ಸಮಾಚಾರ ಸಮೀಕ್ಷೆ ಆಗಸ್ಟ್- 2013

ಸಮಾಚಾರ ಸಮೀಕ್ಷೆ  ಆಗಸ್ಟ್ 2013

ತೆಲಂಗಾಣ ರಾಜ್ಯ ರಚನೆ

ಸುದ್ದಿ: ಕೇಂದ್ರದಲ್ಲಿ ಆಡಳಿತಾರೂಢವಾಗಿರುವ ಯು.ಪಿ.ಎ. ಆಂಧ್ರಪ್ರದೇಶವನ್ನು ಇಬ್ಭಾಗ ಮಾಡಿ ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ಸ್ಥಾಪಿಸುವ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಹೈದರಾಬಾದ್ ನಗರವು ತೆಲಂಗಾಣ ಮತ್ತು ಉಳಿದ ಸೀಮಾಂಧ್ರ ರಾಜ್ಯಗಳೆರಡಕ್ಕೂ ಹತ್ತು ವರ್ಷಗಳ ಕಾಲ ರಾಜಧಾನಿಯಾಗಿರುತ್ತದೆ. ಇನ್ನೈದು ತಿಂಗಳಲ್ಲಿ ಪ್ರತ್ಯೇಕ ರಾಜ್ಯ ನಿರ್ಮಾಣ ಸಾಕಾರಗೊಳ್ಳಲಿದೆ.

ಸುದ್ದಿಯ ಹಿನ್ನೆಲೆ: ನಿಜ಼ಾಮನ ಆಡಳಿತ ಕೊನೆಗೊಂಡಾಗ (1948) ತೆಲಂಗಾಣದ ಜೊತೆಗೆ ಇನ್ನೂ ಅನೇಕ ಜಿಲ್ಲೆಗಳು ಸೇರಿ ಹೈದರಾಬಾದ್ ಎಂಬ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. ೧೯೫೬ರಲ್ಲಿ ಹಲವಾರು ಪ್ರಾಂತಗಳ ರಚನೆಯಾದಾಗ ವಿಶಾಲ ಆಂಧ್ರಪ್ರದೇಶ ರಚನೆಯಾಯಿತು. ತಮ್ಮ ಪ್ರದೇಶ ಹಿಂದುಳಿದಿದೆ, ಇದರ ಉನ್ನತಿಗೆ ಪ್ರತ್ಯೇಕ ರಾಜ್ಯ ರಚನೆಯೇ ಪರಿಹಾರ ಎಂಬ ವಾದದೊಡನೆ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹಲವಾರು ವರ್ಷಗಳಿಂದ ಬೇಡಿಕೆ ಇದೆ. 1969ರಲ್ಲೇ ವ್ಯಾಪಕ ಹಿಂಸಾಚಾರವೂ ನಡೆದಿತ್ತು. ಆ ಹೋರಾಟದ ಮುಂದುವರೆದ ಭಾಗವಾಗಿ ಹುಟ್ಟಿದ್ದು ತೆಲಂಗಾಣ ರಾಷ್ಟ ಸಮಿತಿ (ಟಿ.ಆರ್.ಎಸ್.). ಅದರ ನೇತಾರ ಕೆ. ಚಂದ್ರಶೇಖರ ರಾವ್. ತೆಲಂಗಾಣ ರಚಿಸುತ್ತೇವೆ ಎಂಬ ಭರವಸೆಯ ಮೇಲೆ ಟಿ.ಆರ್.ಎಸ್. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು 2004ರ ಸಾರ್ವತ್ರಿಕ ಚುನಾವಣೆಗಳಲ್ಲಿ ಜಯಗಳಿಸಿ ಕೇಂದ್ರ ಸರಕಾರದಲ್ಲೂ ಪ್ರವೇಶ ಮಾಡಿತ್ತು. ಆದರೆ ಕಾಂಗ್ರೆಸ್ ಅದರ ಆಶಯವನ್ನು ಪೂರೈಸದಿದ್ದಾಗ ಸರಕಾರದಿಂದ ಹೊರಬಂದಿತ್ತು. 2009ರಲ್ಲಿ ವೈ.ಎಸ್. ರಾಜಶೇಖರ ರೆಡ್ಡಿಯವರ ಅಕಾಲಿಕ ನಿಧನದ ನಂತರ ಆಂಧ್ರದಲ್ಲಿ ನಿರ್ಮಾಣವಾದ ರಾಜಕೀಯ ನಿರ್ವಾತದ ಸಮಯವನ್ನು ಸದವಕಾಶ ಮಾಡಿಕೊಳ್ಳಲು ರಾವ್ ಅವರು, ಆಮರಣಾಂತ ಉಪವಾಸ ಕೈಗೊಂಡರು. ಈ ಬೇಡಿಕೆ ಬೆಂಬಲಿಸಿ ರಾಜ್ಯಾದ್ಯಂತ ನಡೆದ ವ್ಯಾಪಕ ಹಿಂಸಾಚಾರವನ್ನು ತಡೆಗಟ್ಟಲು ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ನ ಪ್ರಭುತ್ವಕ್ಕೆ ಬಲ ತಂದುಕೊಳ್ಳಲು ಕೇಂದ್ರದ ಯು.ಪಿ.ಎ. ಸರಕಾರ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒಪ್ಪಿಗೆ ಕೊಟ್ಟಿತ್ತು. ಆದರೆ, ಆಂಧ್ರಪ್ರದೇಶವನ್ನು ಒಡೆಯಬಾರದೆಂಬ ಬೇಡಿಕೆಯೂ ಬಲವಾಗಿ ವ್ಯಾಪಕ ಪ್ರತಿಭಟನೆ ಮತ್ತು ಹಿಂಸಾಚಾರ ನಡೆದಾಗ ಮೊದಲು ಒಮ್ಮತ (consensus),  ನಂತರವೇ ರಾಜ್ಯ ರಚನೆ ಎಂಬ ಹೊಸವಾದವನ್ನು ಮಂಡಿಸಿದ ಕಾಂಗ್ರೆಸ್ ತೆಲಂಗಾಣ ರಚನೆಯ ತನ್ನ ನಿರ್ಧಾರವನ್ನು ಮತ್ತೆ ನೆನಗುದಿಗೆ ಹಾಕಿತ್ತು. ಟಿ.ಆರ್.ಎಸ್. ಮತ್ತೆ ಒತ್ತಡ ಹೇರಲು ಪ್ರಾರಂಭಿಸಿದ ಮೇಲೆ ಇತ್ತೀಚೆಗೆ ಯು.ಪಿ.ಎ. ತೆಲಂಗಾಣ ರಚಿಸುವ ನಿರ್ಧಾರವನ್ನು ಪ್ರಕಟಿಸಿತು.

ವಿಶ್ಲೇಷಣೆ :

1. ಸ್ವರಾಜ್ಯ ಪ್ರಾಪ್ತಿಯ ನಂತರ ದೇಶದಲ್ಲಿ ಭಾಷಾವಾರು ಪ್ರಾಂತಗಳನ್ನು ರಚಿಸಲಾಗುವುದು ಎಂದು ಸ್ವಾತಂತ್ರ್ಯದ ಹೋರಾಟ ನಡೆಯುವಾಗಲೇ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ, 1950ರಲ್ಲಿ ಸಂವಿಧಾನ ಸ್ವೀಕರಿಸಿ ಗಣರಾಜ್ಯವಾದ ನಂತರವೂ ಪ್ರಾಂತಗಳ ರಚನೆಯಾಗಲಿಲ್ಲ. ಈ ಕಾರಣಕ್ಕಾಗಿ ೧೯೫೨ರಲ್ಲಿ ಪೊಟ್ಟಿ ಶ್ರೀರಾಮುಲು ಎಂಬ ಸ್ವಾತಂತ್ರ್ಯ ಹೋರಾಟಗಾರರು ಆಂಧ್ರ ಪ್ರಾಂತದ ರಚನೆಗಾಗಿ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಿ ತಮ್ಮ ಪ್ರಾಣವನ್ನೇ ಆಹುತಿ ನೀಡಿದರು. ಆಗ ನಡೆದ ಹಿಂಸಾಚಾರಕ್ಕೆ ಕೇಂದ್ರದ ನೆಹರೂ ಸರಕಾರ ಶರಣಾಗಿ 1953ರಲ್ಲಿಆಂಧ್ರ ಪ್ರಾಂತವನ್ನು ರಚಿಸಿತು. ಇತರೆಡೆಗಳಲ್ಲೂ ಹಲವಾರು ಪ್ರಾಂತಗಳ ರಚನೆಗೆ ಬೇಡಿಕೆ ಬಲವಾದಾಗ ರಾಜ್ಯ ಪುನರ್ವಿಂಗಡನಾ ಆಯೋಗ (State Reorganization Commission)ದ ರಚನೆಯಾಯಿತು.

2. ಆದರೆ ದೇಶವನ್ನು ಭಾಷಾವಾರು ರಾಜ್ಯಗಳನ್ನಾಗಿ ವಿಂಗಡಿಸುವುದು ಸುಲಭದ ಸಂಗತಿಯಾಗಿರಲಿಲ್ಲ. ಉದಾಹರಣೆಗೆ ಮುಂಬಯಿಯಲ್ಲಿ ಗುಜರಾತಿ ಮತ್ತು ಮರಾಠಿ ಭಾಷಿಗರು ಸಮಾನ ಪ್ರಮಾಣದಲ್ಲಿದ್ದರು. ಹೊಸದಾಗಿ ನಿರ್ಮಾಣಗೊಂಡ ಚಂಡೀಗಢದಲ್ಲಿ ಪಂಜಾಬಿ ಮತ್ತು ಹಿಂದಿ ಭಾಷಿಗರು ಇದೇ ರೀತಿಯಲ್ಲಿ ಸಮಸಂಖ್ಯೆಯಲ್ಲಿದ್ದರು. ಇನ್ನು ಪ್ರಸ್ತುತ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳನ್ನೊಳಗೊಂಡ ಪ್ರದೇಶದಲ್ಲಿ  (Hindi Heartland) ವಾಸಿಸುವ ಜನರ ಆಡುವ ಭಾಷೆ ಹಿಂದಿ.  ¨ಭಾಷಾವಾರು ಪ್ರಾಂತ ರಚನೆಯಾಗುವುದಿದ್ದಲ್ಲಿ ಇವೆಲ್ಲವೂ ಒಂದೇ ರಾಜ್ಯದಡಿ ಬರಬೇಕಾಗಿತ್ತು. ಅದು ರಾಜಕೀಯವಾಗಿ ಲಾಭದಾಯಕವಲ್ಲದ್ದರಿಂದ ಪ್ರತ್ಯೇಕ ರಾಜ್ಯಗಳನ್ನಾಗಿ ವಿಂಗಡಿಸಲಾಯಿತು. ಹೀಗಾಗಿ ಭಾಷಾವಾರು ಪ್ರಾಂತಗಳ ರಚನೆಯ ವಿಷಯದಲ್ಲಿ ಕೇಂದ್ರ ಸರಕಾರದ ಚಿಂತನೆಯಲ್ಲಿ ಪ್ರಾಮಾಣಿಕತೆ ಇರಲಿಲ್ಲ. ಪ್ರಸ್ತುತ ಗುಜರಾತ್ ಮತ್ತು ಮಹರಾಷ್ಟ್ರ ಆಗಿರುವ ಪ್ರದೇಶವು ಪ್ರಾರಂಭದಲ್ಲಿ ಮುಂಬಯಿ ಎಂಬ ಒಂದೇ ರಾಜ್ಯವಾಗಿತ್ತು. ಅದೇ ರೀತಿ ಪಂಜಾಬ್ ಮತ್ತು ಹರ್ಯಾಣಾ ಸೇರಿ ಒಂದೇ ಪಂಜಾಬ್ ಆಗಿತ್ತು. ಆದರೆ, ಹಿಂದಿ ಹೃದಯ ಪ್ರದೇಶದಲ್ಲಿ ನಾಲ್ಕು ರಾಜ್ಯಗಳನ್ನು ಸರಕಾರ ರಚಿಸಿತು.

3. ಆದರೆ, ಎಲ್ಲವೂ ಅಲ್ಲಿಗೇ ಬಗೆಹರಿಯಲಿಲ್ಲ. ಅದಾಗಲೇ ರಚಿತವಾಗಿದ್ದ ರಾಜ್ಯಗಳಲ್ಲಿದ್ದ ವಿವಿಧ ಭಾಷಿಕರಿಂದ ಪ್ರತ್ಯೇಕ ರಾಜ್ಯಕ್ಕಾಗಿ ಜನಾಂದೋಲನಗಳು ನಡೆದು, ಕೇಂದ್ರ ಸರಕಾರ ಮತ್ತೆ ಮಹರಾಷ್ಟ್ರ, ಗುಜರಾತ್, ಪಂಜಾಬ್, ಹರ್ಯಾಣಾ ಇತ್ಯಾದಿ ರಾಜ್ಯಗಳನ್ನು ವಿಂಗಡಿಸಬೇಕಾಯಿತು.

4.ಭಾಷಾವಾರು ರಾಜ್ಯಗಳಿಂದಾಗಿ ರಾಜ್ಯಗಳ ನಡುವೆ ಗಡಿ ಸಮಸ್ಯೆಗಳೂ ಸೃಷ್ಟಿಯಾದವು. ಕರ್ನಾಟಕದ ಕಾಸರಗೋಡು, ಬೆಳಗಾವಿಗಳು ವಿವಾದಕ್ಕೊಳಗಾದವು ಮತ್ತು ಮುಂಬಯಿ, ಚಂಡೀಗಢದಂತಹ ನಗರಗಳ ಹಂಚಿಕೆಯೂ ವಿವಾದಕ್ಕೊಳಗಾದವು.

5.ಭಾಷೆ ಒಂದೇ ಆಗಿದ್ದರೂ ಹಿಂದಿ ಭಾಷೆಯ ನಾಲ್ಕು ರಾಜ್ಯಗಳನ್ನು ಮಾಡಿಟ್ಟಂತೆ, ಅಗತ್ಯವಿಲ್ಲದಿದ್ದರೂ ಗೋವಾ, ಪುದುಚೇರಿಗಳನ್ನು ಪ್ರತ್ಯೇಕ ರಾಜ್ಯಗಳನ್ನಾಗಿ ಮಾಡಲಾಯಿತು. ಗೋವಾ ಪೂರ್ಚುಗೀಸರಿಂದ ಮುಕ್ತಿಯಾದ ನಂತರ ಅದನ್ನು ಮಹರಾಷ್ಟ್ರದಲ್ಲಿ ವಿಲೀನಗೊಳಿಸಬಹುದಿತ್ತು. ಆದರೆ ಸದಾ ಪಾಶ್ಚಾತ್ಯರ ಕಡೆಯೇ ನೋಡುತ್ತಿದ್ದ ನೆಹರೂ ಕ್ರಿಶ್ಚಿಯನ್ ಮತಗಳ ಮೇಲೆ ಕಣ್ಣಿಟ್ಟು ಅದನ್ನು ಪ್ರತ್ಯೇಕವಾಗೇ ಉಳಿಸಿದರು. ಇದೇ ರೀತಿ ಫ಼್ರೆಂಚ್ ವಸಾಹತುವಾಗಿದ್ದ ಪುದುಚೇರಿಯನ್ನೂ ಪ್ರತ್ಯೇಕವಾಗಿಯೇ ಉಳಿಸಿದರು. ಇದೆಲ್ಲದರಲ್ಲಿ ರಾಜಕೀಯ ಲಾಭದ ತಪ್ಪು ಚಿಂತನೆಯೇ ಕೆಲಸ ಮಾಡಿರುವುದು ಗೋಚರವಾಗುತ್ತದೆ.

6. ಭಾಷಾವಾರು ಪ್ರಾಂತ ರಚನೆಗೆ ವಿರೋಧ ವ್ಯಕ್ತಪಡಿಸಿದವರು ಆ ದಿನಗಳಲ್ಲಿ ಶ್ರೀ ಗುರೂಜಿಯವರೊಬ್ಬರೇ. ಅದರಿಂದ ಗಡಿಸಮಸ್ಯೆಗಳಾಗಬಹುದೆಂದು ಮುನ್ನೆಚ್ಚರಿಕೆಯನ್ನೂ ಅವರು ನೀಡಿದ್ದರು. ದೇಶಕ್ಕೆಲ್ಲ ಒಂದೇ ಸರಕಾರ (Unitary form of Government)  ಮತ್ತು ಆಡಳಿತ ಅನುಕೂಲಕ್ಕಾಗಿ ದೇಶವನ್ನು ಹಲವು ವಲಯಗಳಾಗಿ ವಿಂಗಡನೆ ಮಾಡುವುದು ಒಳಿತು. ಒಂದು ವಲಯದಲ್ಲಿ ಹಲವು ಭಾಷೆಗಳಿರಬಹುದು ಮತ್ತು ಒಂದೇ ಭಾಷೆ ಇರುವ ಒಂದಕ್ಕಿಂತ ಹೆಚ್ಚು ವಲಯಗಳೂ ಇರಬಹುದು. ದೇಶದ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ. ಕೇವಲ ಆಡಳಿತದ ಅನುಕೂಲಕ್ಕಾಗಿ ಇಂಗ್ಲೀಷ್ ಅಲ್ಲದ ಒಂದೇ ಆದ ಸಂಪರ್ಕ ಭಾಷೆ (Link Language) ಇರುವುದು ಆವಶ್ಯಕ. ಹಿಂದಿಗೆ ಮಹತ್ವ ಈ ಕಾರಣಕ್ಕಾಗಿ ಮಾತ್ರ ಎಂಬುದು ಅವರ ಪ್ರತಿಪಾದನೆಯಾಗಿತ್ತು.

7. ಸ್ವರಾಜ್ಯ ಪ್ರಾಪ್ತಿಯಿಂದಾಗಿ ಸಹಜವಾಗಿ ಒಂದಾಗಿದ್ದ ದೇಶದಲ್ಲಿ ಏಕಾತ್ಮ ಶಾಸನ ರಚನೆ ಜನಮನವನ್ನು ಏಕರಾಷ್ಟ್ರವಾಗಿ ಬೆಸೆಯಲು ಒಂದು ಸುವರ್ಣ ಅವಕಾಶವಾಗಬಹುದಾಗಿತ್ತು. ಅದನ್ನು ಮಾಡಿದ್ದಲ್ಲಿ ಇಂದಿನ ಅನೇಕ ಸಮಸ್ಯೆಗಳಾದ ಗಡಿವಿವಾದ, ನದಿನೀರಿನ ಹಂಚಿಕೆಯ ಸಮಸ್ಯೆ, ಭಾಷಾ ಸಂಘರ್ಘ, ಇತ್ಯಾದಿಗಳು ಹುಟ್ಟುತ್ತಲೇ ಇರಲಿಲ್ಲ. ಮೊದಲು ಏಕರಾಷ್ಟ್ರೀಯತೆ, ನಂತರವಷ್ಟೇ ಇನ್ನುಳಿದ  ಸಣ್ಣಪುಟ್ಟ ಸಂಗತಿಗಳು ಎಂಬ ನೀತಿಯನ್ನು ಕೇಂದ್ರ ಸರಕಾರ ತನ್ನದಾಗಿಸಿಕೊಳ್ಳಬಹುದಾಗಿತ್ತು.

8. ದೇಶವನ್ನು ಭಾಷಾವಾರು ಪ್ರಾಂತಗಳಾಗಿ ವಿಂಗಡಿಸಿ, ಅವನ್ನು ಅಮೆರಿಕದ ಮಾದರಿಯಲ್ಲಿ ರಾಜ್ಯಗಳೆಂದು ಸಂಬೋಧಿಸಿದ್ದು ಮತ್ತೊಂದು ಪ್ರಮಾದ. ಅಮೆರಿಕದ ಮಟ್ಟಿಗೆ ಅವು ಸಹಜವಾಗಿಯೇ ಭಿನ್ನಭಿನ್ನವಾಗಿದ್ದ ರಾಜ್ಯಗಳು. ತಮ್ಮ ಅನುಕೂಲಕ್ಕಾಗಿ ಒಂದು ಕಡೆ ಕೂಡಿ ಬಂದು, ಅವು ಒಂದು ಒಕ್ಕೂಟ ರಾಷ್ಟ್ರ (USA) ಆಗಿ ವಿಕಾಸಗೊಂಡವು. ಅಲ್ಲಿನ ಮಟ್ಟಿಗೆ ಅದು melting pot ಆಗಿತ್ತು. ಆದರೆ, ನಮ್ಮದು ಸಹಜವಾಗಿಯೇ ಸಹಸ್ರಮಾನಗಳಿಂದ , ಒಂದಾಗಿದ್ದ ರಾಷ್ಟ್ರ ಜೀವನ. ಇದನ್ನು ರಾಜ್ಯಗಳಾಗಿ ವಿಂಗಡಿಸಿದ ಕಾರಣದಿಂದಾಗಿ ಕೇಂದ್ರ ಸರಕಾರವೇ ಎಲ್ಲರ ಮನದಲ್ಲಿ ಪ್ರತ್ಯೇಕತೆಯ ಬೀಜ ಬಿತ್ತಿದಂತಾಯಿತು.

9. ಕೇವಲ ಓಟಿನ ರಾಜಕಾರಣಕ್ಕಾಗಿಯೇ ಪ್ರತ್ಯೇಕ ರಾಜ್ಯ ರಚನೆ ಸಲ್ಲದು. ಪ್ರತಿಯೊಂದು ಪ್ರದೇಶದಲ್ಲಿ ಸಮಾನ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಉದ್ದೇಶವಿದ್ದಲ್ಲಿ ಅದು ಸಮಂಜಸವೆನ್ನಬಹುದು. ರಾಜ್ಯ ಸಣ್ಣದಿರಲಿ, ದೊಡ್ಡದಿರಲಿ, ಉತ್ತಮ ಆಡಳಿತವೇ ಅದರ ಗುರಿಯಾಗಿರಬೇಕು. ಪ್ರತ್ಯೇಕ ರಾಜ್ಯವೆಂದರೆ ಈ ದೇಶದೊಂದಿಗೆ ಯಾವುದೇ ಸಂಬಂಧವಿಲ್ಲ, ನಮ್ಮದೇ ಪ್ರತ್ಯೇಕ ದೇಶ ಎಂಬ ವಿಚ್ಛಿದ್ರಕಾರಿ ಮನೋಭಾವನೆ (ಉದಾ: ನಾಗಾಲ್ಯಾಂಡ್, ಮಿಜ಼ೋರಾಮ್‌ಗಳಲ್ಲಿ ಆದಂತೆ) ಎಷ್ಟು ಮಾತ್ರಕ್ಕೂ ಹೆಡೆಯೆತ್ತದಂತೆ ನೋಡಿಕೊಳ್ಳುವ ಹೊಣೆಗಾರಿಕೆ ರಾಜ್ಯಗಳ ಆಡಳಿತಗಾರರದ್ದು.

10. ವಾಸ್ತವಿಕವಾಗಿ ಸಂಘದ ಕಾರ್ಯರಚನೆಯಲ್ಲಿ ಭಾಷೆಗಳನ್ನು ಆಧರಿಸಿಯೇ ಪ್ರಾಂತಗಳನ್ನು ರಚಿಲಾಗಿದೆ. ಏಕರಾಷ್ಟ್ರೀಯತೆಗೆ ಒತ್ತು ಇರಿಸಿ, ಕಾರ್ಯದ ಅನುಕೂಲತೆಗಾಗಿ ಮಾತ್ರ ಇರುವ ಪ್ರಾಂತಗಳು ಅವು. ಈಗ ಕಾರ್ಯ ಬೆಳೆದಂತೆ ಅನುಕೂಲಕ್ಕಾಗಿ ಒಂದೇ ಭಾಷೆ ಇರುವ 2-3 ಪ್ರಾಂತಗಳನ್ನೂ ಮಾಡಲಾಗಿದೆ. ಹೀಗಾಗಿ ಇಲ್ಲಿ ಪರಸ್ಪರ  ವೈಷಮ್ಯ,  ಅಸಮಾಧಾನಗಳಿಗೆ ಅವಕಾಶವೇ ಇಲ್ಲ.

11. ಪ್ರಸ್ತುತ ಸ್ಥಿತಿಯಲ್ಲಿ ಭ್ರಷ್ಟಾಚಾರದ ಅನೇಕ ಹಗರಣಗಳಲ್ಲಿ ಸಿಲುಕಿರುವ, ಸೂಕ್ತ ಆಡಳಿತ ನೀಡಲಾಗದೆ ಜನರನ್ನು ಸಂಕಷ್ಳಗಳಿಗೆ ತಳ್ಳಿರುವ ಕಾಂಗ್ರೆಸ್‌ಗೆ 2014ರ ಚುನಾವಣೆಗಳಲ್ಲಿ ಸೋಲು ಅನುಭವಿಸುವ ಭೀತಿ ಕಾಡುತ್ತಿದೆ. ಹೇಗಾದರೂ ಮಾಡಿ ಆದಷ್ಟು ಹೆಚ್ಚಿನ ಲೋಕಸಭಾಸ್ಥಾನಗಳನ್ನು ಗಳಿಸುವ ಇರಾದೆ ಅದರದ್ದು. ಈಗಾಗಲೇ ಈ ದಿಕ್ಕಿನಲ್ಲಿ ಜೆ.ಡಿ.ಯು. ಪಕ್ಷವನ್ನು ಎನ್.ಡಿ.ಎ. ಇಂದ ಬೇರ್ಪಡಿಸಿದ್ದಾಗಿದೆ. ಆಂಧ್ರದಲ್ಲಿ ಅದೇ ಸಮಯಕ್ಕೆ ರಾಜ್ಯದ ಚುನಾವಣೆಯೂ ಇದೆ. ಟಿ.ಆರ್.ಎಸ್.ನ ಒತ್ತಡ ಮತ್ತು ಜನಪ್ರಿಯತೆ, ವೈ.ಎಸ್.ಆರ್. ಕಾಂಗ್ರೆಸ್‌ನ ಜನಪ್ರಿಯತೆ, ಟಿ.ಡಿ.ಪಿ. ಮತ್ತಿತರ ಪಕ್ಷಗಳ ಒತ್ತಡ ಇವುಗಳ ಮಧ್ಯೆ ಕಾಂಗ್ರೆಸ್‌ಗೆ ರಾಜ್ಯದಲ್ಲೂ ಸೋಲು ಖಚಿತ ಎಂದುಕೊಂಡು ಟಿ.ಆರ್.ಎಸ್.ನ ಮೈತ್ರಿಗಳಿಸಲು ತೆಲಂಗಾಣ ರಚನೆಗೆ ಕಾಂಗ್ರೆಸ್ ಮುಂದಾಗಿದೆ. ತೆಲಂಗಾಣ ರಚನೆಯಾದರೆ ಕಾಂಗ್ರೆಸ್‌ನಲ್ಲಿ ಟಿ.ಆರ್.ಎಸ್. ವಿಲೀನಗೊಳ್ಳುವುದು ಎಂದು ಹೇಳಿದ್ದ ಚಂದ್ರಶೇಖರ ರಾವ್ ಈಗ ಆ ಭರವಸೆಯಿಂದ ಹಿಂದೆ ಸರಿಯುತ್ತಿದ್ದಾರೆ. ಕಾಂಗ್ರೆಸ್‌ನ ಸ್ಥಿತಿ ಇಂಗು ತಿಂದ ಮಂಗನಂತಾಗಿದೆ.

12. ಕಳೆದ ವರ್ಷ ಹೈದರಾಬಾದ್‌ನ ವಿನಾಯಕ ಸಾಗರ (ಹುಸೇನ್ ಸಾಗರ)ದಲ್ಲಿ ಇದ್ದ ಅನೇಕ ಶ್ರೇಷ್ಠ ವ್ಯಕ್ತಿಗಳ ಪ್ರತಿಮೆಗಳನ್ನು ಅವರು ತೆಲಂಗಾಣದವರಲ್ಲವೆಂದು ಧ್ವಂಸಗೊಳಿಸಿದ ಮನಕಲಕುವ ಘಟನೆ ನಡೆಯಿತು. ತೆಲಂಗಾಣ ರಚನೆಯಾದೊಡನೆ, ಸೀಮಾಂಧ್ರ ಮೂಲದ ಎಲ್ಲ ಸರಕಾರಿ ನೌಕರರು ತೆಲಂಗಾಣ ಬಿಟ್ಟು ತೊಲಗಬೇಕು ಎಂದು ಚಂದ್ರಶೇಖರ ರಾವ್ ಗುಡುಗಿದ್ದಾರೆ. ದೇಶದ ಗೌರವವನ್ನು ಕಾಪಾಡುವ ಮನಸ್ಸಿರುವ ಯಾರೇ ಆಗಲಿ ಇಂತಹ  ದುಷ್ಕೃತ್ಯಗಳನ್ನಾಗಲಿ, ಈ ರೀತಿಯ ವಿಚ್ಛಿದ್ರಕಾರಿ ವಾದವನ್ನಾಗಲಿ ಒಪ್ಪಲು ಸಾಧ್ಯವಿಲ್ಲ. ಭಾರತ ಒಂದು ಸಾಂಸ್ಕೃತಿಕ ನಾನಾ ಕಾರಣಗಳಿಂದ (ಮದುವೆ, ವೃತ್ತಿ, ಇತ್ಯಾದಿ) ಒಂದು ಪ್ರಾಂತದ ಮೂಲದ ಜನರು ಇನ್ನೊಂದು ಪ್ರಾಂತದಲ್ಲಿ ನೆಲೆಸಿ ಜೀವನ ನಡೆಸುವುದೇನೂ ಹೊಸತಲ್ಲ. ಚಂದ್ರಶೇಖರ ರಾವ್‌ರ ವಾದವನ್ನು ಒಪ್ಪಿದ್ದೇ ಆದರೆ ಕಾಶ್ಮೀರದಲ್ಲಿ ಇಂದು ಇರುವ ಭೀಕರ ಸ್ಥಿತಿಯನ್ನು (ಅಲ್ಲಿ ಕಾಶ್ಮೀರದಲ್ಲದವರು ನೌಕರಿ ಹಿಡಿಯುವಂತಿಲ್ಲ, ಭೂಮಿ ಕೊಳ್ಳುವಂತಿಲ್ಲ) ಎಲ್ಲೆಡೆ ವಿಸ್ತರಿಸಲು ಎಡೆ ಮಾಡಿಕೊಟ್ಟಂತಾಗುತ್ತದೆ.

13. ಆಡಳಿತ ಮತ್ತು ಪ್ರಾದೇಶಿಕ ವಿಕಾಸದ ಅಗತ್ಯಕ್ಕೆ ಅನುಕೂಲವಾಗುವ ರಚನೆಯನ್ನು ಎಲ್ಲರೂ ಗೌರವಿಸಬೇಕು. ಈ ಹೆಸರಿನಲ್ಲಿ ದೇಶದ ಸಮಗ್ರತೆಗೆ ಧಕ್ಕೆ ತರುವ, ಸಾಮರಸ್ಯವನ್ನು ಒಡೆಯುವ ಯಾವ ಪ್ರಯತ್ನಗಳೂ ಯಶಸ್ವಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS Swayamsevaks Steps in for Rescue of Landslide Victims at Idukki of Kerala

Mon Aug 5 , 2013
Idukki, Kerala August 05: Idukki and Ernakulam zones of Kerala received heaviest rain today, which resulted in major landslide affecting hundreds of people. In an area where rescue operation itself was challenging, district administration seeked immediate help of Sevabharati, the service wing of Rashtriya Swayamsevak Sangh, RSS. RSS Swayamsevaks immediately […]