ಪರಿಸರಸ್ನೇಹಿ ಕಾಗದ ಗಣಪ- ಕಲಾವಿದ ಹುಸೇನಿಯ ಕೈಚಳಕ
ಕಾಗದವು ನಮ್ಮ ಆಧುನಿಕ ಜೀವನದ ಒಂದು ಭಾಗ. ಇಂದು ಪ್ಲಾಸ್ಟಿಕ್ ಯುಗದಲ್ಲಿಯೂ ಕಾಗದ ತನ್ನದೆ ಸ್ಥಾನ ಹೊಂದಿದೆ. ನಾವು ಕಾಗದವಿಲ್ಲದ ಬದುಕನ್ನು ಊಹಿಸಲು ಸಾಧ್ಯವಾಗದು. ಪ್ರತಿದಿನ ದಿನಪತ್ರಿಕೆಯಿಂದ ಆರಂಭವಾಗಿ ಅದರ ಇರುವಿಕೆಯನ್ನು ವಿಸ್ತರಿಸುತ್ತಾ ಸಾಗಿ ಶಾಲೆಯ ಮಕ್ಕಳಿಂದ ಹಿಡಿದು ಚಲಾವಣೆಯಲ್ಲಿರುವ ನೋಟುಗಳವರೆಗೂ ಕಾಗದ ಬಹುಮುಖ್ಯ ಪಾತ್ರ ವಹಿಸುತ್ತದೆ. ಇಂತಹ ಕಾಗದವನ್ನು ಪರಿಸರಸ್ನೇಹಿ ಎಂದು ಕರೆಯಬಹುದು.
ಆಡುಮಾತಿಗಿಂತಲೂ ಬರೆದು ನೀಡಿದ ಪತ್ರಕ್ಕೆ ಹೆಚ್ಚು ಮಾನ್ಯತೆ. ಕಾಗದವನ್ನು ಬಳಸುವ ವ್ಯಕ್ತಿಯಿಂದ ವ್ಯಕ್ತಿಗೆ ಅವರ ಅಭಿವ್ಯಕ್ತಿ ಬದಲಾಗುತ್ತದೆ. ಕಾಗದವನ್ನು ಬಳಸುವುದು ಶತಶತಮಾನಗಳಿಂದ ನಿರಂತರವಾಗಿ ಸಾಗಿ ಬರುತ್ತಿದೆ. ನಮ್ಮ ದೇಶದ ಜನಪದ ಕಲೆಗಳಲ್ಲಿ ಕಾಗದ ಕತ್ತರಿ ಕಲೆ (ಸಾಂಝಿ) ಒಂದು. ಕಲಾವಿದ ತನ್ನ ಸ್ಮೃತಿಪಟಲದಲ್ಲಿರುವ ಚಿತ್ರವನ್ನು ಕಾಗದದ ಮೇಲೆ ಮೂಡಿಸಿ ನಂತರ ಕತ್ತರಿಯಿಂದ ಅಥವ ಹರಿತವಾದ ಚಾಕುವಿನಿಂದ ಕತ್ತರಿಸಿ ಕಲಾಕೃತಿಯನ್ನು ರಚಿಸುತ್ತಾನೆ. ಈ ಕಲೆಯು ತಲತಲಾಂತರದಿಂದ ನಡೆದು ಬಂದಿದೆ. ಇಂತಹ ಕಲೆಯನ್ನು ನಿರಂತರವಾಗಿ ಕರ್ನಾಟಕದಾದ್ಯಂತ ಶಿಬಿರ, ಕಾರ್ಯಾಗಾರ, ಪ್ರದರ್ಶನಗಳನ್ನು ಮೈಸೂರಿನ ಕಲಾವಿದ ಎಸ್. ಎಫ್. ಹುಸೇನಿಯವರು ನಡೆಸಿಕೊಂಡು ಬರುತ್ತಿದ್ದಾರೆ.

S.F.HUSENI,MYSOREHUSENI--KAGADA GANAPA.....   (18)
ಕಲಾವಿದ ಎಸ್. ಎಫ್. ಹುಸೇನಿಯವರು ರಚಿಸಿರುವ ಪರಿಸರಸ್ನೇಹಿ ಕಾಗದ ಗಣಪ. ಕಾಗದವನ್ನು ಕತ್ತರಿಸಿ ಕಲೆ ಅರಳಿಸುವ ಕಲಾವಿದ. ತಮ್ಮ ವಿಶಿಷ್ಟ ರೀತಿಯ ಕಲಾಕೃತಿಗಳಿಂದಲೇ ಗುರುತಿಸಿಕೊಂಡಿರುವ ಹುಸೇನಿಯವರು ರಚಿಸಿರುವ ಗಣೇಶನ ಕಲಾಕೃತಿಗಳು. ಇಲ್ಲಿನ ಗಣೇಶನ ವೈವಿಧ್ಯಮಯ ಹೊಂದಿರುವ ಚಿತ್ರಗಳನ್ನು ಸೂಕ್ಷ್ಮವಾಗಿ ಕಾಗದವನ್ನು ಕತ್ತರಿಯಿಂದ ಕತ್ತರಿಸಿದ್ದಾರೆ. ಈ ಚಿತ್ರಗಳು ನೋಡುಗರಿಗೆ ಆಶ್ಚರ್ಯ ಉಂಟುಮಾಡುತ್ತದೆ. ಪ್ರತಿಯೊಂದು ಕಲಾಕೃತಿಯು ಬಹು ಸರಳವೆನ್ನಿಸಿದರೂ ಅದರ ಕಲಾತ್ಮಕತೆಯಿಂದ ನಮ್ಮನ್ನೂ ಸಹ ಕಾಗದ ಕತ್ತರಿ ಕಲೆಯನ್ನು ಕಲಿಯಲು ಪ್ರೇರೇಪಿಸುತ್ತದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ಕಲೆಯು ಒತ್ತಡ ನಿವಾರಿಸಿ ಸೃಜನಶೀಲರಾಗಲು ಸಹಕಾರಿಯಾಗಿದೆ.
ಕಲಾವಿದ ಎಸ್.ಎಫ್. ಹುಸೇನಿ ಅವರು ಕಲಾವಲಯದಲ್ಲಿ “ಮೈಸೂರು ಹುಸೇನಿ” ಎಂದೇ ಚಿರಪರಿಚಿತರು. ತಂದೆ ಸಯ್ಯದ್ ಫೀರ್, ತಾಯಿ ಜೀನಾತ್‍ವುನ್ನಿಸಾ ಬೀ ರವರ ಮಗನಾಗಿ ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂ (ಬ್ಲಫ್) ನಲ್ಲಿ ಜನಿಸಿದ ಇವರು ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತರಾಗಿ ಕಲೆಯಲ್ಲಿಯೇ ಜೀವನ ರೂಪಿಸುವಂತಾಯಿತು.
ಇವರು ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಪೈನ್ ಆರ್ಟ್ ಡಿಪ್ಲೊಮ ಮತ್ತು ಆರ್ಟ್‍ಮಾಸ್ಟರ್ ಶಿಕ್ಷಣ ಪಡೆದು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿಯನ್ನು ಪಡೆದಿದ್ದಾರೆ.
ಹುಸೇನಿಯವರು ಸದಾ ಪ್ರಯೋಗಶೀಲ ಪ್ರಯತ್ನಗಳಿಗೆ, ನಿರಂತರ ಹೊಸತನಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅವರು ರಚಿಸಿರುವ ಕಲಾಕೃತಿಗಳನ್ನು ಗಮನಿಸುತ್ತಾ ಬಂದಲ್ಲಿ ತಿಳಿಯುತ್ತದೆ. ಒಂದೇ ಬಗೆಯ ಕಲಾಕೃತಿಗಳಿಗೆ ಸೀಮಿತವಾಗದೆ ಹಲವಾರು ಪ್ರಯೋಗಾತ್ಮಕ ಕೆಲಸಗಳಲ್ಲಿ ತೊಡಗಿದ್ದಾರೆ. ಅವರ ವಿಶಿಷ್ಟ ಬಗೆಯ ಕಾಗದ ಭಿತ್ತಿಶಿಲ್ಪಗಳು, ಏಕರೇಖಾಚಿತ್ರಗಳು ಪ್ರಯೋಗಾತ್ಮಕ ಅಮೂರ್ತ ಛಾಯಾಚಿತ್ರಗಳು ಮತ್ತು ಸಾಂಝಿಜನಪದ ಕಾಗದಕತ್ತರಿಕಲೆ ಕಲಾಕೃತಿಗಳು ಇವರಕಲಾಪ್ರತಿಭೆಗೆ ಸಾಕ್ಷಿಯಾಗಿವೆ. ಸಿಡಿಯನ್ನು ಬಳಸಿ ತೆಗೆದಿರುವ ಅಮೂರ್ತಛಾಯಾಚಿತ್ರಗಳು ಸುಮಾರು ಐದುಸಾವಿರಕ್ಕೂ ಹೆಚ್ಚು. ಇದು ಅವರ ಸೃಜನಶೀಲತೆ ಮತ್ತು ಕಲಾತ್ಮಕ ಪ್ರಯೋಗಗಳಿಗೆ ಒಂದುಉದಾಹರಣೆ.

S.F.HUSENI,MYSOREHUSENI--KAGADA GANAPA.....   (7)
ಹುಸೇನಿ ಚಿತ್ರಕಲೆಯನ್ನು ಮೈಸೂರು, ಬೆಂಗಳೂರು, ಧಾರವಾಡ, ಗುಲ್ಬರ್ಗ, ಉಡುಪಿ ಹೀಗೆ ಅನೇಕ ಕಡೆಗಳಲ್ಲಿ 9 ಏಕವ್ಯಕ್ತಿ ಚಿತ್ರಕಲಾಪ್ರದರ್ಶನಗಳು, ಸುಮಾರು 70ಕ್ಕೂ ಹೆಚ್ಚು ಸಮೂಹಕಲಾಪ್ರದರ್ಶನ ಕಾರ್ಯಗಾರಗಳಲ್ಲಿ ಭಾಗವಹಿಸಿ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಾದ ಮುಂಬೈ, ದೆಹಲಿ, ಚೆನ್ನೈ ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಹುಸೇನಿಯವರ ವಿಶೇಷತೆ ಎಂದರೆ ಗ್ರಾಮೀಣ ಭಾಗದ ಜನರಿಗೆ ಕಲೆ ತಲುಪುವ ಉದ್ದೇಶದಿಂದ ತಮ್ಮದೇ “ಸಾಂಝಿ ಕಲಾಲೋಕ” ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತುವರ್ಷಗಳಿಂದ ಚಿತ್ರಕಲಾಪ್ರದರ್ಶನ, ಕಾರ್ಯಗಾರಗಳನ್ನು ನಡೆಸುತ್ತಾ ಬಂದಿದ್ದಾರೆ. ಇವರ ಅನೇಕ ಕಲಾಕೃತಿಗಳು ದೇಶ ಮತ್ತು ವಿದೇಶಗಳ (ಆಸ್ಟ್ರೇಲಿಯ, ಫಿನ್‍ಲ್ಯಾಂಡ್, ಜರ್ಮನ್, ಸೌತ್ ಆಫ್ರಿಕ, ದೋಹ) ಖಾಸಗಿ ಸಂಗ್ರಹಕಾರರಲ್ಲಿ ಸಂಗ್ರಹಗೊಂಡಿವೆ.
ಎಸ್.ಎಫ್.ಹುಸೇನಿಯವರ ಕಲಾಪ್ರತಿಭೆಗೆ ಅನೇಕ ಪ್ರಶಸ್ತಿ ಸನ್ಮಾನÀಗಳು ಸಂದಿವೆ ಅವುಗಳಲ್ಲಿ ಮುಖ್ಯವಾಗಿ 1999 ರಲ್ಲಿ ಮೈಸೂರು ದಸರಕಲಾಪ್ರದರ್ಶನಪ್ರಶಸ್ತಿ, 2001-ರಲ್ಲಿ ಮೈಸೂರಿನ ಕನ್ನಡಸಂಸ್ಕøತಿ ಇಲಾಖೆಯಿಂದ “ಯುವಸಂಭ್ರಮ” ಪ್ರಶಸ್ತಿ, ಧಮಸ್ಥಳದ ಶಾಂತಿವನಟ್ರಸ್ಟ್ ವತಿಯಿಂದ ನಡೆಯುವ ರಾಜ್ಯ ಮಟ್ಟದ ಅಂಚೆಕುಂಚ ಸ್ಪರ್ಧೆಯಲ್ಲಿ 2001ರಿಂದ ಸತತ ನಾಲ್ಕು ಹಾಗು 2007ರಲ್ಲಿ ಪ್ರಶಸ್ತಿ ಒಟ್ಟು ಐದು ಬಾರಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಜಪಾನ್‍ಹಬ್ಬದಲ್ಲಿ 2009 ರಿಂದ ನಾಲ್ಕು ಬಾರಿ, ಕಿರಿಗಾಮಿ ಪೇಪರ್ ಕಟ್ಟಿಂಗ್ಸ್ ಕಾಗದ ಕಲೆಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, 1999ರಲ್ಲಿ ಮೈಸೂರಿನ ರಾಮನ್ಸ್ ಕಂಪ್ಯೂಟರ್ಸ್‍ರವರ “ರಾಕೊಫೇಸ್ಟ್” ಪ್ರಶಸ್ತಿ, ಕರ್ನಾಟಕಲಲಿತ ಕಲಾ ಅಕಾಡೆಮಿಯಿಂದ ಎರಡು ಬಾರಿ ಸ್ಕಾಲರ್‍ಶಿಪ್ 1999 ಮತ್ತು 2000. ವೈಜಯಂತಿಚಿತ್ರಕಲಾಶಾಲೆಯಿಂದ ಬೆಸ್ಟ್ ಮ್ಯೂರಲ್ ಪ್ರಶಸ್ತಿ, 2001-ರಲ್ಲಿ ಮೈಸೂರಿನ ಮಾನಸಗಂಗ್ರೋತಿಯ ಮಹಿಳಾಅಧ್ಯಯನಕೇಂದ್ರದಿಂದ ಪೋಸ್ಟರ್‍ರಚನಗೆಪ್ರಶಸ್ತಿ, ಇವುಗಳ ಜೊತೆಗೆ ಅನೇಕ ಸಂಘಸಂಸ್ಥೆಗಳಿಂದ ಸನ್ಮಾನಗಳು ಸಾಂಝಿಕಲಾಸಾಮ್ರಾಟ್, ಚಿತ್ರರತ್ನ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಇವರ ಕಲಾಯಾತ್ರೆ ಹೀಗೆ ನಿರಂತರವಾಗಿ ಸಾಗಲಿ ಎಂದು ಹಾರೈಸೋಣ.
“ಒತ್ತಡವೇ ತುಂಬಿರುವ ಈ ಜಗತ್ತಿನಲ್ಲಿ ಕಲೆಯೇ ಒತ್ತಡವನ್ನು ಕಳೆಯುವ ಸಾಧನ” ಎಂದೇ ನಂಬಿರುವ ಹುಸೇನಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯ ಬೇಕಾಗಿದ್ದಲ್ಲಿ 9845153277ಕ್ಕೆ ಕರೆ ಮಾಡಬಹುದು ಇಲ್ಲವೆ ಇವರ ಬ್ಲಾಗ್: mysorehuseni.blogspot.in  ನಲ್ಲಿ ಸಾಂಝಿ ಕಾಗದ ಕಲೆಯ ಚಿತ್ರಗಳನ್ನು ನೋಡಬಹುದಾಗಿದೆ.

PAPER ART - GANESHA

PAPER ART – GANESHA