ಬಹುಮಂದಿಗೆ ಆರ್.ಎಸ್.ಎಸ್ (ಆರೆಸ್ಸೆಸ್) ಎಂಬ ಹೆಸರಿನಿಂದಲೇ ಪರಿಚಿತವಾಗಿರುವ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ೧೯೨೫ರ ಸೆಪ್ಟೆಂಬರ್ ೨೫ರ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರದಲ್ಲಿನ ಮೊಹಿತೇವಾಡ ಎಂಬಲ್ಲಿ ಸಂಘದ ಶುಭಾರಂಭವಾಯಿತು. ಹೆಸರಿನಲ್ಲೇ ಉಲ್ಲೇಖವಾಗಿರುವಂತೆ ರಾಷ್ಟ್ರಸೇವೆಯನ್ನು ನಿಸ್ವಾರ್ಥ ಭಾವನೆಯಲ್ಲಿ ಮಾಡಲು ಸ್ವಯಂಪ್ರೇರಣೆಯಿಂದ ತೊಡಗಿರುವವರು-ಅಂದರೆ ಸ್ವಯಂಸೇವಕರು, ಅವರೆಲ್ಲರ ಸಂಘಟನೆಯಿದು. ಸಂಘದ ಸಂಸ್ಥಾಪಕರು ಡಾ|| ಹೆಡಗೇವಾರ್ ಸ್ವಾತಂತ್ರ್ಯ ಆಂದೋಲನದಲ್ಲೂ ಭಾಗವಹಿಸಿದವರು. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಸಾಂಸ್ಕೃತಿಕ-ಐತಿಹಾಸಿಕ ನೆಲೆಗಟ್ಟಿನಲ್ಲಿ ರೂಪಿಸಿ, ರಾಷ್ಟ್ರದ ಉನ್ನತಿಗಾಗಿ ಎಲ್ಲ ಕ್ಷೇತ್ರಗಳಲ್ಲೂ ಶ್ರಮಿಸುವ ನಿಸ್ವಾರ್ಥ-ಸಮರ್ಪಿತ ಕಾರ್ಯಕರ್ತರನ್ನು ಸಂಘಟಿಸಿ ಪರಮವೈಭವದತ್ತ ರಾಷ್ಟ್ರವನ್ನು ಕೊಂಡೊಯ್ಯುವುದೇ ಸಂಘಸ್ಥಾಪನೆಯ ಉದ್ದೇಶವಾಗಿತ್ತು. ಇದಕ್ಕಾಗಿ ಬೇಕಾದ ಕಾರ್ಯಕರ್ತರ ನಿರ್ಮಾಣಕ್ಕಾಗಿ ಸಂಘದ ’ಶಾಖೆ’ಗಳು ರೂಪುಗೊಂಡವು. ಒಂದು ಗಂಟೆಯ ಅವಧಿಯ ವಿವಿಧ ಚಟುವಟಿಕೆಗಳಲ್ಲಿ ಶಾರೀರಿಕ-ಬೌದ್ಧಿಕ-ವೈಚಾರಿಕವಾಗಿ ಸಂಸ್ಕಾರ ನೀಡುವ, ಕಾರ್ಯಕರ್ತರನ್ನು ನಿರ್ಮಿಸುವ ಕೇಂದ್ರ ಶಾಖೆ. ಹೀಗೆ ತಯಾರಾದ ಕಾರ್ಯಕರ್ತರು ಮುಂದೆ ಸಂಘದ ವಿವಿಧ ಜವಾಬ್ದಾರಿಗಳನ್ನು ವಹಿಸಿ ಸಾಮಾಜಿಕವಾಗಿ ಸಕ್ರಿಯರಾಗುತ್ತಾರೆ. ಸಂಘಸ್ಥಾಪಕ ಹೆಡಗೇವಾರರು ಸಂಘದ ಮೊದಲನೇ ಸರಸಂಘಚಾಲಕ (ಮುಖ್ಯಸ್ಥರಾದರು). ೧೯೪೦ರಲ್ಲಿ ಅವರ ನಿಧನಾ ನಂತರ ಮಾಧವ ಸದಾಶಿವ ಗೋಳ್ವಲ್ಕರ್ (ಶ್ರೀ ಗುರೂಜಿ ಎಂದೇ ಪರಿಚಿತ) ಎರಡನೇ ಸರಸಂಘಚಾಲಕರಾಗಿ ಸಂಘದ ಸಾರಥ್ಯವಹಿಸಿದರು. ಸ್ವಾತಂತ್ರ್ಯ ಪ್ರಾಪ್ತಿ, ದೇಶ ವಿಭಜನೆ, ಪಾಕ್‌ಆಕ್ರಮಣ ಹೀಗೆ ಅನೇಕ ವಿಷಮ ಪರಿಸ್ಥಿತಿಗಳಲ್ಲಿ ಸಂಘನೌಕೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು.

೧೯೭೩ರಲ್ಲಿ ಗುರೂಜಿ ನಿಧನದ ತರುವಾಯ ಮಧುಕರ ದತ್ತಾತ್ರೇಯ ದೇವರಸ್ (ಬಾಳಾಸಾಹೇಬ್ ದೇವರಸ್) ಸಂಘದ ೩ನೇ ಸರಸಂಘಚಾಲಕರಾದರು. ನಂತರದ ಅವಧಿಯಲ್ಲಿ ಪ್ರೊ||ರಾಜೇಂದ್ರ ಸಿಂಹಜೀ (ರಜ್ಜೂಭೈಯ್ಯಾ) ಮಾನ್ಯ ಕು.ಸೀ.ಸುದರ್ಶನ್‌ಜೀ ಕ್ರಮವಾಗಿ ೪ನೇ ಮತ್ತು ೫ನೇ ಸರಸಂಘಚಾಲಕರಾದರು. ೨೦೦೯, ಮಾರ್ಚ್ ೨೧ರಿಂದ ಮಾನ್ಯ ಮೋಹನ್‌ಜೀ ಭಾಗವತ್‌ರು ಸಂಘದ ೬ನೇ ಸರಸಂಘಚಾಲಕರಾಗಿ ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಘಟನೆಯೆಂಬ ಹೆಗ್ಗಳಿಕೆಗೆ ಪಾತ್ರವಾದ ಆರೆಸ್ಸೆಸ್‌ನ ಸಾರಥ್ಯವಹಿಸಿದ್ದಾರೆ. ಸಂಘಕಾರ್ಯದ ವಿಸ್ತಾರದ ಜತೆಗೇ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ-ಏಕತೆ ಸಾಧಿಸುವ ಉದ್ದೇಶದಿಂದ ಪರಿವಾರ ಸಂಘಟನೆಗಳು ಆರಂಭಗೊಂಡವು. ೧೯೪೯ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP), ೧೯೬೪ರಲ್ಲಿ ವಿಶ್ವಹಿಂದೂಪರಿಷತ್(VHP), ಮುಂದಿನ ವರ್ಷಗಳಲ್ಲಿ ಭಾರತೀಯ ಮಜ್ದೂರ್ ಸಂಘ (BMS), ಭಾರತೀಯ ಕಿಸಾನ್ ಸಂಘ (BKS), ಭಾರತೀಯ ಜನತಾ ಪಾರ್ಟಿ (BJP), ವನವಾಸಿ ಕಲ್ಯಾಣ ಆಶ್ರಮ (VKA), ಸಂಸ್ಕಾರಭಾರತಿ, ಸಂಸ್ಕೃತಭಾರತಿ, ಇತಿಹಾಸ ಸಂಕಲನ ಸಮಿತಿ, ರಾಷ್ಟ್ರೀಯ ಸೇವಾ ಭಾರತಿ, ವಿದ್ಯಾಭಾರತಿ, ಭಾರತ್ ವಿಕಾಸ್ ಪರಿಷತ್… ಹೀಗೆ ಹಲವಾರು ಸಂಘಟನೆಗಳು ವಿವಿಧ ಕ್ಷೇತ್ರಗಳಲ್ಲಿ ಕಾರ್ಯಚಟುವಟಿಕೆಗಳನ್ನು ವಿಸ್ತರಿಸತೊಡಗಿದವು. ಆರೆಸ್ಸೆಸ್ ಈ ಎಲ್ಲಾ ಸಂಘಟನೆಗಳಿಗೆ ಮಾತೃಸಂಸ್ಥೆ. ಹಾಗಾಗಿ ಒಟ್ಟಾರೆ ’ಸಂಘಪರಿವಾರ’ ಎಂದು ಈ ಮೂಲಕ ಗುರುತಿಸಿಕೊಂಡಿದೆ. ಕರ್ನಾಟಕದಲ್ಲಿ ೧೯೩೮ರಲ್ಲಿ ಬೆಳಗಾವಿಯ ಚಿಕ್ಕೋಡಿಯಲ್ಲಿ ಸಂಘದ ಸ್ಥಾಪನೆಯಾಯಿತು. ಯಾದವ್‌ರಾವ್ ಜೋಶಿ ಕರ್ನಾಟಕದಲ್ಲಿನ ಸಂಘದ ಶಿಲ್ಪಿ. ಈ ಮೇಲಿನ ಪರಿವಾರ ಸಂಘಟನೆಗಳಲ್ಲದೆ ರಾಷ್ಟ್ರೋತ್ಥಾನ ಪರಿಷತ್, ಹಿಂದೂಸೇವಾ ಪ್ರತಿಷ್ಠಾನ, ವೇದ-ವಿಜ್ಞಾನ ಗುರುಕುಲಗಳು, ಜಾಗರಣಾ ಪ್ರಕಾಶನಗಳು ಸೇರಿದಂತೆ ಕರ್ನಾಟಕದಲ್ಲೂ ಹತ್ತಾರು ಹೊಸ ಆಯಾಮಗಳಲ್ಲಿ ಸಂಘ ಸಮಾಜದ ಸೇವೆಯಲ್ಲಿ ನಿರತವಾಗಿದೆ.