ಹಿಂದು ಸೇವಾ ಪ್ರತಿಷ್ಠಾನ
ಸೇವೆಯ ಭಾರತಕ್ಕೆ ಹೊಸ ಕಲ್ಪನೆಯೇನಲ್ಲ. ನಮ್ಮ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಅದೆಷ್ಟೋ ಮಹಾಪುರುಷರು ಸಮಾಜದ ದೀನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟು ಕೊನೆ ಉಸಿರಿನ ತನಕ ಪರೋಪಕಾರದಲ್ಲಿ ತೊಡಗಿದ್ದನ್ನು ಕಾಣುತ್ತೇವೆ. ಮಹರ್ಷಿ ವ್ಯಾಸರು ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ ಎಂಬುದನ್ನು ಸಾರಿ ಹೇಳಿದ್ದಾರೆ.
ಇಂತಹ ಮಹಾಪುರುಷರ ಆದರ್ಶವನ್ನಿಟ್ಟುಕೊಂಡು ಪ್ರಾರಂಭವಾದ ಸಂಸ್ಥೆಯೇ ಹಿಂದು ಸೇವಾ ಪ್ರತಿಷ್ಠಾನ. ‘ಲೋಕಹಿತಂ ಮಮ ಕರಣೀಯಂ’ (ಸಮಾಜಕ್ಕೆ ಹಿತವಾಗುವ ಕೆಲಸವನ್ನು ನಾನು ಮಾಡಬೇಕು) ಎಂಬುದೇ ಪ್ರತಿಷ್ಠಾನದ ಧ್ಯೇಯ. ಹೆಚ್ಚು ಹೆಚ್ಚು ಜನರು ಸೇವಾ ಕಾರ್ಯದಲ್ಲಿ ತೊಡಗಬೇಕು, ಸೇವೆಯೆಂಬುದು ಒಂದು ಆಂದೋಲನ ವಾಗಬೇಕು, ’ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ’ ಎಂಬುದು ಹೆಚ್ಚು ಹೆಚ್ಚು ಜನರ ಮಂತ್ರವಾಗಬೇಕು ಎಂಬ ಆಶಯದೊಂದಿಗೆ ಆರಂಭವಾದ ಪ್ರತಿಷ್ಠಾನ ಇಂದು ರಾಜ್ಯಾದ್ಯಂತ ಸುಮಾರು ೮೦೦ಕ್ಕೂ ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಅನೇಕ ಸೇವಾ ಚಟುವಟಿಕೆಗಳಿಗೆ ಸಹಾಯ ಸಹಕಾರ ನೀಡುತ್ತಿದೆ. ೧೯೮೦ರಲ್ಲಿ ಸಂಘದ ಪ್ರಚಾರಕರಾದ ದಿ. ಶ್ರೀ ಅಜಿತಕುಮಾರ ರವರು ನೆಟ್ಟ ಈ ಸಸಿ, ಇಂದು ಹೆಮ್ಮರವಾಗಿ ಬೆಳೆದಿದೆ.


ಸೇವೆಯ ರಥವೆಳೆಯುವ ಸೇವಾವ್ರತಿಗಳು
‘ಸೇವಾವ್ರತಿ’ ಯೋಜನೆ ಪ್ರತಿಷ್ಠಾನದ್ದೇ ಆದ ಒಂದು ವಿಶಿಷ್ಟ ಕಲ್ಪನೆ. ಯಾವುದೇ ಪ್ರತಿಫಲಾಕ್ಷೆಯಿಲ್ಲದೇ, ಕನಿಷ್ಠ ಮೂರು ವರ್ಷ ಸೇವೆಗಾಗಿಯೇ ಸಮಯ ಮೀಸಲಿಡಲು ಸಿದ್ಧವಿರುವ ಯುವಕ ಯುವತಿಯರನ್ನು ಆರಿಸಿ ಅವರಿಗೆ ೪೦ ದಿನಗಳ ತರಬೇತಿಯನ್ನು ನೀಡಲಾಗುತ್ತದೆ. ಅನಂತರ ಅವರನ್ನು ವಿವಿಧ ಊರುಗಳಿಗೆ ಕಳುಹಿಸಿ ಅಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸುತ್ತದೆ ಪ್ರತಿಷ್ಠಾನ. ಹೀಗೆ ಸೇವೆಯನ್ನೇ ತಮ್ಮ ವ್ರತವಾಗಿ ಸ್ವೀಕರಿಸಿದ ಯುವಜನರೇ ’ಸೇವಾವ್ರತಿ’ಗಳು. ಸೇವಾವ್ರತಿಗಳೇ ಪ್ರತಿಷ್ಠಾನದ ಬೆನ್ನೆಲುಬು. ಕಳೆದ ೩೦ ವರ್ಷಗಳಲ್ಲಿ ಸುಮಾರು ೪೦೦೦ ಕ್ಕೂ ಹೆಚ್ಚು ಸೇವಾವ್ರತಿಗಳಿಗೆ ತರಬೇತಿ ನೀಡಿದೆ ಪ್ರತಿಷ್ಠಾನ. ಪ್ರಸ್ತುತ ೧೫೦ಕ್ಕೂ ಹೆಚ್ಚು ಸೇವಾವ್ರತಿಗಳು ರಾಜ್ಯಾದ್ಯಂತ ಸೇವಾಕಾರ್ಯಗಳಲ್ಲಿ ತೊಡಗಿದ್ದಾರೆ.
ವೈವಿಧ್ಯಮಯ ಕಾರ್ಯಕ್ಷೇತ್ರ
ಪ್ರತಿಷ್ಠಾನದ ಕಾರ್ಯಕ್ಷೇತ್ರಗಳು ವೈವಿಧ್ಯಮಯ. ಸಮಗ್ರ ಶಿಶುಶಿಕ್ಷಣ, ಮಾತೃ ಮಂಡಳಿ, ಸಂಸ್ಕೃತ, ಯೋಗ ಶಿಕ್ಷಣ, ಗ್ರಾಮಾಭಿವೃದ್ಧಿ, ಪರಿಸರ ಸಂರಕ್ಷಣೆ, ಬೀದಿ ಮಕ್ಕಳ ಪುನರ್ವಸತಿ, ವ್ಯಾಸಂಗ ಕೇಂದ್ರ, ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣ, ವೃತ್ತಿ ತರಬೇತಿ, ಆಪ್ತಸಲಹೆ, ಹಿಂದು ಜೀವನ ಶಿಕ್ಷಣ, ಯುವಜನರನ್ನು ಸೇವೆಯಲ್ಲಿ ತೊಡಗಿಸುವುದು, ವಿದ್ಯಾನಿಧಿ – ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ ಪ್ರತಿಷ್ಠಾನ.
ಕೆಲವು ಪ್ರಕಲ್ಪಗಳ ಸಣ್ಣ ಪರಿಚಯ ಇಲ್ಲಿದೆ.

  • ಕರ್ನಾಟಕದಲ್ಲಿ ಪ್ರತಿಷ್ಠಾನ ನಡೆಸುತ್ತಿರುವ ಒಟ್ಟು ೪೨ ಶಿಶುಮಂದಿರ ಗಳಲ್ಲಿ ೧೪೩೦ ಮಕ್ಕಳು ಕಲಿಯುತ್ತಿದ್ದಾರೆ. ಈ ಕೇಂದ್ರಗಳು ಸುತ್ತಮುತ್ತಲಿನ ಊರುಗಳಲ್ಲಿ ಬಾಲಗೋಕುಲಗಳನ್ನೂ ಮಾತೃಮಂಡಳಿ ಗಳನ್ನೂ ನಡೆಸುತ್ತಿವೆ.
  • ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ‘ವೃಕ್ಷ ಲಕ್ಷ ಆಂದೋಲನ’ವು ದೇವರಕಾಡುಗಳನ್ನೂ, ಜೀವ ವೈವಿಧ್ಯವನ್ನು ಉಳಿಸುವ ಸಲುವಾಗಿ ಜನಜಾಗೃತಿ ಅಭಿಯಾನ ಮಾಡುತ್ತಿದೆ. ಹಲವು ವರ್ಷಗಳ ಹಿಂದೆ ನಡೆದ ‘ಪಶ್ಚಿಮ ಘಟ್ಟ ಉಳಿಸಿ’ ಆಂದೋಲನ ಒಂದು ಮಹತ್ವದ ಮೈಲಿಗಲ್ಲು.
  • ಬೆಂಗಳೂರಿನಲ್ಲಿರುವ ಪ್ರಸನ್ನ ಆಪ್ತಸಲಹಾ ಕೇಂದ್ರವು ಪ್ರತಿನಿತ್ಯ ಹಲವಾರು ನೊಂದವರಿಗೆ ಸಾಂತ್ವನ ನೀಡುವುದಲ್ಲದೇ, ಆಪ್ತ ಸಲಹಾಗಾರರಿಗೆ ತರಬೇತಿಯನ್ನು ಪ್ರತಿ ವರ್ಷ ನಡೆಸುತ್ತಿದೆ.
  • ಬೀದಿಮಕ್ಕಳ ಪುನರ್ವಸತಿ ಕೇಂದ್ರ ‘ನೆಲೆ’ ಬೆಂಗಳೂರಿನಲ್ಲಿ ೬ ಕಡೆಗಳಲ್ಲಿದೆ. ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣವಲ್ಲದೇ ಉತ್ತಮ ಸಂಸ್ಕಾರ ನೀಡುವ ಕೆಲಸವೂ ಇಲ್ಲಿ ನಡೆಯುತ್ತಿದೆ. ಶಿವಮೊಗ್ಗ ಮತ್ತು ಮೈಸೂರುಗಳಲ್ಲಿಯೂ ನೆಲೆ ಕೇಂದ್ರಗಳು ನಡೆಯುತ್ತಿವೆ. ಒಟ್ಟು ೨೦೦ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸುತ್ತಮುತ್ತಲಿನ ಶಾಲೆಗಳ ಮಕ್ಕಳನ್ನೂ ಸೇರಿಸಿಕೊಂಡು ನಡೆಸುವ ’ಮಕ್ಕಳ ಮಂಟಪ’ ಸಾಂಸ್ಕೃತಿಕಿ ಮತ್ತು ಕ್ರೀಡಾ ಸ್ಪರ್ಧೆಯ ಕಾರ್ಯಕ್ರಮ ಬಹಳ ಜನಪ್ರಿಯ.
  • ಬುದ್ಧಿಮಾಂದ್ಯ ಮಕ್ಕಳ ಶಾಲೆಯಾದ ಅರುಣಚೇತನದಲ್ಲಿ ಕಲಿತ ಹಲವು ಮಕ್ಕಳು ಇಂದು ಬೇರೆ ಬೇರೆ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಈ ಸಂಸ್ಥೆಯು ಇತ್ತೀಚೆಗೆ ಹೊಸ ಶಾಖೆಗಳನ್ನೂ ಪ್ರಾರಂಭಿಸಿದೆ. ಇಲ್ಲಿನ ಮಕ್ಕಳು ವಿಕಲಚೇತನ ಮಕ್ಕಳ ಫ್ಲೋರ್ ಹಾಕಿಯ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿ ನಿಧಿಸಿದ್ದಲ್ಲದೇ ಚಿನ್ನ ತಂದುಕೊಟ್ಟಿದ್ದಾರೆ. ಅರುಣಚೇತನದ ವೃತ್ತಿ ತರಬೇತಿ ಕೇಂದ್ರದಲ್ಲಿ ೬೦ ಮಕ್ಕಳು ಕಲಿಯುತ್ತಾ ಸ್ವಾವಲಂಬನೆಯ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ. ಸೋಪಿನ ಪುಡಿ, ಚಾಕ್ ಪೀಸ್, ಫಿನಾಯಿಲ್, ಮೇಣದ ಬತ್ತಿ, ಮ್ಯಾಟ್‌ಗಳು, ಪೇಪರ್ ಬ್ಯಾಗ್, ಫರ್ನಿಚರ್ ತಯಾರಿಕೆ ಮುಂತಾದ ವುಗಳನ್ನು ಹೇಳಿಕೊಡಲಾಗುತ್ತಿದೆ.
  • ಯುವಜನರನ್ನು ಸೇವಾಕಾರ್ಯದಲ್ಲಿ ತೊಡಗಿಸುವ ಉದ್ದೇಶವನ್ನಿಟ್ಟುಕೊಂಡಿರುವ ‘ಯೂತ್ ಫಾರ್ ಸೇವಾ’ ಇಂದು ೪೦೦೦ಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದೆ. ಪ್ರತಿ ವರ್ಷ ಬಡ ಮಕ್ಕಳಿಗೆ ಸ್ಕೂಲ್ ಕಿಟ್ (ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ಲು, ಚೀಲ) ವಿತರಣೆ ಮಾಡುತ್ತಿದೆ. ಅಲ್ಲದೇ, ಬಡ ಮಕ್ಕಳ ಶಿಕ್ಷಣದ ಖರ್ಚನ್ನು ದಾನಿಗಳ ಸಹಾಯದಿಂದ ಭರಿಸುವು ದಲ್ಲದೇ ಅವರಿಗೆ ವಿಶೇಷ ಪಾಠದ ವ್ಯವಸ್ಥೆಯನ್ನೂ ಮಾಡುತ್ತಿದೆ. ಈ ವರ್ಷದಿಂದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಯೋಜನೆಯನ್ನೂ ಹಾಕಿಕೊಂಡಿದೆ.
  • ಅನೇಕ ಸ್ಥಳಗಳಲ್ಲಿ ಪ್ರತಿಷ್ಠಾನದ ಸೇವಾವ್ರತಿಯರು ಯೋಗ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಬೆಂಗಳೂರಿನ ಯೋಗಶ್ರೀ ಯೋಗ ಕೇಂದ್ರ ೬ ತಂಡಗಳಲ್ಲಿ ಯೋಗ ಶಿಕ್ಷಣ ನೀಡುತ್ತಿದೆ. ಪ್ರತಿವರ್ಷ ೬೦೦ಕ್ಕೂ ಹೆಚ್ಚು ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ.
  • ಅವಕಾಶ ವಂಚಿತ ಯುವಜನರಿಗೆ ವೃತ್ತಿ ಶಿಕ್ಷಣ ನೀಡುವುದಕ್ಕಾಗಿ ‘ನೆಲೆ-ಸ್ವಾವಲಂಬನ’ ಎನ್ನುವ ಹೊಸ ಕೇಂದ್ರವನ್ನು ಪ್ರತಿಷ್ಠಾನ ಪ್ರಾರಂಭಿಸುತ್ತಿದೆ. ಭವಿಷ್ಯದಲ್ಲಿ ೧೦೦ ಜನರಿಗೆ ವಸತಿ ಸಹಿತ ಶಿಕ್ಷಣ ನೀಡುವ ಗುರಿಯನ್ನು ಈ ಕೇಂಧ್ರ ಹೊಂದಿದೆ.
  • ಅಂಚೆ ಮೂಲಕ ಹಿಂದೂ ಜೀವನ ಪದ್ಧತಿ, ಸಂಸ್ಕೃತಿಯ ಶಿಕ್ಷಣ ನೀಡಲು ‘ಹಿಂದು ಜೀವನ ದೀಪಿಕಾ’ ಯೋಜನೆ ಯನ್ನು ಪ್ರತಿಷ್ಠಾನ ನಡೆಸುತ್ತಿದೆ. ಜೊತೆಗೆ ನಮ್ಮ ಆಚಾರ ವಿಚಾರ ವ್ಯವಹಾರಗಳ ಬಗ್ಗೆ ತಿಳುವಳಿಕೆ ನೀಡುವ ‘ನಮ್ಮ ಮನೆ’ ಪುಸ್ತಕ ಸರಣಿಯಲ್ಲಿ ಪ್ರಕಟವಾದ ಸುಮಾರು ೨೦ಕ್ಕೂ ಹೆಚ್ಚು ಸಣ್ಣ ಸಣ್ಣ ಪುಸ್ತಕಗಳು ನಾಡಿನಾದ್ಯಂತ ಅತ್ಯಂತ ಜನಪ್ರಿಯವಾಗಿವೆ.
  • ಪ್ರತಿಷ್ಠಾನವು ತನ್ನ ಕಾರ್ಯಚಟುವಟಿಕೆಗಳ ಪರಿಚಯವನ್ನು ಸೇವಾದಿಶ ಎಂಬ ಮಾಸಪತ್ರಿಕೆಯ ಮೂಲಕ ಹೊರತರುತ್ತಿದೆ.

ಪ್ರತಿಷ್ಠಾನದ ಬಗ್ಗೆ ಹೆಚ್ಚು ತಿಳಿಯಲು ಈ ವಿಳಾಸಕ್ಕೆ ಸಂಪರ್ಕಿಸಿ:
ಹಿಂದು ಸೇವಾ ಪ್ರತಿಷ್ಠಾನ,
ಅಜಿತ ಶ್ರೀ, ೮/೨೮, ಬಸವನಗುಡಿ ರಸ್ತೆ, ಬೆಂಗಳೂರು – ೫೬೦ ೦೦೪
ದೂರವಾಣಿ

080-2660 8926/

94803 16628 / 94803 16629