ನೇರನೋಟ: ಮತದಾರ ಪ್ರಭುವಿನ ನಾಡಿಮಿಡಿತ ಬಲ್ಲವರಾರು?

By Du Gu Lakshman

3people

ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು ಒಟ್ಟಾರೆ ಶೇ. ೬೭.೨೮ರಷ್ಟು ಮಂದಿ ತಮ್ಮ ಮತ ಚಲಾಯಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಸಲ ಒಟ್ಟಾರೆ ಮತದಾನ ಪ್ರಮಾಣದಲ್ಲಿ ಶೇ.೮.೪೮ರಷ್ಟು ಹೆಚ್ಚಳವಾಗಿದೆ ಎಂಬುದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರ ಅಭಿಮತ. ಬುದ್ಧಿವಂತರ ನಾಡೆಂದು ಹೆಸರಾಗಿರುವ ದ.ಕ. ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.೭೭.೧೮ರಷ್ಟು ಮತದಾನವಾಗಿದ್ದರೆ  ಅತ್ಯಂತ ಪ್ರಜ್ಞಾವಂತ ಜನರಿರುವ ರಾಜ್ಯದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಕಡಿಮೆ ಅಂದರೆ ಶೇ. ೫೫.೬೯ರಷ್ಟು ಮತದಾನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂಲಾಧಾರವಾಗಿರುವ ಚುನಾವಣೆಯನ್ನು ಮತದಾರರು ಎಷ್ಟೊಂದು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅಥವಾ ತೆಗೆದುಕೊಂಡಿಲ್ಲ ಎಂಬುದು ಈ ಮತದಾನದ ಪ್ರಮಾಣದಿಂದ ಅಳೆಯಬಹುದು. ಮತದಾರರ ನಾಡಿಮಿಡಿತದಲ್ಲಿ ಸಾಕಷ್ಟು ಏರುಪೇರುಗಳಾಗಿವೆ ಎಂಬುದಂತೂ ಸತ್ಯ. ಕೆಲವು ನಿದರ್ಶನಗಳು ನಿಜಕ್ಕೂ ಕುತೂಹಲಕರ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಒಂದು ಗ್ರಾಮ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಮತದಾರರಿಗೆ ಆಸೆ ಆಮಿಷಗಳನ್ನೊಡ್ಡುವುದು ಇದ್ದz. ಈ ಗ್ರಾಮಕ್ಕೂ ವಿವಿಧ ಪಕ್ಷಗಳ ಮುಖಂಡರು ಆಸೆ ಆಮಿಷಗಳನ್ನೊಡ್ಡಲು ಬಂದಾಗ ಗ್ರಾಮಸ್ಥರ ನಡವಳಿಕೆ ಈ ಬಾರಿ ತೀರಾ ಭಿನ್ನವಾಗಿತ್ತು. ಗ್ರಾಮಸ್ಥರು ಹೇಳಿzನು ಗೊತ್ತೆ? ‘ನೋಡಿ, ನೀವು ನಮಗೆ ಓಟ್ ಮಾಡುವುದಕ್ಕಾಗಿ ಹಣ ಕೊಡಬೇಡಿ. ಹಣ ಕೊಡದಿದ್ದರೂ ನಾವು ಓಟ್ ಮಾಡುತ್ತೇವೆ. ಏಕೆಂದರೆ ಓಟ್ ಮಾಡುವುದು ನಮ್ಮ ಹಕ್ಕು. ಆದರೆ ನೀವು ಹಣ ಕೊಡುವುದೇ ಆದರೆ ನಮ್ಮೂರಿನಲ್ಲಿ ಹೊಸದಾಗಿ ಕಟ್ಟಬೇಕೆಂದಿರುವ ದೇವಸ್ಥಾನಕ್ಕೆ ಹಣ ನೀಡಿ. ಒಂದು ಒಳ್ಳೆಯ ಕಾರ್ಯಕ್ಕೆ ನೀವು ಉಪಕಾರ ಮಾಡಿದಂತಾಗುತ್ತದೆ’. ಮತದಾರರಿಗೆ ಹಣ ಕೊಡಲೆಂದು ಹೋದ ರಾಜಕೀಯ ಧುರೀಣರಿಗೆ ಹೇಗಾಗಿರಬಹುದು! ನೀವೇ ಊಹಿಸಿ. ಮತದಾರರಲ್ಲಾದ ಈ ಪರಿವರ್ತನೆ ಏನನ್ನು ಸೂಚಿಸುತ್ತದೆ?

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮ ಸುಟಗಟ್ಟಿ. ಈ ಗ್ರಾಮದಲ್ಲಿ ಒಟ್ಟು ಮತದಾರರ ಸಂಖ್ಯೆ ೩೯೮. ಅಲ್ಲಿನ ಸ್ಥಳೀಯ ಶಾಸಕ ಕಾಂಗ್ರೆಸ್‌ನ ಸಂತೋಷ್ ಲಾಡ್ ಬಗ್ಗೆ ಆ ಗ್ರಾಮದ ಮತದಾರರಿಗೆ ವಿಪರೀತ ಕೋಪವಿತ್ತು. ಏಕೆಂದರೆ ಓಟು ಹಾಕಿ ಆತನನ್ನು ಆಯ್ಕೆ ಮಾಡಿದ ಬಳಿಕವೂ ತಮ್ಮ ಗ್ರಾಮಕ್ಕೆ ಸಮರ್ಪಕವಾದ ರಸ್ತೆ, ಮಕ್ಕಳು ಶಾಲೆಗೆ ಹೋಗಲು ಬಸ್ ವ್ಯವಸ್ಥೆ ಮಾಡಿಕೊಡಲಿಲ್ಲವೆಂಬ ಆಕ್ರೋಶ ಅವರಿಗಿತ್ತು. ಹಾಗಾಗಿ ಈ ಬಾರಿ ತಾವು ಮತದಾನಕ್ಕೆ ಬಹಿಷ್ಕಾರ ಹಾಕುವುದಾಗಿ ಘಂಟಾಘೋಷವಾಗಿ ಸಾರಿದ್ದರು. ಆ ಗ್ರಾಮದ ಮತದಾರರ ಮನವೊಲಿಸಲು ಸ್ವತಃ ತಹಶೀಲ್ದಾರ್ ಅಲ್ಲಿಗೆ ಬಂದು, ಮತದಾನದ ಮಹತ್ವದ ಬಗ್ಗೆ ಭಾಷಣ ಮಾಡಿದ್ದರು. ರಾಜಕೀಯ ಪಕ್ಷಗಳ ಮುಖಂಡರೂ ಮತದಾರರನ್ನು ಓಲೈಸಿದ್ದರು. ಆದರೂ ಸುಟಗಟ್ಟಿ ಗ್ರಾಮದ ಮತದಾರರು ತಮ್ಮ ನಿಲುವನ್ನು ಸುತರಾಂ ಬದಲಿಸಿರಲಿಲ್ಲ.

ಈ ಸುದ್ದಿ ಹೇಗೋ ಉತ್ತರ ಕರ್ನಾಟಕದ ಆರೆಸ್ಸೆಸ್‌ನ ಪ್ರಾಂತ ಪ್ರಚಾರಕ ಶಂಕರಾನಂದ ಅವರಿಗೆ ತಿಳಿಯಿತು. ಮತದಾರರನ್ನು ಹೇಗಾದರೂ ಮನವೊಲಿಸಿ ಮತ ಚಲಾಯಿಸುವಂತೆ ಮಾಡಬೇಕೆಂದು ಅವರು ತೀರ್ಮಾನಿಸಿದರು. ಒಂದಿಬ್ಬರು ಕಾರ್ಯಕರ್ತರ ಜೊತೆ ಅಲ್ಲಿಗೆ ತೆರಳಿದ ಅವರು ಗ್ರಾಮದ ಪ್ರಮುಖರನ್ನು ಕಂಡು ಈ ಬಗ್ಗೆ ಮಾತುಕತೆಯಾಡಿದರು. ‘ನೀವೇಕೆ ಮತದಾನಕ್ಕೆ ಬಹಿಷ್ಕಾರ ಹಾಕಿದ್ದೀರಿ? ನಿಮ್ಮ ನಿಜವಾದ ಬೇಡಿಕೆಗಳೇನು?’ ಎಂದು ಪ್ರಶ್ನಿಸಿದಾಗ ಆ ಗ್ರಾಮದ ಪ್ರಮುಖರು ಹೇಳಿದ್ದು: ‘ನೋಡ್ರಿ ಸಾಹೇಬ್ರೆ, ನಮ್ಮ ಗ್ರಾಮಕ್ಕೆ ಬಸ್ ವ್ಯವಸ್ಥಾ ಇಲ್ರೀ. ಮಕ್ಕಳು ಶಾಲೆಗೆ ನಡಕೊಂಡೇ ಹೋಗ್ತಾರ್ರೀ. ೪ ಕಿ.ಮೀ. ರಸ್ತೆ  ಮಾಡ್ತೀವಿಂತ ಹೇಳಿ ನಮ್ಮ ಎಂಎಲ್‌ಎ ಮಾಡೇ ಇಲ್ರಿ. ನಾವ್ಯಾಕ್ರಿ ಓಟ್ ಹಾಕ್ಬೇಕು?’ ಶಂಕರಾನಂದ ಅವರು ಗ್ರಾಮದ ಪ್ರಮುಖರೊಂದಿಗೆ ಮಾತನಾಡಿ, ‘ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ. ಶಾಲೆಗೆ ಹೋಗಲು ಮಕ್ಕಳಿಗೆ ಬಸ್ ವ್ಯವಸ್ಥೆ ಖಂಡಿತ ಆಗಬೇಕು. ಅದೇ ರೀತಿ ಗ್ರಾಮದಿಂದ ಪೇಟೆಗೆ ಬರಲು ೪. ಕಿ.ಮೀ. ರಸ್ತೆ ಕೂಡ ಆಗಬೇಕು. ನಾನು ಇಲ್ಲಿನ ಎಂಪಿ ಪ್ರಹ್ಲಾದ ಜೋಶಿ ಅವರ  ಸಂಗಡ ಈಗಲೇ ಫೋನ್ ಹಚ್ಚಿ ಮಾತಾಡ್ತೀನಿ. ಅವರು ಹೇಳೋದನ್ನ ನೀವೂ ಕೇಳಿಸ್ಕೊಳ್ರಿ’ ಎಂದು ಹೇಳಿ ಜೋಶಿಯವರಿಗೆ ಈ ಬಗ್ಗೆ ಫೋನ್ ಮೂಲಕ ಮಾತನಾಡುವಾಗ ಮೊಬೈಲ್‌ನ ಸ್ಪೀಕರ್ ಆನ್ ಮಾಡಿಟ್ಟರು. ಎಂಪಿ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಅವರಿಗೆ ಸಂಘದ ಮುಖ್ಯಸ್ಥ ಶಂಕರಾನಂದ ಸಮಸ್ಯೆ ಪರಿಹರಿಸಲು ಹೇಳಿದ್ದು ಎಲ್ಲವನ್ನೂ ಗ್ರಾಮಸ್ಥರು ಕೇಳಿಸಿಕೊಂಡರು. ಅನಂತರ ಶಂಕರಾನಂದ ಅವರೆಲ್ಲರನ್ನೂ ಕೂರಿಸಿಕೊಂಡು, ನೋಡಿ ನಿಮ್ಮ ಸಮಸ್ಯೆ ಪರಿಹಾರಕ್ಕೆ ಸೂಕ್ತ ವ್ಯಕ್ತಿಯೊಂದಿಗೆ  ಮಾತನಾಡಲಾಗಿದೆ. ಅವರು ಖಂಡಿತ ನಿಮ್ಮ ಸಮಸ್ಯೆ ಪರಿಹರಿಸುತ್ತಾರೆಂಬ ಭರವಸೆ ನನಗಿದೆ. ಈಗಲಾದರೂ ನೀವು ಮತದಾನ ಬಹಿಷ್ಕಾರ ಹಿಂತೆಗೆದುಕೊಂಡು ಮತ ಚಲಾಯಿಸುತ್ತೀರಲ್ಲವೆ ಎಂದು  ಅನುನಯಿಸಿದಾಗ ಗ್ರಾಮದ ಪ್ರಮುಖರು ‘ಸಂಘದವರ ಮೇಲೆ ನಮಗೆ ವಿಶ್ವಾಸವಿದೆ. ನೀವು ಹೇಳಿದ್ದರಿಂದ ನಾವು ಬಹಿಷ್ಕಾರ ಹಿಂತೆಗೆದುಕೊಂಡು ಓಟ್ ಹಾಕ್ತೀವಿ’ ಎಂದು ಭರವಸೆ ನೀಡಿದರು. ಅದೇ ರೀತಿ ಗ್ರಾಮದ ಅಷ್ಟೂ ಮತದಾರರು ಮತದಾನದಲ್ಲಿ ಪಾಲ್ಗೊಂಡರು. ತಹಶೀಲ್ದಾರ್ ಮಾತಿಗೂ ಜಗ್ಗದಿದ್ದ ಗ್ರಾಮಸ್ಥರು ಆರೆಸ್ಸೆಸ್ ಮುಖ್ಯಸ್ಥರ ಮಾತಿಗೆ ಮನ್ನಣೆ ನೀಡಿ ಓಟ್ ಮಾಡಿದ್ದು ಸಂಘದ ಮೇಲಿನ ಅವರ ವಿಶ್ವಾಸ, ಶ್ರದ್ಧೆಗೆ ಸಾಕ್ಷಿ.

ಶಂಕರಾನಂದ ಅವರು ಇಷ್ಟಕ್ಕೇ ಸುಮ್ಮನಾಗಿಲ್ಲ. ಮತದಾನ ಮುಗಿದ ಎರಡು ದಿನಗಳ ಬಳಿಕ ಸಂಬಂಧಿಸಿದ ಪ್ರಮುಖರನ್ನು ಆ ಗ್ರಾಮಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ರಸ್ತೆ ಹಾಗೂ ಶಾಲೆಗೆ ಹೋಗಲು ಮಕ್ಕಳಿಗೆ ಬಸ್ ವ್ಯವಸ್ಥೆಗೆ ಒಂದು ತಾರ್ಕಿಕ ಅಂತ್ಯ ತಂದುಕೊಡಲು ಹೊರಟಿದ್ದಾರೆ. ಯಾವುದೇ ರಾಜಕೀಯ ಲಾಭಕ್ಕಾಗಿ ಅವರು ಈ ಕೆಲಸ ಮೈಮೇಲೆ ಎಳೆದುಕೊಂಡಿಲ್ಲ. ಗ್ರಾಮಸ್ಥರಿಗೆ ಅನುಕೂಲ ಆಗಬೇಕು. ಅಲ್ಲಿನ ಮಕ್ಕಳು ನೆಮ್ಮದಿಯಿಂದ ಶಾಲೆಗೆ ಹೋಗುವಂತಾಗಬೇಕು ಎಂಬುದಷ್ಟೇ ಅವರ ಆಂತರ್ಯದ ಕಾಳಜಿ.

ಮತದಾನದ ದಿನವಾದ ಏ. ೧೭ರಂದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸಾವಿರಾರು ಮಂದಿ ತಮ್ಮ ಸ್ವಕ್ಷೇತ್ರಕ್ಕೆ ಹೋಗಿ ಮತ ಚಲಾಯಿಸಿದ ನಿದರ್ಶನಗಳು ಹಲವಾರು. ಸುಮಾರು ೧೦ ಸಾವಿರಕ್ಕೂ ಹೆಚ್ಚು ಮಂದಿ ಹೀಗೆ ಏ. ೧೬ ರಾತ್ರಿ ಬಸ್ ಹಿಡಿದು ತಮ್ಮೂರಿಗೆ ತೆರಳಿ ಮತ ಚಲಾಯಿಸಿ, ಏ. ೧೭ರ ರಾತ್ರಿ ಮರಳಿ ಬೆಂಗಳೂರಿಗೆ ಬಂದವರಿದ್ದಾರೆ. ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬುದಷ್ಟೇ ಈ ಮಂದಿಯ ಈ ಪರಿಯ ಶ್ರಮದ ಹಿಂದಿನ ಕಾರಣ. ತಮ್ಮ ಕರ್ತವ್ಯದಲ್ಲಿ ಚ್ಯುತಿ ಉಂಟಾಗಬಾರದು ಎಂಬ ಕಾಳಜಿಯೂ ಇದರ ಹಿಂದಿದೆ. ಶಾಲಾ ರಜೆ ದಿನಗಳನ್ನು ಕಳೆಯಲೆಂದು ತಾಯಿಯ ಮನೆಗೆ ಹೋಗಿದ್ದ ಅಧ್ಯಾಪಕಿಯೊಬ್ಬರು ಏ.೧೭ರಂದು ಬೆಳಿಗ್ಗೆ ಊರಿನಿಂದ ಹೊರಟು ೩೫೦ ಕಿ.ಮೀ. ದೂರ ಪ್ರಯಾಣಿಸಿ ಬೆಂಗಳೂರಿಗೆ ಬಂದು ಸಂಜೆ ೫.೪೫ಕ್ಕೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ ನಿದರ್ಶನವೂ ಇದೆ. ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಕೆ.ಎಂ. ಮಂಜುನಾಥ ಕುಮಾರ್ ಅವರು ಸಾವಿರಾರು ಮೈಲಿ ಪ್ರಯಾಣಿಸಿ ಹೊನ್ನಾಳಿ ತಾಲ್ಲೂಕಿನ ತಮ್ಮ ಸ್ವಂತ ಊರು ನ್ಯಾಮತಿಗೆ ಬಂದು ಏ. ೧೭ರಂದು ಮತ ಚಲಾಯಿಸಿದರು. ವಿದೇಶಗಳಲ್ಲಿ ಉದ್ಯೋಗಲ್ಲಿರುವ ಅನೇಕ ಭಾರತೀಯರು ತಮ್ಮ ಸ್ವಕ್ಷೇತ್ರಕ್ಕೆ ಬಂದು ಮತ ಚಲಾಯಿಸಿದ ಇಂತಹ ನಿದರ್ಶನಗಳು ಸಾಕಷ್ಟಿವೆ. ಪವಿತ್ರ ಮತಕ್ಕಿರುವ ಬೆಲೆಗಿಂತ ಅವರಿಗೆ ಸಾವಿರಾರು ರೂಪಾಯಿ ಸ್ವಂತ ಖರ್ಚು ಹೆಚ್ಚಿನದ್ದಲ್ಲ ಎನಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಈ ಮಹನೀಯರು ಕೊಟ್ಟಿರುವ ಗೌರವಕ್ಕೆ ಉಜ್ವಲ ನಿದರ್ಶನ.

ನಕ್ಸಲ್‌ಪೀಡಿತ ಪ್ರದೇಶಗಳಲ್ಲೂ ಭಾರೀ ಪ್ರಮಾಣದ ಮತದಾನ ಈ ಬಾರಿ ಕಂಡು ಬಂದಿದೆ. ಶೃಂಗೇರಿ ಸುತ್ತಮುತ್ತ, ಆಗುಂಬೆ ಮುಂತಾದೆಡೆ ಹೆಚ್ಚಿನ ಪ್ರಮಾಣದ ಮತದಾನವಾಗಿದೆ. ಮತದಾನ ಬಹಿಷ್ಕಾರಕ್ಕೆ ನಕ್ಸಲರು ಕರೆ ನೀಡಿದ್ದರು. ಮತ ಚಲಾಯಿಸಿದರೆ ನಿಮ್ಮ ಗತಿ ನೆಟ್ಟಗಾಗುವುದಿಲ್ಲ ಎಂಬ ಬೆದರಿಕೆಯನ್ನೂ ಒಡ್ಡಿದ್ದರು. ಆದರೆ ನಕ್ಸಲ್‌ಪೀಡಿತ ಗ್ರಾಮೀಣ ಪ್ರದೇಶದ ಮತದಾರರು ಈ ಬೆದರಿಕೆಗೆಲ್ಲ ಕ್ಯಾರೇ ಅನ್ನಲಿಲ್ಲ. ಇದು ಪ್ರಜಾತಂತ್ರ ವ್ಯವಸ್ಥೆಗೆ ಸಂದ ಜಯವಲ್ಲದೆ ಮತ್ತೇನು?

ಚುನಾವಣೆಯೆಂದರೆ ಹಣ, ಹೆಂಡ ಹಂಚುವುದು ಮಾಮೂಲಿಯಾಗಿರುವಾಗ, ಇದಕ್ಕೆ ವ್ಯತಿರಿಕ್ತವಾಗಿ ಮತದಾನ ಮಾಡಿದವರಿಗೆಲ್ಲ ಸಸಿ ವಿತರಿಸಿ ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ಗಂಗಾವತಿ ತಾಲ್ಲೂಕಿನ ಕನಕಗಿರಿಯಲ್ಲಿ. ಅಲ್ಲಿನ ಮತಗಟ್ಟೆ ಸಂಖ್ಯೆ ೫೯ ಮತ್ತು ೬೪ರಲ್ಲಿ ಮತ ಚಲಾಯಿಸಲು ಬಂದವರಿಗೆ ಗ್ರಾಮ ಪಂಚಾಯತ್ ಆಡಳಿತ ನುಗ್ಗೆ, ಲಿಂಬೆ, ಕರಿಬೇವು ಮುಂತಾದ ಸಸಿಗಳನ್ನು ವಿತರಿಸಿತು. ಜೊತೆಗೆ ಮತದಾರರಿಗೆ ತಂಪು ಪಾನೀಯವನ್ನೂ ನೀಡಿತು. ಮತದಾರರು ಖುಷಿಯಿಂದ ಮತ ಚಲಾಯಿಸಿ ಅಷ್ಟೇ ಖುಷಿಯಿಂದ ಸಸಿಗಳನ್ನು ಒಯ್ದು ತಮ್ಮ ಮನೆಯ ಆವರಣದಲ್ಲಿ ನೆಟ್ಟಿದ್ದಾರೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಹಣ, ಹೆಂಡ ಹಂಚದೆ ಸಸಿಗಳನ್ನು ಹಂಚಿರುವುದು ಅದೆಂತಹ ಹೊಸ ಚಿಂತನೆ, ಅಲ್ಲವೆ? ಪರಿಸರ ಜಾಗೃತಿಯ ಜೊತೆಗೆ ಮತದಾರರಲ್ಲೂ ಜಾಗೃತಿ!

ಇವೆಲ್ಲ ಘಟನೆಗಳನ್ನೋದಿದಾಗ ನಿಮಗೆ ಖಂಡಿತ ಖುಷಿಯಾಗಿರುತ್ತದೆ. ಆದರೆ ರಾಜಧಾನಿ ಬೆಂಗಳೂರು ಮತದಾರರು ಮತದಾನದಂದು ತೋರಿದ ನಿರಾಸಕ್ತಿ ನೋಡಿ ನಿಮಗಷ್ಟೇ ಅಲ್ಲ , ಎಂಥವರಿಗೂ ಆಕ್ರೋಶ ಉಂಟಾಗದೇ ಇರದು. ಬೆಂಗಳೂರಿನಲ್ಲಿ ಚುನಾವಣಾ ಆಯೋಗ, ಬಿಬಿಎಂಪಿ, ವಿವಿಧ ನಾಗರಿಕ ಸಂಘ-ಸಂಸ್ಥೆಗಳು ಮತದಾರರಲ್ಲಿ ಜಾಗೃತಿ ಉಂಟುಮಾಡಲು ನಡೆಸಿದ ಕಾರ್ಯಕ್ರಮಗಳು ಅಷ್ಟಿಷ್ಟಲ್ಲ. ಬಿಬಿಎಂಪಿ ‘ಸ್ವೀಪ್’ ಕಾರ್ಯಕ್ರಮದಲ್ಲಿ ನಾನಾ ಮಾದರಿಯಲ್ಲಿ ಪ್ರಚಾರ ಕಾರ್ಯ ಕೈಗೊಂಡಿತ್ತು. ಕಲಾ ಜಾಥಾ, ಬೀದಿ ನಾಟಕ, ರಂಗೋಲಿ ಪ್ರದರ್ಶನ, ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಸಭೆ, ಕೊಳಗೇರಿಗಳಲ್ಲಿ ಅಣಕು ಮತದಾನ, ಮತದಾನ ದಿನಾಂಕ, ಸಂದೇಶವುಳ್ಳ ಬೃಹತ್ ಬಲೂನ್ ಅಳವಡಿಸಿದ್ದು ಸೇರಿದಂತೆ ಸಾಕಷ್ಟು ಪ್ರಚಾರ ವ್ಯಾಪಕವಾಗಿ ನಡೆದಿತ್ತು. ಇದೆಲ್ಲದರ ಪರಿಣಾಮವಾಗಿ ಈ ಬಾರಿ ಬೆಂಗಳೂರಿನಲ್ಲಿ ಮತದಾನ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆ ಮೂಡಿತ್ತು. ಮತದಾನ ಪ್ರಮಾಣ ಶೇ. ೬೦ರ ಗಡಿ ದಾಟುವ ಭರವಸೆ ಹುಟ್ಟಿಸಿತ್ತು. ಆದರೆ ಮತದಾನ ಮುಕ್ತಾಯವಾದ ಬಳಿಕ ಈ ಎಲ್ಲ ಭರವಸೆ ಠುಸ್ಸ್ ಆಯಿತು. ಬೆಂಗಳೂರಿನ ಮೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆ ಮತದಾನ ಪ್ರಮಾಣ ಕೇವಲ ಶೇ. ೫೫.೯೫. ಅದರಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೇವಲ ಶೇ. ೫೫.೬೯. ತಮಾಷೆಯೆಂದರೆ ಬೆಂಗಳೂರಿಗೆ ಅಂಟಿಕೊಂಡಂತೆಯೇ ಇರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಶೇ. ೬೮.೮೦. ಕೊಪ್ಪಳ, ಬಳ್ಳಾರಿ, ಹಾವೇರಿ, ಚಿಕ್ಕೋಡಿ ಮೊದಲಾದ ಹಿಂದುಳಿದ ಕ್ಷೇತ್ರಗಳಲ್ಲೂ ಮತದಾನ ಶೇ. ೬೫ಕ್ಕಿಂತ ಹೆಚ್ಚಿದೆ. ಈ ಬಾರಿ ಮತದಾನ ಪ್ರಮಾಣವನ್ನು ಶೇ. ೭೦ರ ಗಡಿ ದಾಟಿಸುವ ಉಮೇದಿನಲ್ಲಿದ್ದ ಚುನಾವಣಾ ಆಯೋಗದ ನಿರೀಕ್ಷೆಗೆ ಬೆಂಗಳೂರು ಮತದಾರ ಪ್ರಭುಗಳು ಸಂಪೂರ್ಣ ತಣ್ಣೀರೆರಚಿರುವುದು ಸಾಬೀತಾಗಿದೆ. ಇಂತಹ ನಿರಾಸಕ್ತಿಯ ನಿದರ್ಶನಗಳನ್ನು ನೋಡಿದಾಗಲೆಲ್ಲ ಆರ್ಥಿಕತೆ ಮತ್ತು ಶಿಕ್ಷಣ ಮಟ್ಟಕ್ಕೂ ನಾಗರಿಕ ಕರ್ತವ್ಯ ಪ್ರದರ್ಶಿಸುವ ಬದ್ಧತೆಗೂ ಒಂದಕ್ಕೊಂದು ಸಂಬಂಧವಿಲ್ಲ ಎಂಬ ಅಭಿಪ್ರಾಯಕ್ಕೆ ಮತ್ತೊಮ್ಮೆ ಪುಷ್ಟಿ ಸಿಕ್ಕಂತಾಗಿದೆ. ಸಾಲು ಸಾಲು ರಜೆಗಳನ್ನು ವ್ಯರ್ಥವಾಗಿಸುವುದೇಕೆಂದು ಪಿಕ್ನಿಕ್‌ಗೆ ತೆರಳಿ ಮತದಾನ ಮರೆತವರು ಸಾಕಷ್ಟು ಮಂದಿ ವಿದ್ಯಾವಂತರೆನಿಸಿಕೊಂಡವರು! ನಮ್ಮ ರಾಜಕೀಯ ವ್ಯವಸ್ಥೆ ಕುರಿತು, ಭ್ರಷ್ಟಾಚಾರದ ಕುರಿತು, ನಾಗರಿಕ ಸೌಕರ್ಯಗಳ ಕೊರತೆ ಕುರಿತು ಆಗಾಗ ಆಕ್ರೋಶ ವ್ಯಕ್ತಪಡಿಸುವವರೂ ಇದೇ ಮತ ಚಲಾಯಿಸದ ಮಂದಿ! ಮತದಾನದಂತಹ ಪವಿತ್ರ ಕರ್ತವ್ಯ ನಿಭಾಯಿಸಲಾಗದ ಇಂಥವರಿಗೆ ಕೊರತೆಗಳ ಕುರಿತು ಧ್ವನಿಯೆತ್ತುವ ಅಧಿಕಾರ ಕೊಟ್ಟವರಾರು?

ವಿದ್ಯಾವಂತರಲ್ಲಿ ಮತದಾನ ಕುರಿತು ಜಾಗೃತಿ ಉಂಟು ಮಾಡಲು ಇನ್ನು ಬೇರೆಯದೇ ವಿಧಾನ ಅನುಸರಿಸುವುದು ಅಗತ್ಯವೆನಿಸುತ್ತದೆ. ಮತ ಚಲಾಯಿಸದಿದ್ದರೆ ಅಂತಹವರ ಮನೆಗಳಿಗೆ ವಿದ್ಯುತ್, ನೀರು ಮತ್ತಿತರ ಮೂಲ ಸೌಕರ್ಯಗಳನ್ನು ಶಾಶ್ವತವಾಗಿ ಕಡಿತಗೊಳಿಸಲಾಗುವುದು ಎಂಬ ಕಠಿಣ ಆದೇಶ ಜಾರಿಗೊಳಿಸಿದರೆ ಮಾತ್ರ ಬೆಂಗಳೂರಿನ ನಿವಾಸಿಗಳು ತಪ್ಪದೇ ಮತ ಚಲಾಯಿಸಬಹುದೇನೋ! ಅಂತಹ ಕಠಿಣ ಆದೇಶ ಹೊರಡಿಸಿ, ಕಡ್ಡಾಯ ಮತದಾನ ಕ್ರಮಕ್ಕೆ ಆಯೋಗ ಮುಂದಾಗಬೇಕಾದ ಅಗತ್ಯವನ್ನು ಈ ಬಾರಿಯ ಬೆಂಗಳೂರಿನ ಕಳಪೆ ಮತದಾನ ವಿದ್ಯಮಾನ ಸಾರಿಸಾರಿ ಹೇಳಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Legal Notice to Media houses by Dr. Pravin Togadia for publishing fabricated news

Mon Apr 21 , 2014
Dr Pravin Togadia, general secretary of VHP has denied saying the sentences attributed to him in Times of India and some other media and sent a legal notice to media houses. Dr Togadia has clearly said that report published in media is fabricated and written with malicious intention to malign […]