ಪ್ರದೀಪ ಕುಮಾರ್ ಶೆಟ್ಟಿ. ಕೆ.

Sarhad Ko Pranam 20, 21, 22, 23 Nov 2012

ನವೆಂಬರ್ ೧೬, ರಾತ್ರಿ ೧೨ ಘಂಟೆ, ಮಂಗಳಾ ನಿಜಾಮುದ್ದೀನ್ ರೈಲು ಭಟ್ಕಳ ನಿಲ್ದಾಣದಲ್ಲಿ ೨ ನಿಮಿಷ ನಿಂತಾಗ ಗಡಿಬಿಡಿಯಲ್ಲಿ S-೮ ಕೋಚನ್ನು ಹತ್ತಿ, ನಮ್ಮ ಉಡುಪಿ ಜಿಲ್ಲೆಯ ತಂಡವನ್ನು ಶೋಧಿಸಿ ಕೊನೆಗೂ ದೆಹಲಿ ತಲುಪಿ, ಅಲ್ಲಿಂದ ಅಮೃತಸರ್ ತಲುಪಿದೆವು. ನಾವು ಅಂದರೆ ನಾನು, ನನ್ನ ಗೆಳೆಯ ರೂಪೇಶ, ಉಡುಪಿಯ ಸುಮಿತ್ ಮತ್ತು ದಿನೇಶ ಕೂಡಿಕೊಂಡು FINS- Forum for Integrated National Security ಎನ್ನುವ ನಿವೃತ್ತ ಸೇನಾ ಅಧಿಕಾರಿಗಳನ್ನು, ಸೈನಿಕರನ್ನೊಳಗೊಂಡ, ರಾಷ್ಟ್ರೀಯ ಸುರಕ್ಷೆ ಮತ್ತು ಯುವ ಜನರ ಭಾಗಿತ್ವದ ನೆಲೆಯಿಂದ ಹುಟ್ಟಿಕೊಂಡ ಒಂದು ಸಂಸ್ಥೆ, ನಮ್ಮನ್ನು ಅಂದರೆ ಉಡುಪಿ ಜಿಲ್ಲೆಯ ತಂಡವನ್ನು ಅಮೃತಸರ್‌ಗೆ ಅಹ್ವಾನಿಸಿತ್ತು. ಅಲ್ಲಿಂದ ವಾಘಾ – ಅಟಾರಿ ಗಡಿ ಭಾಗದಲ್ಲಿನ ಕೆಲವು ಹಳ್ಳಿಗಳಲ್ಲಿ ಎರಡು ದಿನ ನಮ್ಮನ್ನು ಉಳಿಸಿ ಗಡಿಭಾಗದ ಜನರೊಡನೆ ಸಂವಹನ, ವಿಚಾರ ವಿನಿಮಯ ಮತ್ತು ಅವರ ಬದುಕಿನ ಸಹಜ ದರ್ಶನವನ್ನು ಒದಗಿಸುವ ಉದ್ದೇಶದಿಂದ FINS ಇಡೀ ಭಾರತನ್ನು ವ್ಯಾಪಿಸಿದ ಸಂಘಟನೆಯಾದ ಕಾರಣ ಪ್ರತೀ ರಾಜ್ಯದ ಪ್ರತೀ ಜಿಲ್ಲೆಯ ಪ್ರತಿನಿಧಿಗಳನ್ನು ಒಂದೊಂದು ಗಡಿ ಭಾಗಕ್ಕೆ ಸಂಯೋಜಿಸಿತ್ತು. ಉದಾಹರಣೆಗೆ ಮಂಗಳೂರು ಜಿಲ್ಲೆಯ ಪ್ರತಿನಿಧಿಗಳು ಭೂತಾನ್- ಮತ್ತು ಪಶ್ಚಿಮ ಬಂಗಾಳ ಗಡಿಗೆ ಹೋದರೆ, ಕೊಡಗು ಜಿಲ್ಲೆಯವರು ರಾಜಸ್ತಾನ- ಪಾಕಿಸ್ತಾನ ಗಡಿಯನ್ನು ದರ್ಶಿಸಿ ಅನುಭವಿಸಿ, ಅಧ್ಯಯನಿಸಿದರು. ನಾವು ಮೊದಲೇ ತಿಳಿಸಿದ ಹಾಗೆ ಪಂಜಾಬ್ ವಾಘಾ ಅಟಾರಿ- ಪಾಕಿಸ್ತಾನ ಗಡಿಗೆ.

ನಾವು ಅಧ್ಯಯನಕ್ಕೆ  ನೆಲೆನಿಂತ ಹಳ್ಳಿಯ ಹೆಸರು ’ರಾಜಾತಾಲ್’, ಹಿಂದೊಮ್ಮೆ ಅಲ್ಲಿ ದೊಡ್ಡ ಸರೋವರ ಇತ್ತಂತೆ, ಈಗ ಬರೀ ಹೆಸರಷ್ಟೇ, ಬಡವ ಸಂಪತ್ ಕುಮಾರನ ಹಾಗೆ, ಹಸಿರು ಕ್ರಾಂತಿ ಎನ್ನುವ ಹುಚ್ಚು ಭೂಮಿಯ ಬಸಿರ ಬಗೆದು ವಿಷ ಉಣಿಸಿ ಸೃಷ್ಟಿ ಸಹಜವಾಗಿದ್ದ ಕೆರೆ, ತಾಲ್ ಅನ್ನು ಆಪೋಶನ ಗೊಳಿಸಿದ್ದು ಕಣ್ಣ ಮುಂದೆ ಸುಳಿಯಿತು. ಪಂಜಾಬ್‌ನ  ಶ್ರೀಮಂತ  ಝಾಟರ ಹಣದ ಹಸಿವು, ಸ್ವತಂತ್ರೋತ್ತರ ಭಾರತದ ಭೂ ಸುಧಾರಣೆಯ  ಕ್ರಮಗಳನ್ನೇ ನಾಚಿಸುವ ಹಾಗೆ ಸಾವಿರಾರು ಎಕರೆ ಭೂಮಿ ಹೊಂದಿ, ಒಂದು ಅಸಮಾನ ಆರ್ಥಿಕ, ಸಾಮಾಜಿಕ ವ್ಯವಸ್ಥೆಯನ್ನು ಸೃಷ್ಟಿಸಿದ ಘೋರತೆ ಒಂದು ಕಡೆಯಾದರೆ, ಸಸ್ಯಶಾಮಲೆಯಾಗಿ, ಪಂಚನದಿಗಳಿಂದ ಕೂಡಿದ್ದ ವೈಭವದ ಪಂಜಾಬ್ ಸೊರಗಿ ನಿತ್ತಂತೆ ಭಾಸವಾಯ್ತು. ಬಂದ ಮತ್ತು ಕಾರ‍್ಯಕ್ರಮದ ಉದ್ದೇಶವನ್ನೇ ಮರೆಸುವ ಪಂಜಾಬ್ ನಮ್ಮೆದುರು ನಿಂತಿತಾದರೂ ಪುನಃ ನನ್ನ ಸ್ಮೃತಿ ಗಡಿ ಸುರಕ್ಷೆ- ಅಧ್ಯಯನದ ಕಡೆಗೆ ಜಾರಿತು. ನಮ್ಮ ಗುಂಪಿನಲ್ಲಿದ್ದ ೧೬ ಜನ ಕಾಶ್ಮೀರ, ಒರಿಸ್ಸಾ, ರಾಜಸ್ತಾನ್ ಮತ್ತು ಕರ್ನಾಟಕದಿಂದ ಬಂದವರಾಗಿದ್ದೆವು. ಇಂತಹ ಗುಂಪು ೨ ಪ್ರತ್ಯೇಕ ಸಾಧ್ಯತೆಗಳನ್ನು ಹೊಂದಿತ್ತು. ಒಂದು : ನಾವೆಲ್ಲರೂ ಕೂಡಾ ಭಾರತವನ್ನು ಗಡಿಯ ಮೂಲಕ ಅನುಭವಿಸಿವ ಅನುಭವ, ಎರಡು: ಚಿಕ್ಕ ಭಾರತದ ಮಿನಿಯೇಚರ್ ಹಾಗೆ ಅಥವಾ ದೊಡ್ಡ ರಾಷ್ಟ್ರದ ವಿವಿಧ ರಾಜ್ಯಗಳ ಪ್ರತಿನಿಧಿತ್ವದ ಮೂಲಕ ಒಂದು ಭಾರತ ಕೂಡಾ ಸೃಷ್ಟಿಯಾಗಿತ್ತು.

ರಾಷ್ಟ್ರ, ರಾಷ್ಟ್ರದ ಪರಿಕಲ್ಪನೆಯನ್ನು, ಅದೊಂದು ಜೀವಂತ, ಚೈತನ್ಯಶೀಲ ಅಭಿವ್ಯಕ್ತಿಯನ್ನು ಖಂಡಿಸುವ, ಅನುಭವಿಸದ ಗುಂಪು ಭಾರತದಲ್ಲಿರುವ ಹಾಗೆ, ಪ್ರತೀ ರಾಷ್ಟ್ರಗಳಲ್ಲೂ ಕೂಡಾ ಇದೆ. ಅವರು ಮಣ್ಣನ್ನು ಬರೀ ಮಣ್ಣೆಂದು ಭೌತ ವಸ್ತುವೆಂದು ಮಾತ್ರ ಗೃಹಿಸುತ್ತಾರೆ. ಹೆಚ್ಚೆಚ್ಚು ವರ್ಷ ಬದುಕುತ್ತಾ ಹೋದರೆ ರಾಷ್ಟ್ರವನ್ನೇ ಮರೆಯಬೇಕಾಗುತ್ತದೆ. ಎನ್ನುವ ಕಥನ, ನಂಬಿಕೆ ಕೂಡಾ ಅವರದು. ಅಂತಹ ಮನೋಭಾವದ ನಮ್ಮ ತಂಡದ ಒಬ್ಬ ಗೆಳೆಯ ಕಾಶ್ಮೀರದ ಅರುಣ್ ಗುಪ್ತಾ, ನಮ್ಮ ಗ್ರಾಮ ಅಧ್ಯಯನಕ್ಕಿಂತ ಮೊದಲೇ ನಾವು ವಾಘಾ ಭೇಟಿ ಮಾಡಿದ್ದ ಮತ್ತು ಅಲ್ಲಿನ Retreating  Ceremony  ಯನ್ನು ನೋಡಿ ಮೂಕ ವಿಸ್ಮಿತನಾದ, ಅವನು ಏನೂ ಮಾತನಾಡಲಿಲ್ಲ, ಕರ್ಚಿಫನಲ್ಲಿ ಕಣ್ಣೊರೆಸಿದ್ದ, ಒಂದು ಮಾತನ್ನು ಆಡಲಿಲ್ಲ.  ಸಂಜೆ ನಾವು ಮತ್ತು ಅರುಣ್ ದಾಬಾದಲ್ಲಿ ಊಟ ಮಾಡುತ್ತಿದ್ದಾಗ ಕೇಳಿದೆ  ಯಾಕೆ ಅಳ್ತಿದ್ದೆ? ಆತ ಹೇಳಿದ ’ಭಾರತ ಅನ್ನೋದು’ ಇದೆ ಅನ್ನಿಸ್ತು ಆ ಜೋಶ್ ನೋಡಿ. ಅದು ಅವಿಸ್ಮರಣೀಯ, ಮೊದ್ಲು ಅನುಮಾನ ಇತ್ತು, ಭಾರತ ಇದೆಯಾ ಅಂತ ಈಗ ಅದು ಗಟ್ಟಿಯಾಯ್ತು ಅಂತ ಉಸುರಿದ.

ಗಡಿ ಪ್ರದೇಶಗಳನ್ನು ಅಲ್ಲಿನ ರೈತರನ್ನು ನೋಡಿ ಖುಷಿ ಜೊತೆಗೆ ಅಚ್ಚರಿ ಆಯ್ತು. ಜಾಟ್ ಸಮುದಾಯಕ್ಕೆ ಸೇರಿದ್ದ ಹೆಚ್ಚಿನ ರೈತರು ೬ ಫೀಟ್‌ನಷ್ಟು ಉದ್ದವಾಗಿದ್ದು ಆಜಾನುಬಾಹುತ್ವ ಹೊಂದಿದ್ದು ಸರಿಸುಮಾರು ೭೦ ಕೇಜಿಗಿಂತ ಯಾರು ಕಡಿಮೆ ಇರಲಿಲ್ಲ. ಭೌತಿಕವಾಗಿ, ಜೈವಿಕವಾಗಿ  ಆದ ಅಚ್ಚರಿಗಿಂತ ಅವರ ಮನೋಧಾರ್ಡ್ಯದ ಬಗ್ಗೆ ಹೆಚ್ಚು. ಒಂದು: ಪ್ರತೀ ದಿನ ಬೆಳಿಗ್ಗೆ ೫ ಘಂಟೆಗೆದ್ದು ಟ್ರಾಕ್ಟರ್ ನಲ್ಲಿ Zeroline ಪ್ರದೇಶ (Zeroline ಪ್ರದೇಶವೆಂದರೆ  ಪಾಕ್ ಇಂಡಿಯಾ ಗಡಿಗಳ ನಂತರದ ಪ್ರದೇಶ) ದಲ್ಲಿರುವ Potato, ಶೇಂಗಾ ಮತ್ತು ಸಾಸಿವೆ ಗದ್ದೆಗಳಲ್ಲಿ ಅದುಮಿಟ್ಟ ಸ್ವಾತಂತ್ರ್ಯದ ನಡುವೆ ಕೆಲಸ, ಕೃಷಿಯನ್ನು ನಿರ್ವಹಿಸಬೇಕಾದುದು. ಪ್ರತಿ ದಿನ ಗಡಿಯ ಚೌಕಿಯ Spot- Border Spat)   ಜವಾನರು ಸ್ವಾಗತ ಕೋರಿ ಸಲೀಸಾಗಿ ಅವರನ್ನು ಬಿಡಲ್ಲ. ಬದಲಿಗೆ ಅವರ ಗುರುತು ಚೀಟಿ ನೋಡಿ ತಪಾಸಣೆ ಮಾಡಿ ಬಿಡಬೇಕಷ್ಟೆ. ನಮ್ಮದೇ ನಾಡಿನಲ್ಲಿ ನಮ್ಮದೇ ಸೈನಿಕರ ’ರೋಜ್ ಕಾ ಕಾಮ್’ ನೋಡಿ ಅನುಭವಿಸಿ ಕೂಡಾ ಕೃಷಿ ಕ್ರಾಂತಿ, ಹಸಿರು ಕ್ರಾಂತಿಯ ಸಾಧನೆ ಮಾಡಿದ ದಾರ್ಷ್ಯ ನಿಜಕ್ಕೂ ಮೆಚ್ಚುವಂತದ್ದು. ಅಲ್ಲಿನ ರೈತರಿಗೆ ಇದು ಒತ್ತಡದ, ತಲೆನೋವಿನ ಕೆಲಸದ ಹಾಗಲ್ಲ, ಬದಲಿಗೆ ಅತ್ಯಂತ ಸಹಜ ಸೃಷ್ಟಿ ಕ್ರಿಯೆ, ಅಥವಾ ನೈಸರ್ಗಿಕವಾಗಿ  ಹೆತ್ತ ಅನುಭವ. ಅವರು ಉಪ್ಪು ನೋಡಲು ಸಮುದ್ರಕ್ಕೆ ಹೋಗಬೇಕಂತಿಲ್ಲ. ಬದಲು ದಿನನಿತ್ಯದ ಅವರ ಬೆವರಿನಲ್ಲಿ ನೋಡುತ್ತಾರೆ. ನಾವಿದ್ದ ಹಳ್ಳಿಯ ರೈತ ಹರ‍್ವಿಂದರ್ ಸಿಂಗ್ ನನ್ನು  ಮಾತನಾಡಿಸಿದಾಗ ಆತ ಹೇಳಿದ್ದು ಇಷ್ಟೇ  ನೋಡಿ ಸಾಬ್ ಇಲ್ಲಿ ಕೆಲವೊಮ್ಮೆ ಉಭಯ ಗಡಿಗಳ ನಡುವೆ Firing  ಕೂಡಾ ಆಗುತ್ತೆ. ಎರಡು ಕಡೆಯ ಗನ್‌ಗಳು ಬೆಂಕಿಯುಗುಳುತ್ತವೆ. ಅವರು ಗುಂಡನ್ನು ನೆಡುತ್ತಾರೆ. ನಾವು ಗುಂಡಿಗಳಲ್ಲಿ ಈರುಳ್ಳಿಯನ್ನು ನೆಡುತ್ತೇವೆ ಅದು ಅವರಿಗೆ ಸಹಜ ಇದು ನಮಗೆ ಒಗ್ಗಿದೆ ಮತ್ತು ನಮಗೆ ಸಹಜ. ಗಡಿಭಾಗದ ರೈತರ ಕಷ್ಟ ಹೇಳ ತೀರದು. ಗಡಿ ಭಾಗದ ಭೂಮಿಯ ಮೇಲೆ ಅವರಿಗೆ ಪರಿಪೂರ್ಣ ಅಧಿಕಾರವಿಲ್ಲ. ಅವರು ಪದಶಃ ಮತ್ತು  ವಸ್ತ್ತುಶಃ ಗಡಿಭಾಗದವರೇ ಆಗಿದ್ದಾರೆ. ಗಡಿಯಿಂದ ಸುಮಾರು ೧೦ ಕಿಲೋಮಿಟರ್‌ವರೆಗೆ ಮನೆ, ಕೃಷಿ ಭೂಮಿಯನ್ನು ಹೊಂದಿರುವ ರೈತರು ಯುದ್ದ ಘೋಷಣೆಯಾದರೆ ತಮ್ಮ ಮನೆಯಿಂದ ೧೦ಕಿಲೋಮೀಟರ್ ದೂರ ಸರಿಯಬೇಕು. ಯುದ್ದ ವಿರಾಮ (ಸೀಸ್‌ಫೈರ್) ದ ವರೆಗು ಕೂಡಾ ಅವರು ಪುನಃ ತಮ್ಮ ಮನೆ, ಹಳ್ಳಿಯನ್ನು ಪ್ರವೇಶಿಸುವಂತಿಲ್ಲ. ಯುದ್ದದ ಸಂದರ್ಭದಲ್ಲಿ ಭಾರತೀಯ ಸೈನಿಕರು ಸಹಜ ಅಂತರಾಷ್ಟ್ರೀಯ ಗಡಿಯಿಂದ ದೂರ ಸರಿದು ಇಂತಹ ಗಡಿ ಭಾಗದ ಹಳ್ಳಿಗಳನ್ನು, ಮನೆಗಳನ್ನು  ಬಳಸುತ್ತಾರೆ ಮತ್ತು ಅಲ್ಲಿಯೇ ಬಂಕರ್‌ಗಳನ್ನು  ಸೃಷ್ಟಿ ಮಾಡಿ ಯದ್ದ ನಿರತರಾಗುತ್ತಾರೆ. ಒಂದು ವೇಳೆ ಯುದ್ದ ನಿಂತರೂ ಕೂಡಾ ಅಲ್ಲಿನ ಮೂಲ ನಿವಾಸಿ ಝಾಟ್ ರೈತರು ವಾಪಾಸ್ ಬಂದಾಗ  ಅವರ ಮನೆ, ಹಳ್ಳಿ ಅಯೋಮಯವಾಗಿರುತ್ತದೆ. ನಮ್ಮ ಗ್ರಾಮ, ಮನೆಯನ್ನು ಯುದ್ಧದ ನಂತರ ಪುನರ್ ನಿರ್ಮಿಸಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುವುದು, ಯುದ್ಧಕ್ಕಿಂತ ದೊಡ್ಡ ಅನುಭsವ’ ಎಂಬುದು ನಾವಿದ್ದ ಹಳ್ಳಿಯ ಗ್ರಾಮ ಮುಖಿಯನಾದ ಹರ್ಕತ್ ಸಿಂಗ್ ಅಭಿಪ್ರಾಯ. ಅಕ್ಷರಶಃ ಅವರ ಮನೆ, ಗದ್ದೆಗಳು ಯುದ್ಧ ಮುಗಿದ ನಂತರ ಚದುರಿದ ಚಿತ್ರ, ಕೊಲಾಜ್‌ನ ಹಾಗೆ ಗೋಚರಿಸುತ್ತವಂತೆ.

ನಾವು ಉಳಿದುಕೊಂಡಿದ್ದ ಹಳ್ಳಿಯ ಹೆಸರು ರಾಜಾತಾಲ್, ಸುಮಾರು ೧೦೦ ಜಾಟ್ ಕುಟುಂಬಗಳು ಇರುವ, ೨೦ ಮುಸ್ಲಿಂ ಕುಟುಂಬಗಳು ಮತ್ತು ೧೫ ದಲಿತ ಕುಟುಂಬಗಳು ಇರುವ ಚಿಕ್ಕ ಊರು. ಕೃಷಿಯೇ ಮೂಲಾಧಾರವಾದ ಇಲ್ಲಿ ಭತ್ತ, ಸಾಸಿವೆ, ಆಲೂಗಡ್ಡೆ ಮುಖ್ಯ ಬೆ. ಆಧುನಿಕ ಎನ್ನಬಹುದಾದ ಎಲ್ಲಾ ರೀತಿಯ  ಸೌಲಭ್ಯಗಳು ಇಲ್ಲಿವೆ. ಒಳ್ಳೆಯ ರಸ್ತೆ, ಟೆಲಿಪೋನ್, ೨೪ ಗಂಟೆ ಕರೆಂಟ್, ಇಂಟರ್ ನೆಟ್ ಸೌಲಭ್ಯ ಎಲ್ಲವೂ ಕೂಡಾ, ಆದರೆ ಇವೆಲ್ಲ ಗೃಹಿತ ವ್ಯವಸ್ಥೆಗಳು. ಸುರಕ್ಷೆ (Border Security)) ದೃಷ್ಟಿಯಿಂದ ಭಾರತ ಸರ್ಕಾರ ಅವುಗಳನ್ನು ಯಾವಾಗ ಬೇಕಾದರೂ ಕೂಡಾ ನಿರ್ಜೀವ ಗೊಳಿಸಲೂಬಹುದು, ಯಾವಾಗ ಬೇಕಾದರೂ ಕೂಡಾ ಜೀವಗೊಳಿಸಲೂಬಹುದು. ಇದಲ್ಲದೆ ಪಂಜಾಬಿನ ಗಡಿಭಾಗದ ಎಷ್ಟೋ ಹಳ್ಳಿಗಳ ಹಾಗೆ ರಾಜಾತಾಲ್ ಕೂಡಾ ಅತ್ಯಂತ ಕರಾಳವಾದ ಸ್ಮಂಗ್ಲಿಂಗ್ ಪ್ರಕ್ರಿಯೆಯಲ್ಲಿ ತನ್ನನ್ನು ಒಳಗೊಳಿಸಿಕೊಂಡಿರುವುದು ಮಾತ್ರ ಅತ್ಯಂತ ದುಖಃದಾಯಕ ಸ್ಥಿತಿ. ಸುಮಾರು ೮-೯ ತರಗತಿಯ ಹುಡುಗರು ಕೂಡಾ ಚಿಕ್ಕ ಪ್ಲಾಸ್ಟಿಕ್ ಕವರ್ ನಲ್ಲಿ ಬಟಾಣೆ ಗಾತ್ರದ ಕೊಕೇನ್‌ನ್ನು ಅಡಗಿಸಿಕೊಡಿರುವುದನ್ನು ನೋಡುತ್ತಿದ್ದಾಗ ಈ ದಂಧೆಯಲ್ಲಿ ಸಿಕ್ಕಿರುವ ಯುವಕರು ಭಾರತದ ಸುರಕ್ಷೆ, ಭವಿಷ್ಯಕ್ಕೆ ಹೇಗೆ ಪೂರಕವಾಗಿ ನಡೆದುಕೊಂಡಾರು? ಎಂಬ ಬಗ್ಗೆ ತುಸು ಸಂದೇಹ ಯಾರನ್ನು ಕೂಡಾ ಕಾಡೀತು ! ಪಾಕಿಸ್ತಾನದ ಗಡಿಯಿಂದ ಯಾರೋ ಒಬ್ಬ ಈ ದಂಧೆಯಲ್ಲಿ ತೊಡಗಿರುವವ ಪ್ಯಾಕೇಟ ಅನ್ನು ಬಿಸಾಕುತ್ತಾನೆ, ಅದು ಗಡಿಯ ಈಚೆ ಭಾಗದ ಪಂಜಾಬೀ ಭಾರತೀಯ ಝಾಟ್‌ರ ಗದ್ದೆಗೆ ಬೀಳುತ್ತೆ, ಅದನ್ನು ಗಡಿಭಾಗದ ಕೆಲವು ಕಿಡಿಗೇಡಿಗಳೇ ಸಂಗ್ರಹಿಸಿ ಬರಿಯ ರಾಜಾತಾಲ್‌ಗಷ್ಟೇ ಅಲ್ಲಿ, ಅಲ್ಲಿಂದ ಹತ್ತಿರತ್ತಿರ ೩೨ ಕಿ. ಮೀ ಅಮೃತಸರ್‌ನ  ಯುವಕರ ಕೈಗೂ ಕೂಡಾ ಕೊಕೇನ್ ನಿರಂತರವಾಗಿ ಹರಿಯುತ್ತದೆ. ಇದು ಎರಡು ಸಮಸ್ಯೆಯನ್ನು ತಂದೊಡ್ಡುತ್ತದೆ,  ಒಂದು: ಆತಂರಿಕ ಸುರಕ್ಷೆ, ಈಗ ಕೊಕೇನ್ ಬರುತ್ತೆ, ಭವಿಷ್ಯದಲ್ಲಿ ಏನು ಕೂಡಾ ಬರಬಹುದು. ಎರಡು: ಭಾರತದ ಭವಿಷ್ಯದ ಜನಾಂಗ ವಿಶೇಷವಾಗಿ ಪಂಜಾಬ್‌ನ ವೀರಗಾಥೆಯ ಪರಂಪರೆ ಹೊಂದಿರುವ ಯುವ ಜನತೆ ಕೊಕೇನ್ ತಿಂದು , ತಿಂದು ಮಂಕಾಗಬಹುದಾದ ಸಾಧ್ಯತೆ. ಸುರಕ್ಷೆಯ ಪ್ರಶ್ನೆಯಂತು ತೀರಾ ಗಂಭೀರ  ಎರಡು ವಿಷಯಗಳಲ್ಲಿ ಒಂದು: ಭಾರತೀಯ ಸೈನ್ಯಕ್ಕೇನೇ ಈ ಸಮಸ್ಯೆಯನ್ನು ಕಂಟ್ರೋಲ್ ಮಾಡಲು ಆಗದಿರುವುದು. ಈಗಲೂ ಕೂಡಾ ಭಾರತೀಯ ಸೈನ್ಯಕ್ಕೆ ಸುಳಿವು ಸಿಕ್ಕಿದರೆ, ಗಡಿ ಭಾಗದ ಚೌಕಿ ಅಥವಾ ಪೋಸ್ಟ್ಟ್‌ಗಳ ಸಮೀಪ ಪ್ರತಿ ೨೦೦ ಮೀ ದೂರಕ್ಕೆ ಒಂದರಂತೆ ಇರುವ ಹ್ಯಾಲೋಜಿನ್ ಲೈಟ್  ಕಂಬಗಳನ್ನು ಅನಿರ್ಧಿಷ್ಟಾವಧಿವರೆಗೆ ಆಫ್ ಮಾಡಲಾಗುತ್ತದೆ. ಆಫ್ ಮಾಡಿದಾಗ ಪಾಕಿಸ್ತಾನಿ ಗಡಿಯ ಕಡೆಯಿಂದ ಮೊದಲೇ ನಿರ್ಧರಿಸುವ ಭಾರತದ ರೈತರ ಗದ್ದೆಗಳಲ್ಲಿನ ಗುರಿಗಳ ಮೇಲೆ ಅವರು ಪ್ಯಾಕೇಟ್‌ಗಳನ್ನು ಬಿಡಲಾರರು, ಬಿಸಾಕಲಾರರು ಎಂಬ ಕಾರಣದಿಂದ. ಇಲ್ಲಿ ಮುಖ್ಯವಾದ ಪ್ರಶ್ನೆಯಿರುವುದು ಯಾರು ಈ ದಂಧೆಗೆ ಸಹಕರಿಸುವುವರು? ಮತ್ತು ಈ ನೆಕ್ಸಸ್ (ದುಷ್ಟಕೂಟ) ನಲ್ಲಿ ಭಾಗಿಯಾಗುವವರು? ಯಾರೋ ಇರಲೇಬೇಕಲ್ಲ! ಮುಂಬೈ ದಾಳಿಯ ಸಂದರ್ಭದಲ್ಲಿ ಕೂಡಾ ಪಾಕಿಸ್ತಾನ ಆರೋಪಿಸಿದ ಹಾಗೆ ನಮ್ಮ ನೆಲದಲ್ಲಿನ ಸಹಕಾರಿಗಳೇ ಕಾರಣರು ಎಂಬ ಮಾತನ್ನು ಅಕ್ಷರಶಃ ತಳ್ಳಿ ಹಾಕಲಾಗದು.

ನಮ್ಮ ಗುಂಪು ತಿರುಗಿದ ಮೂರು ಹಳ್ಳಿಗಳಲ್ಲಿ ಮುಖ್ಯವಾಗಿ ರಾಜಾತಾಲ್ ಮತ್ತು ಮತ್ತೆರಡು ಹಳ್ಳಿಗಳು ನಮ್ಮ ಅನುಭವದಲ್ಲಿ ಸಮಸ್ತ ಭಾರತದ ಹಳ್ಳಿಗಳ ರೂಪಕವಾಗಿದ್ದವು. ಕನ್ನಡದ ಹಳ್ಳಿಗಳು ಕನ್ನಡತನ, ಗ್ರಾಮ, ಸಂಸ್ಕೃತಿಯನ್ನು ಕಟ್ಟಿಕೊಡುವ ಹಾಗೆ ಪಂಜಾಬಿ ಹಳ್ಳಿಗಳು ಪಂಜಾಬಿತನವನ್ನು ಇನ್ನೂ ಎಲ್ಲವನ್ನು ಮೀರಿಸುವ ಹಾಗೆ ಪಂಜಾಬಿ ಗ್ರಾಮತನ ಮತ್ತು ಅವರ ಆದರಾತಿಥಗಳು ನಮ್ಮನ್ನು ಖುಷಿ ಕೊಟ್ಟವು.  ಯಾವುದೇ ಮನೆಯನ್ನು ಪ್ರವೇಶಿಸಿದರೂ ಕೂಡಾ ಮೊದಲು ಕೂಡ್ರಿ, ಕೂಡ್ರಿ. ಎರಡನೇಯದಾಗಿ ನೀರು ಕುಡಿದು ಲೋಟ ಇಡುವಷ್ಟರಲ್ಲಿಯೇ ದೊಡ್ಡ ದೊಡ್ಡ ಚಾ ತುಂಬಿದ ಲೋಟಗಳು ನಮ್ಮನ್ನು ಕಾಯುತ್ತಿದ್ದವು. ಯಾರು ಕೂಡಾ ಅವರ ಪ್ರೀತಿಯನ್ನು, ಚಹಾವನ್ನು ತಪ್ಪಿಸಿಕೊಳ್ಳುವ ಹಾಗಿರಲಿಲ್ಲ. ಮದ್ಯಾಹ್ನ, ಸಂಜೆಯ ರೊಟ್ಟಿಯ ಊಟ ಉಣ ಬಡಿಸುವ ಕ್ರಮ, ಖುಷಿ, ಪ್ರೀತಿ, ಧನ್ಯತೆ ಇತ್ಯಾದಿಗಳು ಅವರು ಓಡಿಸುವ ಟ್ರಾಕ್ಟರ್ ಯಂತ್ರದ ಧಾಟಿಯಲ್ಲಿರುತ್ತಿರಲಿಲ್ಲ. ಬದಲಿಗೆ ಇಡೀ ಭಾರತದ ಎಲ್ಲಾ ಹಳ್ಳಿಗರೂ ಕೂಡಾ ಇಂದಿಗೂ ಅನುಭವಿಸುವ ಹಳ್ಳಿತನ, ಹೃದಯ ಶ್ರೀಮಂತಿಕೆ ಮತ್ತು ಸಹಜತೆಯಲ್ಲಿತ್ತು. ನಮಗೆ ಪಂಜಾಬ್‌ನಲ್ಲಿ ಹಳ್ಳಿಗಳಲ್ಲಿ ಭಾರತದ ಈ ಏಕರೂಪೀ ಹಳ್ಳಿತನ ಕಂಡಾಗ ಭಾರತದ ಕರ್ನಾಟಕ ಬೇರೆ, ವಾಯುವ್ಯ ಗಡಿಭಾಗದ ಪಂಜಾಬ್ ಬೇರೆ ಅಂತೆಣಿಸಲಿಲ್ಲ. ಬದಲಿಗೆ ಇಡೀ ಭಾರತ ’ಮೂರ್ತ- ಅಮೂರ್ತ’ ನೆಲೆಯಲ್ಲಿ ಸಂಸ್ಕೃತಿ, ಸಂಬಂಧ, ಪ್ರೀತಿಯಲ್ಲಿ  ಜೋಡಿತವಾಗಿದೆ ಎಂಬ ಭಾವ ಉಮ್ಮಳಿಸಿತು.

ಪಂಜಾಬಿ ಹಳ್ಳಿಯ ಸಾಮಾಜಿಕ ರಚನೆಗಳಲ್ಲಿ ದಲಿತರ ಸ್ಥಿತಿ ತೀರಾ ದುಸ್ತರವಾದುದು. ಸ್ತರವ್ಯವಸ್ಥೆಯ ಮೇಲಿನ ಎರಡು ಶ್ರ್ರೇಣಿಗಳಲ್ಲಿ ಉಚ್ಚವರ್ಗದ ಅಕಾಲಿಗಳು ಮತ್ತು ಆರ್ಥಿಕ  ದಾರ್ಢ್ಯರಾದ ಜಾಟರು ಆಕ್ರಮಿಸಿ ಕೆಳಗಿನ ಸ್ಥಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ದಲಿತರ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದುಕು ಅಯೋಮಯವಾಗಿರುವಂತೆ ಕಂಡಿತು.  ಯಾವ ಆಯಾಮಗಳಲ್ಲೂ ಕೂಡಾ ಅವರಿಗೆ ಪ್ರಾತಿನಿಧ್ಯವಿಲ್ಲ. ಮುಖ್ಯವಾಗಿ ರಾಜಕೀಯವಂತೂ ಅವರನ್ನು ಸಂಪೂರ್ಣ ನಿರಾಕರಿಸಿದೆ. ರಾಜಕೀಯ ನೀತಿಗಳು ಕೂಡಾ ಅವರನ್ನು ಪ್ರತಿಗಾಮಿಯನ್ನಾಗಿ ಮಾಡುತ್ತಾ ಅವರಿಗೆ ಶಿಕ್ಷಣವನ್ನು ನಿರಾಕರಿಸುತ್ತ ಹಳೆಯ  ಊಳಿಗಮಾನ್ಯ ವ್ಯವಸ್ಥೆ ಒದಗಿಸುತ್ತಿದ್ದ ಶ್ರಮ ಶ್ರಮಿಕರ ವರ್ಗವನ್ನು ಪೋಷಿಸುವ ಹಾಗೇ  ಅವರನ್ನು ಬೆಳೆಸುತ್ತಿದೆ. ಇದು ಯಾಕೆ ಪದೇ ಪದೇ ದಲಿತ ಸಿಖ್ಖರಿಗೂ ಮತ್ತು ಅಕಾಲಿಗಳಿಗೂ ಸಂಘರ್ಷವಾಗುತ್ತೆ ಎನ್ನುವ ನನ್ನ ತಲೆಯಲ್ಲಿದ್ದ ದೀರ್ಘ ಕಾಲೀನ ಪ್ರಶ್ನೆಗೆ ಉತ್ತರವನ್ನು ಕೂಡಾ ಒದಗಿಸಿಕೊಟ್ಟಿತ್ತು. ರಾಜಕೀಯ ಸಂಘಟನೆ ಅಕಾಲಿದಳ ಕೂಡಾ ಅಕಾಲಿಗಳನ್ನೆ,  ಶ್ರೀಮಂತ ಉನ್ನತ ವರ್ಗದವರನ್ನೇ ಪ್ರೋತ್ಸಾಹಿಸುತ್ತಿರುವ ಮತ್ತು ದಲಿತ ಸಿಖ್ಖರನ್ನು ಒಳಗೊಳ್ಳದ ಕ್ರಮ ನೋಡಿ ವೈಯಕ್ತಕವಾಗಿ ನನಗೆ ತೀರಾ ಮರುಕ ಹುಟ್ಟಿತು. ದೇವರೇ ಈ ಅಸಮಾನತೆ ಮತ್ತು Exclusion  ನನ್ನು ಸರಿಪಡಿಸಬಹುದೇನೋ !

ಪಂಜಾಬ್‌ನ ಗಡಿಯ ಕಾರ‍್ಯಕ್ರಮದಲ್ಲಿ ನನ್ನನ್ನು ತೀವ್ರವಾಗಿ ಕಾಡಿದ್ದು ೧೯೪೭ ರ ವಿಭಜನೆಯ ಕಥನ ಮತ್ತು ಸ್ವತಃ ನಾನೇ ಅನುಭವಿಸಿದ ಒಂದು ಚರಿತ್ರೋ-ಮಾನಸಿಕ ಯಾತನೆ. ನಾವು ಮೊದಲ ದಿನವೇ ರಾಜಾತಾಲ್ ಹಳ್ಳಿಯಲ್ಲಿ ನಂತರದ ೨ ದಿನಗಳ ಕಾರ‍್ಯಕ್ರಮಕ್ಕಾಗಿ ಸೇರಿದ್ದೇವು. ನಾವು ಆ ಹಳ್ಳಿಯನ್ನು ಮುಟ್ಟುವಾಗಲೇ ರಾತ್ರಿ ೮:೩೦ ಘಂಟೆಗಳಾಗಿತ್ತು. ನಾನು ಲಗೇಜ್ ಇಟ್ಟವನೇ, ನನ್ನ ಕೋಣೆಯ ಹತ್ತಿರವಿದ್ದ ಒಂದು ಕುರ್ಚಿಯನ್ನು ತೆಗೆದುಕೊಂಡು ಒಂದು ಎತ್ತರದ ಪ್ರದೇಶದಲ್ಲಿ ಗಡಿಗೆ ಅಭಿಮುಖವಾಗಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದೆ. ಗಡಿ  ಅಲ್ಲಿಂದ  ಸರಿಸುಮಾರು ೧೫೦ ರಿಂದ ೨೦೦ ಮೀಟರ್ ಅಂತರದಲ್ಲಿತ್ತು.  ಗಡಿಯಲ್ಲಿ ಸುಮಾರು ೨೦೦ ಮೀಟರ್ ಗೆ ಒಂದರಂತಿದ್ದ ಕೆಂಪು ಹ್ಯಾಲೋಜಿನ್ ದೀಪವನ್ನು ೭.೩೦ ಹೊತ್ತಿಗೇನೆ ಬೆಳಗಿಸಿದ್ದರು. ರಾತ್ರಿಯ ಮಂಜು, ಕೊರೆಯುವ ಚಳಿಯ ನಡುವೆ ನಾನು ಗಡಿಗಳನ್ನು ನೋಡಲಾರಂಭಿಸಿದ್ದೆ. ಗಡಿ ಕಾಣಿಸದಿದ್ದರು ಸರಿಯಾಗಿ ಹ್ಯಾಲೋಜಿನ್ ದೀಪಗಳಂತೂ ಸ್ಪಷ್ಟವಾಗಿ ಪ್ರತ್ಯೇಕತೆಯನ್ನು ತಿಳಿಸುತಿದ್ದವು. ನೋಡ ನೋಡುತ್ತಿದ್ದಂತೆ ನನ್ನ ಮನಸ್ಸು, ಪಾಕಿಸ್ತಾನದ ಹಳ್ಳಿಗಳಲ್ಲಿ ಇಣುಕುತ್ತಿದ್ದ ಕೆಂಪು ಹಳದಿ  ದೀಪಗಳತ್ತ ಸುಳಿಯಿತು. ಕಂಠ ತುಂಬಿ, ಧ್ವನಿ ಭಾರವಾಗಿ ಕಣ್ಣು ನಿಧಾನವಾಗಿ ಆರ್ದ್ರವಾಯಿತು ಮತ್ತು ಚರಿತ್ರೆಯ ಮಾಸ್ತರ್‌ಗೆ ೧೯೪೭ ರ ವಿಭಜನೆಯ ಚರಿತ್ರೆಯ ದುರಂತದ ವಿಭಜನೆಯ ಚಿತ್ರವನ್ನು ಮುನ್ನೆಲೆಗೆ ತಂದಿತು. ಅಲ್ಲಿನ ದೀಪ ನೋಡುತ್ತಿದ್ದ ಹಾಗೆ ನನ್ನದೇ ಜಾಗ, ಬೇಲಿ ಬಿದ್ದಿದೆ ಈಗ. ಪಾಕಿಸ್ತಾನ- ಚರಿತ್ರೆಯ ಶಿಶು – ಭಾರತದ ಅಖಂಡತೆ, ನಾನಿದ್ದ ಜಾಗದಿಂದ ೨೩ ಕಿ. ಮೀ ದೂರದಲ್ಲಿದ್ದ ಲವಪುರ, ಅಂದರೆ ಈಗಿ ಲಾಹೋರ್, ಅಲ್ಲಿ ಹರಿಯುವ ರಾವಿ, ಸಟ್ಲೇಜ್, ಚೀನಾಬ್ ಮುಂತಾದ ನದಿಗಳು ಇಂತಹ ಅನೇಕ ಚರಿತ್ರೆಯ ಸಂಕೀರ್ಣ ಚಿತ್ರ ಸೂತ್ರಗಳು ಕಣ್ಣು, ಮನಸ್ಸನ್ನಾಕ್ರಮಿಸಿ, ಭೂಗೋಳದ ಜಾಗಗಳು ವ್ಯಾಪಿಸಿ ೧೯೪೭ ರ ಮೊದಲಿದ್ದ ಭಾರತವನ್ನು ನೆನೆಯಿತು. ಮಾರನೇ ದಿನ ಗಡಿ ಭಾಗದಲ್ಲಿನ ಜನರ ಎರಡೂ ಕಡೆಯ ದೈಹಿಕ ಚಹರೆ, ಪಗಡಿ, ವೇಷಭೂಷಣಗಳನ್ನು ಗಮನಿಸಿದಾಗ ನನಗನಿಸಿದ್ದು, ಧರ‍್ಮವೆಂಬ ವಿಷ ಎಷ್ಟು ಕೆಟ್ಟದ್ದಾಗಿ ವ್ಯಾಪಿಸಿ, ೧೯೨೦ ರ ದಶಕದಲ್ಲಿ ಬೆಳೆದು ೧೯೪೭ ರಲ್ಲಿ ಭಾರತದ ಸಮಗ್ರ ಭೂಖಂಡವನ್ನು ಕಡಿಯಿತು. ಎರಡೂ ಕಡೆ ಜನ ಒಂದೇ ರೀತಿ ಇದ್ದಾರಲ್ಲಾ ! ಧರ‍್ಮದ ಬೋರ್ಡು ಕಾಣುವುದೇ ಇಲ್ಲವಲ್ಲ ಅನ್ನಿಸಿತು.

ಮಾರನೇ ದಿನ ನಾನು ರಾಜಾತಾಲ್‌ನಲ್ಲಿ ನಾವುಳಿದುಕೊಂಡಿದ್ದ ಮನೆಯ ವೃದ್ಧ ಸರಿ ಸುಮಾರು ೭೮-೮೦ರ ಹರೆಯದ ಆಸುಪಾಸಿನಲ್ಲಿದ್ದ ಜೋಗಿಂದರ್ ಸಿಂಗ್ ಕಥಿಸಿದ  ಪಾರ್ಟಿಶನ್ ನರೇಶನ್,  ಇದ್ಯಾಕೆ ಗಡಿ, ದರಿದ್ರ, ಆ ಜಾಗ ಕೂಡಾ ನಮ್ಮದೇ, ನಾನು ಆಡಿ ಬೆಳೆದ ಇಲ್ಲಿಂದ ೨೩ ಕೀ. ಮೀ ದೂರದಲ್ಲಿರುವ ಮುಝಾಫರಾಬಾದಿ ನ ಹುಣಸೆಮರ ಮತ್ತು ಮನೆ ಹತ್ತಿರದ ಆಲದ ಮರ ಮಟ್ಟೋಣ, ನೋಡೋಣ ಅಂತಾ ಆಸೆ ಇದ್ರೂ ಕೂಡಾ ಹೋಗೋಕಾಗಲ್ಲರೀ, ಥೂ ಇದೆಂತಹ ದರಿದ್ರ ಅವಸ್ಥೆ ಅನ್ನುತ್ತಾ ೧೯೪೭ ರ ವಿಭಜನೆಯ ದುರಂತದ ಚಿತ್ರ ಸರಣಿಯಲ್ಲಿನ ವಲಸೆ, ಕೊಲೆ, ಅತ್ಯಾಚಾರ, ರಕ್ತದ ಕೋಡಿ, ಮತಾಂಧತೆ, ಮೃಗೀಯತೆ, ತನ್ನ’ಸ್ವ’-ನೆಲವನ್ನು ಬಿಡಲೊಲ್ಲದೇ ಭಾರದ ಹೆಜ್ಜೆಯಿಡುತ್ತಾ ಅವರ ಕುಟುಂಬ, ಅವರ ಅಕ್ಕನ ಅತ್ಯಾಚಾರ ಹೀಗೆ ಒಂದು ಹಾರರ್ ಸಿನಿಮಾದಂತೆ ಚರಿತ್ರೆಯ ಸ್ಥಿರ  ಚಿತ್ರಗಳನ್ನು ಚೋಗಿಂದರ್ ಸಿಂಗ್ ಚಲನಚಿತ್ರವನ್ನಾಗಿಸಿz. ಆ ದಿನ ಸಂಜೆಯ ಆ ಕಥನ ಕೂಡಾ ಏಕಮುಖಿ ಕಥನ. ಹೇಳಿದ್ದು ಆತ ಮಾತ್ರ, ನೆನಪಿನ ನದಿಯಂತೆ ಆತನ ಅನುಭವ ಹರಿಯುತ್ತಿತ್ತು. ಸುಮಾರು ಒಂದೂವರೆ ಘಂಟೆಯ ನಂತರ ಆತನ ಗಂಟಲು ಒಣಗಿ, ಭಾವ ಮುದುರಿ, ’ಚರಿತ್ರೆ ಕಥನ’ ಕೊನೆಗೊಂಡಿತು. ಆತ ಕೊನೆಗೆ ಹೇಳಿದ ’ಇತನಾ ಹೈ ಸಾಬ್’ ಎಂಬ ಮಾತು ಒಂದು ದುರಂತ ಯುಗ, ಕಾಲದ ಭಾರತದ ಭಾರವನ್ನು ಹೊತ್ತಹಾಗಿತ್ತು. ನನಗೂ ಕೂಡಾ ಕಣ್ಣಿನಲ್ಲಿ ಒಂದು ಹನಿ ಜಿನುಗಿತು, ’ಸತ್ ಶ್ರೀ ಅಕಾಲ್ ಜೀ’ ಎಂದು ಬಂದು ಮಲಗಿದೆ.

        ಒಟ್ಟಾರೆ ಅನುಭವ ಅದ್ಬುತ. ಅದು ಬರಿಯ ’ಸರಹದ್ ಕೋ ಪ್ರಣಾಮ್’ ಕಾರ‍್ಯಕ್ರಮ ಆಗಿರಲಿಲ್ಲ. ಅದು ಗಡಿಯ ಗುಡಿಯನ್ನು ನೋಡಿ ಅನುಭವಿಸಿದ ಕಾರ‍್ಯಕ್ರಮವೂ ಕೂಡಾ ಆಗಿತ್ತು. ಭಾಗವಹಿಸಿದ ಪ್ರತಿಯೊಬ್ಬರೂ ಕೂಡಾ ಗಡಿಯನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿ ಬಂದಿದ್ದರು ಎಂತಲೇ ನನ್ನ ಗೃಹಿಕೆ. ಭಾರತವನ್ನು ಮುಟ್ಟಿ ತಟ್ಟಿದ ಅನುಭವ, ಭಾರತವೆಂದರೆ ಹೇಗಿದೆ, ಅದರಂಚು, ಮೈ ಸೋಕಿದ, ಕಂಡ ಅನನ್ಯ ಅನುಭವ ’ ಸರಹದ್ ಕೋ ಪ್ರಣಾಮ್’ !

Pradeep Kumar Shetty, Kundapur