ನಿರ್ಣಯ-2: ರಾಷ್ಟ್ರೀಯ ಜಲನೀತಿಯ ಪುನ ವಿಮರ್ಶೆಯಾಗಲಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೀತಿ-ನಿಧಾರಗಳನ್ನು ನಿರೂಪಿಸುವ ೩ದಿನಗಳ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ, ಮಾರ್ಚ್ ೧೬, ೧೭ ಮತ್ತು ೧೮ರಂದು ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಿತು. ಆರೆಸ್ಸೆಸ್ ಹಾಗೂ ಇತರ ಪರಿವಾರ ಸಂಘಟನೆಗಳ ರಾಷ್ಟ್ರೀಯ ಪ್ರಮುಖರು ಭಾಗವಹಿಸಿದ್ದ ಈ ಮಹತ್ವದ ಸಭೆಯಲ್ಲಿ ರಾಷ್ಟ್ರಜೀವನವನ್ನು ಪ್ರಭಾವಿಸುವ ಅನೇಕ ವಿಷಯಗಳ ಕುರಿತು ಚರ್ಚೆ ನಡೆಯಿತು. ರಾಷ್ಟ್ರೀಯ ಏಕತೆ ಹಾಗೂ ರಾಷ್ಟ್ರೀಯ ಜಲನೀತಿ ಕುರಿತು ಮಹತ್ವದ ನಿರ್ಣಯಗಳನ್ನು ಪ್ರತಿನಿಧಿ ಸಭಾದಲ್ಲಿ ಕೈಗೊಳ್ಳಲಾಯಿತು. ಈ ನಿರ್ಣಯಗಳ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

ನಿರ್ಣಯ-2: ರಾಷ್ಟ್ರೀಯ ಜಲನೀತಿಯ ಪುನ ವಿಮರ್ಶೆಯಾಗಲಿ

ನೈಸರ್ಗಿಕ ಸಂಪತ್ತು ಎಲ್ಲ ಜೀವಿಗಳಿಗೆ ಒದಗಿಬಂದಿರುವ ಪವಿತ್ರ ಬಳುವಳಿಯಾಗಿದೆ. ಆದ್ದರಿಂದ ನಮ್ಮ ಜಲಸಂಪನ್ಮೂಲ, ಮಣ್ಣು, ಗಾಳಿ, ಖನಿಜಗಳು, ಗೋಸಂಪತ್ತು, ಜೀವವೈವಿಧ್ಯ ಮತ್ತಿತರ ನೈಸರ್ಗಿಕ ಸಂಪನ್ಮೂಲಗಳನ್ನು ವಾಣಿಜ್ಯಲಾಭದ ಪರಿಕರಗಳೆಂದು ಪರಿಗಣಿಸಬಾರದೆಂದು ಆರೆಸ್ಸೆಸ್ ಪ್ರತಿನಿಧಿ ಸಭಾ ಅಭಿಪ್ರಾಯಪಟ್ಟಿದೆ. ಈ ಸಂಪನ್ಮೂಲಗಳ ಬಳಕೆ ಮತ್ತು ಸಂರಕ್ಷಣೆಗಳ ಬಗೆಗಿನ ನಮ್ಮ ದೃಷ್ಟಿಕೋನ, ನೀತಿ ಮತ್ತು ಕ್ರಮಾನುಷ್ಠಾನಗಳಿಗೆ ಇಡೀ ಜೀವ ಪ್ರಪಂಚವು ಸುದೀರ್ಘ ಕಾಲದಿಂದ ನಡೆಸಿಕೊಂಡು ಬಂದ ಸಾಮರಸ್ಯದ ಸಹಬಾಳ್ವೆಯ ತತ್ವವು ಆಧಾರವಾಗಿರಬೇಕೇ ಹೊರತು ಅಲ್ಪಾವಧಿಯ ಖಾಸಗಿ ಲಾಭವು ಆಧಾರವಾಗಿರಬಾರದು. ಜಗತ್ತಿನ ಜನಸಂಖ್ಯೆಯ ಶೇ. ೧೭ರಷ್ಟು ಭಾಗವನ್ನು ಹೊಂದಿರುವ ಭಾರತದ ಬಳಿ ಇರುವ ಭೂಭಾಗ ಶೇ. 2.5ರಷ್ಟು ಮತ್ತು ಸಿಹಿನೀರು ಶೇ. 4 ರಷ್ಟು ಮಾತ್ರ. ಪರಿಸ್ಥಿತಿ ಹೀಗಿರುವಾಗ ನಮ್ಮ ಪವಿತ್ರ ‘ಪಂಚಭೂತ’ಗಳಲ್ಲಿ ಒಂದಾದ ನೀರನ್ನು ಖಾಸಗಿ ಏಕಸ್ವಾಮ್ಯಕ್ಕೆ ವಹಿಸಿ, ವಾಣಿಜ್ಯಾತ್ಮಕ ಲಾಭ’ಗಳಿಸಲು ಅವಕಾಶ ಮಾಡಿಕೊಡಲು ಮುಂದಾಗುತ್ತಿರುವ ಸರ್ಕಾರದ ಕ್ರಮ ಅತ್ಯಂತ ಕಳವಳ ಉಂಟುಮಾಡಿದೆ.

ಕೇಂದ್ರ ಸರ್ಕಾರ ಈಚೆಗೆ ಪ್ರಕಟಿಸಿ ವಿತರಿಸುತ್ತಿರುವ ರಾಷ್ಟ್ರೀಯ ಜಲನೀತಿ – 2012ನೀರನ್ನು ಜೀವನದ ಆಧಾರ ಎಂದು ವರ್ಣಿಸುತ್ತಲೇ ವಿಶ್ವಬ್ಯಾಂಕ್ ಮತ್ತು ಬಹುರಾಷ್ಟ್ರೀಯ ಕಂಪೆನಿ (ಎಂಎನ್‌ಸಿ)ಗಳು ನೀಡುವ ಸೂತ್ರಗಳು ಹಾಗೂ ಮಾದರಿಗಳನ್ನು ಅದರಲ್ಲಿ ಅಳವಡಿಸಿದೆ. ಕೇಂದ್ರ ಸರ್ಕಾರದ ದುಷ್ಟ ಸಂಚು ಇದರಲ್ಲಿ ಸ್ಪಷ್ಟವಾಗಿ ಬಯಲಿಗೆ ಬಂದಿದೆ. ನೀರಿನ ಬಳಕೆಯಲ್ಲಿ ಸಂಯಮವನ್ನು ತರುವ ಹೆಸರಿನಲ್ಲಿ ನೀರಿನ ಮತ್ತು ವಿದ್ಯುತ್‌ದರಗಳ ಏರಿಕೆ, ನೀರನ್ನು ಅದರ ವೆಚ್ಚದೊಂದಿಗೆ ಜೋಡಿಸುವುದು ಮುಂತಾದ ಪ್ರಸ್ತಾವಗಳು ಹೊಸನೀತಿಯ ಕರಡು ಪ್ರತಿಯಲ್ಲಿದ್ದು ಅದರಿಂದ ಸಾಮಾನ್ಯ ಜನತೆಗೆ ನೀರು ದುಬಾರಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ; ಇನ್ನೊಂದೆಡೆ ನೀರಿನ ವ್ಯಾಪಾರದಲ್ಲಿ ತೊಡಗಿದ ಉದ್ಯಮ ಸಂಸ್ಥೆಗಳು ಅಪಾರ ಲಾಭವನ್ನು ಗಳಿಸಲಿವೆ. ವಿಶ್ವಬ್ಯಾಂಕ್‌ನ ಸಲಹೆಯ ಮೇರೆಗೆ ಸರ್ಕಾರಿ-ಖಾಸಗಿ ಪಾಲುಗಾರಿಕೆ ಎನ್ನುವ ಹೆಸರಿನಲ್ಲಿ ನೀರಿನ ವಿತರಣೆಯ ನಿಯಂತ್ರಣವನ್ನು ಖಾಸಗಿ ಏಕಸ್ವಾಮ್ಯಕ್ಕೆ ವಹಿಸಿಕೊಡಲು ಉದ್ದೇಶಿಸಲಾಗಿದೆ; ಇದರಿಂದ ಜೀವನದ ಒಂದು ಮೂಲಭೂತ ಆವಶ್ಯಕತೆಯ ವಸ್ತುವನ್ನು ಖಾಸಗಿ ಮಾಲೀಕತ್ವಕ್ಕೆ, ಅದರಲ್ಲೂ ಬಹಳಷ್ಟು ವಿದೇಶಿ ಕಂಪನಿಗಳ ನಿಯಂತ್ರಣಕ್ಕೆ ಒಪ್ಪಿಸಿದಂತಾಗಲಿದೆ.

ನೀರು ಪೂರೈಕೆಯಲ್ಲಿ ನೀರಿನ ಗುಣಮಟ್ಟ ಮತ್ತು ಪ್ರಮಾಣ, ಕ್ರಮಪ್ರಕಾರ ನೀರು ಒದಗಣೆ ಮತ್ತು ನೀರಿನ ದರಗಳಿಗೆ ಸಂಬಂಧಿಸಿ ಜಗತ್ತಿನಾದ್ಯಂತ ಖಾಸಗಿ ಏಕಸ್ವಾಮ್ಯಕ್ಕೆ ವಹಿಸಿದಲ್ಲೆಲ್ಲ ದೋಷಗಳೇ ಕಂಡುಬಂದಿವೆ. ನೀರನ್ನು ವ್ಯಾಪಾರ ಮಾಡಬಹುದಾದ ಒಂದು ವಸ್ತು ಅಥವಾ ಜಲನೀತಿಯ ವ್ಯಾಪ್ತಿಗೆ ಬರುವ ಒಂದು ಆರ್ಥಿಕ ಸರಕು ಎಂದು ಪರಿಗಣಿಸುವ ಮೂಲಕ ಸರ್ಕಾರ ಅಂತಾರಾಷ್ಟ್ರೀಯ ವ್ಯವಹಾರ ಸಲಹೆಗಾರರ ವಾದಕ್ಕೆ ಶರಣಾದಂತಾಗಿದೆ; ಭಾರತ ಮತ್ತಿತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನೀರಿನ ಖಾಸಗೀಕರಣವೆಂದರೆ ಶತಕೋಟಿಗಟ್ಟಲೆ ಡಾಲರ್‌ಗಳ ಏರುಮುಖದ ವ್ಯಾಪಾರ ಎಂಬುದು ಆ ಸಲಹೆಗಾರರ ವಾದವಾಗಿದೆ.

ನೀರು ಇಡೀ ಜೀವಜಗತ್ತಿನ ಅಸ್ತಿತ್ವದ ಆಧಾರ. ಆದ್ದರಿಂದ ಜಲ ಸಂಪನ್ಮೂಲವನ್ನು ಸರಿಯಾಗಿ ನಿರ್ವಹಿಸಿ ಪ್ರತಿಯೊಬ್ಬ ನಾಗರಿಕನಿಗೆ ಸಾಕಷ್ಟು ಪ್ರಮಾಣದ ಶುದ್ಧ ನೀರನ್ನು ಒದಗಿಸುವುದು, ಕೃಷಿಗೆ ಹಾಗೂ ಇತರ ಆರ್ಥಿಕ ಚಟುವಟಿಕೆಗಳಿಗೆ ಸೂಕ್ತ ದರದಲ್ಲಿ ಸಾಕಷ್ಟು ನೀರನ್ನು ಪೂರೈಸುವುದು ಒಂದು ಸರ್ಕಾರದ ಆಡಳಿತಾತ್ಮಕ ಕರ್ತವ್ಯವೆನಿಸುತ್ತದೆ. ಸರ್ಕಾರವು ಯಾವುದೇ ನೀತಿಯನ್ನು ರೂಪಿಸುವ ಮುನ್ನ ರಾಷ್ಟ್ರೀಯ ಜಲನೀತಿ, ಭೂಮಿಯ ಬಳಕೆಯಲ್ಲಿ ಬದಲಾವಣೆ ಹಾಗೂ ನೈಸರ್ಗಿಕ ಸಂಪನ್ಮೂಲದ ನಿರ್ವಹಣೆಯಂತಹ ಮೂಲಭೂತ ವಿಷಯಗಳನ್ನು ಕುರಿತು ಗ್ರಾಮ ಪಂಚಾಯತ್‌ನಿಂದ ಅತ್ಯುನ್ನತ ಮಟ್ಟದ ತನಕ ಗಂಭೀರವಾದ ಚರ್ಚೆಯನ್ನು ಏರ್ಪಡಿಸಬೇಕು.

ಇಂತಹ ಸನ್ನಿವೇಶದಲ್ಲಿ ನೀರಿನ ದುರುಪಯೋಗ ಮಾಡುವುದಾಗಲೀ, ಹಾಳು ಮಾಡುವುದಾಗಲೀ ಅಥವಾ ಮಾಲಿನ್ಯ ಎಸಗುವುದಾಗಲಿ ಸಲ್ಲದೆಂದು ಅಖಿಲ ಭಾರತೀಯ ಪ್ರತಿನಿಧಿ ಸಭಾ ದೇಶಬಾಂಧವರನ್ನು ವಿನಂತಿಸಿದೆ. ನೀರಿನ ಸಂರಕ್ಷಣೆಗೆ ಪೂರಕವಾದ ಎಲ್ಲ ಪ್ರಯತ್ನಗಳನ್ನೂ ನಡೆಸಬೇಕು. ಸರ್ಕಾರ ಈ ನೈಸರ್ಗಿಕ ಸಂಪತ್ತನ್ನು ಯಾವುದಾದರೂ ಖಾಸಗಿ ಕಂಪೆನಿಗೆ ವಹಿಸಿ ಕೈತೊಳೆದುಕೊಳ್ಳುವ ಬದಲು ಜಲಸಂರಕ್ಷಣೆ, ಮಳೆನೀರಿನ ಕೊಯ್ಲು, ನೀರಿಂಗಿಸುವುದು ಮುಂತಾದ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು. ನೀರಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೀರಿನ ಮರುಸಂಸ್ಕರಣ, ಕ್ಷಾರತೆಯ ನಿವಾರಣೆ, ನದಿನೀರಿನ ಗರಿಷ್ಠ ಬಳಕೆಯಂತಹ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ನೀರಿನ ಪ್ರಮುಖ ಮೂಲಗಳ ಸಂರಕ್ಷಣೆ ಮತ್ತು ವೃದ್ಧಿಯ ಸಲುವಾಗಿ ಗಂಗಾ, ಯಮುನಾ ಮೊದಲಾದ ಪವಿತ್ರನದಿಗಳ ಮಾಲಿನ್ಯವನ್ನು ತಡೆಯಬೇಕು.

ಇಂಗಿಹೋದ ಪ್ರಾಚೀನ ನದಿ ಸರಸ್ವತಿಯ ಪುನರುಜ್ಜೀವನಕ್ಕೆ ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಬೇಕು. ಈ ಪವಿತ್ರ ಕಾರ್ಯದಲ್ಲಿ ಕೈಜೋಡಿಸುವಂತೆ ಸಮಾಜ, ಸಾಮಾಜಿಕ ಸಂಘಟನೆಗಳು ಮತ್ತು ಧರ್ಮಾಚಾರ್ಯರಲ್ಲಿ ಸರ್ಕಾರ ಮನವಿ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಸರ್ಕಾರ ಪ್ರಸ್ತುತ ರಾಷ್ಟ್ರೀಯ ಜಲನೀತಿ ಪ್ರಸ್ತಾವವನ್ನು ಮುಂದುವರಿಸಿ, ಅದರ ಶಿಫಾರಸುಗಳನ್ನು ಪೂರ್ತಿಯಾಗಿ ಅಂಗೀಕರಿಸಿದ್ದೇ ಆದಲ್ಲಿ ಮತ್ತು ನೀರಿಗೆ ದುಬಾರಿ ದರ ವಿಧಿಸಿ ಖಾಸಗಿಯವರಿಗೆ ಲಾಭ ಮಾಡಿಕೊಡಲು ಮುಂದಾದಲ್ಲಿ ದೇಶದ ಜನತೆಯ ಆಕ್ರೋಶಕ್ಕೆ ಗುರಿಯಾಗಬೇಕಾದೀತು ಎಂದು ಪ್ರತಿನಿಧಿ ಸಭಾ ಸರಕಾರವನ್ನು ಎಚ್ಚರಿಸಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

NEWS IN BRIEF – MARCH 31, 2012

Sat Mar 31 , 2012
NEWS IN BRIEF – MAR 31, 2012 1. EC scraps RS elections in Jharkhand : New Delhi/Ranchi: In an unprecedented move, the Election Commission countermanded the Rajya Sabha polls in Jharkhand on Friday. In a late-night development, the EC requested the President to “rescind notification issued for the RS poll […]