ನೇರನೋಟ : ಆರೆಸ್ಸೆಸ್ ವಿರುದ್ಧ ಅಪಪ್ರಚಾರ ನಿರಂತರ

By Du Gu Lakshman

ದೆಹಲಿಯಿಂದ ಪ್ರಕಟವಾಗುವ ‘ಕಾರವಾನ್’ ಪತ್ರಿಕೆಯ ಫೆಬ್ರವರಿ ೧ರ ಸಂಚಿಕೆಯಲ್ಲಿ ಪ್ರಕಟವಾದ ಒಂದು ಸಂದರ್ಶನ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಆ ಸಂದರ್ಶನ, ಈಗ ಹರ್ಯಾಣದ ಅಂಬಾಲ ಜೈಲಿನಲ್ಲಿರುವ ಸ್ವಾಮಿ ಅಸೀಮಾನಂದ ಅವರ ಕುರಿತಾದದ್ದು. ಸಂದರ್ಶಿಸಿದವರು ಲೀನಾ ಗೀತಾ ರಘುನಾಥ್ ಎಂಬ ಪತ್ರಕರ್ತೆ-ಕಂ-ನ್ಯಾಯವಾದಿ. ಈ ಸಂದರ್ಶನವನ್ನು ೨ ವರ್ಷಗಳ ಹಿಂದೆಯೇ ಮಾಡಲಾಗಿದ್ದು ಈಗ ಅದನ್ನು ಪ್ರಕಟಿಸಲಾಗುತ್ತಿದೆ ಎಂದು ಪತ್ರಿಕೆ ಹೇಳಿಕೊಂಡಿದೆ.

Karavan New Magzine

ಈಗ ಅಂಬಾಲಾ ಜೈಲಿನಲ್ಲಿರುವ ಸ್ವಾಮಿ ಅಸೀಮಾನಂದ ಸಂರhತಾ ಎಕ್ಸ್‌ಪ್ರೆಸ್ (ಫೆಬ್ರವರಿ ೨೦೦೭), ಹೈದರಾಬಾದ್ ಮೆಕ್ಕಾ ಮಸೀದ್ ಪ್ರಕರಣ (ಮೇ ೨೦೦೭) ಮತ್ತು ಅಜ್ಮೀರ್ ದರ್ಗಾ ಪ್ರಕರಣ (ಅಕ್ಟೋಬರ್ ೨೦೦೭) – ಈ ಪ್ರಕರಣಗಳಲ್ಲಿ ಆರೋಪಿಯಾಗಿರುವವರು. ಅವರನ್ನು ಗೀತಾ ರಘುನಾಥ್ ಜೈಲಿಗೆ ಹೋಗಿ ಸಂದರ್ಶಿಸಿದ್ದಾರೆಂದು ಹೇಳಲಾಗಿದೆ. ಆ ಸಂದರ್ಶನದಲ್ಲಿ ಸ್ವಾಮಿ ಅಸೀಮಾನಂದ ಅವರು, ರಹಸ್ಯ ಸಭೆಯೊಂದರಲ್ಲಿ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಹಾಗೂ ಸಂಘದ ಇನ್ನೊಬ್ಬ ಹಿರಿಯ ಪ್ರಚಾರಕ್ ಇಂದ್ರೇಶ್ ಕುಮಾರ್ ಅವರು ಬಾಂಬ್‌ಸ್ಫೋಟ ಮಾಡಲು ಬೆಂಬಲ ನೀಡಿದ್ದರು ಹಾಗೂ ಇಂತಹ ಚಟುವಟಿಕೆಯನ್ನು ಮುಂದುವರಿಸಲು ಸಮ್ಮತಿಸಿದ್ದರೆಂದು ಹೇಳಿದ್ದಾರೆ. ಈ ಸಂದರ್ಶನ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಆರೆಸ್ಸೆಸ್ ವಿರುದ್ಧ ಎಂದಿನಂತೆ ತೋಳೇರಿಸಿ ಮುಗಿಬಿದ್ದರು. ಆರೆಸ್ಸೆಸ್ ದೇಶದಾದ್ಯಂತ ಭಯೋತ್ಪಾದನೆ ಹರಡಲು ಸಂಚು ಹೂಡಿದೆ ಎಂದು ಬೊಬ್ಬಿಟ್ಟರು. ಕೆಲವು ಟಿವಿ ವಾಹಿನಿಗಳಂತೂ ಹಗಲೂ ರಾತ್ರಿ ಇದನ್ನು ಎಡೆಬಿಡದೆ ಪ್ರಸಾರ ಮಾಡಿ ಆರೆಸ್ಸೆಸ್‌ಗೆ ಕಳಂಕ ಹಚ್ಚಲು ಇನ್ನಿಲ್ಲದ ವ್ಯರ್ಥ ಪ್ರಯತ್ನ ನಡೆಸಿದವು.

ಆದರೆ ಅಸಲಿಗೆ ಇಂತಹದೊಂದು ಸಂದರ್ಶನವೇ ನಡೆದಿರಲಿಲ್ಲ. ಇದೊಂದು ಕೇವಲ ಕಪೋಲಕಲ್ಪಿತ ಸಂದರ್ಶನವಾಗಿತ್ತು. ಸುದ್ದಿಗಳನ್ನು ಸುಳ್ಳು ಸುಳ್ಳೇ ಬರೆದು ಪತ್ರಿಕೆಗಳು ಪ್ರಕಟಿಸುವುದನ್ನು ನಾವು ಓದಿzವೆ. ಆದರೆ ಒಬ್ಬ ವ್ಯಕ್ತಿಯ ಸಂದರ್ಶನವನ್ನು ಕೂಡ ಸುಳ್ಳು ಸುಳ್ಳಾಗಿ ಬರೆದು ಪ್ರಕಟಿಸಿದ್ದು ಬಹುಶಃ ಇದೇ ಮೊದಲ ಬಾರಿ ಆಗಿರಬಹುದು. ಸಂದರ್ಶನವನ್ನೇ ನಡೆಸದೆ ಸಂದರ್ಶನ ಮಾಡಲಾಗಿದೆ ಎಂದು ಹೇಳುವ ‘ಕಾರವಾನ್’ ಪತ್ರಿಕೆಯ ಉದ್ಧಟತನ ಪತ್ರಿಕೋದ್ಯಮ ವೃತ್ತಿಗೇ ಬಗೆದ ಘೋರ ಅಪಚಾರ.

ಇಂತಹದೊಂದು ಸಂದರ್ಶನವನ್ನು ನಾನು ನೀಡಿಯೇ ಇರಲಿಲ್ಲ ಎಂದು ಜೈಲಿನಲ್ಲಿರುವ ಸ್ವಾಮಿ ಅಸೀಮಾನಂದ ಕೂಡ ತಮ್ಮ ವಕೀಲರಾದ ಜೆ.ಎಸ್.ರಾಣಾ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಇದೊಂದು ಆಧಾರರಹಿತ, ತಲೆಬುಡವಿಲ್ಲದ ಸಂದರ್ಶನವೆಂದು ಅವರು ಹೇಳಿದ್ದಾರೆ. ಸಂಘದ ಯಾವುದೇ ಹಿರಿಯ ನಾಯಕರೊಂದಿಗೆ ತಾನು ರಹಸ್ಯ ಸಭೆಯನ್ನು ೨೦೦೫ರಲ್ಲಾಗಲೀ ಅನಂತರವಾಗಲೀ ನಡೆಸಿಲ್ಲವೆಂದು ಸ್ವಾಮಿ ಅಸೀಮಾನಂದ ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನದಲ್ಲಿ ನನ್ನ ಮೇಲೆ ಹೊರಿಸಿರುವ ಆರೋಪಗಳನ್ನು ಸಂದರ್ಶಕಿ ಸಾಬೀತುಪಡಿಸಲಿ. ಇಲ್ಲದಿದ್ದರೆ ಕ್ಷಮೆ ಕೇಳಲಿ. ಅವೆರಡನ್ನೂ ಮಾಡದಿದ್ದರೆ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ ಎಂದು ಅಸೀಮಾನಂದ ತನ್ನ ವಕೀಲರ ಮೂಲಕ ಹೇಳಿಕೆ ನೀಡಿದ್ದಾರೆ. ‘ಕಾರವಾನ್’ ಪತ್ರಿಕೆ ಮಾತ್ರ ಇದಾದ ಬಳಿಕ ತುಟಿ ಬಿಚ್ಚಿಲ್ಲ. ವಿಷಾದ ವ್ಯಕ್ತಪಡಿಸುವ ಸೌಜನ್ಯವನ್ನೂ ತೋರಿಲ್ಲ. ಅದರದೇನಿದ್ದರೂ ‘ಹಿಟ್ ಆಂಡ್ ರನ್’ ತಂತ್ರಗಾರಿಕೆ ಮಾತ್ರ!

ಜೈಲಿನಲ್ಲಿರುವ ಆರೋಪಿಗಳನ್ನು ನೋಡಲು ಸ್ವತಃ ಅವರ ಬಂಧುಗಳಿಗೂ ಸಾಮಾನ್ಯವಾಗಿ ಬಿಡುವುದಿಲ್ಲ. ಪತ್ರಕರ್ತರಿಗಂತೂ ಬಿಡುವ ಪ್ರಶ್ನೆಯೇ ಇಲ್ಲ. ಹೀಗಿರುವಾಗ ಕಾರವಾನ್ ಪತ್ರಿಕೆಯ ಲೀನಾ ಗೀತಾ ಆರೋಪಿ ಸ್ವಾಮಿ ಅಸೀಮಾನಂದರನ್ನು ಜೈಲಿನಲ್ಲಿ ಭೇಟಿಯಾಗಿದ್ದು ಹೇಗೆ? ಯಾವಾಗ? ಇವು ಯಾವುದಕ್ಕೂ ದಾಖಲೆ ಇಲ್ಲ. ಬಾಂಬ್‌ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬನೊಂದಿಗೆ ಸಂದರ್ಶನ ನಡೆಸಲು ಆಕೆಗೆ ಅನುಮತಿ ದೊರಕಿದ್ದಾದರೂ ಹೇಗೆ? ೨ ವರ್ಷಗಳ ಹಿಂದೆಯೇ ಈ ಸಂದರ್ಶನ ನಡೆಸಿದ್ದು ನಿಜವಾಗಿದ್ದರೆ ಅದನ್ನು ತನಿಖಾ ಏಜೆನ್ಸಿಗಳಿಗೆ ಏಕೆ ತಿಳಿಸಲಿಲ್ಲ? ಪತ್ರಿಕೆಯಲ್ಲಿ ೨ ವರ್ಷಗಳ ಮುನ್ನವೇ ಈ ಸಂದರ್ಶನವನ್ನು ಏಕೆ ಪ್ರಕಟಿಸಲಿಲ್ಲ? ಲೋಕಸಭಾ ಚುನಾವಣೆ ಇನ್ನೇನು ಸಮೀಪಿಸಿತೆಂದಾಗಲೇ ಇಂತಹದೊಂದು ಸಂದರ್ಶನವನ್ನು ಪ್ರಕಟಿಸಿದ ಹುನ್ನಾರವಾದರೂ ಏನು? ಇಂತಹ ಹಲವು ಪ್ರಶ್ನೆಗಳು ಈಗ ಪ್ರಶ್ನೆಗಳಾಗಿಯೇ ಉಳಿದಿವೆ.

ಲೀನಾ ರಘುನಾಥ್, ಸ್ವಾಮಿ ಅಸೀಮಾನಂದರನ್ನು ಒಂದೆರಡು ಬಾರಿ ಕೋರ್ಟಿನಲ್ಲಿ ಭೇಟಿಯಾಗಿದ್ದು ಹೌದು. ನಿಮಗೇನಾದರೂ ನಾನು ಸಹಾಯ ಮಾಡಲೆ ಎಂದು ಆಕೆ ಕೇಳಿದ್ದಳಂತೆ. ಆದರೆ ಅಸೀಮಾನಂದರು ಅದನ್ನು ನಯವಾಗಿಯೇ ನಿರಾಕರಿಸಿದ್ದರು. ‘ನನ್ನ ವಕೀಲರು ಇದ್ದಾರೆ. ಅವರೇ ಎಲ್ಲ ನೋಡಿಕೊಳ್ಳುತ್ತಾರೆ’ ಎಂದು ಅವರು ಸ್ಪಷ್ಟಪಡಿಸಿದ್ದರು. ಹೀಗಿರುವಾಗ ಆಕೆ ಅಸೀಮಾನಂದರನ್ನು ಸಂದರ್ಶಿಸುವ ಪ್ರಶ್ನೆಯೇ ಉದ್ಭವಿಸದು. ಹಾಗಿದ್ದರೆ ಇಂತಹದೊಂದು ಸಂದರ್ಶನವನ್ನು ಪ್ರಕಟಿಸಿದ ಪತ್ರಿಕೆಯ ಉzಶವಾದರೂ ಏನು? ಅಲ್ಲೇ ಇರುವುದು ಸ್ವಾರಸ್ಯ!

ಈ ಷಡ್ಯಂತ್ರದ ಹಿಂದೆ ಇದ್ದವರು ಕಾಂಗ್ರೆಸ್ ಮುಖಂಡರು ಎಂಬುದನ್ನು ಪತ್ತೆಹಚ್ಚಲು ವಿಶೇಷ ಪಾಂಡಿತ್ಯದ ಅಗತ್ಯವಿಲ್ಲ. ಅಂಬಾಲ ಜೈಲು ಇರುವುದು ಕಾಂಗ್ರೆಸ್ ಆಡಳಿತದ ಹರ್ಯಾಣದಲ್ಲಿ. ಸರ್ಕಾರದ ಶಾಮೀಲು ಇಲ್ಲದೆ ಕಾರವಾನ್ ಪತ್ರಿಕೆಯ ಸಂದರ್ಶಕಿ ಇಂತಹದೊಂದು ಸಂದರ್ಶನ ಪ್ರಕಟಿಸಲು ಸಾಧ್ಯವೇ ಇಲ್ಲ. ಕಳೆದ ಫೆಬ್ರವರಿ ೮ರಂದು ಗುಜರಾತ್‌ನಲ್ಲಿ ರಾಹುಲ್ ಗಾಂಧಿ ಸಭೆಯೊಂದರಲ್ಲಿ ಮಾತನಾಡುತ್ತಾ ‘ಆರೆಸ್ಸೆಸ್ ಒಂದು ವಿಷಭರಿತ ವಿಚಾರಧಾರೆ. ಈ ವಿಷಪೂರಿತ ವಿಚಾರಧಾರೆಯೇ ಮಹಾತ್ಮಾಗಾಂಧಿಯನ್ನು ಕೊಂದಿದ್ದು. ಮೋದಿ ಇಂತಹ ಆರೆಸ್ಸೆಸ್‌ನಲ್ಲಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು. ಕಾರವಾನ್ ಪತ್ರಿಕೆಯಲ್ಲಿ ಸ್ವಾಮಿ ಅಸೀಮಾನಂದರ ಸಂದರ್ಶನ ಪ್ರಕಟವಾಗುವುದಕ್ಕೂ ರಾಹುಲ್ ಗಾಂಧಿ ಆರೆಸ್ಸೆಸ್ ವಿರುದ್ಧ ಇಂತಹದೊಂದು ಆಧಾರರಹಿತ ಹೇಳಿಕೆ ನೀಡುವುದಕ್ಕೂ ಖಂಡಿತ ಸಂಬಂಧವಿದೆ. ಕಾಂಗ್ರೆಸ್ ಮುಖಂಡರು ಕಾರವಾನ್ ಪತ್ರಿಕೆಗೆ ಕಾಸು ಕೊಟ್ಟು ಇಂತಹದೊಂದು ಸಂದರ್ಶನ ಪ್ರಕಟಿಸಿ, ಆರೆಸ್ಸೆಸ್‌ನ ತೇಜೋವಧೆಗೆ ಯತ್ನಿಸಿದ್ದಾರೆ. ತನ್ಮೂಲಕ ಬಿಜೆಪಿ ಮೇಲೆ ಗೂಬೆ ಕೂರಿಸಿ ಜನಮನದಲ್ಲಿ ಬಿಜೆಪಿ ವಿರೋಧಿ ಅಲೆ ಸೃಷ್ಟಿಸಲು ನಡೆಸಿರುವ ಷಡ್ಯಂತ್ರವಿದು. ಎಂಜಲು ಕಾಸಿನಾಸೆಗಾಗಿ ಕಾರವಾನ್ ಪತ್ರಿಕಾನೀತಿ ಸಂಹಿತೆಯನ್ನೇ ಗಾಳಿಗೆ ತೂರುವ ನೀಚಮಟ್ಟಕ್ಕೆ ಇಳಿದಿದೆ. ಆದರೇನು, ಇಂತಹ ಷಡ್ಯಂತ್ರಗಳನ್ನು ನಂಬುವಷ್ಟು ಈ ದೇಶದ ಜನ ಹುಂಬರಲ್ಲ. ಅವರೇನಾದರೂ ಹುಂಬರೇ ಆಗಿದ್ದರೆ, ಈ ವೇಳೆಗಾಗಲೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್, ಇಂದ್ರೇಶ್ ಕುಮಾರ್ ಮೊದಲಾದ ಪ್ರಮುಖರೆಲ್ಲ ಬಂಧನಕ್ಕೊಳಗಾಗಿ ಜೈಲಿನಲ್ಲಿರಬೇಕಾಗಿತ್ತು. ಸ್ವತಃ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಮೂಲಗಳು ಕೂಡ ‘ಅಸೀಮಾನಂದ ತನಿಖಾ ಸಂಬಂಧವಾಗಿ ತನ್ನ ಹೇಳಿಕೆಯಲ್ಲಿ ಯಾವುದೇ ಸಂಘದ ಹಿರಿಯ ನಾಯಕರನ್ನು ಹೆಸರಿಸಿಲ್ಲ’ ಎಂದು ಸ್ಪಷ್ಟಪಡಿಸಿರುವುದು ಗಮನಿಸಬೇಕಾದ ಸಂಗತಿ. ಎನ್‌ಐಎ ಹೀಗೆ ಸ್ಪಷ್ಟ ಪಡಿಸಿರುವಾಗ ಕಾರವಾನ್ ಅದಕ್ಕಿಂತ ಉತ್ತಮ ತನಿಖೆ ನಡೆಸಲು ಸಾಧ್ಯವೆ?

ಆರೆಸ್ಸೆಸ್ ಮೇಲೆ ಇಂತಹ ಗಂಭೀರ ಆರೋಪಗಳು ಎದುರಾಗುತ್ತಿರುವುದು ಇದೇ ಮೊದಲನೆಯ ಸಲವಲ್ಲ , ಕೊನೆಯ ಸಲವೂ ಆಗಿರಲಿಕ್ಕಿಲ್ಲ! ೧೯೪೮ ಜನವರಿ ೩೦ರಂದು ಗಾಂಧೀಜಿಯ ಕೊಲೆಯಾಯಿತು. ಆ ಭಯಾನಕ ಕೊಲೆಯ ಆರೋಪವನ್ನು ಆಗಿನ ನೆಹರು ಸರ್ಕಾರ ಆರೆಸ್ಸೆಸ್ ಮೇಲೆ ಹೊರಿಸಿತ್ತು. ಆಗ ಸಂಘದ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿಯವರನ್ನು ಜನವರಿ ೩೧ರ ಮಧ್ಯರಾತ್ರಿ ಬಂಧಿಸಲಾಗಿತ್ತು. ಅವರನ್ನು ಬಂಧಿಸಿದ್ದು ಸೆಕ್ಷನ್ ೩೦೨ರ ಪ್ರಕಾರ! ಈ ಸೆಕ್ಷನ್ ಅಡಿಯಲ್ಲೇ ಗುರೂಜಿಯವರನ್ನು ಬಂಧಿಸಿzಕೆ? ಗುರೂಜಿಯವರು ಸ್ವತಃ ದೆಹಲಿಗೆ ಹೋಗಿ ಗಾಂಧೀಜಿಯವರ ಮೇಲೆ ಗುಂಡು ಹಾರಿಸಿದ್ದಾರೆ ಎಂಬುದು ಈ ಸೆಕ್ಷನ್ ಹೇರಿಕೆಯ ಅರ್ಥ! ಆದರೆ ತಾವು ತಪ್ಪೆಸಗಿzವೆ ಎಂದು ಅರಿವಾದ ಕೂಡಲೇ ಸರ್ಕಾರ ಗುರೂಜಿಯವರನ್ನು ಬೇರೊಂದು ಕಾಯ್ದೆಯಡಿಯಲ್ಲಿ ಬಂಧಿಸುವ ನಾಟಕವಾಡಿತು.

ಗುರೂಜಿಯವರಷ್ಟೇ ಅಲ್ಲ , ಸಾವಿರಾರು ಸಂಘದ ಕಾರ್ಯಕರ್ತರನ್ನು ಬಂಧಿಸಲಾಯಿತು. ೨೦ ಸಾವಿರಕ್ಕೂ ಹೆಚ್ಚು ಸಂಘದ ಕಾರ್ಯಕರ್ತರ ಮನೆಗಳನ್ನು ಶೋಧಿಸಲಾಯಿತು. ಆದರೆ ಗಾಂಧಿ ಕೊಲೆಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯವೂ ಸರ್ಕಾರಕ್ಕೆ ದೊರೆಯಲಿಲ್ಲ! ೬ ತಿಂಗಳ ಬಳಿಕ ಎಲ್ಲರನ್ನು ಸರ್ಕಾರ ಬಿಡುಗಡೆ ಮಾಡಿತು. ಅದಾದ ಮೇಲೆ ಬೇಷರತ್ತಾಗಿ ಸಂಘದ ಮೇಲಿನ ನಿಷೇಧ ತೆಗೆದು ಗುರೂಜಿಯವರನ್ನ್ನೂ ಸರ್ಕಾರ ಬಿಡುಗಡೆ ಮಾಡಬೇಕಾಯಿತು. ಸಂಘದ ಮೇಲಿನ ನಿಷೇಧ ತೆಗೆಯಲು ಗುರೂಜಿಯವರು ಯಾವುದೇ ಕ್ಷಮಾಪಣ ಪತ್ರವನ್ನು ಸರ್ಕಾರಕ್ಕೆ ಆಗ ನೀಡಿರಲಿಲ್ಲ. ರಾಹುಲ್ ಗಾಂಧಿ ಹೇಳಿರುವಂತೆ ಆರೆಸ್ಸೆಸ್ ಒಂದು ವಿಷಪೂರಿತ ವಿಚಾರಧಾರೆಯ ಸಂಘಟನೆಯಾಗಿದ್ದರೆ ನೆಹರು ಸರ್ಕಾರ ಸಂಘದ ಮೇಲಿನ ನಿಷೇಧವನ್ನು ಏಕೆ ತೆಗೆಯುತ್ತಿತ್ತು?

ಆಗ ಕಾಂಗ್ರೆಸ್‌ನಲ್ಲಿದ್ದ ಎಲ್ಲ ಮುಖಂಡರೂ ಆರೆಸ್ಸೆಸ್ ವಿರೋಧಿಗಳೇನಾಗಿರಲಿಲ್ಲ. ನೆಹರು ಸರ್ಕಾರದಲ್ಲಿ ಉಪ ಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಷ್ಟಿ ಬೇರೆಯೇ ಆಗಿತ್ತು. ಲಕ್ನೋದ ಸಭೆಯೊಂದರಲ್ಲಿ ಪಟೇಲರು ಆರೆಸ್ಸಸ್ಸನ್ನು ಹೊಗಳಿ ಮಾತನಾಡಿದ್ದು ೧೯೪೮ ಜನವರಿ ೭ರ ‘ದಿ ಹಿಂದು’ ಪತ್ರಿಕೆಯಲ್ಲಿ ವರದಿಯಾಗಿದೆ. ಆ ವರದಿ ಹೀಗಿದೆ: “ಕಾಂಗ್ರೆಸ್‌ನಲ್ಲಿ ಅಧಿಕಾರದಲ್ಲಿರುವ ಕೆಲವರು ತಮ್ಮ ಪ್ರಭಾವದಿಂದ ಸಂಘವನ್ನು ಹಣಿಯಬಹುದೆಂದು ಭಾವಿಸಿದ್ದಾರೆ. ‘ದಂಡ’ವನ್ನು ಬಳಸಿ ಯಾವುದೇ ಸಂಘಟನೆಯನ್ನು ಹತ್ತಿಕ್ಕಲಾಗದು. ದಂಡ ಇರುವುದು ಕಳ್ಳರು ಮತ್ತು ಡಕಾಯಿತರಿಗಾಗಿ. ಆರೆಸ್ಸೆಸ್‌ನವರು ಎಷ್ಟಾದರೂ ಕಳ್ಳರು ಅಥವಾ ಡಕಾಯಿತರಲ್ಲ. ಈ ದೇಶವನ್ನು ಪ್ರೀತಿಸುವ ದೇಶಭಕ್ತರು ಅವರು”.

೧೯೬೩ರ ಜನವರಿ ೨೬ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಸಂಘದ ಗಣವೇಷಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದರು. ಆಕರ್ಷಕ ಪಥಸಂಚಲನ ನಡೆಸಿ ಪ್ರೇಕ್ಷಕರ ಗೌರವಕ್ಕೆ ಪಾತ್ರರಾಗಿದ್ದರು. ಗಣರಾಜ್ಯೋತ್ಸವ ಪೆರೇಡ್‌ಗೆ ಸಂಘಕ್ಕೆ ಆಮಂತ್ರಣ ನೀಡಿದ್ದು ಯಾರು? ಇದೇ ರಾಹುಲ್ ಗಾಂಧಿಯ ಮುತ್ತಾತ, ಆಗಿನ ಪ್ರಧಾನಿ ಪಂಡಿತ್ ನೆಹರು! ಸಂಘ ಫ್ಯಾಸಿಸ್ಟ್ ಆಗಿದ್ದರೆ, ವಿಷಪೂರಿತ ವಿಚಾರಧಾರೆಯ ಸಂಘಟನೆಯಾಗಿದ್ದರೆ, ಭಯೋತ್ಪಾದನೆ ಹಿನ್ನೆಲೆಯ ಸಂಸ್ಥೆಯಾಗಿದ್ದರೆ ಇಂತಹ ಗೌರವದ ಆಮಂತ್ರಣ ಅದಕ್ಕೆ ಸಿಗುತ್ತಿತ್ತೆ?

ಭಾರತರತ್ನ ಡಾ.ಭಗವಾನ್‌ದಾಸ್ ಆರೆಸ್ಸೆಸ್ ಕುರಿತು ಬರೆದಿರುವುದನ್ನು ಓದಿ: ‘೧೯೪೭ ಸೆಪ್ಟೆಂಬರ್ ೧೦ರಂದು ಮುಸ್ಲಿಂ ಲೀಗ್ ಭಾರತ ಸರ್ಕಾರದ ಎಲ್ಲ ಪ್ರಮುಖರನ್ನು , ಹಿಂದೂ ಅಧಿಕಾರಿಗಳನ್ನು ಮತ್ತು ಸಾವಿರಾರು ಹಿಂದು ನಾಗರಿಕರನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ಸಂಚು ನಡೆಸಿತ್ತು. ಕೆಂಪು ಕೋಟೆಯ ಮೇಲೆ ಪಾಕ್ ಧ್ವಜ ಹಾರಿಸಲು ಹುನ್ನಾರ ನಡೆಸಿತ್ತು. ಈ ಸಂಚಿನ ಮಾಹಿತಿಯನ್ನು ಹೇಗೋ ಪಡೆದು ನೆಹರು ಮತ್ತು ಸರ್ದಾರ್ ಪಟೇಲ್ ಅವರಿಗೆ ಸಕಾಲದಲ್ಲಿ ತಿಳಿಸಿದ್ದು ಸಂಘದ ಸ್ವಯಂಸೇವಕರು ಎಂದು ನಾನು ವಿಶ್ವಾಸಾರ್ಹ ಮೂಲಗಳಿಂದ ಬಲ್ಲೆ… ನೆಹರು ಮತ್ತು ಪಟೇಲರಿಗೆ ಈ ಸ್ಫೋಟಕ ಮಾಹಿತಿಯನ್ನು ಸಕಾಲದಲ್ಲಿ ಈ ತ್ಯಾಗಶೀಲ ಯುವಕರು ಒದಗಿಸದಿದ್ದಲ್ಲಿ ಭಾರತ ಸರ್ಕಾರವೇ ಉಳಿಯುತ್ತಿರಲಿಲ್ಲ. ದೇಶದ ಹೆಸರನ್ನೇ ಪಾಕಿಸ್ಥಾನವೆಂದು ಬದಲಾಯಿಸಬೇಕಾಗಿತ್ತು. ಕೋಟ್ಯಂತರ ಹಿಂದುಗಳು ಬಲಾತ್ಕಾರವಾಗಿ ಮುಸ್ಲಿಮರಾಗುತ್ತಿದ್ದರು. ಇಲ್ಲವೇ ಹತ್ಯೆಗೀಡಾಗುತ್ತಿದ್ದರು. ಇಂತಹ ಆರೆಸ್ಸೆಸ್‌ನ ಲಕ್ಷಾಂತರ ದೇಶಭಕ್ತ ಯುವಕರ ಶಕ್ತಿಯನ್ನು ನಮ್ಮ ಸರ್ಕಾರ ಧನಾತ್ಮಕವಾಗಿ ಬಳಸಿಕೊಳ್ಳಬೇಕು’.

ಡಾ.ಭಗವಾನ್ ದಾಸ್ ಅವರ ಈ ಕಿವಿಮಾತು ನಮ್ಮ ಕಾಂಗ್ರೆಸ್ ಮುಖಂಡರಿಗೇಕೆ ಪಥ್ಯವಾಗುತ್ತಿಲ್ಲ? ಚುನಾವಣೆ ಸಮೀಪಿಸಿದ ಕೂಡಲೇ ಆರೆಸ್ಸೆಸ್ ವಿರುದ್ಧ ಸಲ್ಲದ ಆರೋಪಗಳನ್ನು ವಿನಾಕಾರಣ ಹೇರುವುದೇಕೆ? ಎಲ್ಲವೂ ಓಟಿಗಾಗಿ, ಅಧಿಕಾರಕ್ಕಾಗಿ! ಆದರೆ ಆರೆಸ್ಸೆಸ್ ಮಾತ್ರ ಇಂತಹ ಅಪಪ್ರಚಾರಗಳ ಅಗ್ನಿ ಕುಂಡದಿಂದ ಮೇಲೆದ್ದು ಪ್ರಕಾಶಿಸುತ್ತಲೇ ಇದೆ. ಅಪಪ್ರಚಾರಗಳು ನಿರಂತರ. ಆರೆಸ್ಸೆಸ್ ಪುಟಿದೆದ್ದ ಚಿನ್ನವಾಗಿ ಬೆಳಗುತ್ತಿರುವುದೂ ನಿರಂತರ!

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS top 3day Annual meet Akhil Bharatiya Pratinidhi Sabha (ABPS) to be held on March 7-9 at Bangalore

Mon Mar 3 , 2014
Bangalore March 03: Annual meeting of Akhil Bharateeya Pratinidhi Sabha (ABPS),  highest body for policy formulation and decision making of Rashtreeya Swayamsevak Sangh (RSS), will be held on March 7, 8 and 9th, 2014 at Rashtrotthana Vidyakendra located in Thanisandra main road, Bangalore. Representatives elected from RSS-Shakhas of all regions […]