ಮಂಗಳೂರು : ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ವರ್ಷಾಚರಣೆಯ ಅಂಗವಾಗಿ ದೃಷ್ಟಿದಾನ ಕಾರ್ಯಕ್ರಮವನ್ನು ಬುಧವಾರ ೨-೧೦-೨೦೧೩ ರಂದು ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ನ್ಯೂಸ್ ೧೩ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ’ವಿವೇಕ ದೃಷ್ಟಿಗಾಗಿ-ದೃಷ್ಟಿದಾನ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

1

ಶ್ರೀರಾಮ ವಿದ್ಯಾ ಕೇಂದ್ರ ಮತ್ತು ನ್ಯೂಸ್೧೩ ವತಿಯಿಂದ ಜಂಟಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಒಟ್ಟು ೩೭೨ ಮಂದಿ ನೇತ್ರದಾನ ಮಾಡುವ ಮೂಲಕ ಉತ್ತಮ ಸ್ಪಂದನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ’ಸಂತನಾಗಿ, ರಾಷ್ಟ್ರಭಕ್ತನಾಗಿ ಜಗತ್ತಿನಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ ವಿವೇಕಾನಂದರ ಹಾಗೂ ದೇಶದ ಹೆಮ್ಮೆಯ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬ ಈ ಎರಡು ಮಹಾನ್ ಶಕ್ತಿಯನ್ನು ನೆನಪಿಸುವ ಕಾರ್ಯ ಶ್ರೀರಾಮ ವಿದ್ಯಾಕೇಂದ್ರ ಹಾಗೂ ನ್ಯೂಸ್ ೧೩ ಮಾಡಿದೆ’ ಎಂದು ಹೆಮ್ಮೆಪಟ್ಟರು.

’ಹಲವರು ತಮ್ಮ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಮಾತ್ರ ಚಿಂತಿಸುತ್ತಾರೆ, ಇದಕ್ಕಿಂತಲೂ ತುಸು ಮುಂದೆ ಹೋಗಿ ವ್ಯಕ್ತಿಯೊಬ್ಬ ಏನಾದರೂ ಮಾಡಿದರೆ ಇಡೀ ಸಮಾಜವೇ ಆತನನ್ನು ನೆನಪಿಟ್ಟುಕೊಳ್ಳುತ್ತದೆ, ಅಷ್ಟೇ ಅಲ್ಲದೇ ಆತನಿಗೂ ಜೀವನ ಸಾರ್ಥಕ್ಯದ ಧನ್ಯತೆ ಬರುತ್ತದೆ’ ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದರು.

ದೃಷ್ಟಿದಾನ ಮಾಡಿದಾಗ ಸಿಗುವ ಖುಷಿ. ಸಂತೋಷದ ಅನುಭವ ನಮಗೆ ಕತ್ತಲೆಯಲ್ಲಿ ನಡೆದಾಗ ತಿಳಿಯುತ್ತದೆ, ಕತ್ತಲೆಯಲ್ಲಿ ನಾವಿದ್ದಾಗ ಸ್ವಲ್ಪ ಬೆಳಕು ಬೇಕು ಎಂದು ನಮಗನಿಸುತ್ತದೆ.

ಅದೇ ರೀತಿ ದೃಷ್ಟಿಹೀನ ವ್ಯಕ್ತಿ ಈ ಜಗತ್ತನ್ನೇ ನೋಡಿರುವುದಿಲ್ಲ, ಈ ಸೂರ್ಯ, ಚಂದ್ರ, ಬಿಳಿ, ಕಪ್ಪು ಇದ್ಯಾವುದರ ಕಲ್ಪನೆಯೂ ಆತನಿಗಿರುವುದಿಲ್ಲ, ಈ ಸಂದರ್ಭ ಆತನಿಗೆ ಕಣ್ಣು ದೊರಕಿದರೆ ಆತ ಸಂತೋಷಗೊಳ್ಳುತ್ತಾನೆ. ತನಗೆ ಕಣ್ಣು ಕೊಟ್ಟವರನ್ನು ಜೀವನ ಪೂರ್ತಿ ಸ್ಮರಿಸುತ್ತಾ ಆರಾಧಿಸುತ್ತಾನೆ.

ಸತ್ತು ಹೋದ ಶರೀರದ ವ್ಯಾಮೋಹ ಬೇಡ, ಮಣ್ಣಿನೊಂದಿಗೆ ಅಥವಾ ಬೆಂಕಿಯೊಂದಿಗೆ ಸುಟ್ಟು ಭಸ್ಮವಾಗುವ ದೇಹ ಯಾವ ಪ್ರಯೋಜನಕ್ಕೂ ಬರಲಾರದು, ಬದುಕಿದ್ದಾಗ ಏನೂ ಮಾಡಲಾಗದಿದ್ದರೂ ಸತ್ತ ನಂತರವಾದರೂ ಅಮೂಲ್ಯವಾದ ಎರಡು ಕಣ್ಣುಗಳನ್ನಾದರೂ ದಾನ ಮಾಡೋಣ, ಅಲ್ಲದೇ ಕಣ್ಣು ದಾನದ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನೂ ಮಾಡಬೇಕಿದೆ’ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ನ್ಯೂಸ್ ೧೩ ಮುಖ್ಯಸ್ಥ ಸುನೀಲ್ ಕುಲಕರ್ಣಿ ಸ್ವಾಮಿ ವಿವೇಕಾನಂದರ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ನಾವು ಅವರ ತ್ಯಾಗ ಮತ್ತು ಸೇವೆಗಳನ್ನು ಅರಿತು ಸಮಾಜಕ್ಕೆ ನಮ್ಮಿಂದಾದ ಸಹಾಯವನ್ನು ಮಾಡಬೇಕು. ಮನುಷ್ಯ ತನ್ನ ಕರ್ತವ್ಯವನ್ನು ನಿಭಾಯಿಸುವಲ್ಲಿ ಎಂದೂ ವಿಫಲನಾಗಬಾರದು’ ಎಂದರು.

2

ಇಂದು ಮಾಧ್ಯಮಗಳು ಕೂಡಾ ತಮ್ಮ ಕರ್ತವ್ಯವನ್ನು ಪಾಲಿಸುವುದರಲ್ಲಿ ಸೋಲುತ್ತಿರುವುದು ಗಮನಕ್ಕೆ ಬರುತ್ತಿದೆ. ಬಲಪಂಥೀಯ ವಿಚಾರಧಾರೆಯೊಂದಿಗೆ ಸತ್ಯಾಂಶವನ್ನು ಮುಂದಿಡುವ ಉದ್ದೇಶ ನ್ಯೂಸ್೧೩ ದ್ದಾಗಿದೆ.

ದೃಷ್ಟಿದಾನ ಕೇವಲ ಸಾಂಕೇತಿಕವಾಗಬಾರದು, ವಿವೇಕ ದೃಷ್ಟಿಯನ್ನು ಪಡೆದುಕೊಂಡು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವಂತಾಗೋಣ ಎಂದರು.

ಕೆ.ಎಸ್.ಹೆಗ್ಡೆ ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ದಿವ್ಯಲಕ್ಷ್ಮೀಯವರು ನೇತ್ರದಾನದ ಮಹತ್ವವನ್ನು ತಿಳಿಸಿದರು.

’ಎಲ್ಲಾ ಇಂದ್ರಿಯಗಳಿಗಿಂತಲೂ ಕಣ್ಣು ಅತಿ ಶ್ರೇಷ್ಠ, ಕೆಲವೊಮ್ಮೆ ಅಲ್ಸರ್, ಅನುವಂಶೀಯ ಕಾಯಿಲೆ, ಪೆಟ್ಟುಬಿದ್ದು, ರಾಸಾಯನಿಕ ತಗುಲಿ ಕಣ್ಣಿನ ಗುಡ್ಡೆ ತನ್ನ ಪಾರದರ್ಶಕತೆಯನ್ನು ಕಳೆದುಕೊಂಡು ದೃಷ್ಟಿ ಹೊರಹೋಗುತ್ತದೆ. ಆ ಸಂದರ್ಭ ಕಣ್ಣಿನ ಕಸಿಯನ್ನು ಮಾಡಿ ದೃಷ್ಟಿ ಕಳೆದುಕೊಂಡವರಿಗೆ ಮತ್ತೆ ದೃಷ್ಟಿ ನೀಡುವ ಕಾಯಕ ಮಾಡಬಹುದು. ಎಲ್ಲಾ ವಯಸ್ಸಿನವರು, ಕನ್ನಡಕ ಹಾಕಿರುವವರೂ ನೇತ್ರದಾನ ಮಾಡಬಹುದು.

ನೇತ್ರದಾನ ಮಾಡಿದ ವ್ಯಕ್ತಿಯು ಮರಣ ಹೊಂದಿದ ೬ ಗಂಟೆಯೊಳಗೆ ಅವರ ಹತ್ತಿರದ ಸಂಬಂಧಿಗಳು ಹತ್ತಿರದ ’ಐ ಬ್ಯಾಂಕ್’ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದರು.

ದೇಶದಲ್ಲಿ ಸುಮಾರು ೨ ಮಿಲಿಯನ್ ಜನ ದೃಷ್ಟಿ ಕಳೆದುಕೊಂಡಿದ್ದಾರೆ, ಇವರ ಕಣ್ಣು ಕಸಿ ಮಾಡಲು ಅಷ್ಟೇ ಪ್ರಮಾಣದಲ್ಲಿ ಕಣ್ಣುಗಳ ಅಗತ್ಯವಿದೆ, ನಮ್ಮ ದೇಶದಲ್ಲಿ ನಿಮಿಷಕ್ಕೆ ಇಬ್ಬರು ಮೃತರಾದರೂ ವರ್ಷಕ್ಕೆ ೨,೦೦೦ ಕಣ್ಣುಗಳು ಮಾತ್ರ ಕಸಿಮಾಡಲಾಗುತ್ತಿದೆ ಎಂದು ಡಾ.ದಿವ್ಯ ಲಕ್ಷ್ಮೀ ಕಳವಳ ವ್ಯಕ್ತಪಡಿಸಿದರು.

ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಸ್ವಾಗತ ಕೋರಿದರು.

ಕಾರ್ಯಕ್ರಮದಲ್ಲಿ ಡಾ.ಹೃಷಿಕೇಶ ಅಮೀನ್, ನಾರಾಯಣ ಸೋಮಯಾಜಿ, ವಿಧಾನ ಪರಿಷತ್ ಸದಸ್ಯ ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು.

ಇವರೆಲ್ಲಾ ನೇತ್ರದಾನ ಮಾಡಿ, ಇತರರಿಗೂ ನೇತ್ರದಾನ ಮಾಡುವಂತೆ ಹುರಿದುಂಬಿಸಿದರು.