SAMSKRITA BHARATI – ಸಂಸ್ಕೃತ ಭಾರತಿ


ಸಂಸ್ಕೃತ ಭಾರತಿ

ಸಂಸ್ಕೃತವನ್ನು ಮತ್ತೊಮ್ಮೆ ಜನಸಾಮಾನ್ಯರ ವ್ಯವಹಾರದ ಭಾಷೆಯನ್ನಾಗಿ ಮಾಡಬೇಕೆಂಬ ಇಚ್ಛೆಯಿಂದ ಪ್ರಾರಂಭವಾದ ಆರೆಸ್ಸೆಸ್‌ನ ಸಹಸಂಘಟನೆ ‘ಸಂಸ್ಕೃತಭಾರತಿ’.
೧೯೮೧ರಲ್ಲಿ ಅದೇ ತಾನೇ ತಿರುಪತಿಯಿಂದ ಸಂಸ್ಕೃತದ ಅಧ್ಯಯನ ಮುಗಿಸಿಬಂದ ಮೂವರು ತರುಣರಿಂದ ಈ ಕಾರ್ಯ ಪ್ರಾರಂಭ. ಬೆಂಗಳೂರಿನ ಬಸವನಗುಡಿಯಲ್ಲಿ ಮೊದಲ ೧೦ದಿನದಲ್ಲಿ ದಿನಕ್ಕೆರಡು ಗಂಟೆಯಂತೆ ನಡೆಸಲಾಗುವ ಸಂಭಾಷಣಾ ಶಿಬಿರದ ಮೂಲಕ ಸಂಘಟನೆಯ ಆರಂಭ.


ಸಂಸ್ಕೃತದ ಬಗ್ಗೆ ಪ್ರೀತಿಯನ್ನು ಶ್ರದ್ಧೆಯನ್ನು ಇರಿಸಿಕೊಂಡು ಅದರ ಉತ್ಥಾನಕ್ಕಾಗಿ ಪ್ರಯತ್ನಪಡುತ್ತಿರುವ ಸಾವಿರಾರು ಸಂಸ್ಥೆಗಳು ದೇಶದಲ್ಲಿ ಇಂದಿಗೂ ಕೆಲಸ ಮಾಡುತ್ತಿವೆ. ಇವತ್ತಿಗೆ ಸಂಸ್ಕೃತವನ್ನು ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ೩ ಕೋಟಿಗೂ ಮೀರಿದ್ದು ಅತಿಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿರುವ ಎರಡನೆಯ ದೊಡ್ಡಭಾಷೆ (ಮೊದಲ ಸ್ಥಾನದಲ್ಲಿರುವುದು ಇಂಗ್ಲೀಷ್!). ಆ ಎಲ್ಲ ಸಂಸ್ಥೆಗಳ ಕಾರ್ಯಕ್ಕೂ ಸಂಸ್ಕೃತ ಭಾರತಿಯ ಕಾರ್ಯಕ್ಕೂ ಒಂದು ಪ್ರಮುಖವಾದ ವ್ಯತ್ಯಾಸವಿದೆ. ಸಂಸ್ಕೃತ ಭಾರತಿ ಎಲ್ಲರಿಗೂ ಸಂಸ್ಕೃತದಲ್ಲಿ ಮಾತನಾಡಲು ಕಲಿಸುತ್ತದೆ. ಸಂಸ್ಕೃತದಲ್ಲೇ ದಿನನಿತ್ಯದ ವ್ಯವಹಾರಗಳನ್ನು ನಡೆಸಲು ಪ್ರೇರೇಪಿಸುತ್ತದೆ. ಈ ವರೆಗೆ ದೇಶಾದ್ಯಂತ ಸುಮಾರು ೧೧೦,೦೦೦ ಸಂಭಾಷಣಾ ಶಿಬಿರಗಳು ನಡೆದಿದ್ದು ಅವುಗಳಲ್ಲಿ ಸುಮಾರು ಒಂದು ಕೋಟಿಜನರು ಭಾಗವಹಿಸಿದ್ದಾರೆ. ಈ ಸಂಭಾಷಣಾ ಶಿಬಿರಗಳಲ್ಲೂ ಮೊದಲ ನಿರ್ಮಿದಿಂದಲೇ ಮಮ ನಾಮ – ಭವತಃ ನಾಮಕಿಂ? ಎಂದು ಪ್ರಶ್ನಿಸಿ ಉತ್ತರ ಪಡೆದು ಅವನಿಂದ ಸಂಸ್ಕೃತದಲ್ಲಿ ಮಾತನಾಡಿಸಲಾಗುತ್ತದೆ. ಹತ್ತುದಿನಗಳು ದಿನಕ್ಕೆರಡುಗಂಟೆಯಂತೆ ಕೊಟ್ಟಲ್ಲಿ ನಿರಕ್ಷರಿಯೂ ಸಾಮಾನ್ಯ ವ್ಯವಹಾರವನ್ನು ಸಂಸ್ಕೃತದಲ್ಲಿ ಮಾತನಾಡಲಾಗುವಂತೆ. ಇಲ್ಲಿನ ಶಿಕ್ಷಣದ ವ್ಯವಸ್ಥೆ ಇರುವುದು ಸಂಸ್ಕೃತಭಾರತಿಯ ವಿಶೇಷತೆ.
೧೯೮೧ರಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರ ಪ್ರಾರಂಭವಾದಾಗ ಅದು ಕರ್ನಾಟಕದಲ್ಲಿ ಮಾತ್ರ ಇದ್ದು ಹಿಂದು ಸೇವಾ ಪ್ರತಿಷ್ಠಾನದ ಸಂಸ್ಕೃತ ವಿಭಾಗವಾಗಿ ಕಾರ್ಯಾಚರಿಸುತ್ತಿತ್ತು. ಕ್ರಮೇಣ ಕಾರ್ಯ ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ತಲುಪಿ ಪ್ರಾಂತದ ಗಡಿಯನ್ನು ದಾಟಿ ವಿಸ್ತಾರ ಗೊಂಡಿತು. ಆಗ ಅಖಿಲಭಾರತೀಯ ಮಟ್ಟದಲ್ಲಿ ಒಂದು ಸಂಸ್ಥೆ ಬೇಕೆಂಬ ಚಿಂತನೆಯೊಂದಿಗೆ ೧೯೯೪ರಲ್ಲಿ ‘ಸಂಸ್ಕೃತಭಾರತಿ’ ಎಂಬ ಹೆಸರಿನಿಂದ ನೋಂದಾಯಿಸಲಾಯಿತು. ಇಂದು ಅರುಣಾಚಲಪ್ರದೇಶ, ನಾಗಾಲ್ಯಾಂಡ್, ವಿಜೋರಾಂ, ಮೇಘಾಲಯಗಳನ್ನು ಹೊರತುಪಡಿಸಿ ದೇಶದ ಉಳಿದೆಲ್ಲ ಪ್ರಾಂತಗಳಲ್ಲಿ ಸಂಸ್ಕೃತ ಭಾರತಿಯ ಕಾರ್ಯ ಇದೆ. ಒಟ್ಟು ೭೧೩ ಕಾರ್ಯಸ್ಥಾನಗಳು ಮತ್ತು ೧೩೪೨ ಸಂಪರ್ಕ ಸ್ಥಾನಗಳಿವೆ. ೧೦೫ ಪೂರ್ಣಾವಧಿ ಕಾರ್ಯಕರ್ತರು ಸಂಸ್ಕೃತ ಭಾರತಿಯಲ್ಲಿ ಈಗ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಅಮೇರಿಕಾ, ಇಂಗ್ಲೆಂಡ್, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ನ್ಯೂಜಿಲೆಂಡ್‌ಗಳಲ್ಲಿ ಸಂಸ್ಕೃತಭಾರತಿಯ ಚಟುವಟಿಕೆ ಇದೆ.
ಸಂಭಾಷಣಾ ಸಂದೇಶ ಪತ್ರಿಕೆ : ಸರಳ ಸಂಸ್ಕೃತದಲ್ಲಿ ಸಾಹಿತ್ಯಗಳ ನಿರ್ಮಾಣ ಆಗದಿರುವುದು ಸಂಸ್ಕೃತದಲ್ಲಿನ ಒಂದು ಕೊರತೆಯೆಂದೇ ಹೇಳಬೇಕು. ಅಲ್ಲಿ ಸ್ವಲ್ಪ ಸಂಸ್ಕೃತ ಕಲಿತವರಿಗೆ ಅಥವಾ ಸಂಸ್ಕೃತವನ್ನೇ ಅಧ್ಯಯನ ಮಾಡಿದವರಿಗೂಕೂಡಾ ಗುರುವಿನ ಸಹಾಯವಿಲ್ಲದಿದ್ದರೆ ಇನ್ನೊಂದು ಕಾವ್ಯವನ್ನು ಅರ್ಥೈಸಿಕೊಳ್ಳುವುದು ಕಠಿಣವೇ, ಹಾಗಾಗಿ ಸಂಸ್ಕೃತವನ್ನು ಅಧ್ಯಯನ ಮಾಡಿದವರಿಗೆ ಹೊಸ ಸಾಹಿತ್ಯವನ್ನು ತಾವಾಗಿಯೇ ಓದಿಕೊಳ್ಳುವ ಅವಕಾಶವೇ ಇರಲಿಲ್ಲ. ಈ ಕೊರತೆಯನ್ನು ನೀಗಿರುವುದು ಸಂಸ್ಕೃತ ಭಾರತಿಯ ಸಂಭಾಷಣಾ ಸಂದೇಶ ಮಾಸಪತ್ರಿಕೆ. ೧೯೯೪ ರಲ್ಲಿ ಪ್ರಾರಂಭವಾದ ಈ ಪತ್ರಿಕೆ ತನ್ನ ಪ್ರಕರಣವನ್ನು ೧೨ ದೇಶಗಳಿಗೆ ವಿಸ್ತರಿಸಿಕೊಂಡಿದೆ. ಇದೊಂದು ಕುಟುಂಬ ಪತ್ರಿಕೆ. ಮನೆಯಲ್ಲಿನ ಪ್ರೌಢರು, ಮಹಿಳೆಯರು, ಮಕ್ಕಳೂ ಕೂಡಾ ಇಚ್ಛೆಪಡುವ ವಿಷಯಗಳು ಇದರಲ್ಲಿರುತ್ತವೆ. ಗಂಭೀರ ಲೇಖನಗಳು, ಕಥೆಗಳು, ಧಾರವಾಹಿಗಳು, ಪದರಂಜಿನೀ, ಬಾಲಮೋದಿನಿ, ಭಾಷಾಪಾಕ, ಏಹಿ ಹಸಾಮ (ನಗೋಣ ಬನ್ನಿ) ಇತ್ಯಾದಿ ವಿಭಾಗಗಳಿಂದ ಸಮೃದ್ಧವಾಗಿರುವ ಪತ್ರಿಕೆಗೆ ಒಂದು ಲಕ್ಷಕ್ಕಿಂತಲೂ ಹೆಚ್ಚು ಓದುಗರಿದ್ದಾರೆ.
ಪ್ರಕಾಶನ ವಿಭಾಗ : ಸಂಸ್ಕೃತ ಭಾರತಿಯ ಪ್ರಕಾಶನ ವಿಭಾಗವು ಭಾಷಾವಿಷಯದ, ವ್ಯಾಕರಣದ ಸಣ್ಣಹೊತ್ತಿಗೆಗಳನ್ನು ಹೊರತರುತ್ತಿದೆ. ಮೊದಮೊದಲು ಕನ್ನಡ ಲಿಪಿ-ಸಂಸ್ಕೃತ ಭಾಷೆಯಲ್ಲಿ ಪುಸ್ತಕವನ್ನು ಹೊರತಂದಿದ್ದು ಈಗ ನಾಗರಿ ಲಿಪಿಯಲ್ಲಿ ತರುತ್ತಿದೆ. ಸಂಸ್ಕೃತ ಭಾರತಿ ಹೊರತಂದಿರುವ ಸಂಧಿ, ಸಮಾಸ, ಶತೃ-ಶವಚ್, ಸಂಭಾಷಣಾ ಸೋಪಾನ ಇತ್ಯಾದಿ ಪುಸ್ತಕಗಳು ಜನ ಮೆಚ್ಚುಗೆಗಳಿಸಿದ್ದು ಅನೇಕ ವಿದ್ಯಾಲಯಗಳಲ್ಲಿ ಪಠ್ಯಪುಸ್ತಕ ಗಳಾಗಿ ಸ್ವೀಕೃತಗೊಂಡಿದೆ.
ಆಧುನಿಕ ಸಾಹಿತ್ಯ ನಿರ್ಮಾಣ – ಸರಸ್ಪತಿ ಸೇವಾಯೋಜನೆ :- ಸಂಸ್ಕೃತಾನುರಾಗಿಗಳಿಗೆ ಓದುವುದಕ್ಕಾಗಿ ನೂತನ ಸಾಹಿತ್ಯವನ್ನು ಒದಗಿಸಬೇಕೆಂಬ ದೃಷ್ಟಿಯಿಂದ ಪ್ರಯತ್ನ ನಡೆದಿದ್ದು ಈಗ ಆ ತರಹದ ಪುಸ್ತಕಗಳೂ ಬರುತ್ತಿವೆ. ಸಂಸ್ಕೃತ ಭಾಷೆಯಲ್ಲಿ ಸ್ವತಂತ್ರ ಸಾಹಿತ್ಯರಚನೆಯಾಗಿ ಪುಸ್ತಕ ರೂಪದಲ್ಲಿ ಬರುತ್ತಿದೆ. ಅಲ್ಲದೆ ಕನ್ನಡದ ಪ್ರಸಿದ್ಧ ಪುಸ್ತಕಗಳಾದ ಯುಗಾವತಾರ, ಧರ್ಮಶ್ರಿ, ಆವರಣ ಇತ್ಯಾದಿ ಪುಸ್ತಕಗಳೂ ಈಗ ಸಂಸ್ಕೃತದಲ್ಲಿ ಸುಲಭ ಬೆಲೆಯಲ್ಲಿ ಲಭ್ಯವಿದೆ. ಸರಸ್ಪತಿ ಸೇವಾಯೋಜನೆ ಅಡಿಯಲ್ಲಿ ದೇಶದ ವಿವಿಧ ಭಾಷೆಗಳ ಉತ್ತಮ ಪುಸ್ತಕಗಳನ್ನು ಸಂಸ್ಕೃತಕ್ಕೆ ಅನುವಾದಿಸಿ ಹೊರತರ ಬೇಕೆಂಬ ಪ್ರಯತ್ನ ನಡೆದಿದೆ. ದೇಶದ ಎಲ್ಲ ಪ್ರಮುಖ ಭಾಷೆಗಳಲ್ಲಿ ಬಂದಿರುವ ಶ್ರೀಗುರೂಜಿ ಸಮಗ್ರ ಸಂಪುಟದ ಅಖಂಡಗಳು ಈಗ ಸಂಸ್ಕೃತದಲ್ಲೂ ಲಭ್ಯವಿದ್ದು ಉಳಿದ ಖಂಡಗಳ ಅನುವಾದ ಯಾರ್ಯ ನಡೆದಿದೆ.
ಪತ್ರಾಚಾರ ಸಂಸ್ಕೃತಂ : ಮನೆಯಲ್ಲಿಯೇ ಕುಳಿತು ಸಂಸ್ಕೃತ ಕಲಿಯಬೇಕೆಂದು ಇಚ್ಚಿಸುವವರಿಗೆ ಸಂಸ್ಕೃತ ಭಾರತಿ ಕಡೆಯಿಂದ ದೂರಶಿಕ್ಷಣದ ಮೂಲಕ (ಅoಡಿಡಿesಠಿoಟಿಜeಟಿಛಿe ಅouಡಿse) ಸಂಸ್ಕೃತವನ್ನು ಕಲಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ, ಪರಿಚಯ, ಶಿಕ್ಷಾ, ಕೋವಿದ ಎಂಬ ನಾಲ್ಕು ಸ್ತರದ ಪರೀಕ್ಷೆಗಳನ್ನು ನಡೆಸಿ ಪ್ರಮಾಣ ಪತ್ರ ನೀಡಲಾಗುತ್ತದೆ. ಕನ್ನಡ, ಇಗ್ಲೀಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು ಭಾಷೆಗಳಲ್ಲಿ ಈ ಪರೀಕ್ಷೆಗಳನ್ನು ಸ್ವೀಕರಿಸಬಹುದಾಗಿದ್ದು ಸದ್ಯದಲ್ಲಿಯೇ ತೆಲುಗುಭಾಷೆಯಲ್ಲಿಯೂ ಪರೀಕ್ಷೆಗಳು ಪ್ರಾರಂಭ ಆಗಲಿವೆ. ವರ್ಷದಲ್ಲಿ ೨ಬಾರಿ ಈ ಪರೀಕ್ಷೆಗಳು ನಡೆಯುತ್ತಿದ್ದು ಸಾವಿರಾರು ಜನರು ಈ ಪರೀಕ್ಷೆಗಳನ್ನು ಸ್ವೀಕರಿಸುತ್ತಿದ್ದಾರೆ.
ಗೀತಾ ಶಿಕ್ಷಣ ಕೇಂದ್ರಂ :- ಈ ದೇಶದ ಜನಸಾಮಾನ್ಯರಲ್ಲಿ ಭಗವದ್ಗೀತೆಯ ಬಗ್ಗೆ ಇರುವ ಆದರ, ಶ್ರದ್ಧೆಗಳನ್ನು ನೋಡಿ ಜನರು ಭಗವದ್ಗೀತೆಯನ್ನು ಮೂಲದಿಂದಲೇ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಪಡೆಯುವಂತಾಗಲು ಸಂಸ್ಕೃತ ಭಾರತಿ ಗೀತಾಶಿಕ್ಷಣ ಕೇಂದ್ರಗಳನ್ನು ಆರಂಭಿಸಿದೆ. ಇದು ಕೂಡಾ ೪ ಹಂತಗಳ ಶಿಕ್ಷಣವಾಗಿದ್ದು ಪ್ರತಿಹಂತದಲ್ಲೂ ಪರೀಕ್ಷೆ ಹಾಗೂ ಪ್ರಮಾಣಪತ್ರ ವಿತರಣೆ ಇರುತ್ತದೆ. ಒಟ್ಟಾರೆ ೧೮ ತಿಂಗಳ ಅವಧಿಯ ಶಿಕ್ಷಣ ಇದು. ಸಂಸ್ಕೃತಭಾರತಿ ಇದಕ್ಕೆ ಪೂರಕವಾಗಿರುವ ಪಠ್ಯಪುಸ್ತಕಗಳನ್ನು ನಿರ್ಮಿಸಿದೆ.
ಸಂವಾದ ಶಾಲಾ : ಇದೊಂದು ವಿಶಿಷ್ಟವಾದ ಪ್ರಕಲ್ಪ ; ದೆಹಲಿಯಲ್ಲಿದೆ. ಇಲ್ಲಿ ಸಂಸ್ಕೃತದಲ್ಲಿ ಮಾತನಾಡುವುದನ್ನು ಕಲಿಸಲಾಗುತ್ತದೆ. ಹದಿನಾಲ್ಕು ದಿನಸಗಳ ಆವಾಸೀಯ (ನಿವಾಸವಿದ್ದು ಕಲಿಯಬೇಕಾದ) ಪ್ರಶಿಕ್ಷಣ ಇದು. ಪ್ರತಿತಿಂಗಳ ಮೊದಲನೆಯ ಹಾಗೂ ಹದಿನಾರನೇ ತಾರೀಖಿನಂದು ಹೊಸ ತಂಡದ ಶಿಕ್ಷಣ ಪ್ರಾರಂಭವಾಗುತ್ತದೆ. ಶಿಕ್ಷಣ ಸಂಪೂರ್ಣ ಸಂಸ್ಕೃತದಲ್ಲೇ ಇರುವುದೂ ಇದರ ವಿಶೇಷತೆಗಳಲ್ಲಿ ಒಂದು. ಈವರೆಗೆ (ಮಾರ್ಚ್ ೨೦೧೦) ೮೬೦ಮಂದಿ ಇಲ್ಲಿಗೆ ಬಂದು ಸಂಭಾಷಣದ ಶಿಕ್ಷಣ ಪಡೆದಿದ್ದಾರೆ. ೧೯ ದೇಶಗಳಿಂದ ಜನರು ಇಲ್ಲಿಗೆ ಬಂದು ಶಿಕ್ಷಣ ಪಡೆದಿದ್ದಾರೆ. ವಿದೇಶೀ ಮೂಲಗಳ ಜನರೂ ಸಂಸ್ಕೃತ ಕಲಿಯಲು ಆಸಕ್ತಿಯಿಂದ ಬರುತ್ತಿದ್ದಾರೆಂಬುದೂ ಒಂದುವಿಶೇಷ.
ಶೈಕ್ಷಣಿಕ ಚಟುವಟಿಕೆಗಳು : ಸಂಭಾಷಣಾ ಶಿಬಿರಗಳು ಸಂಸ್ಕೃತ ಭಾರತಿಯ ಮೂಲಭೂತ ಕಾರ್ಯವಾಗಿವೆ. ಇದರ ಜೊತೆಯಲ್ಲಿ ಭಾಷಾಬೋಧನ ವರ್ಗಗಳು, ವ್ಯಾಕರಣ ವರ್ಗಗಳು, ಆವಾಸೀಯ ಪ್ರಶಿಕ್ಷಣ ವರ್ಗಗಳು, ಸಾಪ್ತಾಹಿಕ ಮಿಲನಗಳು ಇತ್ಯಾದಿಗಳ ಮೂಲಕ ಸಂಭಾಷಣ ಶಿಬಿರಗಳಿಗೆ ಬಂಧವರನ್ನು ನಿರಂತರವಾಗಿ ಸಂಪರ್ಕದಲ್ಲಿ ಉಳಿಸಿಕೊಂಡು ಇನ್ನಷ್ಟು ಹೆಚ್ಚಿನ ಪ್ರಗತಿ ಸಾಧಿಸುವಂತೆ, ಅವರೆಲ್ಲ ಕಾರ್ಯಕರ್ತರಾಗುವಂತೆ ನಿರಂತರ ಚಟುವಟಿಕೆಗಳು ನಡೆಯುತ್ತಿದೆ.
ಸಂಸ್ಕೃತ ನಮ್ಮ ದೇಶದ ಭಾಷೆ, ನಮ್ಮೆಲ್ಲರ ಭಾಷೆ. ಇಡೀ ದೇಶಾದ್ಯಂತ ಸಮಾನವಾಗಿ ಅರ್ಥವಾಗಬಲ್ಲ, ದೇಶಾದ್ಯಂತ ಸಮಾಜದ ಎಲ್ಲಾ ವರ್ಗಗಳ ಗೌರವಾದರಗಳಿಗೆ ಪಾತ್ರವಾಗಿರುವ ಭಾಷೆ ಸಂಸ್ಕೃತ. ಈ ದೇಶದ ಉಳಿದೆಲ್ಲ ಭಾಷೆಗಳೂ ಸಂಸ್ಕೃತದಿಂದಲೇ ಪುಷ್ಟಿಯನ್ನು, ಸೌಂದರ್ಯವನ್ನು ಶಬ್ದಸಂಪತ್ತನ್ನು, ವ್ಯಾಕರಣ ಸಂಪತ್ತನ್ನು, ಶಾಸ್ತ್ರಶುದ್ಧತೆಯನ್ನು ಪಡೆದಿವೆ. ಸಂಸ್ಕೃತದಲ್ಲಿರುವ ಶಬ್ದ ಸಂಪತ್ತು, ವಿಜ್ಞಾನ ಸಂಪತ್ತು, ವಿಚಾರ ಸಂಪತ್ತು ಜಗತ್ತಿನ ಇನ್ನಾವ ಭಾಷೆಯಲ್ಲಿ ಇಲ್ಲ ಎಂದು ಧೈರ್ಯದಿಂದ ಹೇಳಬಹುದು. ಆದರೆ ಬ್ರಿಟಿಷರ ಆಡಳಿತ ಈ ದೇಶದಲ್ಲಿ ಇದ್ದಾಗ ಅವರು ಸಂಸ್ಕೃತವನ್ನು ಕಡೆಗಣಿಸಿ ಆ ಸ್ಥಾನದಲ್ಲಿ ಇಂಗ್ಲೀಷ್ ಭಾಷೆಯನ್ನು ಪ್ರತಿಷ್ಠಾಪಿಸಿದರು. ದೇಶ ಸ್ವತಂತ್ರ ವಾದನಂತರ ಅಧಿಕಾರ ಹಿಡಿದ ನಮ್ಮವರೂ ಆಂಗ್ಲಭಾಷೆಗೇ ಮಹತ್ವಕೊಟ್ಟು ಸಂಸ್ಕೃತವನ್ನು ಕಡೆಗಣಿಸಿದ್ದರ ಪರಿಣಾಮ ನಾವಿಂದು ನಮ್ಮ ಆ ಪ್ರಾಚೀನ ಭಾಷೆಯಿಂದ ದೂರವಾಗಿದ್ದೇವೆ. ಅದರ ಪರಿಣಾಮವಾಗಿ ಆ ಭಾಷೆಯಲ್ಲಿರುವ ಜ್ಞಾನ ವಿಜ್ಞಾನಗಳಿಂದಲೂ ದೂರವಾಗಿದ್ದೇವೆ. ಜನರ ಮನಸ್ಸಿನಲ್ಲಿ ಮತ್ತೊಮ್ಮೆ ಸಂಸ್ಕೃತದ ಬಗ್ಗೆ ಅಭಿಮಾನ, ಸಂಸ್ಕೃತವನ್ನು ಕಲಿಯಬೇಕೆಂಬ ಭಾವನೆ ಬಿತ್ತಿದಾಗ ಮಾತ್ರ ನಾವು ನಮ್ಮ ಪ್ರಾಚೀನ ಜ್ಞಾನ ಭಂಡಾರವನ್ನು ತೆರೆಯಬಲ್ಲೆವೆಂಬ ಕಾರಣಕ್ಕಾಗಿಯೇ ಸಂಸ್ಕೃತವನ್ನು ಸಾರ್ವತ್ರಿಕವಾಗಿ ಕಲಿಸುವ, ಸಂಸ್ಕೃತವನ್ನು ವ್ಯವಹಾರದಲ್ಲಿ ತರುವ ಆಂದೋಲನಕ್ಕೆ ಸಂಸ್ಕೃತ ಭಾರತಿ ಪ್ರಯತ್ನಿಸುತ್ತಿದೆ.

CONTACT

SAMSKRIT BHARTI

AKSHARAM, 8th cross road, 2nd stage,

Girinagar, Bangalore 560085

080-26721052, 26722576

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

SAHAKARA BHARATI - ಸಹಕಾರ ಭಾರತಿ :

Sat Sep 18 , 2010
ಸಹಕಾರ ಭಾರತಿ : ಒಂದು ವಿಶಿಷ್ಟ ಹೆಜ್ಜೆ ನಮ್ಮ ದೇಶದ ಸಹಕಾರಿ ರಂಗದ ವ್ಯಾಪ್ತಿ ಬಹಳ ದೊಡ್ಡದು. ಸ್ವಾತಂತ್ರ್ಯಪೂರ್ವದಿಂದಲೂ ಅನೇಕ ಸಹಕಾರಿ ಸಂಘಗಳು ಜನಸಾಮಾನ್ಯರನ್ನು ಸಂಘಟಿಸಿ, ಸ್ಥಳೀಯ ಕೃಷಿ, ವ್ಯಾಪಾರ, ವ್ಯವಹಾರಗಳಿಗೆ ಬೆನ್ನೆಲುಬಾಗಿ ನಿಂತಿವೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹಳ ಮಹತ್ತ್ವದ್ದು. ಈಗಂತೂ ಅವುಗಳ ಮಹತ್ತ್ವ, ವ್ಯಾಪ್ತಿ ಮತ್ತು ಸಂಖ್ಯೆ ಇನ್ನೂ ಹೆಚ್ಚಾಗಿದೆ. ಕೇವಲ ಸ್ವಾರ್ಥಸಾಧನೆಗಾಗಿ ಸಹಕಾರ ವಿಶೇಷವೇನಲ್ಲ. ಸಹಕಾರವು ಸಂಸ್ಕಾರಯುತ ವಾದಾಗ ಸಮಾಜಕ್ಕೆ ಹೆಚ್ಚು […]