ನೇರನೋಟ – ೨೭.೧೦.೨೦೧೪

ಬ್ಯಾಂಗಲೋರ್-ಬೆಂಗಳೂರು, ಮ್ಯಾಂಗಲೋರ್-ಮಂಗಳೂರು, ಹುಬ್ಲಿ -ಹುಬ್ಬಳ್ಳಿ ಆಯ್ತು ಇಂಡಿಯಾ ಭಾರತ ಆಗೋದು ಯಾವಾಗ ?

article-2255531-16B4AA39000005DC-425_634x579

ಆ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅರ್ಥಪೂರ್ಣ ಕೊಡುಗೆ. ರಾಜಧಾನಿ ಬೆಂಗಳೂರು, ಗಡಿಭಾಗದ ಬೆಳಗಾವಿ ಸೇರಿದಂತೆ ೧೨ ಪ್ರಮುಖ ನಗರಗಳ ಹೆಸರನ್ನು ಕನ್ನಡದ ಉಚ್ಚಾರಣೆಗೆ ಅನುಗುಣವಾಗಿ ಬದಲಾಯಿಸಲು ಈಗ ಉಭಯ ಸರ್ಕಾರಗಳಿಂದ ಹಸಿರು ನಿಶಾನೆ ಕೊನೆಗೂ ದೊರೆತಿದೆ.  ಈ ಹಿಂದೆ ಕೂರ್ಗ್, ಧಾರ್ವಾರ್, ನಾರ್ತ್ ಮತ್ತು ಸೌತ್ ಕೆನರಾಗಳನ್ನು ಕ್ರಮವಾಗಿ ಕೊಡಗು, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ ಎಂದು ಬದಲಾಯಿಸಲಾಗಿತ್ತು.  ಅಷ್ಟೇಕೆ, ಮೈಸೂರು ಎಂದಿದ್ದ ನಮ್ಮ ರಾಜ್ಯದ ಹೆಸರನ್ನು ಕರ್ನಾಟಕವೆಂದೂ ಬದಲಾಯಿಸಲಾಗಿತ್ತು.  ಅದೇ ಸಂದರ್ಭದಲ್ಲಿ ಮೇಲೆ ತಿಳಿಸಿದ ೧೨ ಪ್ರಮುಖ ನಗರಗಳ ಹೆಸರನ್ನು ಮೂಲ ರೂಪಕ್ಕೆ ತರಬೇಕು ಎಂಬ ಹಕ್ಕೊತ್ತಾಯವೂ ಕೇಳಿಬಂದಿತ್ತು.  ಆದರೆ ಅದು ಇದುವರೆಗೆ ಈಡೇರಿರಲಿಲ್ಲ.  ೮ ವರ್ಷಗಳ ಹಿಂದೆಯೇ ಕರ್ನಾಟಕದ ೧೨ ಪ್ರಮುಖ ನಗರಗಳ ಹೆಸರನ್ನು ಬದಲಾಯಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.   ೨೦೦೬ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವೂ ಈ ೧೨ ನಗರಗಳ ಹೆಸರು ಬದಲಾವಣೆಗೆ ಕೇಂದ್ರವನ್ನು ಆಗ್ರಹಿಸಿತ್ತು.  ಆದರೆ ಕೇಂದ್ರಸರ್ಕಾರ ಮಾತ್ರ ಗಡಿವಿವಾದದ ಕಾರಣ ಮುಂದೊಡ್ಡಿತ್ತು. ‘ಬೆಳಗಾಂ’ ಅನ್ನು ಬೆಳಗಾವಿ ಎಂದು ಕರೆಯಲು ಮಹಾರಾಷ್ಟ್ರ ಸರ್ಕಾರ ತಕರಾರು ಎತ್ತಿದ್ದರಿಂದ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಳ್ಳದೆ ಮೌನಕ್ಕೆ ಜಾರಿತ್ತು.  ಹಾಗಾಗಿ ಬೆಳಗಾವಿಯ ಜೊತೆಗೆ ಉಳಿದ ನಗರಗಳ ಹೆಸರು ಬದಲಾವಣೆಗೂ ಮುಕ್ತಿ ದೊರಕಿರಲಿಲ್ಲ.  ಬ್ಯಾಂಗಲೋರ್, ಮ್ಯಾಂಗಲೋರ್, ಬೆಳಗಾಂ, ಬೆಲ್ಲಾರಿ, ಬಿಜಾಪುರ್, ಗುಲ್ಬರ್ಗಾ, ಚಿಕ್ಕಮಗಲೂರ್, ಮೈಸೂರ್, ಹೊಸ್‌ಪೇಟ್, ಶಿಮೊಗ, ಹುಬ್ಲಿ, ತುಮ್ಕೂರ್ ಎಂದೇ ಕರೆಯಲಾಗುತ್ತಿತ್ತು.  ಇನ್ನು ಮುಂದೆ ನವೆಂಬರ್ ೧ರಿಂದ ಈ ಊರಿನ ಹೆಸರನ್ನು ಹೀಗೆಯೇ ಕರೆಯಬೇಕಾದ ದೌರ್ಭಾಗ್ಯ ಇರುವುದಿಲ್ಲ.  ಅವೆಲ್ಲಾ  ಹೆಸರುಗಳು ಮತ್ತೆ ಮೂಲ ಸ್ವರೂಪ ಪಡೆಯಲಿವೆ.

ಇದು ಯಾವಾಗಲೋ ಆಗಬೇಕಾದ ಕೆಲಸವಾಗಿತ್ತು.  ಏಕೆಂದರೆ ಸರ್ಕಾರೀ ದಾಖಲೆಗಳಲ್ಲಿ ತಿರುಚಿದ ಹೆಸರುಗಳಿದ್ದರೂ ಜನರ ಬಾಯಲ್ಲಿ ಮಾತ್ರ ಬೆಂಗಳೂರು, ಮಂಗಳೂರು, ಹೊಸಪೇಟೆ, ಬೆಳಗಾವಿ…ಇತ್ಯಾದಿ ಮೂಲ ಕನ್ನಡ ಹೆಸರುಗಳೇ ಚಲಾವಣೆಯಲ್ಲಿದ್ದವು.  ಅಷ್ಟೇ ಏಕೆ, ದೇಶಿ, ವಿದೇಶಿ ವಿಮಾನಯಾನ ಸಂಸ್ಥೆಗಳು, ಐಟಿ ಬಿಟಿ ಕಂಪನಿಗಳು, ತಾರಾ ಹೊಟೇಲ್‌ಗಳು ಕೂಡ ಇಂಗ್ಲಿಷ್‌ನಲ್ಲೂ ಬೆಂಗಳೂರು, ಮಂಗಳೂರು ಎಂದೇ ಕರೆಯಲು ಶುರುಮಾಡಿ ಯಾವುದೋ ಕಾಲವಾಯಿತು.  ಈಗ ಅದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.  ಇದೇ ನವೆಂಬರ್ ೧ ರಿಂದ ಹೊಸ (ಮೂಲ) ಹೆಸರುಗಳೇ ರಾರಾಜಿಸಲಿವೆ.  ಹೀಗಾಗಿ ಕನ್ನಡಿಗರ ಪಾಲಿಗೆ ಈ ಸಲದ ರಾಜ್ಯೋತ್ಸವ ನಿಜಕ್ಕೂ ಅರ್ಥಪೂರ್ಣ.

ಅಷ್ಟಕ್ಕೂ ಇಲ್ಲಿನ ಸಂಸ್ಕೃತಿ, ಭಾವನೆ, ಅಭಿಮಾನ, ಆಪ್ತತೆಗಳನ್ನು ಹಾಸಿ ಹೊದ್ದಿರುವ ನಗರಗಳ ಅಪ್ಪಟ ಮೂಲ ಹೆಸರುಗಳನ್ನು ಬದಲಾಯಿಸಿದ್ದಾದರೂ ಏಕೆ? ಬಹುಶಃ ಈಗಿನ ಪೀಳಿಗೆಯ ಯುವಕ ಯುವತಿಯರಿಗೆ ಈ ವಿಷಯದ ಬಗ್ಗೆ ಕಿಂಚಿತ್ತೂ ಅರಿವು ಇರಲಿಕ್ಕಿಲ್ಲ. ಬ್ರಿಟಿಷರು ಈ ದೇಶವನ್ನು ಆಳತೊಡಗಿದ ಮೇಲೆ ಅವರಿಗೆ ಇಲ್ಲಿನ ಊರಿನ ಹೆಸರುಗಳನ್ನು ಉಚ್ಚರಿಸಲು ಕಷ್ಟವಾಯಿತಂತೆ. ಅವರ ನಾಲಿಗೆಗೆ ಈ ಹೆಸರುಗಳನ್ನು ಉಚ್ಚರಿಸಲು ತುಂಬಾ ತ್ರಾಸದಾಯಕವಾಯಿತೆಂದೇ ಅವರು ತಮಗೆ ತೋಚಿದಂತೆ ಇಲ್ಲಿನ ಹೆಸರುಗಳನ್ನು ಬೇಕಾಬಿಟ್ಟಿ ತಿರುಚಿದರು.  ಹೆಸರುಗಳನ್ನು ವಿರೂಪಗೊಳಿಸಿದರು.  ಹಾಗಾಗಿಯೇ ಧಾರವಾಡ ಧಾರ್ವಾರ್ ಆಯ್ತು. ಬೆಂಗಳೂರು ಬ್ಯಾಂಗಲೋರ್ ಆಯ್ತು. ಮಂಗಳೂರು ಮ್ಯಾಂಗಲೋರ್, ಹುಬ್ಬಳ್ಳಿ ಹುಬ್ಲಿ , ಹೊಸಪೇಟೆ ಹೊಸ್‌ಪೇಟ್, ಬೆಳಗಾವಿ ಬೆಲ್ಗಾಂ, ತುಮಕೂರು ತುಮ್ಕೂರ್… ಇತ್ಯಾದಿ ಏನೇನೋ ವಿಕಾರ ರೂಪ ತಳೆದವು.  ಬ್ರಿಟಿಷರ ನಾಲಿಗೆಗೆ ಉಚ್ಚರಿಸಲು ಸುಲಭವಾಗಬೇಕೆಂದು ಮೂಲ ಹೆಸರುಗಳನ್ನೇ ತಿರುಚಿದ್ದು ಎಷ್ಟರಮಟ್ಟಿಗೆ ಸಮಂಜಸ  ಎಂಬ ಪ್ರಶ್ನೆ ಈಗ ತೀರಾ ಅಪ್ರಸ್ತುತ.  ಬ್ರಿಟಿಷರು ಇಲ್ಲಿದ್ದಾಗಲೇ ಈ ಪ್ರಶ್ನೆ ಕೇಳಿದ್ದರೆ ಅದಕ್ಕೊಂದು ಔಚಿತ್ಯ ಇರುತ್ತಿತ್ತು.  ಆದರೆ ಆಗ ಯಾರೂ ಈ ಪ್ರಶ್ನೆ ಕೇಳುವ ಧೈರ್ಯ ಮಾಡಲಿಲ್ಲ.  ಹೋಗಲಿ, ಬ್ರಿಟಿಷರು ಈ ದೇಶ ಬಿಟ್ಟು ತೊಲಗಿದ ಮೇಲಾದರೂ ಈ ಪ್ರಶ್ನೆ ಕೇಳಬಹುದಿತ್ತು.  ಏಕೆಂದರೆ ಸ್ವಾತಂತ್ರ್ಯ ಬಂದ ಬಳಿಕ ಇಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರು ನಮ್ಮವರೇ ಆಗಿದ್ದರು.  ಅವರ ನಾಲಿಗೆಗೆ ಇಲ್ಲಿನೆಲ್ಲ ಹೆಸರುಗಳನ್ನು ಉಚ್ಚರಿಸಲು ಯಾವುದೇ ತೊಡಕು ಇರಲು ಸಾಧ್ಯವಿರಲಿಲ್ಲ.  ಬ್ರಿಟಿಷರಿಗಾದರೆ ಅಂತಹ ತೊಡಕು ಇತ್ತೆಂಬುದು ಸರಿ.   ಆದರೆ ಅಧಿಕಾರದ ಚುಕ್ಕಾಣಿ ಹಿಡಿದ ನಮ್ಮವರು ಇಲ್ಲಿನ ತಿರುಚಿದ ಹೆಸರುಗಳನ್ನು ಮತ್ತೆ ಮೂಲಕ್ಕೆ ಮಾರ್ಪಡಿಸಲು ಮನಸ್ಸು ಮಾಡಲೇ ಇಲ್ಲ.  ಜನರೂ ಕೂಡ ಅಷ್ಟೆ.  ಮೂಲ ಹೆಸರುಗಳನ್ನು ಮತ್ತೆ ಜಾರಿಗೆ ತರಬೇಕೆಂದು ಬಲವಾಗಿ ಧ್ವನಿ ಮೊಳಗಿಸಲೇ ಇಲ್ಲ.  ಯಾರೋ ಬೆರಳೆಣಿಕೆಯ ಕೆಲವರು ಈ ಬಗ್ಗೆ  ಧ್ವನಿ ಎತ್ತಿದ್ದಿರಬಹುದು.  ಆದರೆ ಆ ಧ್ವನಿ ಆಡಳಿತ ನಡೆಸುವವರ ದಪ್ಪ ಕಿವಿಗಳಿಗೆ ಕೇಳಿಸದಷ್ಟು ಕ್ಷೀಣವಾಗಿತ್ತು.

ತಮಾಷೆಯೆಂದರೆ ಸ್ವಾತಂತ್ರ್ಯ ಬಂದ ಬಳಿಕ ಎನ್‌ಡಿಎ ಆಡಳಿತವಿದ್ದ ೬ ವರ್ಷಗಳನ್ನು ಹೊರತುಪಡಿಸಿದರೆ, ೧೯೭೭ರ ತುರ್ತುಪರಿಸ್ಥಿತಿ ನಂತರದ ಜನತಾ ಸರ್ಕಾರದ ನಾಲ್ಕೈದು ವರ್ಷಗಳನ್ನು ಹೊರತುಪಡಿಸಿದರೆ ಉಳಿದ ದೀರ್ಘ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಪಕ್ಷವೇ.  ಹೆಚ್ಚು ಕಡಿಮೆ ನೆಹರೂ ಮನೆತನವೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.  ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಈ ದೇಶದಲ್ಲಿ ಬ್ರಿಟಿಷರು ತಿರುಚಿದ ಹೆಸರುಗಳನ್ನು ಮತ್ತೆ ಮೂಲಸ್ವರೂಪಕ್ಕೆ ಬದಲಾಯಿಸಬೇಕೆಂದು ಅನಿಸಲೇ ಇಲ್ಲ.  ಇದೊಂದು ದೌರ್ಭಾಗ್ಯದ ಸಂಗತಿ. ಕಾಂಗ್ರೆಸ್ ಸರ್ಕಾರಕ್ಕೆ ಅಂತಹ ಸ್ವದೇಶಿ ಮೂಲ ಚಿಂತನೆಯೇ ಇರಲಿಲ್ಲ, ಬಿಡಿ.  ಆ ಸರ್ಕಾರಕ್ಕೇನಿದ್ದರೂ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಸ್ವಾರ್ಥ ಪ್ರೇರಿತ ಚಿಂತನೆಗಳೇ ಮೈಗೂಡಿದ್ದವು.  ಇಂತಹ ಮಾನಸಿಕತೆಯ ಸರ್ಕಾರದಿಂದ ಸ್ವದೇಶಿ ಚಿಂತನೆಯ, ಸ್ವಾಭಿಮಾನದ ನಿರ್ಧಾರಗಳನ್ನು ನಿರೀಕ್ಷಿಸುವುದಾದರೂ ಹೇಗೆ?

ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ದೂರವಾಣಿ ಕರೆಮಾಡಿ ಈ ವಿಷಯ ನೆನಪಿಸಿದ ಒಂದೇ ದಿನದಲ್ಲಿ ಪ್ರಮುಖ ನಗರಗಳ ಹೆಸರು ಬದಲಾವಣೆಗೆ ಅನುಮೋದನೆ ನೀಡಿದೆ.  ಇದೇ ಕೆಲಸವನ್ನು ಕಾಂಗ್ರೆಸ್ ಸರ್ಕಾರವೂ ಮಾಡಬಹುದಿತ್ತು.  ಆದರೆ ಅದು ಮಾಡಲಿಲ್ಲ.  ನಿಜ, ಕರ್ನಾಟಕದ ಊರುಗಳ ಹೆಸರು ಬದಲಾವಣೆಗೆ ಸಲ್ಲಿಸಿದ ಪ್ರಸ್ತಾವಕ್ಕೆ ಭಾರತೀಯ ಸರ್ವೇಕ್ಷಣಾ ಇಲಾಖೆ, ಭಾರತೀಯ ರೈಲ್ವೆ, ಅಂಚೆ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಗುಪ್ತಚರ ದಳಗಳು, ನಿರಾಕ್ಷೇಪಣಾ ಪತ್ರಗಳನ್ನು ನೀಡಬೇಕಿತ್ತೆಂಬುದನ್ನು ಒಪ್ಪಿಕೊಳ್ಳೋಣ.  ಆದರೆ ಅದಕ್ಕೆ ವರ್ಷಗಳಷ್ಟು ದೀರ್ಘ ಸಮಯವಾದರೂ ಏಕೆ?  ಕೆಲವೇ ದಿನಗಳಲ್ಲಿ ಮಾಡಿ ಮುಗಿಸಬಹುದಾಗಿದ್ದ ಒಂದು ಚಿಕ್ಕ ಕೆಲಸಕ್ಕೆ ಇಷ್ಟೊಂದು ದೀರ್ಘಕಾಲ ಬೇಕಾಯಿತೇ ಎಂಬುದು ನಮ್ಮ ಆಡಳಿತ ವೈಖರಿ ಹೇಗಿದೆ ಎಂಬುದಕ್ಕೆ ನಿದರ್ಶನ !

ಬ್ರಿಟಿಷರು ಇಲ್ಲಿಂದ ತೊಲಗಿದರೂ ದಾಸ್ಯದ ಮಾನಸಿಕತೆ ನಮ್ಮನ್ನಾಳುವವರಲ್ಲಿ , ನಮ್ಮವರಲ್ಲಿ ಇನ್ನೂ ತೊಲಗಿಲ್ಲ.  ಆಗ ಬಿಳಿಚರ್ಮದ ಬ್ರಿಟಿಷರಿದ್ದರೆ ಈಗ ಕರಿಚರ್ಮದ ಗುಲಾಮಗಿರಿ ಮಾನಸಿಕತೆಯನ್ನೇ ಹಾಸಿಹೊದ್ದವರು ಇಲ್ಲಿದ್ದಾರೆ.  ಹಾಗಿಲ್ಲದಿದ್ದರೆ ನಮ್ಮ ನ್ಯಾಯಾಲಯಗಳಲ್ಲಿ ಈಗಲೂ ಏಕೆ ಜನರಿಗೆ ಅಷ್ಟಾಗಿ ತಿಳಿಯದ ಇಂಗ್ಲಿಷ್ ಭಾಷೆಯಲ್ಲಿ ಕಲಾಪಗಳು, ವಾದವಿವಾದಗಳು ನಡೆಯುತ್ತವೆ ?  ನಾವೇಕೆ ನಮ್ಮ ಮನೆಯ ಮದುವೆ, ಮುಂಜಿ ಇತ್ಯಾದಿ ಶುಭಕಾರ್ಯಗಳಿಗೆ ಈಗಲೂ ಇಂಗ್ಲಿಷ್‌ನಲ್ಲೇ ಏಕೆ  ಆಮಂತ್ರಣ ಮುದ್ರಿಸಬೇಕು? ಈಗಲೂ ನಾವೇಕೆ ನಮ್ಮ ಸಹಿಗಳನ್ನು ಇಂಗ್ಲಿಷ್‌ನಲ್ಲೇ ಹಾಕುವ ಕೆಟ್ಟ ವ್ಯಾಮೋಹಕ್ಕೆ ಸಿಲುಕಬೇಕು? ನಮ್ಮ ನಮ್ಮ ಮಾತೃಭಾಷೆಯಲ್ಲಿ ಸಹಿ ಹಾಕಿದರೆ ನಮಗೆ ಆಗುವ ನಷ್ಟವಾದರೂ ಏನು? ಕನ್ನಡ ನಿರ್ಮಾಪಕರು ತಯಾರಿಸುವ ಕನ್ನಡ ಚಲನಚಿತ್ರಗಳ ಹೆಸರುಗಳನ್ನು ಒಮ್ಮೆ ಸುಮ್ಮನೆ ಗಮನಿಸಿ.  ಪೊಲೀಸ್ ಸ್ಟೋರಿ, ಪೆರೋಲ್, ಪಟ್ರೆ ಲವ್ಸ್ ಪದ್ಮ, ಲಿಮಿಟ್, ಬಾಡಿಗಾರ್ಡ್, ಸಂಜು ವೆಡ್ಸ್ ಗೀತಾ, ರಿಂಗ್‌ರೋಡ್ ಶುಭ, ಫೇರ್ ಅಂಡ್ ಲವ್ಲಿ , ಡವ್… ಇವೆಲ್ಲ ಅದೆಂಥ ಕಂಗ್ಲಿಷ್ ಶೀರ್ಷಿಕೆಗಳು! ಆಕರ್ಷಕ, ಅಪ್ಪಟ ಶೀರ್ಷಿಕೆಗಳಿಗೆ ದಾರಿದ್ರ್ಯವೆ? ಚಂದವಳ್ಳಿಯ ತೋಟ, ಬಂಗಾರದ ಮನುಷ್ಯ, ಕರುಣೆಯೇ ಕುಟುಂಬದ ಕಣ್ಣು, ನಾಗರಹಾವು, ಬೆಳ್ಳಿಮೋಡ, ಶರಪಂಜರ, ಗಾಂಧಿನಗರ ಮುಂತಾದ ಅಚ್ಚ ಕನ್ನಡದ ಕಂಪು ಸೂಸುವ ಹಿಂದಿನ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲವೆ? ತಮಿಳುನಾಡಿನಲ್ಲಿ ತಮಿಳು ಚಿತ್ರಗಳಿಗೆ ಯಾವುದೇ ಇಂಗ್ಲಿಷ್ ಅಥವಾ ಹಿಂದಿ ಹೆಸರಿಟ್ಟರೆ ಕೂಡಲೇ  ಪ್ರತಿಭಟನೆ ಸಿಡಿಯುತ್ತದೆ.  ಸರ್ಕಾರದಿಂದ ತೆರಿಗೆ ವಿನಾಯಿತಿ ಕೂಡ ಸಿಗುವುದಿಲ್ಲ.  ತಮಿಳುನಾಡಿನಲ್ಲಿ ಜನಿಸುವ ಮಕ್ಕಳ ಹೆಸರನ್ನು ಕೂಡ ತಮಿಳೀಕರಣ ಮಾಡಲಾಗಿದೆ.  ಅದಕ್ಕೆ ಸರ್ಕಾರದಿಂದ ಬಹುಮಾನವೂ ಉಂಟು.  ಕರುಣಾನಿಧಿ, ದಯಾಮಾರನ್, ಮುರಸೋಳಿ, ಕನಿಮೋಳಿ, ಅಳಗಿರಿ, ಮುತ್ತುವೇಲು, ಸೆಲ್ವನ್, ನೆಡುಂಚಳಿಯನ್… ಈ ಹೆಸರುಗಳಲ್ಲಿ ಅದೆಂಥ ತಮಿಳಿನ ಅಪ್ಪಟ ಕಂಪು! ನಮ್ಮ ಕನ್ನಡಿಗರಲ್ಲೇಕೆ ಇಂತಹ ಭಾಷಾಭಿಮಾನ ಜಾಗೃತವಾಗಿಲ್ಲ? ತಮಿಳು ನಟ ನಟಿಯರು, ಟಿವಿ ವಾಹಿನಿ ನಿರೂಪಕರು ಅಚ್ಚ ತಮಿಳಿನಲ್ಲೇ ಮಾತನಾಡಿದರೆ ನಮ್ಮ ಕನ್ನಡ ನಟನಟಿಯರು, ಟಿವಿ ನಿರೂಪಕ-ನಿರೂಪಕಿಯರು ಕನ್ನಡವೂ ಅಲ್ಲದ, ಇಂಗ್ಲಿಷೂ ಅಲ್ಲದ ಕಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದೇಕೆ? ನಮ್ಮವರಿಗೆ ನೆಟ್ಟಗೆ ಕನ್ನಡವೂ ಗೊತ್ತಿಲ್ಲ, ಇಂಗ್ಲಿಷ್ ಕೂಡ ಬರುವುದಿಲ್ಲ.  ಇಂತಹ ಕಂಗ್ಲಿಷ್ ಭಾಷೆಯ ಬಗ್ಗೆ ಮಾತ್ರ ಕನ್ನಡಪರ ಸಂಘಟನೆಗಳು ಸೊಲ್ಲೆತ್ತುವುದೇ ಇಲ್ಲ !

ಅದೆಲ್ಲ ಹಾಗಿರಲಿ, ಇದೀಗ ನಮ್ಮ ದೇಶದ ಕೆಲವು ಪ್ರಮುಖ ಹೆಸರುಗಳನ್ನಾದರೂ ಮೂಲಸ್ವರೂಪಕ್ಕೆ ಬದಲಾಯಿಸಿರುವುದು ಸಮಾಧಾನದ ಸಂಗತಿ. ಕಲ್ಕತ್ತ ಕೋಲ್ಕೊತ್ತಾ ಎಂದಾಗಿದೆ. ಮದ್ರಾಸ್ ಚೆನ್ನೈ ಆಗಿ ರೂಪಾಂತರಗೊಂಡಿದೆ.  ಬಾಂಬೆ ಮುಂಬೈ ಆಗಿದೆ.  ಇವೆಲ್ಲವೂ ಸ್ವಾಗತಾರ್ಹ.  ಆದರೆ ವಿರೂಪಗೊಂಡ ಇನ್ನೂ ಸಾಕಷ್ಟು ಹೆಸರುಗಳಿವೆ.  ಹೈದರಾಬಾದ್, ಅಹಮದಾಬಾದ್, ದಿಲ್ಲಿ, ಫೈಜಾಬಾದ್, ಮುಜಫರ್ ನಗರ, ಡಾಬಸ್‌ಪೇಟೆ… ಹೀಗೆ ಹಲವಾರು ನಗರಗಳು ತಮ್ಮ ಮೂಲ ಹೆಸರಿನಿಂದ ವಂಚಿತವಾಗಿ ವಿರೂಪಗೊಂಡಿವೆ.  ಆರೆಸ್ಸೆಸ್‌ನವರು ಮಾತ್ರ ಹೈದರಾಬಾದ್‌ಗೆ ಭಾಗ್ಯನಗರ, ಅಹಮದಾಬಾದ್‌ಗೆ ಕರ್ಣಾವತಿ, ದಿಲ್ಲಿಗೆ ಇಂದ್ರಪ್ರಸ್ಥವೆಂದು ಲಾಗಾಯ್ತಿನಿಂದಲೂ ಬಳಸುತ್ತಿದ್ದಾರೆ.  ಸರ್ಕಾರಿ ಕಡತಗಳಲ್ಲಿ ಮಾತ್ರ ತಿರುಚಿದ ಹೆಸರುಗಳೇ ಮುಂದುವರಿದಿವೆ.

ತಮಗೆ ಸ್ವಾತಂತ್ರ್ಯ ಬಂದಕೂಡಲೇ ಸಾಕಷ್ಟು ದೇಶಗಳು ತಮ್ಮ ಮೂಲ ಹೆಸರಿಗೆ ಮರಳಿವೆ.  ಸಿಲೋನ್ ಶ್ರೀಲಂಕಾ ಆಗಿದೆ.  ಬರ್ಮಾ ಮ್ಯಾನ್ಮಾರ್ ಆಗಿದೆ.  ಪೂರ್ವ ಬಂಗಾಲ ಬಾಂಗ್ಲಾದೇಶ ಆಗಿದೆ.  ಆದರೆ ಇಂಡಿಯಾ ಎಂಬ ಹೆಸರನ್ನು ನಾವಿನ್ನೂ ಭಾರತವೆಂದು ಬದಲಾಯಿಸಲೇ ಇಲ್ಲ.  ನಮ್ಮ ಸಂವಿಧಾನದಲ್ಲಿ  Iಟಿಜiಚಿ ಣhಚಿಣ is ಃhಚಿಡಿಚಿಣh ಎಂದೇ ಉಲ್ಲೇಖವಿದೆ.  ಇಂಡಿಯಾ ಎಂಬುದು ಬ್ರಿಟಿಷರಿಟ್ಟ ಹೆಸರು.  ನಮ್ಮ ದೇಶದ ನಿಜವಾದ ಹೆಸರು ಅದಲ್ಲ.  ಮನೆ, ಮಠ-ಮಂದಿರಗಳಲ್ಲಿ  ಶುಭಕಾರ್ಯ ನಡೆಯುವಾಗ “ ಭರತವರ್ಷೇ ಭರತಖಂಡೇ ಜಂಬೂದ್ವೀಪೇ….” ಎಂದೇ ಪ್ರವರ ಹೇಳಲಾಗುತ್ತದೆ.  “ ಇಂಡಿಯಾವರ್ಷೇ ಇಂಡಿಯಾಖಂಡೇ…” ಎಂದು ಯಾರೂ ಹೇಳುವುದಿಲ್ಲ.  ಭಾರತ ಮಾತಾ ಕೀ ಜೈ ಎಂದು ಹೇಳುತ್ತೇವೆಯೇ ಹೊರತು ಇಂಡಿಯಾ ಮಾತಾ ಕೀ ಜೈ ಎಂದು ಅಪ್ಪಿತಪ್ಪಿಯೂ ಹೇಳುವುದಿಲ್ಲ. ಟೀಂ ಇಂಡಿಯಾ ಎಂದು ನಮ್ಮ ಕ್ರಿಕೆಟ್ ಟೀಮನ್ನು ಕರೆಯುವುದೇಕೆ?ಟೀಂ ಭಾರತ್ ಎಂದು ಕರೆದರಾಗದೆ?

ಹೀಗಿರುವಾಗ ನಮ್ಮ ದೇಶದ ಹೆಸರನ್ನು ಅಧಿಕೃತವಾಗಿ ಭಾರತ ಎಂದು ಘೋಷಿಸಲು ಇನ್ನೆಷ್ಟು ದಶಕಗಳು ಬೇಕು? ನಮ್ಮ ಸ್ವಾಭಿಮಾನಕ್ಕೆ ಹಿಡಿದಿರುವ ತುಕ್ಕು ಕಳಚುವುದು ಯಾವಾಗ ?

Image courtesy: http://www.dailymail.co.uk/indiahome/indianews/article-2255531/A-fight-Bharat-India-The-countrys-urban-and-rural-divide-determine-year-politics.html