ಸಾಮರಸ್ಯದ ನಡಿಗೆ ಸಹಭೋಜನದೆಡೆಗೆ: ಸಾಮಾಜಿಕ ಪರಿವರ್ತನೆಯಲ್ಲೊಂದು ಮಹತ್ವದ ಮೈಲಿಗಲ್ಲು..

ಸಾಮರಸ್ಯದ ನಡಿಗೆ ಸಹಭೋಜನದೆಡೆಗೆ..

A Madiga Community woman seen at her happiest mood, when Brahmins visited her house and had Lunch along with her family at Mysore.

ಮೈಸೂರಿನ ಗಾಂಧಿನಗರ ಅದೊಂದು ಪಾರಂಪರಿಕ ದಲಿತ ಕಾಲೋನಿ. ಮೈಸೂರಿನ ಹೊಸ ಬಸ್ ನಿಲ್ದಾಣದಿಂದ 2 ಕಿ.ಮೀ. ದೂರದಲ್ಲಿರುವ ಗಾಂಧಿನಗರದ 12, 13, 14ನೇ ಕ್ರಾಸ್‌ಗಳಲ್ಲಿ ಕಳೆದ ವಾರ ಸೆ. 15ರಂದು ಸಂಭ್ರಮದ ವಾತಾವರಣ. ಚಪ್ಪಲಿ ಹೊಲಿಯುವ ಕಾಯಕದೊಂದಿಗೆ ಬದುಕು ಕಟ್ಟಿಕೊಂಡು ಶಿಕ್ಷಣದ ಮೂಲಕ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಹೆಣಗುತ್ತಿರುವ ಕುಟುಂಬಗಳು. ಆ ಬೀದಿಗಳಲ್ಲಿನ ಮೊನ್ನೆಯ ಸಂಭ್ರಮ-ಸಡಗರಕ್ಕೆ ಕಾರಣ ಒಂದು, ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರ ಭೇಟಿ, ಸಾಮರಸ್ಯ ನಡಿಗೆಯ ಕಾರ್ಯಕ್ರಮ. ಮತ್ತೊಂದು ಸಾಮರಸ್ಯ ನಡಿಗೆಯ ಜೊತೆಗಿನ ಸಹ ಭೋಜನ ಕಾರ್ಯಕ್ರಮಕ್ಕೆ ಮೈಸೂರಿನ ನೂರಾರು ಗಣ್ಯ ನಾಗರೀಕರು, ಸಾಮಾಜಿಕ ಪ್ರಮುಖರು ಬರುತ್ತಿರುವುದು.

ಸೆ.15ರಂದು ಎಲ್ಲ ಬೀದಿಗಳಲ್ಲಿ ತಳಿರು, ತೋರಣ, ಮನೆ ಮನೆಗಳ ಮುಂದೆ ರಸ್ತೆಯಗಲದ ರಂಗೋಲಿ, ರಸ್ತೆಯ ತುಂಬ ಕಳಶ ಹೊತ್ತು  ಸ್ವಾಗತಕ್ಕೆ ನಿಂತ ಹೆಣ್ಣುಮಕ್ಕಳು. ತಮಟೆಯ ಸದ್ದಿಗೆ ಕುಣಿಯಲು ನಿಂತ ಯುವಕರ ಪಡೆ, ಶುಭ್ರ ವಸ್ತ್ರಗಳಲ್ಲಿ ಸಜ್ಜಾಗಿ ನಿಂತ ಊರಿನ ಯಜಮಾನರುಗಳ ಗುಂಪ.

ಎರಡು ತಾಸಿಗೂ ಮೀರಿ ನಡೆದ ಪಾದಯಾತ್ರೆ. ಸಂಧಿಗೊಂದಿಗಳ ನೂರಾರು ಮನೆಗಳಿಗೆ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಯವರ ಭೇಟಿ, ಪಾದಪೂಜೆ.

Madara Chennayya Swamiji during Padayatra at Mysore Dalit Colony

ಮನೆ ಬಾಗಿಲಿಗೆ ಬಂದ ಶರಣರ ಪಾದ ತೊಳೆದರು. ಮತ್ತೇನು ಮಾಡಬೇಕೆಂದು ತೋಚದೇ ನಿಂತರು. ಮತ್ಯಾರೋ ಅರಿಶಿನ-ಕುಂಕುಮ ಹಚ್ಚಿದರು. ಹೂವು ಸುರಿದರು. ಸಾಲುಗಟ್ಟಿ ಕಾಲಿಗೆರೆಗಿದರು, ಆರತಿ ಬೆಳಗಿದರು, ಸ್ವಾಮೀಜಿಯವರ ದರ್ಶನ, ಸ್ಪರ್ಶದಿಂದ ಪಳಕಿತರಾದರು. ನಮ್ಮ ಮನೆ ಈ ಸಂಧಿಯ ಒಳಗಿದೆ, ಬರಲೇಬೇಕೆಂದು ಹಠಕ್ಕೆ ನಿಂತರು. ಒಂದು ತಾಸಿನ ಸಾಮರಸ್ಯ ನಡಿಗೆ ಎರಡ ತಾಸು ದಾಟಿದರೂ ಸಾಗುತ್ತಲೇ ಇತ್ತು.

ನಂತರ ಶ್ರೀ ರಾಮಮಂದಿರ ಎದುರಿನ ರಸ್ತೆಯ ಅಂಗಳದಲ್ಲೇ ಸಾಮರಸ್ಯ ಸಭೆ, ಮೈಸೂರಿನ 50 ಕ್ಕೂ ಹೆಚ್ಚು ಕುಟುಂಬಗಳ ನೂರಾರು ಸವರ್ಣೀಯ ಸಮಾಜದ ಪ್ರಮುಖರು ಕೋರ್ಟು, ಕಛೇರಿ, ಕಾಲೇಜು, ವ್ಯಾಪಾರ ಇತ್ಯಾದಿಯನ್ನು ಅರ್ಧಕ್ಕೆ ನಿಲ್ಲಿಸಿ, ಸಹ ಭೋಜನಕ್ಕೆಂದು ಗಾಂಧಿ ನಗರಕ್ಕೆ ಬಂದಿದ್ದರು. ದೂರದ ಬೆಂಗಳೂರು, ಕೋಲಾರ, ಚಿತ್ರದುರ್ಗ, ಹಾವೇರಿಗಳಿಂದ ಬಂದವರು ಇದ್ದರು. ಮೈಸೂರಿನ ಮೇಯರ್ ಶ್ರೀಮತಿ ಪಷ್ಪಲತಾ ಜತೆಗೂಡಿದರು. ಮುಳಬಾಗಿಲಿನ ಕಾಂಗ್ರೆಸ್ ಶಾಸಕ ಅಮರೇಶ್, ಮಾಜಿ ಶಾಸಕ ಆಂಜನೇಯ, ಲಿಡ್ಕರ್ ನಿಗಮದ ಹಿಂದಿನ ಅಧ್ಯಕ್ಷರಾದ ಬಿ.ಎನ್. ಚಂದ್ರಪ್ಪ ಈ ಕಾರ್ಯಕ್ರಮಕ್ಕೆಂದೇ ಮೈಸೂರಿಗೆ ಬಂದಿದ್ದರು. ಸರ್ಕಾರಿ ಕಾರ್ಯಕ್ರಮಗಳನ್ನು ಬದಿಗಿಟ್ಟು ಸಚಿವ ರಾಮದಾಸ್ ಸಹ ಭೋಜನಕ್ಕೆ ಸೇರಿಕೊಂಡರು. ಸಾಹಿತಿ ಲತಾ ರಾಜಶೇಖರ್, ಪ್ರಾಧ್ಯಾಪಕ ಪಿ.ವಿ. ನಂಜರಾಜೇ ಅರಸ್, ವಕೀಲರ ಸಂಘದ ಅಧ್ಯಕ್ಷ ಮೇದಪ್ಪ, ’ಅಹಿಂದ’ದ ಡಾ. ಪೂರ್ಣಾನಂದ ಆರೆಸ್ಸೆಸ್ಸಿನ ಪ್ರಾಂತ ಸಂಘ ಚಾಲಕರಾದ ಮಾ. ವೆಂಕಟರಾಮು, ಮಾತಾ ಅಮೃತಾನಂದ ಮಯೀ ಸಂಸ್ಥೆಯ ಕಾರ್ಯಕರ್ತರು ಜೊತೆಗೂಡಿದ್ದರು.

ಚಿಕ್ಕ ಚಿಕ್ಕ ಭಾಷಣಗಳ ಮುಕ್ಕಾಲು ತಾಸಿನ ಸಭೆ ಮುಗಿದಿದ್ದೇ ತಡ ಸಹಭೋಜನದ ಸಂಭ್ರಮ ’ನಮ್ಮ ಮನೆಗೆ ಬನ್ನಿ, ನಮ್ಮ ಮನೆಗೆ ಬನ್ನಿ’ ಎಲ್ಲರಿಗೂ ತಮ್ಮ ಮನೆಯನ್ನು ತುಂಬಿಸಿಕೊಳ್ಳುವ ಸಡಗರ. 20 ಮನೆಗಳನ್ನು ಸಹ ಭೋಜನಕ್ಕೆಂದು ಶ್ರೀ ಮಾದಾರ ಚೆನ್ನಯ್ಯ ವಿಚಾರ ವೇದಿಕೆಯ ಕಾರ್ಯಕರ್ತರು ಗುರುತಿಸಿದ್ದರು. ಮತ್ತೂ ಕೆಲವರು ಸ್ವಯಂಸ್ಪೂರ್ತಿಯಿಂದ ಮನೆಯಲ್ಲಿ ಸಿದ್ಧತೆ ನಡೆಸಿದ್ದರು. ಮನೆಯ ಮುಂದೆ ಕೈ-ಕಾಲು ತೊಳೆಯಲು ನೀರು ಕೊಟ್ಟು ಒಳಗೆ ಕರೆದು, ಪಾಯಸ, ಹೋಳಿಗೆ ಊಟವನ್ನು ಬಡಿಸಿದರು. ಮನೆ ಮಂದಿಯೆಲ್ಲ ಪರಿಚಾರಿಕೆಗೆ ನಿಂತು ಸಹಭೋಜನ ಮುಗಿಯುವುದೇ ಬೇಡವೆಂಬಂತೆ ಅಡಿಗೆ ಮನೆಯಿಂದ ಪಡಸಾಲೆಗೆ ಓಡಾಟ ನಡೆಸಿದ್ದರು. ಊಟ ಮುಗಿಸಿ, ಮನೆಯವರೊಂದಿಗೆ ಪರಿಚಯಿಸಿಕೊಂಡು ಹೊರಗೆ ಬಂದರೆ ’ನಮ್ಮ ಮನೆಗೂ ಬನ್ನಿ, ಪಾಯಸ ಕುಡಿದು ಹೋಗಿ’ ಎಂದು ಒತ್ತಾಯಿಸುವವರು! ವರದಿ ಮಾಡಲು ಬಂದ ಅನೇಕ ಪತ್ರಕರ್ತರೂ ಕ್ಯಾಮೆರಾ ಪಕ್ಕಕ್ಕಿಟ್ಟು ಊಟದ, ಸಾಮರಸ್ಯದ ಸವಿ ಉಂಡರು.

ಕಳೆದ ವರ್ಷ ಇದೇ ಸೆ.15ಕ್ಕೆ ಮೈಸೂರಿನ ಬ್ರಾಹ್ಮಣ ಕೇರಿಯೆನಿಸಿದ ಕೃಷ್ಣಮೂರ್ತಿಪುರಂನಲ್ಲಿ ದಲಿತ ಸಮುದಾಯದಿಂದ ಬಂದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಯವರ ಪಾದಯಾತ್ರೆ ನಡೆದಿತ್ತು. ಈ ಐತಿಹಾಸಿಕ ಕಾರ್ಯಕ್ರಮದ ವರ್ಷಾಚರಣೆಯನ್ನು ಅರ್ಥಪೂರ್ಣ ವಾಗಿಸಲು ಸಾಮರಸ್ಯ ವೇದಿಕೆಯ ಕಾರ್ಯಕರ್ತರು ಈ ವರ್ಷ ಸಹಭೋಜನದ ಕನಸು ಕಂಡರು. ಶ್ರೀ ಮಾದಾರ ಚೆನ್ನಯ್ಯ ವಿಚಾರ ವೇದಿಕೆಯ ಕಾರ್ಯಕರ್ತರು ಗಾಂಧಿನಗರ ಮನೆಗಳನ್ನು ಒಪ್ಪಿಸುವ ಜವಾಬ್ದಾರಿ ಹೊತ್ತರು. ದೂರದ ಹೈದರಾಬಾದಿನಲ್ಲಿ ’ಚಾತುರ್ಮಾಸದಲ್ಲಿದ್ದ ಪೇಜಾವರ ಶ್ರೀಗಳು ಸುದ್ದಿ ತಿಳಿದು ಶುಭ ಹಾರೈಸಿದರು.

ಹೀಗೆಂದರು ಶ್ರೀ ಮಾದಾರ ಚೆನ್ನಯ್ಯ

‘ಬುದ್ಧಿಜೀವಿಗಳು, ಸಾಹಿತಿಗಳು, ವೈಚಾರಿಕ ನೆಲೆಗಟ್ಟಿನವರು ಇದರ ಬಗ್ಗೆ ಟೀಕೆಗಳನ್ನು ಮಾಡಿದರು. ಇದರಿಂದ ಯಾವ ಸಾಧನೆಯೂ ಆಗದು. ಪೇಜಾವರ ಶ್ರೀಗಳು ದಲಿತರ ಕೇರಿಯಲ್ಲಿ ಪಾದಯಾತ್ರೆ ಮಾಡಿದರೆ ಸಾಲದು, ಅವರ ಪಂಗಡದವರು, ಬೆಂಬಲಿಗರು ಇದನ್ನು ಒಪ್ಪಿಕೊಳ್ಳಬೇಕು. ಸಹ ಭೋಜನ ಮಾಡಬೇಕು. ಆಗ ಸೂಕ್ತ ಸಾಮರಸ್ಯ ಸಾಧ್ಯ ಎಂದರು. ಇದೆಲ್ಲದಕ್ಕೂ ತೆರೆ ಎಳೆಯಲು ದಲಿತರ ಕಾಲೋನಿಯಲ್ಲಿ ಸಹಭೋಜನ ಏರ್ಪಡಿಸಲಾಗಿದೆ. ಪರಿವರ್ತನೆ ಸಾಧ್ಯ ಎಂಬುದಕ್ಕೆ ಇದೇ ಸಾಕ್ಷಿ’.

ಪ್ರಚಾರಕ್ಕಾಗಿ ಅಲ್ಲ

ಸಮಾಜದಲ್ಲಿ ಮೇಲು ಕೀಳು, ಜಾತಿ ಸಂಘರ್ಷ ಇವುಗಳನ್ನು ಹೋಗಲಾಡಿಸುವ ಯತ್ನವಾಗಿ ಸಾಮರಸ್ಯ ನಡಿಗೆ, ಸಹಭೋಜನ ನಡೆಸಲಾಗುತ್ತಿ ದೆಯೇ ಹೊರತು ಪ್ರಚಾರಕ್ಕಾಗಿ ಅಲ್ಲ ಎಂದು ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು. ಸಾಮರಸ್ಯ ವೇದಿಕೆ ಹಾಗೂ ಅಖಿಲ ಕರ್ನಾಟಕ ಶಿವಶರಣ ಮಾದಾರ ಚೆನ್ನಯ್ಯ ವಿಚಾರ ವೇದಿಕೆ ಗುರುವಾರ ಗಾಂಧಿನಗರದಲ್ಲಿ ಆಯೋಜಿಸಿದ್ದ ಸಾಮರಸ್ಯ ನಡಿಗೆ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಉಡುಪಿ ಪೇಜಾವರತೀರ್ಥ ಸ್ವಾಮೀಜಿ ನಮಗೆ ಪ್ರೇರಣೆಯಾಗಿದ್ದು, ಅವರ ಪ್ರಯತ್ನದಿಂದ ಕಳೆದ ವರ್ಷ ಸಾಮರಸ್ಯ ಪಾದಯಾತ್ರೆ ಯಶಸ್ವಿಯಾಯಿತು. ಕೃಷ್ಣಮೂರ್ತಿಪರಂ ನಲ್ಲಿ ನಡೆದ ಸಾಮರಸ್ಯ ಯಾತ್ರೆ ಐತಿಹಾಸಿಕ ಕಾರ್ಯಕ್ರಮ. ಬ್ರಾಹ್ಮಣ ಅಗ್ರಹಾರದಿಂದ ಹೋರಾಟ ಬದಲಾವಣೆಯ ಗಾಳಿ ಗಾಂಧಿನಗರದ ಕೇರಿಯವರಿಗೆ ತಲುಪಿದೆ. ಅನೇಕ ಮೈಲುಗಲ್ಲುಗಳನ್ನು ನಿರ್ಮಿಸಿದೆ ಎಂದರು.

ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಪದ್ಧತಿ, ಸಂಪ್ರದಾಯ ಇವುಗಳನ್ನು ಒಂದೇ ಬಾರಿಗೆ ತಳ್ಳಿ ಹಾಕಲು ಸಾಧ್ಯವಿಲ್ಲ. ಇದಕ್ಕೆ ಸಮಯಾವಕಾಶಬೇಕು.

ಈಗಾಗಲೇ ಹಲವಾರು ಬದಲಾವಣೆಗಳಾಗಿವೆ. ಪ್ರಯತ್ನ ಸಾಗಿದೆ. ಇದು ಎರಡನೆಯ ಪ್ರಯತ್ನ ಎಂದ ಅವರು, ದೇಶದ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂಬುದು ಎಲ್ಲರ ಆಶಯ. ಇದಕ್ಕೆ ಇಂತಹ ಕಾರ್ಯಗಳು ಎಲ್ಲಾ ಕಡೆ ನಡೆಯಬೇಕು ಎಂದರು.

ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಮಾಜಿ ಶಾಸಕ ಆಂಜನೇಯ ಕಳೆದ ವರ್ಷ ಕಾರ್ಯಕ್ರಮಕ್ಕೆ ಬಾರದೇ ಬೇಸರವಾಗಿತ್ತು. ಈ ವರ್ಷ ಬಂದದ್ದು ಸಂತೋಷ ತಂದಿದೆ. ಆರೆಸ್ಸೆಸ್ ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿರುವುದರ ಬಗ್ಗೆ ನನಗೆ ಸಂಶಯ ಉಳಿದಿಲ್ಲ ಎಂದರು.

Report by Vadiraj

Prajavani Report

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಅಕ್ಟೋಬರ್ 1: 'ಉತ್ಕರ್ಷಪಥ' ಪುಸ್ತಕ ಲೋಕಾರ್ಪಣ

Sat Sep 24 , 2011
Bangalore: 1965 ರಲ್ಲಿ ಪ್ರಾರಂಭವಾದ ‘ರಾಷ್ಟ್ರೋತ್ಥಾನ ಸಾಹಿತ್ಯ’ ಕನ್ನಡದ ಮುಂಚೂಣಿ ಪುಸ್ತಕ ಪ್ರಕಾಶನ ಸಂಸ್ಥೆಗಳಲ್ಲಿ ಒಂದು. ಇದುವರೆಗೆ ನೂರಕ್ಕೂ ಹೆಚ್ಚು ಮೌಲಿಕ ಪುಸ್ತಕಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿದೆ. ಇದರಲ್ಲಿ, ಇತಿಹಾಸ, ಸಂಸ್ಕೃತಿ, ಸಾಹಿತ್ಯ, ವ್ಯಕ್ತಿತ್ವವಿಕಾಸ, ವ್ಯಕ್ತಿಚಿತ್ರ, ಪರಿಸರ – ಆರ್ಥಿಕ ಚಿಂತನೆ, ವಿಜ್ಞಾನ, ಗಣಿತ, ಆರೋಗ್ಯ – ಹೀಗೆ ಅನೇಕ ವಿಷಯ-ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳಿವೆ. ನಮ್ಮ ಕೆಲವು ಪ್ರಕಟಣೆಗಳಿಗೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ-ಪುರಸ್ಕಾರಗಳೂ ಸಂದಿವೆ. ‘ಭಾರತ-ಭಾರತಿ ಪುಸ್ತಕ ಸಂಪದ’ ಮಾಲಿಕೆಯ […]