ಮುಂಬೈ ನ.25: ‘ಅಸಹಾಯಕ, ನಿರ್ಗತಿಕ, ರೋಗಿಷ್ಟ, ಮಾನಸಿಕ ಅಸ್ವಸ್ಥ ಮತ್ತು ದೀನರಿಗೆ ಆರೋಗ್ಯಪೂರ್ಣ ಆಹಾರ, ಆರೈಕೆ ಮತ್ತು ಪುನರ್ವಸತಿಯ ಅವಕಾಶಗಳನ್ನು ಕಲ್ಪಿಸಿ ಮಾನವೀಯ ಘನತೆಯನ್ನು ಎತ್ತಿಹಿಡಿದ’ ಗಮನಾರ್ಹ ಕಾರ್ಯಕ್ಕಾಗಿ ತಮಿಳುನಾಡಿನ ಮಧುರೈನಲ್ಲಿರುವ ಅಕ್ಷಯ ಟ್ರಸ್ಟ್‌ನ ನಾರಾಯಣನ್ ಕೃಷ್ಣನ್ ಅವರಿಗೆ 2013 ನೇ ಸಾಲಿನ ಪ್ರತಿಷ್ಠಿತ ಪ್ರೊ. ಯಶವಂತರಾವ್ ಕೇಳ್ಕರ್ ಪುರಸ್ಕಾರ ನೀಡಲು ಆಯ್ಕೆ ಸಮೀತಿಯು ತೀರ್ಮಾನಿಸಿದೆ.

Narayanan Krishnan selected for Prof. Yeshwantrao Kelkar Youth Award (Yuva Puraskar) 2013

Narayanan Krishnan selected for Prof. Yeshwantrao Kelkar Youth Award (Yuva Puraskar) 2013

ಬೆಂಗಳೂರಿನ ಪ್ರತಿಷ್ಠಿತ ತಾಜ್ ಹೋಟೆಲಿನಲ್ಲಿ ಯಶಸ್ವೀ ಬಾಣಸಿಗ(Chef )ರಾಗಿದ್ದ ನಾರಾಯಣನ್ ಸ್ವಿಟ್ಜರಲ್ಯಾಂಡಿನ ಗಣ್ಯ ಪಂಚತಾರಾ ಹೋಟೆಲೊಂದರಲ್ಲಿ ಭವಿಷ್ಯವನ್ನರಸಿ ಹೊರಡಲಿದ್ದರು. 2002ರಲ್ಲಿ ಓರ್ವ ಮುದಿವಯಸ್ಸಿನ ವ್ಯಕ್ತಿ ರಸ್ತೆಯ ಬದಿಯ ಕೊಳಚೆಯಲ್ಲಿ ಹಸಿದು ಮಲಗಿದ್ದ ದಯನೀಯ ದೃಷ್ಯವನ್ನು ಕಂಡು ನಾರಾಯಣನ್ ಮನ ಕಲಕಿತು. ಅವರೇ ನಿರೂಪಿಸುವಂತೆ “ಆತ ಹಸಿವಿನಿಂದ ತನ್ನದೇ ಮಲವನ್ನು ತಿನ್ನುತ್ತಿದ್ದ. ನಾನು ಹತ್ತಿರದ ಹೋಟೆಲಿಗೆ ಹೋಗಿ ಏನಿದೆ ಎಂದು ವಿಚಾರಿಸಿಸದೆ. ಇಡ್ಲಿ ಇತ್ತು. ಅದನ್ನು ತಂದು ಆ ಮದುಕನಿಗೆ ಕೊಟ್ಟೆ. ನನ್ನನ್ನು ನಂಬಿ, ಅಷ್ಟು ಗಬಗಬನೆ ತಿನ್ನುವವರನ್ನು ನಾನು ನೋಡೇ ಇಲ್ಲ, ಅವನ ಕಣ್ಣಲ್ಲಿ ನೀರು ತುಂಬಿತು. ಅದು ಆನಂದದ ಕಣ್ಣರು”. ಅದು ನಾರಾಯಣನ್ ಬದುಕಿನಲ್ಲಿ ಮಹತ್ವದ ತಿರುವಿನ ಕ್ಷಣವಾಯಿತು. ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ವೈಯಕ್ತಿಕ ಉಳಿತಾಯದ ಹಣದಿಂದ ತನ್ನ ಊರು ಮದುರೈನಲ್ಲಿ ಸುಮಾರು 30 ಅಸಹಾಯ ದೀನ ಜನರಿಗೆ ನಿತ್ಯ ಊಟ ನೀಡತೊಡಗಿದರು. 2003ರಿಂದ ಮದುರೈನಲ್ಲಿ ಅಕ್ಷಯ ಟ್ಟಸ್ಟನ್ನು ಸ್ಥಾಪಿಸಿ ನಿರ್ಗತಿಕ ಮತ್ತು ಮಾನಸಿಕ ಅಸ್ವಸ್ಥರ ಅರೈಕೆಯಲ್ಲಿ ತೊಡಗಿದ್ದಾರೆ, ನಿತ್ಯವೂ 425ಕ್ಕೂ ಹೆಚ್ಚು ನಿರ್ಗತಿಕ ಮತ್ತು ವಯಸ್ಸಾದ ಜನರಿಗೆ ತಾಜಾ ಊಟ ಉಪಹಾರ ನೀಡುವ ನಾರಾಯಣನ್ ಇದುವರೆಗೆ 19ಲಕ್ಷಕ್ಕೂ ಮಿಕ್ಕಿ ಊಟ ಉಪಹಾರ ನೀಡಿದ್ದಾರೆ. ಅಷ್ಟೇ ಅಲ್ಲದೇ ಅವರ ಕೂದಲು ದಾಡಿ ಕತ್ತರಿಸುವುದು, ಸ್ನಾನ ಮಾಡಿಸುವುದು, ಆರೋಗ್ಯ ಉಪಚಾರ ನೀಡುವುದರ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಘಟನಾ ಬೆಳವಣಿಗೆಗೆ ಅಡಿಪಾಯ ಹಾಕಿದ ದಿ. ಪ್ರೊ. ಯಶವಂತರಾವ್ ಕೇಳ್ಕರ್ ಅವರ ಸ್ಮೃತಿಯಲ್ಲಿ ಎಬಿವಿಪಿ ಮತ್ತು ವಿದ್ಯಾನಿಧಿ ಟ್ರಸ್ಟಗಳು ಸಹಯೋಗದಲ್ಲಿ ಕೊಡಮಾಡುವ ಈ ಪುರಸ್ಕಾರವು 1991ರಿಂದ ಪ್ರಾರಂಭವಾಗಿದ್ದು 5೦,೦೦೦ರೂಗಳ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನೊಳಗೊಂಡಿದೆ. ವಿವಿಧ ಸಮಾಜಹಿತ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಯುವಜನರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ವೇದಿಕೆಯನ್ನೊದಗಿಸುವ, ಅವರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸುವ ಹಾಗೂ ಇತರ ಯುವಕರಿಗೆ ಪ್ರೇರಣೆ ನೀಡುವ ಉದ್ಧೇಶದಿಂದ  ಯುವ ಪುರಸ್ಕಾರವನ್ನು ನೀಡಲಾಗುತ್ತಿದೆ.

ಕಾಶಿಯಲ್ಲಿ ನವೆಂಬರ 30ರಂದು ನಡೆಯಲಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ನಾರಾಯಣನ್ ಅವರಿಗೆ ಪ್ರೊ. ಯಶವಂತರಾವ್ ಕೇಳ್ಕರ್ ಯುವ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು.