ದಾವಣಗೆರೆ: ಪ್ರಥಮ ದರ್ಜೆ, ದ್ವಿತೀಯ ದರ್ಜೆ ಗುಮಾಸ್ತ ಸೇರಿದಂತೆ ಸರ್ಕಾರದ ಇಲಾಖೆಗಳ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಶಿಬಿರ ಏರ್ಪಡಿಸಿ ಸೇವಾ ಭಾರತಿ ಟ್ರಸ್ಟ್‌ತನ್ನ ಹೆಸರು ಸಾರ್ಥಕ ಪಡಿಸಿಕೊಂಡಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಎಸ್. ಕರನಿಂಗ್ ಶ್ಲಾಘಿಸಿದ್ದಾರೆ.

ಆಸರೆಯಾಗಿದೆ: ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಮಹಾತ್ಮ ವಿದ್ಯಾಶಾಲೆಯಲ್ಲಿ ಸೇವಾ ಭಾರತಿ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಎಫ್‌ಡಿಎ, ಎಸ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಸೇವಾ ಭಾರತಿ ಟ್ರಸ್ಟ್‌ನ ಈ ಕಾರ್ಯ ನೂರಾರು ಉದ್ಯೋಗಾಕಾಂಕ್ಷಿಗಳ ಆಸರೆಯಾಗಿದೆ ಎಂದರು.

ಪ್ರೇರಣೆಯಾಗಿದೆ:  ಸೇವಾ ಮನೋಭಾವದಿಂದ ಸ್ಥಾಪನೆಗೊಂಡ ಟ್ರಸ್ಟ್‌ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ಸಂಘಟಿಸುವ ಮೂಲಕ ಮಾದರಿ ಸೇವಾ ಕಾರ್ಯ ಕೈಗೊಂಡಿದ್ದು, ಉದ್ಯೋಗಾಕಾಂಕ್ಷಿಗಳು, ಯುವ ಜನಾಂಗ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಂಡು, ಸಮಾಜಮುಖಿಯಾಗಿ ಜೀವನ ನಡೆಸಬೇಕು ಎಂದು ಅವರು ಕರೆ ನೀಡಿದರು.

ಪ್ರಸ್ತುತ ಹಣ ಮಾಡುವುದನ್ನೇ ಮುಖ್ಯ ಗುರಿಯಾಗಿಸಿಕೊಂಡವರನ್ನು ನಾವು ಕಾಣುತ್ತಿದ್ದೇವೆ. ಈ ಪರಿಸ್ಥಿತಿಯಲ್ಲಿ ಬೋಧಕರು, ಸೇವಾ ಭಾರತಿ ಟ್ರಸ್ಟ್ ಸೇವಾ ದೃಷ್ಟಿಯಿಂದ ಇಂತಹ ಕಾರ್ಯಕ್ರಮಕ್ಕೆ ಮುಂದಾಗಿರುವುದು ಅನುಕರಣೀಯ ಎಂದರು.

ಇನ್ನೂ ಹೆಚ್ಚಿನ ಮಟ್ಟದಲ್ಲಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲು ಇತರರಿಗೂ ಪ್ರೇರಣೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಆರ್‌ಎಲ್‌ಎಂವಿಎಸ್ ಕಾರ್ಯದರ್ಶಿ ಆರ್.ಎಲ್. ರಮಾನಂದ್ ಮಾತನಾಡಿ, ಇಂತಹ ಸಮಾಜ ಮುಖಿ ಸೇವಾ ಕಾರ್ಯಗಳಿಗೆ ತಮ್ಮ ಸಂಸ್ಥೆ ಸದಾ ಸ್ಪಂದಿಸಲಿದ್ದು, ಈ ರೀತಿಯ ಶಿಬಿರಗಳಿಗೆ ಎಲ್ಲಾ ರೀತಿಯ ಸಹಕಾರ, ಮಾರ್ಗದರ್ಶನ ನೀಡಲು ಸಂಸ್ಥೆ ಬದ್ಧವಾಗಿದೆ. ಉದ್ಯೋಗಾಕಾಂಕ್ಷಿಗಳು ಇಂತಹ ಶಿಬಿರಗಳ ಸದ್ಭಳಕೆಯನ್ನು ಮಾಡಿಕೊಳ್ಳಬೇಕು ಎಂದರು.

ಟ್ರಸ್ಟ್ ಅಧ್ಯಕ್ಷ ಜಿ.ಟಿ. ಸುರೇಶ್, ಬಿಜೆಪಿ ಮುಖಂಡರಾದ ವೈ. ಮಲ್ಲೇಶ್, ಎಸ್.ಬಿ. ಕುಲಕರ್ಣಿ, ಶಿಬಿರದ ರುವಾರಿ ರಂಗಸ್ವಾಮಿ, ಟ್ರಸ್ಟ್ ಕಾರ್ಯದರ್ಶಿ ಗುರುರಾಜರಾವ್ ಪಾದಕಿ ಇತರರು ಇದ್ದರು. ಉಪನ್ಯಾಸಕ ಚಂದ್ರಯ್ಯ, ಮರಿ ಗೌಡ, ಉಮೇಶ್, ಜಗದೀಶ್ ಬಳಿಗಾರ್, ಮಂಜುನಾಥ್, ಅರುಣಕುಮಾರ್‌ರನ್ನು ಟ್ರಸ್ಟ್‌ನಿಂದ ಸನ್ಮಾನಿಸಲಾಯಿತು.

ಕೃಪೆ : ಕನ್ನಡ ಪ್ರಭ