ಈ ಹಿರಿಯರ ಬಾಳಲ್ಲಿ ನಾವು ಕೇಶವರನ್ನು ಕಾಣುವಾ!

By Pradyumna P, Mysore

ಕಳೆದ ಭಾನುವಾರ (ಅಕ್ಟೋಬರ್ ೨೦, ೨೦೧೩) ಮೈಸೂರಿನಲ್ಲಿ ನಡೆದ ಒಂದು ಅಭಿನಂದನಾ ಕಾರ್ಯಕ್ರಮ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಗೆ ಮರೆಯಲಾಗದ ಪ್ರೇರಣಾದಾಯಿ ದಿನ. ಆ ದಿನ ಕಳೆದ ೬೦-೬೨ ವರ್ಷಗಳಿಂದ ತಮ್ಮ ಇಡೀ ಜೀವನವನ್ನು ಭಾರತ ಮಾತೆಯ ಪದತಲದಲ್ಲಿ ಅವಳ ಸೇವೆಗೆ ಮುಡಿಪಿಟ್ಟ ರಾಷ್ಟ್ರ ಸೇವಕರಿಗೆ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮ. ಮೈಸೂರಿನ ಶ್ರೀ ಶಂಕರ ಮಠದಲ್ಲಿ ೮೨ ಮೀರಿದ ಈ ಮಾನಸಿಕ ತರುಣರನ್ನು ವೇದಿಕೆಯಲ್ಲಿ ಕೂಡಿಸಿ, ಅವರ ಚೇತೋಹಾರಿ ಸಾಧನೆಯನ್ನು ಸ್ಮರಿಸಿದ ದಿನ. ಅಂದಿನಿಂದ ಇಂದಿನವರೆಗೂ ಸಂಘದ ಸಹಸ್ರಾರು ಕಾರ್ಯಕರ್ತರಿಗೆ ಸಂಘ ನಿಷ್ಠೆಯನ್ನು ಬೆಳೆಸಿ ಅವರಲ್ಲಿ ರಾಷ್ಟ್ರಪ್ರೇಮವನ್ನು ಮೇಳೈಸಿದ ಈ ಋಷಿಸದೃಶ ಮೇರು ವ್ಯಕ್ತಿತ್ವದ ಹಿರಿಯರು ತಮ್ಮ ಸಚ್ಚಾರಿತ್ರ್ಯ ನಿಶ್ಕಲಂಕ ಜೀವನದಿಂದ ಧವಳಪ್ರಾಯರಾಗಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿ ಮಾರ್ಗದರ್ಶನ ಮಾಡಿದವರು. ಈ ಹಿರಿಯರಿಗೆ ಕಿರಿಯರೆಲ್ಲರೂ ಸೇರಿ ಸಹಸ್ರ ಚಂದ್ರ ದರ್ಶನ ಶಾಂತಿ ಹೋಮಗಳ ಸಂಸ್ಕಾರ ಭರಿತ ಕಾರ್ಯಕ್ರಮವನ್ನು ಆಯೋಜಿಸಿ ಅವರಿಗೆ ತಮ್ಮ ಶ್ರದ್ಧಾಪೂರ್ವಕ ಕೃತಜ್ಞತೆಗಳನ್ನು ಸಮರ್ಪಿಸಿ ಕರ್ತವ್ಯ ಮೆರೆದ ದಿನ.

SAHASRACHANDRA DARSHAN
SAHASRACHANDRA DARSHAN

ಇವರೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರುಗಳು. ಸಂಘದ ಇಂದಿನ ಬೆಳವಣಿಗೆಗೆ ತಮ್ಮೆಲ್ಲಾ ಜೀವನವನ್ನು ಸಮರ್ಪಿಸಿ ಪುರುಷಾರ್ಥಮೆರೆದ ಮಾನ್ಯರಾದ ಶ್ರೀ ನ ಕೃಷ್ಣಪ್ಪನವರು, ಶ್ರೀ ಮೈಚಾ ಜಯದೇವರು, ಶ್ರೀ ಹರಿಭಾವುವಝೆಯವರು, ಶ್ರೀ ಕೃ ನರಹರಿಯವರು ಮತ್ತು ಶ್ರೀ ಕಾ.ಶ್ರೀ.ನಾಗರಾಜ್ ರವರು. ಮಾನ್ಯ ಶ್ರಿ ಜಯದೇವರವರು ಅನಾರೋಗ್ಯದ ನಿಮಿತ್ತ ಕಾಂiiಕ್ರಮದಲ್ಲಿ ಉಪಸ್ಥಿತರಿಲ್ಲದಿದ್ದರೂ ಅವರ ನೆನಪು ಕಾರ್ಯಕ್ರಮದುದ್ದಕ್ಕೂ ಮೂಡಿಬರುತ್ತಿದ್ದದ್ದು ಗಮನಾರ್ಹವಾಗಿತ್ತು.

ಈ ಎಲ್ಲಾ ಹಿರಿಯರೂ ಮೈಸೂರಿನವರೇ. ಮೈಸೂರಿನಲ್ಲಿ ಹುಟ್ಟಿಬೆಳೆದು, ತಮ್ಮ ವಿದ್ಯಾಭ್ಯಾಸದ ನಂತರ ಸಂಘದ ಪ್ರಚಾರಕರಾಗಿ ತಮ್ಮನ್ನು ದೇಶಕಾರ್ಯಕ್ಕೆ ಸಮರ್ಪಿಸಿಕೊಂಡಿದ್ದೂ ಮೈಸೂರಿನಿಂದಲೇ. ಅದರಲ್ಲಿ ಶ್ರೀ ಹರಿಭಾವೂವಝೆಯವರದ್ದು ಮಾತ್ರ ಸ್ವಲ್ಪ ಬಿನ್ನ. ಅವರು ಮಹಾರಾಷ್ಟ್ರದವರಾದರೂ ಮೈಸೂರನ್ನು ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡು ಸಂಘದ ಅನ್ಯಾನ್ಯ ಜವಾಬ್ದಾರಿಗಳನ್ನು ನಿರ್ವಹಿಸಿ ಮೈಸೂರು ವಿಭಾಗ ಪ್ರಚಾರಕರಾಗಿ ಪ್ರ್ರಾರಂಭದ ದಿನಗಳಲ್ಲಿ ಮೈಸೂರುನಗರದಲ್ಲಿ ಸಂಘಕಾರ್ಯವನ್ನು ಬೆಳೆಸಿದವರು. ಹೀಗಾಗಿ ಇವರುಗಳೆಲ್ಲರ ಸಹಸ್ರಚಂದ್ರ ದರ್ಶನ ಕಾರ್ಯಕ್ರಮ ಮೈಸೂರಿನ ನೆಲದಲ್ಲಾಗಿದ್ದು ಸಮಯೋಚಿತ ಹಾಗು ಸಾಂದರ್ಭಿಕ.

ಏನೀ ಸಹಸ್ರ ಚಂದ್ರ ದರ್ಶನ. ?

ವ್ಯಕ್ತಿಯ ಬದುಕಿನಲ್ಲಿ ೬೦ವರ್ಷಗಳ ಒಂದು ಮಂಡಲವನ್ನು ಪೂರೈಸಿದಾಗ ಉಗ್ರರಥ ಶಾಂತಿಯನ್ನು ಮತ್ತು ತನ್ನ ೭೦ನೇ ವರ್ಷಪೂರೈಸಿದ ಸಂದರ್ಭದಲ್ಲಿ, ಭೀಮರಥ ಶಾಂತಿಯನ್ನು ಆಚರಿಸಕೊಳ್ಳುತ್ತಾರೆ.  ಈ ಶಾಂತಿ ವ್ರತದ ಮೂಲಕ ತಮಗೆ ಎದುರಾಗಬಹುದಾದ ಎಲ್ಲಾ ರೀತಿಯ ಕಂಟಕಗಳು ದೂರವಾಗಿ ಸುಖ, ಸಂತೋಶ ಮತ್ತು ಶಾಂತಿಯಿಂದ ಬಾಳುವಂತಾಗುತ್ತದೆ ಎಂಬುದು ಹಿರಿಯರು ಕಂಡುಕೊಂಡ ಸತ್ಯ. ನಂತರದ ಹತ್ತು ವರ್ಷಗಳ ನಂತರ ಅಂದರೆ ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ೮೧ ವಸಂತಗಳನ್ನು ಪೂರೈಸಿದಾಗ ನಡೆಯುವ ಸಂಸ್ಕಾರ ಪ್ರಧಾನ ಕಾರ್ಯಕ್ರಮವೇ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮ. ಅವರ ಬದುಕಿನ ೮೧ ವರ್ಷ ಪೂರೈಸುವ (ನಾಲ್ಕು ವರ್ಷಕ್ಕೊಮ್ಮೆ ಬರುವ ಅಧಿಕಮಾಸಗಳೂ ಸೇರಿ) ಸಂದರ್ಭದಲ್ಲಿ ೧೦೦೦ ಪೂರ್ಣಚಂದ್ರ ದರ್ಶನವನ್ನು ಅವರು ಪಡೆದಿರುತ್ತಾರೆ.

ಹೀಗೆ ಪೂರ್ಣಬದುಕನ್ನು ಕಂಡಿರುವ ಹಿರಿಯರ ಆರೋಗ್ಯವಂತ ಬದುಕಿಗಾಗಿ ಅವರ ಮಕ್ಕಳು ಸಂಬಂಧೀಕರು ಸ್ನೇಹಿತರು, ಅವರಿಂದ ವಿದ್ಯೆ ಕಲಿತ ಶಿಷ್ಯಂದಿರು, ಉಪಕಾರ ಪಡೆದವರು ಎಲ್ಲರೂ ಒಟ್ಟಾಗಿ ಸೇರಿ  ಅವರವರ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಅನಿಷ್ಟ ಪೀಡಾ ಪರಿಹಾರರ್ಥವಾಗಿ, ಮನಃಸ್ಥಿತಿಯ ಏರಿಳಿತಗಳಿಂದ ಹೊರಬಂದು ಶಾಂತಿ ನೆಮ್ಮದಿಪಡೆಯಲು ಈ ಸಹಸ್ರ ಚಂದ್ರ ದರ್ಶನವೆಂಬ ವಿಷೇಶ ಪೂಜಾ ಕಾರ್ಯಕ್ರಮವನ್ನು ನಡೆಸುತ್ತಾರೆ. ಷಶ್ಟ್ಯಾಬ್ದಿಶಾಂತಿಯನ್ನು ಭೀಮರಥ ಶಾಂತಿಯನ್ನು ವ್ಯಕ್ತಿಗಳು ತಮಗೆ ತಾವೇ ಆಚರಿಸಿಕೊಂಡರೆ ಸಹಸ್ರ ಚಂದ್ರ ದರ್ಶನ ಶಾಂತಿಗಳನ್ನು ಮಕ್ಕಳು ಆಚರಿಸುವುದು ಈ ಕಾರ್ಯಕ್ರಮದ ವಿಶೇಷ.  ಈ ಪೂಜೆಯ ಅಧಿದೇವತೆ ಶ್ರೀ ಲಕ್ಷ್ಮೀನಾರಾಯಣರು ಹಾಗೂ ಸಹ ದೇವತೆಗಳು ಬ್ರಹ್ಮಾದಿ ಮಹೇಶ್ವರರು. ಇವರೇ ಎಲ್ಲಾ ಪೂಜೆಗಳನ್ನು ಸ್ವೀಕರಿಸುತ್ತಾರೆ. ಈ ಕಾರ್ಯಕ್ರಮಗಳ ಬೆನ್ನಿಗೇ ಅನೇಕ ದೇವತೆಗಳ ಅನುಗ್ರಹಕ್ಕಾಗಿ ಹೋಮ ಹವನಗಳೂ ನೆರವೇರುತ್ತವೆ. ವಿಶೇಷವೆಂದರೆ ಸಂಕಲ್ಪ ಮಾಡುವಸಮಯದಲ್ಲಿ ನಾವು ಸ್ಮರಿಸುವ ಕಾರ್ಯಗಳು ಸಿಧ್ದಿಸುತ್ತವೆ ಎಂಬ ನಂಬಿಕೆಯಿಂದಲೇ ಇಲ್ಲಿ ನಡೆದ ಸಹಸ್ರ ಚಂದ್ರ ದರ್ಶನಕಾರ್ಯಕ್ರಮ ರಾಷ್ಟ್ರೀಯ ಹಿತಾಕಾಂಕ್ಷೆಯಿಂದ ನೆರವೇರಿಸಿದ್ದು. ರಾಷ್ಟ್ರದ ಸಮೃದ್ದಿ, ಏಕತೆ ಮತ್ತು ರಕ್ಷಣೆಗಾಗಿ ಮತ್ತು ಹಿಂದೂ ಸಂಘಟನೆ ಕಾರ್ಯ ಕಂಟಕರಹಿತವಾಗಿ ಮುನ್ನಡೆಸಬೇಕೆಂಬ ಪ್ರಾರ್ಥನೆಯೊಂದಿಗೆ ಈ ದೈವಿಕ ಕಾರ್ಯಕ್ರಮವನ್ನು ಆಚರಿಸಲಾಯಿತು.

ಶಿವಮೊಗ್ಗೆಯ ಯುವ ಪುರೋಹಿತರಾದ ಶ್ರೀ ಜಿ ಪ್ರದೀಪ ನಾಡಿಗ್ ರವರ ಮುಂದಾಳುತ್ವದಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಏಲ್ಲಾ ಆಚರಣೆಗಳೂ ನೆರವೇರಿದವು. ಪುರೋಹಿತರಾದ ಶ್ರೀ ಪ್ರದೀಪರಂತೂ ಯಾವುದೇ ಧಾರ್ಮಿಕ ಆಚರಣೆಗಳಿಗೆ ಲೋಪಬಾರದಂತೆ, ವೇದ ಮಂತ್ರಗಳಿಂದ ಪವಮಾನ ಹೋಮ, ನವಗ್ರಹ ಹೋಮ, ಮೃತ್ಯಂಜಯ ಹೋಮ ಹಾಗೂ ಆಯುಶ್ಯ ಹೋಮಗಳನ್ನು ನೆರವೇರಿಸಿದ್ದು ಮಾತ್ರವಲ್ಲದೆ ಪ್ರತಿಯೊಂದು ಆಚರಣೆಯ ಮಹತ್ವವನ್ನು ನೆರೆದಿದ್ದ ಶ್ರದ್ಧಾವಂತರುಗಳಿಗೆ ಕನ್ನಡದಲ್ಲಿ ವಿವರಿಸುತ್ತಿದ್ದು ಹಾಗೂ ಈ ಎಲ್ಲಾ ಹೋಮಗಳನ್ನು ರಾಷ್ಟ್ರದ ಒಳಿತಿಗೆ ಅರ್ಪಿಸಿದುದು ಈ ಸಮಾರಂಭದ ಮತ್ತೊಂದು ವೈಶಿಷ್ಟ್ಯವಾಗಿತ್ತು.

ಈ ಕಾರ್ಯಕ್ರಮಕ್ಕೆ ಹೆಚ್ಚು ಶೋಭೆ ತಂದಿದ್ದು ಈ ಶಾಂತಿ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಾದ ಪಡೆದ ರಾಷ್ಟ್ರ ಸೇವಿಕ ಸಮಿತಿಯ ವಂದನೀಯ ಶಾಂತಕ್ಕ ಹಾಗೂ ಶ್ರೀ ಕೃ ನರಹರಿಯವರ ಅಕ್ಕ ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯವಾಹಿಕಾ ಆಗಿದ್ದ ೮೫ರ ಹರೆಯದ ವಂದನೀಯ ರುಕ್ಮಿಣಿಯಕ್ಕ, ಅಲ್ಲದೆ  ಶ್ರಿ ಕೃಷ್ಣಪ್ಪನವರ ಬಾಲ್ಯ ಸ್ನೇಹಿತರೂ, ಸರಸ್ವತಿ ಸಮ್ಮಾನ ಪುರಸ್ಕೃತರೂ, ಕೇಂದ್ರ ಸಾಹಿತ್ಯಕೆಡಮಿ ಪುರಸ್ಕೃತರೂ, ೨೨ ವಿಚಾರ ಪೂರಿತ ಕಾದಂಬರಿ ಕರ್ತರೂ ಆದ  ಶ್ರೀ ಎಸ್ ಎಲ್ ಭೈರಪ್ಪನವರು. ಇವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಕಳೆ ತಂದದ್ದು ಮಾತ್ರವಲ್ಲದೆ ಎಲ್ಲರನ್ನೂ ಪುಳಕಿತ ಗೊಳಿಸಿತ್ತು.

Sri marriage 876

ಕಾರ್ಯಕ್ರಮದಲ್ಲಿ ಸಂಘದ ದಕ್ಷಿಣ ಕ್ಷೇತ್ರದ ಪ್ರಚಾರಕರಾದ ಮಾನ್ಯ ಶ್ರೀ ಮಂಗೇಶ್ ಬೇಂಡೆ, ಕುಟುಂಬ ಪ್ರಬೋಧನದ ರಾಷ್ಟ್ರೀಯ ಸಂಚಾಲಕರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯಭಟ್, ಹಿರಿಯ ಪ್ರಚಾರಕರೂ ಕುಟುಂಬ ಪ್ರಬೋಧನದ ಪ್ರಮುಖರೂ ಆದ ಮಾನ್ಯ ಶ್ರೀ ಸು ರಾಮಣ್ಣ ನವರು, ನಮ್ಮ ಕರ್ನಾಟಕ ದಕ್ಷಿಣ ಪ್ರಾಂತ ಮಾನ್ಯ ಸಂಘಚಾಲಕರಾದ ಮಾ. ವೆಂಕಟರಾಮ್‌ರವರು, ಕರ್ನಾಟಕ ದಕ್ಷಿಣ ಹಾಗು ಉತ್ತರ ಪ್ರಾಂತದ ಅನೇಕ ಪ್ರಮುಖ ಸ್ವಯಂಸೇವಕರು ಕಾರ್ಯಕರ್ತರು, ಹಿತೈಷಿ ಮಿತ್ರರು ಮತ್ತು ಅಭಿನಂದಿತರ ಕುಟುಂಬವರ್ಗದವರೂ ಉಪಸ್ತಿತರಿದ್ದರು. ಜೊತೆಗೆ ನಮ್ಮ ನಡುವೆ ಚಟುವಟಿಕೆಯಿಂದ ಓಡಾಡಿಕೊಂಡಿರುವ ಅತ್ಯಂತ ಹಿರಿಯರಾದ ಶ್ರೀ ಬಾಬೂ ರಾಯರ ಉಪಸ್ಥಿತಿ ಎಲ್ಲರ ಗಮನ ಸೆಳೆದಿತ್ತು.

ಸಭೆಯಲ್ಲಿದ್ದ ಶ್ರದ್ಧೇಯ ಮಾತೆಯರು ಹಾಗು ಮಹನೀಯರೆಲ್ಲರ ನಡುವೆ ಕಳಶಪ್ರಾಯರಾಗಿ ಸಂಘದ ರಾಷ್ಟ್ರೀಯ ಸರಕಾರ್ಯವಾಹರಾದ ಮಾನ್ಯ ಭೈಯ್ಯಾಜಿ (ಸುರೇಶ್) ಜೋಶೀಜಿ ಅವರ ಮಾತುಗಳು ಅಲ್ಲಿ ನೆರೆದಿದ್ದವರೆಲ್ಲರಿಗೆ ವಿದ್ಯುತ್ ಸ್ಫರ್ಷ ಸಮಾನ ಭಾವನೆಗಲನ್ನು ಉದ್ದೀಪಿಸಿತು. ಶ್ರೀ ಭೈಯದಯಾಜಿ ಅವರು ನಾಗಪುರದಿಂದ ಈ ಕಾರ್ಯಕ್ರಮಕ್ಕೆಂದೇ  ಆಗಮಿಸಿದ್ದರು. ಆಯುಷ ಹೋಮದ ಪೂರ್ಣಆಹುತಿಯಲ್ಲಿ ಭಾಗವಹಿಸಿದರು ಅನಂತರ ’ನಿಮ್ಮ ಪಥವೆಮಗೆ ಬಾಳ ಬೆಳಕಾಗಲಿ’ ಎಂಬ ಧ್ಯೇಯ ವಾಕ್ಯವುಳ್ಳ ಸುಂದರ ವೇದಿಕೆಯಲ್ಲಿ ಕಾರ್ಯಕ್ರಮದ ಮುಖ್ಯ ಬಿಂದುಗಳಾದ ಈ ನಾಲ್ಕೂ ಜನ ಹಿರಿಯರಿಗೆ ಮತ್ತು ಶ್ರೀ ಜಯದೇವರ ಅನುಪಸ್ಥಿತಿಯಲ್ಲಿ ಅವರಿಗೂ ಸೇರಿ ಅಭಿನಂದನಾಪೂರ್ವಕ ಮಾತುಗಳನ್ನಾಡಿದರು. ಆ ಮಾತುಗಳಲ್ಲಿನ ಮನೋಜ್ಞ ಅಂಶಗಳು ಸ್ವಯಂಸೇವಕರಿಗೆ ಈ ಹಿರಿಯರ ಕುರಿತ ಗೌರವಗಳನ್ನು ಇಮ್ಮಡಿಸಿತಲ್ಲದೆ ಪ್ರತಿಯೊಬ್ಬನ ಹೃದಯ ತಂತಿಯನ್ನು ಮೀಟಿ ಅವರಲ್ಲಿ ಸಂಘ ಶ್ರದ್ಧೆಯನ್ನು ನೂರ್ಮಡಿಗೊಳಿಸಿತ್ತು. ಈ ಸಾಧಕರ ಜೀವನದಲ್ಲಿ ಒಳಹೊಕ್ಕ ಸಂಘದ ತತ್ವ ಧ್ಯೇಯ ಮತ್ತು ಆದರ್ಶಗಳ ಗಮನೀಯ ಅಂಶಗಳನ್ನು ಹೆಕ್ಕಿ ಹೆಕ್ಕಿ ತೆಗೆದ ಒಂದೊಂದೂ ಮಾತುಗಳು ಹೃದಯವನ್ನು ಮುಟ್ಟಿದವು ಮನೋಜ್ಞ ಮಾತುಗಳನ್ನಾಡಿದರು. ಅವರ ಮಾತುಗಳಲ್ಲಿ ಎಲ್ಲಿಯೂ ವ್ಯಕ್ತಿಯ ನಿಷ್ಠೆ ಪ್ರಶಂಸೆ ಇರದೆ ಅವರು ಆರಿಸಿಕೊಂಡ ಕಾರ್ಯ ಮತ್ತು ಆ ಕಾರ್ಯದ ಹಿಂದಿನ ವಿಚಾರ ಹೆಚ್ಚು ಪ್ರಮುಖವಾಗಿತ್ತು. ಏಕೆಂದರೆ ಸಂಘತತ್ವವನ್ನು ತಮ್ಮ ಬಹುಮೂಲ್ಯ ತಾರುಣ್ಯದ ಸಮಯದಲ್ಲಿಯೇ ಸ್ವೀಕರಿಸಿ ರ್ಪೂರ್ಣ ಜೀವವನ್ನು  ಸಂಘಮಯವಾಗಿಸಿಕೊಂಡವರು ಈ ಹಿರಿಯರು. ಅವರಿಗೆ ಅಬಿವಂದನೆಯಂದರೆ ಅವರು ಆರಿಸಿ ಕೊಂಡಿರುವ ತತ್ವಾದರ್ಶಗಳ ಶ್ರೇಷ್ಠತೆಯ ಹಿರಿಮೆಗರಿಮೆಯ ಅವಲೋಕನ ಮಾತ್ರ.

ಅವರ ತಮ್ಮ ಉದ್ಭೋದಕ ಮಾತುಗಳ ಸಾರಾಂಶ:

ಸಮಾಜದಲ್ಲಿ ಪ್ರಸ್ತುತ ಹಿರಿಯರಿಗೆ ಕಾಲು ಮುಟ್ಟಿ ನಮಸ್ಕರಿಸುವ ಪದ್ಧತಿ ಇಂದಿನವರಲ್ಲಿ ಮರೆಯಾಗುತ್ತಿದೆ. ಇದಕ್ಕೆ ಒಂದೋ ಅಂತಹಾ ನಮಸ್ಕರಿಸಿಕೊಳ್ಳಬಲ್ಲ ಸಮಾಜ ಮುಖಿ ಆದರ್ಶಜೀವನ ನಡೆಸಿದ ಹಿರಿಯರೇ ಕಡಿಮೆಯಾಗಿತ್ತಿರುವುದು ಹಾಗೆಯೇ ಇಂದಿನ ಪೀಳಿಗೆಯಲ್ಲಿ ಹಿರಿಯರನ್ನು ಮಾರ್ಗದರ್ಶಕರನ್ನು ಗೌರವಿಸುವ ಆಶೀರ್ವಾದ ಪಡೆಯುವ ಸಂಸ್ಕಾರವೇ ಮರೆಯಾಗುತ್ತಿರುವುದು ಕಾರಣ.

ಈ ಹಿರಿಯರು ಅನೇಕ ಕಂಟಕಗಳಿಂದ ತುಂಬಿದ ಸಂಘಕಾರ್ಯವನ್ನು ಸ್ವೀಕರಿಸಿದ್ದರು. ಇದೇ ಸಂಘದ ವಿಶೇಷ. ನಮ್ಮ ಪ್ರಾರ್ಥನೆಯಲ್ಲಿ ಹೇಳಿಕೊಳ್ಳುವಂತೆ ಈ ಹಿರಿಯರು ಈ ಕಂಟಕಗಳ ಮಾರ್ಗವನ್ನು ತಮ್ಮ ಮನಸ್ಸಿನಿಂದ ಸ್ವೀಕರಿಸಿದ್ದರು. ಈ ಕಂಟಕಗಳನ್ನು ಎದುರಿಸುವ ಛಲ ಬಲವನ್ನೂ ಈ ಹಿರಿಯರು ಮೈಗೂಡಿಸಿಕೊಂಡಿದ್ದು ಪುರುಷಾರ್ಥಿ ಜೀವನವನ್ನು ನಡೆಸಿದರು. ಈ ಮಾರ್ಗವನ್ನು ಸ್ವೀಕರಿಸಿದ ನಂತರ ಅವರಲ್ಲಿ ಎಂದೂ ತಾವು ತಪ್ಪು ಮಾರ್ಗದಲ್ಲಿ ಹೆಜ್ಜೆ ಇಡುತ್ತಿದ್ದೇವೆಂದು ಅನ್ನಿಸಲೇ ಇಲ್ಲ. ಅವರ ಕಾರ್ಯಮಾರ್ಗದಲ್ಲಿ ಸಂಘ ಕುರಿತಾದ ಯಾವುದೇ ದೋಶಾರೋಪ, ಟೀಕೆ, ಅಢ್ಡಿಯಾಗಲೇ ಇಲ್ಲ.

ಸಂಘಕಾರ್ಯದಲ್ಲಿ ಅನೇಕ ವಿಘ್ನಗಳಲು ಅಡ್ಡಿ ಆತಂಕಗಳು ಎದುರಾಗಿವೆ. ೧೯೪೮ ರ ಕಾಲ ಖಂಡದಲ್ಲಿ ಗಾಂಧೀಜಿ ಹತ್ಯೆಯ ಆರೋಪದ ನೆಪದಲ್ಲಿ ಸಂಘವನ್ನು ಮುಗಿಸಬೇಕೆಂಬ ಪ್ರಯತ್ನ, ಸಂಘದ ವಿಚಾರದಲ್ಲಿ ಜನರ ಮನಸ್ಸಿನಲ್ಲಿ ವಿರೋಧದ ದ್ವೇಶದ ಭಾವನೆಯನ್ನು  ಆ ಸಂದರ್ಭದಲ್ಲಿ ಬಿತ್ತಲಾಯಿತು. ಸಂಘಕಾರ್ಯ ಆ ಸಂದರ್ಭದ ಪ್ರತಿರೋಧದ ಕಾರಣ ದುರ್ಬಲವೂ ಆಗಿತ್ತು. ಸಂಘದ ಮೇಲಿನ ನಿಷೇಧ ತೆಗೆದ ನಂತರವೂ ಸಂಘಕಾರ್ಯ ನಿರ್ವಹಿಸುವುದು ಬಹಳ ಕಠಿಣವಾಗಿದ್ದ ಸಮಯ. ಆಗ ಕಾರ್ಯ ನಿರ್ವಹಿಸುತಿದ್ದವರು ಕೆಲವೇ ಕೆಲವು ಕಾರ್ಯಕರ್ತರು. ಆ ಸಂಧರ್ಭದಲ್ಲಿ ಎದುರಾದ ಎಲ್ಲ ಸಂಕಟಗಳಿಂದ ಸಂಘದ ನಾವೆಯನ್ನು ಕುಶಲತೆಯಿಂದ ಪಾರು ಮಾಡಿದ ಸಂಘಚೇತನಗಳ ಗುಂಪಿಗೆ ಸೇರಿದವರೇ ಈ ಹಿರಿಯರು ಇವರೇ ಸಂಘ ಇಂದಿನ ವಿಸ್ತಾರದ ಸ್ಥಿತಿ ತಲುಪಿಸಲು ತಮ್ಮ ಇಡೀ ಜೀವನವನ್ನು ಮುಡಿಪಾಗಿರಿಸಿದರು.

ನಾವು ಸಂಘದಲ್ಲಿ ಗೀತೆ ಹೇಳುವಂತೆ ತಾಯಿ ಭಾರತಿಯ ಸೇವೆಗೆ ನಾನೊಂದು ಸಣ್ಣ ಉಪಕರಣ. ಈ ಭಾವನೆಯನ್ನು ಮೂಡಿಸಿಕೊಳ್ಳಲು ಅನೇಕ ಸಂಗತಿಗಳನ್ನು ತನ್ನ ವಿದ್ಯಾರ್ಹತೆ, ತನ್ನ ಕುಟುಂಬ ತನ್ನ ವಯಸ್ಸು ಈ ಎಲ್ಲವುಗಳನ್ನೂ ಮೀರಿ ಭಾವನೆಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಈ ರಾಷ್ಟ್ರ ಆರಾಧನೆಯಲ್ಲಿ ತಮ್ಮದೆಲ್ಲವನ್ನೂ ಮರೆತು ಪುಟ್ಟ ಸಾಧನವಾಗಿ ತಮ್ಮ ಜೀವನವನ್ನೇ  ಸಮರ್ಪಿಸಿದ ಆದರ್ಶ ಪುರುಷರು ಈ ಹಿರಿಯರು.

ಈ ಭಾವನೆ ನಿರಂತರವಾಗಿ ಸಾಕಾರಗೊಳ್ಳಲು ನಿರಂತರ ಸ್ವ ಪ್ರಯತ್ನದ ಅವಶ್ಯಕತೆ ಇರುತ್ತದೆ. ಈ ಹಿರಿಯರು ತಮ್ಮ ಧವಳ ಶೀಲ ಸ್ಚ್ಚಾರಿತ್ರ್ಯದ ಮೂಲಕ ಎಂದೂ ಕಲುಶಿತಗೊಳ್ಳದಂತೆ ತಮ್ಮನ್ನು ತಾವು ಎಚ್ಚರಿಕೆಯಿಂದ ರೂಪಿಸಿಕೊಂಡಿದ್ದಾರೆ.

ಸಂಘದ ಕಾರ್ಯವನ್ನು ಪ್ರಾರಂಭದ ದಿನಗಳಲ್ಲಿ ಅನೇಕರ ಹೆಸರುಗಳೂ ನಮಗೆ ನೆನಪಿಲ್ಲ. ಸಂಘಕಾರ್ಯದಲ್ಲಿ ಭಾಗಿಯಾದವರು ಪಂಡಿತರಿಂದ ಮೊದಲ್ಗೋಂಡು ಹಳ್ಳಿಯ ಅನಕ್ಷರಸ್ಥ ಪಾಮರರ ತನಕ, ಅ ಸಂಖ್ಯ ವ್ಯಕ್ತಿಗಳಿದ್ದಾರೆ. ಸಂಘವನ್ನು ಬೆಳೆಸಿದವರು ಸಂಘದ ಬೆಳವಣಿಗೆಯನ್ನು ನೋಡುವಷ್ಟರಲ್ಲಿ ಮರೆಯಾಗಿರುತ್ತಾರೆ. ಆದರೆ ಅವರ ತ್ಯಾಗ ಸಮರ್ಪಿತ ಜೀವನದಿಂದ ಈ ಕಾರ್ಯ ಆಗಿರುವುದೆಂದು ನಾವು ಅರಿತುಕೊಳ್ಳಬೇಕಾಗುತ್ತದೆ.

ಈ ಹಿರಿಯರಾರೂ ಸಂಘದಿಂದ ಏನನ್ನೂ ಅಪೇಕ್ಷಿಸಲಿಲ್ಲ. ಅವರಿಗೆ ಗೊತ್ತಿತ್ತು ಸಂಘದಿಂದ ತಮಗೆ ದೊರೆಯುವುದು ಶುದ್ಧ ಸಾತ್ವಿಕ ಜೀವನ. ಈ ಶುದ್ಧ ಜೀವನದ ಜೊತೆಗೆ ವೈಚಾರಿಕ ಪ್ರತಿಬದ್ದತೆಯೂ ಲಭಿಸುತ್ತದೆ. ಈ ಪ್ರತಿಬದ್ದತೆಯಿಂದಲೇ ಇವರುಗಳು ಇಷ್ಟು ವರುಷ ಸಂಘ ಮಾರ್ಗದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವುದು ಸಾಧ್ಯವಾಯಿತು. ಸಂಘದ ಈ ಆದರ್ಶಗಳಡಿಯಲ್ಲಿ ಬೆಳೆದವರು, ಯಾರ ಕಾರಣದಿಂದ ನಾವೆಲ್ಲರೂ ಇಲ್ಲಿ ಒಟ್ಟಾಗಿ ಸೇರಿದ್ದೇವೆಯೋ ಆ ಹಿರಿಯರು  ಯಾವುದೇ ಸಂದರ್ಭದಲ್ಲೂ ಲೌಕಿಕ ವಾಸನೆಗಳಿಂದ ಪ್ರಭಾವಿತರಾಗದೆ, ಯಾವುದರ ಜೊತೆಗೂ ರಾಜಿ ಮಾಡಿಕೊಳ್ಳದ ಮೇರು ವ್ಯಕ್ತಿತ್ವವುಳ್ಳವರಾಗಿದ್ದರು. ಇವರುಗಳೆಂದೂ ನಿಷ್ಕ್ರಿಯರಾಗಿರಲಿಲ್ಲ. ಈ ಹಿರಿಯರು ತಮ್ಮ ಶಾರೀರಿಕ ಬಾಧೆಗಳನ್ನೂ ಗಮನಿಸದೆ ನಿರಂತರ ಸಕ್ರಿಯರಾಗಿ ತಮ್ಮ ಸಂಪೂರ್ಣ ಜೀವನವನ್ನು ಈ ವೈಚಾರಿಕ ಬದ್ದತೆಯಿಂದ ರಾಷ್ಟ್ರ ಕಾರ್ಯಕ್ಕೆ ಸಮರ್ಪಿಸಿದರು.  ಕಾಲುಗಳು ನಡೆದಾಡಲು ಅಶಕ್ತವಾಗದಿದ್ದರೆ ಕೈಗಳಿಂದ ಮತ್ತು ಒಂದೊಮ್ಮೆ ಕೈಗಳೂ ನಿಷ್ಕ್ರಿಯವಾದರೆ ಮುಖದ ಭಾವನೆಗಳಿಂದಲಾದರೂ ಕಾರ್ಯನಿರ್ವಹಿಸುವಷ್ಟು ಮನೋದಾಷ್ಟ್ಯವನ್ನು ಪ್ರಕಟಿಸುವಷ್ಟು ಸಕ್ರಿಯತೆ ಈ ಹಿರಿಯರು ನಮಗೆಲ್ಲರಿಗೆ ನಿಡುವ ಸಂದೇಶ. ಸಂಘದ ಅಪೇಕ್ಷೆಯನ್ನು ತಮ್ಮ ಜೀವನ ವ್ರತವಾಗಿ ಸ್ವೀಕರಿಸಿದ ಇಂತಹಾ ಹಿರಿಯರ ತ್ಯಾಗಮಯ ಜೀವನ ನಮಗೆಲ್ಲರಿಗೂ ಪ್ರೇರಣಾದಾಯಿಯಾಗಬೇಕು. ನಮ್ಮೆಲ್ಲರ ಅದೃಷ್ಟ ಇವರೆಲ್ಲರ ಜೊತೆಗೆ ನಾವು ಕಾರ್ಯ ಮಾಡುತ್ತಿದ್ದೇವೆ. ಇವರ ಬದುಕು ನಮಗೆ ಮಾರ್ಗದರ್ಶಕವಾಗಬೇಕು. ಸಂಘಸ್ಥಾಪಕ ಕೇಶವರನ್ನು ನಾವ್ಯಾರೂ ನೋಡಿಲ್ಲ. ಆದರೆ ಕೇಶವನ ಮಾರ್ಗದ ಪಥಿಕರಾದ ಈ ಹಿರಿಯರಲ್ಲಿ ನಾವೆಲ್ಲರೂ ಕೇಶವರನ್ನು ಕಾಣುವಾ.

ವೇದಿಕೆಯ ಸಮಾರಂಭದ ನಂತರ ಸುಗ್ರಾಸ ಭೋಜನ ಕಾರ್ಯಕ್ರಮದ ಮೆರಗನ್ನು ಮತ್ತಷ್ಟು ಹೆಚ್ಚಿಸಿತು. ಕಾರ್ಯಕ್ರಮ ಮುಗಿಸಿ ಶ್ರೀ ಶಂಕರ ಮಠದಿಂದ ತೆರಳುವಾಗ ಎಲ್ಲರ ಮನದಲ್ಲಿ ತಾವೇನೋ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಭಾವ, ಧನ್ಯತೆ ಎದ್ದು ಕಾಣುತ್ತಿತ್ತು.

 

 

 

 

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ABVP Press release on CBI, PM & Coalgate,

Thu Oct 24 , 2013
ABVP Press release October-23 on CBI, PM and  Coal allocation scam or Coalgate. email facebook twitter google+ WhatsApp