ಜಮಖಂಡಿ ಬಾಗಲಕೋಟ ಜಿಲ್ಲೆ ನವೆಂಬರ್ 20 2012: ದೇಶದ ಅಖಂಡತೆ, ಭದ್ರತೆ, ಗಡಿ ಸಮಸ್ಯೆಗಳಿಗೆ ಕಾನೂನು ಸುವ್ಯವಸ್ಥೆಗೆ ಆರ್ಥಿಕ ಸಬಲತೆ, ಏಕತೆಗೆ, ಆಂತರಿಕ ಸಮಸ್ಯೆಗಳಿಗೆ ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹಾಗಾಗಿ ನಾಡಿನ ಜನತೆ ಅತಿ ಚಿಂತಿತರಾಗಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು

ಎದುರಿಸಿದ ದೇಶದ ಸುಭದ್ರತೆಗೆ ನಾವೆಲ್ಲರೂ ಕಂಕಣಬದಟಛಿರಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನಜೀ ಭಾಗವತ ಹೇಳಿದ್ದಾರೆ.

ಮೋಹನ್ ಭಾಗವತ್

ನಗರದ ಪೊಲೋ ಮೈದಾನದಲ್ಲಿ ಭಾನುವಾರ ಆರಂಭವಾದ ಮೂರು ದಿನಗಳ ಉತ್ತರ ಕರ್ನಾಟಕ ಪ್ರಾಂತ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ದೇಶದ ಸಮಸ್ಯೆಗಳು ಸಾವಿರಾರು ವರ್ಷಗಳಷ್ಟು ಹಿಂದಿನದ್ದಾಗಿದೆ. ಇದಕ್ಕೆ ಅನೇಕ ಮಹನೀಯರು ಸಾಕಷ್ಟು ಶ್ರಮಿಸಿದ್ದಾರೆ. ಆದರೂ ಸಹ ಸಮಸ್ಯೆಗಳನ್ನು ಹೊರಹಾಕುವ ನಿಟ್ಟಿನಲ್ಲಿ ಇನ್ನೂ ಸಫಲತೆ ಕಾಣಲಾಗಿಲ್ಲ. ಹೀಗಾಗಿ ಸಮಸ್ಯೆ ಎದುರಿಸುತ್ತಲೇ ಇದ್ದೇವೆ. ದೇಶದ ಜ್ವಲಂತ ಸಮಸ್ಯೆಗೆ ವೇಗದ ಪರಿಹಾರ ಕಾರ್ಯ ನಡೆಯಬೇಕಿದೆ ಎಂದರು.

ಕಾರ್ಯಕ್ಷಮತೆ ಬೇರೆ ಭಾರತದ ಭವ್ಯತೆಗಾಗಿ ಸ್ವಾಮಿ ವಿವೇಕಾನಂದರು ಶ್ರಮಿಸಿದ್ದಾರೆ. ಕಾರ್ಯಕ್ಷಮತೆ ಬೇರೆ ಬೇರೆ ರೀತಿಯಾಗಿದ್ದಾರೂ ಸಹ ಫಲಿತಾಂಶ ಒಂದೇ ಆಗಿರುತ್ತದೆ. ದೇಶದ ಸಮಸ್ಯೆಗಳಿಗೆ ಅಂಜದೆ ಅವುಗಳನ್ನು ಎದುರಿಸಿದರೆ, ಸಮಸ್ಯೆಗಳು ನಮ್ಮಿಂದ ದೂರ ಸರಿಯುತ್ತವೆ. ಎಷ್ಟೇ ಸಮಸ್ಯೆಗಳಿದ್ದರೂ ಸಹ ಭಾರತ ಹಿಂದು ರಾಷ್ಟ್ರವಾಗಿ, ಇಂದಿಗೂ ಸಹ ಎದ್ದು ನಿಂತಿದೆ. ದೇಶದ ಉನ್ನತಿ ಎಂದರೆ ಸ್ವಯಂ ಶಕ್ತಿಯಿಂದ ಮಾತ್ರ ಎಂದು ನುಡಿದರು.

ಭಾರತಕ್ಕೆ ಎಲ್ಲವೂ ಇದೆ. ಆದರೆ ಸಂಘಟನೆ ವಿಚಾರವಾಗಿ ಮಾತ್ರ ಸ್ವಲ್ಪ ದೂರವಾಗಿದೆ. ಇದನ್ನು ಎಲ್ಲರೂ ಕಲಿಯಬೇಕಿದೆ. ಸಂಘಟನೆ ಸಲುವಾಗಿ ಅವಿರತವಾಗಿ ಶ್ರಮಿಸಿ ಅದಕ್ಕೆ ಒಂದು ರೂಪ ನೀಡಿದವರು ಸಂಘ ಸಂಸ್ಥಾಪಕ ಡಾಕ್ಟರ ಹೆಡ್ಗೇವಾರ್. ಅವರ ಪರಿಶ್ರಮದ ಫಲವಾಗಿ ದೇಶದಲ್ಲಿ ಸಂಘಟನೆ ಹಳ್ಳಿ ಹಳ್ಳಿಗಳಿಗೆ ತಲುಪಿದೆ. ಸಂಘಟನೆ ಯಾರ ವಿರೋಧಿಯಲ್ಲ.

ಜನಪರ ಕೆಲಸ, ಸೇವಾ ಮನಭಾವದಿಂದ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಇದೆಲ್ಲದರ ಮುಖ್ಯ ಉದ್ದೇಶ ಸಂಘಟನೆ. ಕಾರ್ಯಕರ್ತರು ಸಮಾಜವನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು, ಮನದಲ್ಲಿ ದೃಢ ವಿಶ್ವಾಸ ಇಟ್ಟು ಕೊಂಡು ಮುಂದುವರೆಯುತ್ತಾರೆ ಎಂದರು.

ಸಮಾಜ ಜಗೃತವಾಗಿರಬೇಕು. ಈ ವಿಶ್ವಾಸ ನೀಡುವುದು ಸಂಘ ಮಾತ್ರ. 1925 ರಲ್ಲಿ ಪ್ರಾರಂಭವಾದ ಸಂಘ ಕಾರ್ಯ ತನ್ನ ಎಲ್ಲಾ ಕ್ಷೇತ್ರಗಳಲ್ಲಿ ಅಗ್ರಗಣ್ಯವಾಗಿ ಹೊರಹೊಮ್ಮಿದೆ. ದೇಶದಲ್ಲಿ ಸಂಘದಿಂದ 1.50 ಲಕ್ಷ ಸೇವಾ ಕಾರ್ಯಗಳು ನಡೆದಿವೆ. ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯನ್ನು ಆಚರಿಸುವ ಜೊತೆಗೆ ಅವರ ಸಂದೇಶಗಳನ್ನು ಜನತೆಗೆ ಮುಟ್ಟಿಸುವ ಕಾರ್ಯ ಸಂಘ ಮಾಡುತ್ತಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರಿಯ ಸಂಘಚಾಲಕ ಟಿ.ವಿ. ದೇಶಮುಖ, ಪ್ರಾಂತ ಸಂಘಚಾಲಕ ಖಗೇಶನ್ ಪಟ್ಟಣಶೆಟ್ಟಿ, ಬೆಳಗಾವಿ ವಿಭಾಗದ ಸಂಘಚಾಲಕ ಮಲ್ಲಿಕಾರ್ಜುನ ವೇದಿಕೆಯಲ್ಲಿ ಉಪಸ್ಥಿತರಿದ್ದರು.