ವಿದ್ಯಾಭಾರತಿ- ಶಿಕ್ಷಣದಿಂದ ರಾಷ್ಟ್ರ ನಿರ್ಮಾಣ

ಆರಂಭವಾದ ರೀತಿ ?
ಉತ್ತರ ಪ್ರದೇಶದ ಗೋರಖಪುರದಲ್ಲಿ ೧೯೫೨ರಲ್ಲಿ ಕೆಲವು ಉತ್ಸಾಹೀ ಕಾರ್ಯಕರ್ತರಿಂದ. ತಿಂಗಳಿಗೆ ೫ರೂ. ಬಾಡಿಗೆ ನೀಡಿದ ಒಂದು ಕಟ್ಟಡದಲ್ಲಿ ಆರಂಭ. ೧೯೪೬ರಲ್ಲಿ ಶ್ರೀ ಗುರೂಜಿ ಯವರಿಂದ ಶಿಲಾನ್ಯಾಸಗೊಂಡ ಕುರುಕ್ಷೇತ್ರದ ಗೀತಾ ಶಾಲೆಯೂ ಸೇರಿದಂತೆ ವಿದ್ಯಾಭಾರತಿ ಶಾಲಾ ಬಳಗಕ್ಕೆ ಹತ್ತಾರು ಕಡೆಗಳಿಂದ ಸ್ವಾಗತ.
ಹೇಗೆ ಬೆಳೆಯಿತು ?
ಉತ್ತರ ಪ್ರದೇಶದಲ್ಲಿ ವ್ಯಾಪಕವಾಗಿ ಸರಸ್ವತಿ ಶಿಶು ಮಂದಿರಗಳು ಆರಂಭವಾಗಿ, ೧೯೫೮ರ ಹೊತ್ತಿಗೆ ಶಿಶು ಶಿಕ್ಷಾ ಪ್ರಬಂಧ ಸಮಿತಿ ಹೆಸರಿನಲ್ಲಿ ಕೇಂದ್ರೀಯ ಮಾರ್ಗದರ್ಶಕ ವ್ಯವಸ್ಥೆಯು ರೂಪುಗೊಂಡಿತು. ನಿಧಾನವಾಗಿ ಇದರ ಆಶ್ರಯದಲ್ಲಿ ನಡೆಯುವ ಶಾಲೆಗಳು ದೆಹಲಿ, ಬಿಹಾರ್, ಮಧ್ಯಪ್ರದೇಶ, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಆರಂಭಗೊಂಡವು. ಕ್ರೈಸ್ತ ಕಾನ್ವೆಂಟ್‌ಗಳ ಹಾವಳಿ ವಿರುದ್ಧವಾಗಿ ರೋಸಿ ಹೋಗಿ, ಭಾರತೀಯ ಸಂಸ್ಕೃತಿಯನ್ನು ಪಡೆಯುವದಕ್ಕಾಗಿ ಈ ಶಾಲೆಗಳಿಗೆ ಜನ ತಮ್ಮ ಮಕ್ಕಳನ್ನು ಕಳುಹಿಸಲು ತೊಡಗಿದರು. ವಿವಿಧ ರಾಜ್ಯಗಳಲ್ಲಿ ತಮಗೆ ಸೂಕ್ತವಾಗುವ ಹೆಸರಿನಲ್ಲಿ ಈ ಸಂಸ್ಥೆಗಳನ್ನು ರೂಪಿಸಿಕೊಳ್ಳಲಾಯಿತು. ಉದಾ: ಪಂಜಾಬ್, ಚಂಡೀಗಡಗಳಲ್ಲಿ ‘ಸರ್ವಹಿತಕಾರೀ ಶಿಕ್ಷಾ ಸಮಿತಿ’ ಹೆಸರಿನಲ್ಲಿ, ಹರ್ಯಾಣಾದಲ್ಲಿ ‘ಹಿಂದು ಶಿಕ್ಷಾ ಸಮಿತಿ’ ಹೆಸರಿನಲ್ಲಿ ಶಾಲೆಗಳು ತೆರೆದವು. ೧೯೭೭ರ ಹೊತ್ತಿಗೆ ಈ ರೀತಿಯ ಎಲ್ಲಾ ಶಿಕ್ಷಣ ಸಂಸ್ಥೆಗಳ ಒಂದು ಅಖಿಲ ಭಾರತೀಯ ಸ್ವರೂಪದಲ್ಲಿ ವಿದ್ಯಾ ಭಾರತಿ ಎಂಬ ಸಂಸ್ಥೆ ನೋಂದಾಯಿತವಾಯಿತು. ಅದರ ಅಧಿಕೃತ ಕೇಂದ್ರವಾಗಿ ಲಕ್ನೋ ಹಾಗೂ ಕಾರ್ಯ ನಿರ್ವಹಣೆ ದೃಷ್ಟಿಯಿಂದ ದೆಹಲಿ ಕೇಂದ್ರ ಕಚೇರಿಗಳಾಗಿ ಸ್ಥಾಪಿತವಾದವು.

vidya bharati

ಬೆಳೆದು ನಿಂತ ಪರಿ ?
ಲಕ್ಷದ್ವೀಪ ಮತ್ತು ಮಿಝೋರಾಂಗಳನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ಹರಡಿ, ೫೦ಕ್ಕೂ ಹೆಚ್ಚು ರಾಜ್ಯಮಟ್ಟದ ಅಥವಾ ಕ್ಷೇತ್ರಮಟ್ಟದ ಕಚೇರಿಗಳನ್ನು ಹೊಂದಿರುವ ವಿದ್ಯಾಭಾರತಿ ಸಂಸ್ಥೆಯು ಜಗತ್ತಿನ ಅತಿ ದೊಡ್ಡ ಸರಕಾರೇತರ ಶಿಕ್ಷಣ ಸಂಸ್ಥೆ ಎಂಬ ಖ್ಯಾತಿ ಪಡೆದಿದೆ. ವಿದ್ಯಾಭಾರತಿಯ ಆಶ್ರಯದಲ್ಲಿ ಇದೀಗ ೨೪,೩೦೦ ಶಾಲೆಗಳು ನಡೆಯುತ್ತಿದ್ದು, ಅವುಗಳಲ್ಲಿ ೧,೩೦,೨೭೮ ಶಿಕ್ಷಕರ ಮೂಲಕ ಒಟ್ಟು ೩೦,೦೨,೮೨೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕೆ.ಜಿಯಿಂದ ಪಿ.ಜಿ.ಯವರೆಗೆ ಎನ್ನಬಹುದಾದ ಶಿಕ್ಷಣದ ಎಲ್ಲಾ ರಂಗಗಳಿಗೆ ವ್ಯಾಪಿಸಿರುವ ವಿದ್ಯಾಭಾರತಿಯು ಸುಮಾರು ೨,೦೦೦ದಷ್ಟು ಕಾಲೇಜುಗಳನ್ನು, ೨,೬೨೪ ಪ್ರೌಢಶಾಲೆಗಳನ್ನು, ೧೩,೩೪೫ ಪ್ರಾಥಮಿಕ ಮತ್ತು ಮಾದಯಮಿಕ ಶಾಲೆಗಳು, ೮,೩೩೧ ಏಕೋಪಾಧ್ಯಾಯ ಶಾಲೆಗಳು, ಮತ್ತು ೭ ತಾಂತ್ರಿಕ ಮತ್ತು ತರಬೇತಿ ಕೇಂದ್ರಗಳನ್ನು ಹೊಂದಿದೆ. ದೇಶದ ಎಲ್ಲ ರೀತಿಯ ಪ್ರದೇಶಗಳನ್ನು ವ್ಯಾಪಿಸಿರುವ ವಿದ್ಯಾಭಾರತಿಯು ಗುಡ್ಡ ಪರ್ವತಗಳ ಮೇಲೆ, ಹಿಮಾಚ್ಛಾದಿತ ಪ್ರದೇಶಗಳಿಂದ ರಾಜಾಸ್ಥಾನದ ಮರಳು ಗುಡ್ಡೆಗಳವರೆಗೆ, ನದಿ-ಸಮುದ್ರ ತೀರಗಳ ಜನಗಳ ನಡುವೆ, ಅತಿ ಶ್ರೀಮಂತ ರಿಂದ ಗುಡಿಸಲು-ಜೋಪಡಿಗಳ ಕೊಳಚೆ ಪ್ರದೇಶಗಳವರೆಗೆ, ದೇಶದ ಎಲ್ಲರೀತಿಯ ನಗರ ಪಟ್ಟಣಗಳಲ್ಲಿನ ವಿದ್ಯಾರ್ಥಿ ಗಳಿಗೆ ವಿದ್ಯಾರ್ಜನೆಗೆ ಮಾಧ್ಯಮವಾಗಿ ನಿಂತಿದೆ ವಿದ್ಯಾಭಾರತಿ.
ಶಿಶು ದೇಶದ ಭವಿಷ್ಯ. ಅದರ ಮೇಲೆ ಆಗುವ ಸಂಸ್ಕಾರಗಳ ಮೂಲಕ ದೇಶ ಬಲಾಢ್ಯವಾಗಲು ಸಾಧ್ಯ. ಮಗುವಿನ ದೈಹಿಕ, ಮಾನಸಿಕ, ಬೌದ್ಧಿಕ ವಿಕಾಸದ ಮೂಲಕ ಪರಿಪೂರ್ಣ ವ್ಯಕ್ತಿತ್ವಗಳು ಅರಳಲು ಸಾಧ್ಯ. ಮುಖ್ಯವಾಗಿ ಭಾರತೀಯ ಸಂಸ್ಕೃತಿ-ಪರಂಪರೆ, ಮೌಲ್ಯಗಳ ಆಧಾರದ ಮೇಲೆ ರಚಿತವಾಗಿರುವ ಶಿಕ್ಷಣ ಕ್ರಮದಿಂದ ಅಂತಿಮವಾಗಿ ವಿದ್ಯಾರ್ಥಿಯು ವಿದ್ಯಾವಂತನಾಗಿ ಅಷ್ಟೇ ಅಲ್ಲ, ಶಕ್ತಿವಂತನಾಗಿ, ಗುಣವಂತನಾಗಿ, ದೇಶಭಕ್ತಿಯಿಂದ ಕೂಡಿದವನಾಗಿ, ಸಮಾಜಕ್ಕೆ ಆಸ್ತಿಯಾಗುವ ರೀತಿಯ ವ್ಯಕ್ತಿಯಾಗಿ ಬೆಳೆದು ನಿಲ್ಲಬೇಕು.
ನವನವೀನ ಪ್ರಯೋಗಗಳು:
ಮೆಕಾಲೆ, ಮದರಸಾ ಮತ್ತು ಮಾರ್ಕ್ಸ್ ರೂಪಿತ ಇಂದಿನ ಶಿಕ್ಷಣದ ವ್ಯವಸ್ಥೆಯ ನಡುವೆ, ಮಹರ್ಷಿ ಪ್ರೇರಿತ ಶುದ್ಧ ಭಾರತೀಯ ಶಿಕ್ಷಣ ಪದ್ಧತಿಯ ಮೂಲಕ ಇಂದಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಯತ್ನ ಸಾಗಿದೆ. ’ಹೊಸ ಚಿಗುರು ಹಳೆ ಬೇರು’ ಎಂಬ ತತ್ವದ ಆಧಾರಿತವಾಗಿ, ಆಧುನಿಕ ಯಂತ್ರ-ತಂತ್ರಗಳನ್ನು ಬಳಸಿಕೊಂಡು, ಪ್ರಾಚೀನತಮ ಕಲೆ-ಸಂಸ್ಕೃತಿ-ಪರಂಪರೆಯ ವಿಶೇಷತೆಗಳನ್ನು ಬಿಟ್ಟುಕೊಡದೇ, ಹಿಂದುತ್ವದ ಬಹುತ್ವದ ಆಧಾರಿತವಾಗಿ ಶಿಕ್ಷಣ ಪದ್ಧತಿಯನ್ನು ಮರುಹುಟ್ಟು ಹಾಕುವ ಪ್ರಯತ್ನಗಳೇ ಗುರುಕುಲಗಳು. ಕರ್ನಾಟಕದಲ್ಲಿ ನಡೆಯು ತ್ತಿರುವ ಮೂರ್ಕಜೆಯ ಬಾಲಕಿಯರ ಗುರುಕುಲ – ’ಮೈತ್ರೇಯೀ’, ಬಾಲಕರಿಗಾಗಿ ಹರಿಹರಪುರದಲ್ಲಿ ನಡೆಯುತ್ತಿರುವ ’ಪ್ರಬೋಧಿನೀ’, ಪ್ರೌಢ ವ್ಯಾಸಂಗಕ್ಕಾಗಿ ಮುಡಿಪಾಗಿರುವ ಬೆಂಗಳೂರು ಬಳಿಯ ’ವೇದ ವಿಜ್ಞಾನ ಗುರುಕುಲ’ಗಳು ಪರ್ಯಾಯ ಶಿಕ್ಷಣದ ಆಶಾಕಿರಣ ಗಳಾಗಿವೆ. ಕಲ್ಲಡ್ಕದ ’ಶ್ರೀ ರಾಮ ವಿದ್ಯಾಶಾಲೆ’ ಮತ್ತು ಚನ್ನೇನಹಳ್ಳಿಯ ’ಜನಸೇವಾ ವಿದ್ಯಾಕೇಂದ್ರ’ದ ಮಕ್ಕಳ ಶಾರೀರಿಕ ಪ್ರದರ್ಶನಗಳು ನೋಡುಗರನ್ನು ಗಂಟೆಗಟ್ಟಲೆ ಮೈಮರೆಯುವಂತೆ, ಮೈನವಿರೇಳಿಸುವಂತೆ ಮಾಡುತ್ತವೆ. ವಿದ್ಯಾಭಾರತಿ ಶಾಲೆಗಳಲ್ಲಿ ದೇಶದ ಭವಿಷ್ಯದ ಒಲಂಪಿಕ್ ಪದಕಗಳನ್ನು ಮೆಟ್ಟಿನಿಲ್ಲಬಲ್ಲ, ನೋಬೆಲ್ ಪ್ರಶಸ್ತಿಗಳನ್ನು ಮೀರಿ ನಿಲ್ಲುವ ಸಾಮರ್ಥ್ಯದ ವ್ಯಕ್ತಿಗಳನ್ನು ನಿರ್ಮಿಸುವ ಕಾರ್ಯ ಸಾಗಿದೆ.

ವಿವರಗಳಿಗೆ  ವಿದ್ಯಾಭಾರತಿ, ನಂ. ೫೫, ೧ನೇ ಮುಖ್ಯರಸ್ತೆ, ಶೇಷಾದ್ರಿಪುರಂ, ಬೆಂಗಳೂರು – ೨೦.
ಮೊ. : ೯೪೪೮೦೬೩೯೦೬.