ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಶಾರೀರಿಕ ಪ್ರಮುಖರಾದ ಶ್ರೀ ಚಂದ್ರಶೇಖರ ಜಾಗೀರದಾರ ಹಾಗೂ ಅವರ ಅಣ್ಣ, ಹಿಂದೂ ಜಾಗರಣ ವೇದಿಕೆಯ ಬೆಂಗಳೂರು ವಿಭಾಗ ಪ್ರಮುಖರಾದ ಶ್ರೀ ಕುಮಾರ ಸ್ವಾಮಿಯವರ ಮನೆಗೆ ಹಿರಿಯ ಲೇಖಕ, ಮೈಸೂರು ಬಳಿಯ ಕೆ.ಆರ್.ಪೇಟೆಯ ದೂರಸಂಪರ್ಕ ಇಲಾಕೆಯ ಅಧಿಕಾರಿ ಶ್ರೀ  ಜೀವಯಾನದ ಎಸ್. ಮಂಜುನಾಥ್  ಇತ್ತೀಚೆಗೆ ಭೇಟಿ ನೀಡಿದ್ದರು. ಅಲ್ಲಿ ಅವರಿಗಾದ ಅನುಭವವನ್ನು ಬರಹಕ್ಕಿಳಿಸಿದ್ದಾರೆ. ಇಂದಿನ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಗೊಂಡಿರುವ ಲೇಖನವನ್ನು ಇಲ್ಲಿ ನೀಡಲಾಗಿದೆ.

`ಹೋಗೋ, ಹಾಲು ತಗೊಂಡು ಬಾರೋ~ ಎಂದು ಕೂಗಿದ ಗೆಳೆಯ ಅವನ ಮಗನಿಗೆ. ಒಳಗಿಂದ ಗೆಳೆಯನ ಹೆಂಡತಿ ಒಂದು ವೈರ್ ಬುಟ್ಟಿಯಲ್ಲಿ ಪಾತ್ರೆಯನ್ನು ತಂದಿಟ್ಟಳು ನಡುಮನೆಯಲ್ಲಿ. ಅರೆ, ಈ ಬೆಂಗಳೂರಲ್ಲಿ ಪ್ಯಾಕೆಟ್ ಹಾಲಲ್ಲವೇ, ಹೀಗೆ ಹೋಗಿ ಹಾಲು ತರುವುದಿದೆಯಾ ಎಂದು ಆಶ್ಚರ್ಯವಾಯಿತು ನನಗೆ. ಅದನ್ನು ಕೇಳಿದೆ ಕೂಡ.

`ಇಲ್ಲೊಬ್ಬರು ಹಸುಗಳನ್ನು ಕಟ್ಟಿ ಹಾಲು ಕೊಡುತ್ತಾರೆ~ ಎಂದ ಗೆಳೆಯ. ನೋಡಿಕೊಂಡು ಬರೋಣ ಎಂದು ಕುತೂಹಲಗೊಂಡು ಗೆಳೆಯನ ಮಗ ಎಳೆ ಹರಯದ ಹುಡುಗನೊಂದಿಗೆ ನಾನೂ ಹೊರಟೆ.

ಗೇಟು ತೆಗೆದು ನಾವು ಹೋಗಿ ನಿಂತದ್ದು ಒಂದು ದೊಡ್ಡ, ಹಳೆಯಕಾಲದ ಮನೆಯ ಮುಂದೆ. ಚಪ್ಪಲಿ ಕಳಚಿ ಗೆಳೆಯನ ಮಗ ಸೀದಾ ಒಳಗೆ ಹೋದ. ಆ ಮನೆಯ ಒಳಗನ್ನು ನೋಡುವ ಆಸೆಯಿಂದ `ನಾನೂ ಬರಬಹುದಾ~ ಎಂದು ಕೇಳಿ ಒಳಹೋದೆ.

ದೊಡ್ಡ ಹಾಲು, ಗೋಡೆ ಮೇಲೆಲ್ಲ ಅನೇಕ ದೇವರ, ಆಚಾರ್ಯರ, ಹಿರೀಕರ ಪಟಗಳು. ಮಂಟಪದಲ್ಲಿ ಒಂದು ಗಣಪತಿ ಮೂರ್ತಿಯ ಮುಂದೆ ದೀಪ ಉರಿಯುತ್ತಿತ್ತು. ಗಂಧದಕಡ್ಡಿಯ ವಾಸನೆ ಬೆರೆತ ದೇವಸ್ಥಾನದ ಗಾಳಿಯಿತ್ತು – ಒಳಗೆ. ಅದನ್ನು ದಾಟಿ ಹೋದರೆ ಅಡುಗೆ ಮನೆಯ ಹೊರಗೆ ಇರಿಸಿದ್ದ ಬಕೆಟ್‌ನಿಂದ ಹಾಲು ಅಳೆದುಕೊಟ್ಟರು, ಅದಾಗ ತಾನೆ ನೀರೆರೆದುಕೊಂಡು ಬಂದಂತಿದ್ದ ಒಬ್ಬ ಮಹಿಳೆ.

ಅದರಿಂದ ಹಿಂದೆ ಕೊಟ್ಟಿಗೆಯಲ್ಲಿ ದನಗಳು. ನಾವು ವಾಪಸು ಮನೆಯ ಮುಂಬಾಗಿಲಿಗೆ ಬಂದೆವು. ನನ್ನ ಗೆಳೆಯನ ಮಗ `ದನಗಳನ್ನು ನೋಡುವುದಿದ್ದರೆ ಬದಿಯಿಂದ ಹೋಗೋಣ ಬನ್ನಿ~ ಎಂದು ಆಹ್ವಾನಿಸಿದ. ಹಾಗೇ ಹಿಂದೆ ಹೋದರೆ ಕೊಟ್ಟಿಗೆಯಲ್ಲಿ ಹತ್ತಾರು ಹಸುಗಳು. ನಾಲ್ಕಾರು ಬೇರೆ ಬೇರೆ ತಳಿಯವು. ಎಲ್ಲವೂ ದಷ್ಟಪುಷ್ಟವಾಗಿ ಬುಸುಗುಡುತ್ತಿದ್ದವು. ಒಂದೊಂದನ್ನು ನೋಡುತ್ತ ಮನಸ್ಸು ಉಬ್ಬಿತು. ಅಷ್ಟು ಹೊತ್ತಿಗೆ ಆ ಮನೆಯ ಮತ್ತು ರಾಸುಗಳ ಒಡೆಯ ಬಂದ. ಏನೋ ಜಾಗೀರ‌್ದಾರ್ ಎಂದು ಅವನ ಹೆಸರು.

ನರೆತಿದ್ದರೂ ಜೋರಾದ ಕತ್ತಿ ಮೀಸೆ ಬಿಟ್ಟಿದ್ದ, ಬೆಳ್ಳಗಿನ ಮಟ್ಟಸ ಆಳು. ಸುಮಾರು ಐವತ್ತರ ಪ್ರಾಯ. ಬನಿಯನ್ ಮತ್ತು ಚಡ್ಡಿಯಲ್ಲಿದ್ದ ಕೆಲಸವಂತ. `ಈ ಹಸುಗಳನ್ನು ನೋಡಿ ಸಂತೋಷವಾಯ್ತು, ಹಾಗೇ ನಿಂತೆ. ಬೆಂಗಳೂರಿನ ಮಧ್ಯೆ ಇದೊಂದು ದ್ವೀಪದಂತಿದೆ~ ಎಂದೆ ಮೆಚ್ಚುಗೆಯಿಂದ.

`ಕರ್ನಾಟಕದ, ಮಹಾರಾಷ್ಟ್ರದ ವಿವಿಧ ತಳಿಗಳು ಇವು~ ಎಂದ ಸುತ್ತ ದೃಷ್ಟಿ ಹಾಯಿಸಿ. `ತಳಿ ಅಭಿವೃದ್ಧಿಯಲ್ಲೂ ನಾನು ಪ್ರಯೋಗ ಮಾಡುತ್ತಿದ್ದೇನೆ~ ಎಂದ. ಎಲ್ಲ ಹಸುಗಳಿಗೂ ಹೆಸರಿದೆ. ಅವೆಲ್ಲ ಅವನ ಮಾತು ಕೇಳುತ್ತವೆ. `ಏ ಗಂಗಾ ಸ್ವಲ್ಪ ಮುಂದೆ ಹೋಗು. ಗೋದಾ, ಒತ್ತು ಆ ಕಡೆ~ ಹೀಗಂದು ಅವು ಅಂತೆಯೇ ಮಾಡುವುದನ್ನು ತೋರಿಸಿದ. `ಹೈಬ್ರಿಡ್ ತಳಿಗಳು ಪ್ರಯೋಜನವಿಲ್ಲ. ಅವು ರಾಸಾಯನಿಕ ದ್ರವ ಕರೆಯೋ ಯಂತ್ರಗಳು! ಅವುಗಳ ಹಾಲಿಗೆ ನಮ್ಮ ದೇಸೀ ತಳಿಗಳ ಹಾಲಿಗಿರುವ ಸತ್ವವಾಗಲೀ, ಔಷಧ ಗುಣವಾಗಲೀ ಇಲ್ಲ~ ಹೀಗಂದ. `ಮುಸಲ್ಮಾನರೂ ಕೂಡ ದೇಸೀ ತಳಿಗಳನ್ನೇ ಇಷ್ಟಪಡುತ್ತಾರೆ – ತಿನ್ನಲು! ಯಾಕೆಂದರೆ ಹೈಬ್ರಿಡ್ ತಳಿಗಳು ಹಸು ಮತ್ತು ಹಂದಿ ಕೂಡಿ ಆದಂಥವು~ ಎಂದ. ಅವನ ವಿಜ್ಞಾನದಿಂದ ನನಗೆ ಕಸಿವಿಸಿಯಾಯ್ತು. ಗೋವು, ಅದರ ಹಾಲು-ಸಗಣಿ-ಗಂಜಲ ಎಲ್ಲವೂ ಉಪಯುಕ್ತ ಮತ್ತು ಪವಿತ್ರ ಎಂದು ಹೇಳುತ್ತ ಗೋ-ಸ್ವಾಮೀಜಿಯ ರಾಮಚಂದ್ರಾಪುರ ಮಠವನ್ನು ಹೊಗಳಿದ ಆ ವ್ಯಕ್ತಿ, ಗೋಮಾಂಸ ತಿನ್ನುವುದರ ಬಗ್ಗೆ ನಿರ್ಮಮಕಾರದಿಂದ ವ್ಯಾವಹಾರಿಕವಾಗಿ ಮಾತಾಡಿದ್ದ.

`ನೀವು ಇದನ್ನು ಬಿಟ್ಟು ಬೇರೇನಾದರೂ ಮಾಡುತ್ತೀರಾ?~ ಕೇಳಿದೆ. `ಷೇರ್ ಬಿಜಿನೆಸ್~ ಎಂದ ಆತ. ಪ್ರೀತಿಯಿಂದ ಹಸು ಸಾಕುವುದಷ್ಟೇ ಅವನ ವೃತ್ತಿಯಿರಬೇಕು ಎಂದುಕೊಂಡಿದ್ದ ನನಗೆ ಸ್ವಲ್ಪ ನಿರಾಸೆಯಾಯ್ತು.

`ಕೊಟ್ಟಿಗೆಯಲ್ಲಿ ಸ್ಪೀಕರ್‌ಗಳನ್ನು ಹಾಕಿದ್ದೇನೆ. ಕುನ್ನಕುಡಿ ವಯೊಲಿನ್, ರವಿಶಂಕರ್ ಸಿತಾರ್, ಚೌರಾಸಿಯಾ ಕೊಳಲು ಎಲ್ಲ ರೆಕಾರ್ಡ್ ಹಾಕುತ್ತೇನೆ~.

ಅವು ಹಸುಗಳಿಗೆ ಇಷ್ಟವಾಗುತ್ತದೆಯೇ, ಅದರಿಂದ ಅವು ಹೆಚ್ಚು ಹಾಲು ಕೊಡುತ್ತವೆಯೇ ಗೊತ್ತಿಲ್ಲ. ಮನುಷ್ಯನ ಮಾನದಂಡವೇ ಹಸುಗಳಿಗೂ ಅನ್ವಯವಾಗುತ್ತದೆ ಎಂದು ಹೇಗೆ ನಂಬುವುದು? ಚೌರಾಸಿಯಾನ ಕೊಳಲು ಕೇಳಿ ಆನಂದಿಸುವ ಹಸು ನನಗೇಕೋ ತೀರಾ ಮಾನವೀಯವೆನಿಸಿತು.

ಅಲ್ಲೊಬ್ಬ ಪುಟ್ಟ ಕಪ್ಪು ಚಂದದ ಹುಡುಗ ಓಡಾಡಿಕೊಂಡಿದ್ದ. ಸ್ವಚ್ಛ ಅಂಗಿ ಚಡ್ಡಿ ಹಾಕಿಕೊಂಡು, ಚೆನ್ನಾಗಿ ಎಣ್ಣೆ ಹಚ್ಚಿ ತಲೆ ಬಾಚಿಕೊಂಡು, ಪಟ್ಟಾಗಿ ವಿಭೂತಿ ಬಳಿದುಕೊಂಡಿದ್ದ. `ಯಾರಿವನು~ ಎಂದು ಕೇಳಿದೆ ಜಾಗೀರ‌್ದಾರನನ್ನು.

`ಇವನು, ಈ ಬೀದಿ ಗುಡಿಸುವವಳ ಮಗ. ಅವಳು ಕೆಲಸಕ್ಕೆ ಹೋಗುವಾಗ ಇಲ್ಲಿ ಬಿಟ್ಟು ಹೋಗುತ್ತಾಳೆ. ನಮ್ಮ ಮನೇಲೇ ಆಡಿಕೊಂಡು ಊಟ ಮಾಡಿಕೊಂಡು ಇರುತ್ತಾನೆ. ನಮಗೆ ಜಾತಿ ಭೇದ ಇಲ್ಲ~ ಎಂದು ನನ್ನನ್ನು ತೀರಾ ಆಶ್ಚರ್ಯಗೊಳಿಸಿದ ಜಾಗೀರ‌್ದಾರ್.
`ಬಹಳ ಹೆಮ್ಮೆಯಾಗುತ್ತಿದೆ ನನಗೆ, ನಿಮ್ಮ ಬಗ್ಗೆ~ ಎಂದೆ.

`ಹೌದು ಸಾರ್. ನಮ್ಮ ಮನೇಲಿ ಎಲ್ಲರೂ ಹಾಗೇ. ನಮ್ಮ ತಾತ ಒಬ್ಬರಿದ್ದರು. ಸರ್ವಿಸ್‌ನಲ್ಲಿದ್ದು, ರಿಟೈರಾದ ಮೇಲೆ ಸನ್ಯಾಸ ಸ್ವೀಕರಿಸಿ, ಸ್ಲಂನಲ್ಲಿದ್ದುಬಿಟ್ಟು ಅಲ್ಲಿನ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಅವರ ಸಮಾಧಿಯೂ ಈಗ ಅಲ್ಲೇ ಇದೆ. ನನ್ನ ತಮ್ಮ ಕೂಡ ಒಬ್ಬ ಮದುವೆ ಆಗಿಲ್ಲ. ಅವನೂ ಸಮಾಜಸೇವಕ~.

`ಓ~ ಎಂದೆ, `ಸ್ವಲ್ಪ ಕಾಫಿ ತಗೋಬಹುದಾ?~ ಕೇಳಿದ. `ಖಂಡಿತ~ ಎಂದೆ, ಮನೆಯೊಳಗೆ ಹೋಗಿ ಕೂತೆವು.

ಅಲ್ಲಿ ಹಾಲ್‌ನಲ್ಲಿ ಇನ್ನೊಬ್ಬ ತರುಣ ಕಣ್ಣಿಗೆ ಬಿದ್ದ. ಮಹಾರಾಷ್ಟ್ರದವನು ಆತ. ಬೆಂಗಳೂರಲ್ಲಿ ಶಿಕ್ಷಣ ಮುಗಿಸಿ ಗೋವಾದ ಒಂದು ಔಷಧ ಕಂಪೆನಿಯಲ್ಲಿ ಉತ್ತಮ ಕೆಲಸದಲ್ಲಿದ್ದ. ಅವನನ್ನು ಪರಿಚಯಿಸುತ್ತ `ನೋಡಿ, ಇವನು ಭಾರತದ ಯಾವುದೇ ಭಾಷೆಯ ಲಿಪಿಯನ್ನೂ ಓದಬಲ್ಲ~ ಎಂದು ಜಾಗೀರ‌್ದಾರ್ ನನ್ನನ್ನು ಮತ್ತೊಮ್ಮೆ ಅಚ್ಚರಿಪಡಿಸಿದ.

ಈ ಮುಂಜಾನೆ ಅಚ್ಚರಿಗಳಿಂದ ತುಂಬಿದೆ ಎಂದುಕೊಂಡೆ.

ಆ ತರುಣನನ್ನು ನಾನು `ಅದು ಹೇಗೆ?~ ಎಂದು ಕೇಳಿದೆ. ಅವನೆಂದ- `ಭಾರತದ ಎಲ್ಲಾ ಭಾಷೆಗಳೂ ಹೇಗೆ ಸಂಸ್ಕೃತದಿಂದ ಬಂದವೋ, ಹಾಗೆ ಎಲ್ಲಾ ಲಿಪಿಗಳು ಬ್ರಾಹ್ಮೀ ಲಿಪಿಯಿಂದ ಬಂದವು. ಸ್ವಲ್ಪ ಕೋನ ಬದಲಾಯಿಸಿ ನೋಡುವುದರಿಂದ ಅವುಗಳನ್ನು ಓದಲು ಸಾಧ್ಯ, ಆದರೆ ಭಾಷೆ ಬಂದರೆ ಮಾತ್ರ ಅವು ಅರ್ಥ ಆಗೋದು~.

ಬೆಂಗಳೂರಲ್ಲಿ ಓದಿದವನಾಗಿ ಅವನಿಗೆ ಕನ್ನಡ ಚೆನ್ನಾಗಿ ಬರುತ್ತಿತ್ತು.

ನಂತರ ನೋಡಿದರೆ ಆ ತರುಣನಿಗೆ ಪ್ರಪಂಚದ ಇತಿಹಾಸ, ನಾನಾ ಸಂಸ್ಕೃತಿಗಳ ಬಗ್ಗೆ ಅಪಾರವಾದ ಜ್ಞಾನ ಮತ್ತು ಸ್ವಾರಸ್ಯಕರವಾದ ಒಳನೋಟಗಳು. ಉದಾಹರಣೆಗೆ `ದಕ್ಷಿಣ ಭಾರತದಿಂದಲೇ ಮೂವರು ಮತ ಸ್ಥಾಪಕರು ಬಂದದ್ದು ಯಾಕೆ? ಇಲ್ಲಿ ವಿದೇಶೀ ಆಕ್ರಮಣವಿರಲಿಲ್ಲ. ಜನಜೀವನ ಸಹಜವಾಗಿ ಶಾಂತವಾಗಿತ್ತು. ದ್ವೈತ ಅದ್ವೈತ ವಿಶಿಷ್ಟಾದ್ವೈತಗಳ ಬಗ್ಗೆ ಜಿಜ್ಞಾಸೆ ಮೂಡಲು ಅವಕಾಶವಿತ್ತು.

`ಆದರೆ ಅದು ಪಂಜಾಬ್‌ನಲ್ಲಿ ಸಾಧ್ಯವಿತ್ತೇ? ಈ ದೇಶಕ್ಕೆ ಬಂದ ಆಕ್ರಮಣಕಾರರೆಲ್ಲರೂ ಪಂಜಾಬಿನ ಖೈಬರ್ ಕಣಿವೆಯ ಮೂಲಕವೇ ಬಂದಿದ್ದು. ಹಾಗಾಗಿ ಸದಾ ಅಪಾಯದ ನಿರೀಕ್ಷೆಯಲ್ಲಿರುತ್ತ ಸಿಖ್ಖರು ಅವಸರದಲ್ಲಿ ಎರಡು ಕೈಯಿಂದಲೂ ರೊಟ್ಟಿ ಮುರಿದು ತಿನ್ನುವ ಅಭ್ಯಾಸದವರಾದರು. ಉಗ್ರರು ಮತ್ತು ಶೀಘ್ರ ಕೋಪಿಗಳು ಅವರು. ದಕ್ಷಿಣ ಭಾರತದ ಯಾವುದೇ ರೈತನ ಮನೆಯಲ್ಲಿ ಗುಳ ನೇಗಿಲು ಎಷ್ಟು ಸಹಜವೋ ಪಂಜಾಬಿನ ಮನೆಯ ಗೋಡೆಯ ಮೇಲೆ ಖಡ್ಗ ಅಷ್ಟೇ ಸಾಮಾನ್ಯ. ಮತ್ತು ಅದೂ ಅಲಂಕಾರಕ್ಕಾಗಿ ಅಲ್ಲ, ನಂಬಿ, ಥಟ್ಟನೆ ಉಪಯೋಗಿಸಲು~.

`ಹೇಳಿ. ಆ ಜನ ತತ್ವ ವಿಚಾರ ಮಾಡಲು ಸಾಧ್ಯವಿತ್ತೇ?~

ಆರ್ಯ ನಾಗರೀಕತೆ ಜಗತ್ತಿನ ನಾನಾ ಕಡೆ ಹರಡಿತ್ತು ಎಂಬುದಕ್ಕೆ ಮಧ್ಯಪ್ರಾಚ್ಯದ ಅನೇಕ ಹೆಸರುಗಳು ಸಂಸ್ಕೃತ ಮೂಲದವೇ ಎಂಬುದನ್ನು ಅವನು ತೋರಿಸಿದ. ಅಥವಾ ಮುಸಲ್ಮಾನರ ಅನೇಕ ಆಚರಣೆಗಳು ಹಿಂದೂ (ಆರ್ಯ) ಧರ್ಮದ್ದೇ ಎಂಬುದನ್ನು.
`ಇಸ್ಲಾಂ ಹುಟ್ಟಿದ್ದು ಮರಳುಗಾಡಲ್ಲಿ. ಮರಳುಗಾಡಿನ ಗುಣ ಏನು? ಒಣಕಲು, ಬಂಜರು, ಮುಳ್ಳು ಮುಳ್ಳು, ಒಂದೇ ಸಮ ಮರಳು – ಆಕಾರವಿಲ್ಲ, ಹೀಗೆ ಆ ಧರ್ಮವೂ ಕೂಡ ಹಾಗೇ ಆಯಿತು~.

ಅದೆಲ್ಲ ಸುಳ್ಳೋ ನಿಜವೋ ಪ್ರಮಾಣಿಸುವಷ್ಟು ಜ್ಞಾನ ನನ್ನದಿರಲಿಲ್ಲ. ಆದರೆ, ಇತಿಹಾಸದ ಸೂಕ್ಷ್ಮಗಳನ್ನು ಅವನು ಬಿಡಿಸುತ್ತಿದ್ದ ರೀತಿ, ಅಲ್ಲಿ ತೋರಿಸುತ್ತಿದ್ದ ಸಂಬಂಧದ ಎಳೆಗಳು ನನ್ನನ್ನು ದಂಗುಬಡಿಸಿದ್ದು ನಿಜ.

ಹಾಗೇ ಅವನ ಸಾಮಾಜಿಕ ಕಳಕಳಿ ಕೂಡ ತೀವ್ರಸ್ವರೂಪದ್ದಾಗಿತ್ತು. `ಇದೇನು ನ್ಯಾಯ? ಸಿನಿಮಾದವರು, ಕ್ರಿಕೆಟ್‌ನವರು, ಐಟಿಗಳು ಕೋಟಿ ಲೆಕ್ಕದಲ್ಲಿ ಎಣಿಸುತ್ತಾರೆ. ಯಾವುದೇ ರೀತಿಯ ಉಪಯುಕ್ತತೆಯಿಲ್ಲದ ಬರೀ ಥಳುಕಿನವರಿಗೆ ಇಷ್ಟು ಹಣ. ಗದ್ದೆಯಲ್ಲಿ ಗೇಯುವವನಿಗೆ ಎರಡು ಹೊತ್ತು ಊಟಕ್ಕಿಲ್ಲ. ಎಷ್ಟು ದಿನ ಅಂತ ಹೀಗೆ? ಆ ಹಿಂದೀ ಸಿನಿಮಾದವರ ಹಣ ಹೋಗಿ ಸಮಾಜದ್ರೋಹಿಗಳ ಕೈಸೇರುತ್ತದೆ. ಅವರು ಬಾಂಬು ಹಾಕಿ ಈ ಸಮಾಜವನ್ನೇ ನಾಶಮಾಡಲು ಯತ್ನಿಸುತ್ತಾರೆ. ನಮ್ಮ ದೇಶದವರ ಹಣವೇ ಹೀಗೆ ನಮ್ಮದೇ ದೇಶವನ್ನು ಧ್ವಂಸ ಮಾಡಲು ಬಳಸಲ್ಪಡುತ್ತೆ. ಇದೆಂಥ ವಿಪರ್ಯಾಸ?~
`ಇಲ್ಲಿರುವಷ್ಟು ಅನ್ಯಾಯವನ್ನು ನೋಡಿದರೆ ಯಾರಿಗಾದರೂ ನಕ್ಸಲರ ಬಗ್ಗೆಯೇ ಸಹಾನುಭೂತಿ ಬರುತ್ತೆ~.

`ಇಲ್ಲಿ ದಕ್ಷಿಣದಲ್ಲಿ ನಿಮಗೇನೂ ಗೊತ್ತಿಲ್ಲ. ಉತ್ತರ ಭಾರತ ಅನೇಕ ಶತಮಾನಗಳಿಂದ ದಾಳಿಕೋರರ ಕೈಗೆ ಸಿಕ್ಕು ನಲುಗಿದೆ. ಶತಶತಮಾನಗಳಿಂದ ದೌರ್ಜನ್ಯಕ್ಕೀಡಾದವರು ಈಗ ತಾವೂ ಉಗ್ರರಾದರೆ ಅದರಲ್ಲಿ ತಪ್ಪೇನಿದೆ?~.

`ಯಾಕೆ, ಹಿಂದೂ ಎಂಬುವವನು ಉಗ್ರನಾಗಬಾರದೆ? ಬಾಂಬ್ ತಯಾರಿಸಲಿಕ್ಕೆ ಏನು ಬೇಕು: ಸ್ವಲ್ಪ ರಸಾಯನಶಾಸ್ತ್ರ, ಸ್ವಲ್ಪ ಎಂಜಿನಿಯರಿಂಗ್. ಹಿಂದೂ ಅದನ್ನು ಕಲಿಯಲಾರನೆ? ದೀರ್ಘ ಕಾಲದಿಂದ ಹಿಂಸೆಗೀಡಾದವನು ರೋಸಿ ಶಸ್ತ್ರವೆತ್ತಿಕೊಂಡರೆ ಅದು ಹೇಗೆ ತಪ್ಪಾಗುತ್ತದೆ?~

ಯಾರ ಅಪಾರ ಜ್ಞಾನದಿಂದ ನಾನು ಅಚ್ಚರಿಗೊಂಡಿದ್ದೆನೋ ಆ ತರುಣನ ಮುಖವನ್ನು ಮತ್ತೊಮ್ಮೆ ನೋಡಿದೆ. ಅವನ ಇತಿಹಾಸದ ತಿಳಿವಷ್ಟೂ ಬಂದು ಮುಟ್ಟಿದ್ದೆಲ್ಲಿಗೆ ಎಂಬುದು ಅರಿವಾಗಿ ಸ್ತಬ್ಧವಾದೆ. ಅವನ ಮೋರೆಯ ಮೇಲೆ ಮಾರ್ದವತೆಯ ಒಂದು ಗೆರೆಗಾಗಿ ಹುಡುಕಿದೆ. ಕಾಣದೆ ಬೆದರಿದೆ. ಜ್ಞಾನದ ಬೆಳಕು ಎಂದು ನಾನು ತಿಳಿದದ್ದು ಬೇರೆ ತೆರನ ಹೊಳಪಾಗಿ ಕಂಡಿತು.

ಅಲ್ಲಿಂದ ಹೊರಟು ಮನೆಯ ಬಾಗಿಲಲ್ಲಿ ವಿದಾಯ ಹೇಳುತ್ತಿರುವಾಗ, ಹಾಲು ನೀಡಿದ್ದ ಹೆಂಗಸು ಬಂದು `ಈ ಹುಡುಗ ಸಾಮಾನ್ಯ ಅಲ್ಲ, ತುಂಬ ತಿಳಿದಿದ್ದಾನೆ. ದಿನಗಟ್ಟಲೆ ಓದುತ್ತಾನೆ~ ಎಂದರು.

`ಹೌದು ಹೌದು~ ಎಂದು ಆ ಮರಾಠೀ ತರುಣನ ಮುಖ ನೋಡಿ ಮುಗುಳ್ನಕ್ಕೆ. ಪ್ರತಿಕ್ರಿಯೆಯಾಗಿ ಅವನೆಂದ-

`ಇಲ್ಲ, ನಾನೊಬ್ಬ ಸಾಧಾರಣ ವ್ಯಕ್ತಿ. ನೀವು ನನ್ನಲ್ಲೇನಾದರೂ ವಿಶೇಷ ಕಂಡರೆ ಅದೆಲ್ಲ ನನ್ನ ಗುರುವಿನ ಕೃಪೆ~.

ಅಷ್ಟೂ ಹೊತ್ತು ನನ್ನೊಂದಿಗೆ ಬಂದಿದ್ದ ನನ್ನ ಮುಗ್ಧ ಗೆಳೆಯನನ್ನು ಮರೆತೇಬಿಟ್ಟಿದ್ದೆ. `ಬೇಜಾರಾಯಿತೇನೋ~ ಎಂದೆ ಹೊರಡುತ್ತ. `ಇಲ್ಲಪ್ಪಾ~ ಅಂದ ಅವನು ಉಪಚಾರಕ್ಕೆ. ತುಂಬಿದ್ದ ಹಾಲಿನ ಪಾತ್ರೆಯ ಬುಟ್ಟಿ ಎತ್ತಿಕೊಂಡು ನಡೆದ.