Bangalore Sept 23: Noted Sanghparivar youth outfit Bajarangadal launched its new branch at KR Puram of Bangalore on Sunday. Reputed Prof Sadhu Rangarajan Swamiji of Bharath Matha Mandir, Social Worker Chakravarthy Sulibele, Bajarangadal leader Suryanarayan Rao and others attended the inaugural ceremony.

bd-vhp

ಕೆ.ಆರ್.ಪುರಂ  : ವಿಶ್ವವ್ಯಾಪಿ ಹರಡಿರುವ ಭಯೋತ್ಪಾದನೆಯನ್ನು ತಡೆಗಟ್ಟುವ ಶಕ್ತಿ ಭಾರತ ದೇಶಕ್ಕೆ ಇದ್ದು, ಯುವಕರೆಲ್ಲರೂ ಒಗ್ಗಟ್ಟಿನಿಂದ ದೇಶಕ್ಕಾಗಿ ಶ್ರಮಿಸಬೇಕು ಎಂದು ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.

ಸೆ.22ರಂದು ನಗರದ ಕೆ.ಆರ್.ಪುರಂ ನಲ್ಲಿ ಭಜರಂಗದಳ ಶಾಖೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಿಶ್ವವ್ಯಾಪಿ ಹರಡಿರುವ ಭಯೋತ್ಪಾದನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನೇತೃತ್ವ ವಹಿಸಲು ಭಾರತಕ್ಕೆ ಮಾತ್ರ ಸಾಧ್ಯವಿದ್ದು ಯುವಕರು ಒಗ್ಗೂಡಬೇಕಿದೆ ಹಾಗಾದರೆ ದುಷ್ಟಶಕ್ತಿಗಳಿಂದ ಭಾರತವನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

‘ಜಗತ್ತಿನ ಯಾವುದೇ ಹಿಂದು ಜನತೆಗೆ ನೋವಾದರೆ ಅದು ತನಗಾದ ನೋವು ಎನ್ನುವುದನ್ನು ಅರಿತು ಸ್ಪಂದಿಸುವವರು ನಿಜವಾಗಿಯೂ ಹಿಂದುತ್ವಕ್ಕೆ ಅರ್ಹರು’, ಎಂಬ ಸ್ವಾಮಿ ವಿವೇಕಾನಂದರ ವಾಣಿಯನ್ನು ಅರಿತು, ಹಿಂದುತ್ವವನ್ನು ಮತ್ತೆ ವಿಶ್ವಮಟ್ಟದಲ್ಲಿ ಪ್ರಚಾರ ಮಾಡುವುದಕ್ಕೆ ಸಜ್ಜಾಗಬೇಕು, ಆಗ ಮಾತ್ರವೇ ನಿಜವಾದ ಭಜರಂಗದಳದ ಕಾರ್ಯಕರ್ತರಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಸಾಧು-ಸಂತ(ಅಸಾರಾಂ ಬಾಪು)ರ ಮೇಲೆ ವಿನಾಕಾರಣ ಆರೋಪ ಕೇಳಿಬರುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಚಕ್ರವರ್ತಿ ಸೂಲಿಬೆಲೆ, ಇಂದಿನ ವಿದ್ಯುನ್ಮಾನ ಮಾಧ್ಯಮಗಳು, ಸಾಧು ಸಂತರನ್ನು ಟಾರ್ಗೆಟ್ ಮಾಡುತ್ತಿದೆ. ಇದೇ ಬೇರೆ ಧರ್ಮದವರು ತಪ್ಪು ಮಾಡಿದಾಗ, ತಮ್ಮ ಕಚೇರಿಗಳ ಮೇಲೆ ನಡೆಯಬಹುದಾದ ದಾಳಿಗೆ ಬೆದರಿ ಅಂತಹ ವಿಷಯಗಳನ್ನು ಮರೆಮಾಚುತ್ತಾರೆ ಅವುಗಳನ್ನು ಪ್ರಸಾರ ಮಾಡುವ ಗೋಜಿಗೇ ಹೋಗುವುದಿಲ್ಲ. ಆದರೆ ಹಿಂದೂ ಸಾಧು-ಸಂತರ ಮೇಲೆ ಮಾತ್ರ ಆರೋಪ ಮಾಡಲು, ಸದಾ ಮುಂದಿರುತ್ತಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಮೇಲೂ ವಾಗ್ದಾಳಿ ನಡೆಸಿದ ಅವರು, ಯುಪಿಎ ನೇತೃತ್ವದ ಸರ್ಕಾರ ನಮ್ಮ ದೇಶ ತಲೆತಗ್ಗಿಸುವಂತೆ ಮಾಡಿದೆ. ಹಿಂದೂ ಸಾಧು-ಸಂತರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ. ಪಾಕಿಸ್ತಾನದ ಸರ್ಕಾರ ನಮ್ಮ ದೇಶದೊಳಗೆ ಪ್ರವೇಶಿಸಿ ಯೋಧರ ಹತ್ಯೆ ಮಾಡಿದರೂ ನಮ್ಮ ಪ್ರಧಾನಿ ಮೌನವಹಿಸುತ್ತಾರೆ. ಈ ದೇಶದ ಸಂಪತ್ತು ಮೊದಲು ಸಲ್ಲಬೇಕಿರುವುದು ಅಲ್ಪಸಂಖ್ಯಾತರಿಗೆ ಎಂದು ಹೇಳುತ್ತಾರೆ. ಮತ್ತೊಂದೆಡೆ ಪರಕೀಯರು ನಮ್ಮ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ರಕ್ಷಣಾ ಸಚಿವ ಆಂಟನಿ ಅವರು, ನಮ್ಮ ದೇಶದ ಯೋಧರ ಮೇಲೆ ದಾಳಿ ನಡೆಸಿದವರು ಪಾಕಿಗಳಲ್ಲ ಬದಲಾಗಿ ಅವರ ಸಮವಸ್ತ್ರ ಹಾಕಿದ್ದ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಸಂಸತ್ ನಲ್ಲಿ ಹೇಳುತ್ತಾರೆ. ಈ ಮೂಲಕ ಪಾಕಿಸ್ತಾನಕ್ಕೆ ಎ.ಕೆ.47 ಜೊತೆಗೆ ಎ.ಕೆ ಆಂಟನಿ ಸಹ ರಕ್ಷಣಾ ಸಾಧನವಾಗಿದ್ದಾರೆ ಎಂದು ಲೇವಡಿ ಮಾಡಿದ ಅವರು, ಇಂಥಹ ಸ್ಥಿತಿಯ ವಿರುದ್ಧ ನಮ್ಮ ದೇಶದ ಯುವಕರು ಒಗ್ಗಟಿನಿಂದ ಹೋರಾಡಬೇಕು ಎಂದು ತಿಳಿಸಿದ್ದಾರೆ.

ಕುಸಿಯುತ್ತಿರುವ ದೇಶದ ಆರ್ಥಿಕ ಸ್ಥಿತಿ ಹಿಂದೆಯೂ ರಾಜಕಾರಣಿಗಳ ಕೈವಾಡವಿದ್ದು ಲಾಭಬರುತ್ತಿದ್ದಂತೆಯೇ ರೂಪಾಯಿ ಮೌಲ್ಯ ಏಕಾಏಕಿ ಏರಿಬಿಡುತ್ತದೆ. ಅತ್ತ ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್ ವಾಧ್ರಾ ಅವರು ಭೂಕಬಳಿಕೆ ಮಾಡಿದ ಆರೋಪ ಕೇಳಿಬಂದ ತಕ್ಷಣವೇ ಉಗ್ರ ಯಾಸೀನ್ ಭಟ್ಕಳ್ ಸಿಕ್ಕಿಬೀಳುತ್ತಾನೆ ಮತ್ತೆ ಹಗರಣ ಬಯಲಿಗೆಬಂದರೆ ಇನ್ಯಾವುದೋ ಸ್ಫೋಟ ಸಂಭವಿಸುತ್ತದೆ. ಕಾಂಗ್ರೆಸ್ ನ ಒಂದೊಂದು ವೈಫಲ್ಯಗಳೂ ಹೊರಬಂದಾಗ ಅದನ್ನೂ ಮೀರಿಸುವ ಸುದ್ದಿಗಳು ಹುಟ್ಟಿಕೊಂಡು ಮಾಧ್ಯಮಗಳನ್ನು ತನ್ನತ್ತ ಸೆಳೆಯುತ್ತದೆ ಇದು ಹೀಗೇಕೆ ಎಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ.

ಭಯೋತ್ಪಾದನೆ ನಿಗ್ರಹಕ್ಕೆ ನೇತೃತ್ವ ವಹಿಸಲು ಭಾರತದಿಂದ ಸಾಧ್ಯ: ಚಕ್ರವರ್ತಿ ಸೂಲಿಬೆಲೆ
ಉದ್ಘಾಟನೆ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಗಣ್ಯರು
ಇನ್ನು ಕೇಂದ್ರ ಸರ್ಕಾರ ಹಿಂದೂಗಳ ವಿರುದ್ಧ ದಾಳಿ ನಡೆಸುತ್ತಲೇ ಇದ್ದು ಅವರು ಮಾಡುವ ಕುತಂತ್ರದಿಂದ ರೂಪಾಯಿ ಮೌಲ್ಯ ಕುಸಿದರೆ ಹಿಂದೂ ದೇವಾಲಯಗಳ ಚಿನ್ನದ ಮೇಲೆ ಸರ್ಕಾರದ ಕಣ್ಣುಬೀಳುತ್ತದೆ. ಅದೇ ಕೋಟ್ಯಾಂತರ ರೂ ಮೌಲ್ಯದ ರಾಷ್ಟ್ರಪತಿ ಭವನಕ್ಕೆ ಸೇರಿದ ಆಸ್ತಿ ಅಥವಾ ದೆಹಲಿಯ ರಾಜ್ ಘಾಟ್ ಬಳಿ ಇರುವ ಭೂಮಿಯನ್ನು ರಿಯಲ್ ಎಸ್ಟೇಟ್ ಗೆ ನೀಡಿ ಹಣ ಗಳಿಸುವ ಬಗ್ಗೆ ಯೋಚನೆ ಮಾಡುವುದಿಲ್ಲ. ಅಲ್ಲದೇ ತಾವೇ ದೋಚಿ ವಿದೇಶದಲ್ಲಿ ಸಂರಕ್ಷಿಸಿರುವ, ಹಣದ ಬಗ್ಗೆಯೂ ಪ್ರಸ್ತಾಪಿಸುವುದಿಲ್ಲ. ಇಂಥವರು ಉದ್ದೇಶಪೂರಕವಾಗಿ ಮಾಡಿರುವ ತಪ್ಪಿಗೆ ಹಿಂದೂ ದೇವಾಲಯಗಳ ಚಿನ್ನದ ಅಗತ್ಯವಿದೆ. ಆದರೆ ಕೇಂದ್ರ ಸರ್ಕಾರ, ಹಿಂದೂಗಳ ಕನಸಾಗಿರುವ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಮಾತ್ರ ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಬಗ್ಗೆ ಕಾಳಜಿ ಇಲ್ಲದವರಿಗೆ ದೇವಾಲಯದ ಚಿನ್ನವನ್ನೂ ಕೊಡುವುದಿಲ್ಲ, ಹಿಂದೂಗಳ ಕನಸಾಗಿರುವ ರಾಮಮಂದಿರದವನ್ನೂ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.

ಹಿಂದೂಗಳು ಸುಮ್ಮನೆ ಕುಳಿತಿರುವುದರ ಪರಿಣಾಮ ಇಷ್ಟೆಲ್ಲಾ ನಡೆಯುತ್ತಿದೆ. ಹಿಂದೂಗಳು ಇನ್ನೊಂದು ಧರ್ಮದ ವಿರೋಧಿಗಳಲ್ಲದೇ ಇದ್ದರೂ ಅವರು ಭಾರತ ದೇಶದಲ್ಲಿ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರವಾಗಿ 2014 ಲೋಕಸಭಾ ಚುನಾವಣೆಯಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಬೆಳಕು ನಮ್ಮ ಮುಂದಿದ್ದು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಮೂಲಕ ಮತ್ತೆ ಭಾರತ ದೇಶವನ್ನು ವಿಶ್ವದ ನೇತಾರರನ್ನಾಗಿ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ, ಭಜರಂಗದಳದ ಸಂಚಾಲಕರಾದ ಸೂರ್ಯನಾರಾಯಣ, ಭಾರತ ಮಾತಾ ಮಂದಿರ ಸಂಸ್ಥಾಪಕರಾದ ಸಾಧು ರಂಗರಾಜನ್,ರಾಮಕೃಷ್ಣ ಸಾಧನ ಕೇಂದ್ರದ ಸೂರ್ಯನಾರಾಯಣ,ಬೆಂಗಳೂರು ಉತ್ತರ ವಿಭಾಗದ ಸಂಯೋಜಕರಾದ ಗಿರೀಶ್ ಭಾರಧ್ವಾಜ್ ಉಪಸ್ಥಿತರಿದ್ದರು.

Source: http://www.bangalorewaves.com/news/bangalorewaves-news.php?detailnewsid=11506