ಏಕನಾಥ ರಾನಡೆ ಎಂಬ ಅಸಾಮಾನ್ಯ ಧ್ಯೇಯಜೀವಿ

article by Du Gu Lakshman

Eknath Ramkrishna Ranade (एकनाथ रामकृष्ण रानडे)
Eknath Ramkrishna Ranade (एकनाथ रामकृष्ण रानडे)

ಸ್ವಾಮಿ ವಿವೇಕಾನಂದರು ವಿದೇಶಗಳಿಗೆ ಹೋಗಿ ಹಿಂದು ಧರ್ಮದ ಮಹತ್ವವನ್ನು ಸಾರುವ ಮೊದಲು, ಭಾರತದಾದ್ಯಂತ ಸಂಚರಿಸಿ, ಕೊನೆಗೆ ಅವರು ತಲುಪಿದ್ದು ದಕ್ಷಿಣದ ತುತ್ತತುದಿಯಲ್ಲಿರುವ  ಕನ್ಯಾಕುಮಾರಿಗೆ. ಅಲ್ಲಿರುವ ಸಾಗರದ ಮಧ್ಯದ ಬಂಡೆಯ ಮೇಲೆ ಕುಳಿತು ಅವರು  ಮೂರು ದಿನಗಳ ಕಾಲ ಧ್ಯಾನಸ್ಥರಾಗಿದ್ದರು.  ಸಾಗರದ ಅಲೆಗಳು ಆ ಬಂಡೆಯನ್ನು  ಅಪ್ಪಳಿಸಿದಂತೆಯೇ ದೇಶದಲ್ಲಿ ತುಂಬಿದ್ದ ಮೌಢ್ಯ, ದಾರಿದ್ರ್ಯ, ವಿದೇಶಗಳಲ್ಲಿ ಹಿಂದು ಧರ್ಮದ  ವಿರುದ್ಧದ ಅಪಪ್ರಚಾರ… ಮೊದಲಾದ ಸಮಸ್ಯೆಗಳು ಅವರ  ಮನದ ಬಂಡೆಯ ಮೇಲೆ ಅಪ್ಪಳಿಸುತ್ತಿದ್ದವು.ಅವೆಲ್ಲಕ್ಕೂ ಒಂದು ತಾರ್ಕಿಕ ಅಂತ್ಯ ಕಂಡುಕೊಳ್ಳಲೆಂದೇ ಆ ಬಂಡೆಯ ಮೇಲೆ ಅವರು ಧ್ಯಾನಸ್ಥರಾಗಿದ್ದದ್ದು. ಕೊನೆಗೂ ಅವರಿಗೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರದ ಬೆಳಕು ಸಿಕ್ಕಿದ್ದು ಅದೇ ಬಂಡೆಯ ಮೇಲೆ ಕುಳಿತಿದ್ದಾಗ. ಅನಂತರ ಅವರು ಚಿಕಾಗೋ ಸರ್ವಧರ್ಮ ಸಮ್ಮೇಳನಕ್ಕೆ ತೆರಳಿ ಅಲ್ಲಿ  ತಮ್ಮ ಅದ್ಭುತ ವಾಗ್ಝರಿಯ ಮೂಲಕ ಜಗತ್ತನ್ನೇ ಬೆರಗುಗೊಳಿಸಿದ್ದು, ಇಡೀ ಜಗತ್ತು ವಿವೇಕಾನಂದರ ಮುಂದೆ ನತಮಸ್ತಕವಾಗಿದ್ದು ಈಗ ಇತಿಹಾಸ.

೧೯೬೩ರಲ್ಲಿ ವಿವೇಕಾನಂದರ ಜನ್ಮಶತಮಾನೋತ್ಸವದ ನೆನಪಿಗಾಗಿ ಅದೇ ಬಂಡೆಯ ಮೇಲೆ ಅವರದೊಂದು ಭವ್ಯ ಶಿಲಾ ಸ್ಮಾರಕ ರಚಿಸಿದರೆ ಹೇಗೆ? ಹೀಗೊಂದು ಆಲೋಚನೆ ಹೊಳೆದದ್ದು ಆರೆಸ್ಸೆಸ್‌ನ  ಕೆಲವು ಪ್ರಮುಖರಿಗೆ. ಅದಕ್ಕೊಂದು ಸಮಿತಿಯೂ ರಚನೆಯಾಗಿತ್ತು. ಆದರೆ ಕೆಲವು ಸ್ಥಳೀಯ ಕ್ರೈಸ್ತ ಸಮುದಾಯದ ಮುಖಂಡರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.  ಆ ಬಂಡೆಯನ್ನು  ‘ಸೈಂಟ್ ಕ್ಸೇವಿಯರ್ ಬಂಡೆ’ ಎಂದು ಅವರು ವಾದಿಸಿದ್ದರು. ಅವರ ಈ ವಾದಕ್ಕೆ ಯಾವುದೇ ಆಧಾರಗಳಿರಲಿಲ್ಲ. ಹಾಗಾಗಿ ಒಂದು ರಾತ್ರಿ ವಿವೇಕಾನಂದ ಬಂಡೆಯ ಮೇಲೆ ಕಲ್ಲಿನ ಒಂದು ದೊಡ್ಡ ಶಿಲುಬೆಯನ್ನು ನೆಟ್ಟರು. ಕ್ರೈಸ್ತರೇ ಹೆಚ್ಚಾಗಿರುವ ಕನ್ಯಾಕುಮಾರಿ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಾಗ ತಮಿಳುನಾಡು ಸರ್ಕಾರಕ್ಕೆ ಕೂಡ ಆ ಶಿಲುಬೆಯನ್ನು ಕಿತ್ತುಹಾಕುವ ಧೈರ್ಯವಿರಲಿಲ್ಲ. ಆದರೆ ಸಂಘದ ಕೆಲವು ಸ್ವಯಂಸೇವಕರು ರಾತ್ರಿ ವೇಳೆ ಸಮುದ್ರದಲ್ಲಿ ಈಜಿಕೊಂಡು ಹೋಗಿ ಆ ಶಿಲುಬೆಯನ್ನು ಕಿತ್ತುಹಾಕಿದಾಗ ಎಲ್ಲೆಡೆ ಉದ್ವಿಗ್ನ ಪರಿಸ್ಥಿತಿ. ಅನಂತರ ತಮಿಳುನಾಡು ಸರ್ಕಾರ ಅಲ್ಲೊಂದು ವಿವೇಕಾನಂದ ಶಿಲಾಸ್ಮಾರಕ ರಚಿಸಲು ಒಪ್ಪಿಗೆ ನೀಡಿತಾದರೂ ವಿವೇಕಾನಂದರ ಭವ್ಯ ಪ್ರತಿಮೆ ಸ್ಥಾಪಿಸಲು ಸುತರಾಂ ಒಪ್ಪಲಿಲ್ಲ. ಸಮಿತಿಯಲ್ಲಿದ್ದ ಕೆಲವು ಪ್ರಮುಖರು ಆಗಿನ ಸರಸಂಘಚಾಲಕ ಗುರೂಜಿಯವರನ್ನು ಭೇಟಿ ಮಾಡಿ, ವಿವೇಕಾನಂದ ಬಂಡೆಯ ಮೇಲೆ ಅವರದೊಂದು ಭವ್ಯ ಸ್ಮಾರಕ ನಿರ್ಮಿಸಲು ನಮಗೊಬ್ಬ ಸೂಕ್ತ ಮಾರ್ಗದರ್ಶಕ ಬೇಕು, ಆ ಮಾರ್ಗದರ್ಶಕ ಏಕನಾಥ್‌ಜೀಯವರೇ ಆದರೆ ಸೂಕ್ತ ಎಂದೂ ಒತ್ತಿ ಹೇಳಿದರು. ಗುರೂಜಿ ಇದಕ್ಕೆ ಸಮ್ಮತಿಸಿ, ಆಗ ಸಂಘದ  ಸರಕಾರ್ಯವಾಹರಾಗಿದ್ದ ಏಕನಾಥ ರಾನಡೆಯವರನ್ನು  ಆ ಹುದ್ದೆಯಿಂದ ಮುಕ್ತಗೊಳಿಸಿ ಈ ಮಹತ್ತರ ಕಾರ್ಯಕ್ಕಾಗಿ ಕಳುಹಿಸಿಕೊಟ್ಟರು.

ವಿವೇಕಾನಂದ ಬಂಡೆಯ ಮೇಲೆ ಭವ್ಯ ಶಿಲಾಸ್ಮಾರಕ ನಿರ್ಮಾಣ ಸುಲಭದ ಕೆಲಸವೇನೂ ಆಗಿರಲಿಲ್ಲ. ಅದೊಂದು ಸಾಹಸದ, ಅಸಾಧ್ಯವೆಂದೇ ಹೇಳಬಹುದಾದ ಕಠಿಣ ಕಾರ್ಯ ಆಗಿತ್ತು.  ಸ್ಮಾರಕ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರದ ಬದ್ಧವಿರೋಧ, ಜೊತೆಗೆ ಕೇಂದ್ರ ಸರ್ಕಾರದ ಒಪ್ಪಿಗೆಯ ಅನಿವಾರ್ಯತೆ, ಸ್ಮಾರಕ ನಿರ್ಮಾಣಕ್ಕೆ ಒಂದುಕೋಟಿಗೂ ಹೆಚ್ಚು ಹಣ ಸಂಗ್ರಹಿಸಬೇಕಾದ  ಗುರುತರ ಹೊಣೆ, ಸಮುದ್ರ ಮಧ್ಯದಲ್ಲಿರುವ  ಬಂಡೆಯ ಮೇಲಕ್ಕೆ ಭಾರೀ ತೂಕದ ಕಲ್ಲುಗಳನ್ನು  ಸಾಗಿಸಬೇಕಾದ  ಕಠಿಣ ಸವಾಲು… ಹೀಗೆ  ಒಂದರಮೇಲೊಂದು ಅತೀ ಸವಾಲಿನ  ಕೆಲಸಗಳೇ ಆಗಿತ್ತು. ಏಕನಾಥ್ ರಾನಡೆ ಕನ್ಯಾಕುಮಾರಿಗೆ ಬಂದು ಸಮುದ್ರ ದಡದಲ್ಲಿ ನಿಂತು ನೋಡಿದಾಗ   ಅವರಿಗೆ ಕಂಡಿದ್ದು  ಸಮುದ್ರದ  ಭೀಕರ  ಅಲೆಗಳು ಆ ಬಂಡೆಗೆ  ಅಪ್ಪಳಿಸುವ  ದೃಶ್ಯ.  ಆ ಅಲೆಗಳು ಒಂದುಕ್ಷಣ ಅವರಿಗೆ ಶಿಲಾಸ್ಮಾರಕ ರಚನೆಗೆ ಎದುರಾಗಿರುವ  ಕಠಿಣ ಸವಾಲುಗಳಂತೆ ಗೋಚರಿಸಿದ್ದಿರಬಹುದು! ಆದರೆ ಅಪ್ಪಳಿಸಿದ ಅಲೆಗಳ ಹೊಡೆತಕ್ಕೆ ಕ್ಯಾರೇ ಎನ್ನದೇ ವಿವೇಕಾನಂದ ಬಂಡೆ ನಿಶ್ಚಲವಾಗಿ ನಿಂತಿರುವ  ದೃಶ್ಯ ಅವರಿಗೆ  ಹೊಸ ಸಂದೇಶವನ್ನೇ ನೀಡಿತು. ಸವಾಲುಗಳನ್ನು ಮೆಟ್ಟಿನಿಂತು  ಹಿಡಿದ ಗುರಿ ಸಾಧಿಸಬೇಕೆಂಬುದೇ ಆ ಸಂದೇಶ. ವಿವೇಕಾನಂದರ ಬಗ್ಗೆ ಬಾಲ್ಯದಿಂದಲೇ ಒಂದು ಬಗೆಯ  ಕುತೂಹಲ ಬೆಳೆಸಿಕೊಂಡಿದ್ದ ಅವರಿಗೆ, ವಿವೇಕಾನಂದರ ಕೃತಿಶ್ರೇಣಿಯನ್ನು  ಸಂಪೂರ್ಣ ಅಧ್ಯಯನ ಮಾಡಿದಾಗ  ಉಂಟಾದ ಅನುಭವ, ಆ ಬಂಡೆ ನೀಡಿದ ಸಂದೇಶವನ್ನು  ಸಾಕಾರಗೊಳಿಸಲೇಬೇಕೆಂಬ ದೃಢಸಂಕಲ್ಪಕ್ಕೆ ನೀರೆರೆಯಿತು.

ಅಲ್ಲಿಂದಾಚೆಗೆ ಏಕನಾಥ್‌ಜೀ ಹಿಂತಿರುಗಿ ನೋಡಿz ಇಲ್ಲ.  ಮೊದಲು ತಮಿಳುನಾಡು ಸರ್ಕಾರದ ಮನವೊಲಿಸಿದರು.  ಕೇಂದ್ರದಲ್ಲಿ ಪರಿಸರ ಖಾತೆ ಸಚಿವರಾಗಿದ್ದ ಹುಮಾಯೂನ್ ಕಬೀರ್ ವಿವೇಕಾನಂದ ಬಂಡೆಯ ಮೇಲೆ ಭವ್ಯ ಸ್ಮಾರಕ ನಿರ್ಮಿಸಿದರೆ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂದು  ಆಗ  ಕ್ಯಾತೆ ತೆಗೆದಿದ್ದರು. ಹುಮಾಯೂನ್ ಕಬೀರ್ ಅವರನ್ನು  ಮೊದಲು ರಿಪೇರಿ ಮಾಡಬೇಕಾಗಿತ್ತು. ಅದಕ್ಕಾಗಿ ಅವರು ಆಯ್ಕೆಯಾದ ಕಲ್ಕತ್ತ ಕ್ಷೇತ್ರಕ್ಕೆ ಹೋಗಿ, ಅಲ್ಲೊಂದು ಸುದ್ದಿಗೋಷ್ಠಿ ಏರ್ಪಡಿಸಿ, ಹುಮಾಯೂನ್ ಕಬೀರ್ ಬಂಗಾಲಿ ಆಗಿದ್ದರೂ ಅವರು  ಇದೇ ನೆಲದ ಮಹಾಪುರುಷ ವಿವೇಕಾನಂದರ ಭವ್ಯ ಸ್ಮಾರಕಕ್ಕೆ  ಅಡ್ಡಗಾಲು  ಹಾಕುತ್ತಿದ್ದಾರೆಂದು  ಏಕನಾಥ್‌ಜೀ  ದೂರಿದರು. ಮರುದಿನದ ಪತ್ರಿಕೆಗಳಲ್ಲಿ  ಹುಮಾಯೂನ್ ವಿರುದ್ಧ ಸುದ್ದಿ, ಲೇಖನಗಳು ಪ್ರಕಟವಾದಾಗ ಹೌಹಾರುವ ಸರದಿ ಸಚಿವ ಹುಮಾಯೂನ್ ಅವರದಾಗಿತ್ತು. ತಕ್ಷಣ  ಅವರೊಂದು ಹೇಳಿಕೆ ನೀಡಿ,  ಕನ್ಯಾಕುಮಾರಿಯ  ಬಂಡೆಯ ಮೇಲೆ ವಿವೇಕಾನಂದ ಶಿಲಾಸ್ಮಾರಕಕ್ಕೆ ತನ್ನ ವಿರೋಧವೇನೂ ಇಲ್ಲ ಎಂದು  ಘೋಷಿಸಿದರು.  ಏಕನಾಥರ ಚಾಣಾಕ್ಷ ತಂತ್ರಗಾರಿಕೆ  ಸಫಲವಾಗಿತ್ತು. ಅನಂತರ  ಅವರು  ಭೇಟಿ ಮಾಡಿದ್ದು ಕೇಂದ್ರದಲ್ಲಿ  ಗೃಹಸಚಿವರಾಗಿದ್ದ  ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು. ‘ನೀವು ಮೊದಲು ವಿವಿಧ ಪಕ್ಷಗಳಿಗೆ ಸೇರಿದ ಕನಿಷ್ಠ ೩೦೦ಕ್ಕೂ ಹೆಚ್ಚು ಪಾರ್ಲಿಮೆಂಟ್ ಸದಸ್ಯರ ಸಹಿ ಸಂಗ್ರಹಿಸಿ ತನ್ನಿ. ಆಮೇಲೆ ನೋಡೋಣ’ ಎಂದುಬಿಟ್ಟರು ಶಾಸ್ತ್ರಿ. ಏಕನಾಥ್‌ಜೀ ಸುಮ್ಮನಾಗಲಿಲ್ಲ. ದೆಹಲಿಯಲ್ಲೇ ಮೊಕ್ಕಾಂ ಹೂಡಿ, ವಿವಿಧ ಪಕ್ಷಗಳ  ಅಧ್ಯಕ್ಷರ  ಮನವೊಲಿಸಿ ವಿವೇಕಾನಂದ ಶಿಲಾ ಸ್ಮಾರಕ ರಚನೆಗೆ  ಆಯಾ ಪಕ್ಷಗಳ  ಸಂಸದರ ಸಹಿ ಹಾಕಿಸಲು  ಮನವಿ ಮಾಡಿದರು.  ಕೊನೆಗೂ ೩೨೩ ಸಂಸದರ ಸಹಿ ಸಂಗ್ರಹಿಸಿದ ಏಕನಾಥ್‌ಜೀ ಆ ಪಟ್ಟಿಯನ್ನು ಶಾಸ್ತ್ರಿಯವರ ಮುಂದಿಟ್ಟಾಗ ಅವರಿಗೆ  ಎಲ್ಲಿಲ್ಲದ ಅಚ್ಚರಿ! ಏಕನಾಥ ರಾನಡೆಯವರಂಥ ಇಬ್ಬರು ನನಗೆ  ದೊರಕಿದರೆ, ಕಾಂಗ್ರೆಸ್ ಪಕ್ಷದ ಭವಿಷ್ಯವನ್ನೇ  ಬದಲಿಸಬಲ್ಲೆ ಎಂದು ಶಾಸ್ತ್ರಿ ಆಗ ಅಭಿಮಾನದಿಂದ ಹೇಳಿದ್ದರಂತೆ! ಕೊನೆಗೂ ಕೇಂದ್ರ ಸರ್ಕಾರದಿಂದ ಶಿಲಾಸ್ಮಾರಕ ನಿರ್ಮಾಣಕ್ಕೆ ಏಕನಾಥ್‌ಜೀ ಅನುಮತಿ ಪಡೆದೇಬಿಟ್ಟರು.  ಸ್ಮಾರಕ ನಿರ್ಮಾಣಕ್ಕೆ ಅಗತ್ಯವಾಗಿದ್ದ ೧ಕೋಟಿ ೩೫ ಲಕ್ಷ ರೂ. ಹಣವನ್ನು  ವಿವಿಧ ರಾಜ್ಯ ಸರ್ಕಾರಗಳು, ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸುವಲ್ಲೂ ಏಕನಾಥ್‌ಜೀಯವರ ಸಂಘಟನಾ ಕೌಶಲ್ಯ ಮೆರೆಯಿತು. ಪಶ್ಚಿಮ ಬಂಗಾಳದ ಕಟ್ಟರ್ ಕಮ್ಯುನಿಸ್ಟ್ ಸರ್ಕಾರ ಹಾಗೂ ಜಮ್ಮು-ಕಾಶ್ಮೀರದ  ಕಟ್ಟರ್ ಮುಸ್ಲಿಂ ಮುಖ್ಯಮಂತ್ರಿ ಶೇಖ್ ಅಬ್ದುಲ್ಲ ಅವರಿಂದಲೂ ತಲಾ ಒಂದೊಂದು ಲಕ್ಷ ಹಣ ಸಂಗ್ರಹಿಸಿದ್ದು ಕಡಿಮೆ ಸಾಧನೆ ಏನಲ್ಲ. ಕಾಂಗ್ರೆಸ್ಸಿಗರು,ಕಮ್ಯುನಿಸ್ಟರು, ಸಮಾಜವಾದಿಗಳು, ಕ್ರೈಸ್ತರು, ಮುಸ್ಲಿಮರು- ಹೀಗೆ  ಎಲ್ಲ ಸಮುದಾಯದವರಿಂದಲೂ ಭವ್ಯ ಶಿಲಾಸ್ಮಾರಕಕ್ಕೆ ಹಣ ಹರಿದು ಬರುವಂತೆ ಮಾಡಿದ್ದು ಅವರ  ಅದ್ಭುತ ವ್ಯವಹಾರ ಚಾತುರ್ಯಕ್ಕೆ ನಿದರ್ಶನ.

ಈ ನಡುವೆ  ಕನ್ಯಾಕುಮಾರಿಯಲ್ಲಿ  ಶಿಲಾಸ್ಮಾರಕದ  ಕೆಲಸ ನಿರ್ವಹಿಸಲು ಬಂದ ಕುಶಲ ಕರ್ಮಿಗಳ, ಕಾರ್ಮಿಕರ  ಅಸಹಕಾರ, ಸ್ಥಳೀಯ ಕ್ರೈಸ್ತರ ಉಪಟಳ ಇಂತಹ ಇನ್ನಷ್ಟು ತಲೆತಿನ್ನುವ ಸಮಸ್ಯೆಗಳು. ಏಕನಾಥ್‌ಜೀ ಮಾತ್ರ ಅಧೀರರಾಗಲೇ ಇಲ್ಲ. ಇಟ್ಟ ಹೆಜ್ಜೆಯನ್ನು ಹಿಂದೆ  ಸರಿಸಲೇ ಇಲ್ಲ. ವಿವಿಧ ರಾಜ್ಯ ಸರ್ಕಾರಗಳ  ಅಧಿಕಾರಿಗಳಿಗೆ, ಸಚಿವರಿಗೆ, ಶಿಲಾಸ್ಮಾರಕ ಸಮಿತಿಯ ವಿವಿಧ ಘಟಕಗಳ ಮುಖ್ಯಸ್ಥರಿಗೆ, ದೇಶದ ಗಣ್ಯರಿಗೆ… ಹೀಗೆ  ಶಿಲಾಸ್ಮಾರಕದ ಸಂಬಂಧವಾಗಿ  ಅವರು  ಬರೆದ ಪತ್ರಗಳೇ ಬರೋಬ್ಬರಿ ೨೫ ಸಾವಿರ! ಆ ಎಲ್ಲ ಪತ್ರಗಳ ನಕಲು ಪ್ರತಿಗಳನ್ನು ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ಗ್ರಂಥಾಲಯದಲ್ಲಿ ಜೋಪಾನವಾಗಿ ಈಗಲೂ ಸಂಗ್ರಹಿಸಿಡಲಾಗಿದೆ. ಇಞಚಿಟಿಚಿಣhರಿi Wಡಿiಣes ಎಂಬ ಕೃತಿಯ ಮೂಲಕ ಆಯ್ದ ಪತ್ರಗಳನ್ನು ಪ್ರಕಟಿಸಲಾಗಿದೆ.

ಹೀಗೆ ೧೯೬೩ರಲ್ಲಿ ಪ್ರಾರಂಭವಾದ ಶಿಲಾಸ್ಮಾರಕದ ಕಾರ್ಯ ಪೂರ್ತಿಗೊಂಡಿದ್ದು ೧೯೭೦ರ ಸೆಪ್ಟೆಂಬರ್ ೨ರಂದು. ಆಗಿನ ರಾಷ್ಟ್ರಪತಿ ವಿ.ವಿ. ಗಿರಿ ಅವರ ಅಧ್ಯಕ್ಷತೆಯಲ್ಲಿ, ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ವೀರೇಶ್ವಾರನಂದ ಜೀ ಅವರ ದಿವ್ಯಸಾನ್ನಿಧ್ಯದಲ್ಲಿ ವಿವೇಕಾನಂದ ಶಿಲಾಸ್ಮಾರಕದ ಉದ್ಘಾಟನೆ. ಅನಂತರ ೨ ತಿಂಗಳ ಕಾಲ ಆಗಿನ ಪ್ರಧಾನಿ ಇಂದಿರಾಗಾಂಧಿ ಸೇರಿದಂತೆ ದೇಶದ  ಸಾವಿರಾರು ಗಣ್ಯರು ವಿವೇಕಾನಂದ ಶಿಲಾಸ್ಮಾರಕಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ವೇಳೆ  ಒಮ್ಮೆ ಸಂಘದ ಸರಸಂಘಚಾಲಕ ಗುರೂಜಿಯವರು ವಿವೇಕಾನಂದ ಶಿಲಾಸ್ಮಾರಕಕ್ಕೆ ಭೇಟಿ ನೀಡಿದ್ದಾಗ  ಏಕನಾಥ ರಾನಡೆಯವರು ಗುರೂಜಿಯವರಿಗೆ ಸಾಷ್ಟಾಂಗವೆರಗಿ, ಭಾವನೆಗಳನ್ನು  ಹತ್ತಿಕ್ಕಲಾರದೆ ಗಳಗಳನೆ ಅತ್ತಿದ್ದರು. ಗುರೂಜಿ ಕೊಟ್ಟ ಕೆಲಸವನ್ನು ಕೊನೆಗೂ ಕೃತಿಗಿಳಿಸಲು ತನ್ನಿಂದ ಸಾಧ್ಯವಾಯಿತಲ್ಲ ಎಂಬ ಸಾರ್ಥಕ್ಯಭಾವದ ಕಣ್ಣೀರು ಅದು.

ಏಕನಾಥಜೀ ಬೆಳೆದುಬಂದ ಪರಿಯೇ ಅಂತಹದು. ಅವರ ಬದುಕಿನ ಶಬ್ದಕೋಶದಲ್ಲಿ ‘ಅಸಾಧ್ಯ’ವೆಂಬ ಪದವೇ ಇರಲಿಲ್ಲ.  ಒಮ್ಮೆ ಗಿಜಿಗುಟ್ಟುತ್ತಿದ್ದ ರೈಲಿನಲ್ಲಿ ಪಠಾಣನೊಬ್ಬ ಸೀಟ್ ಮೇಲೆ ಜಾಗ ಬಿಡದೆ ಆರಾಮವಾಗಿ ಮಲಗಿದ್ದಾಗ ಆತನನ್ನು ಮುಲಾಜಿಲ್ಲದೆ ಎಳೆದು ಬದಿಗೆ ಸರಿಸಿದ್ದರು. ಭಾಷಣ ಮಾಡಲು ಗೊತ್ತಿಲ್ಲದ ಅವರು ಸಂಘಕ್ಕೆ ಬಂದ ಬಳಿಕ ಪ್ರಯತ್ನಪಟ್ಟು ಉತ್ತಮ ಭಾಷಣ ಮಾಡಲು ಕಲಿತರು. ಮುಂದೆ ಮರಾಠಿ, ಹಿಂದಿ, ಇಂಗ್ಲಿಷ್‌ಗಳಲ್ಲಿ ನಿರರ್ಗಳವಾಗಿ ಮಾತನಾಡತೊಡಗಿದರು. ಹೀಗೆ ಸಾಮಾನ್ಯ ವ್ಯಕ್ತಿಯಾಗಿದ್ದ ಅವರು ಸ್ವಪ್ರಯತ್ನದಿಂದ  ಅಸಾಮಾನ್ಯ ಮಟ್ಟಕ್ಕೆ ಮೇಲೇರಿದ್ದರು.

ಏಕನಾಥರು ಈಗ ಬದುಕಿಲ್ಲ (ಜನನ: ೧೯.೧೧.೧೯೧೪, ನಿಧನ: ೨೨.೮.೧೯೮೨). ಈ ವರ್ಷ ಅವರ ಜನ್ಮ ಶತಾಬ್ದಿ. ಅವರಂತಹ ಧ್ಯೇಯಜೀವಿ, ನಿಷ್ಕಾಮ ಕರ್ಮಯೋಗಿಯಿಂದ ಈಗಿನ ಪೀಳಿಗೆಯವರು ಕಲಿಯಬೇಕಾದುದು ಬೆಟ್ಟದಷ್ಟು. ಆ ಮಹಾನ್ ಚೇತನಕ್ಕೆ ನಮ್ಮೆಲ್ಲರದೂ ಒಂದು ಹೃತ್ಪೂರ್ವಕ ನಮನ ಇರಲಿ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS Sarasanghachalak Mohan Bhagwat attends ABVP's fulltimers national meet at Haridwar

Fri Nov 21 , 2014
Haridwar: RSS Sarasanghachalak Mohan Bhagwat attended Akhil Bharatiya Vidyarthi Parishat’s (ABVP) Full-time workers national meet on November 19, 2014 held atParamartha Niketan near Rushikesh, Haridwar in Uttarakhand.   email facebook twitter google+ WhatsApp