( ವಿಕ್ರಮದಲ್ಲಿ ಪ್ರಕಟಗೊಂಡ ಲೇಖನ: ರೋಹಿಣಾಕ್ಷ ಶಿರ್ಲಾಲು )

 

ಹಿಂದು ಧರ್ಮವನ್ನು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುವ  ಮಲಿನ ಪುರೋಹಿತ ಮನಸ್ಸುಗಳ ವಿಜೃಂಭಣೆಯ ಸಂಕೇತವೇ ‘ಮಡೆಸ್ನಾನ ’.

ಅಸಹ್ಯಕರವಾದ ಆಚರಣೆಯೊಂದು ಧರ್ಮದ ಹೊದಿಕೆ ಹೊದ್ದುಕೊಂಡು ಹೇಗೆ ಸಮಾಜದಲ್ಲಿ ಉಳಿಯಬಹುದೆಂಬುದಕ್ಕೆ ಇದೊಂದು ನಿದರ್ಶನ.  ಯಾವುದೇ ರೀತಿಯ ಸೇವೆ  ಮಾಡಿಸಿಕೊಳ್ಳುವುದು ಭಕ್ತರ ಹಕ್ಕು ಎಂದು ಪ್ರತಿಪಾದಿಸುವ, ಮಡೆಸ್ನಾನವಲ್ಲ ಅದೊಂದು ಮಹಾಸ್ನಾನ ಎಂದು ವಕಾಲತ್ತು ವಹಿಸುವ  ಮಠಾಧಿಪತಿಗಳ ಮಲಿನ ಮನಸ್ಸುಗಳನ್ನು ನೆನಪಿಸಿಕೊಂಡಾಗ ಅಸಹ್ಯವಾಗುತ್ತದೆ.  ಇಲ್ಲಿ ಯಾರ ಮೇಲೂ ದ್ವೇಷದ ಮಾತು ಬರುವುದಿಲ್ಲ.  ಕಣ್ಣುಬಿಟ್ಟು ನೋಡಿದರೆ ಊಟದ ಪಂಕ್ತಿಯ ಭೇದದಿಂದಲೇ ತೋರುವ  ‘ಮೇಲಿನವರ ’ ಮನಸ್ಸಿನ ಕೊಳೆ ಭಕ್ತಿಯ ಹೆಸರಿನ  ಮೌಢ್ಯದ ಉರುಳುವಿಕೆಯ ಭಕ್ತರಿಗೆ ಅಂಟಿಕೊಳ್ಳುತ್ತದೆ.

ಇಂಥ ಮಲಿನ ಮನಸ್ಸುಗಳ ಮಠಾಧಿಪತಿಗಳಾಗಲಿ, ಮೌಢ್ಯದ ಸಮರ್ಥಕರಾಗಲಿ ೧೯ನೇ ಶತಮಾನದಲ್ಲಿರುತ್ತಿದ್ದರೆ ಮಹಾತ್ಮ ಜ್ಯೋತಿಬಾ ಪುಲೆಯನ್ನು ,  ಕುದ್ಮಲ್ ರಂಗರಾಯರನ್ನು , ಅಂಬೇಡ್ಕರ್ ಅವರನ್ನು  ಹುಚ್ಚರೆಂಬ ಪಟ್ಟಕಟ್ಟಿ ಮೂಲೆಗೆಸೆಯುತ್ತಿದ್ದರು. ಸಂಪ್ರದಾಯನಿಷ್ಠ ಸನಾತನಿಗಳು ಜ್ಯೋತಿಬಾರನ್ನು ಬಹಿಷ್ಕರಿಸಿದ್ದಕ್ಕೂ ಇಂದಿನ  ಧಾರ್ಮಿಕ ನಾಯಕರ ಮೌನಕ್ಕೂ ಏನಾದರೂ ವ್ಯತ್ಯಾಸವಿದೆಯಾ?

ಒಂದು ಧಾರ್ಮಿಕ ವಿಕೃತಿಯನ್ನು  ವಿಕೃತಿ ಎನ್ನಲಾಗದ, ಅದನ್ನೂ ಪರಂಪರೆಯ ಹೆಸರಿನಲ್ಲಿ ಮುಂದುವರಿಸಬಯಸುವ  ಭೋಜನ ಗಿಟ್ಟಿಸುವ ಜನಗಳು, ಒಂದು ಕ್ಷಣದ ಅಂತರದಲ್ಲೇ ಹಿಂಡುಹಿಂಡಾಗಿ ಉರುಳಾಡುವ  ಮನುಷ್ಯರನ್ನು ಕಂಡಾಗ ಹೊಮ್ಮುವ  ನಗು ರಾಕ್ಷಸೀ ಅಟ್ಟಹಾಸವಲ್ಲವೆ? ತಾವು ಉಂಡುಬಿಟ್ಟ ಎಂಜಲೆಲೆಗೆ ವಿಶೇಷ ಶಕ್ತಿಯನ್ನು  ಆರೋಪಿಸಿದ  ನೀಚ ಮನೋಧರ್ಮದ ‘ಬ್ರಾಹ್ಮಣಿಕೆ’ (ಬ್ರಾಹ್ಮಣ ವ್ಯಕ್ತಿಯ ವಿರುದ್ಧವಲ್ಲ, ಶ್ರೇಷ್ಠವೆಂದೆನಿಸಿಕೊಳ್ಳುವ ಮನೋಭಾವದ ವಿರುದ್ಧ )ಯ ವಿರುದ್ಧ ಮಾತನಾಡದೆ ಇದ್ದರೆ ಧರ್ಮ ಗ್ಲಾನಿಯಾಗುವುದಿಲ್ಲವೆ? ಮಾನವೀಯತೆಯನ್ನು  ಮೂಲೆಗೆ ತಳ್ಳಿ ಜಾತ್ಯಂಧ ಜಡಮನಸ್ಸುಗಳಿಗೆ ಒಂದು ಸಂಸ್ಕಾರವಾಗುವುದು ಬೇಡವೆ?

ಅಜ್ಞಾನಿಗಳಾಗಿ, ದುಃಖಿತರಾಗಿ ಹರಕೆಹೊತ್ತು ಬರುವವರಿಗೆ ತಿಪ್ಪೆಗುಂಡಿಗೆ ಸಮಾನವಾದ ಎಂಜಲ ಮೇಲೆ ಉರುಳಿಸುವುದರ ಮೂಲಕ ಧರ್ಮ ಪತಾಕೆಯನ್ನು  ಹಾರಿಸುತ್ತಿರುವವರು ಆಂತರ್ಯದಲ್ಲಿ ಹಿಂದು ಸಮಾಜಕ್ಕೆ ಮುಳ್ಳಾದವರೇ. ವೈಚಾರಿಕ ಎಚ್ಚರವನ್ನು  ಧರ್ಮದ ಭಾಗವಾಗಿಯೇ ಹೊಂದಿದ ಹಿಂದೂ ಧರ್ಮ ಕಾಲಬಾಹಿರವಾದ ಮತ್ತು ಒಂದು ಜಾತಿಯ ಶ್ರೇಷ್ಠತೆಯನ್ನು ಎತ್ತಿಹಿಡಿಯುವ  ಆಚರಣೆಯನ್ನು ಇಂದಿಗೂ ಉಳಿಸಿಕೊಂಡಿರುವುದು  ಮತ್ತು ಯಾರು ಸಾಮಾಜಿಕ ಜಾಗೃತಿಯನ್ನು ಮೂಡಿಸಬೇಕಾಗಿತ್ತೋ ಅಂಥವರೇ ಮೌಢ್ಯದ ಸಮರ್ಥನೆಯನ್ನು ಮಾಡಹೊರಟಿದ್ದು ಖಂಡನೀಯ ವಿಚಾರ.  ಪ್ರತಿ ಮತ, ಸಂಪ್ರದಾಯಗಳು ತನ್ನನ್ನು ತಾನು ವೈಚಾರಿಕ ಪರಿಷ್ಕಾರಕ್ಕೆ ಒಳಪಡಿಸಿಕೊಳ್ಳಲೇಬೇಕು. ಮಾನವೀಯತೆ ಇರದ ಕರ್ಮಕಾಂಡವನ್ನು  ಯಾರಾದರೂ ವಿರೋಧಿಸಲೇಬೇಕು.  ಹಿಂದೆ ಬುದ್ಧ ಮಾಡಿದ್ದು , ಸ್ವಾಮಿ ವಿವೇಕಾನಂದರು ಮಾಡಿದ್ದು ಇದೇ ಕಾರ‍್ಯವನ್ನು.  ಆದರೆ ಇಂದು ಬುದ್ಧನನ್ನು ಆರಾಧಿಸುತ್ತೇವೆ. ವಿವೇಕಾನಂದರನ್ನು  ಸ್ತುತಿಸುತ್ತೇವೆ. ಆದರೆ ಅವರು  ಸಮಾಜಕ್ಕೆ ತೋರಿದ  ವೈಚಾರಿಕತೆಯನ್ನು  ಮರೆತು ಕೇವಲ ಮಾತಿನ ಸಂಭ್ರಮದಲ್ಲಿ ಮೈಮರೆತಿದ್ದೇವೆ.  ಮಾನವೀಯತೆಯನ್ನು  ಮರೆತ ಧರ್ಮ ಧರ್ಮವೇ ಅಲ್ಲ.

ಸುಬ್ರಹ್ಮಣ್ಯ ದೇವಾಲಯದಲ್ಲಿ ಧಾರ್ಮಿಕ ಪರಂಪರೆಯ ಹೆಸರಿನಲ್ಲಿ ನಡೆಸಲಾಗುವ  ಎಂಜಲೆಲೆಯ ಮೇಲೆ ಉರುಳುವ  ಮಡೆಸ್ನಾನ ಯಾವ ರೀತಿಯಿಂzಲೂ ಸಮರ್ಥನೀಯವಲ್ಲ.  ಒಂದೊಮ್ಮೆ ಒತ್ತಾಯಕ್ಕೆ ಮಣಿದು ನಿಷೇಧಿಸಿದ ಆಚರಣೆಯನ್ನು ಮತ್ತೆ ನಿಷೇಧ ಹಿಂಪಡೆಯುವ ಮೂಲಕ ಜಿಲ್ಲಾಧಿಕಾರಿಗಳು, ಮುಜರಾಯಿ ಇಲಾಖೆ  ಮಂತ್ರಿಗಳು ಮಾಡಿದ್ದು ಹಿಂದು ಸಮಾಜಕ್ಕೆ ದ್ರೋಹವನ್ನು.  ಹಿಂದೆ ಚಂದ್ರಗುತ್ತಿಯಲ್ಲಿ  ಬೆತ್ತಲೆ ಸೇವೆ ನಿಷೇಧಿಸಿದಾಗ, ದೇವದಾಸಿ ಪದ್ಧತಿಯನ್ನು ನಿಷೇಧಿಸಿದಾಗ, ಸತಿಪದ್ಧತಿಯನ್ನು ವಿರೋಧಿಸಿದಾಗ ತತ್‌ಕ್ಷಣಕ್ಕೆ ಹಿಂದೂ ಸಮಾಜದಿಂದ ಬಂದದ್ದು ವಿರೋಧವೇ.   ಆದರೆ ಪ್ರಬಲ ಇಚ್ಛಾಶಕ್ತಿ ಇದ್ದಾಗ ಅಂತಹ ವಿರೋಧದ ನಡುವೆಯೂ ಜಾಗೃತಿ ಮೂಡಿಸಿದ ಕರ್ನಾಟಕಕ್ಕೆ ಮಡೆಸ್ನಾನ  ಎಂಬ ಕಪ್ಪುಚುಕ್ಕೆಯನ್ನು  ನಿಷೇಧಿಸಲು ಸಾಧ್ಯವಿಲ್ಲವೆ?

ಮಡೆಸ್ನಾನ ನಿವಾರಣೆಯಾಗಬೇಕಾದರೆ ಮೊದಲು ನಿವಾರಣೆ ಆಗಬೇಕಾದದ್ದು ಉರುಳುವ ಮನಸ್ಸಿನ ಪಾಪಪ್ರಜ್ಞೆಯಲ್ಲ.  ದೇವಾಲಯದಲ್ಲಿ  ಇಂದಿಗೂ ಅವಕಾಶವಿರುವ ಪ್ರತ್ಯೇಕ ಪಂಕ್ತಿಯ ಭೋಜನದ ನಿಷೇಧವಾಗಬೇಕಾಗಿದೆ.  ಸರ್ಕಾರದ ಆಡಳಿತದಲ್ಲಿರುವ  ಈ ದೇವಾಲಯ ಪ್ರಜಾಪ್ರಭುತ್ವದ ಆಶಯಕ್ಕೆ  ವಿರುದ್ಧವಾಗಿ ಪ್ರತ್ಯೇಕತೆಯನ್ನು ಮುಂದುವರಿಸಿಕೊಂಡು ಬಂದಿರುವುದು ಸಂವಿಧಾನಕ್ಕೂ ವಿರುದ್ಧವಾದುದು. ಜಾತೀಯ ಶ್ರೇಷ್ಠತೆಯನ್ನು  ಒಪ್ಪುವ  ಮನಸ್ಥಿತಿಯ ನಿವಾರಣೆಯಾಗದೆ ಮಡೆಸ್ನಾನ ನಿಲ್ಲದು. ಯಾವ  ಧರ್ಮ – ಸಂಪ್ರದಾಯವೂ  ಎಂಜಲನ್ನು  ಶ್ರೇಷ್ಠ ಎಂದೀತೆ?

ದಕ್ಷಿಣ ಕನ್ನಡದಂತಹ ಮುಂದುವರಿದ, ಬುದ್ಧಿವಂತರ ನಾಡು ಎನಿಸಿಕೊಂಡ ಜಿಲ್ಲೆಯಲ್ಲಿ ಇಂತಹ ಅಮಾನವೀಯ ಆಚರಣೆಯೊಂದು ಉಳಿದುಕೊಂಡು ಬಂದಿರುವುದು ಜಿಲ್ಲೆಯ ಬುದ್ಧಿವಂತಿಕೆಯನ್ನೇ ಪ್ರಶ್ನಾರ್ಹವೆನಿಸಿದೆ. ಸಾಮಾಜಿಕ ಪರಿವರ್ತನೆಯ ಕಾರ್ಯದಲ್ಲಿ ಈ ಹಿಂದೆ ಇದೇ ಜಿಲ್ಲೆ ತೋರಿಸಿದ್ದ ಗಟ್ಟಿತನವನ್ನು  ಈಗೇಕೆ ತೋರಿಸಲಾಗುತ್ತಿಲ್ಲ? ‘ದಲಿತೋದ್ದಾರದ  ತನ್ನ ಕಾರ್ಯದಲ್ಲಿ  ಕುದ್ಮಲ್ ರಂಗರಾಯರೇ ತನ್ನ ಗುರುಗಳು ’ ಎಂದು ಗಾಂಧೀಜಿಯವರು ಹೇಳಿದ್ದು ರಂಗರಾಯರ ದಿಟ್ಟತನದ ಕಾರ್ಯಕ್ಕೆ .  ಕಾರ್ನಾಡು ಸದಾಶಿವರಾಯರು, ಮೊಳಹಳ್ಳಿ ಶಿವರಾಯರು ಈ ಜಿಲ್ಲೆಗೆ ಅಂಟಿದ್ದ ಜಾತಿಯ ಮೌಢ್ಯದ ಕೊಳೆಯನ್ನು  ನಿವಾರಿಸುವಲ್ಲೇ ತಮ್ಮ ಪರಿಶ್ರಮವನ್ನು  ತೋರಿದವರು. ಇಂತಹ ಜಿಲ್ಲೆಗೆ ಒಂದು ಅಸಹ್ಯ ಸಾಮಾಜಿಕ ರೂಢಿಯೊಂದರ ವಿರುದ್ಧ ಸೆಟೆದು ನಿಲ್ಲಲಾಗದ ದೌರ್ಭಾಗ್ಯ ಯಾಕೋ? ಜಿಲ್ಲೆಯ ಈ ಶಕ್ತಿಯನ್ನು  ವಂಚಿಸಿದ್ದು ಯಾವ ಶಕ್ತಿಗಳು?

ವಿರೋಧಿಸಿದವರ ವಿರುದ್ಧ ಹಲ್ಲೆ ಮಾಡಿದ ಮನಸ್ಸುಗಳು ತಾಲೀಬಾನಿಗಳಿಗಿಂತ ಭಿನ್ನವಾದವರಲ್ಲ. ಇಂತಹ ಹಿಂದೂ ಮುಜಾಹಿದ್ದೀನ್‌ಗಳು ಅತ್ಯಂತ ವಿಶಾಲ ತಳಪಾಯದ ಮೇಲೆ ಕಟ್ಟಲ್ಪಟ್ಟ ಹಿಂದು ಧರ್ಮದಲ್ಲಿ ಚಿಗುರೊಡೆಯುವಂಥಾದ್ದು ಹೇಗೆ?

ಈಗಲಾದರೂ ಹಿಂದು ಮುಖಂಡರು ತಮ್ಮ ಮೌನ ಮುರಿದು ಘಟನೆಯನ್ನು  ಖಂಡಿಸಲೇಬೇಕು. ಪ್ರತಿ ಹಿಂದುವಿನ ಆತ್ಮಗೌರವವೂ ಮುಖ್ಯ. ಅದು ಜಾತಿಯೊಂದರ ವಿರುದ್ಧ   ಬಾಗುವಂತಾಗಬಾರದು.  ಧರ್ಮದ ಮುಖವಾಡದ ಢೋಂಗೀ ಆಚರಣೆಗಳ ವಿರುದ್ಧ ಒಂದಾಗಬೇಕಾಗಿದೆ.  ಕಾಲವಿನ್ನೂ ಮೀರಿಲ್ಲ.  ಈಗಲಾದರೂ ಎಚ್ಚೆತ್ತುಕೊಳ್ಳೋಣ.