‘ಸಂಘ ಪ್ರಾರಂಭಿಸಿದ ರಾಜಕೀಯ ಪಕ್ಷ ಹಾಳಾದರೆ ಅದನ್ನು ನಾಶ ಮಾಡುವ ಶಕ್ತಿಯೂ ಸಂಘಕ್ಕೆ ಇದೆ’: ಆರೆಸ್ಸೆಸ್ ಕರ್ನಾಟಕ

ಇತ್ತೀಚಿನ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಸಾಮಾಜಿಕ ಕಳಕಳಿ ಇರುವ ಪ್ರತಿಯೊಬ್ಬರಿಗೂ ಬೇಸರ ತರಿಸುವಂತಿದೆ. ಭ್ರಷ್ಟಾಚಾರ-ಅನೈತಿಕತೆ-ಶಾಸಕರ ಖರೀದಿ ಮುಂತಾದವು ರಾಜಕಾರಣದ ಅನಿವಾರ್ಯ ಲಕ್ಷಣಗಳೇನೋ ಎಂಬಂತೆ ನಮ್ಮ ರಾಜ್ಯದ ಎಲ್ಲ ಪಕ್ಷಗಳ ಮುಖಂಡರೂ ವರ್ತಿಸುತ್ತಿರುವುದು ದೇಶಕ್ಕೆ ಒಳ್ಳೆಯ ಭವಿಷ್ಯ ಬಯಸುವವರಿಗೆ ನಿರಾಸೆ ಮೂಡಿಸುವಂತಾಗಿದೆ.

RSS KARNATAK
RSS KARNATAK

ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಇಂದಿನ ಬೆಳವಣಿಗೆಗಳಿಗೆ ಸ್ಪಂದಿಸುವ ಅನಿವಾರ್ಯತೆ ಉಂಟಾಗಿದೆ ಎಂದು ನನ್ನ ಭಾವನೆ. ಕಾರಣಗಳು ಎರಡು:

ಮೊದಲನೆಯದು, ರಾಜ್ಯದಲ್ಲಿ ಇಂದು ಆಡಳಿತ ಚುಕ್ಕಾಣಿ ಹಿಡಿದಿರುವವರಲ್ಲಿ ಸಂಘದೊಂದಿಗೆ ಸಂಪರ್ಕ ಹೊಂದಿರುವ ಕೆಲವರಿದ್ದಾರೆ. ಅವರೆಲ್ಲರ ಚಟುವಟಿಕೆಗಳನ್ನು ಜನಸಾಮಾನ್ಯರು ಸಂಘದ ದೃಷ್ಟಿಕೋನದಿಂದಲೂ ಅಳೆಯುತ್ತಿರುತ್ತಾರೆ.

ಎರಡನೆಯದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಶೈಲಿಯಲ್ಲಿ ‘ಮನೆಯೊಳಗಿನ’ ಮಾತುಕತೆಗಳನ್ನು ಸಾರ್ವಜನಿಕಗೊಳಿಸುವ ವಿಧಾನ ಇಲ್ಲದಿರುವುದು. ಸಂಘದ ಹಿರಿಯ ಕಾರ್ಯಕರ್ತರ ನಿಕಟ ಸಂಪರ್ಕದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡಿರುವ ನನಗೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಕೆಲವು ಮಾಹಿತಿ ಇರುವುದರಿಂದ ಈ ಚಿಂತನೆಗಳನ್ನು ಹಂಚಿಕೊಳ್ಳುವುದು (ಎರಡನೆಯ ಕಾರಣಕ್ಕಾಗಿ) ಸೂಕ್ತವೆಂದೆನಿಸಿ ಈ ಲೇಖನ ಬರೆಯುತ್ತಿದ್ದೇನೆ.

ಇಂದು ಬಿಜೆಪಿ ಪಕ್ಷ ಹಾಗೂ ಸರಕಾರ ನಮ್ಮ ರಾಜ್ಯದಲ್ಲಿ ಮಾಡುತ್ತಿರುವ ಎಲ್ಲ ಚಟುವಟಿಕೆ ಮತ್ತು ನಿರ್ಣಯಗಳಿಗೂ ಸಂಘದ ‘ತಾತ್ವಿಕ-ವ್ಯಾವಹಾರಿಕ’ ಒಪ್ಪಿಗೆ ಇಲ್ಲ. ಭ್ರಷ್ಟಾಚಾರ-ಶಾಸಕರ ಖರೀದಿ-ಅನೈತಿಕ ನಿರ್ಧಾರಗಳನ್ನು ಸಂಘ ವಿರೋಧಿಸುತ್ತದೆ. ಗೋಹತ್ಯೆ ನಿಷೇಧವನ್ನು ಸ್ವಾಗತಿಸುವಂತೆಯೇ ಎಸ್‌ಇಝಡ್ ಅನ್ನು ಸಂಘದ ಸ್ವಯಂಸೇವಕರು ವಿರೋಧಿಸುತ್ತಿದ್ದಾರೆ. ಹಲವಾರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೂ ಸ್ವಂತಕ್ಕೆ ಬಿಡಿಗಾಸನ್ನೂ ಅನೈತಿಕವಾಗಿ ಸಂಪಾದಿಸದ ಸ್ವಯಂಸೇವಕರನ್ನು ತನ್ನ ಬೈಠಕ್‌ಗಳಲ್ಲಿ ಮೆಚ್ಚಿ ಉದಾಹರಿಸುವಂತೆಯೇ ಸಂಘದ ಪ್ರಮುಖರು, ಭ್ರಷ್ಟರಾಗಿ ಜಾರಿರುವವರ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸುತ್ತಾರೆ. ಅಂತಹವರಿಗೆ ಕಠಿಣ ಶಬ್ದಗಳಲ್ಲಿ ತಿಳಿಸಿಯೂ ಇದ್ದಾರೆ.

ಕೇವಲ ಆಕ್ರೋಶ ವ್ಯಕ್ತಪಡಿಸುವುದರಿಂದೇನು ಪ್ರಯೋಜನ? ಏನಾದರೂ ಕ್ರಮಕೈಗೊಳ್ಳಬೇಕು- ಎಂಬುದು ಅನೇಕರ ಅಂಬೋಣ. ಸಂಘವು ತನ್ನ ಸ್ವಯಂಸೇವಕರಲ್ಲಿ ಬದಲಾವಣೆ ತರಲು ಸದಾ ಪ್ರಯತ್ನಿಸುವ ಮಾರ್ಗ-ಮನಃಪರಿವರ್ತನೆಯದ್ದೇ. ಅದು ಜಾತಿಪ್ರಜ್ಞೆಯನ್ನು ಹೋಗಲಾಡಿಸುವ ಪ್ರಯತ್ನವಿರಲಿ, ಭ್ರಷ್ಟಾಚಾರದಿಂದ ಮುಕ್ತನಾಗಬೇಕಾದ ಪ್ರಯತ್ನವಿರಲಿ, ವ್ಯಕ್ತಿಗತವಾದ ಬದಲಾವಣೆಯೇ ಅಂತಿಮವಾಗುತ್ತದೆ. ಈ ದೃಷ್ಟಿಯಿಂದ ಸಂಘದ ಅನೇಕ ಪ್ರಮುಖರು ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ರಾಜ್ಯದಲ್ಲಿ ಬಿಜೆಪಿ ಆಡಳಿತ ಇರುವ ಸರಕಾರ ಇದ್ದರೂ ಇಲ್ಲದಿದ್ದರೂ ಈ ಪ್ರಯತ್ನ ನಡೆದೇ ಇರುತ್ತದೆ.

ಸಂಘವೆಂಬ ವಿಶ್ವವಿದ್ಯಾಲಯದಲ್ಲಿ ಸಚ್ಚಾರಿತ್ರದ-ನೈತಿಕತೆಯ-ಸಮಾಜಪ್ರೇಮದ ಪಾಠ ಕಲಿತ ಲಕ್ಷಾಂತರ ಸ್ವಯಂಸೇವಕರು ಪ್ರಥಮಶ್ರೇಣಿಯಲ್ಲಿ ಉತ್ತೀರ್ಣರಾಗಿರುವಂತೆಯೇ ಸಾಮಾಜಿಕಜೀವನದಲ್ಲಿ ‘ನಪಾಸಾಗಿ’ ಜಾರಿರುವ ಕೆಲವರೂ ಇದ್ದಾರೆ. ಜಾರಿರುವವರನ್ನು ಮೇಲೆತ್ತಲು ಸಂಘದ ಸಹಸ್ವಯಂಸೇವಕರ ಸಹಾಯ ಎಷ್ಟು ಅಗತ್ಯವೋ, ಜಾರಿರುವವರ ಸ್ವಂತಪ್ರಯತ್ನ ಅದಕ್ಕಿಂತಲೂ ಹೆಚ್ಚು ಅಗತ್ಯ. ಈಗಿರುವ ರಾಜ್ಯದ ಮಂತ್ರಿ ಮಂಡಲದಲ್ಲೂಯಾರ ಬಗೆಗೆ ಜನಸಾಮಾನ್ಯರಲ್ಲಿ ‘ಸ್ವಚ್ಛರು’ ಎಂಬ ಪ್ರತಿಮೆಇದೆಯೋ ಅವರೆಲ್ಲರೂ ಸಂಘದ ಸ್ವಯಂಸೇವಕರೇ ಎಂಬುದನ್ನುಮರೆಯಬಾರದಲ್ಲವೆ?

ಬೆಂಗಳೂರಿನ ಸಂಘ ಕಾರ್ಯಾಲಯ ‘ಕೇಶವಕೃಪಾ’ಕ್ಕೆ ರಾಜ್ಯದ ಬಿಜೆಪಿ ಮುಖಂಡರು ಆಗಾಗ ಭೇಟಿ ನೀಡುವ ಬಗ್ಗೆಯೂ ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹಾಗಾಗಿಯೇ, ನೀವ್ಯಾಕೆ ‘ಕಿವಿಹಿಂಡಿ’ ಹೇಳುವುದಿಲ್ಲ? ಎಂದೂ ಪ್ರಶ್ನಿಸುತ್ತಾರೆ. ಮೇಲೆ ಹೇಳಿದ ಸಂಘದ ‘ತಾತ್ವಿಕ ನಿಲುಮೆಗಳಿಗೆ’ ಅನುಸಾರವಾಗಿಯೇ ಈ ರೀತಿ ಭೇಟಿ ನೀಡುವ ಪ್ರಮುಖರ ಬಳಿ ಸಂಘ ತನ್ನ ಅಭಿಪ್ರಾಯವ್ಯಕ್ತಪಡಿಸುತ್ತದೆ. ಅನೇಕ ಬಾರಿ ಕಠೋರ ಶಬ್ದಗಳಲ್ಲೂ ತಿಳಿಸುತ್ತದೆ. ಕೇಶವಕೃಪಾಕ್ಕೆ ಯಾರನ್ನೂ ‘ನೀವು ಬರಬೇಡಿ’ ಎಂದು ಸಂಘವು ಹೇಳುವುದು ಸರಿಯಲ್ಲ. ಸಮಾಜದ ಎಲ್ಲ ವರ್ಗ-ರಂಗಗಳ ಜನರಿಗೂ ಸಂಘಕಾರ್ಯಾಲಯದ ಬಾಗಿಲು ಸದಾ ಮುಕ್ತವಾಗಿತೆರೆದಿರುತ್ತದೆ. ಕೇವಲ ಬಿಜೆಪಿ ಮಾತ್ರವಲ್ಲ, ಅನ್ಯ ರಾಜಕೀಯ ಪಕ್ಷಗಳ ಮುಖಂಡರೂ, ತಾತ್ವಿಕವಾಗಿ ಸಂಘದ ವಿಚಾರವನ್ನು ಒಪ್ಪದಿರುವವರೂ, ಬುದಿಜೀವಿ-ಸಾಹಿತಿಗಳೂ, ಸಾಮಾಜಿಕ ಕಾರ್ಯಕರ್ತರೂ- ಹೀಗೆ ನೂರಾರು ಮಂದಿ ಕಾರ್ಯಾಲಯಕ್ಕೆ ಭೇಟಿ ನೀಡುವುದು ನಿತ್ಯ ಸಂಗತಿ. ಒಂದು ಸಾಮಾಜಿಕ ಸಂಘಟನೆಯಾಗಿ ಸಂಘ ಯಾರಿಗೂ ಬಾಗಿಲು ಮುಚ್ಚಲು ಸಾಧ್ಯ ಇಲ್ಲ. ಆದರೂ, ಬಿಜೆಪಿ ಮಾಡುವ ಎಲ್ಲ ಚಟುವಟಿಕೆಗಳಿಗೂಸಂಘದ ಒಪ್ಪಿಗೆ ಇದೆ ಎಂಬ ತಪ್ಪು ಭಾವನೆ ಸಂಘದಹಿತೈಷಿಗಳ ಮನಸ್ಸಿನಲ್ಲಿ ಮೂಡಬಾರದೆಂಬ ಎಚ್ಚರಿಕೆ ವಹಿಸುವ ದೃಷ್ಟಿಯಿಂದ ‘ರಾಜಕೀಯ ಮೇಲಾಟ-ಕೀಳಾಟ’ಗಳ ಬಗ್ಗೆ ಚರ್ಚೆಗಾಗಿಯೇ ಸಂಘ ಕಾರ್ಯಾಲಯಕ್ಕೆ ಭೇಟಿ ನೀಡುವುದು ಸೂಕ್ತವಲ್ಲ ಎಂದುಸಂಬಂಧಿಸಿದವರಿಗೆ ಇತ್ತೀಚೆಗೆ ಸಂಘ ತಿಳಿಸಿದೆ. (ಇನ್ನೊಂದು ವಿಚಾರವಿದೆ. ಸಂಘ ಕಾರ್ಯಾಲಯಕ್ಕೆ ಕೆಲವರು ಬರುವುದ ರಿಂದ ಅಥವಾ ಬಾರದಿರುವುದರಿಂದ ಸ್ವಯಂಸೇವಕರ ನೈತಿಕಹೊಣೆಗಾರಿಕೆಯಲ್ಲೇನೂ ವ್ಯತ್ಯಾಸ ಆಗುವುದಿಲ್ಲ. ನೀವು ‘ಜಾರಬೇಡಿ’ ಎಂದು ಹೇಳುವ ಸಲುವಾಗಿಯಾದರೂ ಅವರ ಭೇಟಿ ಕೆಲವೊಮ್ಮೆ ಸಂಘದ ಪ್ರಮುಖರೊಂದಿಗೆ ಅನಿವಾರ್ಯ ವಲ್ಲವೆ?)

ಇನ್ನು ‘ಸಂಘವು ಏನಾದರೂ ಕ್ರಮ ಕೈಗೊಳ್ಳುವ’ ಮಾತು: ಸಂಘದ ಕಾರ್ಯಪದಟಛಿತಿಯ ಅರಿವಿರುವ ಎಲ್ಲರಿಗೂ ಸಂಘ ಮತ್ತು  ವಿವಿಧ ಸಂಘಟನೆಗಳ ನಡುವಿನ ಸಂಬಂಧದ ರೀತಿಯ ಬಗ್ಗೆ ತಿಳಿದೇ ಇರುತ್ತದೆ. ಸಂಘಟನೆಗಳ ನೀತಿಗೆ ಸಂಬಂಧಿಸಿದ ವಿಷಯವಿರಲಿ, ವ್ಯಕ್ತಿಗತ ನಡೆವಳಿಕೆಗೆ ಸಂಬಂಧಿಸಿದ ವಿಷಯವಿರಲಿ, ಸಂಬಂಧಪಟ್ಟಸಂಘಟನೆಯಲ್ಲಿರುವ ಸ್ವಯಂಸೇವಕರೇ ಸರಿಪಡಿಸಿಕೊಂಡು, ಸಮಾಜಹಿತದ ನಿರ್ಣಯ ತೆಗೆದುಕೊಳ್ಳಬೇಕು. ಸಂಘವು ಆಗ್ರಹಪೂರ್ವಕವಾಗಿ ಹೇಳುವ ವಿಷಯಗಳನ್ನು ಅಲ್ಲಿರುವ ಜವಾಬ್ದಾರಿಯುತ ವ್ಯಕ್ತಿಗಳೇ ಜಾರಿಮಾಡಬೇಕು. ಉದಾಹರಣೆಗೆ; ‘ಹೊಸಪೀಳಿಗೆಯ ವ್ಯಕ್ತಿಗಳನ್ನು ನೀತಿನಿರ್ಣಾಯಕ ಸ್ಥಾನಗಳಿಗೆ ತನ್ನಿ’ ಎಂಬ ಸಲಹೆಯನ್ನು ಬಿಜೆಪಿಯ ರಾಷ್ಟ್ರೀಯ ಮುಖಂಡರಿಗೆ ಸಂಘದ ಪ್ರಮುಖರು ನೀಡಿದಾಗ ನಿತಿನ್ ಗಡ್ಕರಿಯವರನ್ನು ಬಿಜೆಪಿಯು ತನ್ನ ಅಧ್ಯಕ್ಷರನ್ನಾಗಿ ಆರಿಸಿಕೊಂಡಿತು. ಹಾಗೆಯೇ, ಭ್ರಷ್ಟಾಚಾರ ಮುಕ್ತವಾದ, ನಮ್ಮ ಸಂಸ್ಕೃತಿ-ಮೌಲ್ಯಗಳಿಗೆ ಬದವಾದ ಆಡಳಿತ ನಡೆಸಿ, ಸಚ್ಚಾರಿತ್ರuಉವಂತ ವ್ಯಕ್ತಿಗಳ ರಾಜಕೀಯ ಪಕ್ಷವನ್ನು ಕಟ್ಟಿ ಎಂದು ಬಿಜೆಪಿಯಲ್ಲಿರುವ ಸ್ವಯಂಸೇವಕರಿಗೆ ಸಂಘವು ಆಗ್ರಹಪೂರ್ವಕವಾಗಿ ತಿಳಿಸುತ್ತಲೇ ಇರುತ್ತದೆ. ಜಾರಿ ಮಾಡಬೇಕಾದುದು ಅಲ್ಲಿರುವವರ ಹೊಣೆಯೂ ಆಗಿದೆ. (ಪಕ್ಷದ ಅಧ್ಯಕ್ಷರ ಆಯ್ಕೆಯಂತಹ ವಿಷಯ ಪಕ್ಷದ ಒಳಗಿನ ಒಂದು ಸಂಘಟನಾತ್ಮಕ ಪ್ರಕ್ರಿಯೆ ಮಾತ್ರ. ಆದರೆ ಭ್ರಷ್ಟಾಚಾರ ಮತ್ತು ಸರಕಾರದ ನೀತಿನಿಯಮಗಳಂತಹ ವಿಷಯಗಳು ನಮ್ಮ ದೇಶದ ಇಂದಿನ ಸಮಾಜದ ಮನಸ್ಥಿತಿಯನ್ನೂ ಅವಲಂಬಿಸಿರುವ ಇನ್ನಷ್ಟು ವ್ಯಾಪಕ ವಿಷಯ ಎಂಬುದೂ ಸತ್ಯ. ಭ್ರಷ್ಟಾಚಾರಮುಕ್ತ ಆಡಳಿತ ವ್ಯವಸ್ಥೆ ನಮ್ಮ ಸಮಾಜದ ಪ್ರಾತಿನಿಧಿಕ ಸ್ವರೂಪ ಆಗಬಲ್ಲುದೇ ಹೊರತು, ಎಲ್ಲಿಂದಲೋ ಇಳಿದುಬರಲು ಸಾಧ್ಯವಿಲ್ಲ. ಈ ಅಂಶವು ‘ವ್ಯಕ್ತಿ ನಿರ್ಮಾಣದಿಂದ ಸಾಮಾಜಿಕ ಪರಿವರ್ತನೆ’ ಎಂಬ ಸಂಘದನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.)

ಇಂದಿನ, ನಮ್ಮ ರಾಜ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆಯೇ ತಿಳಿಸುವುದಾದರೆ, ಬಿಜೆಪಿ ಮುಖಂಡರು, ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲು ಭೇಟಿ ನೀಡಿದಾಗ ಸಂಘದ ಪ್ರಮುಖರೊಬ್ಬರು ಅವರಿಗೆ ನೀಡಿದ ಮೊಟ್ಟ ಮೊದಲ ಸಲಹೆ-‘ಸರಕಾರವನ್ನು ವಿಸರ್ಜಿಸಿ, ಜನರ ಬಳಿಗೆ ಹೋಗಿ’ ಎಂಬುದಾಗಿತ್ತು. ಭ್ರಷ್ಟಾಚಾರದ ಆರೋಪವಿರುವವರನ್ನೂ ಅನೈತಿಕವಾಗಿ ನಡೆದುಕೊಳ್ಳುತ್ತಿರು ವವರನ್ನೂ ಪ್ರಮುಖಸ್ಥಾನದಿಂದ ಕೈಬಿಡಿ ಎಂಬುದೂ ಸಂಘದ ಪ್ರಮುಖರು ನೀಡಿರುವ ಇನ್ನೊಂದು ಸಲಹೆ. ಜಾರಿಮಾಡುವವರಿಗೆ ಇಚ್ಛಾಶಕ್ತಿ ಬೇಕು. ಸಂಘವೇ ಜಾರಿಮಾಡಲು ಸಾಧ್ಯವಿಲ್ಲ. ನಮ್ಮ ದೇಶ ಸ್ವೀಕರಿಸಿರುವ ಪ್ರಜಾತಂತ್ರೀಯ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷವೊಂದಕ್ಕೆ ತನ್ನದೇಆದ ಕಾರ್ಯವಿಧಾನ ಒಂದಿರುತ್ತದೆ. ಅದಕ್ಕಿಂತಲೂ ಮುಖ್ಯವಾಗಿ‘ರಾಜಕೀಯ’ ಇರುತ್ತದೆ. ಭೋಳೇ ಸ್ವಭಾವದವರಾಗಿ ಸದ್ಗುಣವಿಕೃತಿ(ನಮ್ಮ ಒಳ್ಳೆಯ ಗುಣದಿಂದಾಗಿಯೇ ಮೋಸ) ಹೊಂದುವುದೂ ಸರಿಯಲ್ಲ. ಅಂತೆಯೇ ತಂತ್ರಗಾರಿಕೆ ನೆಪದಲ್ಲಿ ಅನೈತಿಕಮಾರ್ಗ ಹಿಡಿಯುವುದನ್ನೂ ಸಂಘವು ಎಂದೂ ಒಪ್ಪುವುದಿಲ್ಲ. ಬಿಜೆಪಿಯ ಮುಖಂಡರಿಗೆ ಸಂಘ ಬುದಿಹೇಳಬೇಕೆಂದು ಬಿಜೆಪಿಯ ಪ್ರತಿಪಕ್ಷಗಳ ಮುಖಂಡರೂ (ಸಂಘಕ್ಕೆ ಯಾವುದೇ ಪ್ರತಿಪಕ್ಷ ಇಲ್ಲ.) ಇತ್ತೀಚೆಗೆ ತಿಳಿಸಿರುವುದು ಪತ್ರಿಕೆಗಳಲ್ಲಿ ವರದಿ ಯಾಗಿದೆ. ಬಿಜೆಪಿಯಂತಹ ರಾಜಕೀಯ ಪಕ್ಷಕ್ಕೆ ಸಲಹೆ ನೀಡುವ ನೈತಿಕ ಶಕ್ತಿ ಸಂಘಕ್ಕೆ ಇದೆ ಎಂಬುದನ್ನು ಆ ಪಕ್ಷ ವಿರೋಧಿಗಳೂ ಸ್ವೀಕರಿಸಿದ್ದಾರೆಂದು ಸ್ಪಷ್ಟವಾಗುತ್ತದೆ. ‘ಶಾಸಕರ ಖರೀದಿ-ಭ್ರಷ್ಟಾಚಾರದ’ ಬಗ್ಗೆ ಬಿಜೆಪಿಗೆ ತಿಳಿಹೇಳಬೇಕೆಂದು ನಮ್ಮ ರಾಜ್ಯದ ಪ್ರಮುಖ ರಾಜಕಾರಣಿ ಒಬ್ಬರು ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರಂತೆ. ಈ ರೀತಿ ಹೇಳುತ್ತಿರುವವರೂ ‘ದಂಧೆ’ ಮಾಡುತ್ತಿರುವ ರಾಜಕಾರಣಿಯೇ. ರಥ ಹೂತು ಹೋದಾಗ ಕರ್ಣನಿಗೆ ‘ಧರ್ಮಪ್ರಜ್ಞೆ’ ಜಾಗೃತವಾದಂತಹ ಸ್ಥಿತಿ ಇದು.

ಸಮಾಜದಲ್ಲಿ ನೈತಿಕತೆ ಎತ್ತಿಹಿಡಿಯುವ ದೃಷ್ಟಿಯಿಂದ ಸಂಘಕ್ಕೆ ಅದರದೇ ಆದ ಚಿಂತನಾವಿಧಾನವೊಂದಿದೆ. ಉದಾಹರಣೆಗೆ, ಭ್ರಷ್ಟಾಚಾರವನ್ನೇ ತೆಗೆದುಕೊಳ್ಳಿ. ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಮತ್ತು ಜನಸಾಮಾನ್ಯರು-ಎಲ್ಲರಲ್ಲೂ ಬದಲಾವಣೆ ಆದಾಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಆಗಬಹುದು. ಇದರಲ್ಲಿ ಯಾವುದೋ ಒಂದು ಗುಂಪು ಭ್ರಷ್ಟವಾಗಿದ್ದರೂ ವ್ಯವಸ್ಥೆಯ ಪರಿವರ್ತನೆ ಸಾಧ್ಯವಿಲ್ಲ. ನಾಲ್ಕೂ ಗುಂಪಿನಲ್ಲೂ ಒಳ್ಳೆಯ ನೇತೃತ್ವ ನಿರ್ಮಾಣ ಮಾಡುವ ಪ್ರಯತ್ನದಲ್ಲಿ ಸಂಘವಿದೆ. ಒಳ್ಳೆಯ ಗುಣಗಳು ಮೇಲಿನಿಂದ ಕೆಳಗೆ ಇಳಿಯಬೇಕು ಎಂಬುದು ಸತ್ಯವೇ ಆದರೂ, ಸಮಾಜದಲ್ಲಿ ಅಂತಹ ಗುಣ ಹೊಂದಿರುವವರ ಸಂಖ್ಯೆ ಹೆಚ್ಚಾಗದೇ ಮೇಲಿರುವವರಲ್ಲಿ ಮಾತ್ರ ಅದಿರಲು ಸಾಧ್ಯವಿಲ್ಲ ಎಂಬುದೂ ಸ್ಪಷ್ಟ. ಹಾಗಾಗಿಯೇ, ವ್ಯಕ್ತಿಗಳಲ್ಲಿ ಗುಣ ನಿರ್ಮಾಣದ ಕೆಲಸವನ್ನು ಸಂಘ ನಿರಂತರವಾಗಿ ಮಾಡಿಕೊಂಡು ಬಂದಿದೆ.

ರಾಜಕೀಯ ಪಕ್ಷಕ್ಕೆ ಸಂಘದ ಸ್ವಯಂಸೇವಕನಾಗಿ ಪ್ರವೇಶಮಾಡಿ,ಅಲ್ಲೊಂದು ಹೊಸ ವಿಚಾರ-ಸಂಸ್ಕೃತಿಯನ್ನು ಬಿತ್ತಿದ ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಬಳಿ, ಮತ್ತೊಬ್ಬ ಸ್ವಯಂಸೇವಕರು ಪ್ರಶ್ನಿಸಿದರಂತೆ: ‘Power corrupts, Absolute power corrupts Absolutely’ ಎಂದಿದೆಯಲ್ಲ. ಜನಸಂಘದ ಪ್ರಮುಖರಿಗೆ ಅಧಿಕಾರ ಬಂದರೆ ಹಾಗಾಗುವುದಿಲ್ಲವೆ?’ ದೀನದಯಾಳರು ‘ಆಗುವ ಸಂಭವ ಇದೆ’ ಎಂದರಂತೆ. ಸ್ವಯಂ ಸೇವಕ ಮುಂದಿನ ಪ್ರಶ್ನೆ ಕೇಳಿದ: ‘ಆ ರೀತಿ ಆದರೆ ಭವಿಷ್ಯಕ್ಕೆ ಭರವಸೆ ಏನು?’ ದೀನದಯಾಳ್ ಅವರ ಉತ್ತರ: ‘ಸಂಘದ ಶಕ್ತಿ’. ಮುಂದುವರಿಸಿ ಅವರು ಹೇಳಿದರಂತೆ ‘ಸಂಘ ಪ್ರಾರಂಭಿಸಿದ ರಾಜಕೀಯ ಪಕ್ಷ ಹಾಳಾದರೆ ಅದನ್ನು ನಾಶ ಮಾಡುವ ಶಕ್ತಿಯೂ ಸಂಘಕ್ಕೆ ಇದೆ’. ಸ್ವಯಂಸೇವಕನ ಮುಂದಿನ ಪ್ರಶ್ನೆ: ‘ಮತ್ತೊಮ್ಮೆ ಹಾಳಾದರೆ?’ ದೀನದಯಾಳ್ ಅವರು ನಗುತ್ತಾ ಉತ್ತರಿಸುತ್ತಾರೆ: ‘ಪರಶುರಾಮ ಕ್ಷತ್ರಿಯ ನಾಶಕ್ಕಾಗಿ ೨೧ ಬಾರಿ ಭೂಪ್ರದಕ್ಷಿಣೆ ಮಾಡಿದಎಂಬ ಪುರಾಣದ ಕತೆಯನ್ನು ನೀನು ಕೇಳಿಲ್ಲವೆ? ಎಲ್ಲಿಯವರೆಗ ರಾಮನ ಅವತಾರ ಆಗಲಿಲ್ಲವೋ ಅಲ್ಲಿಯವರೆಗೆ ಪರಶುರಾಮ ವಿಶ್ರಮಿಸಲಿಲ್ಲ. ರಾಮ ಬಂದಾಗಲೇ ಅವನ ಕೆಲಸ ಮುಗಿದದ್ದು.

ಹಾಗಾಗಿ ಸಂಘದಶಕ್ತಿ- ಈ ದೇಶದ ಸಜ್ಜನಶಕ್ತಿ ಅಸಹಾಯಕವೇನೂ ಅಲ್ಲ. ಅದರ ಮೇಲೆ ಭರವಸೆ ಇಡು. ಪರಶುರಾಮನಂತೆ ನಾಶ ಮಾಡುವ, ಮತ್ತೆ ಸೃಷ್ಟಿ ಮಾಡುವ ಎರಡೂ ಶಕ್ತಿ ಸಂಘಕ್ಕಿದೆ. ಸಮಯ ಬಂದಾಗ ನಿರ್ಣಯಿಸುವ ಪ್ರಬುದತೆಯೂ ಇದೆ’.

ಸಂಘದ ಅಂತಿಮ ಗುರಿ ‘ಒಂದು ಸರಕಾರ ಅಥವಾ ಒಬ್ಬರು ಮುಖ್ಯಮಂತ್ರಿ/ಪ್ರಧಾನಮಂತ್ರಿ’ ಅಲ್ಲ. ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಆಧಾರದ ಮೇಲೆ ನಿಂತಿರುವ ಸುಸಂಘಟಿತ ಸಮಾಜದ ನಿರ್ಮಾಣ. ಆ ಹಾದಿಯಲ್ಲಿ ಸಂಘವು 8½ ದಶಕಗಳಲ್ಲಿ ವಿಶ್ವಾಸದ ಹೆಜ್ಜೆಯನ್ನೇ ಇರಿಸಿದೆ. ಇದರ ಫಲಶ್ರುತಿಯಾಗಿ ಆಗಿರುವ ಪರಿವರ್ತನೆಯು ಸಂಘಕ್ಕೆ ಸಮಾಧಾನವನ್ನೂ ತಂದಿದೆ. ದೇಶದಾದ್ಯಂತ ಲಕ್ಷಾಂತರ ಸ್ವಯಂಸೇವಕರು ಸಾಮಾಜಿಕ ಪರಿವರ್ತನೆಯ ಕಾರ್ಯದಲ್ಲಿ ತೊಡಗಿದ್ದಾರೆ. ಇಂದು ದೇಶದಲ್ಲಿ 1 ಲಕ್ಷ 53 ಸಾವಿರ ಸೇವಾ ಚಟುವಟಿಕೆಗಳನ್ನೂ 32,೦೦೦ಶಾಲಾ-ಕಾಲೇಜುಗಳನ್ನೂ ಸಾವಿರಾರು ವನವಾಸಿ ಹಾಡಿಗಳಲ್ಲಿ ಬದಲಾವಣೆಯ ಚಟುವಟಿಕೆಗಳನ್ನೂ ನಡೆಸುತ್ತಿರುವಂತಹ ದೃಶ್ಯ ವನ್ನು ಯಾರು ಬೇಕಾದರೂ ವೀಕ್ಷಿಸಬಹುದು. ಇಂತಹ ಬೃಹತ್ ಚಿತ್ರದ ಭಿತ್ತಿಯಲ್ಲಿ ‘ಸರಕಾರ ರಚನೆ’ ಅಥವಾ ‘ರಾಜಕೀಯ ಪಕ್ಷ’ ಎಂಬುದು ಕೇವಲ ಒಂದಂಶ ಅಷ್ಟೇ. ಹಾಗಾಗಿ ಸಂಘದ ಹಿತೈಷಿಗಳೂ, ಬಿಜೆಪಿಯ ಪ್ರತಿಪಕ್ಷಗಳಲ್ಲಿರುವವರೂ ಆತಂಕಿತರಾಗಬೇಕಿಲ್ಲ.

(ಕರ್ನಾಟಕದ ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು
25.10.2010
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಶ್ರೀ ಮುಕುಂದ, ಪ್ರಾಂತ ಪ್ರಚಾರಕರು, ಆರೆಸ್ಸೆಸ್ ಇವರ ಪ್ರತಿಕ್ರಿಯಾತ್ಮಕ ಲೇಖನ)

Vishwa Samvada Kendra

2 thoughts on “‘ಸಂಘ ಪ್ರಾರಂಭಿಸಿದ ರಾಜಕೀಯ ಪಕ್ಷ ಹಾಳಾದರೆ ಅದನ್ನು ನಾಶ ಮಾಡುವ ಶಕ್ತಿಯೂ ಸಂಘಕ್ಕೆ ಇದೆ’: ಆರೆಸ್ಸೆಸ್ ಕರ್ನಾಟಕ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

'RSS has all powers Creation, destruction and re-creation'

Tue Oct 26 , 2010
The recent political developments in Karnataka are disappointing to all those having a social concern. Those anticipating a good future for the country have been disappointed by the leaders of all political parties who have been acting as if corruption, immorality and horse trading are the inevitable features of politicking. […]