ನೇರ ನೋಟ:  – ದು.ಗು.ಲಕ್ಷ್ಮಣ

ಚುನಾವಣೆಯಲ್ಲಿ ಗೆಲ್ಲುವ ಮುನ್ನ ಪ್ರಜೆಗಳೇ ಪ್ರಭುಗಳುಒಮ್ಮೆ ಗೆದ್ದ ಬಳಿಕ ಪ್ರಜೆಗಳೆಂಬ ಪ್ರಭುಗಳು ಬೀದಿನಾಯಿಗಳಾಗುತ್ತಾರೆಗೆದ್ದವರೇ ಪ್ರಭುಗಳಾಗಿ ತಾನುಂಟೋ ಮೂರು ಲೋಕವುಂಟೋ ಎಂದು ಬೀಗುತ್ತಾರೆರಾಜಕೀಯ ಗದ್ದುಗೆ ಏರಲು ಏಣಿಗಳಾಗಿ ನೆರವಿತ್ತ ಪ್ರಜೆಗಳು ಕಾಲ ಕಸವಾಗುತ್ತಾರೆಅನಂತರ ಈ ಪ್ರಜೆಗಳ ನೆನಪಾಗುವುದು ಮತ್ತೆ ವರ್ಷಗಳ ನಂತರವೇಓಟಿಗಾಗಿ ಸ್ವರ್ಗವನ್ನೇ ಧರೆಗಿಳಿಸುವ ಉಮೇದುವಾರರಿಗೆ ಮತದಾರರು ಈ ಬಾರಿ ಕೊರಳುಪಟ್ಟಿ ಹಿಡಿದು ಪ್ರಶ್ನೆಗಳನ್ನು ಕೇಳಲೇಬೇಕು.

ರಾಜ್ಯದಲ್ಲಿ ಮೂಲೆ ಪಾಲಾಗಿದ್ದ ಬಡಪಾಯಿ ಪ್ರಜೆಗಳು ಮತ್ತೆ ಪ್ರಭುಗಳಾಗುವ ಸನ್ನಿವೇಶ ಸನ್ನಿಹಿತವಾಗಿದೆ. ಮೇ 5ರಂದು ಈ ಬಡಪಾಯಿ ಪ್ರಜೆಗಳು ಮತ್ತೆ ಪ್ರಭುಗಳಾಗಿ ಮೆರೆಯಲಿದ್ದಾರೆ. ಆದರೆ ಅದು ಕೇವಲ ಆ ದಿನದ ಮಟ್ಟಿಗೆ ಮಾತ್ರ! ಮೇ 6ರಂದು ‘ಪ್ರಭು’ಗಳನ್ನು ಕ್ಯಾರೇ ಅನ್ನುವವರೇ ಇರುವುದಿಲ್ಲ. ಇವರೆಲ್ಲ ‘ಏಕ್‌ದಿನ್‌ ಕಾ ಸುಲ್ತಾನ್‌’ ಪಾತ್ರ ನಿರ್ವಹಿಸುವ ಕಲಾವಿದರೆಂದು ಬೇಕಿದ್ದರೆ ಕರೆಯಬಹುದು. ಆದರೂ ಇವರು ಮೇ 5ರ ಮಟ್ಟಿಗೆ ಪ್ರಭುಗಳಾಗಿ ಮಿಂಚಲಿದ್ದಾರೆ. ಬಳಿಕ ಯಥಾಪ್ರಕಾರ ಬಡಪಾಯಿಗಳಾಗಿ ಮುಂಚೆ ಎಲ್ಲಿದ್ದರೋ ಅಲ್ಲೇ ಬದುಕನರಸುತ್ತಾ, ತುತ್ತು ಕೂಳಿಗಾಗಿ ಶ್ರಮಿಸುತ್ತಾ ಅದೇ ರಾಗ, ಅದೇ ಹಾಡು ಹೇಳುತ್ತಾ ದಿನ ದೂಡುವ ಕಾಯಕಕ್ಕೆ ಅಂಟಿಕೊಳ್ಳಬೇಕಾಗುತ್ತದೆ.

ಹೌದು, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗಾಗಿ ಮತ್ತೆ ಚುನಾವಣೆ ಬಂದಿದೆ. ಇದುವರೆಗೆ ಗದ್ದುಗೆಯಲ್ಲಿದ್ದವರು ಈ ಬಾರಿ ಮತ್ತೆ ಗದ್ದುಗೆ ಸಿಗುತ್ತದೋ ಇಲ್ಲವೋ ಎಂದು ಆತಂಕದಲ್ಲಿದ್ದರೆ, ಕಳೆದ ಬಾರಿ ಗದ್ದುಗೆ ಹಿಡಿಯಲಾಗದೆ ಸೋತು ಹಿಂದೆ ಸರಿದವರು ಈ ಬಾರಿ ಹೇಗಾದರೂ ಮಾಡಿ ಗದ್ದುಗೆ ಹಿಡಿಯಲೇಬೇಕೆಂದು ಹಠ ತೊಟ್ಟು ಉತಾ್ಸಹದಿಂದ ಕಣಕ್ಕೆ ಧುಮುಕಿದ್ದಾರೆ. ಗೆದ್ದರೆ ದೇವಲೋಕವನ್ನೇ ಧರೆಗಿಳಿಸುತ್ತೇವೆ, ನಿಮಗೆ ಬೇಕಾದ್ದೆಲ್ಲವನ್ನೂ ಕೊಡುತ್ತೇವೆ… ಇತ್ಯಾದಿ ಮತದಾರರಿಗೆ ನಾನಾ ಬಗೆಯ ಆಸೆ ಆಮಿಷ ಒಡ್ಡುತ್ತಾ ಮನೆ ಬಾಗಿಲಿಗೆ ಅಂಡಲೆಯತೊಡಗಿದ್ದಾರೆ. ಒಂದು ಪಕ್ಷದಿಂದ ಗ್ಯಾರಂಟಿಯಾಗಿ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿ ಗೆದ್ದೇ ಬಿಟ್ಟೆವು ಎಂದು ಬೀಗುತ್ತಿದ್ದ ಕೆಲವರು ಟಿಕೆಟ್‌ ಸಿಗದೆ ನಿರಾಶರಾಗಿ, ಟಿಕೆಟ್‌ ಸಿಗಬಲ್ಲ ಪಕ್ಷಕ್ಕೆ ಜಿಗಿದು, ಅಲ್ಲಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಇಂತಹ ಕೆಲಮಂದಿಗೆ ಎಲ್ಲೀ ಒಂದು ಕಡೆ ಟಿಕೆಟ್‌ ಕೂಡ ದೊರೆತಿದೆ. ಆದರೆ ಗೆಲುವು ದೊರಕುತ್ತದೋ ಇಲ್ಲವೋ… ಅದು ಮಾತ್ರ ಗೊತ್ತಾಗುವುದು ಮೇ 7ರಂದೇ!

ಚುನಾವಣೆ ಬಂದೊಡನೆ ಉಮೇದುವಾರರು ಎಂತೆಂತಹ ಮುಖವಾಡ ತೊಟ್ಟು ಬರುತ್ತಾರೆ, ಎಂತೆಂತಹ ಸ್ವರ್ಗ ಸುಖದ ಆಮಿಷದ ತಟ್ಟೆಯನ್ನು ಮುಂದೆ ಚಾಚುತ್ತಾರೆ, ಮತದಾರರನ್ನು ಯಾವ ಪರಿ ಮೋಡಿ ಮಾಡುತ್ತಾರೆ ಎಂಬುದು ಪ್ರಜೆಗಳಿಗೆ ತಿಳಿಯದ ಸಂಗತಿಯೇನಲ್ಲ. 1963ರಷ್ಟು ಹಿಂದೆಯೇ ಕವಿ ಎಂ. ಗೋಪಾಲಕೃಷ್ಣ ಅಡಿಗರು ಇಂತಹ ರಾಜಕೀಯ ಉಮೇದುವಾರರ ಬಗ್ಗೆ ‘ಬರುತ್ತಾರೆ’ ಎಂಬ ಸುಂದರ ಕವನದಲ್ಲಿ ಮನೋಜ್ಞವಾಗಿ, ವಿಡಂಬನಾತ್ಮಕವಾಗಿ ವಿವರಿಸಿದ್ದರು :

ಗಡ್ಡ ಮೀಸೆ ಕಟ್ಟಿಕೊಂಡು

ತಲೆಗೆ ಟೋಪಿ ಇಟ್ಟುಕೊಂಡು

ಕಚ್ಚೆ ಪಂಚೆ ಪೈಜಾಮೋ ಶೇರ್ವಾನಿಯೋ ಸುರವಾಲೋ

ಉಟ್ಟು ತೊಟ್ಟು,

ಋಷಿಮುನಿ ಮುಖವಾಡ ತೊಟ್ಟು,

ಠಾಕು ಠೀಕು ರೆಕು ಶೋಕು

ಉರುಬು ಜರುಬು, ಡಬ್ಬು ಡವುಲು,

ಮರಕಾಲಿರೆ ಔನ್ನತ್ಯಕ್ಕೆ,

ಧ್ವನಿವರ್ಧಕ ಗಂಟಲೊಳಗೆ;

ತಾನೆ ಮಂತ್ರಿ, ಶಾಸಕ, ಪರಿಣತ, ಜನಗಣನಾಯಕ

ಎಂದು ಹಲಗೆ ಹಚ್ಚಿಕೊಂಡು

ಬರುತ್ತಾರೆ, ಬರುತ್ತಾರೆ;

ಊರೂರಿಗೆ ಗುಂಡು, ಗುಂಡು

ಅಂಡಲೆವೀ ದಂಡಕಂಡು

ನಗು ಬರುತ್ತದಯ್ಯ ನನಗೆ.

…………………………..

ಬಲ್ಲಿದರನ್ನೊತ್ತಿ ತುಳಿದು ಬಡವಗೆ ಕೈಕೊಟ್ಟವರು;

ಚಿಂತಕರನ್ನೊರಸಲಿಕ್ಕೆ ಬೀದಿಕೂಗ ಮಸೆದವರು,

ಮೂರು ಬಾರಿ ನಾಡ ಸೋಸಿ ಮರಳಿ ಪಟ್ಟವೇರಿದವರು,

ಆಹಾ ಮಹಾಪುರುಷರು;

ಉಪವಾಸದಿಸಮ್ಮ ಹಿಡಿದು ತೃಪ್ತಿತೇಗ ಬರಿಸುವವರು,

ಸಾಲ ಮಾಡಿ ತುಪ್ಪ ತಿಂದು ನಮ್ಮ ಮೂತಿಗೊರಸಿದವರು,

ಯೋಜನೆಗಳ ಯಜ್ಞದಲ್ಲಿ ವಪೆಯ ರುಚಿಯನರಿತವರು,

ಕಾನೂನಿನ ಗಾಣದಿಂದ ಮರಳಿನೆಣ್ಣೆ ತೆಗೆಯುವವರು,

ಕತ್ತೆ ಕುದುರೆಯಾಗುವಂತೆ, ಹುಲಿ ಹೊಟ್ಟನ್ನುಣ್ಣುವಂತೆ

ನೆಲವೆ ನಾಕವಾಗುವಂತೆ, ನಾಯಿಬಾಲ ನಿಗುರುವಂತೆ

ಮಾಡಬಲ್ಲ ದೊಂಬರು.

……………………………

ಅಡಿಗರು 1963ರಷ್ಟು ಹಿಂದೆಯೇ ಬರೆದ ಆ ಕವನದ ಪ್ರತಿಯೊಂದು ಅಕ್ಷರವೂ ಇಂದಿಗೂ ಅರ್ಥಪೂರ್ಣವಾಗಿದೆ. ರಾಜಕಾರಣಿಗಳ ಬಗ್ಗೆ ಅವರ ಅಭಿಮತದಲ್ಲಿ ಈಗಲೂ ಯಾವ ಬದಲಾವಣೆಯಾಗಿಲ್ಲ. ರಾಜಕಾರಣಿಗಳ ಬಗ್ಗೆ ಅದು ಕೇವಲ ಅಡಿಗರ ಇಂಗಿತವಾಗಿರದೆ ಇಡೀ ಲೋಕದ ಅಭಿಮತವೇ ಆಗಿದೆ.

ಇದುವರೆಗೆ ಪರಸ್ಪರ ಒಬ್ಬರ ವಿರುದ್ಧ ಇನ್ನೊಬ್ಬರು ಕೂಗಾಡುತ್ತಾ, ಒಬ್ಬರ ವಿರುದ್ಧ ಇನ್ನೊಬ್ಬರು ಕತ್ತಿ ಮಸೆಯುತ್ತಾ, ಒಬ್ಬರ ಕಾಲನ್ನು ಇನ್ನೊಬ್ಬರು ಹಿಡಿದೆಳೆಯುತ್ತಾ ಕಾಲಹರಣ ಮಾಡಿ, ಜನಕಲ್ಯಾಣದತ್ತ ಮುಖ ತಿರುಗಿಸಿ, ‘ಸ್ವಂತ ಕಲ್ಯಾಣ’ದ ಕಡೆಗೇ ಗಮನ ಕೇಂದ್ರೀಕರಿಸಿದ ನಾಯಕರು ಈಗ ಮತ್ತೆ ಮತ ಭಿಕ್ಷೆಗಾಗಿ ಜನರ ಬಳಿ ಎಡತಾಕುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಸಾಮಾನ್ಯ ಜನರನ್ನು ಕಣ್ಣೆತ್ತಿಯೂ ನೋಡದ, ತಮ್ಮ ಮನೆಯಂಗಳಕ್ಕೆ ಬಂದ ದೀನ ಮತದಾರರ ಕಷ್ಟಸಂಕಟಗಳೇನೆಂದು ಕೇಳುವ ಗೋಜಿಗೂ ಹೋಗದ ಇದೇ ರಾಜಕಾರಣಿಗಳಿಗೆ ಈಗ ಅದೇ ಜನಸಾಮಾನ್ಯರು ದೇವತೆಗಳಾಗಿ, ತಮ್ಮ ಉದ್ಧಾರಕರಾಗಿ, ತಮ್ಮ ಭವಿಷ್ಯದ ಭಾಗ್ಯದೇವತೆಗಳಾಗಿ ಕಂಡುಬರುತ್ತಿರುವುದು ಎಂತಹ ಚೋದ್ಯ! ಪ್ರಜಾತಂತ್ರ ವ್ಯವಸ್ಥೆಯ ವಿಪರ್ಯಾಸಗಳಲ್ಲಿ ಇದೂ ಒಂದಲ್ಲವೆ!

ರಾಜಕಾರಣವೇ ಹಾಗೆ. ಚುನಾವಣೆಯಲ್ಲಿ ಗೆಲ್ಲುವ ಮುನ್ನ ಪ್ರಜೆಗಳೇ ಪ್ರಭುಗಳು. ಒಮ್ಮೆ ಗೆದ್ದ ಬಳಿಕ ಪ್ರಜೆಗಳೆಂಬ ಪ್ರಭುಗಳು ಬೀದಿ ನಾಯಿಗಳಾಗುತ್ತಾರೆ. ಗೆದ್ದವರೇ ಪ್ರಭುಗಳಾಗಿ ತಾನುಂಟೋ ಮೂರು ಲೋಕವುಂಟೋ ಎಂದು ಬೀಗುತ್ತಾರೆ. ರಾಜಕೀಯ ಗದ್ದುಗೆ ಏರಲು ಏಣಿಗಳಾಗಿ ನೆರವಿತ್ತ ಪ್ರಜೆಗಳು ಕಾಲಕಸವಾಗುತ್ತಾರೆ. ಅನಂತರ ಈ ಪ್ರಜೆಗಳ ನೆನಪಾಗುವುದು ಮತ್ತೆ 5 ವರ್ಷಗಳು ಕಳೆದ ನಂತರವೇ! ಹೀಗೆ ಯಾರನ್ನೀ ಶಾಸಕರನ್ನಾಗಿಸುವುದಕ್ಕೆ, ಯಾರನ್ನೀ ಸಚಿವರನ್ನಾಗಿಸುವುದಕ್ಕೆ, ಯಾರದೋ ಸುಂದರ ಭವಿಷ್ಯ ಕಟ್ಟಿಕೊಡುವುದಕ್ಕೆ ಈ ಪ್ರಜೆಗಳೆಂಬ ಪ್ರಭುಗಳು ಪ್ರತಿ 5 ವರ್ಷಕ್ಕೊಮ್ಮೆ ಮತಗಟ್ಟೆಗೆ ಬಂದು ಮತಚಲಾಯಿಸುತ್ತಲೇ ಇರಬೇಕು. ಮತಚಲಾವಣೆ ಮಾತ್ರ ಇವರ ಹಕ್ಕು. ಮತಪಡೆದು ಗೆದ್ದ ಅಭ್ಯರ್ಥಿಗಳು ನಿರೀಕ್ಷೆಯಂತೆ ನಡೆದುಕೊಳ್ಳದಿದ್ದರೆ, ಜನಪರ ಕಾರ್ಯ ಮಾಡದಿದ್ದರೆ ಕೇಳುವ ಹಕ್ಕು ಇವರಿಗೇಕಿಲ್ಲ? ಪ್ರಜೆಗಳಿಂದ ಓಟು ಕೇಳುವ ಹಕ್ಕು ಹೊಂದಿದ ಉಮೇದುವಾರರಿಗೆ ಓಟು ಕೊಟ್ಟ ಮತದಾರರ ಯೋಗಕ್ಷೇಮ ಕಾಪಾಡುವ ಕರ್ತವ್ಯ ಏಕಿಲ್ಲ?

ಈಗಂತೂ ಮನೆಮನೆಗೆ, ಗಲ್ಲಿಗಲ್ಲಿಗೆ ಉಮೇದುವಾರರು ಸಾಲುಗಟ್ಟಿ ಬಂದು ನಗದು ಹಣ, ಸೀರೆ, ಒಡವೆ, ಮಿಕ್ಸಿ, ಗ್ರೈಂಡರ್, ಮೊಬೈಲ್‌, ಗುಂಡು, ತುಂಡು… ಹೀಗೆ ಏನೇನೋ ಆಮಿಷಗಳನ್ನೊಡ್ಡುವ ದೃಶ್ಯ ಸಾಮಾನ್ಯ. ಚುನಾವಣಾ ನೀತಿ ಸಂಹಿತೆ ಈ ಬಾರಿ ಬಹಳ ಬಿಗಿಯಾಗಿದೆ. ಹಾಗಾಗಿ ಉಮೇದುವಾರರ ಆಟ ನಡೆಯೋದಿಲ್ಲ ಎಂದು ಹೇಳಲಾಗುತ್ತಿದ್ದರೂ ಇದು ಪ್ರತಿ ಬಾರಿಯೂ ಕೇಳಿಬರುವ ಅದೇ ಸವಕಲು ಮಾತು ಎಂದೆನಿಸದೇ ಇರದು. ಏಕೆಂದರೆ ಚುನಾವಣಾ ಆಯೋಗ ಚಾಪೆ ಕೆಳಗೆ ತೂರಿದರೆ ರಾಜಕೀಯ ಪಕ್ಷಗಳ ಉಮೇದುವಾರರಿಗೆ ರಂಗೋಲೆ ಕೆಳಗೆ ತೂರುವ ವಿದ್ಯೆ ಕರತಲಾಮಲಕ. ಬಂಟಿಂಗ್‌ ಕಟ್ಟಬಾರದು, ಬ್ಯಾನರ್ ಹಾಕಬಾರದು, ಮಾಧ್ಯಮಗಳಲ್ಲಿ ಜಾಹೀರಾತು ನೀಡಿದರೆ ಅದು ಅಭ್ಯರ್ಥಿಗಳ ಲೆಕ್ಕಕ್ಕೇ ಸೇರುತ್ತದೆ, ಮತದಾರರಿಗೆ ಆಸೆ ಆಮಿಷವೊಡ್ಡಿದರೆ, ವಸ್ತುಗಳನ್ನು ನೀಡಿದರೆ ವಿಚಕ್ಷಣಾ ದಳ ಕಣ್ಣಿಟ್ಟು ಕಾಯುತ್ತದೆ… ಇತ್ಯಾದಿ ಅದೆಷ್ಟೇ ಬಿಗಿಯಾದ ನಿರ್ಬಂಧಗಳಿದ್ದರೂ ಅಭ್ಯರ್ಥಿಗಳಿಗೆ ಅದೆಲ್ಲ ಲೆಕ್ಕಕ್ಕೇ ಇಲ್ಲ. ನಿರ್ಬಂಧಗಳು ಹೆಚ್ಚಾದಷ್ಟೂ ಅಭ್ಯರ್ಥಿಗಳ ‘ಮತದಾರರನ್ನು ಒಲಿಸಿಕೊಳ್ಳುವ ತಂತ್ರಗಾರಿಕೆ’ಗೆ ಮತ್ತಷ್ಟು ರಂಗೇರುತ್ತದೆ. ಹೊಸ ಹೊಸ ತಂತ್ರಗಾರಿಕೆ ಶುರುವಿಟ್ಟುಕೊಳ್ಳುತ್ತದೆ. ಕಳೆದ ಬಾರಿ ಒಂದು ಉಪಚುನಾವಣೆಯಲ್ಲಿ ಆಯೋಗದ ಬಿಗಿಯಾದ ನೀತಿಸಂಹಿತೆ ಇದ್ದರೂ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಅದರಿಂದ ಬಾಧಕವೇನೂ ಆಗಲಿಲ್ಲ. ಆಡಳಿತ ಪಕ್ಷಕ್ಕೆ ಸೇರಿದ ಈ ಅಭ್ಯರ್ಥಿ ಗೆಲ್ಲುವ ಭರವಸೆ ಏನೂ ಇರಲಿಲ್ಲ. ಆದರೆ ಆಡಳಿತ ಪಕ್ಷದ ಸಚಿವರೊಬ್ಬರು ಚುನಾವಣೆಗೆ ಎರಡು ದಿನ ಮೊದಲು ತಮ್ಮ ಅಭ್ಯರ್ಥಿಗೆ ಖಂಡಿತ ಓಟು ಕೊಡಲಾರರು ಎಂದು ಅನುಮಾನವಿದ್ದ ಸಹಸ್ರಾರು ಮತದಾರರ ಗುರುತು ಚೀಟಿಗಳನ್ನು ಸಂಗ್ರಹಿಸಿದರು. ಮತದಾನ ಮುಗಿದ ಬಳಿಕ ಅದನ್ನೆಲ್ಲ ವಾಪಸ್‌ ಕೊಡುವುದಾಗಿ ಭರವಸೆ ಇತ್ತರು. ಹೀಗೆ ಗುರುತು ಚೀಟಿಗಳನ್ನು ಕೊಟ್ಟಿದ್ದಕ್ಕೆ ಪ್ರತಿಯೊಬ್ಬ ಮತದಾರರಿಗೆ ಒಂದಿಷ್ಟು ‘ಪುಡಿಗಾಸು’ ಕೂಡ ಸಿಕ್ಕಿತ್ತು. ದುಡ್ಡಿನ ಮುಖವನ್ನೇ ಕಾಣದ ಆ ಮತದಾರರಿಗೆ ಅಷ್ಟು ಪುಡಿಗಾಸು ಸಿಕ್ಕಿದ್ದು ಹಸಿದವರಿಗೆ ಮೃಷ್ಟಾನ್ನ ಭೋಜನ ಸಿಕ್ಕಿದಂತಾಗಿತ್ತು. ಗುರುತು ಚೀಟಿ ವಶಪಡಿಸಿಕೊಳ್ಳುವ ಮೂಲಕ ತಮ್ಮ ಪವಿತ್ರ ಮತದಾನದ ಹಕ್ಕನ್ನೇ ಕಿತ್ತುಕೊಳ್ಳುತ್ತಿದಾ್ದರೆ ಎಂಬ ಸತ್ಯ ಆ ಬಡಪಾಯಿ ಮತದಾರರ ಅರಿವಿಗೆ ಬರಲೇ ಇಲ್ಲ. ಪರಿಣಾಮವಾಗಿ ಆಡಳಿತ ಪಕ್ಷಕ್ಕೆ ಸೇರಿದ ಆ ಅಭ್ಯರ್ಥಿ ಗೆದ್ದೇ ಬಿಟ್ಟರು. ಅವರು ಗೆದ್ದಿದ್ದು ವಿರೋಧ ಪಕ್ಷದ ಮತಗಳು ಚಲಾವಣೆಯಾಗದಿದ್ದುದರಿಂದ! ಹೇಗಿದೆ ಕರಾಮತ್ತು! ಇಂತಹ ಐಡಿಯಾ ರಾಜಕಾರಣಿಗಳಿಗಲ್ಲದೆ ಇನ್ನಾರಿಗೆ ಹೊಳೆಯಲು ಸಾಧ್ಯ? ನೀತಿಸಂಹಿತೆ ಇಂತಹ ಕರಾಮತ್ತಿಗೆ ಕಡಿವಾಣ ಹಾಕಲು ಹೇಗೆ ಸಾಧ್ಯ? ಚುನಾವಣಾ ಆಯೋಗಕ್ಕೆ ವಿಷಯ ತಿಳಿದರೂ ಏನೂ ಮಾಡಲಾಗದ ಅಸಹಾಯಕತೆ. ಅದಕ್ಕೇ ಹೇಳಿದ್ದು ಆಯೋಗ ಚಾಪೆ ಕೆಳಗೆ ತೂರಿದರೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ರಂಗೋಲೆ ಕೆಳಗೆ ತೂರಬಲ್ಲರು ಎಂದು.

ಓಟಿಗಾಗಿ ಸ್ವರ್ಗವನ್ನೇ ಧರೆಗಿಳಿಸುವ ಉಮೇದುವಾರರಿಗೆ ಈ ಬಾರಿ ಮತದಾರರು ಈ ಕೆಳಗಿನ ಪ್ರಶ್ನೆಗಳನ್ನು ಕೊರಳುಪಟ್ಟಿ ಹಿಡಿದು ಕೇಳಲೇಬೇಕು.

  • ಚುನಾವಣೆಯಲ್ಲಿ ಗೆದ್ದ ಬಳಿಕ ನೀವೇಕೆ ಮತ್ತೆ ನಮ್ಮನ್ನು ನೋಡಲು ಬರುವುದಿಲ್ಲ? ನಮ್ಮ ಕಷ್ಟ ಸಂಕಟಗಳಿಗೆ ನೀವೇಕೆ ಧ್ವನಿಯಾಗುವುದಿಲ್ಲ? ವಿಧಾನ ಸೌಧದ ಬಳಿ, ಶಾಸಕರ ಭವನದ ನಿಮ್ಮ ಕೊಠಡಿಯ ಬಳಿ ಅಥವಾ ನಿಮ್ಮ ಸರ್ಕಾರೀ ಬಂಗಲೆಯ ಬಳಿ ನಮ್ಮ ಕಷ್ಟಸುಖಗಳನ್ನು ಹೇಳಿಕೊಳ್ಳಲು ಬಂದರೆ ನೀವೇಕೆ ನಮ್ಮನ್ನು ಕ್ಯಾರೇ ಅನ್ನುವುದಿಲ್ಲ? ಸಾಹೇಬರು ಮೀಟಿಂಗ್‌ನಲ್ಲಿದ್ದಾರೆಂದೋ, ಸಾಹೇಬರು ಊರಲ್ಲಿಲ್ಲವೆಂದೋ ನಿಮ್ಮ ಪಿಎಗಳು ನಮ್ಮನ್ನೇಕೆ ಸುಳ್ಳು ಹೇಳಿ ಸಾಗ ಹಾಕುತ್ತಾರೆ?ಉಳ್ಳವರ ಬಳಿ ಲಂಚ ಪಡೆದು ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ನೀವು ಕುಡಿಯುವ ನೀರಿಗಾಗಿ ಪ್ರತಿನಿತ್ಯ ಬವಣೆ ಪಡುತ್ತಿರುವ, ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಪರದಾಡುತ್ತಿರುವ ನಮಗೆ ನೀರಿನ ಸೌಲಭ್ಯ, ನಮ್ಮ ಮಕ್ಕಳಿಗೆ ಸಾಮಾನ್ಯ ಶಿಕ್ಷಣದ ಸೌಲಭ್ಯ ಒದಗಿಸಲು ಏಕೆ ಪ್ರಯತ್ನಿಸುವುದಿಲ್ಲ? ಹಾಗೆ ಮಾಡುವುದರಿಂದ ನಿಮಗೆ ಅಷ್ಟಾಗಿ ಆರ್ಥಿಕ ಪ್ರಯೋಜನ ಇಲ್ಲವೆಂದೆ?
  • ಹಿಂದೆಲ್ಲ ಜನಪ್ರತಿನಿಧಿಗಳು ನಮ್ಮಂತೆಯೇ ನಮ್ಮೊಂದಿಗೇ ಇರುತ್ತಿದ್ದರು. ನಮ್ಮಂತೆಯೇ ಬಸ್ಸುಗಳಲ್ಲೇ ಓಡಾಡುತ್ತಿದ್ದರು. ಆದರೀಗ ಚುನಾವಣೆಯಲ್ಲಿ ಗೆದ್ದವರ ಸುತ್ತ ಹತ್ತೆಂಟು ವಿಲಾಸೀ ಕಾರುಗಳು, ಪರಾಕು ಪಂಪೊತ್ತುವ ಭಟ್ಟಂಗಿಗಳು, ಯೂನಿಫಾರಂ ಹಾಕಿದ ಅಂಗರಕ್ಷಕರು, ಸಫಾರಿ ಧರಿಸಿದ ಗೂಂಡಾಗಳು, ಗನ್‌ಮ್ಯಾನ್‌ಗಳು ಸುತ್ತುವರೆದು ನಮ್ಮಂಥವರು ಯಾರೂ ಹತ್ತಿರ ಸುಳಿಯದಂತೆ ಠಳಾಯಿಸುವುದೇಕೆ? ನಿಮ್ಮನ್ನು ಇವರ್ಯಾರ ಹಂಗಿಲ್ಲದೆ ನೇರವಾಗಿ, ಮುಖಾಮುಖಿ ನೋಡಲು ಸಾಧ್ಯವಾಗುವುದಿಲ್ಲವೇಕೆ?
  • ವಿಧಾನ ಸೌಧವೆಂದರೆ ಅದು ಪ್ರಜಾತಂತ್ರದ ದೇಗುಲವೆಂಬುದು ನಮ್ಮೆಲ್ಲರ ನಂಬಿಕೆ. ವಿಧಾನಸಭೆಯಲ್ಲಿ ನಡೆಯುವ ಕಲಾಪಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಜನಪರ ಅಭಿವೃದ್ಧಿ ಕಾರ್ಯಗಳಾಗುಂತೆ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಾಗಿರುವುದು ಜನಪ್ರತಿನಿಧಿಗಳಾದ ನಿಮ್ಮ ಕರ್ತವ್ಯ. ಆದರೆ ಕಲಾಪ ನಡೆಯುತ್ತಿರುವಾಗ ನೀವು ಮಾಡುತ್ತಿರುವುದಾದರೂ ಏನು? ಕಲಾಪಕ್ಕೆ ಹಾಜರಾಗದೆ ಹೊರಗೆಲ್ಲೀ ಸುತ್ತುತ್ತಲೋ, ಕಲಾಪಕ್ಕೆ ಹಾಜರಾಗಿದ್ದರೂ ನಿಮ್ಮ ಮೊಬೈಲ್‌ಗಳಲ್ಲಿ ನೋಡಬಾರದ್ದನ್ನು ನೋಡುತ್ತಲೋ ಅಥವಾ ಪಕ್ಕದಲ್ಲಿ ಕುಳಿತ ಶಾಸಕರ ಜೊತೆ ಪಟ್ಟಾಂಗ ಹೊಡೆಯುತ್ತಲೋ, ಅದೂ ಅಲ್ಲದಿದ್ದರೆ ಬೇಜವಾಬ್ದಾರಿಯಿಂದ ನಿದ್ದೆ ಮಾಡುತ್ತಲೋ ಕಾಲಹರಣ ಮಾಡುತ್ತೀರಲ್ಲ, ಇದು ನ್ಯಾಯವೆ? ನಿಮ್ಮನ್ನು ಗೆಲ್ಲಿಸಿದ ಮತದಾರ ಪ್ರಭುವಿಗೆ ಮಾಡುವ ಅಪಚಾರ ಇದಲ್ಲವೆ? 5 ವರ್ಷಗಳಲ್ಲಿ ಒಮ್ಮೆ ಕೂಡ ನಿಮ್ಮ ಕ್ಷೇತ್ರದ ಆಗುಹೋಗುಗಳ ಕುರಿತು ಒಂದೇ ಒಂದು ಪ್ರಶ್ನೆ ಕೇಳದೆ, ಆದರೆ ಸರ್ಕಾರ ನೀಡುವ ತುಟ್ಟಿ ಭತ್ಯೆಗಳನ್ನು ಮಾತ್ರ ತಪ್ಪದೇ ಜೇಬಿಗಿಳಿಸಿ ಬರುವ ನೀವು ಯಾವ ಪುರುಷಾರ್ಥ ಸಾಧನೆಗಾಗಿ ಶಾಸಕರಾಗಬೇಕೆಂದು ಹಂಬಲಿಸುತ್ತೀರಿ?
  • ಶಾಸಕರೆಂದರೆ ಅದೊಂದು ಗೌರವಾನ್ವಿತ ಸ್ಥಾನ. ಲಕ್ಷಾಂತರ ಮತದಾರರನ್ನು ಪ್ರತಿನಿಧಿಸುವ, ಅವರ ಆಸೆ ಆಕಾಂಕ್ಷೆಗಳಿಗೆ ಧ್ವನಿಯಾಗುವ ಜವಾಬ್ದಾರಿಯುತ ಹುದ್ದೆ. ಆದರೆ ನೀವಾದರೋ ಇದಕ್ಕೆ ವ್ಯತಿರಿಕ್ತವಾಗಿ ನಿಮ್ಮ ಸ್ವಾರ್ಥಕ್ಕಾಗಿ ಲಂಚ, ರುಷುವತ್ತು, ಅಕ್ರಮ ಜಮೀನು, ಐಷಾರಾಮೀ ಬಂಗಲೆ, ಕಾರು ಇತ್ಯಾದಿ ‘ಸಂಪಾದನೆ’ಯಲ್ಲೇ ಕಾಲ ಕಳೆಯುತ್ತೀರಲ್ಲ, ನಿಮಗೆ ಒಂದಿಷ್ಟೂ ನಾಚಿಕೆ, ಅವಮಾನವಾಗುವುದಿಲ್ಲವೆ? ಅಕ್ರಮ ಸಂಪತ್ತು ಲೂಟಿ ಹೊಡೆದು, ಕೊನೆಗೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದು ಜೈಲುಪಾಲಾಗಿ, ಹೆಸರು ಕೆಡಿಸಿಕೊಂಡು ನಿಮ್ಮನ್ನು ಗೆಲ್ಲಿಸಿದ ನಮ್ಮ ಮುಖಕ್ಕೆ ಮಸಿ ಬಳಿಯುತ್ತೀರಲ್ಲ, ಆಗ ನಮಗಾಗುವ ನೋವು ಅದೆಷ್ಟು ಎಂಬುದನ್ನು ನೀವು ಬಲ್ಲಿರಾ? ನಿಮ್ಮ ಆ ‘ಪಾಪಕೃತ್ಯ’ದಲ್ಲಿ ನಮ್ಮನ್ನೂ ಶಾಮೀಲುಗೊಳಿಸುತ್ತೀರಲ್ಲ, ಇದೆಷ್ಟು ಸಮಂಜಸ? ನಿಮ್ಮ ಪಾಪಕೃತ್ಯಕ್ಕೆ ನಾವೇಕೆ ಶಾಮೀಲುದಾರರಾಗಬೇಕು? ಓಟು ಕೊಟ್ಟ ತಪ್ಪಿಗೆ ನಮಗೇಕೆ ಇಂತಹ ಶಿಕ್ಷೆ?
  • ಶಾಸಕರು, ಸಚಿವರಾದ ಬಳಿಕ ಆಗಾಗ ಅಧ್ಯಯನ ಪ್ರವಾಸಕ್ಕೆಂದು ವಿದೇಶ ಪ್ರವಾಸಗಳಿಗೆ ಸರ್ಕಾರಿ ಖರ್ಚಿನಲ್ಲಿ ನೀವು ಹೋಗುತ್ತೀರಷ್ಟೆ. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಅಲ್ಲಿ ಹೋಗಿ ಅಧ್ಯಯನ ಮಾಡಿ, ಆ ಅಧ್ಯಯನದ ಪರಿಣಾಮವಾಗಿ ನಮ್ಮ ಕ್ಷೇತ್ರದಲ್ಲೂ ಒಂದಿಷ್ಟು ಸುಧಾರಣೆಯಾದರೆ ನಿಮ್ಮ ಪ್ರವಾಸ ಸಾರ್ಥಕ, ಬಿಡಿ. ಆದರೆ ನೀವು ಮಾಡುತ್ತಿರುವುದೇನು? ಅಧ್ಯಯನಕ್ಕೆಂದು ವಿದೇಶಗಳಿಗೆ ಹೋದ ನೀವು ಅಲ್ಲಿ ಆಮೋದ – ಪ್ರಮೋದಗಳಲ್ಲಿ ನಿರತರಾಗಿ, ಪ್ರವಾಸದ ಉದ್ದೇಶವನ್ನೇ ಮರೆತು, ಮೈಮರೆತು ಏನೇನೋ ಮಾಡಿ ವಾಪಸ್‌ ಬಂದು ಸರ್ಕಾರಿ ಹಣವನ್ನು ಪೋಲು ಮಾಡುತ್ತೀರಲ್ಲ, ಇದು ಸರಿಯೆ? ನಿಮ್ಮ ಆತ್ಮಸಾಕ್ಷಿಗೆ (ಅದು ನಿಮಗೆ ಇದೆ ಎಂಬುದರ ಬಗ್ಗೆ ನಮಗೆಲ್ಲ ಬಲವಾದ ಅನುಮಾನವಿದೆ!) ಈ ಪ್ರಶ್ನೆಯನ್ನು ಎಂದಾದರೂ ಕೇಳಿಕೊಂಡಿದ್ದೀರಾ?
  • ಬೇರೆ ದೇಶಗಳಲ್ಲಿ ಸರ್ಕಾರಿ ಶಾಲೆ, ನೀರು, ವಿದ್ಯುತ್‌, ಶೌಚ ವ್ಯವಸ್ಥೆ, ಸರ್ಕಾರಿ ಆಸ್ಪತ್ರೆ, ಕಸ ವಿಲೇವಾರಿ, ರಸ್ತೆಗಳು, ಆಟದ ಮೈದಾನ, ಈಜುಕೊಳ, ಉದ್ಯಾನ, ಸಾರಿಗೆ ವ್ಯವಸ್ಥೆ, ಪೊಲೀಸ್‌ ಠಾಣೆ… ಇತ್ಯಾದಿ ಎಲ್ಲವೂ ಅಚ್ಚುಕಟ್ಟಾಗಿರುತ್ತವೆ, ವ್ಯವಸ್ಥಿತವಾಗಿರುತ್ತವೆ. ಅಕಸ್ಮಾತ್‌ ಈ ವ್ಯವಸ್ಥೆಗಳಲ್ಲಿ ದೋಷಗಳು ತಲೆಹಾಕಿದರೆ ತಕ್ಷಣ ಅದನ್ನು ಸರಿಪಡಿಸಲಾಗುತ್ತದೆ. ಆದರೆ ನಮ್ಮಲ್ಲೇಕೆ ಇವೆಲ್ಲ ಕೆಟ್ಟು ಕೆರಹಿಡಿದುಹೋಗಿದೆ? ಸರ್ಕಾರಿ ಶಾಲೆಗಳೆಂದರೆ ಯಾಕೆ ಎಲ್ಲರೂ ಮೂಗು ಮುರಿಯುತ್ತಾರೆ? ಸರ್ಕಾರಿ ಆಸ್ಪತ್ರೆಗಳಿಗೆ ಹೋಗಲು ಜನರೇಕೆ ಹೆದರುತ್ತಾರೆ? ನಮ್ಮ ಪೊಲೀಸ್‌ ಠಾಣೆಗಳಲ್ಲಿ ನಿರಪರಾಧಿ ಪ್ರಜೆಗಳಿಗೂ ಏಕೆ ನಿಷ್ಕಾರಣ ಬೈಗುಳ, ಕಿರಿಕಿರಿ? ಅನೇಕ ಆರೋಪಿಗಳು ಲಾಕಪ್‌ನಲ್ಲೇ ಏಕೆ ನಿಗೂಢವಾಗಿ ಸಾಯುತ್ತಾರೆ? ಪೊಲೀಸರೇಕೆ ಠಾಣೆಗೆ ಬಂದವರನ್ನು ಗೌರವಪೂರ್ವಕವಾಗಿ ಸ್ವಾಗತಿಸುವುದಿಲ್ಲ? ಮಹಿಳೆಯರೇಕೆ ಪೊಲೀಸ್‌ ಠಾಣೆಗೆ ಹೋಗಲು ಈಗಲೂ ಭಯಪಡುತ್ತಾರೆ?
  • ಚುನಾವಣೆಗೆ ಸ್ಪರ್ಧಿಸಿದಾಗ ಅತ್ಯಂತ ವಿನಯವಂತ, ಸದಾಚಾರದ ವ್ಯಕ್ತಿಯಾಗಿ ಗೋಚರಿಸುವ ನೀವು ಗೆದ್ದ ಬಳಿಕ ಲಂಗುಲಗಾಮಿಲ್ಲದೆ ಕೈ, ಬಾಯಿ, ಕಚ್ಚೆಗಳನ್ನು ಏಕೆ ಕೆಡಿಸಿಕೊಳ್ಳುತ್ತೀರಿ? ನೀವೆಷ್ಟೇ ಲೂಟಿ ಹೊಡೆದು ಆಸ್ತಿ ಸಂಪಾದಿಸಿದರೂ ಅದನ್ನೆಲ್ಲ ನೀವೇ ತಿನ್ನಲು ಸಾಧ್ಯವಿಲ್ಲ ಎಂಬುದು ನಿಮಗೆ ತಿಳಿದಿದೆಯೆ? ಕೊನೆಗೊಂದು ದಿನ, ಈ ಲೋಕಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ನೀವು ಲೂಟಿ ಹೊಡೆದ ಆ ಸಂಪತ್ತನ್ನೆಲ್ಲ ಜೊತೆಗೆ ತೆಗೆದುಕೊಂಡು ಹೋಗಲು ಸಾಧ್ಯವೆ?
  • ಯಾರನ್ನೀ ಉದ್ಧಾರ ಮಾಡುವುದಕ್ಕಾಗಿ, ಯಾರದೋ ಭವಿಷ್ಯವನ್ನು ಉಜ್ವಲಗೊಳಿಸುವುದಕ್ಕಾಗಿ, ಇನ್ಯಾರೋ ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯುವುದಕ್ಕಾಗಿ ದೈನೇಸಿಗಳಂತೆ ಸುಡುಬಿಸಿಲಿನಲ್ಲಿ ನಿಂತು, ಬೆವರು ಸುರಿಸಿ ನಿಮಗೆ ನಾವೇಕೆ ಓಟು ಹಾಕಬೇಕು?

ಇಂತಹ ಪ್ರಶ್ನೆಗಳನ್ನು ಮತದಾರರು ಉಮೇದುವಾರರಿಗೆ ಧೈರ್ಯವಾಗಿ ಕೇಳುವ ಮನಸ್ಸು ಮಾಡದಿದ್ದರೆ ಮತ್ತೆ ಇಂತಹ ನಾಲಾಯಕ್‌ ಮಂದಿಯೇ ಗೆದ್ದು ಬರುತ್ತಾರೆ. ಹಾಗಾಗದಿರಲಿ.