ಮಂಗಳೂರು: ಸಂಸ್ಕೃತ ಭಾರತಿಯ ಹಿರಿಯ ಕಾರ್ಯಕರ್ತ ಡಾ| ಎಚ್‌. ಆರ್‌. ವಿಶ್ವಾಸ ಅವರಿಗೆ 2013ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ.

Dr HR Vishwas, Samskrita Bharati

Dr HR Vishwas, Samskrita Bharati

ಮಕ್ಕಳ ಸಾಹಿತ್ಯದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಸಲ್ಲುವ ಈ ಪುರಸ್ಕಾರ ಜೀವಮಾನದ ಸಾಧನೆಗೆ ನೀಡಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಬಾಲಸಾಹಿತ್ಯಕ್ಕಾಗಿ ಡಾ| ವಿಶ್ವಾಸ ಅವರು ಬರೆದ ‘ಮಾರ್ಜಾಲಸ್ಯ ಮುಖಂ ದೃಷ್ಟಂ’ ಎಂಬ ಸಣ್ಣ ನಾಟಕಗಳ ಸಂಗ್ರಹಕ್ಕಾಗಿ ಈ ಪಾರಿತೋಷಕ ನೀಡಲಾಗುತ್ತಿದೆ. ನ. 15ರಂದು ಗೋವಾದ ಪಣಜಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೀಡಲಾಗುವ ಈ ಪ್ರಶಸ್ತಿ 50,000 ರೂ. ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಅಲಂಕಾರ ಶಾಸ್ತ್ರದಲ್ಲಿ ವಿದ್ವತ್‌ ಮತ್ತು ಕುವೆಂಪು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪಡೆದಿರುವ ಡಾ| ವಿಶ್ವಾಸ ಅವರು ಕನ್ನಡ ಭಾಷೆಯಲ್ಲೂ ಕಾದಂಬರಿ, ಕಥಾಸಂಕಲನ, ಜೀವನಚರಿತ್ರೆ, ಪ್ರವಾಸಕಥನ, ಅಂಕಣಬರಹಗಳನ್ನು ಪ್ರಕಟಿಸಿದ್ದು, ಸಂಸ್ಕೃತ ಭಾಷೆಯಲ್ಲಿ ಹದಿನೈದಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ.

ಸಂಸ್ಕೃತ ಭಾರತಿಯ ಪೂರ್ಣಾವಧಿ ಪ್ರಚಾರಕರಾಗಿ ದೇಶ ವಿದೇಶಗಳಲ್ಲಿ ಸಂಸ್ಕೃತ ಭಾಷೆಯ ಪ್ರಚಾರದಲ್ಲಿ ಅನನ್ಯ ಕೊಡುಗೆ ಸಲ್ಲಿಸಿರುವ ಡಾ|| ವಿಶ್ವಾಸ್, ಸಮಕಾಲಿನ ಸಂಸ್ಕೃತ ಸಾಹಿತ್ಯದ ಶ್ರೇಷ್ಠ ವಿಮರ್ಶಕರಲ್ಲೊಬ್ಬರು. ‘ಮತ್ತೆ ಹೊತ್ತಿತು ಹೀಬ್ರೂ ಹಣತೆ’, ‘ಅಪಶ್ಚಿಮಃ ಪಶ್ಚಿಮೇ’, ‘ಪಿಡಿದು’ ‘ಸಂಸ್ಕೃತ ಸೂತ್ರವ’, ‘ಹೇಮಚ್ಛಕಟಿಕಾ’ ಮೊದಲಾಗಿ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಸಾರ್ವಜನಿಕರಿಗೆ ಸರಳವಾಗಿ ಸಂಸ್ಕೃತವನ್ನು ಅಭ್ಯಸಿಸಬಲ್ಲ ಹಲವಾರು ಶಿಕ್ಷಣ ಪುಸ್ತಕಗಳು, ಪಠ್ಯಪುಸ್ತಕಗಳು, ಶಿಕ್ಷಕರಿಗೆ ‘ಕೌಶಲಭೋಧಿನೀ’ ಎಂಬ ಕೈಪಿಡಿ ಸೇರಿದಂತೆ ಹಲವಾರು ರೀತಿಯ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು. ದೂರದರ್ಶನದ ‘ಡಿಡಿ ಭಾರತಿ’ ಕಾರ‍್ಯಕ್ರಮಗಳಲ್ಲಿ ಹೊಸದಿಗಂತ ಪತ್ರಿಕೆಯ ‘ಸಂಗತ’ ಅಂಕಣಗಳು ಸೇರಿದಂತೆ ನೂರಾರು ಭಾಷಣ-ಲೇಖನಗಳ ಮೂಲಕ ಪ್ರಸಿದ್ಧರು. ಕರ್ನಾಟಕ ರಾಜ್ಯ ಸರಕಾರ ಹೊರತಂದಿರುವ ೫,೬,೭ನೇ ತರಗತಿಗಳ ಪಠ್ಯಪುಸ್ತಕ / ಪಠ್ಯಕ್ರಮದ ಆಯ್ಕೆ ಸಮಿತಿಯಲ್ಲಿ ಡಾ|| ವಿಶ್ವಾಸ್ ಮಹತ್ತರ ಕೊಡುಗೆ ನೀಡಿದ್ದಾರೆ. ಮೂಲತಃ ಕೊಪ್ಪ ತಾಲೂಕಿನ ಶೃಂಗೇರಿ ನಿವಾಸಿಯಾಗಿರುವ ಡಾ|| ವಿಶ್ವಾಸ್‌ರವರು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ.

2010ರಲ್ಲಿ  ಸಂಸ್ಕೃತ ಭಾರತಿ ಸಂಘಟನೆಯ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖರಾಗಿರುವ ಡಾ|| ವಿಶ್ವಾಸ್ ಅವರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ  ಲಭಿಸಿತ್ತು . ಖ್ಯಾತ ಕಾದಂಬರಿಕಾರ ಡಾ|| ಎಸ್.ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯನ್ನು ಸಂಸ್ಕೃತಕ್ಕೆ ಅನುವಾದಿಸಿದುದಕ್ಕಾಗಿ ಅವರಿಗೆ 2010 ನೇ ಸಾಲಿನ ಈ ಪ್ರಶಸ್ತಿ  ಲಭಿಸಿತ್ತು .