ಮಹಾಡ್ ಕೆರೆ, ಮನುಸ್ಮೃತಿ ದಹನ, ನಾಸಿಕ್‌ನ ಕಲಾರಾಮ್ ದೇವಸ್ಥಾನ ಪ್ರವೇಶ ಹೋರಾಟ, ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ಮುಂತಾದ ವಿಷಯಗಳಲ್ಲಿ ಅಂದಿನ ವ್ಯವಸ್ಥೆಯ ವಿರುದ್ಧದ ಬಂಡಾಯಗಾರನಂತೆ ಕಂಡರೂ ಸಹ ಅಂಬೇಡ್ಕರ್ ಮೂಲತಃ ಸಾಮಾಜಿಕ ಸಾಮರಸ್ಯದ ಹರಿಕಾರರೇ ಆಗಿದ್ದವರು ಎಂದು ಮೈಸೂರಿನ ಅ.ಮ.ಭಾಸ್ಕರ್ ಅವರು ನುಡಿದಿದ್ದಾರೆ.

ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ನಿಮಿತ್ತ ತುಮಕೂರಿನ ಸಾಮರಸ್ಯ ವೇದಿಕೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ತುಮಕೂರು ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ|| ಕೊಟ್ರೇಶ್ ಮಾತನಾಡುತ್ತಾ, ”ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರು ದೂರದೃಷ್ಟಿ ಅದ್ಭುತವಾಗಿತ್ತು. ಇಂದು ಚರ್ಚೆಗೆ ಒಳಗಾಗಿರುವ ಜಾಗತೀಕರಣ-ಖಾಸಗೀಕರಣ-ಉದಾರೀಕರಣ, ರೈತರ ಆತ್ಮಹತ್ಯೆ, ನದಿ ಜೋಡಣೆ ಮುಂತಾದವುಗಳನ್ನು ಆ ಕಾಲದಲ್ಲಿಯೇ ಅವರು ಪ್ರಸ್ತಾಪ ಮಾಡಿ, ಚರ್ಚಿಸಿದ್ದರು. ಪ್ರತಿಯೊಬ್ಬ ವ್ಯಕ್ತಿ ವಿದ್ಯೆ ಗಳಿಸಿ, ಸಂಘಟಿತನಾಗಿ, ಜಾಗೃತನಾಗಬೇಕು. ಅದೇ ಇಂದಿನ ಎಲ್ಲ ಸಾಮಾಜಿಕ ರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ. ಇದನ್ನು ಅಂಬೇಡ್ಕರ್ ತಮ್ಮ ಜೀವನದಲ್ಲಿ ಸಾಧಿಸಿ ತೋರಿದ್ದು” ಎಂದರು.
ಸಂವಾದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತುಮಕೂರಿನ ವೈದ್ಯ ಡಾ. ಮುರಳೀಧರ್ ಅವರು ಶಿಕ್ಷಣವು ಇವತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಜೀವನದಲ್ಲಿ ನಾನು ಕಂಡುಕೊಂಡ ಸತ್ಯವಿದು. ಇಂದು ಜನರಲ್ಲಿ ಸಾಮರಸ್ಯಭಾವ ಮೂಡಲು ಪ್ರಾರಂಭವಾಗಿದೆ. ಇಂದು ಅಂಬೇಡ್ಕರ್ ಅವರ ವೇಷಧಾರಿಗಳು ಕಾಣಸಿಗುತ್ತಾರೆಯೇ ಹೊರತು, ಅವರಂತೆ ನಡೆದುಕೊಳ್ಳುವವರು ಕಡಿಮೆ. ದೇಶ, ಸಮಾಜ ಮತ್ತು ತನ್ನವರಿಗಾಗಿ ಬಾಬಾಸಾಹೇಬರು ಬಾಳಿದಂತೆ ಬಾಳು ನಡೆಸಬೇಕಾದವರು ಇಂದು ಬೇಕಾಗಿದ್ದಾರೆ ” ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಲಕ್ಷ್ಮೀಕಾಂತ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಲಕ್ಷ್ಮೀಶರ್ಮಾ ಪ್ರಾರ್ಥಿಸಿ, ಹನುಮಂತರಾಯಪ್ಪ ಕಾರ್ಯಕ್ರಮ ನಿರ್ವಹಿಸಿದರು. ಜಿ.ಎಸ್. ಬಸವರಾಜ್ ಸ್ವಾಗತ ಕೋರಿ, ದಿಬ್ಬೂರು ಮೋಹನ್ ವಂದಿಸಿದರು. ಕೊನೆಯಲ್ಲಿ ಮಂಜುನಾಥ್ ಅಂಬೇಡ್ಕರ್ ಗೀತೆ ಹಾಡಿದರು.