ಮತಾಂತರಗೊಂಡ ದಲಿತರು ಗಳಿಸಿದ್ದೇನು?,-ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ

ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ

ದಲಿತ ಕ್ರೈಸ್ತರ ಪರಿಸ್ಥಿತಿ ಇತ್ತ ರಾಮ ಮಂದಿರಕ್ಕೂ ಪ್ರವೇಶವಿಲ್ಲ, ಅತ್ತ ಏಸು ಕ್ರಿಸ್ತನೂ ಬಿಟ್ಟುಕೊಳ್ಳುತ್ತಿಲ್ಲ ಎಂಬಂತಾಗಿದೆ. ಹಟ್ಟಿ ದೇವರುಗಳಾದ ಮಾರಮ್ಮ, ದುರುಗಮ್ಮ, ಚೌಡಮ್ಮ ದೇವಿಯವರನ್ನು ದೂರೀಕರಿಸಿರುವ ದಲಿತ ಕ್ರಿಶ್ಚಿಯನ್ನರು  ತಮ್ಮ ಸಾಂಸ್ಕೃತಿಕ ಪರಂಪರೆ ಯಾವುದು ಎಂಬುದನ್ನೇ ಮರೆತಿದ್ದಾರೆ.

ಬದುಕು ಕಟ್ಟಿಕೊಳ್ಳಲು ಯಾರು ಎಲ್ಲಿದ್ದರೇನಂತೆ ತನಗೆ ತೋಚಿದ ಕಡೆ ಬದುಕು ಕಟ್ಟಿಕೊಳ್ಳಲು ಎಲ್ಲರೂ ಸ್ವತಂತ್ರರು. ಹಿಂದೂ ಧರ್ಮ ಅಸಹನೀಯ ವಾತಾವರಣ ಸೃಷ್ಟಿಸಿದ್ದರೆ ಇಲ್ಲಿಯೇ ಇರು ಎನ್ನುವುದು ಎಷ್ಟರ ಮಟ್ಟಿಗೆ ಸರಿ. ಅವರ ಮನಸ್ಸಿಗೆ ಇಷ್ಟವಾದ ಕಡೆ ಹೋಗಿ ಬದುಕು ಕಟ್ಟಿಕೊಳ್ಳಲಿ. ಅದಕ್ಕೆ ಯಾರೂ ಆಕ್ಷೇಪಿಸುವುದು ಬೇಡ.
ಧಾರ್ಮಿಕ ಸ್ಥಿತ್ಯಂತರವೆಂಬುದನ್ನು ಅದರದ್ದೇ ಆದ ವಿಶಾಲ ತಳಹದಿ ಮೇಲೆ ಅವಲೋಕಿಸಿದರೆ ಮೇಲಿನ ಈ ಮಾತುಗಳು ಸಹಜವೆನ್ನುವಂತೆ ನಮ್ಮ ಮನದ ಮುಂದೆ ಹಾದು ಹೋಗುತ್ತವೆ. ಸೂರು ಬೇಕೆಂಬುವವರಿಗೆ ತಾರಸಿ ಮನೆಯಾದರೇನು, ಗುಡಿಸಿಲಾದರೇನು. ಆದರೆ ಆ ಸೂರೆಂಬುದರ ಸ್ವರೂಪ ಹಾಗೂ ಅದು ಎಷ್ಟರ ಮಟ್ಟಿಗೆ ಮಾನಸಿಕ ಸ್ಥಿತಿಯನ್ನು ಸಹಜದಲ್ಲಿಡಲು ಸಾಧ್ಯವಾಗುತ್ತದೆ ಎಂಬುದರ ಮೇಲೆ ಸೂರಿನ ಜರೂರತ್ತು ತೀರ್ಮಾನವಾಗುತ್ತದೆ. ಪರಿಶಿಷ್ಟರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಮಾದಿಗ ಸಮುದಾಯದ ಜನತೆ ನಾಡಿನ ವಿವಿಧೆಡೆ  ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಇದು ಸತ್ಯವೂ  ಹೌದು, ನಿರಾಕರಿಸುವಂತಿಲ್ಲ.

ಸಂವಿಧಾನದತ್ತ ಪ್ರಾಪ್ತವಾಗಿರುವ ಹಕ್ಕುಗಳು ದಲಿತ ಸಮುದಾಯಗಳ ಸ್ವಾಭಿಮಾನಿ ಬದುಕಿಗೆ ಏನೇ ಆಸ್ತ್ರಗಳನ್ನು ನೀಡಿದ್ದರೂ ಮಾದಿಗ ಸಮುದಾಯ ಮಾತ್ರ ಇಂದಿಗೂ ಅಸ್ಪೃಶ್ಯರ ಪಟ್ಟಿಯಲ್ಲಿ ಖಾಯಂ ಆಹ್ವಾನಿತರ ಸ್ಥಾನ ಕಾಯ್ದುಕೊಂಡೇ ಮುಂದುವರಿದಿದೆ. ಸ್ವಾತಂತ್ರ್ಯಾನಂತರದ ಐವತ್ತು ವರ್ಷಗಳನ್ನು ಮಾದಿಗ ಸಮುದಾಯ ವ್ಯವಸ್ಥೆ ದೂಷಿಸುತ್ತಾ ಬರುವುದರಲ್ಲಿಯೇ ಕಾಲ ಸವೆಸಿದೆ. ಶಿಕ್ಷಣದ ಪ್ರಖರ ಕಾಂತಿ  ಅಲ್ಲಲ್ಲಿ ಅಸ್ಪೃಶ್ಯತೆಗೆ ಚುರುಕು ತಾಗಿಸಿದ್ದು ಬಿಟ್ಟರೆ ಹೆಚ್ಚಿನ ಸುಧಾರಣೆಯೇನೂ ಕಂಡು ಬಂದಿಲ್ಲ. ಇಂದಿಗೂ ಮಾದಿಗರನ್ನು ಜೀವಂತವಾಗಿ ಸುಡುವುದು, ಕೃಷಿ ಕಾರ್ಮಿಕ ಮಹಿಳೆಯರ ಮೇಲೆ ಅತ್ಯಾಚಾರವೆಸಗುವುದು, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ನಿತ್ಯವೂ ದಾಖಲಾಗುತ್ತಿವೆ. ಯಾವ ಧರ್ಮದ ಪಾಪದ ಕೃತ್ಯಗಳಿವು ಎಂಬ ಉದ್ಗಾರ ಸಾಮಾನ್ಯವಾಗಿದೆ.
ಈ ಮಾತುಗಳನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೆ ಪ್ರಮುಖ ಕಾರಣಗಳಿವೆ. ಜೀವಪರ ನೆಲೆಯಲ್ಲಿ ಆಲೋಚಿಸುವ, ಬಸವಾದಿ ಶರಣರ ನಿಜದನಿಯ ಆಶಯಗಳ ಸದಾ ಮೆಲುಕು ಹಾಕುವ ನನ್ನಂತಹವರಿಗೆ ಸಮಕಾಲೀನ ಸಂದರ್ಭದ ಘಟನಾವಳಿಗಳು, ಅವು ನೀಡುತ್ತಿರುವ ಸಂದೇಶಗಳು, ಬದುಕಿನ ಹುಸಿ ಭರವಸೆಗಳು ಘಾಸಿ ಮಾಡಿವೆ. ಮತಾಂತರದ ಸುಳಿಯಲ್ಲಿ ಸಿಲುಕಿರುವ ಮಾದಿಗ ಸಮುದಾಯವನ್ನು ಪಾರು ಮಾಡುವ ಬಗೆ ಕೂಡಾ ದುರ್ಗಮ ಹಾದಿಯಾಗಿದೆ. ಚಿತ್ರದುರ್ಗದಲ್ಲಿ ಸಣ್ಣ ಪ್ರಮಾಣದಲ್ಲಿ ಗೋಚರಿಸುತ್ತಿರುವ ದಲಿತ ಕ್ರಿಶ್ಚಿಯನ್ನರು ಹಾಗೂ ಅಪಾರ ಪ್ರಮಾಣದಲ್ಲಿ ಕಂಡು ಬರುವ ದಲಿತರು, ಇವರಿಬ್ಬರ ನಡುವಿನ ಬದುಕು ವಿಭಿನ್ನವಾಗಿಯೇನೂ ಇಲ್ಲ.

ಚಿತ್ರದುರ್ಗದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರದ ಹಿಂಭಾಗ ಕ್ರೈಸ್ತ ಆರಾಧನಾ ಮಂದಿರವೊಂದಿದೆ. ೧೯೬೭ ರಲ್ಲಿ ಹೈದರಾಬಾದ್‌ನ ಇಂಡಿಯಾ ಮಿಷನ್ ಎಂಬ ಸಂಸ್ಥೆ ಇಲ್ಲಿ ಪುಟ್ಟ ಪ್ರಾರ್ಥನಾ ಮಂದಿರ ನಿರ್ಮಿಸಿ ದಲಿತರನ್ನು ಮತಾಂತರಗೊಳಿಸುವ ಪ್ರಕ್ರಿಯೆ ಆರಂಭಿಸಿತು. ಇಲ್ಲಿ ಯಾರೊಬ್ಬರೂ ಮೂಲನಿವಾಸಿ ಕ್ರಿಶ್ಚಿಯನ್ನರು ಬಂದು ಪ್ರಾರ್ಥನೆ ಮಾಡುತ್ತಿಲ್ಲ. ಬದಲಾಗಿ ಅನಿವಾಸಿ ಸ್ಥಾನದಲ್ಲಿರುವ ದಲಿತರು ನಿತ್ಯ  ಸೇರಿ ಪ್ರಾರ್ಥನೆ ಮಾಡುತ್ತಾರೆ. ಮತಾಂತರಗೊಂಡವರಿಗೆ ಚಿತ್ರದುರ್ಗದಲ್ಲಿಯೇ ಇರುವ ಪ್ರಮುಖ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಿಲ್ಲ. ಅಬ್ರಹಾಂ ಎಂಬ ವ್ಯಕ್ತಿಗೆ ಜವಾಬ್ದಾರಿ ನೀಡಿ ದಲಿತ ಕ್ರಿಶ್ಚಿಯನ್ನರ ನಿರ್ವಹಣೆ ಉಸ್ತುವಾರಿ ವಹಿಸಲಾಗಿದೆ.
ಅಬ್ರಹಾಂ ಎಂಬುವಾತ ಕೂಡಾ ದಲಿತ ಕ್ರಿಶ್ಚಿಯನ್ ಆಗಿರುವುದು ವಿಶೇಷವಾಗಿದೆ. ಎಂದೋ ಮತಾಂತರಗೊಂಡ ಅಬ್ರಹಾಂಗೆ ಸೀನಿಯಾರಿಟಿ ಇರುವುದರಿಂದ ಸಹಜವಾಗಿಯೇ ಆ ಸ್ಥಾನ ಅಲಂಕರಿಸಿದ್ದಾರೆ. ಈತನ ಆಡಳಿತದಲ್ಲಿ ಉಂಟಾದ ಏರುಪೇರುಗಳು, ತಾರತಮ್ಯ ನಿಲುವುಗಳಿಂದಾಗಿ ಪ್ರಾರ್ಥನೆಗೆ ಆಗಮಿಸಿದ್ದ ದಲಿತ ಕ್ರಿಶ್ಚಿಯನ್ನರು ಗಲಾಟೆ ಮಾಡಿಕೊಂಡು, ತಲೆ ಒಡೆದುಕೊಂಡು ರಕ್ತಮುಖರಾಗಿ ಆಸ್ಪತ್ರೆಗೆ ಸೇರ್ಪಡೆಗೊಂಡಿದ್ದರು. ಆ ಜಗಳ ಇಂದಿಗೂ ನಿಲ್ಲದೆ ಮುಂದುವರಿದುಕೊಂಡು ಬಂದಿದೆ. ಹದಿನೈದು ವರ್ಷಗಳಿಂದಲೂ ಪುಟ್ಟ ಸಮಸ್ಯೆ ಇತ್ಯರ್ಥವಾಗದೆ ಹಾಗೆಯೇ ಉಳಿದಿದೆ.
ದಲಿತ ಕ್ರಿಶ್ಚಿಯನ್ನರಾದ ಯಾರೊಬ್ಬರೂ ಪ್ರಾರ್ಥನಾ ಮಂದಿರ ಪ್ರವೇಶ ಮಾಡಿ ಪ್ರೇಯರ್ ಮಾಡುತ್ತಿಲ್ಲ. ಸದ್ಯದ ಮಟ್ಟಿಗೆ ರಕ್ಷಣಾಧಿಕಾರಿಗಳ ಮಧ್ಯಸ್ಥಿಕೆಯಿಂದ ಭಾನುವಾರದ ದಿನ ಬೆಳಿಗ್ಗೆ ೮ ರಿಂದ ೧೦ ಗಂಟೆವರೆಗೆ ಮಾತ್ರ ಪ್ರಾರ್ಥನೆ ಮಾಡಿಕೊಳ್ಳಬೇಕು. ಉಳಿದ ದಿನದಲ್ಲಿ ಈ ಪ್ರಾರ್ಥನಾ ಮಂದಿರಕ್ಕೆ ಬೀಗ ಜಡಿಯಲಾಗಿರುತ್ತದೆ. ಬೀಗ ಜಡಿಯಲಾದ ಮಂದಿರದೊಳಗೆ ಏಸುಕ್ರಿಸ್ತ ಪ್ರಸನ್ನವದನನಾಗಿ ನಿಂತಿದ್ದಾನೆ. ಹೊರ ಜಗತ್ತಿನಲ್ಲಿ ಕಲಹಗಳು ಕೋರ್ಟು, ಪೊಲೀಸ್ ಠಾಣೆ ಮೆಟ್ಟಿಲು ಹತ್ತಿವೆ. ದಲಿತ ಕ್ರೈಸ್ತರ  ಪರಿಸ್ಥಿತಿ  ಇತ್ತ ರಾಮ ಮಂದಿರಕ್ಕೂ ಪ್ರವೇಶವಿಲ್ಲ, ಅತ್ತ ಏಸು ಕ್ರಿಸ್ತನೂ ಬಿಟ್ಟುಕೊಳ್ಳುತ್ತಿಲ್ಲ ಎಂಬಂತಾಗಿದೆ. ಹಟ್ಟಿ ದೇವರುಗಳಾದ ಮಾರಮ್ಮ, ದುರುಗಮ್ಮ, ಚೌಡಮ್ಮ ದೇವಿಯವರನ್ನು ದೂರೀಕರಿಸಿರುವ ದಲಿತ ಕ್ರಿಶ್ಚಿಯನ್ನರು  ತಮ್ಮ ಸಾಂಸ್ಕೃತಿಕ ಪರಂಪರೆ ಯಾವುದು ಎಂಬುದನ್ನೇ ಮರೆತಿದ್ದಾರೆ. ಧಾರ್ಮಿಕ ಅತಂತ್ರ ಸ್ಥಿತಿ ತೊಳಲಾಟ ಮುಂದುವರಿದಿದೆ. ಈ ಘಟನೆ ಒಂದು ಉದಾಹರಣೆಯಷ್ಟೆ. ಇಂತಹ ಹತ್ತಾರು ನಿದರ್ಶನಗಳು ರಾಜ್ಯದಲ್ಲಿವೆ.

ಮೀಸಲಾತಿ ಎಂಬುವುದು ದಲಿತರ ಬದುಕಿಗೆ ಊರುಗೋಲಾಗಿದೆ ಎಂಬುದನ್ನು ತಳ್ಳಿ ಹಾಕದೇ ಇದ್ದರೂ ಎಷ್ಟು ಪ್ರಮಾಣದಲ್ಲಿ ಶೋಷಿತ ಸಮುದಾಯಗಳು ಮೀಸಲಾತಿ ನೆರಳಲ್ಲಿವೆ ಎನ್ನುವುದಕ್ಕೆ ತಾರ್ಕಿಕ ಸ್ಪರ್ಶ ಕೊಡಲೇ ಬೇಕಿದೆ. ದಲಿತ ಕ್ರಿಶ್ಚಿಯನ್ನರು ಮೀಸಲಾತಿ ಸೌಲಭ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿಯೂ ಕೂಡ ಅನ್ಯಾಯಗಳಾಗುತ್ತಿವೆ. ರಂಗನಾಥ ಮಿಶ್ರ ವರದಿಯಲ್ಲಿ ದಲಿತ ಕ್ರಿಶ್ಚಿಯನ್ನರಿಗೆ ಮೀಸಲಾತಿ ಕೊಡುವ ಅಗತ್ಯವಿಲ್ಲ. ಅಲ್ಪಸಂಖ್ಯಾತ ಖೋಟಾದಡಿ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಲಿ ಎಂದು ಪ್ರಸ್ತಾಪಿಸಿದ್ದಾರೆ. ಮತಾಂತರಿಗಳಿಗೆ ಇದು ಅತ್ಯಂತ ಆಘಾತಕಾರಿ ಅಂಶವಾಗಿದೆ.

ಹಿಂದೂ ಸಮಾಜ ಸಮಾನತೆ ವಿರುದ್ಧವಾಗಿದೆ ಎಂದು ಮೂಲ ಧರ್ಮ ತ್ಯಜಿಸಿ ಕ್ರಿಶ್ಚಿಯನ್ನರಾಗಿರುವ ದಲಿತರಿಗೆ ಅಲ್ಲಿಯೂ ಕೂಡ ಅಸ್ಪೃಶ್ಯತೆ ಆವರಿಸಿದೆ. ಒಂದರ್ಥದಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಅವರ ಪರಿಸ್ಥಿತಿ. ಆ ಸಮುದಾಯವನ್ನು ಹತ್ತಿರದಲ್ಲಿ ನಿಂತು ನೋಡಿದವರಿಗೆ ಮಾತ್ರ ಅವರು ಅನುಭವಿಸುತ್ತಿರುವ ನೋವುಗಳು ಅರ್ಥವಾಗುತ್ತವೆ.  ಮತಾಂತರವೆಂಬುದು ಈಗ ಕೇವಲ ರಾಜ್ಯ, ದೇಶ, ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ. ಅದೀಗ ವಿಶ್ವವ್ಯಾಪಿ. ಡಾ.ಗಾರ್ಡಿನ್ಶಿರಿ ಎಂಬುವರು ದಲಿತ ಕ್ರೈಸ್ತರ ಸ್ಥಿತಿಗತಿ ಅಧ್ಯಯನ ಮಾಡಿ ಬರೆದಿರುವ ಪುಸ್ತಕ ನಿಜಕ್ಕೂ ದಲಿತರ ಬದುಕಿನ ಒಳನೋಟಗಳ ಸಾದೃಶ ಪರಿಚಯ ಮಾಡಿಕೊಟ್ಟಂತಿದೆ. ಶೈಕ್ಷಣಿಕ, ರಾಜಕೀಯ, ಸಾಮಾಜಿಕ,  ಆರ್ಥಿಕ ಸ್ಥಿತಿಗತಿ ಹಾಗೂ ಸಾಂಸ್ಕೃತಿಕ ಸಂದರ್ಭಗಳು ಸ್ಥಗಿತಗೊಂಡಿರುವುದು ವೇದ್ಯವಾಗಿ ಕಾಣಿಸುತ್ತಿದೆ.

ಓರ್ವ ಪೀಠಾಧಿಪತಿಯಾಗಿ ಮಾದಿಗ ಸಮುದಾಯ ಪ್ರತಿನಿಧಿಸುವ ನನ್ನಂತಹವರಿಗೆ ಮತಾಂತರ ಎಂಬ ಪ್ರಕ್ರಿಯೆ ಅವಲೋಕಿಸುವುದು ತೀರಾ ಸರಳವಾಗಿಯೇನೂ ಕಂಡು ಬರುತ್ತಿಲ್ಲ. ಮೊದಲೇ ತಿಳಿಸಿದಂತೆ ಯಾರೂ ಎಲ್ಲಿಯಾದರೂ ನಿಂತು, ಯಾವುದೇ ನೆಲೆಯಲ್ಲಾದರೂ ಬದುಕು ಕಟ್ಟಿಕೊಳ್ಳಬಹುದೆಂಬ ಅಭಿಮತ ನನ್ನದಾಗಿದ್ದರಿಂದ ಆಕ್ಷೇಪಣೆ ಮಾಡುವ ಉಸಾಬರಿಗೆ ಹೋಗಿರಲಿಲ್ಲ. ಆದರೆ ಹುಸಿ ಭರವಸೆಗಳ ಬೆನ್ನತ್ತಿ ಮತಾಂತರಗೊಂಡು ವೈಯಕ್ತಿಕ ನೆಲೆಗಳನ್ನೇ ನಾಶಮಾಡಿಕೊಳ್ಳುತ್ತಿರುವ ಮಾದಿಗ ಸಮುದಾಯ ಕಂಡರೆ ಸಹಜವಾಗಿಯೇ ಮುಖದಲ್ಲಿ ಆತಂಕದ ಗೆರೆಗಳು ಮೂಡುತ್ತವೆ. ಅವರ ಭಾವನೆ ಮತ್ತು ಬದುಕಿಗೆ ದಿಕ್ಸೂಚಿಯಾಗಬೇಕಾದ ತುರ್ತು ಅಗತ್ಯತೆ ಇದೆಯೇನೋ ಎಂದೆನಿಸುತ್ತದೆ. ಆದರೆ ಅವರು ಈಗಾಗಲೇ ಬಹುದೂರ ನಡೆದುಕೊಂಡು ಹೋಗಿದ್ದು ಮರಳಿ ವಾಪಾಸ್ಸಾಗುವರೇ ಎಂಬ ಅನುಮಾನಗಳೂ ನಮ್ಮಲ್ಲಿವೆ. ಹಾಗಾಗಿ ಬೇರೆಯವರು ಆ ಹಾದಿಯತ್ತ ಹೊರಳದಂತೆ ಎಚ್ಚರಿಕೆ ಸಂದೇಶಗಳ ರವಾನೆ ಮಾಡುವ ಸಾಧ್ಯತೆಗಳತ್ತ ಆಲೋಚಿಸುತ್ತಿದ್ದೇವೆ.

ಯಾವುದೇ ವ್ಯಕ್ತಿ ಹಾಗೂ ಸಮುದಾಯದ ಬದುಕಿಗೆ ಧರ್ಮ ಆಶಾಕಿರಣವಾಗದಿದ್ದರೆ ಅಂತಹ ಧರ್ಮವನ್ನು ಯಾವ ನೆಲೆಯಲ್ಲಿ ಸ್ವೀಕರಿಸಬೇಕು. ಹಾಗಾಗಿ ವ್ಯಕ್ತಿ ಹಾಗೂ ವ್ಯಕ್ತಿತ್ವ ಮಾನವೀಯ ನೆಲೆಯಲ್ಲಿ ವಿಕಾಸಗೊಳ್ಳದಿದ್ದರೆ ಆತಂಕದ ದಿನಗಳು ಸುಲಭವಾಗಿ ಸವೆಯುವುದಿಲ್ಲ. ಶಿಕ್ಷಣವೆಂಬ ಅಸ್ತ್ರವನ್ನು ದಲಿತ ಸಮುದಾಯ ಸಮರ್ಥವಾಗಿ ಬಳಸಿಕೊಂಡಾಗ ಮಾತ್ರ ಧರ್ಮಗಳು ಹೊಸ ವ್ಯಾಖ್ಯಾನಗಳಿಗೆ ಸಜ್ಜಾಗುತ್ತವೆ. ಇಲ್ಲದಿದ್ದರೆ ಶೋಷಣೆ ಎಂಬುವುದು ಮತ್ತೊಂದು ತಲೆಮಾರಿಗೆ ವರ್ಗವಾಗುತ್ತಲೇ ಸಾಗುತ್ತದೆ. ಆಗ  ಧರ್ಮದ ಅಗತ್ಯತೆ ದಲಿತರ  ಬದುಕಿನ ಭಾಗವಾಗುವುದಿಲ್ಲ. ಅದು ಕ್ರೈಸ್ತ, ಬೌದ್ಧ ಯಾವುದಾದರಾಗಲಿ.

-ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಚಿತ್ರದುರ್ಗ

ಕೄಪೆ : ಕನ್ನಡಪ್ರಭ

nagesh

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Dr Upendra Shenoy, a person to be remembered forever: Thinkers

Fri May 20 , 2011
A Public Condolence meet was organised today May 20th, FRIDAY at 6pm, to pay final tributes to Dr Upendra Shenoy, at Rashtrotthana Parishat, Chamarajpet Bangalore. Dr Rajendra  Chadda, From Prajna Pravaha New Delhi, Dr IK Vasu former Vice Chancellor,  Na Krishnappa, RSS veteran pracharak, Dr A S Anand, Chief of […]