From Left Dr. Sham Sundar, Satish Chanrda, Dr. N.S. RajaRam, Dr. S.L.Bhyrappa, Dr. M. Chidandamurthy, Shankarappa, Dr. Mangala Sridhar, Dany Perara

ಬೆಂಗಳೂರು: ಮತಾಂತರ ತಪ್ಪು ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿದೆ. ಮಧ್ಯಪ್ರದೇಶ, ಗುಜರಾತ್‌ನಂಥ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾನೂನು ಕೂಡ ಜಾರಿಯಾಗಿದೆ. ಆದರೂ ದೇಶಾದ್ಯಂತ ಮತಾಂತರ ಕಾರ‍್ಯ ನಡೆಯುತ್ತಿರುವುದು ಆಘಾತಕಾರಿ ಎಂದು ಖ್ಯಾತ ಸಾಹಿತಿ ಡಾ| ಎಸ್.ಎಲ್ ಭೈರಪ್ಪ ವಿಷಾದಿಸಿದ್ದಾರೆ.

ವರ್ತಮಾನ ಬೆಂಗಳೂರು ಆಶ್ರಯದಲ್ಲಿ ಶುಕ್ರವಾರ ಯವನಿಕಾ ಸಭಾಂಗಣದಲ್ಲಿ ಜರುಗಿದ ಮತಾಂತರ ನಿಷೇಧ: ಸವಾಲು, ಪರಿಹಾರದ ದಾರಿ ವಿಚಾರಗೋಷ್ಠಿಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಮಧ್ಯಪ್ರದೇಶ ಸರ್ಕಾರ ತಂದಂತಹ ಮತಾಂತರ ನಿಷೇಧ ಕಾನೂನು ತರಬಹುದು. ಆದರೆ ಆ ಕಾನೂನಿನ ಅಂಗೀಕಾರ ಮುದ್ರೆಗಾಗಿ ರಾಜ್ಯಪಾಲರ ಬಳಿ ಹೋದಾಗ ಅದರ ಗತಿ ಏನಾಗಬಹುದೆಂದು ನಮಗೆಲ್ಲರಿಗೂ ಗೊತ್ತಿದೆ ಎಂದು ಅವರು ಲೇವಡಿ ಮಾಡಿದರು. ಗೋಧ್ರಾ ರೈಲು ದುರಂತ ಪ್ರಕರಣದ ಕುರಿತು ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರು, ಗೋಧ್ರಾ ದುರಂತದ ನಂತರ ನಡೆದ ಘಟನೆಗಳಿಗೆ ಈ ತೀರ್ಪನ್ನು ಸಮರ್ಥನೆಯಾಗಿ ಬಳಸಿಕೊಳ್ಳಕೂಡದೆಂದರು. ಅವರು ಹಾಗೆ ಹೇಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಭೈರಪ್ಪ, ರಾಜಕಾರಣಿಗಳಿಗೆ ಸಮಾಜದಲ್ಲೇನು ನಡೆಯುತ್ತಿದೆ ಎಂಬ ಬಗ್ಗೆ ಸೂಕ್ಷ್ಮಪ್ರಜ್ಞೆ ಇಲ್ಲದಿರುವುದರಿಂದಲೇ ಮತಾಂತರದಂಥ ಪಿಡುಗುಗಳಿಗೆ ಇನ್ನೂ ಪರಿಹಾರ ದೊರಕಿಲ್ಲವೆಂದು ಅಭಿಪ್ರಾಯಪಟ್ಟರು.

ನಾನು ಬರೆದ ಮೊದಲ ಕಾದಂಬರಿ ಧರ್ಮಶ್ರೀಯಲ್ಲಿ ಮತಾಂತರದ ಬಗ್ಗೆ ಎಚ್ಚರಿಸಿದ್ದೆ. ಇದಾಗಿ ೫೧ ವರ್ಷಗಳೇ ಕಳೆದಿವೆ. ಆದರೆ ಈಗ ಪರಿಸ್ಥಿತಿ ಇನ್ನಷ್ಟು ಜಟಿಲವಾಗಿದೆ. ಮತಾಂತರ ಇನ್ನೂ ಬಿರುಸಿನಿಂದ ಸಾಗಿದೆ ಎಂದು ಎಚ್ಚರಿಸಿದರು.

ವಿಚಾರಗೋಷ್ಠಿಯಲ್ಲಿ ಮಾತನಾಡಿದ ಲೇಖಕ ಡ್ಯಾನಿ ಪಿರೇರಾ, ನಾನಾಗಲೀ ನನ್ನ ಪೂರ್ವಜರಾಗಲೀ ಬೆತ್ಲೆಹೆಮ್‌ನಿಂದ ಬಂದವರಲ್ಲ. ನಾನು ಬದಲಾಯಿಸಿದ್ದು ನನ್ನ ಮತವನ್ನೇ ಹೊರತು ನನ್ನ ಪೂರ್ವಜರನ್ನಲ್ಲ. ಹಾಗಾಗಿ ನಾನೊಬ್ಬ ಹಿಂದು ಕ್ರೈಸ್ತನೆಂದು ಹೇಳಿಕೊಳ್ಳಲು ಹೆಮ್ಮೆಪಡುವೆ ಎಂದರು.

ಮತಾಂತರ ನಡೆಯುತ್ತಿಲ್ಲವೆಂದು ಹೇಳುತ್ತಲೇ ಒಳಗಿನಿಂದ ಗೆದ್ದಲು ಕೊರೆಯುವ ರೀತಿಯಲ್ಲಿ ಮತಾಂತರ ನಡೆಯುತ್ತಲೇ ಇದೆ ಎಂದು ಪ್ರತಿಪಾದಿಸಿದ ನ್ಯಾಯವಾದಿ ಸತೀಶ್ಚಂದ್ರ ಕಾನೂನು ಪ್ರಕಾರ ಮತಾಂತರ ಅಸಿಂಧು ಎಂಬುದು ಎಲ್ಲರಿಗೂ ತಿಳಿದಿರಬೇಕು ಎಂದು ಹೇಳಿದರು.

ಮೇಲ್ಜಾತಿಯ ಜನರು ದಲಿತವರ್ಗದವರನ್ನು ಹೆಗಲ ಮೇಲೆ ಕೈಹಾಕಿ ಪ್ರೀತಿ, ವಿಶ್ವಾಸದಿಂದ ಕಂಡು ನೀವು ನಮ್ಮವರೇ ಎಂದು ಗೌರವಿಸಿದರೆ ಶೇ.೫೦ರಷ್ಟು ಮತಾಂತರ ತಾನೇತಾನಾಗಿ ನಿಲ್ಲುತ್ತದೆ. ಹಿಂದುಧರ್ಮ ಉಳಿದಿರುವುದೇ ಆರು ಸಾವಿರ ಜಾತಿಯ ಜನರ ಶ್ರಮ, ಬಲಿದಾನ, ತ್ಯಾಗಗಳಿಂದ ಎಂದ ಮಾದಿಗ ದಂಡೋರ ಸಮಾಜದ ಅಧ್ಯಕ್ಷ ಶಂಕ್ರಪ್ಪ, ದಲಿತ ಮನಸ್ಸುಗಳಲ್ಲಿ ಪರಿವರ್ತನೆ ತಂದರೆ ಮತಾಂತರಕ್ಕೆ ಕಡಿವಾಣ ಹಾಕಬಹುದೆಂದು ಅಭಿಪ್ರಾಯಪಟ್ಟರು.

ಸಾನಿಧ್ಯ ವಹಿಸಿದ ವಿಭೂತಿಪುರ ಮಠಾಧೀಶ ಶ್ರೀ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೇಲು-ಕೀಳು ಭಾವನೆಯಿಂದ ಹೊರಬಂದಾಗಲೇ ಮತಾಂತರ ತಡೆ ಸಾಧ್ಯ. ಶಾಲೆ, ಕಾಲೇಜು, ಆಸ್ಪತ್ರೆಗಳಲ್ಲಿ ಅಸ್ಪೃಶ್ಯತೆಯ ತಾರತಮ್ಯ ತೊಲಗಿಸಲು ಪ್ರಥಮ ಆದ್ಯತೆ ನೀಡಬೇಕಾಗಿದೆ ಎಂದರು.

ಗೋಷ್ಠಿಯಲ್ಲಿ ಪರಿಶಿಷ್ಟ ಜಾತಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಂಗಳಾ ಶ್ರೀಧರ್, ಖ್ಯಾತ ಸಂಶೋಧಕ ಡಾ| ಚಿದಾನಂದಮೂರ್ತಿ, ಖ್ಯಾತ ಇತಿಹಾಸಕಾರ      ಡಾ| ಎನ್.ಎಸ್. ರಾಜಾರಾಮ್ ಅವರೂ ಮಾತನಾಡಿ, ಹಿಂದು ಸಮಾಜದಲ್ಲಿರುವ ತಾರತಮ್ಯಗಳನ್ನು ನಿವಾರಿಸಿ, ಮತಾಂತರ ಪ್ರಕ್ರಿಯೆಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಡಾ| ಶ್ಯಾಮಸುಂದರ್ ಸ್ವಾಗತಿಸಿದರು. ಡಾ| ಗಿರಿಧರ ಉಪಾಧ್ಯಾಯ ವಂದಿಸಿದರು.