ಕಟ್ಜು ಸಾಹೇಬರಿಗೆ ಹೀಗೊಂದು ಪ್ರೀತಿಯ ಪತ್ರ: ದು.ಗು.ಲಕ್ಷ್ಮಣ

ನೇರ ನೋಟ: ದು.ಗು.ಲಕ್ಷ್ಮಣ

 ದೇಶದಾದ್ಯಂತ ರಾಜಕಾರಣಿಗಳ ಭ್ರಷ್ಟ ಹಗರಣಗಳುಅವ್ಯವಹಾರಗಳುದುರಾಡಳಿತ ಮುಂತಾದ ಅದೇ ಚರ್ವಿತಚರ್ವಣ ಸುದ್ದಿಗಳನ್ನು ಕೇಳಿಕೇಳಿ ಬೇಸತ್ತಿರುವ ಜನತೆಗೆ ನೀವಂತೂ ನಿಮ್ಮ ಅದ್ಭುತ ಹೇಳಿಕೆಗಳಿಂದ ಸಾಕಷ್ಟು ಮನರಂಜನೆ ಒದಗಿಸುತ್ತಿರುವಿರಿಹಣದುಬ್ಬರದಿಂದ ಕಂಗಾಲಾಗಿರುವಗಗನದೆತ್ತರಕ್ಕೆ ಏರಿರುವ ಬೆಲೆಗಳಿಂದ ದಿಗಿಲಾಗಿರುವ ಜನರಿಗೆ ನಿಮ್ಮ ಹೇಳಿಕೆಗಳು ಒಂದಷ್ಟು ಹೊತ್ತು ಖಂಡಿತ ಖುಷಿ ನೀಡುತ್ತವೆಜನರೀಗ ಮನರಂಜನೆ ಪಡೆಯುವುದಕ್ಕೆ ಸಿನಿಮಾಯಕ್ಷಗಾನಆರ್ಕೆಸ್ಟ್ರಾ ಟಿವಿ ಮುಂತಾದವುಗಳಿಗೆ ಮೊರೆಹೋಗುವ ಅಗತ್ಯವೇ ಇಲ್ಲನಿಮ್ಮ ನಗೆಬಾಂಬ್‌’ ಹೇಳಿಕೆಗಳನ್ನು ಜಗಿಯುತ್ತಿದ್ದರೆ ಭರಪೂರ ಮನರಂಜನೆಗೆ ಕೊರತೆಯೇ ಇರುವುದಿಲ್ಲ.

cartoon 29 3 2013 vikrama

ಗೌರವಾನ್ವಿತ ಮಾರ್ಕಂಡೇಯ ಕಟ್ಜು ಸಾಹೇಬರೆ, ಸಪ್ರೇಮ ಪ್ರಣಾಮಗಳು.

ನೀವು ಭಾರತೀಯ ಪತ್ರಿಕಾಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಾಗ ಪತ್ರಕರ್ತನಾದ ನನಗೆ ತುಂಬಾ ಸಂತೋಷವಾಗಿತ್ತು. ನನ್ನ ಸಂತೋಷಕ್ಕೆ ಕಾರಣ – ಪತ್ರಿಕಾರಂಗದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಪ್ರಾಮಾಣಿಕತೆಯಿಂದ ವೃತ್ತಿಪರತೆ ಮೆರೆದಿದ್ದರೂ ಹಲವು ಬಗೆಯ ಅನಾ್ಯಯಕ್ಕೆ ಒಳಗಾಗುವ ಅಮಾಯಕರಿಗೆ ನಿಮ್ಮಿಂದ ಇನ್ನಾದರೂ ನ್ಯಾಯ ಸಿಗುತ್ತದೆ, ಯಾವುದೇ ತಾರತಮ್ಯವಿಲ್ಲದೆ ಎಲ್ಲ ಪತ್ರಕರ್ತರಿಗೂ ಸೂಕ್ತ ವೇತನ, ಸೌಲಭ್ಯ ದೊರಕಲು ನಿಮ್ಮಿಂದ ನೆರವಾಗುತ್ತದೆ… ಎಂಬುದು. ಆದರೆ ನೀವು ಈ ಹುದ್ದೆಗೆ ನೇಮಕಗೊಂಡಾಗಿನಿಂದ ಸಾಮಾನ್ಯ ಪತ್ರಕರ್ತರಿಗೆ ಯಾವುದೇ ರೀತಿಯ ಭರವಸೆ ಸಿಗದಿರುವುದು ಎಲ್ಲರನ್ನೂ ಚಿಂತಿತರನ್ನಾಗಿ ಮಾಡಿದೆ. ಆದರೆ ಕೆಲವು ದಿನಗಳಿಂದ ಪ್ರತಿನಿತ್ಯ ಭರಪೂರ ಮನರಂಜನೆಯಂತೂ ನಿಮ್ಮಿಂದ ದೊರೆಯುತ್ತಲೇ ಇದೆ. ಅದಕ್ಕಾಗಿಯಾದರೂ ನಾವೆಲ್ಲ ಪತ್ರಕರ್ತರೂ ನಿಮಗೆ ಥ್ಯಾಂಕ್ಸ್ ಹೇಳಲೇಬೇಕು.

ಪತ್ರಿಕಾರಂಗದ ದಿನನಿತ್ಯದ ಆಗುಹೋಗುಗಳು, ಅಪಸವ್ಯಗಳು, ಈ ರಂಗವನ್ನು ಕಾಡುತ್ತಿರುವ ಸಮಸ್ಯೆಗಳು, ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭವೆಂದು ಪತ್ರಿಕಾ ದಿನಾಚರಣೆಯಂದು ಪ್ರತಿವರ್ಷ ಹೊಗಳಿಸಿಕೊಳ್ಳುತ್ತಿರುವ ಈ ರಂಗದ ಒಂದಿಷ್ಟು ಸಮಸ್ಯೆಗಳ ಪರಿಹಾರಕಾ್ಕಗಿಯಾದರೂ ನೀವು ಗಂಭೀರ ಪ್ರಯತ್ನ ಮಾಡುವಿರೆಂಬ ನಮ್ಮೆಲ್ಲರ ಭರವಸೆ ಕೊನೆಗೂ ಹುಸಿಯಾಗಿ ಹೋಗಿದೆ. ನೀವು ಪ್ರತಿನಿತ್ಯವೆಂಬಂತೆ ಸಿಡಿಸುತ್ತಿರುವ ನಗೆಬಾಂಬ್‌ಗಳ ಸ್ಫೋಟದ ಸದ್ದಿನಲ್ಲಿ ನೀವೇನು ಮಾಡಬೇಕಾಗಿತ್ತುಎಂಬ ವಿಷಯ ನಮಗೂ ಮರೆತುಹೋಗಿದೆ ! ನಿಮಗಂತೂ ನೆನಪೇ ಇಲ್ಲ, ಬಿಡಿ.

ಈಗೀಗ ಜನರಿಗೆ ಅನಿಸುತ್ತಿರುವುದೇನು ಗೊತ್ತೆ? ಅಕಸ್ಮಾತ್‌ ನೀವೇನಾದರೂ ಇಂತಹ ನಗೆಬಾಂಬ್‌ಗಳನ್ನು ಆಗಾಗ ಸಿಡಿಸದಿದ್ದಲ್ಲಿ ಇಡೀ ಜಗತ್ತು ಅದೆಷ್ಟು ಸಪ್ಪೆಯಾಗಿರುತ್ತಿತ್ತು, ಅದೆಷ್ಟು ದುಃಖಮಯವಾಗಿರುತ್ತಿತ್ತು ಎಂಬುದನ್ನು ಬಣ್ಣಿಸಲಸದಳ. ದೇಶವಾಸಿಗಳನ್ನು ನೀವು ಈ ಪರಿಯಾಗಿ ನಗಿಸುತ್ತಿರುವ ರೀತಿ ನಿಜಕ್ಕೂ ನಮಗೆಲ್ಲ ಖುಷಿಕೊಟ್ಟಿದೆ.

ಪತ್ರಿಕಾಮಂಡಳಿ ಅಧ್ಯಕ್ಷರಾದೊಡನೆಯೇ ನೀವು ಹೇಳಿದ ಆ ಮುತ್ತಿನಂತಹ ಮಾತನ್ನು ಮರೆಯಲು ಹೇಗೆ ತಾನೆ ಸಾಧ್ಯ? ‘ಶೇ.90 ಮಂದಿ ಭಾರತೀಯರು ಮೂರ್ಖರು’ ಎಂಬ ನಿಮ್ಮ ಆ ಹೇಳಿಕೆ ಪ್ರಕಟವಾಗುತ್ತಿದ್ದಂತೆ ಎಲ್ಲರೂ ಗಾಬರಿಗೆ ಬಿದ್ದಿದ್ದು ನಿಜ. ಭಾರತದಲ್ಲಿರುವ ಮೂರ್ಖರಿಗಂತೂ ನಿಮ್ಮ ಈ ಹೇಳಿಕೆಯಿಂದ ಖುಷಿಯೋ ಖುಷಿ. ಆದರೆ ಕೆಲವು ಪ್ರಜ್ಞಾವಂತರಿಗೆ ನೀವೇಕೆ ಹೀಗೆ ಹೇಳಿದಿರಿ? ಒಬ್ಬ ನ್ಯಾಯಮೂರ್ತಿಯಾಗಿ ನೀವು ಹೀಗೆ ಹೇಳಬೇಕಾದರೆ ನಿಮ್ಮಲ್ಲಿರುವ ಆಧಾರಗಳಾದರೂ ಏನು? ನಿಮ್ಮ ಹೇಳಿಕೆಗೆ ಸಾಕ್ಷಿ ಪುರಾವೆಗಳಿವೆಯೆ? ಎಂದೆಲ್ಲ ಕಿರಿಕಿರಿಯಾಗಿತ್ತು. ಆದರೆ ನಿಮ್ಮ ಬಳಿ ಸಾಕ್ಷಿ ಪುರಾವೆಗಳಿರುವ ಯಾವುದೇ ಸುಳಿವು ಅವರಿಗೆ ಲಭಿಸಿರಲಿಲ್ಲ. ಭಾರತದಲ್ಲಿರುವ ಶೇ.90 ಮಂದಿಯಷ್ಟು ಮೂರ್ಖರಲ್ಲಿ ನೀವು ಸೇರಿದ್ದೀರೋ ಇಲ್ಲವೋ ಎಂಬ ಅನುಮಾನವಂತೂ ಪ್ರಜ್ಞಾವಂತರನ್ನು ಬೆನ್ನು ಬಿಡದ ಬೇತಾಳದಂತೆ ಕಾಡುತ್ತಲೇ ಇತ್ತು.

ಇದಾದ ಬಳಿಕ, ಮುಂಬೈ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾದ ನಟ ಸಂಜಯ್‌ದತ್‌ಗೆ ಸುಪ್ರೀಂಕೋರ್ಟ್‌ 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದಾಗ ನೀವು ತಕ್ಷಣ ಸಂಜುಬಾಬಾಗೆ ಕ್ಷಮಾದಾನ ನೀಡಬೇಕು ಎಂದು ಆಗ್ರಹಿಸಿದಿರಿ. ಸಂಜುಬಾಬಾ ಕುಲೀನ ಕುಟುಂಬಕ್ಕೆ ಸೇರಿದವನು. ಆತನ ತಂದೆ-ತಾಯಿ ಮರ್ಯಾದಸ್ಥರು. ಅದೂ ಅಲ್ಲದೆ ಗಾಂಧಿವಾದಿಯಾದ ಸಂಜಯ್‌ದತ್‌ ಹಿಂದಿ ಚಿತ್ರರಂಗದ ಮೇರುನಟ… ಇತ್ಯಾದಿ ಸಾಕ್ಷ್ಯಾಧಾರಗಳನ್ನು ಜನರ ಮುಂದಿಟ್ಟು , ಆತನಿಗೆ ಕ್ಷಮಾದಾನ ನೀಡಬೇಕಾದುದು ಎಷ್ಟು ಅನಿವಾರ್ಯ ಎಂಬುದನ್ನು ಪರಿಪರಿಯಾಗಿ ತಾವು ವಿವರಿಸಿದ್ದೀರಿ. ಸಂಜಯ್‌ದತ್‌ನಂತಹ ಅಪರಾಧಿಯ ಬಗ್ಗೆಯೂ ನಿಮ್ಮ ಹೃದಯದ ಮೂಲೆಯಲ್ಲೊಂದು ಕನಿಕರದ ಭಾವವಿದೆ ಎಂಬುದು ಈ ಹೇಳಿಕೆಯಿಂದ ಗೊತ್ತಾಗಿ ಜನರಿಗೆಲ್ಲ ಆಗಿದ್ದು ಬಹುದೊಡ್ಡ ಅಚ್ಚರಿ ಹಾಗೂ ಆಘಾತ. ಆದರೂ ನಿಮ್ಮಲ್ಲಿ ಅದೆಂತಹ ಅನುಕಂಪವಿದೆ, ನೀವೆಷ್ಟು ದಯಾಮಯರು ಎಂಬುದೂ ಬೆಳಕಿಗೆ ಬಂದು ನಿಮ್ಮ ಬಗ್ಗೆ ಇನ್ನೊಂದು ರೀತಿಯ ಭಾವವೂ ಹುಟ್ಟಿಕೊಂಡಿತ್ತು.

ಆದರೆ ಸಂಜೂಬಾಬಾ ಬಗ್ಗೆ ನಿಮ್ಮ ಈ ಮಾನವೀಯ ಅನುಕಂಪ ಗಮನಿಸಿದವರಿಗೆ ಒಂದು ಅನುಮಾನವಂತೂ ಪರಿಹಾರವಾಗಿತ್ತು. ದೇಶದ ಶೇ.90 ಮಂದಿ ಮೂರ್ಖರೆಂದು ನೀವು ಈ ಹಿಂದೆ ಹೇಳಿದ್ದೀರಲ್ಲ, ಅದರಲ್ಲಿ ನೀವು ಸೇರಿದ್ದೀರೋ ಇಲ್ಲವೋ ಎಂದು ಕಾಡುತ್ತಿದ್ದ ಅನುಮಾನವಂತೂ ಈಗ ಪರಿಹಾರವಾಗಿದೆ. ಶೇ.90 ಮಂದಿ ಮೂರ್ಖರಲ್ಲಿ ನೀವು ಸೇರಿರುವುದಂತೂ ಗ್ಯಾರಂಟಿ ಎಂದು ಈಗ ಜನರು ನಿಶ್ಚಿಂತರಾಗಿ, ನಿರಾಳವಾಗಿದ್ದಾರೆ. ಶೇ.90ರ ಆ ಎಲೈಟ್‌ ಕ್ಲಬ್‌ಗೆ ನಿಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತವೆಂಬುದು ಜನರ ಅಭಿಮತ.

ಸಂಜಯ್‌ದತ್‌ಗೆ ಕ್ಷಮಾದಾನ ನೀಡಬೇಕೆಂದು ಮಹಾರಾಷ್ಟ್ರದ ರಾಜ್ಯಪಾಲರನ್ನು ಆಗ್ರಹಿಸುವ ಭರದಲ್ಲಿ ನೀವು ಆತ 2 ಮಕ್ಕಳ ತಂದೆ, ಆ ಕಾರಣಕ್ಕಾಗಿಯಾದರೂ ಕ್ಷಮಿಸಿ ಎಂದು ಪತ್ರ ಬರೆದಿದ್ದಿರಿ. ಆದರೆ ಸಂಜಯ್‌ದತ್‌ 3 ಮಕ್ಕಳ ತಂದೆ. ನಿಮ್ಮ ಪತ್ರದಲ್ಲಿ ಇದೊಂದು ತಪ್ಪಾಗಿದೆ. ಹೋಗಲಿಬಿಡಿ, ಸಂಜಯ್‌ದತ್‌ ಎಷ್ಟಾದರೂ ಸಿನಿಮಾ ತಾರೆಯಲ್ಲವೆ? ಆತ ಎಷ್ಟು ಮಕ್ಕಳಿಗೆ ತಂದೆ, ಎಷ್ಟು ಮಂದಿ ಮಹಿಳೆಯರಿಗೆ ಪತಿಯಾಗಿದ್ದ ಅಥವಾ ಸಂಗಾತಿಯಾಗಿದ್ದ ಎಂಬಿತ್ಯಾದಿ ಸಂಗತಿಗಳು ಸದಾಕಾಲ ಕುತೂಹಲಕಾರಿಯಾಗಿಯೇ ಇರುತ್ತವೆ. ಸಾಮಾನ್ಯ ಮನುಷ್ಯನೊಬ್ಬನಿಗೆ ಇರುವ ಮಕ್ಕಳೆಷ್ಟು, ಪತ್ನಿಯರೆಷ್ಟು ಎಂಬ ಅಂಕೆಸಂಖ್ಯೆಗಳನ್ನು ನಿಖರವಾಗಿ ಹೇಳಬಹುದು. ಆದರೆ ಸಿನಿಮಾ ತಾರೆಯರ ವಿಷಯದಲ್ಲಿ ಇದನ್ನೆಲ್ಲ ಹೇಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಅವರದು ಬಣ್ಣದ ಬದುಕು. ದಿನಕ್ಕೊಂದು ಅಥವಾ ಕ್ಷಣಕ್ಕೊಂದು ಉಡುಪು ಬದಲಾಯಿಸಿದಂತೆ, ಸಿನಿಮಾ ತಾರೆಯರು ಪತ್ನಿಯರನ್ನೂ ಅದೇ ರೀತಿ ಬದಲಾಯಿಸುತ್ತಲೇ ಇರುತ್ತಾರೆ ಎಂಬುದು ಯಾರಿಗೂ ತಿಳಿಯದ ವಿಷಯವೇನಲ್ಲ ಬಿಡಿ.

ಆದರೆ ಸಂಜಯ್‌ದತ್‌ ಅಭಿನಯಿಸಿದ ‘ಲಗೇ ರಹೋ ಮುನ್ನಾಭಾಯಿ’ ಎಂಬ ಚಿತ್ರ ನೋಡಿದರೆ ಬಾಪು ಅವರ ದಿವ್ಯ ನೆನಪು ಕಾಡುತ್ತದೆ ಎಂದಿರುವ ನೀವು, ಈ ಕಾರಣಕ್ಕಾಗಿಯಾದರೂ ಆತ ಕ್ಷಮಾರ್ಹ ಎಂದಿರುವುದು ಮಾತ್ರ ಚೋದ್ಯವೇ ಸರಿ. ಶೇ.90 ಮಂದಿ ಭಾರತೀಯರು ಮೂರ್ಖರು ಎಂಬ ನಿಮ್ಮ ಹೇಳಿಕೆಯ ಬಗ್ಗೆ ಈಗ ಅನುಮಾನ ಉಳಿಯಲು ಸಾಧ್ಯವೇ ಇಲ್ಲ. ಆದರೆ ನಮಗೆಲ್ಲ ಒಂದು ಅನುಮಾನ ಕಾಡುತ್ತಿದೆ. ಬಾಪೂಜಿಯಂತಹ ಇಡೀ ಜಗತ್ತೇ ತಲೆಬಾಗಿ ಗೌರವಿಸುವ ಒಬ್ಬ ಮಹಾತ್ಮನನ್ನು ನೆನಪಿಟ್ಟುಕೊಳ್ಳಲು ಸಂಜಯ್‌ದತ್‌ ನಟಿಸಿದ ‘ಲಗೇ ರಹೋ ಮುನ್ನಾಭಾಯಿ’ ಚಿತ್ರದ ಅಗತ್ಯವಿದೆಯೆ? ನಿಜಕ್ಕೂ ಬಾಪೂಜಿಯನ್ನು ಸ್ಮರಿಸಬೇಕೆಂದಿದ್ದರೆ ನಮ್ಮ ಜೇಬಿನಲ್ಲಿರುವ ಹತ್ತು ರೂಪಾಯಿಯ ನೋಟು ಸಾಕಲ್ಲವೆ? ಬಿಳಿಯ ಕಾಗದದ ಮೇಲೆ ಆತನ ಚಿತ್ರ ಪ್ರಿಂಟ್‌ ಆಗಿ, ನಾವು ಆ ಹಣವನ್ನು ಹೇಗೆ ಖರ್ಚು ಮಾಡುತ್ತೇವೆ, ಒಳ್ಳೆ ಕೆಲಸಕ್ಕೆ ಮಾಡುತ್ತೇವಾ ಅಥವಾ ಖದೀಮ ಕೃತ್ಯಗಳಿಗೆ ವೆಚ್ಚ ಮಾಡುತ್ತೇವಾ ಎಂದು ವೌನವಾಗಿ ಆ ಬಾಪೂ ಗಮನಿಸುತ್ತಲೇ ಇರುತ್ತಾನೆ. ಬಾಪುವನ್ನು ಅನುಕ್ಷಣ ನೆನೆಯಲು ಅದು ಸಾಕಲ್ಲವೆ? ಆದರೆ ನೀವಾದರೋ ಸಂಜಯ್‌ದತ್‌ ಮುಂಬೈ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಕ್ಷ್ಯಾಧಾರಗಳ ಮೂಲಕ ಸಾಬೀತಾಗಿದ್ದರೂ ಆತ ಮುಗ್ಧ , ಅಮಾಯಕ, ಆತನನ್ನು ನೋಡಿದರೆ ಗಾಂಧೀಜಿ ನೆನಪಾಗುತ್ತದೆ… ಇತ್ಯಾದಿ ಬುಡುಬುಡಿಕೆ ಬಿಡುತ್ತೀರಲ್ಲ, ನಿಮ್ಮನ್ನು ನೋಡಿದರೆ ನಿಜಕ್ಕೂ ಮರುಕವುಂಟಾಗುತ್ತದೆ.

ಹೋಗಲಿ ಬಿಡಿ, ಏನೋ ಬಾಯಿತಪ್ಪಿ ಅಥವಾ ಉದ್ವೇಗದಿಂದ ಇಂತಹ ಮಾತನ್ನು ನೀವು ಆಡಿರಬಹುದು ಎಂದು ನಾವು ಭಾವಿಸುವಂತಿಲ್ಲ. ಏಕೆಂದರೆ ನೀವೊಬ್ಬರು ನ್ಯಾಯಾಧೀಶರು. ಸಾಕ್ಷ್ಯಾಧಾರಗಳಿಲ್ಲದೆ ಯಾರನ್ನೂ ಅಪರಾಧಿಯೆಂದು ಪರಿಗಣಿಸದ ನ್ಯಾಯನಿಷ್ಠುರರು. ಒಂದು ರೀತಿಯಲ್ಲಿ ನೀವೇ ನ್ಯಾಯದೇವತೆಯ ಪ್ರತಿನಿಧಿಗಳು. ಸಂಜಯ್‌ದತ್‌ ಮನೆಯಲ್ಲಿ ಎಕೆ-56 ಬಂದೂಕುಗಳು, ಗ್ರೆನೇಡ್‌ಗಳು ದೊರಕಿದ್ದಕ್ಕೆ ಸಾಕ್ಷ್ಯಾಧಾರಗಳಿವೆ. ಆ ಬಂದೂಕುಗಳೇನೂ ತೆವಳಿಕೊಂಡು ಅಲ್ಲಿಗೆ ಬರಲಿಲ್ಲ. ಯಾರೋ ತಂದಿಟ್ಟಿದ್ದಾರೆ ಎಂಬುದಂತೂ ನಿಜ. ಯಾರೋ ಸುಖಾಸುಮ್ಮನೆ ಯಾಕೆ ತಂದಿಡುತ್ತಾರೆ? ಸಂಜಯ್‌ದತ್‌ಗೆ ಗೊತ್ತಿಲ್ಲದೆ, ಆತನ ಅರಿವಿಗೆ ಬಾರದೆ ಇದೆಲ್ಲ ನಡೆದದ್ದೂ ಅಲ್ಲ. ಭೂಗತ ಪಾತಕಿ ದಾವೂದ್‌ ಇಬ್ರಾಹಿಂ, ಚೋಟಾ ಶಕೀಲ್‌ನಂತಹ ಕುಖ್ಯಾತರ ಜೊತೆ ಸಂಜೂಬಾಬಾಗೆ ನಿಕಟ ಸಂಪರ್ಕ, ಗೆಳೆತನ ಇದ್ದುದರಿಂದಲೇ, ಅವರೆಲ್ಲರಿಂದ ಆತ

ಉಪಕೃತನಾಗಿದ್ದರಿಂದಲೇ ಆ ಬಂದೂಕುಗಳು, ಗ್ರೆನೇಡ್‌ಗಳನ್ನು ಆ ಪಾತಕಿಗಳ ಅಣತಿಯಂತೆ ತನ್ನ ಮನೆಯಲ್ಲಿ ಸಂಜೂಬಾಬಾ ಇಟ್ಟುಕೊಳ್ಳಬೇಕಾಯಿತು. ಇದು ಇಡೀ ಲೋಕಕ್ಕೆ ಈಗ ಗೊತ್ತಿರುವ ಸಂಗತಿ. ಆದರೆ ನ್ಯಾಯಮೂರ್ತಿಗಳಾದ ತಮಗೆ ಮಾತ್ರ ಇದೇಕೆ ಗೊತ್ತಾಗಲಿಲ್ಲವೋ ಆಶ್ಚರ್ಯವಾಗುತ್ತದೆ.

ಸಾಕ್ಷ್ಯಾಧಾರಗಳ ಸಹಿತ ಸಂಜೂಬಾಬಾನ ಅಪರಾಧ ಸಾಬೀತಾಗಿದೆ. ಆತನಿಗೆ ತಕ್ಕ ಶಿಕ್ಷೆಯೂ ಆಗಿದೆ. ಆದರೂ ನಿಮ್ಮಂತಹ ನ್ಯಾಯಮೂರ್ತಿಗಳು ಆತನ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿರುವುದು ನನ್ನಂತಹವರಿಗೆ ಸಖೇದಾಶ್ಚರ್ಯವೆನಿಸುತ್ತಿದೆ. ಸಾಕ್ಷ್ಯಾಧಾರಗಳಿಲ್ಲದೆ, ಅನ್ಯಾಯವಾಗಿ ಯಾರದೋ ಪಿತೂರಿಗೆ ಬಲಿಯಾಗಿ ಜೈಲುಕಂಬಿ ಎಣಿಸುತ್ತಿರುವ ಆರೋಪಿಗಳ ಬಗ್ಗೆ ನೀವು ಅನುಕಂಪ ವ್ಯಕ್ತಪಡಿಸಿದ್ದರೆ ಅಥವಾ ಕ್ಷಮಾದಾನ ನೀಡಬೇಕೆಂದು ಆಗ್ರಹಿಸಿದ್ದರೆ ಆಗ ನಿಮ್ಮ ಬಗ್ಗೆ ನಮ್ಮ ಗೌರವ ಇಮ್ಮಡಿಯಾಗುತ್ತಿತ್ತು. ಸಾಧ್ವಿ ಪ್ರಜ್ಞಾಸಿಂಗ್‌, ಸ್ವಾಮಿ ಅಸೀಮಾನಂದ ಕಳೆದ 5 ವರ್ಷಗಳಿಂದ ಜೈಲಿನಲ್ಲಿ ಬಿಡುಗಡೆಯ ಭಾಗ್ಯವಿಲ್ಲದೆ ಕೊಳೆಯುತ್ತಿದ್ದಾರೆ. ಕೋರ್ಟಿನಲ್ಲಿ ಇದುವರೆಗೆ ಅವರ ಮೇಲಿನ ಯಾವುದೇ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಕೆಲವು ಪಾತಕಿಗಳು ಜೈಲು ಸೇರಿ ತಿಂಗಳಾಗುವುದರೊಳಗೆ ಪ್ರಭಾವಬೀರಿ ಜಾಮೀನು ಪಡೆದು ಹೊರಬರುತ್ತಾರೆ. ಅವರ ಮೇಲಿನ ಆರೋಪಗಳು ಗಂಭೀರವಾಗಿದ್ದರೂ ಜಾಮೀನು ನಿರಾಯಾಸವಾಗಿ ದೊರಕುತ್ತದೆ. ಆದರೆ ಸಾಧ್ವಿ, ಅಸೀಮಾನಂದರಂತಹ ಅಮಾಯಕರಿಗೆ ಜಾಮೀನು ಇಲ್ಲ, ಬಿಡುಗಡೆಯೂ ಇಲ್ಲ. ಇಂಥವರ ಬಗ್ಗೆ ನಿಮ್ಮಂತಹ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಅದೇಕೆ ಅನುಕಂಪ ಮೂಡುವುದಿಲ್ಲ? ಅವರನ್ನು ಬಿಡುಗಡೆ ಮಾಡಬೇಕೆಂದು ನೀವೇಕೆ ಆಗ್ರಹಿಸುವುದಿಲ್ಲ?

ಸಾಧ್ವಿ ಪ್ರಜ್ಞಾಸಿಂಗ್‌, ಅಸೀಮಾನಂದ ಅವರ ವಿಷಯ ಹಾಗಿರಲಿ. ಕಾಶ್ಮೀರದ ವಿವಿಧ ಕಡೆಗಳಲ್ಲಿ ಭಯೋತ್ಪಾದಕರು ಇತಿಹಾಸ ಕಂಡು ಕೇಳರಿಯದ ದೌರ್ಜನ್ಯವೆಸಗಿದ್ದಾರೆ. ಕಾಶ್ಮೀರಿ ಹಿಂದುಗಳ ಬಹಳಷ್ಟು ಶವಗಳು ಕಾಶ್ಮೀರ ಕಣಿವೆಯಲ್ಲಿ ಪತ್ತೆಯಾಗಿವೆ. ಹಲವು ಶವಗಳ ತಲೆ ಕಡಿದು ಹಾಕಲಾಗಿತ್ತು. ಅವರನ್ನು ಕೊಲ್ಲುವುದಕ್ಕೆ ಮುಂಚೆ ಕಾದ ಕಬ್ಬಿಣದಿಂದ ಮೈಮೇಲೆ ಬರೆ ಹಾಕಿದ ಪ್ರಕರಣ ಕೂಡ ವರದಿಯಾಗಿವೆ. ಹಲವು ಶವಗಳ ಕಣ್ಣು ಕೀಳಲಾಗಿತ್ತು. ಗುಜರಾತಿನ ಗೋಧ್ರಾದಲ್ಲಿ 58 ಮಂದಿ ರಾಮಭಕ್ತರ ಸಜೀವದಹನ ನಡೆದಿದ್ದು, ಜಗತ್ತಿನ ಬೇರೆಲ್ಲೂ ಅಂತಹ ಘಟನೆ ನಡೆದಿರಲಿಕ್ಕಿಲ್ಲ. ಅಂತಹ ಅಮಾನವೀಯ, ಬರ್ಬರ, ಮಾನವೀಯತೆಯನ್ನೇ ನಾಚಿಸುವ ಕ್ರೂರ ಕೃತ್ಯಗಳು ಅವು. ಆದರೆ ಆ ಘಟನೆಗಳ ಬಗ್ಗೆ ಒಬ್ಬ ಪ್ರಜ್ಞಾವಂತ ಪ್ರಜೆಯಾಗಿ, ಗೌರವಾನ್ವಿತ ನ್ಯಾಯಮೂರ್ತಿಗಳಾಗಿ ನೀವೆಂದಾದರೂ ಸ್ವರವೆತ್ತಿದ್ದೀರಾ? ಸಂಜೂಬಾಬಾನಿಗೆ ಕೇವಲ 5 ವರ್ಷಗಳ ಶಿಕ್ಷೆಯಾಗಿದ್ದಕ್ಕೇ ಇಷ್ಟೊಂದು ಅಲವತ್ತುಕೊಳ್ಳುವ ನೀವು, ಅಲ್ಲಿ ಕಾಶ್ಮೀರದಲ್ಲಿ ಸಾವಿರಾರು ಹಿಂದುಗಳ ಹತ್ಯೆಯಾಗಿದ್ದಕ್ಕೆ ಏಕೆ ಮಾತನಾಡುವುದಿಲ್ಲ? ಜಮ್ಮು-ಕಾಶ್ಮೀರದಲ್ಲಿ ಹಿಂದುಗಳ ಮಾನವ ಹಕ್ಕು ಉಲ್ಲಂಘನೆಯಾಗಿದೆಯೆಂದು ನಿಮಗೇಕೆ ಅನಿಸುತ್ತಿಲ್ಲ? ಹಿಂದುಗಳ ಮೇಲೆ ಕಾಶ್ಮೀರದಲ್ಲಿ ಹಾಗೂ ದೇಶದ ಉಳಿದ ಕಡೆಗಳಲ್ಲಿ ಆಗಾಗ ಇಂತಹ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಆದರೆ ಅದಾವುದೂ ಮಾಧ್ಯಮಗಳಲ್ಲಿ ವರದಿಯಾಗುವುದೇ ಇಲ್ಲ. ಸುದ್ದಿ ವಾಹಿನಿಗಳಂತೂ ಹಿಂದುಗಳಿಗಾದ ಈ ಅನ್ಯಾಯವನ್ನು ಚರ್ಚೆಗೆ ಎತ್ತಿಕೊಳ್ಳುವುದೇ ಇಲ್ಲ. ಅದೇ ಒಬ್ಬ ಮುಸಲ್ಮಾನನಿಗೆ ಅಥವಾ ಕ್ರೈಸ್ತನಿಗೆ ಕಿಂಚಿತ್ತು ನೋವಾದರೂ, ಆತನ ಒಂದು ರೋಮ ಅಲುಗಾಡಿದರೂ ಇಡೀ ದೇಶದ ಮಾಧ್ಯಮಗಳು ಬೊಬ್ಬೆ ಹೊಡೆಯುತ್ತವೆ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಂಬ ವಿಷಯವೆತ್ತಿಕೊಂಡು ದಿನಗಟ್ಟಲೆ ಚರ್ಚೆ ನಡೆಸುತ್ತವೆ. ಮಾಧ್ಯಮಗಳ ಈ ವೈಖರಿಯನ್ನು ನೀವೇಕೆ ಖಂಡಿಸುತ್ತಿಲ್ಲ? ಅಸ್ಸಾಂನಲ್ಲಿ ಗಲಭೆ ನಡೆದು ಮುಸ್ಲಿಮರು ನಿರಾಶ್ರಿತರಾಗಿ ಸಂತ್ರಸ್ತ ಶಿಬಿರಗಳಲ್ಲಿ ವಾಸಿಸುತ್ತಿದ್ದರೆ ಅಲ್ಲಿಗೆ ಪ್ರಧಾನಿ, ಯುಪಿಎ ಅಧ್ಯಕ್ಷೆ ಮೊದಲಾದವರೆಲ್ಲ ತಕ್ಷಣ ಧಾವಿಸುತ್ತಾರೆ. ಅವರ ಕ್ಷೇಮ ಸಮಾಚಾರ ವಿಚಾರಿಸಿ ಕಣ್ಣೀರಿಡುತ್ತಾರೆ. ಅಗತ್ಯವಿರುವ ಪರಿಹಾರ ಕಾರ್ಯ ಕೈಗೊಳ್ಳಲು ಕೂಡಲೇ ಕಟ್ಟುನಿಟ್ಟಿನ ಆದೇಶ ನೀಡುತ್ತಾರೆ. ಆದರೆ ಕಾಶ್ಮೀರದ ಹಿಂದು ನಿರಾಶ್ರಿತರ ಶಿಬಿರಗಳಿಗೆ ಭಾರತದ ಯಾವುದೇ ಪ್ರಧಾನಿ ಭೇಟಿ ನೀಡಿದ ಅಥವಾ ನೆರವಿತ್ತ ನಿದರ್ಶನಗಳು ನನಗಂತೂ ತಿಳಿದಿಲ್ಲ. ಹಾಗಿದ್ದರೆ ಹಿಂದುಗಳು ಈ ದೇಶದ ದ್ವಿತೀಯ ದರ್ಜೆಯ ನಾಗರಿಕರೆ? ಅಥವಾ ಗುಲಾಮರೆ? ಹೀಗಂತ ನೀವೇಕೆ ಅಧಿಕಾರಸ್ಥರಿಗೆ ಗಟ್ಟಿಯಾಗಿ ಪ್ರಶ್ನಿಸಿಲ್ಲ. ಮಾರ್ಕಂಡೇಯ ಕಟ್ಜು ಎಂಬ ಹೆಸರಿಟ್ಟುಕೊಂಡಿರುವ ನೀವೂ ಕೂಡ ಒಬ್ಬ ಹಿಂದುವಲ್ಲವೆ? ಭಯೋತ್ಪಾದಕರ ಗುಂಡಿಗೆ ಬಲಿಯಾದ ಹಿಂದುಗಳು ಸಂಜಯ್‌ದತ್‌ಗಿಂತ ಒಳ್ಳೆಯವರೆಂದು ನಿಮಗೇಕೆ ಅನಿಸುತ್ತಿಲ್ಲ? ಆ ನತದೃಷ್ಟ ಹಿಂದುಗಳು ಮಾಡಿದ ತಪ್ಪಾದರೂ ಏನು? ಅವರ ಬಗ್ಗೆ ನಿಮ್ಮ ಹೃದಯ ಏಕೆ ಮಿಡಿಯುತ್ತಿಲ್ಲ? ಬಹುಶಃ ಇಂತಹ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರ ಇರಲಿಕ್ಕಿಲ್ಲ! ವೌನವೇ ನಿಮ್ಮ ಉತ್ತರವಾಗಿರಬಹುದು, ಅಲ್ಲವೆ?

ಇವೆಲ್ಲ ಭಾವನಾತ್ಮಕ ವಿಚಾರಗಳೆಂದಿಟ್ಟುಕೊಂಡರೂ ಒಬ್ಬ ನ್ಯಾಯಮೂರ್ತಿಯಾಗಿ ಪ್ರಜಾತಂತ್ರ ವ್ಯವಸ್ಥೆ , ಚುನಾವಣೆ, ಮತದಾನ ಮುಂತಾದ ಸಂಗತಿಗಳ ಬಗ್ಗೆಯಾದರೂ ನಿಮಗೆ ಗೌರವ ಇರಬೇಕಿತ್ತು. ಚುನಾವಣೆ, ಮತದಾನ ಪ್ರಕ್ರಿಯೆಗಳಿಂದ ಪ್ರಜಾತಂತ್ರ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬುದು ಪ್ರಜ್ಞಾವಂತರೆಲ್ಲರ ನಂಬಿಕೆ. ಆದರೆ ನಿಮಗೆ ಮಾತ್ರ ಅಂತಹ ನಂಬಿಕೆ ಇಲ್ಲವೇಕೆ? ಚುನಾವಣೆಗೆ ಸ್ಪರ್ಧಿಸುವ ಬಹುತೇಕ ಅಭ್ಯರ್ಥಿಗಳು ಅಯೋಗ್ಯರಾಗಿರುವುದರಿಂದ ನಾನು ಮತದಾನ ಮಾಡುವುದಿಲ್ಲವೆಂದು ಇತ್ತೀಚೆಗೆ ನೀವು ಹೇಳಿರುವಿರಿ. ಪ್ರತಿಯೊಬ್ಬ ಪ್ರಜೆಗೂ ಮತದಾನ ಕಡ್ಡಾಯವೆಂದು ನಮ್ಮ ಸಂವಿಧಾನವೇ ಹೇಳಿದೆ. ನ್ಯಾಯಮೂರ್ತಿಗಳಾದ ತಮಗೆ ಈ ಸಾಮಾನ್ಯ ಸಂಗತಿ ತಿಳಿಯದೇ ಇರಲು ಸಾಧ್ಯವಿಲ್ಲ. ಹಾಗಿದ್ದರೂ ಮತದಾನ ಮಾಡುವುದಿಲ್ಲವೆಂದು ಹೇಳಿರುವ ನೀವು ಇಡೀ ದೇಶದ ಜನತೆಗೆ ತಪ್ಪು ಸಂದೇಶ ನೀಡಿದಂತಾಗುವುದಿಲ್ಲವೆ? ಜನರು ತಪ್ಪು ಹಾದಿ ಹಿಡಿಯುವುದಕ್ಕೆ ಪ್ರೇರೇಪಿಸಿದಂತಾಗುವುದಿಲ್ಲವೆ?

ಅದೇನೇ ಇರಲಿ, ದೇಶದಾದ್ಯಂತ ರಾಜಕಾರಣಿಗಳ ಭ್ರಷ್ಟ ಹಗರಣಗಳು, ಅವ್ಯವಹಾರಗಳು, ದುರಾಡಳಿತ ಮುಂತಾದ ಅದೇ ಚರ್ವಿತಚರ್ವಣ ಸುದ್ದಿಗಳನ್ನು ಕೇಳಿಕೇಳಿ ಬೇಸತ್ತಿರುವ ಜನತೆಗೆ ನೀವಂತೂ ನಿಮ್ಮ ‘ಅದ್ಭುತ ಹೇಳಿಕೆ’ಗಳಿಂದ ಸಾಕಷ್ಟು ಮನರಂಜನೆ ಒದಗಿಸುತ್ತಿರುವಿರಿ. ಹಣದುಬ್ಬರದಿಂದ ಕಂಗಾಲಾಗಿರುವ, ಗಗನದೆತ್ತರಕ್ಕೆ ಏರಿರುವ ಬೆಲೆಗಳಿಂದ ದಿಗಿಲಾಗಿರುವ ಜನರಿಗೆ ನಿಮ್ಮ ಹೇಳಿಕೆಗಳು ಒಂದಷ್ಟು ಹೊತ್ತು ಖಂಡಿತ ಖುಷಿ ನೀಡುತ್ತವೆ. ಜನರೀಗ ಮನರಂಜನೆ ಪಡೆಯುವುದಕ್ಕೆ ಸಿನಿಮಾ, ಯಕ್ಷಗಾನ, ಆರ್ಕೆಸ್ಟ್ರಾ , ಟಿವಿ ಮುಂತಾದವುಗಳಿಗೆ ಮೊರೆಹೋಗುವ ಅಗತ್ಯವೇ ಇಲ್ಲ. ನಿಮ್ಮ ‘ನಗೆಬಾಂಬ್‌’ ಹೇಳಿಕೆಗಳನ್ನು ಜಗಿಯುತ್ತಿದ್ದರೆ ಭರಪೂರ ಮನರಂಜನೆಗೆ ಕೊರತೆಯೇ ಇರುವುದಿಲ್ಲ. ಅಷ್ಟೇ ಅಲ್ಲ , ವಿವಾದಗಳನ್ನು ಹೇಗೆ ಸೃಷ್ಟಿಸಬೇಕು ಎಂಬ ಕಲೆಯನ್ನು ನಿಮ್ಮಷ್ಟು ಚೆನಾ್ನಗಿ ತಿಳಿದವರು ಯಾರೂ ಇರಲಿಕ್ಕಿಲ್ಲ. ವಿವಾದಗಳನ್ನು ಸೃಷ್ಟಿಸಿ ಮಜಾ ತೆಗೆದುಕೊಳ್ಳುತ್ತಿದ್ದ ರಾಜಕಾರಣಿಗಳಂತೂ ನಿಮ್ಮ ಬಗ್ಗೆ ತುಂಬಾ ಅಸೂಯೆ ಪಡುತ್ತಿದ್ದಾರಂತೆ. ಒಟ್ಟಾರೆ ಸದ್ಯಕ್ಕಂತೂ ದೇಶದಲ್ಲಿ ನೀವೇ ರಿಯಲ್‌ ಹೀರೋ ಎಂಬ ಭ್ರಮೆ ಆವರಿಸಿದೆ. ಆದರೆ ಹುಷಾರ್‌! ಮುಂದೊಂದು ದಿನ ನೀವು ವಿಲನ್‌ ಆಗಬೇಕಾದ ಪರಿಸ್ಥಿತಿ ಬಂದರೆ ಏನು ಮಾಡುತ್ತೀರಿ? ಆಗ ಸಂಜೂಬಾಬಾನಂತೂ ಖಂಡಿತ ನಿಮ್ಮ ಪರ ವಹಿಸಲಾರ.

ನಿಮಗೆ ಶುಭವಾಗಲಿ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

VHP launches nationwide 'Ram-Japa-Yagna' from April 11of Yugadi Day to May 13 Akshaya Tritiya

Mon Apr 8 , 2013
Bangalore April 08: Vishwa Hindu Parishad has launched  Sri Ram Japa Yajna, a mass campaign of chanting of phrases on Lord Ram, from April 11, the Varsha Pratipada begining of Hindu Calender year to May 13 Akshaya Tritiya. ‘The Campaign will be held nation wide, lakhs of people to participate […]