೧೯೯೦ರ ದಶಕ. ಬೇಸಿಗೆಯ ಒಂದು ದಿನ. ಶರಾವತಿ ಹಿನ್ನೀರಿನ ಮಧ್ಯದಲ್ಲಿರುವ ಸಣ್ಣ ಗ್ರಾಮ ತುಮರಿಯಲ್ಲಿ ಕೃಷಿಕರಿಗಾಗಿ ಒಂದು ಶಿಬಿರವನ್ನೇರ್ಪಡಿ ಸಲಾಗಿತ್ತು.  ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಡಾ|| ಉಪೇಂದ್ರ ಶೆಣೈ ಮತ್ತು ತೀರ್ಥಹಳ್ಳಿಯ ಪ್ರಗತಿಪರ ಸಾವಯವ ಕೃಷಿಕರಾದ ಪುರುಷೋತ್ತಮರಾಯರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶಿಬಿರದಲ್ಲಿ ಶೆಣೈಯವರು ಕೃಷಿಕರಿಗಿರುವ ಸಮಸ್ಯೆಗಳ ಪಟ್ಟಿ ಮಾಡಲು ಹೇಳಿದರು. ಸುಮಾರು ೪೦ ಸಮಸ್ಯೆಗಳ ಆ ಪಟ್ಟಿಯಲ್ಲಿ ರಾಸಾಯನಿಕ ಕೃಷಿಯಿಂದುಂಟಾಗುತ್ತಿದ್ದ ಸಮಸ್ಯೆಯೂ ಒಂದು. ಎಲ್ಲಾ ಸಮಸ್ಯೆಗಳ ಬಗ್ಗೆ ಆಳವಾದ ಚಿಂತನ ಮಂಥನ ನಡೆದ ಬಳಿಕ `ಕೃಷಿ ಪ್ರಯೋಗ ಪರಿವಾರ’ ಎನ್ನುವ ಹೆಸರಿನಲ್ಲಿ ಸಮಾನ ಮನಸ್ಕ ಕೃಷಿಕರ ಗುಂಪು ಪ್ರಾರಂಭಿಸುವುದೆಂಬ ನಿರ್ಧಾರಕ್ಕೆ ಬರಲಾಯಿತು.

ಆಧ್ಯಾತ್ಮಿಕ ಮತ್ತು ನೈತಿಕ ತಳಹದಿಯ ಆಧಾರದ ಮೇಲೆ ಪ್ರಕೃತಿಸ್ನೇಹಿಯಾದ ಹಾಗೂ ಬೃಹತ್ ಬಂಡವಾಳದ ಅಗತ್ಯವಿಲ್ಲದ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಿ ಜಾರಿಗೊಳಿ ಸುವುದು. ಅಂತಹ ಯಶಸ್ವಿ ಅಭಿವೃದ್ಧಿ ಮಾದರಿಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ದೂರದೃಷ್ಟಿಯ ಗುರಿ ಕೃಷಿ ಪ್ರಯೋಗ ಪರಿವಾರದ್ದು. ಆ ನಿಟ್ಟಿನಲ್ಲಿ ಪಾರಂಪರಿಕವಾದ ಸ್ವಾವಲಂಬೀ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದು, ವೈವಿಧ್ಯಮಯ ಸಸ್ಯಸಂಪತ್ತು ಮತ್ತು ರಾಸಾಯನಿಕರಹಿತ ಕೃಷಿಯ ಸಹಾಯದಿಂದ  ಸ್ಥಳೀಯ ಚಿಕಿತ್ಸಾ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ರಾಜಕೀಯದ ಪ್ರಭಾವಕ್ಕೊಳಗಾಗದೆ ರಚನಾತ್ಮಕವಾದ ಅಭಿವೃದ್ಧಿಯನ್ನು ಸಾಧಿಸುವ ಬಗ್ಗೆ ಯುವಜನರಿಗೆ ತರಬೇತಿ ನೀಡುವುದು  ಹೀಗೆ ಮೂರು ಮುಖ್ಯ ಅಂಶಗಳ ಆಧಾರದ ಮೇಲೆ ಪರಿವಾರವು ಕೆಲಸ ಮಾಡಲು ಪ್ರಾರಂಭಿಸಿತು.

ವಿವಿಧ ಆಯಾಮಗಳಲ್ಲಿ ನಡೆಯುತ್ತಿರುವ ಕೃಷಿ ಪ್ರಯೋಗ ಪರಿವಾರದ ಚಟುವಟಿಕೆಗಳ ಸ್ಥೂಲ ಪರಿಚಯ ಇಲ್ಲಿದೆ.

ಕೃಷಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಕೃಷಿಕರ ಜಮೀನಿನಲ್ಲಿ ಅನೇಕ ಪ್ರಯೋಗಗಳನ್ನು ನಡೆಸುತ್ತಿದೆ ಪರಿವಾರ. ಅವುಗಳಲ್ಲಿ ಗೋಮೂತ್ರದ ಬಳಕೆ, ಬೆಳೆಗೆ ದ್ರವರೂಪದಲ್ಲಿ ಗೊಬ್ಬರ ಕೊಡುವುದು, ಸಸ್ಯಗಳ ಮೇಲೆ ಚಂದ್ರನ ಚಲನೆಯ ಪ್ರಭಾವ ಮುಂತಾದ ವಿಷಯಗಳ ಮೇಲಿನ ಪ್ರಯೋಗಗಳು ನಡೆಯುತ್ತಿವೆ.  ಅಲ್ಲದೇ, ಅಡಿಕೆಗೆ ಬರುವ ಹಳದಿ ಎಲೆ ರೋಗಕ್ಕೆ ವೃಕ್ಷಾಯುರ್ವೇದದ ಆಧಾರದ ಮೇಲೆ ಅಭಿವೃದ್ಧಿಪಡಿಸಿರುವ ಮದ್ದನ್ನು ಪರೀಕ್ಷಿಸಲಾಗುತ್ತಿದೆ. ಭಾರತದ ಕೃಷಿ ಮಾರುಕಟ್ಟೆಯಿಂದ ಕೃಷಿಕರಿಗೂ ಬಳಕೆದಾರರಿಗೂ ಪ್ರಯೋಜನ ವಿಲ್ಲ ಎನ್ನುವುದು ಎಲ್ಲರೂ ತಿಳಿದಿರುವ ಸತ್ಯ.

ಆ ನಿಟ್ಟಿನಲ್ಲಿ ಕೃಷಿಕ-ಬಳಕೆದಾರ ಸಂಪರ್ಕ ಕಾರ್ಯಕ್ರಮಗಳನ್ನು ಪರಿವಾರ ನಡೆಸುತ್ತಿದೆ.     ಪರ್ಯಾಯ ಕೃಷಿ ಪದ್ಧತಿಯ ಬಗ್ಗೆ ಉಪನ್ಯಾಸ, ಕಾರ್ಯಾಗಾರ ಮತ್ತು ತರಬೇತಿ ನಡೆಸುವುದು ಪರಿವಾರದ ಇನ್ನೊಂದು ಮುಖ್ಯ ಕೆಲಸ. ಕರ್ನಾಟಕದ ೧೩ ಜಿಲ್ಲೆಗಳ ಹಲವಾರು ಹಳ್ಳಿಗಳಲ್ಲಿ ಪರಿವಾರವು ಇಂತಹ ಕಾರ್ಯಾಗಾರಗಳನ್ನು ಆಯೋಜಿಸಿದೆ,  ಭಾಗವಹಿಸಿದೆ.

ವೃಕ್ಷಾಯುರ್ವೇದ, ಜಾನುವಾರು ಚಿಕಿತ್ಸಾ ಪದ್ಧತಿ, ಜೀವ ಚೈತನ್ಯ ಕೃಷಿ, ನಮ್ಮ ಕಾಮಧೇನು, ನೀರ ನೆಮ್ಮದಿಗೆ ನೂರೆಂಟು ದಾರಿಗಳು, ಕುಂಕುಮ, ಕದಿರು ಮುಂತಾದ ಪುಸ್ತಕಗಳನ್ನು ಪ್ರಕಟಿಸಿದೆ.

ಕೃಷಿಗೆ ಬೇಕಾದ ಯಂತ್ರೋಪಕರಣಗಳ ಸಂಶೋಧನೆಗೆ ಪ್ರೋತ್ಸಾಹ. ನೆಲ್ಲಿಕಾಯಿಯನ್ನು ಕತ್ತರಿಸಿ ರಸವನ್ನು ತೆಗೆಯಲು ಬೇಕಾದ ಉಪಕರಣವನ್ನು ಗ್ರಾಮೀಣ ಪ್ರದೇಶದ ಮೆಕ್ಯಾನಿಕ್ ಒಬ್ಬರ ಮೂಲಕ ಸಂಶೋಧಿಸಿ ಪ್ರಚುರಪಡಿಸಿದೆ. ಅಲ್ಲದೇ, ನೆಲ್ಲಿಕಾಯಿಯ ಉಪಯೋಗದ ಬಗ್ಗೆ ತಿಳುವಳಿಕೆ ನೀಡಿದ್ದರಿಂದಾಗಿ ನೆಲ್ಲಿ ಮರಗಳನ್ನು ಬೆಳೆಸುವವರ ಸಂಖ್ಯೆ ಹೆಚ್ಚಾಗಿದೆ.

ಇದುವರೆಗೆ ಸುಮಾರು ೩೦,೦೦೦ ಮಹಿಳೆಯರಿಗೆ ಶುದ್ಧ ಕುಂಕುಮ ತಯಾರಿಕೆಯ ತರಬೇತಿ ನೀಡಿದೆ. ಇದು ರಾಸಾಯನಿಕ ಕುಂಕುಮದ ಹಾವಳಿಯನ್ನು ಕಡಿಮೆ ಮಾಡಿದ್ದಲ್ಲದೇ, ಕೆಲವು ಕುಟುಂಬ ಗಳಿಗೆ ಒಂದು ಆದಾಯದ ಮೂಲವಾಗಿದೆ.

ಗೋ ಉತ್ಪನ್ನಗಳಾದ ಗೋಮೂತ್ರ, ಹಾಲು, ಮೊಸರು, ಮಜ್ಜಿಗೆ ಮೊದಲಾದವು ಗಳನ್ನು ಕೃಷಿಯಲ್ಲಿ ಕೀಟನಾಶಕವಾಗಿ, ಗೊಬ್ಬರವಾಗಿ ಬಳಸುವ ಬಗ್ಗೆ ತರಬೇತಿ ಮತ್ತು ಪ್ರಚಾರ.

ವೈವಿಧ್ಯಮಯವಾದ ಬೀಜಸಂಪತ್ತನ್ನು ರಕ್ಷಿಸಲು, ಪರಸ್ಪರ ಬೀಜಗಳನ್ನು ಹಂಚಿಕೊಳ್ಳಲು ಬೀಜ ಬ್ಯಾಂಕ್ ಸ್ಥಾಪನೆ.

ಮಳೆ ಕೊಯ್ಲಿನ ಬಗ್ಗೆ ತರಬೇತಿ ಮತ್ತು ಪ್ರಚಾರ. ಶಾಲೆಗಳಲ್ಲಿ ಇದರ ಬಗ್ಗೆ ಕಾರ್ಯಕ್ರಮ.

ಸರ್ಕಾರದ `ಸಾವಯವ ಗ್ರಾಮ’ ಯೋಜನೆಯಲ್ಲಿ ಭಾಗಿಯಾಗಿ ಕೆಲವು ಗ್ರಾಮಗಳನ್ನು ಸಂಪೂರ್ಣ ಸಾವಯವ ಮಾಡುವತ್ತ ಪ್ರಯತ್ನ.

ಪ್ರತೀ ತಾಲೂಕುಗಳಲ್ಲಿ `ಸಾವಯವ ಕೃಷಿ ಪರಿವಾರ’ಗಳ ರಚನೆ. ಇದುವರೆಗೆ ೧೭೫ಕ್ಕೂ ಹೆಚ್ಚು ತಾಲೂಕುಗಳಲ್ಲಿ ೫೨,೨೦೦ ಕೃಷಿಕರು ಸದಸ್ಯರು.

ಇದುವರೆಗೆ ಪರಿವಾರದ ೫೯೮ ಕೃಷಿಕರು ಶೇ. ೧೦೦ ಸಾವಯವ ಕೃಷಿಯ ಪ್ರಮಾಣಪತ್ರ ಪಡೆದಿದ್ದಾರೆ.

ತೀರ್ಥಹಳ್ಳಿಯಲ್ಲಿ ಕಛೇರಿಯನ್ನು ಹೊಂದಿರುವ ಕೃಷಿ ಪ್ರಯೋಗ ಪರಿವಾರ ಟ್ರಸ್ಟ್‌ನ ೧೦ ಎಕರೆಯಷ್ಟು ಜಮೀನು ಇಂದು ದೇಶದ ವಿವಿಧ ಭಾಗಗಳಿಂದ ಬರುವ ಸಾವಯವ ಕೃಷಿಕರಿಗೆ ಒಂದು ತರಬೇತಿ ಶಾಲೆ, ಸ್ಫೂರ್ತಿಯ ಸೆಲೆ!

 

ವಿಳಾಸ:

ಕೃಷಿ ಪ್ರಯೋಗ ಪರಿವಾರ
ಕುರುವಳ್ಳಿ, ತೀರ್ಥಹಳ್ಳಿ ಅಂಚೆ, ಶಿವಮೊಗ್ಗ ಜಿಲ್ಲೆ.
ದೂರವಾಣಿ : ೯೪೪೯೬ ೨೩೨೭೫