ಬೈಂದೂರು Nov 9: ಗ್ರಾಮ ವಿಕಾಸಕ್ಕಾಗಿ ದೇಶದುದ್ದಗಲ ಕಾಲ್ನಡಿಗೆಯಲ್ಲಿ ಭಾರತ ಪರಿಕ್ರಮ ಯಾತ್ರೆ ಕೈಗೊಂಡ ಶ್ರೀ ಸೀತಾರಾಮ ಕೆದಿಲಾಯರನ್ನ ದಕ್ಷಿಣ ಪ್ರಾಂತ್ಯದ ಶಿರೋಭಾಗವಾದ ಶಿರೂರಿನಲ್ಲಿ ಅತ್ಯಂತ ವೈಭವದಿಂದ ಸ್ವಾಗತಿಸಲಾಯಿತು. ಉಪ್ಪುಂದದಿಂದ ಹೊರಟು ಪಡುವರಿ ಮೂಲಕ ಆಗಮಿಸಿದ ಕೆದಿಲಾಯರನ್ನು ದೊಂಬೆ-ಕರಾವಳಿಯ ಸಾರ್ವಜನಿಕರು ಪೂರ್ಣಕುಂಭ, ಮಂಗಳವಾದ್ಯದ ಮೂಲಕ ಬರಮಾಡಿಕೊಂಡರು. ಬಳಿಕ ರಾದಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಆವರಣದಲ್ಲಿ ತೆಂಗಿನಗಿಡವೊಂದನ್ನು ನೆಟ್ಟರು. ದೇವಸ್ಥಾನದಿಂದ ಪಾದಯಾತ್ರೆ ಮುಂದುವರಿಸಿ ಕರಾವಳಿಯ ರವೀಂದ್ರಶೆಟ್ಟಿಯವರ ಮನೆಯಲ್ಲಿ ವಾಸ್ತವ್ಯ ವಿಶ್ರಾಂತಿ ಪಡೆದರು.

    ಅಪರಾಹ್ನ ಗ್ರಾ.ಪಂ ಸದಸ್ಯೆ ಮಂಗಳ ಬಿಲ್ಲವರ ಮನೆಯಲ್ಲಿ ಬಿಕ್ಷನ್ನ ಸ್ವೀಕರಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯ ಕಾಸರಗೋಡಿನಿಂದ ಪ್ರಾರಂಭಗೊಂಡು ಶಿರೂರಿನಲ್ಲಿ ಮುಕ್ತಾಯವಾಗಲಿರುವುದರಿಂದ ಸಂಘದ ಪ್ರಮುಖ ನಾಯಕರು ಆಗಮಿಸಿದ್ದರು. ಗ್ರಾಮಗಳಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈಗಾಗಲೇ ೧೦೫೦ ಕಿ.ಮಿ ಸಂಚರಿಸಿದ ಯಾತ್ರೆ ನಿರಂತರ ೫ ವರ್ಷಗಳಲ್ಲಿ ೧೫,೦೦೦ಕಿ.ಮೀ ಕಾಲ್ನಡಿಗೆಯಲ್ಲಿ ಸಂಚರಿಸಲಿದ್ದಾರೆ.

ಸಂಜೆ ೫ಗಂಟೆಗೆ ನಗರ ಸಂಕೀರ್ತನೆ ಮೂಲಕ ದಾಸನಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಗಮಿಸಿ ಸತ್ಸಂಗ ಕಾರ್ಯಕ್ರಮ ನಡೆಯಿತು. ಅಖಿಲ ಭಾರತೀಯ ಸಹ ವ್ಯವಸ್ಥಾಪನಾ ಪ್ರಮುಖ ಮಂಗೇಶ ಬೇಂಡೆ, ಸಂಸ್ಕೃತ ಭಾರತಿ ರಾಷ್ಟ್ರೀಯ ಸೇವಾ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್, ಕ್ಷತೀಯ ಸೇವಾ ಪ್ರಮುಖ ಗೋಪಾಲ ಶೆಟ್ಟಿ, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಬಾಬು ಶೆಟ್ಟಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಣಯ ಕುಮಾರ್ ಶೆಟ್ಟಿ, ಜಿ.ಪಂ ಸದಸ್ಯ ಗೌರಿ ದೇವಾಡಿಗ, ಪುಷ್ಪರಾಜ ಶೆಟ್ಟಿ, ಶಾಂತರಾಮ ಪ್ರಭು, ದಿನೇಶ್ ಕುಮಾರ್, ಚಂದ್ರಹಾಸ ಮೇಸ್ತ, ಸತೀಶ ಪ್ರಭು ಮುಂತಾದವರು ಪಾಲ್ಗೊಂಡಿದ್ದರು.