ಮಂಗಳೂರು Nov-8: ಕೇಂದ್ರ ಸರಕಾರ ಪಾರ್ಲಿಮೆಂಟ್‌ನಲ್ಲಿ ಶಾಸನ ರಚಿಸಿ ರಾಮ ಜನ್ಮಭೂಮಿಯ ವಿವಾದಾಸ್ಪದ ಸ್ಥಳವನ್ನು ಹಿಂದುಗಳಿಗೆ ಹಸ್ತಾಂತರಿಸುವ ಕೆಲಸವನ್ನು ಶೀಘ್ರ ಮಾಡಬೇಕು ಎಂದು ವಿಶ್ವಹಿಂದು ಪರಿಷತ್‌ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ಜೀ ಒತ್ತಾಯಿಸಿಯಿದ್ದಾರೆ.

ಗುರುವಾರ ಮಂಗಳೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರ ಮಾಡ ಹೊರಟಿದೆ. ಹಿಂದು ಸಮಾಜ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡುವುದಿಲ್ಲ. ರಾಮ ಜನ್ಮಭೂಮಿಯ ಸ್ಥಳ ಹಿಂದುಗಳಿಗೆ ಶೀಘ್ರ ದೊರೆಯಲೇಬೇಕು ಎಂದು ಒತ್ತಾಯಿಸಿದರು.

ಅಯೋಧ್ಯೆ ಪುರಾತನ ಕಾಲದಿಂದಲೂ ಹಿಂದುಗಳ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿ ೧೫೨೮ರ ಪೂರ್ವದಲ್ಲಿ ಯಾವುದೇ ಹಿಂದು ದೇವಸ್ಥಾನದ ಕುರುಹು ಇದ್ದಲ್ಲಿ ಹಿಂದುಗಳ ಭಾವನೆಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇವೆ ಎಂದು  ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿದಾವಿತ್ ಮೂಲಕ ಅಶ್ವಾಸನೆ ನೀಡಿದೆ. ಈ ವಿವಾದಾಸ್ಪದ ಸ್ಥಳದಲ್ಲಿ ಭೂಮಿಯ ಕೆಳಗೆ ಕೆನಡ ದೇಶದ ನುರಿತ ವಿಜ್ಞಾನಿಗಳಿಂದ ತೆಗೆಯಲಾದ ರಾಡರ್ ಫೊಟೋಗ್ರಫಿ ಹಾಗೂ ಭಾರತದ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಿಂದ ಆ ಪ್ರದೇಶದಲ್ಲಿ ೧೫೨೮ರ ಪೂರ್ವದಲ್ಲಿ ಒಂದು ಹಿಂದುಗಳ ದೇವಸ್ಥಾನ ಇದ್ದ ಬಗ್ಗೆ ಪುರಾವೆ ಇದೆ. ಆದ್ದರಿಂದ ಕೇಂದ್ರ ಮಾತಿನಂತೆ ನಡೆದುಕೊಳ್ಳಬೇಕು ಎಂದರು.

೧೨ನೇ ಪಂಚವಾರ್ಷಿಕ ಯೋಜನೆಯಲ್ಲಿ ಇನ್ನೂ ಹೆಚ್ಚಿನ ಕಸಾಯಿಖಾನೆಗಳನ್ನು ಆರಂಭಿಸುವ ಕೇಂದ್ರ ಸರಕಾರದ ಯೋಜನೆಯನ್ನು ಕೈಬಿಡಬೇಕು. ಬಾಂಗ್ಲಾ ನುಸುಳುಕೋರರನ್ನು ಪತ್ತೆ ಹಚ್ಚುವ ಕೆಲಸವಾಗಬೇಕು. ಬಾಂಗ್ಲಾದ ಯಾವುದೇ ನುಸುಳುಕೋರರಿಗೆ ಆಸ್ತಿ ಹೊಂದುವ ಹಕ್ಕು, ಮತದಾನದ ಹಕ್ಕು, ಸರಕಾರಿ ಉದ್ಯೋಗಗಳನ್ನು ನೀಡದೆ ಎಚ್ಚರವಹಿಸಬೇಕು ಎಂದು ಚಂಪತ್‌ರಾಯ್ ತಿಳಿಸಿದರು.

ಭಾರತದ ಮೇಲೆ ಚೀನಾ ದಾಳಿಗೆ ೫೦ ವರ್ಷ ಸಂದಿವೆ. ಈ ಆಕ್ರಮಣಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲಾತಿ ಈಗ ಜನರಿಗೆ ತಿಳಿಯಪಡಿಸಬೇಕು.ಯುದ್ಧಕ್ಕೆ ಸಂಬಂಧಪಟ್ಟ ಯಾವುದೇ ವ್ಯಕ್ತಿ ಈಗ ಬದುಕಿ ಉಳಿದಿರುವ ಸಾಧ್ಯತೆ ಕಡಿಮೆ.೧೯೬೨ರ ತಪ್ಪುಗಳನ್ನು ತಿಳಿಯುವ ಸಂಪೂರ್ಣ ಅಧಿಕಾರ ಈಗಿನ ಜನಾಂಗಕ್ಕೆ ಇದೆ. ಯುದ್ಧಕ್ಕೆ ಸಂಬಂಧಿಸಿದ ದಾಖಲಾತಿಗಳು ಪ್ರಕಟವಾದಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂದು ಅರಿತುಕೊಳ್ಳಲು ಅವಕಾಶವಾಗುತ್ತದೆ ಎಂದವರು ತಿಳಿಸಿದರು.

ಭಾರತ್-ಪಾಕ್ ನಡುವೆ ಭಾರತದಲ್ಲಿ ನಡೆಯುವ ಕ್ರಿಕೆಟ್‌ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಚಂಪತ್‌ರಾಯ್, ಗೆಳೆತನ ಬೆಳೆಸುವುದಕ್ಕೆ ವಿರೋಧವಿಲ್ಲ. ಆದರೆ ದೇಶಕ್ಕೆ ಅದರಿಂದ ಚ್ಯುತಿಯಾಗಬಾರದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ವಿಭಾಗ ಸಂಘಟನಾ ಕಾರ್ಯದರ್ಶಿ ಬಾಯಾಡಿ ವೆಂಕಟರಮಣ ಭಟ್, ಪ್ರಾಂತ ಉಪಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ವಿಭಾಗ ಕಾರ್ಯದರ್ಶಿ ಕೃಷ್ಣಮೂರ್ತಿ,ಬಜರಂಗದಳ ವಿಭಾಗ ಸಂಚಾಲಕ ಶರಣ್ ಪಂಪ್‌ವೆಲ್ ಉಪಸ್ಥಿತರಿದ್ದರು.