ನಾವು ನಮ್ಮನ್ನು ಪ್ರೀತಿಸುವಂತೆ, ಗೌರವಿಸುವಂತೆ ಇತರರನ್ನೂ ಸಮಾನವಾಗಿ ಪ್ರೀತಿಸುವ ಹಾಗೂ ಗೌರವಿಸುವ ಗುಣವೇ ಸಾಮರಸ್ಯ. ಜಾತಿಯ ಕಾರಣಕ್ಕಾಗಿ ಸಾಮಾಜಿಕ – ಧಾರ್ಮಿಕ ವ್ಯವಸ್ಥೆಗಳಲ್ಲಿ ತಾರತಮ್ಯ ತೋರುವುದು ಸರಿಯಲ್ಲ. ವ್ಯಕ್ತಿಯ ಗುಣ, ಪ್ರತಿಭೆ, ಔನ್ನತ್ಯಕ್ಕೆ ಮೊದಲ ಮನ್ನಣೆ. ಆತನ ಜಾತಿಗಾಗಲೀ, ಆರ್ಥಿಕ ಸ್ಥಿತಿಗಾಗಲೀ ಅಲ್ಲ.

Kajampady Subrahmanya Bhat speaks in Valedictory

‘ಅಸ್ಪೃಶ್ಯತೆಗೆ ಶಾಸ್ತ್ರಗಳ ಸಮ್ಮತಿ ಇಲ್ಲ, ವೇದಪುರಾಣಗಳಲ್ಲಿ ಇರಲಿಲ್ಲ, ಅದಕ್ಕೆ ಧರ್ಮದ ಮಾನ್ಯತೆ ಇಲ್ಲ ಎಂದ ಮೇಲೆ ಇನ್ನೂ ಸಮಾಜದಲ್ಲಿ ಅಸ್ಪೃಶ್ಯತೆ ಯಾಕೆ ಬೇರೂರಿದೆ? ಪೂರ್ತಿಯಾಗಿ ಈ ಮೇಲು-ಕೀಳು ಮನೋಭಾವ ಯಾಕೆ ತೊಲಗಿಲ್ಲ? ಹೀಗೆಂದು ಮಾರ್ಮಿಕವಾಗಿ ಪ್ರಶ್ನಿಸಿದವರು ಮಧುಕರ ರೈ ಕೊರೆಕ್ಕಾನ.

ಕಾಸರಗೋಡು ಜಿಲ್ಲೆಯ ಅಗಲ್ಪಾಡಿಯಲ್ಲಿ ನಡೆದ ಸಾಮರಸ್ಯಗೋಷ್ಠಿಯ ಸಂವಾದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ತಮ್ಮ ಅನಿಸಿಕೆ – ಸಂದೇಹಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಂಡರು.

‘ಸಹಪಂಕ್ತಿ ಭೋಜನದಂತಹ ಸಣ್ಣ ವಿಷಯದಲ್ಲಿ ನಮಗೆ ಒಂದುಗೂಡಲು ಸಾಧ್ಯವಾಗದಿದ್ದರೆ ಸಾಮರಸ್ಯ ಮೂಡಲು ಹೇಗೆ ಸಾಧ್ಯ? ಸಾಮರಸ್ಯ ಎಂದರೆ ಸಮ್ಮಿಶ್ರಣ. ನಾವೆಲ್ಲರೂ ಜಾತಿ-ಭೇದವಿಲ್ಲದೆ ಒಂದಾಗಬೇಕು. ನಮ್ಮಲ್ಲಿ ಹಿಂದುತ್ವದ ಭಾವ ಬೆಳೆಯಬೇಕು. ನಾವೆಲ್ಲರೂ ಒಂದು ಎಂಬ ಭಾವನೆ ನಮ್ಮ ಅಂತರಂಗದಲ್ಲಿ ಮೂಡಿಬಂದಾಗ ಜಾತಿಯ ಮೂಲಕ ವ್ಯಕ್ತಿಯೋರ್ವರನ್ನು ಅಳೆಯುವ ಮನೋಭಾವ ಮೂಡಿಬರುವುದಿಲ್ಲ. ಭಾರತ ದೇಶವು ಹಲವು ಜಾತಿ-ಸಂಸ್ಕೃತಿ ಭಾಷೆಯಿಂದ ಒಳಗೊಂಡಿರುವ ದೇಶವಾಗಿರುವ ಕಾರಣ ಸಾಮಾಜಿಕ-ಧಾರ್ಮಿಕ ವಿಷಯಗಳಲ್ಲಿ ತಾರತಮ್ಯ ತೋರುವುದು ಸರಿಯಲ್ಲ. ಎಲ್ಲಾ ಹಿಂದುಗಳು ಒಟ್ಟಾದರೆ ಮಾತ್ರ ಅಸ್ಪೃಶ್ಯತೆ, ಜಾತಿ ಭೇದವನ್ನು ಅಳಿಸಲು ಸಾಧ್ಯ. ಸಾಮರಸ್ಯಕ್ಕೆ ಬೇಕಾಗಿರುವುದು ತೆರೆದ ಮನಸ್ಸು’ ಎಂದವರು ವಿದ್ಯಾರ್ಥಿನಿ ರಾಧಾ ಪಿ. ಕಲ್ಲಕ್ಕಟ್ಟ.

‘ನಾವು ನಮ್ಮನ್ನು ಪ್ರೀತಿಸುವಂತೆ, ಗೌರವಿಸುವಂತೆ ಇತರರನ್ನೂ ಸಮಾನವಾಗಿ ಪ್ರೀತಿಸುವ ಹಾಗೂ ಗೌರವಿಸುವ ಗುಣವೇ ಸಾಮರಸ್ಯ. ಜಾತಿಯ ಕಾರಣಕ್ಕಾಗಿ ಸಾಮಾಜಿಕ – ಧಾರ್ಮಿಕ ವ್ಯವಸ್ಥೆಗಳಲ್ಲಿ ತಾರತಮ್ಯ ತೋರುವುದು ಸರಿಯಲ್ಲ. ವ್ಯಕ್ತಿಯ ಗುಣ, ಪ್ರತಿಭೆ, ಔನ್ನತ್ಯಕ್ಕೆ ಮೊದಲ ಮನ್ನಣೆ. ಆತನ ಜಾತಿಗಾಗಲೀ, ಆರ್ಥಿಕ ಸ್ಥಿತಿಗಾಗಲೀ ಅಲ್ಲ.’ ಎಂದು ಅನಿಸಿಕೆ ವ್ಯಕ್ತಪಡಿಸಿದ್ದು ಮವ್ವಾರಿನ ಪ್ರೊ. ರತ್ನಾಕರ ಮಲ್ಲಮೂಲೆ.

ಸಮಾರೋಪ ಭಾಷಣ ಮಾಡಿದ ಆರೆಸ್ಸೆಸ್ ಪ್ರಾಂತ ಸಹಕಾರ‍್ಯವಾಹ ಕಜಂಪಾಡಿ ಸುಬ್ರಹ್ಮಣ್ಯ ಭಟ್ ‘ನಾವೆಲ್ಲರೂ ಜಾತಿ ಮೀರಿ ಹಿಂದುಗಳಾಗಿ ಚಿಂತಿಸಬೇಕಿದೆ. ನಮ್ಮಲ್ಲಿರುವ ವೈವಿಧ್ಯತೆಗಳನ್ನು ಉಳಿಸಿಕೊಂಡೇ ಒಂದಾಗಿ, ಏಕತೆಯಿಂದ ಬದುಕುವುದೇ ಸಾಮರಸ್ಯ. ಜಾತಿ ಮೂಲಕ ವ್ಯಕ್ತಿಯ ಸಾಧನೆಗಳನ್ನು ಅಳೆಯುವ ಹಾಗಿಲ್ಲ. ವೇದಗಳನ್ನು ವಿಭಾಗಿಸಿದ, ಮಹಾಭಾರತ ಬರೆದ ವ್ಯಾಸ ಮಹರ್ಷಿಗಳು ಬ್ರಾಹ್ಮಣನಲ್ಲ, ಓರ್ವ ಬೋಯಿತಿ(ಬೆಸ್ತ ಮಹಿಳೆ)ಯ ಮಗ. ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಗಳು ಓರ್ವ ಬೇಡ. ರಾವಣ ಬ್ರಾಹ್ಮಣನಾದರೂ ಆತನಿಗೆ ಪೂಜೆಇಲ್ಲ. ಆದರೆ ಕ್ಷತ್ರಿಯ ರಾಮ-ಗೊಲ್ಲರ ಕೃಷ್ಣನಿಗೆ ದೈವತ್ವಕ್ಕೇರಿದವರು. ಇಲ್ಲಿ ವ್ಯಕ್ತಿಯ ಜಾತಿ ಮುಖ್ಯ ಅಲ್ಲ, ಗುಣ-ಸಾಧನೆಗಳೇ ಮಾನದಂಡ.’ ಎಂದರು.

ಸಾಮರಸ್ಯ ಮೂಡಿಸುವಲ್ಲಿ ಆರೆಸ್ಸೆಸ್‌ನ ಪಾತ್ರವನ್ನು ಉದಾಹರಿಸಿದ ಪ್ರಾಂತ ಸೇವಾ ಪ್ರಮುಖ ಗೋಪಾಲ ಚೆಟ್ಟಿಯಾರ್ ‘ಸಂಘದ ಶಾಖೆಯ ಸಂಪರ್ಕಕ್ಕೆ ಬಂದ ಬಹುತೇಕ ವ್ಯಕ್ತಿಗಳು ಸಾಮರಸ್ಯದ ಅನುಭವ ಪಡೆದುಕೊಂಡಿದ್ದಾರೆ. ಶಾಖೆಯ ಮೂಲಕ ಕೆಳವರ್ಗದ ಕೀಳರಿಮೆ, – ಮೇಲ್ವರ್ಗದ ಮೇಲರಿಮೆ ಎರಡೂ ಕಡಿಮೆಯಾದ ಅನೇಕ ಉದಾಹರಣೆಗಳಿವೆ’ ಎಂದರು.

ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಉದ್ಘಾಟಿಸಿದ ಈ ಸಾಮರಸ್ಯಗೋಷ್ಠಿಯಲ್ಲಿ ಸಾಮರಸ್ಯ ವೇದಿಕೆಯ ವಾದಿರಾಜ್, ಉದ್ಯಮಿ ವಸಂತ ಪೈ ಮಾತನಾಡಿದರು.