ಮಳೆಗಾಗಿ ಪೂಜೆ ವಿರೋಧಕ್ಕೆ – ಪ್ರತಿಕ್ರಿಯೆ

ನಮ್ಮಲ್ಲಿ ಕೆಲವರಿಗೆ ಹೇಗಾದರೂ ಮಾಡಿ ತಮ್ಮದೇ ಸಂಸ್ಕೃತಿ, ಪರಂಪರೆಯನ್ನೇ ಅವಹೇಳನಮಾಡಿ ತಾವೊಬ್ಬ ಆಧುನಿಕ’ವಾದಿ’ ಎಂದು ತೋರ್ಪಡಿಸಿಕೊಳ್ಳುವ ’ವ್ಯಾಧಿ’ಯಿದೆ. ಇಂಥಹವರಿಗೆ ಸರಸ್ವತಿ ವಂದನೆ ಇಷ್ಟವಿಲ್ಲ. ಅಧಿಕಾರ ಸ್ವೀಕಾರ ಮಾಡುವ ಅಧಿಕಾರಿ – ಮಂತ್ರಿ ಇತ್ಯಾದಿಗಳು ತಮ್ಮ ಕಛೇರಿಯಲ್ಲಿ ದೇವರ ಪೂಜೆ ಮಾಡುವುದು ಸಹಿಸಲಸಾಧ್ಯ. ನಮ್ಮೆಲ್ಲರನ್ನು ಮೀರಿದ ಪ್ರಾಕೃತಿಕ ಶಕ್ತಿಗೆ ನಮಿಸಿ ಲೋಕಹಿತ ಉದ್ದೇಶದಿಂದ ಪ್ರಾರ್ಥನೆ ಸಲ್ಲಿಸಿದರೆ ಸಾರ್ವಜನಿಕ ಹಣದ ದುರುಪಯೋಗ ಎಂಬ ಗುಲ್ಲೆಬ್ಬಿಸುತ್ತಾರೆ. ಅದೇ ಹಣವನ್ನು ಜನ ಉಪಯೋಗಕ್ಕೆ ಬಳಸಿ ಎಂದು ಕೂಗಾಡುತ್ತಾರೆ. ಇದೇ ಪ್ರಚಾರಪ್ರಿಯರು ತಮಗೆ ಸನ್ಮಾನ ಕಾರ್ಯಕ್ರಮ, ಮತಬ್ಯಾಂಕ್‌ಗಾಗಿ ಮಾಡುವ ಮನರಂಜನಾ ಕೂಟಗಳು, ಭಾಷೆ – ಜಾತಿ ಸಮ್ಮೇಳನ ಹೆಸರಲ್ಲಿ ದುಂದುವೆಚ್ಚ, ದೇಶದ್ರೋಹಿ ಉಗ್ರರಿಗೆ ಜೈಲಿನಲ್ಲೇ ರಾಜಾತಿಥ್ಯ ಇತ್ಯಾದಿ ವಿಷಯಗಳಲ್ಲಿ ಬಾಯ್ಮುಚ್ಚಿ ಕುಳಿತಿರುತ್ತಾರೆ. ಬಹುಸಂಖ್ಯಾತ ಸಮಾಜದ ಭಾವನೆಗಳ ಮೇಲೆ ಎಗರಿ ಬೀಳುವ ಈ ಜನ ಅನ್ಯ ಮತೀಯರ ಸಮಾಜದ ಶಾಂತಿಭಂಗಮಾಡುವ ವಿಷಯ ಕಂಡಾಗ ಕುರುಡರಂತೆ ನಡೆದುಕೊಳ್ಳುತ್ತಾರೆ. ಉದಾಃ ಅನ್ಯಮತೀಯ ಮತ ಪ್ರಮುಖರು, ಅಧ್ಯಾಪಕರು, ವಿದ್ಯಾಸಂಸ್ಥೆಗಳು ನಡೆಸುವ ಅಕ್ರಮಗಳ ವಿರುದ್ಧ ದನಿ ಎತ್ತುವ ವಿಚಾರದಲ್ಲಿ ದೂರವಿರುತ್ತಾರೆ. ದೀಪಾವಳಿ ಪಟಾಕಿ, ಪಂಚಮಿ ಹಾಲೆರೆಯುವುದು, ಅಯ್ಯಪ್ಪ ಭಜನೆ ವಿರೋಧಿಸುವವರೇ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ೬ ಗಂಟೆಗೆ ಮುನ್ನ ರಂಜಾನ್ ದಿನಗಳಲ್ಲಿ ಅನಗತ್ಯವಾಗಿ ರಾತ್ರಿಯಿಡೀ ಮೈಕ್ ಮೂಲಕ ಉಳಿದ ಸಾರ್ವಜನಿಕರಿಗೆ ಅರ್ಥವಾಗದ ಭಾಷೆಯಲ್ಲಿ ತೊಂದರೆಕೊಡುವ ವಿಷಯದಲ್ಲಿ ದನಿ ಎತ್ತುವುದಿಲ್ಲ. ಇದು ಭಯವೇ! ಮನಸ್ಥಿತಿಯೋ?! ತುಷ್ಟೀಕರಣ ?!

ಪಾಕ್ ಮನೋಭಾವದವರು ಜಮ್ಮು ಕಾಶ್ಮೀರದಲ್ಲಿ ನಡೆಸುತ್ತಿರುವ ಕುಕೃತ್ಯಗಳು, ಬಾಂಗ್ಲಾದೇಶಿ ಮುಸ್ಲಿಮರು ಹಿಂದುಗಳನ್ನು (ಬೋಡೋ ಜನಾಂಗ) ತಮ್ಮದೇ ನೆಲದಲ್ಲಿ ನಿರಾಶ್ರಿತಗೊಳಿಸುತ್ತಿರುವುದನ್ನೂ, ಕರಾವಳಿ ಪ್ರದೇಶಗಳಲ್ಲಿ ಕೊಲ್ಲಿ ದೇಶದ ಹಣದಿಂದ ಜಮೀನುಕೊಂಡು ಸ್ಥಾನೀಯರನ್ನೇ ಅಲ್ಪಸಂಖ್ಯಾತರನ್ನಾಗಿಸಿ ದೇಶದೊಳಗೇ ಪರರಾಜ್ಯ ಕಟ್ಟುತ್ತಿರುವುದನ್ನು ಸಹಿಸಿಕೊಂಡು ಕುಳಿತಿರುವ ತಥಾಕಥಿತ ’ಬುದ್ಧಿ ಜೀವಿ – ಸುದ್ದಿ ಜೀವಿ’ಗಳಿಗೆ ಧಿಕ್ಕಾರ.

ಸಮಾಜಹಿತದ ಬಗ್ಗೆ ನಿಜವಾಗಿ ಕಾಳಜಿ ಇದ್ದಲ್ಲಿ ಅಶಾಂತಿ ನಿರ್ಮಿಸುತ್ತಿರುವ ಎಲ್ಲ ಕಾರ್ಯವನ್ನು ವಿರೋಧಿಸಲಿ. ಅದು ಬಿಟ್ಟು ಮಾನಸಿಕ ಶಾಂತಿಗಾಗಿ ತಾವಾಗಿಯೇ ಜನತೆ ನಡೆಸುವ ಪೂಜೆ – ಪ್ರಾರ್ಥನೆ – ಹೋಮ – ಅನ್ನದಾನಗಳ ಬಗ್ಗೆ ಮಾತಾಡಿ – ಬರೆದು ಸ್ವ ಪ್ರತಿಷ್ಠೆ ನಡೆಸುವುದನ್ನು ನಿಲ್ಲಿಸಲಿ. ಈ ಬಗ್ಗೆ ನೈತಿಕ ಅಧಿಕಾರವೂ ಇವರಿಗಿಲ್ಲ.

ಇಲ್ಲವಾದಲ್ಲಿ ಅಲ್ಪಸಂಖ್ಯಾತರಂತೆಯೇ ಬಹುಸಂಖ್ಯಾತರೂ ಮತೀಯವಾದಿಗಳಾಗಿ ದೇಶದಲ್ಲಿ ಅಶಾಂತಿ ನಿರ್ಮಾಣವಾದೀತು. ಆಗ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಜವಾಬ್ದಾರಿ ಯಾರದು?

ಚುನಾವಣೆ ಸಮಯದಲ್ಲಿ ದೇವರಪೂಜೆ ಮಾಡಿಸದ ಎದೆಗಾರಿಕೆ ಯಾರಿಗಿದೆ?

ಕಡೆಗೂ ಭಾರತವೆಂದರೆ ಭಾವನಾ ಪ್ರಧಾನ ದೇಶ. ಭಾವನೆಗೆ ಧಕ್ಕೆಯಾದಲ್ಲಿ ಜನ ದಂಗೆಯೆದ್ದಾರು. ಅಪನಂಬಿಕೆ – ವೈರ ಬೆಳೆದು ಅಶಾಂತಿಯುಂಟಾದೀತು.

–  ನ. ನಾಗರಾಜ