ನೇರನೋಟ: ಆರೆಸ್ಸೆಸ್ ಮೇಲೆ ಮತ್ತೊಂದು ಮಿಥ್ಯಾಪವಾದ; ವಾಸ್ತವವೇನು?

By Du Gu Lakshman

ದೇಶದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸಂಘಟಿತ ಹಿಂದೂ ಶಕ್ತಿಯನ್ನು ಹೊಸಕಿ ಹಾಕುವುದು ಹೇಗೆ? ಇದು ಎಲ್ಲ ಎಡಪಂಥೀಯ ಬುದ್ಧಿಜೀವಿಗಳ, ವಿಚಾರವಾದಿಗಳ ಹಾಗೂ ಇವರ ಹೆಜ್ಜೆಗೆ ತಕ್ಕ ತಾಳ ಹಾಕುವ ರಾಜಕಾರಣಿಗಳ ತಲೆ ತಿನ್ನುತ್ತಿರುವ ಒಂದು ಯಕ್ಷ ಪ್ರಶ್ನೆ. ಸಂಘಟಿತ ಹಿಂದೂ ಶಕ್ತಿ ಎಂದ ಕೂಡಲೇ ಈ ಮಂದಿಯ ಕಣ್ಣಿಗೆ ತಕ್ಷಣ ರಾಚುವುದು ಆರೆಸ್ಸೆಸ್ ಹಾಗೂ ಅದರ ಸೋದರ ಸಂಸ್ಥೆಗಳು. ಇವನ್ನೆಲ್ಲ ಒಟ್ಟಾಗಿ ಅವರು ಸಂಘ ಪರಿವಾರ ಎಂದು ಕರೆಯುತ್ತಾರೆ. ಸಂಘವೇನೂ ಆ ಪರಿಭಾಷೆಯನ್ನು ಬಳಸಿಲ್ಲ.

ಇರಲಿ, ಇದೀಗ ಬೆಳೆಯುತ್ತಿರುವ ಆರೆಸ್ಸೆಸ್ ಶಕ್ತಿಯನ್ನು ಹೊಸಗಿ ಹಾಕಲು ಮಾಧ್ಯಮಗಳ ಮೂಲಕವೂ ಹುನ್ನಾರ ಸಾಗಿದೆ. ‘ದಿ ಹಿಂದು’ ಪತ್ರಿಕೆಯ ಕಳೆದ ಅ.೮ರ ಸಂಚಿಕೆಯಲ್ಲಿ ವಿದ್ಯಾಸುಬ್ರಹ್ಮಣ್ಯಂ ಎಂಬ ಲೇಖಕಿ ‘ಖಿhe ಈoಡಿgoಣಣeಟಿ Pಡಿomise oಜಿ ೧೯೪೯’ ಎಂಬ ಲೇಖನದಲ್ಲಿ ಆರೆಸ್ಸೆಸ್ ಗಾಂಧಿ ಹತ್ಯೆ ನಡೆದ ಬಳಿಕ ಆಗಿನ ಕೇಂದ್ರ ಸರ್ಕಾರದೊಂದಿಗೆ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಹಾಗೂ ಇಂತಹದೇ ಇನ್ನೂ ಕೆಲವು ಒಪ್ಪಂದಗಳನ್ನು ಮಾಡಿಕೊಂಡಿತ್ತು. ಆದರೀಗ ಸಂಘ ಅವೆಲ್ಲವನ್ನೂ ಉಲ್ಲಂಘಿಸಿದೆ ಎಂಬರ್ಥದಲ್ಲಿ ವಿಶ್ಲೇಷಿಸಿದ್ದರು. ಗಾಂಧಿ ಹತ್ಯೆ, ಅನಂತರ ನಡೆದ ಸಂಘದ ಮೇಲಿನ ನಿಷೇಧ, ಆಮೇಲೆ ಸರ್ಕಾರ ಹಾಗೂ ಸಂಘದ ನಡುವೆ ನಡೆದ ಪತ್ರ ವ್ಯವಹಾರ, ನಿಷೇಧ ರದ್ದತಿಗಾಗಿ ನಡೆದ ಸತ್ಯಾಗ್ರಹ – ಇತ್ಯಾದಿ ಯಥಾವತ್ ವಿವರಗಳ ಬಗ್ಗೆ ಮಾಹಿತಿ ಇಲ್ಲದವರಿಗೆ ವಿದ್ಯಾಸುಬ್ರಹ್ಮಣ್ಯಂ ಬರೆದಿರುವುದೇ ನಿಜವೆಂದು ಅನಿಸಿದರೆ ಅದು ಸ್ವಾಭಾವಿಕ. ಸಂಘ ಹಿಂಸೆ ಹಾಗೂ ಅರಾಜಕತೆಯ ಹಾದಿ ತುಳಿದಿದ್ದರಿಂದಲೇ ಅದರ ಮೇಲೆ ನಿಷೇಧ ಹೇರಲಾಯಿತು ಎಂಬುದು ವಿದ್ಯಾಸುಬ್ರಹ್ಮಣ್ಯಂ ಅವರ ಮೊದಲ ವಾದವಾದರೆ, ಸಂಘ ಸರ್ಕಾರಕ್ಕೆ ಸಲ್ಲಿಸಿದ ತನ್ನ ಲಿಖಿತ ಸಂವಿಧಾನದಲ್ಲಿ ತಾನು ರಾಜಕೀಯೇತರ ಸಂಸ್ಥೆಯಾಗಿ ಇರುವುದಕ್ಕೆ ಒಪ್ಪಿರುವುದಾಗಿ ಹೇಳಿತ್ತೆಂಬುದು ಎರಡನೆಯ ವಾದ. ಸಂಘ ಇಂತಹ ಷರತ್ತಿಗೆ ಸಮ್ಮತಿಸಿದ್ದರಿಂದಲೇ ಅದರ ಮೇಲಿನ ನಿಷೇಧ ಹಿಂತೆಗೆಯಲಾಯಿತು. ಆಗಿನ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿಯವರು ಆಗಿನ ಗೃಹಸಚಿವ ಸರ್ದಾರ್ ಪಟೇಲ್ ಅವರಿಗೆ ಇಂತಹದೊಂದು ಷರತ್ತಿಗೆ ಒಪ್ಪಿರುವುದಾಗಿ ಪತ್ರವನ್ನೂ ಬರೆದಿದ್ದರೆಂಬುದು ವಿದ್ಯಾಸುಬ್ರಹ್ಮಣ್ಯಂ ವಾದ. ವಿದ್ಯಾಸುಬ್ರಹ್ಮಣ್ಯಂ ಅವರ ಈ ವಾದಕ್ಕೆ ಆಧಾರಗಳೇನೋ ಗೊತ್ತಿಲ್ಲ. ಆದರೆ ಆ ಕಾಲದಲ್ಲಿ ಸಂಘ ಹಾಗೂ ಸರ್ಕಾರದ ನಡುವೆ ನಡೆದ ಪತ್ರ ವ್ಯವಹಾರ, ಮಾತುಕತೆಗಳನ್ನು ಸರಿಯಾಗಿ ಅಧ್ಯಯನ ಮಾಡಿದರೆ ವಿದ್ಯಾಸುಬ್ರಹ್ಮಣ್ಯಂ ಅವರು ಬರೆದಿರುವುದು ಸಂಪೂರ್ಣ ಸತ್ಯಕ್ಕೆ ದೂರ ಎಂಬುದು ಯಾರಿಗಾದರೂ ವೇದ್ಯವಾಗುವ ಸಂಗತಿ.

೧೯೪೮ರ ಜನವರಿ ಕೊನೆಯಲ್ಲಾದ ಮಹಾತ್ಮ ಗಾಂಧೀಜಿಯವರ ಹತ್ಯೆಯ ಆರೋಪವನ್ನು ವಿನಾಕಾರಣ ಸಂಘದ ಮೇಲೆ ಹೇರಿ ಅದನ್ನು ನಿಷೇಧಿಸಿದ್ದು ಕೇವಲ ರಾಜಕೀಯ ದುರುzಶದಿಂದ. ಸುಮಾರು ೧೯ ತಿಂಗಳ ಕಾಲ ಇದ್ದ ಈ ನಿಷೇಧ ಮತ್ತು ಸಂಘ ವಿರೋಧಿಗಳು ಸ್ವಯಂಸೇವಕರ ಮೇಲೆ ನಡೆಸಿದ್ದ ನಿರಂತರ ದೌರ್ಜನ್ಯ – ಇವು ಸಂಘದ ಪಾಲಿಗೆ ಒಂದು ಭಾರೀ ಅಗ್ನಿ ಪರೀಕ್ಷೆ ಆಗಿದ್ದು ನಿಜ. ಅಸತ್ಯ ಮತ್ತು ಅನ್ಯಾಯದ ವಿರುದ್ಧ ಸ್ವಯಂಸೇವಕರು ದೇಶವ್ಯಾಪಿಯಾದ ಜನಾಂದೋಲನವನ್ನು ನಡೆಸಬೇಕಾಗಿ ಬಂತು. ಈ ಹೋರಾಟದಲ್ಲಿ ಅವರು ತೋರಿದ ಅಪ್ರತಿಮ ಕೆಚ್ಚು, ಮಾಡಿದ ಅಪಾರ ತ್ಯಾಗ ಮತ್ತು ಅನುಭವಿಸಿದ ಯಮಯಾತನೆ, ಕಷ್ಟಸಂಕಟಗಳು ವರ್ಣಿಸಲಸದಳ. ಇವೆಲ್ಲದರ ನಡುವೆಯೂ ಸಂಘದ ಮೇಲಿನ ನಿಷೇಧವನ್ನು ದೂರಗೊಳಿಸಲು ಸರ್ಕಾರದೊಂದಿಗೆ ಗುರೂಜಿಯವರು ಸೆರೆಮನೆಯಲ್ಲಿದ್ದುಕೊಂಡೇ ಸಾಕಷ್ಟು ಪತ್ರಗಳನ್ನು ಬರೆದಿದ್ದರು.

ವಾಸ್ತವವಾಗಿ ನಿಷೇಧವನ್ನು ಸರ್ಕಾರ ಹಿಂತೆಗೆದುಕೊಂಡಿದ್ದು ಬೇಷರತ್ತಾಗಿ. ನಿಷೇಧ ಹಿಂತೆಗೆತಕ್ಕೆ ಯಾವುದೇ ಷರತ್ತನ್ನು ಸರ್ಕಾರ ವಿಸಿರಲಿಲ್ಲ. ೧೯೪೯ ಅಕ್ಟೋಬರ್ ೧೪ರಂದು ಬಾಂಬೆ ವಿಧಾನ ಸಭೆಯ ಸದಸ್ಯ ಲಲ್ಲೂ ಭಾಯಿ ಮಕಾಂಜಿ ಪಟೇಲ್ ಗೃಹಸಚಿವ ಮೊರಾರ್ಜಿ ದೇಸಾಯಿಯವರಿಗೆ ಸದನದಲ್ಲಿ ಈ ಪ್ರಶ್ನೆ ಕೇಳಿದ್ದರು: ‘ಸಂಘದ ಮೇಲಿನ ನಿಷೇಧ ರದ್ದಾಗಿದ್ದು ಷರತ್ತಿಗೊಳಪಟ್ಟೋ ಅಥವಾ ಬೇಷರತ್ತಾಗಿಯೋ!’ ಅವರು ಇನ್ನೂ ಒಂದು ಪ್ರಶ್ನೆ ಕೇಳಿದ್ದರು: ‘ಆರೆಸ್ಸೆಸ್ ನಾಯಕರು ನಿಷೇಧ ರದ್ದತಿ ಸಂಬಂಧವಾಗಿ ಸರ್ಕಾರಕ್ಕೆ ಏನಾದರೂ ಮುಚ್ಚಳಿಕೆ ಬರೆದು ಕೊಟ್ಟಿದ್ದಾರಾ?’ ಈ ಪ್ರಶ್ನೆಗಳಿಗೆ ಮೊರಾರ್ಜಿ ದೇಸಾಯಿ ಪರವಾಗಿ ದಿನಕರ್‌ರಾವ್ ದೇಸಾಯಿ ಉತ್ತರಿಸುತ್ತಾ, ‘ಸಂಘದ ಮೇಲಿನ ನಿಷೇಧ ರದ್ದಾಗಿದ್ದು ಬೇಷರತ್ತಾಗಿ ಹಾಗೂ ಆರೆಸ್ಸೆಸ್ ನಾಯಕರಿಂದ ಯಾವುದೇ ಸರ್ಕಾರ ಮುಚ್ಚಳಿಕೆ ಬರೆಸಿಕೊಂಡಿರಲಿಲ್ಲ’ ಎಂದಿದ್ದರು. ಸಂಘದ ವಿರುದ್ಧ ಹಿಂಸಾಚಾರ, ಡಕಾಯಿತಿ ಮುಂತಾದ ಭಾರೀ ಆರೋಪಗಳನ್ನು ಹೊರಿಸಿದ್ದ ಸರ್ಕಾರ ಇದ್ದಕ್ಕಿದ್ದಂತೆ ಅದರ ಮೇಲಿನ ನಿಷೇಧವನ್ನು ರದ್ದುಗೊಳಿಸಿದ್ದಾದರೂ ಹೇಗೆ? ಈ ಪ್ರಶ್ನೆ ಆಗಿನ ಎಲ್ಲಾ ಕಾಂಗ್ರೆಸ್ ನಾಯಕರನ್ನು ಕಾಡಿತ್ತು. ಕಾಂಗ್ರೆಸ್ ತನ್ನ ಮುಖ ಉಳಿಸಿಕೊಳ್ಳುವುದಕ್ಕಾಗಿ, ‘ಆರೆಸ್ಸೆಸ್ ನಾಯಕರು ತಮ್ಮ ಸಂವಿಧಾನದ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುವುದಾಗಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಸರ್ಕಾರವೇ ಸಂಘ ಹೇಗೆ ಕೆಲಸ ಮಾಡಬೇಕೆಂದು ನಿಗದಿಪಡಿಸಿತ್ತು’ ಎಂಬ ವದಂತಿಯೊಂದನ್ನು ಎಲ್ಲೆಡೆ ತೇಲಿಬಿಟ್ಟಿತ್ತು. ಆದರೆ ಆಗಿನ ಗೃಹಸಚಿವ ಪಟೇಲರಂತೂ ಸಂಘದಿಂದ ತಾನು ಯಾವುದೇ ಮುಚ್ಚಳಿಕೆ ಪಡೆದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದರು. ಆದರೂ ಸಂಘ ಸರ್ಕಾರಕ್ಕೆ ಏನೋ ಮುಚ್ಚಳಿಕೆ ಬರೆದುಕೊಟ್ಟಿದೆ ಎಂಬ ಸಂಶಯ ಅನೇಕರಲ್ಲಿ ಇz ಇತ್ತು. ಏಕೆಂದರೆ ಮೊದಲು ಆಕಾಶವಾಣಿಯಲ್ಲಿ ಪ್ರಸಾರವಾದ ನಿಷೇಧ ರದ್ದತಿ ಸುದ್ದಿಯನ್ನು ‘ದಿ ಹಿಂದು’ ಪತ್ರಿಕೆ ತನ್ನ ೧೩.೭.೧೯೪೯ರ ಸಂಚಿಕೆಯಲ್ಲಿ ಪ್ರಕಟಿಸಿದ್ದು ಹೀಗೆ: ‘ಭಾರತ ಸರ್ಕಾರವು ಎಲ್ಲ ಕೇಂದ್ರಶಾಸಿತ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಸಂಘದ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿದೆ ಹಾಗೂ ಸೆರೆಮನೆಯಲ್ಲಿರುವ ಎಲ್ಲ ಸಂಘ ಬಂಧಿಗಳನ್ನು ಆದಷ್ಟು ಬೇಗ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಭಾರತ ಸರ್ಕಾರವು ಎಲ್ಲ ಪ್ರಾಂತೀಯ ಸರ್ಕಾರಗಳಿಗೂ ತನ್ನ ರೀತಿಯಲ್ಲೇ ಕ್ರಮ ಕೈಗೊಳ್ಳಲು ಸಲಹೆ ನೀಡಿದೆ. ಸಂಘವು ಬರಲಿರುವ ದಿನಗಳಲ್ಲಿ ಒಂದು ಸಾಂಸ್ಕೃತಿಕ ಹಾಗೂ ಪ್ರಜಾಸತ್ತಾತ್ಮಕವಾದ ಸಂಘಟನೆಯಾಗಿ ಕಾರ್ಯನಿರ್ವಹಿಸಲಿದೆ. ಭಾರತದ ಸಂವಿಧಾನ ಮತ್ತು ರಾಜ್ಯಧ್ವಜಕ್ಕೆ ತನ್ನ ನಿಷ್ಠೆ ತೋರಿಸುವ, ಗೌಪ್ಯ ಮತ್ತು ಹಿಂಸೆಯನ್ನು ಬಿಟ್ಟು ಕೆಲಸ ಮಾಡುವ ಸಂಘಟನೆಯಾಗುವುದು ಎಂಬ ಲಿಖಿತ ಅಭಿವಚನವನ್ನು ಸಂಘದ ಪ್ರಮುಖ ಮಾಧವರಾವ್ ಸದಾಶಿವರಾವ್ ಗೋಲ್ವಲ್ಕರ್ ಅವರು ಕೊಟ್ಟಿದ್ದಾರೆ’.

ಈ ಸುದ್ದಿಯನ್ನು ಓದಿದಾಗ ಯಾವನಿಗಾದರೂ ಸಂಘದ ಪ್ರಮುಖರು ಲಿಖಿತ ರೂಪದಲ್ಲಿ ಸರ್ಕಾರಕ್ಕೆ ಏನೋ ಒಂದು ವಚನ ಕೊಟ್ಟಿರಲೇಬೇಕು ಹಾಗೂ ಈವರೆಗೆ ತಾನು ಗುಪ್ತ ಮತ್ತು ಹಿಂಸೆಯ ಮಾರ್ಗ ಅನುಸರಿಸುತ್ತಿದ್ದುದಾಗಿ ಒಪ್ಪಿಕೊಂಡಿರಲೇಬೇಕು ಎನ್ನಿಸಿದ್ದರೆ ಆಶ್ಚರ್ಯವೇನೂ ಇಲ್ಲ. ಅಂತಹ ವಚನ ನೀಡಿದ್ದಕ್ಕಾಗಿಯೇ ಸರ್ಕಾರ ಈಗ ನಿಷೇಧವನ್ನು ವಾಪಸ್ ಪಡೆಯಲು ಸಮ್ಮತಿಸಿರಬೇಕು ಎಂದು ಅನಿಸುವುದು ಸ್ವಾಭಾವಿಕ. ಆದರೆ ವಾಸ್ತವಿಕತೆ ಏನು? ಪಂ. ಮೌಳಿ ಚಂದ್ರಶರ್ಮ ಅವರು ವ್ಯಕ್ತಿಗತ ನೆಲೆಯಲ್ಲಿ ಕೇಳಿರುವ ತಮ್ಮ ಸಂದೇಹಗಳಿಗೆ ಗುರೂಜಿಯವರು ಅದೇ ನೆಲೆಯಲ್ಲಿ ಅವರನ್ನಷ್ಟೇ ಲಕ್ಷ್ಯದಲ್ಲಿರಿಸಿ ನೀಡಿರುವ ಉತ್ತರಗಳನ್ನೇ ಲಿಖಿತ ಅಭಿವಚನವೆಂದು ತಿಪ್ಪೆ ಸಾರಿಸಲಾಗಿದೆ. ಇದಕ್ಕೆ ಹೊರತಾಗಿ ಆ ಪತ್ರದಲ್ಲಿ ಬೇರೆಯೇನೂ ಇರಲಿಲ್ಲ. ಸಂಘದ ಮೇಲಿನ ನಿಷೇಧವನ್ನು ವಾಪಸ್ ತೆಗೆದುಕೊಂಡಿರುವುದು ಆ ಪತ್ರವನ್ನು ಆಧರಿಸಿ. ಆ ಪತ್ರದಲ್ಲಿ ಭಾರತದ ಸಂವಿಧಾನ ಮತ್ತು ರಾಜ್ಯಧ್ವಜಕ್ಕೆ ಗೌರವ, ಸಂಘದ ಆಂತರಿಕ ಘಟಕಗಳಲ್ಲಿ ಚುನಾವಣೆ, ಸಂಘದಲ್ಲಿರುವ ಆಜನ್ಮ ಪ್ರತಿಜ್ಞೆ, ಅಲ್ಪವಯಸ್ಕರಿಗೆ ಸಂಘದಲ್ಲಿ ಪ್ರವೇಶ, ಸರಸಂಘಚಾಲಕರಿಂದ ತನ್ನ ಉತ್ತರಾಧಿಕಾರಿಯ ನಿಯುಕ್ತಿ, ಸಂಘ ಯಾವುದೋ ಒಂದು ಜಾತಿಯವರಿಗಾಗಿ ಅಲ್ಲ, ಆದರೆ ಎಲ್ಲ ಹಿಂದುಗಳಿಗಾಗಿ, ಲೆಕ್ಕಾಚಾರ ತಪಾಸಣೆ – ಈ ವಿಷಯಗಳ ಕುರಿತು ಗುರೂಜಿಯವರು ಸವಿಸ್ತಾರವಾಗಿ ಸ್ಪಷ್ಟನೆ ನೀಡಿದ್ದರು. ಈ ಪತ್ರದಲ್ಲಿ ಸರ್ಕಾರ ಹೇಳಿದಂತೆ ತಪ್ಪದೇ ಸಂಘ ಪಾಲಿಸುವ ಯಾವುದೇ ಹೇಳಿಕೆಗಳೂ ಇರಲಿಲ್ಲ. ಅದೊಂದು ಖಾಸಗಿ ಪತ್ರವಾಗಿತ್ತೇ ಹೊರತು ಸರ್ಕಾರಕ್ಕೆ ಬರೆದ ಪತ್ರವಾಗಿರಲಿಲ್ಲ.

ನಿಷೇಧ ಕಳೆದ ನಂತರ ಗುರೂಜಿಯವರು ದೇಶಾದ್ಯಂತ ಪ್ರವಾಸ ಕೈಗೊಂಡಾಗ ತಮ್ಮ ಭಾಷಣಗಳಲ್ಲಿ ಸಂಘದ ವಿರುದ್ಧ ಮೇಲೆ ಸರ್ಕಾರ ದುರುzಶಪೂರ್ವಕವಾಗಿ ಬಿತ್ತಿರುವ ಭ್ರಮೆಯನ್ನು ಸ್ಪಷ್ಟ ಶಬ್ದಗಳಲ್ಲಿ ಖಂಡಿಸಿದ್ದರು. ಅವರು ಭಾಷಣವೊಂದರಲ್ಲಿ ಹೇಳಿದ್ದು ಹೀಗೆ: ‘ನಾನೊಂದು ಮಹತ್ವದ ಸ್ಪಷ್ಟೀಕರಣ ನೀಡಬೇಕಾದ ಅಗತ್ಯವಿದೆ. ಸರ್ಕಾರಕ್ಕೆ ನಾನು ಲಿಖಿತ ರೂಪದಲ್ಲಿ ವಚನ ನೀಡಿರುವೆ ಎಂಬಂತೆ ಪ್ರಚಾರ ಮಾಡಲಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂತಹ ಯಾವುದೇ ಆಶ್ವಾಸನೆಯನ್ನು ನಾನು ಯಾರಿಗೂ ನೀಡಿಲ್ಲವೆಂಬುದನ್ನು ಘಂಟಾಘೋಷವಾಗಿ ಸಾರಿಹೇಳುತ್ತೇನೆ. ಹಾಗಿದ್ದಲ್ಲಿ ನಿಷೇಧವನ್ನು ಸರ್ಕಾರ ಹಿಂತೆಗೆದುಕೊಂಡಿzಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಬಗ್ಗೆ ನಾನು ಇಷ್ಟು ಮಾತ್ರ ಹೇಳಬಯಸುವೆ – ಯಾವುದೇ ಒಂದು ಒಪ್ಪಂದವಾಗುವಾಗ ಉಭಯ ಪಕ್ಷದವರು ಒಂದಿಷ್ಟು ಹಿಮ್ಮೆಟ್ಟಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ತುಂಬ ಹಿರಿಯರಾಗಿರುವ ಟಿ.ಆರ್.ವೆಂಕಟರಾಮ ಶಾಸ್ತ್ರಿಯವರ ಸಲಹೆಯಂತೆ, ಕಳೆದ ಎರಡು ದಶಕಗಳಿಗಿಂತಲೂ ದೀರ್ಘ ಕಾಲದಿಂದ ಸಂಘ ಯಾವ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿತ್ತೋ ಅದನ್ನೇ ಸಂಘದ ಸಂವಿಧಾನವಾಗಿ ಲಿಖಿತ ರೂಪದಲ್ಲಿ ಕೊಡಲು ಒಪ್ಪಿಕೊಂಡೆ. ನಾನು ಮಾಡಿರುವುದು ಅಷ್ಟು ಮಾತ್ರ… ಸಂಘದ ಮೇಲಿನ ನಿಷೇಧವನ್ನು ಆದಷ್ಟು ಶೀಘ್ರ ಹಿಂತೆಗೆಯುವಂತಾಗಬೇಕು ಹಾಗೂ ಸೆರೆಮನೆಯಿಂದ ನಾನು ಬಿಡುಗಡೆ ಹೊಂದಬೇಕು ಎಂಬುದಕ್ಕಾಗಿ ಅಲ್ಲ…’

ಸರ್ಕಾರ ಸಂಘದ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿದ್ದು ಒಂದು ಚಮತ್ಕಾರವೂ ಅಲ್ಲ, ರಹಸ್ಯವೂ ಅಲ್ಲ. ದೇಶದ ಆಗಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿ ಅಂತಹ ಅನಿವಾರ್ಯತೆಯನ್ನು ತಂದೊಡ್ಡಿದ್ದೇ ಅದಕ್ಕೆ ಕಾರಣ.

೧. ಗಾಂಧಿಯವರ ಹತ್ಯೆಯ ಆರೋಪವನ್ನು ಸಂಘದ ಮೇಲೆ ಹೊರಿಸಿ ನಿಷೇಧ ವಿಧಿಸಿದ್ದು ತಮ್ಮ ಅಧಿಕಾರದ ಸ್ವಾರ್ಥಕ್ಕೋಸ್ಕರ. ದೇಶದಲ್ಲಿ ಪ್ರವರ್ಧಮಾನವಾಗುತ್ತಿದ್ದ ಸಂಘದ ಶಕ್ತಿ, ಜನಪ್ರಿಯತೆ ಮತ್ತು ಪ್ರಭಾವಗಳನ್ನು ಇದೇ ರೀತಿ ಬೆಳೆಯಲು ಬಿಟ್ಟರೆ ತಮ್ಮ ಕೈಗೆ ಬಂದಿರುವ ಅಧಿಕಾರವನ್ನು ಸಂಘ ಕಿತ್ತುಕೊಳ್ಳಬಹುದು ಎಂಬ ಭೀತಿ ಹೊಸ ಆಡಳಿತಗಾರರಿಗಿತ್ತು. ನಿಷೇಧ ವಿಧಿಸಿದ್ದು ಈ ಕಾರಣಕ್ಕಾಗಿ. ಈ ನಿಷೇಧ ಶಾಶ್ವತವಾಗಿ ಮುಂದುವರೆಯಬೇಕೆಂದು ಅಪೇಕ್ಷೆಪಟ್ಟಿದ್ದೂ ಅದೇ ಕಾರಣಕ್ಕಾಗಿ. ಆದರೆ ತಮ್ಮ ಮಾನ ಹರಾಜಾಗುತ್ತಿದೆ ಎನಿಸಿದಾಗ ಅಧಿಕಾರದ ರಾಜಕೀಯ ಸ್ವಾರ್ಥಕ್ಕಾಗಿಯೇ ನಿಷೇಧವನ್ನು ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಂಡಿತ್ತೇ ಹೊರತು ಬೇರೆ ಯಾವುದೇ ಕಾರಣಕ್ಕಲ್ಲ.

೨. ಮುಂದೆ ಕೆಲವೇ ತಿಂಗಳಲ್ಲಿ ಭಾರತ ಒಂದು ಗಣರಾಜ್ಯವಾಗಿ, ಸ್ವತಂತ್ರ ನ್ಯಾಯಾಂಗ, ಸರ್ವೊಚ್ಚ ನ್ಯಾಯಾಲಯ ಇತ್ಯಾದಿ ಅಸ್ತಿತ್ವಕ್ಕೆ ಬಂದ ಬಳಿಕ ಸಂಘ ನ್ಯಾಯಾಲಯದಲ್ಲಿ ದೂರು ಸಲ್ಲಿಸುವುದು ಖಚಿತ. ಅಲ್ಲಿ ವಿಚಾರಣೆ ಆರಂಭವಾದರೆ ‘ಸಂಘದ ತಪ್ಪು’ಗಳನ್ನು ಸಾಬೀತುಪಡಿಸಲು ಬೇಕಾದ ಪುರಾವೆಗಳಂತೂ ಇಲ್ಲ. ಬದಲಿಗೆ ತಮ್ಮ ಒಳಸಂಚು, ದಬ್ಬಾಳಿಕೆಯ ಕ್ರಮ ಇತ್ಯಾದಿ ಬಹಿರಂಗಗೊಳ್ಳುವುದು ಖಚಿತ. ಗುರೂಜಿ ಮತ್ತು ಸರ್ಕಾರದ ನಡುವೆ ನಡೆದ ಪತ್ರ ವ್ಯವಹಾರವೂ ಆಗ ಬೆಳಕಿಗೆ ಬಂದೇ ಬರುತ್ತದೆ. ಇದೆಲ್ಲ ಆಗದಿರಬೇಕಾದರೆ ನಿಷೇಧ ವಾಪಸ್ ಪಡೆಯುವುದೇ ಒಳಿತೆಂದು ಸರ್ಕಾರದ ಪ್ರಮುಖರಿಗೆ ಅನಿಸಿರುವ ಸಾಧ್ಯತೆ ಇz ಇದೆ. ಇಂತಹ ಇನ್ನೂ ಹಲವಾರು ಕಾರಣಗಳು ನಿಷೇಧ ರದ್ದತಿಯ ಹಿಂದಿವೆ.

ನೆಹರು ಮತ್ತಿತರ ಕೆಲವು ನಾಯಕರು ಆರೆಸ್ಸೆಸ್ ವಿರುದ್ಧ ಟೀಕಾ ಪ್ರವಾಹಗಳನ್ನೇ ಹರಿಸುತ್ತಿದ್ದರೂ ಸರ್ದಾರ್ ಪಟೇಲ್ ಅದನ್ನೆಲ್ಲ ಸಮ್ಮತಿಸಿರಲಿಲ್ಲ. ೭.೧.೧೯೪೮ರ ‘ದಿ ಹಿಂದು’ ಪತ್ರಿಕೆಯಲ್ಲಿ ಪ್ರಕಟವಾದ ಸರ್ದಾರ್ ಪಟೇಲರ ಹೇಳಿಕೆಯೇ ಇದಕ್ಕೆ ಸಾಕ್ಷಿ.In the Congress those who are in power feel that by virtue of their authority they will be able to crush the RSS by danda (force)… danda is meant for dacoits and thieves… The RSS men are not theives and dacoits. They are patriots…’ ’ ಆರೆಸ್ಸೆಸ್ ಸಮಾಜವಿರೋಧಿ ಸಂಘಟನೆಯಾಗಿದ್ದರೆ ಸರ್ದಾರ್ ಪಟೇಲರು ಹೀಗೆ ಹೇಳಿಕೆ ನೀಡಲು ಸಾಧ್ಯವಿತ್ತೆ?

ಪಂಡಿತ್ ನೆಹರು ಸಂಘವನ್ನು ನಖಶಿಖಾಂತವಾಗಿ ವಿರೋಧಿಸುತ್ತಿದ್ದರೂ ಎಲ್ಲೋ ಒಂದು ಕಡೆ ಸಂಘವನ್ನು ಎದುರು ಹಾಕಿಕೊಳ್ಳುವುದು ಒಳ್ಳೆಯದಲ್ಲ ಎಂಬ ಭಾವನೆಯೂ ಅವರ ಆಂತರ್ಯದಲ್ಲಿತ್ತೆಂದೆನಿಸುತ್ತದೆ. ಹಾಗಿಲ್ಲದಿದ್ದರೆ ಅವರು ದೆಹಲಿಯಲ್ಲಿ ನಡೆದ ೧೯೬೩ರ ಗಣರಾಜ್ಯೋತ್ಸವ ಪೆರೇಡ್‌ಗೆ ಸಂಘದ ಸ್ವಯಂಸೇವಕರನ್ನು ಪಾಲ್ಗೊಳ್ಳುವಂತೆ ಆಹ್ವಾನಿಸುತ್ತಿದ್ದರೆ? ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಮೊಟ್ಟಮೊದಲ ಬಾರಿಗೆ ಆರೆಸ್ಸೆಸ್ ಸ್ವಯಂಸೇವಕರು ಅಧಿಕೃತವಾಗಿ ಪಾಲ್ಗೊಂಡಿದ್ದರೂ ‘ದಿ ಹಿಂದು’ ಪತ್ರಿಕೆ ಆ ಬಗ್ಗೆ ಮಾತ್ರ ಏಕೆ ವಿಶೇಷ ಸುದ್ದಿಯನ್ನು ಪ್ರಕಟಿಸಲಿಲ್ಲ?

ಸಂಘ ಒಂದು ರಾಜಕೀಯೇತರ ಸಂಘಟನೆಯಾಗಿದ್ದರೂ ಅದರ ಸ್ವಯಂಸೇವಕರು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಲು ಅವಕಾಶವನ್ನು ಸಂಘದ ಸಂವಿಧಾನ ಕಲ್ಪಿಸಿದೆ. ಆದರೆ ಸ್ವಯಂಸೇವಕ ಯಾವುದೇ ಕ್ಷೇತ್ರಕ್ಕೆ ಹೋದರೂ ದೇಶಹಿತವನ್ನು ಮೊದಲು ಎತ್ತಿಹಿಡಿಯಬೇಕಾದುದು ಆತನ ಕರ್ತವ್ಯ. ಡಾ.ಶ್ಯಾಮಪ್ರಸಾದ ಮುಖರ್ಜಿ ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಸಂದರ್ಭದಲ್ಲಿ ಸಂಘದ ನೆರವನ್ನು ಯಾಚಿಸಿದಾಗ ಸಂಘ ಕೆಲವು ಸ್ವಯಂಸೇವಕರನ್ನು ಆ ಕ್ಷೇತ್ರಕ್ಕೆ ಕಳುಹಿಸಿಕೊಟ್ಟಿತ್ತು. ಸ್ವತಃ ಗುರೂಜಿಯವರೇ ವಿಶ್ವಹಿಂದು ಪರಿಷತ್ ಸ್ಥಾಪನೆಯಲ್ಲಿ ಆಸಕ್ತಿವಹಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪರಿವರ್ತನೆಗೆ ಮುಂದಾದರು. ಆದರೆ ಅವರೆಂದೂ ವಿಹಿಂಪ ಅಧ್ಯಕ್ಷರಾಗಲಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಸರಸ್ವತಿ ಶಿಶು ಮಂದಿರಗಳು (ಈಗ ವಿದ್ಯಾಭಾರತಿ), ಬುಡಕಟ್ಟು ಜನರ ಕ್ಷೇತ್ರದಲ್ಲಿ ವನವಾಸಿ ಕಲ್ಯಾಣ ಆಶ್ರಮ, ಏಕಲ ವಿದ್ಯಾಲಯಗಳು, ಕಾರ್ಮಿಕ ಕ್ಷೇತ್ರದಲ್ಲಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್), ವಿದ್ಯಾರ್ಥಿ ಕ್ಷೇತ್ರದಲ್ಲಿ ವಿದ್ಯಾರ್ಥಿ ಪರಿಷತ್… ಹೀಗೆ ರಾಷ್ಟ್ರಮಟ್ಟದಲ್ಲಿ ೩೨ಕ್ಕೂ ಹೆಚ್ಚು ಸಂಘ ಪರಿವಾರದ ಸಂಘಟನೆಗಳಿವೆ. ಸಂಘ ಅವೆಲ್ಲ ಸಂಘಟನೆಗಳಿಗೂ ಸಮಾನ ಆದ್ಯತೆ ನೀಡಿದೆ. ಕೇವಲ ರಾಜಕೀಯ ಸಂಘಟನೆಗೇ ವಿಶೇಷ ಆದ್ಯತೆಯನ್ನು ಎಂದೂ ನೀಡಿಲ್ಲ.

ವಸ್ತುಸ್ಥಿತಿ ಹೀಗಿರುವಾಗ ಆರೆಸ್ಸೆಸ್ ಬಿಜೆಪಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಸರ್ಕಾರಕ್ಕೆ ಸಲ್ಲಿಸಿದ ತನ್ನ ಸಂವಿಧಾನಕ್ಕೆ ಅಪಚಾರ ಮಾಡಿದೆ ಹಾಗೂ ೧೯೪೯ರಲ್ಲಿ ಸರ್ಕಾರಕ್ಕೆ ನೀಡಿದ ವಚನವನ್ನು ಮರೆತುಬಿಟ್ಟಿದೆ ಎಂಬ ವಿದ್ಯಾಸುಬ್ರಹ್ಮಣ್ಯಂ ಅವರ ಆರೋಪ ಅರ್ಥಹೀನ ಹಾಗೂ ಆಧಾರರಹಿತ.

ಸಂಘದ ಮೇಲಿನ ನಿಷೇಧ ಹಿಂತೆಗೆದುಕೊಂಡಿzಕೆ ಎಂಬ ಬಗ್ಗೆ ಗ್ವಾಲಿಯರ್‌ನ ನಾರಾಯಣ ಗಂಗಾಧರ ವಝೆ ೬೦ ವರ್ಷಗಳ ಹಿಂದೆಯೇ, ಅಂದರೆ ನಿಷೇಧ ದೂರವಾದ ತಕ್ಷಣವೇ ಹಿಂದಿ ಗ್ರಂಥವೊಂದನ್ನು ರಚಿಸಲು ರಾಶಿರಾಶಿ ಮಾಹಿತಿಗಳನ್ನು ಕಲೆ ಹಾಕಿದ್ದರು. ಹಸ್ತಪ್ರತಿ ಕೂಡ ಹೆಚ್ಚುಕಡಿಮೆ ಸಿದ್ಧವಾಗಿತ್ತು. ಆದರೆ ಅಂತಹದೊಂದು ಪುಸ್ತಕ ಪ್ರಕಟವಾಗುವ ವಿಷಯ ತಿಳಿದಾಗ ಆಗಿನ ಕೇಂದ್ರ ಗೃಹಮಂತ್ರಿ ಸರ್ದಾರ್ ಪಟೇಲರು ತುಂಬಾ ಕಸಿವಿಸಿಪಟ್ಟಿದ್ದರು. ತಮ್ಮ ಅಸಮಾಧಾನವನ್ನು ಆಗಿನ ಸರಸಂಘಚಾಲಕರಾದ ಗುರೂಜಿಯವರ ಬಳಿಯೂ ವ್ಯಕ್ತಪಡಿಸಿದ್ದರು. ದೇಶದ ಅಂದಿನ ಸಾಮಾಜಿಕ, ರಾಜಕೀಯ ಸನ್ನಿವೇಶದಲ್ಲಿ ಪರಸ್ಪರ ಸೌಹಾರ್ದದ ವಾತಾವರಣ ಉಳಿಸಿ ಬೆಳೆಸಬೇಕಾದ ಅಗತ್ಯ ಬಹಳವಿತ್ತು. ೧೯ ತಿಂಗಳ ಕಾಲ ನಡೆದ ಘರ್ಷಣೆಯ ನಂತರ ಸರ್ಕಾರ ನಿಷೇಧವನ್ನು ಹಿಂತೆಗೆದುಕೊಂಡಿದ್ದು ಒಂದು ರೀತಿಯಲ್ಲಿ ಗಾಯಕ್ಕೆ ಬ್ಯಾಂಡೇಜ್ ಕಟ್ಟಿ ಅದನ್ನು ಮುಚ್ಚಿರಿಸಲಾಗಿದ್ದ ಸ್ಥಿತಿ ಆಗಿನದಾಗಿತ್ತು. ಈ ವಿಷಯದ ಕುರಿತು ಪುಸ್ತಕ ಪ್ರಕಟಣೆಯಾದರೆ ಮುಚ್ಚಿದ ಗಾಯವನ್ನು ಬ್ಯಾಂಡೇಜ್ ಬಿಚ್ಚಿ ಪ್ರದರ್ಶಿಸಿದಂತಾಗುತ್ತದೆ ಎಂಬುದು ಸರ್ದಾರರ ಅಸಮಾಧಾನಕ್ಕೆ ಕಾರಣ. ಗುರೂಜಿಯವರು ಸರ್ದಾರರ ಮಾತಿಗೆ ಬೆಲೆಕೊಟ್ಟು ಪುಸ್ತಕದ ಪ್ರಕಟಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದರು. ಮುಂದೆ ಸುಮಾರು ೫೦ ವರ್ಷಗಳ ನಂತರವೇ ಆ ಪುಸ್ತಕ ಪ್ರಕಟವಾಯಿತು. ಗಂಗಾಧರ ವಝೆ ಮತ್ತು ಮಾಣಿಕ್‌ಚಂದ ವಾಜಪೇಯಿ ಇವರಿಬ್ಬರೂ ಸೇರಿ ರಚಿಸಿದ ‘ಪಹಲೀ ಅಗ್ನಿ ಪರೀಕ್ಷಾ’ ಎಂಬ ಹಿಂದೀ ಕೃತಿಯನ್ನು ಪ್ರಕಟಿಸಿದ್ದು ಭೋಪಾಲದ ಅರ್ಚನಾ ಪ್ರಕಾಶನ. ಕನ್ನಡದಲ್ಲೂ ಈ ಕೃತಿಯನ್ನು ‘ಅಗ್ನಿ ಪರೀಕ್ಷೆ’ ಎಂಬ ಶೀರ್ಷಿಕೆಯಲ್ಲಿ ೨೦೦೯ರಲ್ಲಿ ಬೆಂಗಳೂರಿನ ಸಾಹಿತ್ಯ ಸಂಗಮ ಹೊರತಂದಿದೆ (ಅನುವಾದ: ಚಂದ್ರಶೇಖರ ಭಂಡಾರಿ). ಸಂಘದ ಮೇಲಿನ ಮೊದಲ ನಿಷೇಧ, ಅದರ ಹಿನ್ನೆಲೆ, ನಿಷೇಧ ತೊಲಗಿಸಲು ಸಂಘ ನಡೆಸಿದ ಹೋರಾಟ, ಸರ್ಕಾರದೊಂದಿಗೆ ನಡೆದ ಅಧಿಕೃತ ಪತ್ರ ವ್ಯವಹಾರಗಳು – ಇತ್ಯಾದಿ ಎಲ್ಲ ವಿವರಗಳೂ ಅದರಲ್ಲಿವೆ. ವಿದ್ಯಾಸುಬ್ರಹ್ಮಣ್ಯಂ ತಮಗೆ ಲಭ್ಯವಾದ ಮಾಹಿತಿಗಳನ್ನಷ್ಟೇ ಹೆಣೆದು ಅದೇ ಸತ್ಯವೆಂದು ಸಾರಿದರೆ ಅದಕ್ಕೇನರ್ಥ? ಬಾವಿಯೊಳಗಿನ ಕಪ್ಪೆ ಅದೇ ಜಗತ್ತೆಂದು ಭ್ರಮಿಸಿದಂತೆ ಇದೂ ಕೂಡ ಆಗುವುದಿಲ್ಲವೆ?

೧೯೪೯ರಲ್ಲಿ ಸಂಘದ ಮೇಲಿನ ನಿಷೇಧವನ್ನು ತೆಗೆಯಲು ಸರ್ಕಾರ ಸಮ್ಮತಿಸಿದ್ದು ಕೆಲವು ಷರತ್ತಿಗೊಳಪಟ್ಟು; ಬೇಷರತ್ತಾಗಿ ಸಂಘದ ಮೇಲಿನ ನಿಷೇಧವನ್ನು ತೆಗೆದು ಹಾಕಿದ್ದಲ್ಲ ಎಂದು ಈಗ ಕೆಲವು ಬುದ್ಧಿಜೀವಿಗಳು, ಲೇಖಕರು ತಮಗೆ ತೋಚಿದಂತೆ ವಾಸ್ತವವನ್ನು ತಿರುಚುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಆದರೆ ನಿಷೇಧವನ್ನು ಬೇಷರತ್ತಾಗಿ ತೆಗೆದು ಹಾಕಲಾಯಿತು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ವಾಸ್ತವವನ್ನು ತಿರುಚುವವರಿಗೆ ಮಾತ್ರ ಆ ಸಾಕ್ಷ್ಯಾಧಾರಗಳು ಕಣ್ಣಿಗೆ ಕಾಣಿಸುವುದೇ ಇಲ್ಲ!

Vishwa Samvada Kendra

One thought on “ನೇರನೋಟ: ಆರೆಸ್ಸೆಸ್ ಮೇಲೆ ಮತ್ತೊಂದು ಮಿಥ್ಯಾಪವಾದ; ವಾಸ್ತವವೇನು?

  1. The article by Sri Du.Gu.Lakshman is an eye opener on those who still believe mischievous propaganda. All opinions against RSS have lost the peoples trust and support. those who show to the world that they are against RSs will accept RSS work internally. they are the hypocrites.
    It is 88 years for Sangh and 67 years for independent India. still how many more years are required for the pragmatic society to understand RSS? These creamy layer of the society, sit on judgement even without reading RSS and participating in its Shakha. Unless you Guys come & see the RSS internally you will not be able to understand the Real RSS.
    Media has not learnt lesson from the repeated win of RSS filed cases in Indian courts against mis-propoganda or abuses or false reports. It is not known why Smt Vidya subramanyam a hindu women is writing abuses in the News paper called The Hindu, and what has RSS did for these people. that’s why year after year The Hindu has failed to increase its readers and people are fed up with its malicious campaign against Patriotic organisations like RSS.
    The article is a befitting one and should be read and shared by one and all.

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ನೇರನೋಟ: ಮೋದಿ ಪಟೇಲರ ಪ್ರತಿಮೆ ನಿರ್ಮಿಸಿದರೆ ಕಾಂಗ್ರೆಸ್ಸಿಗರಿಗೇಕೆ ಮೈ ಉರಿ?

Mon Nov 25 , 2013
by Du Gu Lakshman ೫೫ ವರ್ಷಕ್ಕಿಂತಲೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್ ಮರೆತೇ ಬಿಟ್ಟಿದ್ದ ಧೀಮಂತ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಮತ್ತೆ ಮತ್ತೆ ನೆನಪು ಮಾಡಿಕೊಡುವ ಪ್ರಯತ್ನ ಈಚೆಗೆ ಸಾಗಿದೆ. ಪ್ರಧಾನಿ ಅಭ್ಯರ್ಥಿ ಎಂದು ಘೋಷಿತವಾಗಿರುವ ನರೇಂದ್ರ ಮೋದಿ ಈಚೆಗೆ ಸಭೆಯೊಂದರಲ್ಲಿ ಮಾತನಾಡುತ್ತಾ, ‘ನೆಹರು ಅವರ ಬದಲಿಗೆ ಪಟೇಲರು ಮೊದಲ ಪ್ರಧಾನಿಯಾಗಿ ನೇಮಕಗೊಂಡಿದ್ದರೆ ದೇಶದ ಈಗಿನ ಪರಿಸ್ಥಿತಿಯೇ ಬದಲಾಗುತ್ತಿತ್ತು’ ಎಂದಿದ್ದು ದೇಶಾದ್ಯಂತ ಭಾರೀ ವಿವಾದ ಹಾಗೂ […]