ಡಾ. ಉಪೇಂದ್ರ ಶೆಣೈ ಇನ್ನಿಲ್ಲ

Dr Upendra Shenoy speaking at a function

ಬೆಂಗಳೂರು: ಖ್ಯಾತ ಚಿಂತಕ, ಲೇಖಕ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಡಾ. ಉಪೇಂದ್ರ ಶೆಣೈ (74) ಅವರು ಸೋಮವಾರ ಸಂಜೆ ಇಲ್ಲಿನ ಖಾಸಗಿ ಚಿಕಿತ್ಸಾಲಯವೊಂದರಲ್ಲಿ ನಿಧನ ಹೊಂದಿದರು.

ಮಧುಮೇಹ, ಮೂತ್ರಪಿಂಡ ವೈಫಲ್ಯಗಳಿಂದಾಗಿ ಕಳೆದ ಒಂದು ವರ್ಷದಿಂದ ಅವರು ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು.

ಶೃಂಗೇರಿ ಮೂಲದ ಡಾ. ಉಪೇಂದ್ರ ಶೆಣೈ ತಮ್ಮ ಎಲ್.ಎ.ಎಂ.ಎಸ್. ವೈದ್ಯ ಪದವಿ ಪಡೆದ ಬಳಿಕ ಶೃಂಗೇರಿಯಲ್ಲಿ ಜನಪ್ರಿಯ ವೈದ್ಯರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಅಲ್ಲಿನ ಜೆಸಿಬಿಎಂ ಕಾಲೇಜಿನ ಸಲಹಾ ಮಂಡಳಿ ಸದಸ್ಯರಾಗಿ ವಿವಿಧ ಸಾಮಾಜಿಕ ಕಾರ‍್ಯಗಳಲ್ಲಿ ಮುಂಚೂಣಿ ಪಾತ್ರವಹಿಸಿದ್ದರು. ಶೃಂಗೇರಿ ಜಗದ್ಗುರುಗಳ ಖಾಸಗಿ ವೈದ್ಯರೂ ಆಗಿದ್ದರು.

೧೯೭೩ರಿಂದ ಡಾ. ಶೆಣೈಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಕಾರ‍್ಯಕರ್ತರಾಗಿ ಸಂಘ ಪರಿವಾರದ ಸೇವೆ, ಶಿಕ್ಷಣ, ಕೃಷಿ, ಆರೋಗ್ಯ,ಪರಿಸರ ಸಂರಕ್ಷಣೆ, ರಾಷ್ಟ್ರೋತ್ಥಾನ ಸಂಶೋಧನಾ ಕೇಂದ್ರ ಮುಂತಾದ ಹತ್ತು ಹಲವು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕಲಿತಿದ್ದು ಆಯುರ್ವೇದ ವೈದ್ಯ ಪದ್ಧತಿಯಾದರೂ ಹೋಮಿಯೋಪತಿ ವೈದ್ಯಕೀಯ ಪದ್ಧತಿಯಲ್ಲೂ ತಜ್ಞರಾಗಿ ಅಗಣಿತ ಸಂಖ್ಯೆಯ ರೋಗಿಗಳಿಗೆ ಔಷಧಿ ನೀಡಿ ಗುಣಮುಖಗೊಳಿಸಿದ್ದರು. ವಿಶೇಷವಾಗಿ ಶಿಶು ಶಿಕ್ಷಣ, ಸಾವಯವ ಕೃಷಿ, ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿ , ಗುರುಕುಲ ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನ ಹಾಗೂ ಪ್ರಯೋಗ ನಡೆಸಿ ರಾಜ್ಯಾದ್ಯಂತ ಅಂತಹ ಚಟುವಟಿಕೆಗಳಿಗೆ ಚಾಲನೆ ನೀಡಿದ ಪ್ರಮುಖ ರೂವಾರಿಯಾಗಿದ್ದರು.

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಡಾ. ಉಪೇಂದ್ರ ಶೆಣೈ ಅರಿಯದ ಕ್ಷೇತ್ರಗಳಿರಲಿಲ್ಲ ಎಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಐತಿಹಾಸಿಕ ಮುಂತಾದ ಕ್ಷೇತ್ರಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ಆಳವಾದ eನ ಅವರದಾಗಿತ್ತು. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಡಾ. ಶೆಣೈ ವಿವಿಧ ಪತ್ರಿಕೆಗಳಿಗೆ ಹಲವಾರು ಬಿಡಿ  ಲೇಖನಗಳನ್ನು ಬರೆದಿದ್ದಾರೆ.  ಕನ್ನಡ , ಇಂಗ್ಲಿಷ್ ಭಾಷೆಗಳ ವಿವಿಧ ಪತ್ರಿಕೆಗಳ ಅನೇಕ ವಿಷಯಗಳಿಗೆ ಸಂಬಂಧಿಸಿದ ಲಕ್ಷಾಂತರ ಪತ್ರಿಕಾ ತುಣುಕುಗಳನ್ನು ಸಂಗ್ರಹಿಸಿದ್ದು ಅವರ ಇನ್ನೊಂದು ವಿಶೇಷತೆ.

ಡಾ. ಶೆಣೈಯವರು ಭಾರತ ದರ್ಶನ ಖ್ಯಾತಿಯ ದಿವಂಗತ ವಿದ್ಯಾನಂದ ಶೆಣೈಯವರ ಹಿರಿಯ ಸಹೋದರರಾಗಿದ್ದು ಅಪಾರ ಸಂಖ್ಯೆಯ ಅಭಿಮಾನಿಗಳು  ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.

ಸಂಘದ ಕ್ಷೇತ್ರೀಯ ಪ್ರಚಾರಕರಾದ ಮಂಗೇಶ ಬೇಂಢೆ, ಹಿರಿಯ ಪ್ರಚಾರಕರಾದ ಕೃ. ಸೂರ‍್ಯನಾರಾಯಣರಾವ್ , ಮೈ.ಚ.ಜಯದೇವ, ನ.ಕೃಷ್ಣಪ್ಪ  ಮೊದಲಾದ ಪ್ರಮುಖರು ಡಾ. ಶೆಣೈಯವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Dr Upendra Shenoy