ಶ್ರೀ  ಕೃಷ್ಣನು ಯುದ್ಧ ಮಧ್ಯದಲ್ಲಿ ಅರ್ಜುನನಿಗೆ ವಿಶ್ವರೂಪ ದರ್ಶನ ಮಾಡಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಈ ಮಹಾ ಶಿಬಿರದಲ್ಲಿ ಸಂಘಟಿತ ಶಕ್ತಿಯ ವಿಶ್ವರೂಪ ದರ್ಶನವಾಗುತ್ತಿದೆ ಎಂದು ಪೇಜಾವರ ಮಠಾದೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಸಂಘದ ಕರ್ನಾಟಕ ಉತ್ತರ ಪ್ರಾಂತದ “ಹಿಂದು ಶಕ್ತಿ ಸಂಗಮ” ಮಹಾ ಶಿಬಿರಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಅವರು ಮುಂದುವರಿದು, ನಮ್ಮ ಇತಿಹಾಸದಲ್ಲಿ ಶತೃಗಳೊಂದಿಗೆ ಯುದ್ಧಕ್ಕೆ ಹೆದರಿ ಓಡಿಬಂದ ರಾಜಕುಮಾರನನ್ನು ಒಳಗೆ ಪ್ರವೇಶಿಸದಂತೆ ತಡೆದ ತಾವಿಯ ಉದಾಹರಣೆಯಿದೆ. ರಾಷ್ಟ್ರ ರಕ್ಷಣೆಗಾಗಿ ಹೋರಾಡಲು ಸಿದ್ಧರಾಗದೇ ಹೋದರೆ ಅವರನ್ನು ತಾಯಿ ಒಪ್ಪಿಕೊಳ್ಳುವುದಿಲ್ಲ. ಭಾರತ ನಮ್ಮೆಲ್ಲರಿಗೆ ಜನ್ಮ ಕೊಟ್ಟ ತಾಯಿ. ಈ ಮಾತೃಭೂಮಿಯು ಇಂದು ಅಂತರ್ಬಾಹ್ಯ ಸಮಸ್ಯೆಗಳಿಂದ ಸಂಕಟ ಪಡುತ್ತಿದೆ. ದೇಶದಲ್ಲಿ ಭಯೋತ್ಪಾದನೆ, ಮತಾಂತರ ಇತ್ಯಾದಿ ಆಘಾತಗಳಾಗುತ್ತಿದ್ದರೆ ಆಂತರಿಕವಾಗಿ ಹಿಂದು ಸಮಾಜದಲ್ಲಿ ಅಸ್ಪೃಷ್ಯತೆಯ ಘೋರ ಸಮಸ್ಯೆಯಿದೆ. ನಾವೆಲ್ಲರೂ ಒಂದಾಗಬೇಕು. ಅನೇಕರು ಸೇರಿ ಏಕವಾಗಬೇಕು. ಇಂತಹ ಸಂಘಟಿತ ಶಕ್ತಿಯಿಂದ ಎಲ್ಲ ಸಮಸ್ಯೆಗಳನ್ನೂ ಎದುರಿಸಬಹುದು. ಮಾತೃ ದೇವೋ ಭವ, ಪಿತೃ ದೇವೋ ಭವ ಎಂಬ ಹಾಗೆಯೇ ನಮಗೆಲ್ಲ ದೇಶ ದೇವೋಭವ ಆಗಬೇಕು. ಈ ಕಾರ್ಯಕ್ಕಾಗಿ ಎಲ್ಲರೂ ಪರಿಶ್ರಮಿಸಲು ಸಿದ್ಧರಾಗಬಾಕು ಎಂದು ಶ್ರೀಗಳು ತಿಳಿಸಿದರು.