಿ ಸಮಸ್ಯೆಯಿಂದ ಹಿಡಿದು ಇಂದಿನ ನಕ್ಸಲ್, ಭಯೋತ್ಪಾದನೆ ಮುಂತಾದ ಸಮಸ್ಯೆಗಳಿಗೆ ನೆಹರೂ ಸಂತಾನಗಳೇ ಕಾರಣ ಎಂದು ಆರೋಪಿಸಿದರು.

ದೇಶದ ಹಿತವನ್ನು ಬಲಿ ಕೊಡುತ್ತಿರುವ ಕಾಂಗ್ರೆಸ್‌ನಿಂದ ಆರ್‌ಎಸ್ ಎಸ್ ದೇಶಪ್ರೇಮವನ್ನು ಕಲಿಯಬೇಕಾಗಿಲ್ಲ. ಜಮ್ಮು ಕಾಶ್ಮೀರದಲ್ಲಿ ತಾಂಡವವಾಡುತ್ತಿರುವ ನಿಜವಾದ ಭಯೋತ್ಪಾದನೆಯನ್ನು ಹತ್ತಿಕ್ಕಲಾಗದೆ ಅದನ್ನು ರಾಜಕೀಯ ಲಾಭಕ್ಕಾಗಿ ಪರೋಕ್ಷವಾಗಿ ಪೋಷಿಸಿಕೊಂಡು ಬರುತ್ತಿರುವ ಕಾಂಗ್ರೆಸ್ ಹಾಗೂ ಕೇಂದ್ರ ಸರಕಾರಕ್ಕೆ ಧಿಕ್ಕಾರವಿರಲಿ ಎಂದು ಹೇಳಿದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ , ರಾಜ್ಯ ಬಿಜೆಪಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಂ.ರವೀಂದ್ರ, ಜಿಪಂ ಹಾಗೂ ತಾಪಂನ ಬಿಜೆಪಿ ಸದಸ್ಯರು, ಸಂಘ ಪರಿವಾರದ ವಿವಿಧ ಮುಖಂಡರು ಹಾಜರಿದ್ದರು.